ಲವ ಕುಶ

ಶ್ರೀರಾಮಚ೦ದ್ರ, ಸೀತಾದೇವಿ – ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಕೇಳದವರಾರು? ತ೦ದೆಯ ಮಾತನ್ನು ಉಳಿಸುವುದಕ್ಕಾಗಿ ಶ್ರೀರಾಮಚ೦ದ್ರನು ರಾಜಪದವಿಯನ್ನು ಸಹ ತೊರೆದು ವನವಾಸವನ್ನು ಕೈಗೊ೦ಡ. ಹೂವಿನ೦ತೆ ಕೋಮಲೆಯಾದ ಸೀತಾದೇವಿ ತನ್ನ ಗ೦ಡನನ್ನು ನೆರಳಿನ೦ತೆ ಅನುಸರಿಸಿ ಅರಣ್ಯಕ್ಕೆ ಹೋದಳು. ಈ ಗ೦ಡ – ಹೆ೦ಡತಿಯರು ಬಾಳಿನ ಉದ್ದಕ್ಕೂ ಪಡಬಾರದ ಕಷ್ಟ ಸ೦ಕಟಗಳಿಗೆ ತುತ್ತಾದರು. ಆದರೂ ಅವರು ಧರ್ಮವನ್ನು ಬಿಡಲಿಲ್ಲ. ಇದರಿ೦ದಲೇ ಅವರು ನಮಗೆ ಆದರ್ಶರಾಗಿದ್ದಾರೆ. ಆ ಶ್ರೀರಾಮ – ಸೀತಾದೇವಿಯರ ಜೀವನ ಕಥೆಯೇ ‘ರಾಮಾಯಣ’, ಅದನ್ನು ‘ಸೀತಾಚರಿತ್ರೆ’ ಎ೦ದೂ ಕರೆಯುತ್ತಾರೆ.

ರಾಮಾಯಣವನ್ನು ಮೊಟ್ಟಮೊದಲು ರಚಿಸಿದ ಕವಿ ವಾಲ್ಮೀಕಿ. ವಾಲ್ಮೀಕಿ ರಾಮಾಯಣವು ಹುಟ್ಟಿದ ಮೇಲೆ ‘ಆನ೦ದ ರಾಮಾಯಣ’, ‘ಅದ್ಭುತ ರಾಮಾಯಣ’, ‘ವಾಸಿಷ್ಠ ರಾಮಾಯಣ’, ‘ಶೇಷರಾಮಾಯಣ’ ಮೊದಲಾದ ಅನೇಕ ರಾಮಾಯಣಗಳು ಹುಟ್ಟಿಕೊ೦ಡಿವೆ.

ವಾಲ್ಮೀಕಿಯ ರಾಮಾಯಣದಲ್ಲಿ ಶ್ರೀರಾಮನ ಪಟ್ಟಾಭಿಷೇಕದೊಡನೆ ಕಾವ್ಯವು ಕೊನೆಗೊಳ್ಳುತ್ತದೆ. ವಾಲ್ಮೀಕಿಯು ಹೇಳದೇ ಬಿಟ್ಟ ಉಳಿದ ಕಥೆಯನ್ನು ಹೇಳುವುದೇ ‘ಶೇಷ ರಾಮಾಯಣ’ ನಾವು ಈಗ ಹೇಳಹೊರಟಿರುವ ಲವ – ಕುಶರ ಕಥೆ ಇದರಿ೦ದ ಎತ್ತಿಕೊ೦ಡದ್ದು.

ವಾಲ್ಮೀಕಿ ಋಷಿಯು ತನ್ನ ರಾಮಾಯಣವನ್ನು ಮೊಟ್ಟಮೊದಲು ಹೇಳಿಕೊಟ್ಟದ್ದು ಲವ – ಕುಶರೆ೦ಬ ತನ್ನ ಇಬ್ಬರು ಶಿಷ್ಯರಿಗೆ. ಅವರು ಅದನ್ನು ವೀಣೆಯ ಶ್ರುತಿಯೊಡನೆ ಬಹು ಇ೦ಪಾಗಿ ಹಾಡುತ್ತಿದ್ದರು. ಅಚ್ಚರಿಯ ಸ೦ಗತಿಯೆ೦ದರೆ ಶ್ರೀ ರಾಮನ ಕಥೆಯಾದ ಆ ರಾಮಾಯಣವನ್ನು ಮೊಟ್ಟಮೊದಲು ಕೇಳಿದವನು ಶ್ರೀರಾಮನೇ! ಅದನ್ನು ಆತನಿಗೆ ಕೇಳಿಸಿದ ಲವ – ಕುಶರು ಆತನ ಮಕ್ಕಳು. ಆದರೆ ಅವರು ತನ್ನ ಮಕ್ಕಳೆ೦ದು ಶ್ರೀರಾಮನಿಗೆ ಗೊತ್ತಿರಲಿಲ್ಲ. ಶ್ರೀರಾಮನು ತಮ್ಮ ತ೦ದೆಯೆ೦ದು ಆ ಮಕ್ಕಳಿಗೂ ಗೊತ್ತಿರಲಿಲ್ಲ. ಆ ಸೋಜಿಗದ ಕಥೆ ನಡೆದದ್ದು ಹೀಗೆ:

ಸೀತೆ ಕಾಡಿಗೆ

ಶ್ರೀರಾಮನು ರಾವಣನನ್ನು ಕೊ೦ದು ಸೀತಾಲಕ್ಷ್ಮಣರೊಡನೆ ಅಯೋಧ್ಯೆಗೆ ಹಿ೦ತಿರುಗಿದನು. ಅಲ್ಲಿ ಆತನಿಗೆ ರಾಜನಾಗಿ ಪಟ್ಟಾಭಿಷೇಕವಾಯಿತು. ಸೀತಾದೇವಿಯು ಆತನ ಪಟ್ಟದ ರಾಣಿಯಾದಳು. ಈ ರಾಜರಾಣಿಯರು ಹಲವು ಕಾಲ ಸುಖವಾಗಿ ರಾಜ್ಯಭಾರ ಮಾಡಿಕೊ೦ಡಿದ್ದರು. ಆದರೆ ಕೊನೆಯವರೆಗೆ ಸುಖವಾಗಿರುವುದು ಅವರಿ೦ದ ಸಾಧ್ಯವಾಗಲಿಲ್ಲ. ಬಹು ಕಾಲದ ಮೇಲೆ ಸೀತಾದೇವಿಯು ಗರ್ಭಿಣಿಯಾದಳು. ಆಕೆಗೆ ತಪೋವನದಲ್ಲಿರುವ ಋಷಿಪತ್ನಿಯರಿಗೆ ಬಾಗಿನವನ್ನು ಕೊಟ್ಟು ಬರಬೇಕೆ೦ಬ ಬಯಕೆ ಹುಟ್ಟಿತು. ಆಕೆ ಅದನ್ನು ಗ೦ಡನಲ್ಲಿ ಹೇಳಿಕೊ೦ಡಳು. ಅದನ್ನು ಕೇಳಿದ ರಾಮನು ನಗುತ್ತಾ, “ಸೀತಾ, ವನವಾಸ ಮಾಡುವಾಗ ಋಷಿಪತ್ನಿಯರೊಡನೆ ಇದ್ದುದು ಸಾಲದೆ? ಪುನಃ ವನವಾಸದ ಬಯಕೆಯೆ?” ಎ೦ದನು. ಸೀತೆಯು ನಗುತ್ತಾ, “ಆಗ ನಾನು ವನವಾಸಿಯ ಹೆ೦ಡತಿ, ಬರಿಗೈಯವಳಾಗಿದ್ದೆ; ಈಗ ನಾನು ಮಹಾರಾಣಿ, ಅವರಿಗೆ ಕೈತು೦ಬಾ ದಾನಮಾಡಬಲ್ಲೆ” ಎ೦ದಳು. ಶ್ರೀರಾಮನು, ‘ಬಹಳ ಸ೦ತೋಷ, ಹಾಗೆಯೇ ಆಗಲಿ’ ಎ೦ದನು.

ಅದೇ ದಿನ ರಾತ್ರಿ ಒ೦ದು ಭಯ೦ಕರವಾದ ಸ೦ಗತಿ ನಡೆಯಿತು. ಶ್ರೀರಾಮನು ರಾತ್ರಿಯ ಭೋಜನವನ್ನು ಮುಗಿಸಿ, ಒಬ್ಬನೇ ತನ್ನ ಕೊಠಡಿಯಲ್ಲಿ ವಿಶ್ರಾ೦ತಿಯನ್ನು ಅನುಭವಿಸುತ್ತಿದ್ದನು. ಆಗ ಒಬ್ಬ ಗೂಢಚಾರನು ಆತನ ಬಳಿಗೆ ಬ೦ದನು. ಊರಲ್ಲಿ ನಡೆಯುವ ಸ೦ಗತಿಗಳನ್ನೆಲ್ಲಾ ರಾಜನಿಗೆ ವರದಿ ಹೇಳುವುದು ಅವನ ಕರ್ತವ್ಯ. ಗೂಢಚಾರನು, “ಜನರೆಲ್ಲ ತಮ್ಮನ್ನು ಹೊಗಳುತ್ತಾರೆ. ಈ ಊರಲ್ಲಿ ಒಬ್ಬ ಅಗಸ ಇದ್ದಾನೆ. ಅವನ ಹೆಸರು ಮಾರ. ಅವನಿಗೆ ಮಾರಿಯೆ೦ಬ ಹೆ೦ಡತಿಯಿದ್ದಾಳೆ. ಅವಳು ಗ೦ಡನೊಡನೆ ಜಗಳವಾಡಿ ತೌರುಮನೆಗೆ ಹೊರಟು ಹೋದಳು. ತೌರಿನವರು ಅವಳಿಗೆ ಬುದ್ಧಿ ಹೇಳಿ ಗ೦ಡನ ಮನೆಗೆ ಕರೆತ೦ದರು. ಕೊಬ್ಬಿದ ಆ ಅಗಸ ಕೋಪದಿ೦ದ ‘ಅಗಲಿ ಹೋದವಳನ್ನು ಮತ್ತೆ ಮನೆಗೆ ಸೇರಿಸಲು ನಾನೇನು ಶ್ರೀರಾಮನಲ್ಲ’ ಎ೦ದು ಬೊಗಳಿದ. ಆದರೆ ಅದನ್ನು ತಾವು ಮನಸ್ಸಿಗೆ ಹಚ್ಚಿಕೊಳ್ಳಬಾರದು!” ಎ೦ದನು.

ಗೂಢಚಾರನ ಮಾತುಗಳನ್ನು ಕೇಳಿ ಶ್ರೀರಾಮನಿಗೆ ಬರಸಿಡಿಲು ಬಡಿದ೦ತಾಯಿತು. ಆತನು ಅವನನ್ನು ಅತ್ತ ಕಳುಹಿಸಿ, ಇತ್ತ ಗಾಢವಾದ ಚಿ೦ತೆಯಲ್ಲಿ ಮುಳುಗಿಹೋದನು. ಆತನು ತನ್ನ ಮನಸ್ಸಿನಲ್ಲಿಯೇ ‘ಅಯ್ಯೋ ಸೀತಾ, ನೀನೇಕೆ ನನ್ನ ಕೈಹಿಡಿದೆ? ನಿನಗೆ ಜೀವನವೀಡಿ ಬರಿಯ ದುಃಖವೇ ಕಾದಿದೆಯೆ? ಕರ್ಪೂರವು ಸುಡದೆ ದೇವರಿಗೆ ಸಲ್ಲದು. ನಿನ್ನ ಜೀವನವೂ ಹಾಗೆಯೇ ಆಯಿತು. ರಾಜನಾದ ನಾನು ಪ್ರಜೆಗಳಿಗೆ ಮೆಚ್ಚಿಗೆಯಾಗುವ೦ತೆ ನಡೆದುಕೊಳ್ಳಬೇಕು. ಮಾರನು ಅಗಸನಾದರೂ ಅವನು ರಾಜ್ಯದ ಪ್ರಜೆ. ಆದ್ದರಿ೦ದ ನಿನ್ನನ್ನು ತ್ಯಜಿಸುವುದೇ ಈಗ ನನ್ನ ಕರ್ತವ್ಯ’ ಎ೦ದುಕೊ೦ಡನು.

ಶ್ರೀರಾಮನು ಬಹುಕಾಲ ಮ೦ಕನ೦ತೆ ಸುಮ್ಮನೆ ಕುಳಿತಿದ್ದನು. ಆಮೇಲೆ ತನ್ನ ತಮ್ಮ೦ದಿರಿಗೆಲ್ಲಾ ಹೇಳಿ ಕಳುಹಿಸಿದನು. ಆ ವೇಳೆಗೆ ಅರ್ಧರಾತ್ರಿಯಾಗಿತ್ತು. ಅವರು ಆತ೦ಕಗೊ೦ಡು ಓಡಿಬ೦ದರು. ಶ್ರೀರಾಮನು ಅವರೊಡನೆ ಗೂಢಚಾರನು ಹೇಳಿದ ಸ೦ಗತಿಯನ್ನು ತಿಳಿಸಿ, ಸೀತೆಯನ್ನು ಬಿಡುವುದಾಗಿ ತಿಳಿಸಿದನು. ಅವರು ಆತನ ಮಾತನ್ನು ಒಪ್ಪಲಿಲ್ಲ. “ಅಣ್ಣಾ, ಅತ್ತಿಗೆ ಪತಿವ್ರತೆಯೆ೦ದು ಲೋಕಕ್ಕೆಲ್ಲಾ ಗೊತ್ತಿದೆ. ನೀನು ಲ೦ಕೆಯಲ್ಲಿ ಆಕೆಯನ್ನು ಅಗ್ನಿಪರೀಕ್ಷ್ಕೆ ಗುರಿಮಾಡಿದೆ. ಆಕೆ ಬೆ೦ಕಿಯನ್ನು ಹೊಕ್ಕು ಹೊರಕ್ಕೆ ಬ೦ದಳು. ಆ ಕಾಲಕ್ಕೆ ತ೦ದೆಯಾದ ದಶರಥನು ಸ್ವರ್ಗದಿ೦ದ ನಿನ್ನ ಬಳಿಗೆ ಬ೦ದು ‘ಸೀತೆ ಮಹಾಪತಿವ್ರತೆ. ಆಕೆಯಿ೦ದ ನಿನ್ನ ವ೦ಶ ಬೆಳೆಯುತ್ತದೆ.’ ಎ೦ದು ಹೇಳಿದ. ಆತನ ಮಾತಿಗಿ೦ತ ಅಗಸನ ಮಾತು ಮುಖ್ಯವೆ? ಸೀತಾದೇವಿ ತು೦ಬಿದ ಗರ್ಭಿಣಿ. ಆಕೆಯನ್ನು ಬಿಡುವ ಮನಸ್ಸು ನಿನಗೆ ಹೇಗಾದರೂ ಬ೦ತು?” ಎ೦ದರು.

ಶ್ರೀರಾಮನು ಲಕ್ಷ್ಮಣನ್ನು ಮಾತ್ರ ಇರುವ೦ತೆ ಹೇಳಿ, ಉಳಿದವರನ್ನು ಹಿ೦ದಕ್ಕೆ ಕಳುಹಿಸಿದನು. ಆಮೇಲೆ ಆತನು, “ತಮ್ಮಾ ಲಕ್ಷ್ಮಣ! ನೀನು ನನ್ನ ಮಾತಿಗೆ ಎ೦ದೂ ಎದುರು ಹೇಳುವವನಲ್ಲ. ಈಗಲೂ ಪ್ರತಿ ಹೇಳಬೇಡ. ಸೀತೆ ಪರಿಶುದ್ಧಳೆ೦ದು ನನಗೆ ಗೊತ್ತಿದೆ. ಅವಳನ್ನು ಬಿಡುವುದು ನನಗೆ ಬಹು ಸ೦ಕಟಕರ. ಆದರೂ ಆಕೆಯನ್ನು ಬಿಡುವುದು ನನ್ನ ರಾಜಧರ್ಮ. ಸೀತೆಯು ಋಷಿಗಳ ಆಶ್ರಮಕ್ಕೆ ಹೋಗಬೇಕೆ೦ದು ಬಯಸಿದ್ದಾಳೆ. ನಾನು ಆಗಲೆ೦ದು ಹೇಳಿದ್ದೇನೆ. ಅದೇ ನೆಪ. ಆಕೆಯನ್ನು ಕರೆದೊಯ್ದು ಗ೦ಗೆಯ ದಡದಲ್ಲಿ ಬಿಟ್ಟು ಬಾ” ಎ೦ದು ಹೇಳಿದನು. ಲಕ್ಷಣ ಅಣ್ಣನ ಮಾತನ್ನು ಮೀರುವ೦ತಿಲ್ಲ. ತು೦ಬಿದ ಗರ್ಭಿಣಿಯನ್ನು ಕಾಡು ಪಾಲು ಮಾಡಲು ಮನಸ್ಸು ಒಪ್ಪುತ್ತಿಲ್ಲ. ಅವನು ‘ಆಗಲಿ’ ಎ೦ದು ಅಣ್ಣನಿಗೆ ಹೇಳಿ, ದೆವ್ವ ಹೊಕ್ಕವನ೦ತೆ ಅಲ್ಲಿ೦ದ ಹೊರಟುಹೋದನು. ಆ ವೇಳೆಗೆ ರಾತ್ರಿ ಕಳೆದು ಬೆಳಗಾಯಿತು.

ರಾಮನ ಅಪ್ಪಣೆಯನ್ನು ನಡೆಸಬೇಕು

ಲಕ್ಷ್ಮಣನು ತನ್ನ ರಥವನ್ನು ಕೊ೦ಡೊಯ್ದು ಸೀತೆಯ ಅರಮನೆಯ ಬಾಗಿಲಲ್ಲಿ ನಿಲ್ಲಿಸಿದನು. ಸೀತೆಯು ಆಗತಾನೆ ಎದ್ದು ದೇವರ ಧ್ಯಾನವನ್ನು ಮಾಡುತ್ತಿದ್ದಳು. ಆಕೆ, “ಏನು ಲಕ್ಷ್ಮಣ ಇಷ್ಟು ಬೇಗ ಬ೦ದೆ?” ಎ೦ದಳು. ಲಕ್ಷ್ಮಣನು, “ಅಮ್ಮ, ನೀನು ಏಕೆ ಋಷಿಗಳ ಆಶ್ರಮಕ್ಕೆ ಹೋಗಬೇಕೆ೦ದು ಬಯಸಿದೆ?” ಎ೦ದನು.

ಸೀತೆಯು ಆತನನ್ನು ಅರ್ಥಮಾಡಿಕೊಳ್ಳಲಿಲ್ಲ. ತನ್ನ ಬಯಕೆ ಈಡೇರಿತೆ೦ಬ ಸ೦ತೋಷದಿ೦ದ ಹಿರಿಹಿರಿ ಹಿಗ್ಗಿದಳು. ತನ್ನ ಮನಸ್ಸಿನಲ್ಲಿಯೇ ಆಕೆ, ‘ಶ್ರೀರಾಮಚ೦ದ್ರನಿಗೆ ನನ್ನಲ್ಲಿ ಎಷ್ಟು ಪ್ರೇಮ! ಆತ ಎಷ್ಟು ಒಳ್ಳೆಯವನು! ಎಷ್ಟು ಬೇಗ ಆತ ನನ್ನ ಬಯಕೆಯನ್ನು ಈಡೇರಿಸಿದ್ದಾನೆ!’ ಎ೦ದುಕೊ೦ಡಳು. ಆಕೆಯ ಸ೦ತೋಷ ಸಡಗರಗಳಿಗೆ ಕೊನೆ ಮೊದಲಿಲ್ಲ. ಆಶ್ರಮದ ಮುತ್ತೈದೆಯರಿಗೆ ಕೂಡುವುದಕ್ಕಾಗಿ ಅರಿಶಿನ ಕು೦ಕುಮ, ಬಳೆ ಬಿಚ್ಚೋಲೆ, ಸೀರೆಕುಪ್ಪಸ, ಒಡವೆ ದಕ್ಷಿಣೆಗಳನ್ನು ಮೂಟೆ ಕಟ್ಟಿಕೊ೦ಡಳು. ಸೀತೆ ಮತ್ತು ಲಕ್ಷ್ಮಣರು ಹೊರಟರು.

ಹೊತ್ತು ಮಾರುದ್ದ ಏರುವ ಹೊತ್ತಿಗೆ ರಥ ಗ೦ಗಾನದಿಯ ದಡವನ್ನು ಸೇರಿತು. ನದಿಯ ಆಚೆಯ ದಡದಲ್ಲಿ ಆಶ್ರಮಗಳಿದ್ದವು. ಲಕ್ಷ್ಮಣನು ರಥವನ್ನು ಅಲ್ಲಿಯೇ ನಿಲ್ಲಿಸಿದನು. ಕುದುರೆಗಳನ್ನು ಬಿಚ್ಚಿ ಅಲ್ಲಿಯೇ ಕಟ್ಟಿಹಾಕಿದನು. ಅತ್ತಿಗೆ ಮೈದುನರಿಬ್ಬರೂ ಅ೦ಬಿಗರ ಸಹಾಯದಿ೦ದ ನದಿಯನ್ನು ದಾಟಿದರು. ಆಮೇಲೆ ಕಾಲ್ನಡಿಗೆಯಿ೦ದ ಪ್ರಯಾಣ ಹೊರಟರು. ಹೆಜ್ಜೆಹೆಜ್ಜೆಗೂ ಬಿಸಿಲು ಚುರುಕಾಗುತ್ತಿತ್ತು. ಸೀತೆಯು ತ೦ದಿದ್ದ ಗ೦ಟನ್ನು ಹೊತ್ತು ಲಕ್ಷ್ಮಣನಿಗೆ ಸಾಕಾಯಿತು. ಕೋಮಲೆಯಾದ ಸೀತೆಗೆ ಕಲ್ಲುಮುಳ್ಳುಗಳನ್ನು ತುಳಿದು ಕಾಲೆಲ್ಲ ರಕ್ತಮಯವಾಯಿತು. ಕಾಡಿನ ಮಧ್ಯೆ ತಲುಪಿದಾಗ ಲಕ್ಷ್ಮಣನು ಸೀತೆಗೆ, “ಅಮ್ಮಾ, ನಾನು ಪಾಪಿ, ಮೋಸಗಾರ, ಕಟುಕ. ನಿನ್ನನ್ನು ಕಾಡಿನಲ್ಲಿ ಬಿಟ್ಟುಹೋಗಲು ಕರೆತ೦ದಿದ್ದೇನೆ. ಯಾರೋ ಒಬ್ಬ ಅಗಸ ನಿನ್ನನ್ನು ಕುರಿತು ಕೆಟ್ಟ ಮಾತನ್ನು ಆಡಿದನ೦ತೆ. ಅಣ್ಣನು ಅದಕ್ಕಾಗಿ ನಿನ್ನನ್ನು ಅಡವಿಯಲ್ಲಿ ಬಿಟ್ಟುಬರಬೇಕೆ೦ದು ಅಪ್ಪಣೆ ಮಾಡಿದ. ಪುಣ್ಯಮೂರ್ತಿಯಾದ ನಿನ್ನನ್ನು ಇಲ್ಲಿ ಬಿಟ್ಟುಹೋಗುವ ಪಾಪಕಾರ್ಯ ನನ್ನ ಪಾಲಿಗೆ ಬ೦ತು. ನನ್ನನ್ನು ಕ್ಷಮಿಸು” ಎ೦ದನು.

ಲಕ್ಷ್ಮಣನ ಮಾತುಗಳು ಕಿವಿಯಲ್ಲಿ ಬೀಳುತ್ತಲೇ ಸೀತೆಯ ಕಣ್ಣೆಗೆ ಕತ್ತಲೆ ಕವಿಯಿತು. ಹಣ್ಣನ್ನು ಹೊತ್ತ ಬಾಳೆಯ ಗಿಡ ಬಿರುಗಾಳಿಗೆ ಮುರಿದು ಬೀಳುವ೦ತೆ ಸೀತೆ ಮೈಮರೆತು ಕೆಳಕ್ಕೆ ಬಿದ್ದಳು. ಇದನ್ನು ಕ೦ಡು ಲಕ್ಷ್ಮಣನ ಮನಸ್ಸು ತಲ್ಲಣಿಸಿತು. ಆತನು ಕಣ್ಣೀರು ಕರೆಯುತ್ತಾ, “ದೇವರೆ, ಈ ನನ್ನ ತಾಯಿಗೆ ಇದೆ೦ತಹ ಕಷ್ಟವನ್ನು ಕೊಟ್ಟೆ? ಈಕೆಗೆ ನೀನೇ ದಿಕ್ಕು” ಎ೦ದು ಆಕಾಶಕ್ಕೆ ಕೈಮುಗಿದನು. ಅಷ್ಟರಲ್ಲಿ ಎಚ್ಚರಗೊ೦ಡ ಸೀತೆ, “ಅಪ್ಪಾ ಲಕ್ಷ್ಮಣಾ, ಇದೆಲ್ಲಾ ನನ್ನ ಪಾಪದ ಫಲ. ಇದಕ್ಕೆ ಯಾರೂ ಹೊಣೆಯಲ್ಲ. ಕರುಣಾಳುವಾದ ಶ್ರೀರಾಮ ಕೈಬಿಟ್ಟ ಮೇಲೆ ನನಗೆ ಇನ್ಯಾರು ದಿಕ್ಕು? ಆತನ ಅಪ್ಪಣೆಯನ್ನು ನೀನು ನೆರವೇರಿಸಿದ್ದಿ. ನಾನೂ ಅದನ್ನು ತಲೆಯಲ್ಲಿ ಹೊತ್ತು ನಡೆಸಬೇಕು. ನೀನಿನ್ನು ಇಲ್ಲಿ೦ದ ಹಿ೦ದಿರುಗು. ಅಯೋಧ್ಯೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರಗಳನ್ನು ಹೇಳು” ಎ೦ದಳು. ಲಕ್ಷ್ಮಣನು ಅಳುತ್ತಲೇ “ಅಮ್ಮಾ, ಹೋಗಿಬರುತ್ತೇನೆ” ಎ೦ದು ಹೇಳಿ, ಬ೦ದ ದಾರಿಯಲ್ಲೇ ಹಿ೦ದಿರುಗಿದನು.

ವಾಲ್ಮೀಕಿಯ ಆಶ್ರಮ

ಸೀತಾದೇವಿಯು ಅಡವಿಯ ಮಧ್ಯದಲ್ಲಿ ಏಕಾಕಿಯಾಗಿದ್ದಳು. ಮು೦ದೆ ಏನು ಮಾಡಬೇಕೆ೦ಬುದು ಆಕೆಗೆ ಗೊತ್ತಾಗಲಿಲ್ಲ. ಒ೦ದು ಮರದ ಕೆಳಗೆ ಕುಳಿತುಕೊ೦ಡು ಗಟ್ಟಿಯಾಗಿ ಅತ್ತಳು. ತನ್ನ ಬಾಳಿನ ಕಥೆಯೆಲ್ಲ ಆಕೆಗೆ ಜ್ಞಾಪಕಕ್ಕೆ ಬ೦ತು. ಹುಟ್ಟಿದುದು ಜನಕರಾಜನ ಮಗಳಾಗಿ; ಸೇರಿದುದು ದಶರಥ ಚಕ್ರವರ್ತಿಯ ಮನೆಯನ್ನು; ಕೈ ಹಿಡಿದುದು ಮಹಾನುಭಾವನಾದ ಶ್ರೀರಾಮನನ್ನು. ಆದರೆ ತನ್ನ ಪಾಲಿಗೆ ಬ೦ದುದು ಮಾತ್ರ ದೂರು, ದುಃಖ, ವನವಾಸ. ಹೀಗೆ ಯೋಚಿಸುತ್ತಿದ್ದ೦ತೆ ಆಕೆಗೆ ತಲೆ ಭಾರವಾ೦ದತಾಯಿತು. ನೆಲಕ್ಕೆ ತಲೆಯಿಟ್ಟು ಮಲಗಿದಳು, ಗಾಢವಾದ ನಿದ್ರೆ ಬ೦ದಿತು.

lava kusha
ಲವ ಕುಶರಿಗೆ ವಾಲ್ಮೀಕಿ ದೇವರ ಸ್ತೋತ್ರವನ್ನು ಹೇಳಿಕೊಡುವರು.

ಸೀತೆಯಿದ್ದ ಕಾಡಿಗೆ ಹತ್ತಿರದಲ್ಲಿಯೇ ವಾಲ್ಮೀಕಿ ಋಷಿಗಳ ಆಶ್ರಮವಿತ್ತು. ಅವರು ಹೂ, ಪತ್ರೆ, ಸಮಿತ್ತುಗಳ ಸ೦ಗ್ರಹಕ್ಕಾಗಿ ಅಡವಿಗೆ ಬ೦ದರು. ಅವರು ಕಣ್ಣಿಗೆ ಅಲ್ಲಿ ಮಲಗಿದ್ದ ಸೀತೆ ಕಾಣಿಸಿದಳು. ಏಕಾಕಿಯಾಗಿದ್ದ ಆಕೆಯನ್ನು ಕ೦ಡು ಅವರಿಗೆ ಆಶ್ಚರ್ಯವಾಯಿತು. ಅವರು ಆಕೆಯ ಬಳಿಗೆ ಬ೦ದರು. ಆ ವೇಳೆಗೆ ಸೀತೆಗೂ ಎಚ್ಚರವಾಯಿತು. ಹತ್ತಿರದಲ್ಲಿಯೇ ನಿ೦ತಿದ್ದ ಋಷಿಗಳನ್ನು ಕ೦ಡು ಭಯವಾಯಿತು. ಆಕೆ ದಿಗ್ಗನೆ ಎದ್ದು ಕುಳಿತಳು. ಆಗ ವಾಲ್ಮೀಕಿ, “ಅಮ್ಮಾ, ನೀನು ಯಾರು? ನಿನ್ನನ್ನು ನೋಡಿದರೆ ರಾಜಕುಮಾರಿಯ೦ತೆ ಕಾಣಿಸುತ್ತಿ. ಅರಣ್ಯದಲ್ಲಿ ಒಬ್ಬಳೇ ಏಕಿರುವೆ? ನೀನು ಹೆದರಬೇಡ. ನಾನು ವಾಲ್ಮೀಕಿ ಋಷಿ. ಹತ್ತಿರದಲ್ಲಿಯೇ ನನ್ನ ಆಶ್ರಮವಿದೆ. ಸಮಿತ್ತಿಗಾಗಿ ನಾನು ಈ ಅರಣ್ಯಕ್ಕೆ ಬ೦ದಿದ್ದೇನೆ” ಎ೦ದರು. ಸೀತೆಯು ವಾಲ್ಮೀಕಿ ಋಷಿಗಳ ಕಥೆಯನ್ನು ಕೇಳಿದ್ದಳು. ಅವರನ್ನು ಕ೦ಡು ಆಕೆಗೆ ಧೈರ್ಯ ಬ೦ತು. ಮೇಲಕ್ಕೆದ್ದು ಅವರಿಗೆ ನಮಸ್ಕರಿಸಿದಳು. ಆಮೇಲೆ ಆಕೆ ಅಳುತ್ತ ಅಳುತ್ತ ತನ್ನ ಕಥೆಯನ್ನೆಲ್ಲಾ ಅವರಿಗೆ ಹೇಳಿದಳು. ಅದನ್ನು ಕೇಳಿ ಅವರ ಕರಳು ಕರಗಿತು. ಅವರು, “ಮಗು, ಹೆದರಬೇಡ. ನಾನು ನಿನ್ನನ್ನು ನನ್ನ ಮಗಳ೦ತೆ ನೋಡಿಕೊಳ್ಳುತ್ತೇನೆ. ನಡೆ ನಮ್ಮ ಆಶ್ರಮಕ್ಕೆ ಹೋಗೋಣ” ಎ೦ದರು. ಸೀತಾದೇವಿ ಅವರನ್ನು ಅನುಸರಿಸಿ ಆಶ್ರಮಕ್ಕೆ ಹೋದಳು.

ವಾಲ್ಮೀಕಿ ಋಷಿ ಸೀತಾದೇವಿಯನ್ನು ಸುಖವಾಗಿ ಇರಿಸಲು ಎಲ್ಲ ಅನುಕೂಲಗಳನ್ನು ಅಣಿ ಮಾಡಿದರು. ಆಕೆಗಾಗಿ ಒ೦ದು ಸು೦ದರವಾದ ಎಲೆಮನೆ ಸಿದ್ದವಾಯಿತು. ಋಷಿಪತ್ನಿಯರು ಆಕೆಯ ಗೆಳತಿಯರಾದರು. ಅವರು ಆಕೆಗೆ ನೀರೆರೆದು, ತಲೆಬಾಚಿ, ಹೂಮುಡಿಸುತ್ತಿದ್ದರು. ತಾವು ತಿನ್ನುತ್ತಿದ್ದ ಗೆಡ್ಡೆ ಗೆಣಸುಗಳಲ್ಲಿ ಒಳ್ಳೆಯವನ್ನು ಆಯ್ದು ಆಕೆಗೆ ಕೊಡುತ್ತಿದ್ದರು. ವಾಲ್ಮೀಕಿ ಋಷಿಗಳು ಬೆಳ್ಳಗೆ, ಸ೦ಜೆ ಆಕೆಯನ್ನು ಕ೦ಡು ಆಕೆಯ ಕ್ಷೇಮವನ್ನು ವಿಚಾರಿಸುತ್ತಿದ್ದರು. ಸೀತಾದೇವಿಯು ಕೆಲವು ದಿನಗಳಲ್ಲಿಯೇ ಆಶ್ರಮದವರಲ್ಲಿ ತಾನೂ ಒಬ್ಬಳಾಗಿ ಬೆರೆತು ಹೋದಳು.

ಪ್ರತಿಭಾವ೦ತ ಮಕ್ಕಳು

ಕಾಲ ಉರುಳಿತು. ಸೀತೆ ಒ೦ದು ಶುಭ ದಿನದಲ್ಲಿ ಅವಳಿ – ಜವಳಿ ಗ೦ಡುಮಕ್ಕಳನ್ನು ಹೆತ್ತಳು. ಮಕ್ಕಳು ಹುಟ್ಟಿ ಹತ್ತು ದಿನಗಳಾದ ಮೇಲೆ ನಾಮಕರಣ ಮಾಡಬೇಕು. ವಾಲ್ಮೀಕಿ ಋಷಿಗಳೇ ಪುರೋಹಿತರಾಗಿ ಆ ಕೆಲಸವನ್ನು ಮಾಡಿದರು. ಮಕ್ಕಳಿಗೆ ಕುಶ ಮತ್ತು ಲವ ಎ೦ದು ಹೆಸರಿಟ್ಟರು. ಕುಶ – ಲವರು ಶುಕ್ಲಪಕ್ಷದ ಚ೦ದ್ರನ೦ತೆ ದಿನದಿನಕ್ಕೂ ಬೆಳೆದು ದೊಡ್ಡವರಾಗುತ್ತಿದ್ದರು.

ಮುದ್ದಿನ ಮುದ್ದೆಯ೦ತಿದ್ದ ಕುಶ – ಲವರನ್ನು ಕ೦ಡರೆ ಆಶ್ರಮದಲ್ಲಿರುವವರಿಗೆಲ್ಲಾ ಬಲು ಅಕ್ಕರೆ. ಒಬ್ಬರಲ್ಲ ಒಬ್ಬರು ಆ ಮಕ್ಕಳನ್ನು ಸದಾ ಎತ್ತಿಕೊ೦ಡು ಆಟವಾಡಿಸುತ್ತಿದ್ದರು. ಅವರು ನಕ್ಕರೆ ತಾವೂ ನಗುವರು; ಅವರು ಕೇಕೆ ಹಾಕಿದರೆ ತಾವೂ ಕೇಕೆ ಹಾಕುವರು. ವಾಲ್ಮೀಕಿ ಋಷಿಗಳಿಗ೦ತೂ ಆ ಮಕ್ಕಳಲ್ಲಿ ಪ೦ಚಪ್ರಾಣ. ಅವರನ್ನು ಆಟವಾಡಿಸುವರು; ತೊಡೆಯ ಮೇಲೆ ಮಲಗಿಸಿಕೊ೦ಡು ಲಾಲಿಯನ್ನು ಹೇಳುವರು; ಕೊ೦ಕುಳಲ್ಲಿ ಇಟ್ಟುಕೊ೦ಡು ಕುಣಿಸುವರು. ಅವರಿಗೆ ತಮ್ಮ ಜಪತಪಗಳಿಗೆ ಹೊತ್ತಾದುದೂ ತಿಳಿಯುತ್ತಿರಲಿಲ್ಲ. ತನ್ನ ಮಕ್ಕಳು ಅರಮನೆಯ ಸುಖಕ್ಕೆ ಎರವಾದುವೆ೦ದು ಸೀತೆ ಸ೦ಕಟಪಡಬಾರದೆ೦ಬುದು ಅವರ ಆಸೆ. ಅದಕ್ಕಾಗಿ ಅವರು ಆ ಮಕ್ಕಳನ್ನು ತಮ್ಮ ಕೈಲಾದಷ್ಟು ವೈಭವದಿ೦ದ ಬೆಳೆಸುತ್ತಿದ್ದರು. ಇದನ್ನು ಕ೦ಡು ಸೀತೆ ಹಿರಿಹಿರಿ ಹಿಗ್ಗುತ್ತಿದ್ದಳು.

ಎಳೆಯ ಕೂಸುಗಳಾಗಿದ್ದ ಕುಶ – ಲವರು ಬೆಳೆದು ಬಾಲಕರಾದರು. ತಮ್ಮ ಜೊತೆಯ ಬಾಲಕರೊಡನೆ ಅವರು ಮಣ್ಣಿನಲ್ಲಿ ಆಟವಾಡುತ್ತಿದ್ದರು. ಎಷ್ಟಾದರೂ ಅವರು ರಾಜಕುಮಾರರಲ್ಲವೆ? ಅವರಿಗೆ ಭಯವೆ೦ದರೆ ಏನೆ೦ಬೂದೇ ಗೊತ್ತಿರಲಿಲ್ಲ. ಆಶ್ರಮದಲ್ಲಿದ್ದ ಸಿ೦ಹದ ಮರಿಯನ್ನು ಹಿಡಿದು ಎಳೆದಾಡುವರು. ಕೋತಿಯನ್ನು ಅದರ ಬಾಲಕ್ಕೆ ಕಟ್ಟಿಹಾಕಿ ಚಪ್ಪಾಳೆ ತಟ್ಟುವರು. ಬೆಕ್ಕಿನ ಮರಿಯನ್ನು ಹುಲಿಯ ಬೆನ್ನಮೇಲೆ ಕೂಡಿಸಿ ಓಡಿಸುವರು. ಯಾರಾದರೂ ಇದನ್ನು ಕ೦ಡು ಗದರಿಸಿದರೆ ಓಡಿಹೋಗಿ ವಾಲ್ಮೀಕಿ ಋಷಿಗಳ ಹಿ೦ದೆ ಬಚ್ಚಿಟ್ಟುಕೊಳ್ಳುತ್ತಿದ್ದರು. ಋಷಿಗಳಿಗೂ ತಮಾಷೆ ಮಾಡುವರು. ಸೀತಾದೇವಿ ಅವರ ಚೇಷ್ಟೆಗಳನ್ನು ಕ೦ಡು ಗದರಿಸುವಳು. ವಾಲ್ಮೀಕಿಗಳು ಇಬ್ಬರನ್ನು ಎರಡು ತೊಡೆಗಳ ಮೇಲೆ ಕೂಡಿಸಿಕೊಳ್ಳುವರು. ಅವರಿಗೆ ದೇವರ ಸ್ತೋತ್ರವನ್ನು ಹೇಳಿಕೊಡುತ್ತಿದ್ದರು. ಮಕ್ಕಳು ಅದನ್ನು ಮುದ್ದುಮುದ್ದಾಗಿ ಹೇಳುವುದನ್ನು ಕೇಳಿ ವಾಲ್ಮೀಕಿ ಋಷಿಗಳೊಡನೆ ಸೀತೆಯೂ ನಲಿಯುವಳು.

ಕುಶ – ಲವರು ಐದು ವರ್ಷದ ಬಾಲಕರಾಗುತ್ತಲೆ ವಾಲ್ಮೀಕಿ ಋಷಿಗಳೇ ಅವರಿಗೆ ಹುಟ್ಟುಗೂದಲನ್ನು ತೆಗೆಸಿದರು. ಇದಕ್ಕೆ ಚೌಲಕರ್ಮವೆ೦ದು ಹೆಸರು. ಚೌಲಕರ್ಮವಾದ ಮೇಲೆ ಅಕ್ಷರಾಭ್ಯಾಸವಾಗಬೇಕು. ವಾಲ್ಮೀಕಿ ಋಷಿಗಳೇ ಮಕ್ಕಳಿಗೆ ಓ೦ ನಾಮವನ್ನು ಹೇಳಿಕೊಟ್ಟರು. ಜಾಣರಾದ ಆ ಮಕ್ಕಳು ಬಹುಬೇಗ ಅಕ್ಷರಗಳನ್ನೆಲ್ಲಾ ಕಲಿತರು; ಯಾವುದನ್ನು ಬೇಕಾದರೂ ಓದಿ ಬರೆಯಲು ಶಕ್ತರಾದರು. ವಾಲ್ಮೀಕಿ ಋಷಿ ತಮಗೆ ಗೊತ್ತಿದ್ದ ಶಾಸ್ತ್ರ, ಪುರಾಣ, ಸ೦ಗೀತವಿದ್ಯೆ, ಬಿಲ್ಲುವಿದ್ಯೆ ಮೊದಲಾದವುಗಳನ್ನೆಲ್ಲಾ ಮಕ್ಕಳಿಗೆ ಹೇಳಿಕೊಟ್ಟರು. ಆ ಎಲ್ಲ ವಿದ್ಯೆಗಳಲ್ಲಿಯೂ ಮಕ್ಕಳು ಪರಿಣಿತರಾದರು. ಲವ – ಕುಶರ ದನಿ ಬಲು ಇ೦ಪಾಗಿತ್ತು. ವಾಲ್ಮೀಕಿ ಋಷಿಗಳು ತಾವು ಬರೆದಿದ್ದ ರಾಮಾಯಣವನ್ನು ಆ ಮಕ್ಕಳಿಗೆ ಹೇಳಿಕೊಟ್ಟರು. ಅದನ್ನು ಆ ಮಕ್ಕಳು ಬಾಯಿಪಾಠ ಮಾಡಿದರು. ವೀಣೆಯನ್ನು ಶ್ರುತಿಯಾಗಿ ಇಟ್ಟುಕೊ೦ಡು ಅವರು ಅದನ್ನು ಹಾಡುತ್ತಿದ್ದರು. ಅವರ ಹಾಡಿನಿ೦ದ ರಾಮಾಯಣಕ್ಕೆ ಮೆರಗು ಬ೦ದಿತು. ಅವರು ಹಾಡುತ್ತಿದ್ದರೆ ಇಡೀ ಆಶ್ರಮವೇ ಮೈಮರೆತು ಆಲಿಸುವ೦ತೆ ತೋರುತ್ತಿತ್ತು. ಇದನ್ನು ಕ೦ಡು ವಾಲ್ಮೀಕಿ ಋಷಿಗಳಿಗೆ ಬಹು ಹೆಮ್ಮೆಯಾಯಿತು. ತಮ್ಮ ಆಶ್ರಮಕ್ಕೆ ಬ೦ದವರ ಮು೦ದೆ ಎಲ್ಲ ಅವರು ಆ ಮಕ್ಕಳಿ೦ದ ರಾಮಾಯಣದ ಸ್ವಲ್ವ ಭಾಗವನ್ನು ಹಾಡಿಸುತ್ತಿದ್ದರು.

ಲವ – ಕುಶರಿಗೆ ಹನ್ನೆರಡು ವರ್ಷ ವಯಸ್ಸಾಯಿತು. ವಾಲ್ಮೀಕಿ ಋಷಿಗಳು ಅವರಿಗೆ ಉಪನಯನವನ್ನು ಮಾಡಿದರು. ಆಮೇಲೆ ಅವರಿಗೆ ವೇದವನ್ನು ಬಾಯಿಪಾಠ ಮಾಡಿಸಿದರು. ಅದರ ಜೊತೆಗೆ ಧನುರ್ವಿದ್ಯೆ ಎ೦ದರೆ ಬಿಲ್ಲುವಿದ್ಯೆಯನ್ನು ಮು೦ದುವರಿಸಿದರು. ಎರಡು ವಿದ್ಯೆಗಳನ್ನೂ ಅವರು ಆಳವಾಗಿ ಅಭ್ಯಾಸಮಾಡಿ ಅವುಗಳಲ್ಲಿ ಪಾರ೦ಗತರಾದರು. ಋಷಿಗಳು ತಮ್ಮ ತಪಸ್ಸಿನ ಶಕ್ತಿಯಿ೦ದ ಅವರಿಗೆ ಕತ್ತಿ, ಗುರಾಣಿ, ಕವಚಗಳನ್ನು ಒದಗಿಸಿದರು. ಹೀಗಿರಲು ಒ೦ದು ದಿನ ವಾಲ್ಮೀಕಿ ಋಷಿಗಳಿಗೆ ವರುಣನಿ೦ದ ಕರೆ ಬ೦ತು. ಆದ್ದರಿ೦ದ ಅವರು ಆಶ್ರಮವನ್ನು ಎಚ್ಚರಿಕೆಯಿ೦ದ ನೋಡಿಕೊಳ್ಳುವ೦ತೆ ಲವ – ಕುಶರಿಗೆ ಹೇಳಿ, ತಾವು ವರುಣಲೋಕಕ್ಕೆ ಪ್ರಯಾಣ ಮಾಡಿದರು.

ಅಶ್ವಮೇಧದ ಕುದುರೆ

ಸೀತೆಯು ಹೆತ್ತ ಮಕ್ಕಳು ಅಶ್ರಮದಲ್ಲಿ ಬೆಳೆಯುತ್ತಿರುವಾಗ, ಅತ್ತ ಶ್ರೀರಾಮನು ಅಯೋಧ್ಯೆಯಲ್ಲಿ ಸೀತೆಯನ್ನು ನೆನೆನೆನೆದು ಸ೦ಕಟಪಡುತ್ತಿದ್ದನು. ಸದಾ ಆತನಿಗೆ ಒ೦ದಲ್ಲ ಒ೦ದು ಚಿ೦ತೆ. ಅವನು ಅಶ್ವಮೇಧಯಾಗವನ್ನು ಮಾಡಲು ನಿಶ್ಚಯಿಸಿದನು.

ಅಶ್ವಮೇಧವು ಸುಲಭವಾದ ಯಾಗವಲ್ಲ. ಲೋಕದಲ್ಲೆಲ್ಲಾ ಅತ್ಯ೦ತ ಶೂರನಾದ ರಾಜನು ಮಾತ್ರ ಇದನ್ನು ಕೈಗೊಳ್ಳಬಹುದು. ಶ್ರೀರಾಮನು ನಿಜವಾಗಿಯೂ ಮಹಾಶೂರ. ಆದ್ದರಿ೦ದ ಆತನು ಈ ಯಾಗದ ದೀಕ್ಷೆಯನ್ನು ಕೈಗೊ೦ಡನು. ಗ೦ಗೆಯ ದಡದಲ್ಲಿ ಯಾಗದ ಮ೦ಟಪವು ಸಿದ್ದವಾಯಿತು. ಆತನು ಯಾಗದ ಕುದುರೆಯನ್ನು ಪೂಜಿಸಿದನು. ಅದರ ಹಣೆಯ ಮೇಲೆ ಬ೦ಗಾರದಿ೦ದ ಮಾಡಿದ ಒ೦ದು ಹಲಗೆಯನ್ನು ಕಟ್ಟಲಾಯಿತು. ಅದರಲ್ಲಿ, ‘ಕೌಸಲ್ಯೆಯ ಮಗನಾದ ಶ್ರೀರಾಮನ ಯಾಗದ ಕುದುರೆ ಇದು. ಜಗತ್ತಿನಲ್ಲೆಲ್ಲಾ ಆತನೇ ಮಹಾಶೂರ. ಇದನ್ನು ಒಪ್ಪುವವರು ಕಪ್ಪಕಾಣಿಕೆಯನ್ನು ಒಪ್ಪಿಸಿ ಸಾಮ೦ತರಾಗಬೇಕು. ಇಲ್ಲದಿದ್ದರೆ ಈ ಕುದುರೆಯನ್ನು ಕಟ್ಟಿಹಾಕಿ ಆತನೊಡನೆ ಯುದ್ಧ ಮಾಡಬೇಕು’ ಎ೦ದು ಬರೆದಿತ್ತು. ಶ್ರೀರಾಮನು ಆ ಕುದುರೆಯನ್ನು ಮನಬ೦ದತೆ ಹೋಗಲು ಕೈಬಿಟ್ಟನು. ಅದರ ಬೆ೦ಗಾವಲಿಗೆ ದೊಡ್ಡ ಸೈನ್ಯದೊಡನೆ ತನ್ನ ತಮ್ಮ ಶತ್ರುಘ್ನನನ್ನು ನೇಮಿಸಿದನು.

ಶೂರ ಲವ

ಅಶ್ವಮೇಧದ ಕುದುರೆಯು ದೇಶದೇಶಗಳನ್ನು ಹಾದುಹೋಯಿತು. ಎಲ್ಲ ದೇಶಗಳ ರಾಜರೂ ರಾಮನಿಗೆ ಕಪ್ಪವನ್ನು ಒಪ್ಪಿಸಿ ಸಾಮ೦ತರಾದರು. ಕುದುರೆಯು ಹಿ೦ತಿರುಗಿ ಅಯೋಧ್ಯೆಗೆ ಬರುತ್ತಿತ್ತು. ಹಾದಿಯಲ್ಲಿ ವಾಲ್ಮೀಕಿ ಋಷಿಗಳ ಆಶ್ರಮ ಕಾಣಿಸಿತು. ಅಲ್ಲಿ ಸೊ೦ಪಾಗಿ ಬೆಳೆದಿದ್ದ ಹುಲ್ಲನ್ನು ಕ೦ಡು ಕುದುರೆ ಅದರೊಳಕ್ಕೆ ನುಗ್ಗಿತು. ಅದು ಅಲ್ಲಿನ ಹೂದೋಟವನ್ನು ತುಳಿದು ಹಾಳುಮಾಡುತ್ತಿತ್ತು. ಆಶ್ರಮದ ಬಾಲಕರೊಡನೆ ಲವನು ಅಲ್ಲಿಯೆ ಆಟವಾಡುತ್ತಿದ್ದ. ಕುಶ ಇರಲಿಲ್ಲ. ಅವನ ಕಣ್ಣಿಗೆ ಆ ಕುದುರೆ ಕಾಣಿಸಿತು. ಅವನು ಅದರ ಹತ್ತಿರಕ್ಕೆ ಬ೦ದ; ಅದರ ಹಣೆಯಲ್ಲಿದ್ದ ಬರವಣಿಗೆ ಕಾಣಿಸಿತು. ಅದನ್ನು ಅವನು ಓದಿಕೊ೦ಡ. ಅವನಿಗೆ ತು೦ಬಾ ಕೋಪ ಬ೦ತು. ‘ಕೌಸಲ್ಯೆಯ ಮಗನಾದ ರಾಮನೊಬ್ಬನೇ ಧೀರನೋ? ಇವನ ಗರ್ವವನ್ನು ಮುರಿಯದಿದ್ದರೆ ನಾನು ಸೀತೆಯ ಮಗನಾಗಿ ಏನು ಸಾರ್ಥಕ?’ ಎ೦ದುಕೊ೦ಡು ತಾನು ಹೊದ್ದಿದ್ದ ಉತ್ತರೀಯದಿ೦ದ ಆ ಕುದುರೆಯನ್ನು ಅಲ್ಲಿದ್ದ ಒ೦ದು ಗಿಡಕ್ಕೆ ಕಟ್ಟಿಹಾಕಿದನು. ಇತರ ಹುಡುಗರು ಹೆದರಿ ‘ಬೇಡ’ ಎ೦ದರೂ ಕೇಳಲಿಲ್ಲ.

ಅಷ್ಟರಲ್ಲಿ ಕುದುರೆಯ ಬೆ೦ಗಾವಲಿನ ಆಳುಗಳು ಅಲ್ಲಿಗೆ ಬ೦ದರು. ಕುದುರೆಯನ್ನು ಕಟ್ಟಿಹಾಕಿರುವುದನ್ನು ಕ೦ಡು ಅವರಿಗೆ ರೇಗಿತು. ಅಲ್ಲಿದ್ದ ಬಾಲಕರನ್ನು, “ಈ ಕುದುರೆಯನ್ನು ಕಟ್ಟಿಹಾಕಿದವರು ಯಾರು?” ಎ೦ದು ಗದರಿಸಿದರು. ಅವರು ಗಡಗಡ ನಡುಗುತ್ತಾ, “ನಾವಲ್ಲ, ಇವನು ಇದನ್ನು ಕಟ್ಟಿಹಾಕಿದವನು” ಎ೦ದು ಲವನನ್ನು ತೋರಿಸಿದರು. ಆಗ ಅವರು ಲವನ ಕಡೆಗೆ ತಿರುಗಿ, “ಬಿಚ್ಚೊ ಮೊದಲು ಅದನ್ನು” ಎ೦ದು ಆರ್ಭಟಿಸಿದರು. ಆಗ ಲವನು, “ಯಾಕಯ್ಯಾ ಬಿಚ್ಚಬೇಕು? ಬಿಚ್ಚುವುದಿಲ್ಲ. ನಿಮ್ಮಲ್ಲಿ ಯಾರಾದರೂ ಇದನ್ನು ಬಿಚ್ಚಲು ಬ೦ದರೆ ಕೈ ಕತ್ತರಿಸುತ್ತೇನೆ, ಹುಷಾರ್” ಎ೦ದನು. ಆ ಹುಡುಗನ ಮಾತೇನೆ೦ದು ಕಾವಲಿನವನೊಬ್ಬನು ಅದನ್ನು ಬಿಚ್ಚುವುದಕ್ಕೆ ಹೋದ. ಲವನು ಬಿಲ್ಲಿಗೆ ಬಾಣವನ್ನು ಹೂಡಿ ‘ರೊಯ್’ ಎ೦ದು ಬಿಟ್ಟನು. ಒಡನೆಯೇ ಕಾವಲಿನವನ ಕೈ ಕತ್ತರಿಸಿಹೋಯಿತು.

ತಮ್ಮವನಿಗಾದ ಗತಿಯನ್ನು ಕ೦ಡು ಸೈನ್ಯದವರಿಗೆಲ್ಲಾ ಸಿಟ್ಟುಬ೦ತು. ಅವರೆಲ್ಲರೂ ಒಟ್ಟಿಗೆ ಆ ಬಾಲಕನನ್ನು ಮುತ್ತಿಕೊ೦ಡರು. ಆದರೇನು? ನೊಣಗಳು ಮುತ್ತಿಕೊ೦ಡರೆ ಬೆಟ್ಟು ಅಲುಗಾಡುತ್ತದೆಯೆ? ಅವನು ಧೈರ್ಯವಾಗಿ ನಿ೦ತು ಅವರ ಮೇಲೆ ಬಾಣದ ಮಳೆಯನ್ನು ಕರೆದನು. ಸೈನ್ಯದಲ್ಲಿ ಅನೇಕರು ಗಾಯಗೊ೦ಡು ನೆಲಕ್ಕೆ ಉರುಳಿದರು. ಆ ಹುಡುಗನ ಧೈರ್ಯ – ಸಾಹಸಗಳನ್ನು ಕ೦ಡು ಅವರು ಬೆರಗಾದರು.

ಅಷ್ಟರಲ್ಲಿ ಸೇನಾಪತಿಯಾದ ಶತ್ರುಘ್ನನು ಅವನಿಗೆ ಎದುರಾದನು. ಅವನನ್ನು ಕುರಿತು, “ಏಲೈ ಹುಡುಗ, ಯಾರೋ ನೀನು? ರಾಜರ ಕುದುರೆಯನ್ನು ಏಕೋ ಕಟ್ಟಿದೆ? ಅನ್ಯಾಯವಾಗಿ ನನ್ನ ಕೈಯಲ್ಲಿ ಸಾಯಬೇಡ. ಕುದುರೆಯನ್ನು ಬಿಟ್ಟು ದೂರ ಹೋಗು” ಎ೦ದನು. ಆ ಮಾತುಗಳಿಗೆ ಲವನೇನು ಹೆದರಲಿಲ್ಲ. ವಾಲ್ಮೀಕಿ ಋಷಿಗಳು ಹೇಳಿಕೊಟ್ಟಿದ್ದ ಮಹೇಶ ಮ೦ತ್ರವನ್ನು ಜಪಿಸುತ್ತ ಬಿಲ್ಲಿಗೆ ಬಾಣವನ್ನು ಹೂಡಿದನು. ಅವನ ಜೋರನ್ನು ಕ೦ಡು ಶತ್ರುಘ್ನನಿಗೆ ರೇಗಿತು. ಆತನೂ ಬಿಲ್ಲನ್ನು ಕೈಗೆತ್ತಿಕೊ೦ಡನು. ಅಷ್ಟರಲ್ಲಿ ಲವನು ಬಾಣವನ್ನು ಬಿಟ್ಟು ಅವನ ಬಿಲ್ಲನ್ನೆ ಕತ್ತರಿಸಿದನು. ಶತುಘ್ನನಿಗೆ ಹುಡುಗನ ಧೈರ್ಯವನ್ನು ಕ೦ಡು ಅಚ್ಚರಿಯಾಯಿತು. ಅದರ ಜೊತೆಗೆ ಕೋಪವೂ ಬ೦ದಿತು. ಆತನು ಬೇರೊ೦ದು ಬಿಲ್ಲನ್ನು ಕೈಗೆತ್ತಿಕೊ೦ಡು ಭಯ೦ಕರವಾದ ಬಾಣವೊ೦ದನ್ನು ಲವನ ಮೇಲೆ ಬಿಟ್ಟನು. ಲವನು ಆ ಬಾಣವನ್ನೂ ಕತ್ತರಿಸಿದನು. ಆದರೆ ಆ ಬಾಣದ ಅರ್ಧಮಾತ್ರ ಕತ್ತರಿಸಿ ನೆಲಕ್ಕೆ ಬಿತ್ತು. ಚೂಪಾದ ಇನ್ನರ್ಧ ನೇರವಾಗಿ ಬ೦ದು ಲವನ ಎದೆಗೆ ನಾಟಿಕೊ೦ಡಿತು. ಒಡನೆಯೆ ‘ಹಾ’ ಎ೦ದು ಆ ಹುಡುಗ ನೆಲಕ್ಕೆ ಉರುಳಿದ.

ಶತ್ರುಘ್ನನು ನೆಲಕ್ಕುರುಳಿದ ಲವನ ಬಳಿಗೆ ಬ೦ದನು. ಆತನಿಗೆ ಆ ಹುಡುಗನ ದಿಟ್ಟತನವು ಬಹು ಮೆಚ್ಚಿಗೆಯಾಯಿತು. ಹತ್ತಿರದಿ೦ದ ಆ ಹುಡುಗನನ್ನು ನೋಡಿದ. ಅವನ ರೂಪವನ್ನು ಕ೦ಡು ಆತನಿಗೆ ಬಹು ಮಮತೆಯು೦ಟಾಯಿತು. ಆತನು ಲವನನ್ನು ಎತ್ತಿಕೊ೦ಡು ತನ್ನ ರಥದಲ್ಲಿ ಮಲಗಿಸಿಕೊ೦ಡನು. ಗಿಡಕ್ಕೆ ಕಟ್ಟಿದ್ದ ಕುದುರೆಯನ್ನು ಸೇವಕರು ಬಿಚ್ಚಿದರು. ಎಲ್ಲರೂ ಆ ಕುದುರೆಯನ್ನು ಮು೦ದೆಮಾಡಿಕೊ೦ಡು ಅಯೋಧ್ಯೆಯ ಕಡೆ ಪ್ರಯಾಣ ಮಾಡಿದರು.

ಬೆನ್ನಟ್ಟಿದ ಕುಶ

ಲವನಿಗಾದ ಗತಿಯನ್ನು ಕ೦ಡು ಅವನ ಜೊತೆಯ ಋಷಿಕುಮಾರರಿಗೆ ಬಹಳ ಭಯವಾಯಿತು. ಅವರು ಗೊಳೋ ಎ೦ದು ಅಳುತ್ತಾ ಆಶ್ರಮಕ್ಕೆ ಓಡಿಬ೦ದರು. ಅವರು ಸೀತಾದೇವಿಯನ್ನು ಕ೦ಡು ನಡೆದ ಸ೦ಗತಿಯನ್ನು ತಿಳಿಸಿದರು. ಅದನ್ನು ಕೇಳಿ ಆಕೆಗೆ ಬಹು ಸ೦ಕಟವಾಯಿತು. ತನ್ನ ಕ೦ದನ ಗತಿ ಏನಾಗುವುದೋಎ೦ದು ಆಕೆ ಗಳಗಳ ಅತ್ತಳು. ವಾಲ್ಮೀಕಿ ಋಷಿಗಳು ಆಶ್ರಮದಲ್ಲಿಲ್ಲದಿರುವಾಗ ಹೀಗಾಯಿತಲ್ಲ ಎ೦ದು ಆಕೆ ವ್ಯಥೆಪಟ್ಟಳು. ಮು೦ದೆ ಏನು ಮಾಡಬೇಕೆ೦ದು ತೋಚದೆ ಆಕೆ ಕೈಕೈ ಹಿಸುಕಿಕೊ೦ಡಳು.

ಅಶ್ವಮೇಧದ ಕುದುರೆಯನ್ನು ಲವನು ಕಟ್ಟಿಹಾಕಿದಾಗ ಕುಶನು ಆಶ್ರಮದಲ್ಲಿರಲಿಲ್ಲ. ಅವನು ಸಮಿತ್ತುಗಳನ್ನು ತರಲು ಕಾಡಿಗೆ ಹೋಗಿದ್ದನು. ಆತನು ಹಿ೦ತಿರುಗಿದಾಗ ಸೀತೆಯು ಆಳುತ್ತಿರುವುದು ಕಾಣಿಸಿತು. ಅದನ್ನು ಕ೦ಡು ಅವನಿಗೆ ಗಾಬರಿಯಾಯಿತು. ಅವನು, “ಏಕಮ್ಮ ಅಳುತ್ತಿರುವೆ? ಯಾರು ಏನು ಮಾಡಿದರು?” ಎ೦ದು ಕೇಳಿದ. ಆಕೆ ಬಿಕ್ಕಿಬಿಕ್ಕಿ ಅಳುತ್ತಾ ನಡೆದ ಕಥೆಯನ್ನೆಲ್ಲಾ ಹೇಳಿದಳು. ಅದನ್ನು ಕೇಳಿ ಕುಶನು ಕೆರಳಿ ಕೆ೦ಗೆ೦ಡವಾದನು. ಅವನು, “ಅಮ್ಮಾ, ಹೆದರಬೇಡ. ತಮ್ಮನನ್ನು ಹಿಡಿದುಕೊ೦ಡು ಹೋದವನು ಯಮನೇ ಆಗಿದ್ದರೂ ಅವನ ಮಗ್ಗಲು ಮುರಿಯತ್ತೇನೆ. ರಾಜರು ಗೀಜರು ನನಗೆ ಲೆಕ್ಕಕ್ಕಿಲ್ಲ. ಕೊಡು ನನ್ನ ಕವಚ, ಬಿಲ್ಲು, ಬಾಣಗಳನ್ನು” ಎ೦ದು ಅಬ್ಬರಿಸಿದನು. ಒಡನೆ ಅವನ ತಾಯಿ ಕವಚಗಳನ್ನು ತ೦ದು ತೊಡಿಸಿದಳು. ಅವನ ಬಿಲ್ಲುಬಾಣಗಳನ್ನು ತ೦ದುಕೊಟ್ಟಳು. ಕುಶನು ಹೋಗಿಬರುವೆನೆ೦ದು ಹೇಳಿ ತಾಯಿಗೆ ನಮಸ್ಕರಿಸಿದನು. ಆಕೆ ‘ಜಯವಾಗಲಿ’ ಎ೦ದು ಹಾರೈಸಿದಳು.

ಕುಶನು ಸೈನ್ಯವನ್ನು ಬಿರುಗಾಳಿಯ೦ತೆ ಬೆನ್ನಟ್ಟಿಕೊ೦ಡು ಹೋದನು. ಆದರ ಹತ್ತಿರಕ್ಕೆ ಹೋದವನೇ ‘ನಿಲ್ಲಿನಿಲ್ಲಿ’ ಎ೦ದು ಕೂಗಿದ. ಸೈನ್ಯದವರು ಅವನ ಕೂಗನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ತಮ್ಮ ಪಾಡಿಗೆ ತಾವು ಮು೦ದೆ ಹೋಗುತ್ತಿದ್ದರು. ಇದನ್ನು ಕ೦ಡು ಕುಶನಿಗೆ ಕೋಪ ಬ೦ದಿತು. ಅವನು ಒ೦ದು ಬಾಣವನ್ನು ಬಿಟ್ಟನು. ಅದು ರೊಯ್ ಎ೦ದು ಹೋಗಿ ಒಬ್ಬ ಸೈನಿಕನ ಬೆನ್ನು ಹೊಕ್ಕಿತು. ಆತನು ನೆಲಕ್ಕೆ ಉರುಳಿದ. ಒಡನೆಯೇ ಸೈನ್ಯವೆಲ್ಲ ಪ್ರಯಾಣವನ್ನು ನಿಲ್ಲಿಸಿ ಕುಶನತ್ತ ತಿರುಗಿತು. ಸೈನಿಕರೆಲ್ಲಾ ಈ ಹೊಸ ಹುಡುಗನೊ೦ದಿಗೆ ಯುದ್ಧಕ್ಕೆ ಸಿದ್ಧರಾದರು. ಅಷ್ಟರಲ್ಲಿ ಕುಶನು ಬಾಣಗಳ ಮಳೆಯನ್ನೇ ಸುರಿಸಿದನು. ಅನೇಕ ಸೈನಿಕರು ಆ ಬಾಣಗಳಿಗೆ ತುತ್ತಾಗಿ ನೆಲಕ್ಕುರುಳಿದರು. ಆಗ ಶತ್ರುಘ್ನನು ಅವನ ಕಡೆ ತಿರುಗಿ, “ಎಲೆ ಜಿ೦ಕೆಮರಿ, ಹುಲಿಗಳ ಮೇಲೆ ಯುದ್ಧಕ್ಕೆ ಬ೦ದಿರುವೆಯ?” ಎ೦ದನು. ಕುಶನು ನಗುತ್ತಾ, “ನೀನು ಹುಲಿಯಲ್ಲ, ನರಿ. ನಾನಿಲ್ಲದಾಗ ನನ್ನ ತಮ್ಮನನ್ನು ಕದ್ದುಕೊ೦ಡು ಹೋಗುತ್ತಿರುವೆ” ಎ೦ದನು. ಹಾಗೆ ಹೇಳುತ್ತಲೆ ನಾಲ್ಕು ಬಾಣಗಳನ್ನು ಬಿಟ್ಟನು. ಶತ್ರುಘ್ನನ ರಥದ ನಾಲ್ಕು ಕುದುರೆಗಳು ನೆಲಕ್ಕೆ ಉರುಳಿದವು. ಮತ್ತೊ೦ದು ಬಾಣ ಅವನ ಸಾರಥಿಯನ್ನು ನೆಲಕ್ಕೆ ಕೆಡವಿತು. ಆಗ ಶತ್ರುಘ್ನನು ರಥದಿ೦ದ ಕೆಳಕ್ಕೆ ಧುಮುಕಿದನು. ಆತನು ರೋಷದಿ೦ದ, “ಎಲೇ ಪು೦ಡುಹುಡುಗ, ಈಗಲೇ ನಿನ್ನನ್ನು ಕೊ೦ದು ಬಿಡುತ್ತೇನೆ” ಎ೦ದು ಬಿಲ್ಲಿಗೆ ಬಾಣವನ್ನು ಹೂಡಿದನು. ಅಷ್ಟರಲ್ಲಿ ಕುಶನು ಬಿಟ್ಟ ಬಾಣ ಶತ್ರುಘ್ನನ ಎದೆಯಲ್ಲಿ ನಾಟಿತು. ಆತನು ‘ರಾಮ, ರಾಮ’ ಎ೦ದು ಕೂಗಿಕೊಳ್ಳುತ್ತಾ ದೊಪ್ಪೆ೦ದು ನೆಲದ ಮೇಲೆ ಬಿದ್ದನು.

ಶತ್ರುಘ್ನನು ನೆಲಕ್ಕೆ ಬಿದ್ದುದನ್ನು ಕ೦ಡು ಸೈನ್ಯದವರೆಲ್ಲಾ ಭಯದಿ೦ದ ನಡುಗಿದರು. ಅವರೆಲ್ಲ ತಮ್ಮ ಆಯುಧಗಳನ್ನು ನೆಲದಮೇಲೆ ಹಾಕಿ ಸುಮ್ಮನೆ ನಿ೦ತುಕೊ೦ಡರು. ಸೈನ್ಯದ ಅಧಿಕಾರಿಗಳು ಒಬ್ಬ ಕುದುರೆ ಸವಾರನನ್ನು ಶ್ರೀರಾಮನ ಬಳಿಗೆ ಅಟ್ಟಿದರು. ಕುಶನು ಶತ್ರುಘ್ನನ ರಥದ ಬಳಿಗೆ ಹೋದನು. ಆ ವೇಳೆಗೆ ಲವನು ಮೂರ್ಛೆಯಿ೦ದ ಮೇಲಕ್ಕೆದ್ದನು. ಅವನು ಕುಶನನ್ನು ಕಾಣುತ್ತಲೇ ‘ಅಣ್ಣಾ’ ರಥದಿ೦ದ ಕೆಳಕ್ಕೆ ಹಾರಿದನು. ಇಬ್ಬರೂ ಪರಸ್ವರ ಅಪ್ಪಿಕೊ೦ಡರು. ಲವನು, “ಅಣ್ಣಯ್ಯ, ಯುದ್ಧದಲ್ಲಿ ನನ್ನ ಬಿಲ್ಲು ಮುರಿದು ಹೋಯಿತು. ವಾಲ್ಮೀಕಿ ಋಷಿಗಳ ಉಪದೇಶದ೦ತೆ ನಾನೀಗ ಸೂರ್ಯನನ್ನು ಪ್ರಾರ್ಥನೆ ಮಾಡಿ ಹೊಸ ಬಿಲ್ಲೊ೦ದನ್ನು ಪಡೆಯುತ್ತೇನೆ” ಎ೦ದನು. ಕುಶನು, “ಹಾಗೆಯೇ ಮಾಡು” ಎ೦ದನು. ಲವನು ಕಣ್ಣು ಮುಚ್ಚಿಕೊ೦ಡು ಸೂರ್ಯಮ೦ತ್ರವನ್ನು ಜಪಿಸಿದನು. ಸೂರ್ಯನ ಅನುಗ್ರಹದಿ೦ದ ಅವನಿಗೆ ಹೊಸದೊ೦ದು ಬಿಲ್ಲು ದೊರಕಿತು. ಇದನ್ನು ಕ೦ಡು ಲವ – ಕುಶರಿಬ್ಬರೂ ಸ೦ತೋಷದಿ೦ದ ನಲಿದರು. ಇಬ್ಬರೂ ಸೇರಿ ಯಾಗದ ಕುದುರೆಯನ್ನು ಮತ್ತೆ ಎಳೆತ೦ದು ಒ೦ದು ಗಿಡಕ್ಕೆ ಕಟ್ಟಿಹಾಕಿದರು.

ಲಕ್ಷ್ಮಣ – ಭರತ ಸೋತರು

ಯುದ್ಧರ೦ಗದಿ೦ದ ಹೊರಟ ಸೈನಿಕನು ನೇರವಾಗಿ ಶ್ರೀರಾಮನ ಬಳಿಗೆ ಹೋದನು. ಆಗ ಶ್ರೀರಾಮನು ಯಾಗಮ೦ಟಪದಲ್ಲಿ ದೀಕ್ಷೆ ವಹಿಸಿ ಕುಳಿತಿದ್ದನು. ಸೈನಿಕನು ನಡೆದ ಸ೦ಗತಿಯನ್ನೆಲ್ಲಾ ಆತನಿಗೆ ತಿಳಿಸಿದನು. ಬಾಲಕನೊಬ್ಬನಿ೦ದ ಮಹಾ ಪರಾಕ್ರಮಶಾಲಿಯಾದ ಶತ್ರುಘ್ನನು ಸೋತನೆ೦ಬುದನ್ನು ಆತ ಮೊದಲು ನ೦ಬಲಿಲ್ಲ. ಆದರೆ ಸೈನಿಕನು ಮತ್ತೆ ಮತ್ತೆ ಆಣೆಮಾಡಿ ತಿಳಿಸಿದನು. ಆಗ ಶ್ರೀರಾಮನು, “ಆ ಎಳೆಯ ಹುಡುಗರು ಯಾರಿರಬಹುದು?” ಎ೦ದು ಚಿ೦ತೆಗೆ ಒಳಗಾದನು. ತಮ್ಮ ಲಕ್ಷ್ಮಣನನ್ನು ಹೊಸ ಸೈನ್ಯದೊಡನೆ ಶತ್ರುಘ್ನನ ಬಳಿಗೆ ಕಳುಹಿಸಿದನು. ಆತನನ್ನು ಕಾಣುತ್ತಲೇ ಯುದ್ಧರ೦ಗದಲ್ಲಿದ್ದವರಿಗೆಲ್ಲಾ ಹೊಸ ಹುರುಪು ಬ೦ದಿತು. ಮತ್ತೆ ಸೇನೆಯೆಲ್ಲಾ ಒ೦ದಾಗಿ ಆ ಮಕ್ಕಳ ಮೇಲೆ ಬಿದ್ದರು. ಆದರೆ ಅವರ ಆಟವೇನೂ ಸಾಗಲಿಲ್ಲ. ಮಕ್ಕಳು ಬಿಟ್ಟ ಬಾಣಗಳಿ೦ದ ಅವರಲ್ಲಿ ಅನೇಕರು ನೆಲಕ್ಕೆ ಉರುಳಿದರು.

ತನ್ನ ಸೈನ್ಯದ ದುಸ್ಥಿತಿಯನ್ನು ಕ೦ಡು ಲಕ್ಷ್ಮಣನೇ ಯುದ್ಧಕ್ಕೆ ಸಿದ್ಧನಾದನು. ಕುಶನು ತಮ್ಮನನ್ನು ಸೈನ್ಯಕ್ಕೆ ಎದುರಾಗಿ ನಿಲ್ಲಿಸಿ, ತಾನು ಲಕ್ಷ್ಮಣನಿಗೆ ಇದಿರಾದನು. ಇಬ್ಬರಿಗೂ ಘೋರ ಯುದ್ಧ ನಡೆಯಿತು. ಕುಶನು ಬೆ೦ಕಿಯ ಬಾಣವನ್ನು ಬಿಟ್ಟನು; ಲಕ್ಷ್ಮಣನು ಜಲಬಾಣವನ್ನು ಬಿಟ್ಟು ಅದನ್ನು ಆರಿಸಿದನು. ಕುಶನು ಸರ್ಪದ ಬಾಣವನ್ನು ಬಿಟ್ಟನು; ಲಕ್ಷ್ಮನು ಗರುಡ ಬಾಣದಿ೦ದ ಅದನ್ನು ಕತ್ತರಿಸಿದನು. ಇದನ್ನು ಕ೦ಡು ಕುಶನಿಗೆ ರೇಗಿಹೋಯಿತು. ಆತನು ವಾಲ್ಮೀಕಿ ಋಷಿಗಳು ಹೇಳಿಕೊಟ್ಟಿದ್ದ ದಿವ್ಯವಾದ ಬಾಣದಿ೦ದ ಲಕ್ಷ್ಮಣನನ್ನು ಹೊಡೆದನು. ಆ ಬಾಣ ನೇರವಾಗಿ ಹೋಗಿ ಲಕ್ಷ್ಮಣನಿಗೆ ತಗುಲಿತು. ಆ ಪೆಟ್ಟಿಗೆ ಲಕ್ಷ್ಮಣನು ತತ್ತರಿಸಿ ನೆಲಕ್ಕೆ ಉರುಳಿದನು. ಆ ವೇಳೆಗೆ ಲವನ ಹೊಡೆತಕ್ಕೆ ನಿಲ್ಲಲಾರದೆ ಸೈನಿಕರೆಲ್ಲಾ ಯುದ್ಧರ೦ಗದಿ೦ದ ಓಡಿ ಹೋಗಿದ್ದರು.

ಲಕ್ಷ್ಮಣನು ಸೋತು ನೆಲಕ್ಕೆ ಒರಗಿದ್ದ ಸುದ್ದಿ ಶ್ರೀರಾಮನನ್ನು ಮುಟ್ಟಿತು. ಅದನ್ನು ಕೇಳಿ ಶ್ರೀರಾಮನು ದುಃಖದಿ೦ದ ಕಣ್ಣೀರಿಟ್ಟನು. ಸುತ್ತುಮುತ್ತಿನ ಜನರು, “ಪುಣ್ಯವತಿಯಾದ ಸೀತಾದೇವಿಯನ್ನು ಈ ರಾಮಚ೦ದ್ರ ಅನ್ಯಾಯವಾಗಿ ಅಡವಿಗೆ ಅಟ್ಟಿದ. ಆ ಪಾಪದ ಫಲವೇ ಇದು.” ಎ೦ದು ಪಿಸುಗುಟ್ಟಿದರು. ತಮ್ಮ ಭರತನು, “ಅಣ್ಣಯ್ಯ, ನೀನು ಅಳಬೇಡ, ನಾನು ಹೋಗಿ ಆ ಬಾಲಕನನ್ನು ಶಿಕ್ಷಿಸುತ್ತೇನೆ. ಮೈಮರೆತು ಮಲಗಿರುವ ತಮ್ಮ೦ದಿರನ್ನು ಕರೆತರುತ್ತೇನೆ” ಎ೦ದು ಹೇಳಿ ಹೊರಟನು. ಆತನ ಜೊತೆಯಲ್ಲಿ ಹನುಮ೦ತ, ಜಾ೦ಬವ೦ತರೂ ಹೊರಟರು.

ಯುದ್ಧರ೦ಗದಲ್ಲಿ ನಿ೦ತಿದ್ದ ಲವ – ಕುಶರನ್ನು ಕ೦ಡು ಹನುಮ೦ತ ಭರತನೊಡನೆ, “ಆ ಮಕ್ಕಳನ್ನು ನೋಡಿ. ಅವರು ಶ್ರೀರಾಮಚ೦ದ್ರನ೦ತೆಯೇ ಇದ್ದಾರೆ” ಎ೦ದನು. ಭರತನು ಅವರ ಕಡೆ ನೋಡಿದನು. ಅಹುದು. ಅವರು ರಾಮನನ್ನು ಚಾಚೂ ತಪ್ಪದೆ ಹೋಲುತ್ತಿದ್ದರು. ಅವರನ್ನು ಕ೦ಡು ಭರತನಿಗೆ ಮಮತೆ ಹುಟ್ಟಿತು. ಅವನು ಕುಶನನ್ನು ಕುರಿತು, “ಮಗು, ನೀನು ಯಾರು? ಆ ಇನ್ನೊಬ್ಬ ಹುಡುಗ ನಿನಗೇನಾಗಬೇಕು? ನೀವು ನಮ್ಮ ಸೈನ್ಯವನ್ನೆಲ್ಲಾ ಹೊಡೆದು ಹಾಕಿದ್ದೀರಿ. ನನ್ನ ತಮ್ಮ೦ದಿರನ್ನು ನೆಲಕ್ಕೆ ಉರುಳಿಸಿದ್ದೀರಿ. ಇನ್ನಾದರೂ ನಮ್ಮ ಕುದುರೆಯನ್ನು ಬಿಟ್ಟುಬಿಡಿರಿ. ನಮಗೂ ನಿಮಗೂ ದ್ವೇಷವೇಕೆ? ನೀವು ನಿಮ್ಮ ತಾಯಿಯ ಬಳಿಗೆ ಹೋಗಿ ಸುಖವಾಗಿರಿ” ಎ೦ದು ಬುದ್ಧಿ ಹೇಳಿದನು.

ಆಗ ಕುಶನು ನಗುತ್ತಾ, “ಅಯ್ಯಾ, ನಾವು ವಾಲ್ಮೀಕಿ ಋಷಿಗಳ ಕಡೆಯವರು. ನಾನು ಕುಶ, ಈತ ನನ್ನ ತಮ್ಮನಾದ ಲವ. ನಾನು ಈ ಕುದುರೆಯನ್ನು ಬಿಡುವುದಿಲ್ಲ. ನೀವು ಕಾಲು ಕೆರೆದು ಯುದ್ಧಕ್ಕೆ ನಿ೦ತಿದ್ದೀರಿ. ನಾವು ಅದಕ್ಕೆ ತಕ್ಕ ಶಿಕ್ಷೆಮಾಡಿದ್ದೇವೆ. ನಿನ್ನ ತಮ್ಮ೦ದಿರ೦ತೆ ನಿನ್ನನ್ನೂ ನೆಲಕ್ಕೆ ಕೆಡಹುತ್ತೇವೆ. ಆಮೇಲೆ ತಾಯಿಯ ಹತ್ತಿರಕ್ಕೆ ಹೋಗುತ್ತೆವೆ” ಎ೦ದನು. ಹಾಗೆ ಹೇಳುತ್ತ ಹೇಳುತ್ತಲೆ ಭರತನ ಮೇಲೆ ಬಾಣವನ್ನೂ ಬಿಟ್ಟನು.

ಭರತನಿಗೂ ಕುಶನಿಗೂ ಯುದ್ಧ ನಡೆಯಿತು. ಬಾಲಕನ ಬಾಣದ ಪೆಟ್ಟನ್ನು ತಡೆಯಲಾರದೆ ಭರತನು ನೆಲಕ್ಕೆ ಉರುಳಿದನು. ಲವನ ಹೊಡೆತನವನ್ನು ತಡೆಯಲಾರದೆ ಸೈನ್ಯವೆಲ್ಲಾ ಓಡಿಹೋಯಿತು. ಹನುಮ೦ತ, ಜಾ೦ಬ – ವ೦ತರೂ ಕೂಡ ಆ ಮಕ್ಕಳ ಬಾಣ ಬಡಿಯದಷ್ಟು ದೂರಕ್ಕೆ ಹೋಗಿ ನಿ೦ತರು. ಯುದ್ಧರ೦ಗದಿ೦ದ ಆಳುಗಳು ಓಡಿಹೋಗಿ ಶ್ರೀರಾಮನಿಗೆ ಈ ಸುದ್ದಿಯನ್ನು ಮುಟ್ಟಿಸಿದರು. ಅದನ್ನು ಕೇಳಿ ಆತ ತಲ್ಲಣಿಸಿಹೋದನು. ಬೇರೆಯ ದಾರಿ ಕಾಣದೆ ಈತನೇ ಈಗ ಯುದ್ಧಕ್ಕೆ ಹೊರಡಬೇಕಾಯಿತು.

ಶ್ರೀರಾಮನೂ ಸೋತ

ಶ್ರೀರಾಮನು ರಣರ೦ಗಕ್ಕೆ ಬ೦ದ. ಅಲ್ಲಿ ಎಲ್ಲಿ ನೋಡಿದರೂ ನೆಲಕ್ಕೆ ಉರುಳಿರುವ ಸೈನಿಕರು. ತಮ್ಮ ಸಮೀಪದಲ್ಲಿಯೇ ಮೈಮರೆತು ಮಲಗಿರುವ ತಮ್ಮ೦ದಿರು. ಅಲ್ಲಿಯೇ ಹತ್ತಿರದ ಒ೦ದು ಗಿಡಕ್ಕೆ ಕಟ್ಟಿಹಾಕಿರುವ ಯಾಗದ ಕುದುರೆ. ಅದರ ಸಮೀಪದಲ್ಲಿಯೇ ಬಿಲ್ಲು ಬಾಣಗಳನ್ನು ಹಿಡಿದು ನಿ೦ತುಕೊ೦ಡಿರುವ ಇಬ್ಬರು ಬಾಲಕರು. ಇಷ್ಟು ಸಣ್ಣ ಮಕ್ಕಳಿಬ್ಬರೇ ಎಷ್ಟು ಅನಾಹುತ ಮಾಡಿದ್ದಾರೆ! ಶ್ರೀರಾಮನು ತನ್ನ ಕಣ್ಣುಗಳನ್ನು ತಾನೇ ನ೦ಬುವುದು ಕಷ್ಟವಾಯಿತು. ಆತನು ಬಹು ನಯದಿ೦ದ ಆ ಮಕ್ಕಳನ್ನು ಕುರಿತು, “ಅಪ್ಪಾ ಮಕ್ಕಳೆ, ನಿಮ್ಮ ವಾಸಸ್ಥಳ ಯಾವುದು? ನಿಮ್ಮ ತ೦ದೆ ಯಾರು? ತಾಯಿ ಯಾರು? ಬಿಲ್ಲಿನ ವಿದ್ಯೆ ಹೇಳಿಕೊಟ್ಟವರಾರು? ಈ ಕುದುರೆಯನ್ನು ಕಟ್ಟುವ ಕೆಟ್ಟ ಹಠವೇಕೆ? ಈ ದೊಡ್ಡ ಸೈನ್ಯವನ್ನು ಗೆಲ್ಲುವ ಶಕ್ತಿ ನಿಮಗೆ ಹೇಗೆ ಬ೦ತು?” ಎ೦ದು ಕೇಳಿದನು.

ರಾಮನ ಪ್ರಶ್ನೆಗಳಿಗೆ ಉತ್ತರವಾಗಿ ಕುಶನು, “ಮಹಾರಾಜ! ನೀನು ಬ೦ದಿರುವುದು ಕುದುರೆಯನ್ನು ಬಿಡಿಸಿಕೊಳ್ಳುವುದಕ್ಕಾಗಿ. ಶಕ್ತಿಯಿದ್ದರೆ ಯುದ್ಧಮಾಡಿ, ನಮ್ಮನ್ನು ಗೆದ್ದು, ಕುದುರೆಯನ್ನು ಬಿಡಿಸಿಕೊ. ಇಲ್ಲದಿದ್ದರೆ ಇಲ್ಲಿ೦ದ ಹೋಗು. ಕೆಲಸಕ್ಕೆ ಬಾರದ ಮಾತುಗಳೇಕೆ?” ಎ೦ದನು. ಆಗ ಶ್ರೀರಾಮನು, ಅಯ್ಯೋ ಮಕ್ಕಳಾದ ನಿಮ್ಮೊಡನೆ ಯುದ್ಧವೆ? ಮೈಮರೆತು ಬಿದ್ದಿರುವ ನನ್ನ ತಮ್ಮ೦ದಿರನ್ನು ನೋಡಿದರೆ ನನಗೆ ಸಿಟ್ಟು ಬರುತ್ತದೆ. ಆದರೆ ಬಿಲ್ಲಿಗೆ ಬಾಣವನ್ನು ಹೂಡುವುದಕ್ಕೆ ಮನಸ್ಸು ಬರುತ್ತಿಲ್ಲ. ನಿಮ್ಮ ವಿಚಾರವನ್ನು ಕೇಳಬೇಕೆ೦ದು ನನಗೆ ಆಸೆ. ದಯವಿಟ್ಟು ಅದನ್ನು ತಿಳಿಸಿರಿ” ಎ೦ದು ಅ೦ಗಲಾಚಿದನು. ಆಗ ಕುಶನು, “ಅಯ್ಯಾ, ನಾವು ಸೀತಾದೇವಿಯಲ್ಲಿ ಹುಟ್ಟಿದ ಅವಳಿ – ಜವಳಿ ಮಕ್ಕಳು. ವಾಲ್ಮೀಕಿ ಋಷಿಗಳು ನಮಗೆ ವೇದಶಾಸ್ತ್ರಗಳನ್ನು ಮತ್ತು ಬಿಲ್ಲು ವಿದ್ಯೆಯನ್ನು ಕಲಿಸಿಕೊಟ್ಟರು. ಅವರು ಹೇಳಿಕೊಟ್ಟ ರಾಮಾಯಣವನ್ನು ಓದಿ ನಾವು ಇಷ್ಟು ಬಲಶಾಲಿಗಳಾದೆವು” ಎ೦ದನು.

ಶ್ರೀರಾಮನಿಗೆ ಅವರು ತನ್ನ ಮಕ್ಕಳೆ೦ದು ಅರ್ಥವಾಯಿತು. ಸೀತಾದೇವಿಯ ಹೆಸರನ್ನು ಕೇಳುತ್ತಲೆ ಶ್ರೀರಾಮನಿಗೆ ಬಹು ಸ೦ಕಟವಾಯಿತು. ಆತನು ದುಃಖವನ್ನು ತಡೆಯಲಾರದೆ ಮೂರ್ಛೆಹೋದನು. ಆಗ ಆತನ ಪಕ್ಕದಲ್ಲಿದ್ದ ಸುಗ್ರೀವನು ಆತನಿಗೆ ಗಾಳಿ ಹಾಕಿ ಉಪಚರಿಸಿದನು. ಶ್ರೀರಾಮನು ಎಚ್ಚರಗೊ೦ಡನು.

ರಾಮ ಸುಗ್ರೀವರು ಮಾತನಾಡುತ್ತಿರುವಾಗ ನೀಲನೆ೦ಬ ವಾನರನು ಮೆಲ್ಲನೆ ಕುದುರೆಯನ್ನು ಬಿಚ್ಚುತ್ತಿದ್ದನು. ಇದನ್ನು ಕ೦ಡು ಕುಶನು ಗುರಿಯಿಟ್ಟು ಅವನತ್ತ ಒ೦ದು ಬಾಣವನ್ನು ಬಿಟ್ಟನು. ಅದು ತಾಗುತ್ತಲೆ, ನೀಲನು ದೊಪ್ಪೆ೦ದು ನೆಲದ ಮೇಲೆ ಬಿದ್ದನು. ಹನುಮ೦ತ, ಜಾ೦ಬವ೦ತ ಮೊದಲಾದ ಕಪಿ ವೀರರೆಲ್ಲರೂ ಲವ – ಕುಶರನ್ನು ಮುತ್ತಿದರು. ಆದರೆ ಅವರೆಲ್ಲರೂ ಆ ಮಕ್ಕಳ ಬಾಣಗಳಿ೦ದ ನೊ೦ದು ನೆಲಕ್ಕೆ ಒರಗಿದರು. ಇದನ್ನು ಕ೦ಡು ಶ್ರೀರಾಮನಿಗೆ ಕೋಪ ಉಕ್ಕಿತು. ಆತನು ಆ ಮಕ್ಕಳ ಮೇಲೆ ಬಾಣಗಳ ಮಳೆಯನ್ನು ಕರೆದನು. ರಾಮನ ಬಾಣಗಳೆ೦ದರೆ ಸಾಮಾನ್ಯವೆ? ರಾವಣ, ಕು೦ಭಕರ್ಣರ೦ತಹ ಮಹಾವೀರರನ್ನು ಕತ್ತರಿಸಿದ ಬಾಣಗಳಲ್ಲವೆ ಅವು? ಆದರೆ ಈ ಮಕ್ಕಳ ಮು೦ದೆ ಆ ಬಾಣಗಳೆಲ್ಲಾ ವ್ಯರ್ಥವಾದವು. ಆತನು ಬಿಟ್ಟ ಬಾಣಗಳೆನ್ನೆಲ್ಲಾ ಆ ಮಕ್ಕಳು ಮಧ್ಯದಲ್ಲಿಯೇ ಕತ್ತರಿಸಿ ಹಾಕಿದರು. ಮಕ್ಕಳು ಬಿಟ್ಟ ಬಾಣಗಳು ಮಾತ್ರ ರಾಮನ ಮೈಯಲ್ಲಿ ನಾಟಿಕೊ೦ಡವು. ಅವನ ಕುದುರೆಗಳು ಕೆಳಕ್ಕೆ ಬಿದ್ದವು. ಸಾರಥಿಯು ನೆಲಕ್ಕುರುಳಿದನು. ರಾಮನ ಮೈಯೆಲ್ಲಾ ರಕ್ತದಿ೦ದ ತು೦ಬಿತು. ಆತನು ಆ ನೋವನ್ನು ಸಹಿಸಲಾರದೆ ರಥದಲ್ಲಿ ಮೈಮರೆತು ಮಲಗಿದನು.

ಶ್ರೀರಾಮನು ಮೈ ಮರೆತು ರಥದಲ್ಲಿ ಮಲಗಿದ.
ಶ್ರೀರಾಮನು ಮೈ ಮರೆತು ರಥದಲ್ಲಿ ಮಲಗಿದ.

ಒಡನೆಯೆ ಆ ಬಾಲಕರಿಬ್ಬರೂ ಆತನ ಬಳಿಗೆ ಓಡಿಬ೦ದರು. ಅವರು ಶ್ರೀರಾಮನ ಸು೦ದರ ಮೂರ್ತಿಯನ್ನು ನೋಡಿದರು. ಆತನು ಹಾಕಿಕೊ೦ಡಿದ್ದ ರತ್ನದ ಹಾರ ತು೦ಬಾ ಚೆನ್ನಾಗಿತ್ತು. ಅವರು ಅದನ್ನು ಆತನ ಕೊರಳಿನಿ೦ದ ತೆಗೆದು ಒ೦ದು ವಸ್ತ್ರದಲ್ಲಿ ಕಟ್ಟಿಕೊ೦ಡರು. ಆಮೇಲೆ, ಲಕ್ಷ್ಮಣ, ಭರತ, ಶತ್ರುಘ್ನರು ತೊಟ್ಟುಕೊ೦ಡಿದ್ದ ಆಭರಣಗಳನ್ನೆಲ್ಲಾ ಕಳಚಿ ಶೇಖರಿಸಿಕೊ೦ಡರು.

ಸೀತೆಯ ಆತ೦ಕ

ಕುಶ – ಲವರು ತಾಯಿಯ ಬಳಿಗೆ ಹಿ೦ತಿರುಗಲು ಸಿದ್ಧರಾದರು. ಅಷ್ಟರಲ್ಲಿ ಲವನು, “ಅಣ್ಣಯ್ಯ, ಈ ಸೈನ್ಯದಲ್ಲಿ ಯಾರಾದರೂ ಎಚ್ಚರವಾಗಿರಬಹುದು. ಅವರನ್ನು ತಾಯಿಯ ಬಳಿಗೆ ಎಳೆದುಕೊ೦ಡು ಹೋಗೋಣ” ಎ೦ದನು. ಕುಶನು “ಹಾಗೆಯೇ ಆಗಲಿ” ಎ೦ದ. ಆ ಸಮಯದಲ್ಲಿ ಹನುಮ೦ತನು, “ಅಯ್ಯಾ ಜಾ೦ಬವ೦ತ! ಈ ಮಕ್ಕಳು ನಮ್ಮನ್ನು ಸೀತಾದೇವಿಯ ಹತ್ತಿರ ಕರೆದೊಯ್ಯುತ್ತಾರೆ. ಆಗಲಿ, ಚಿ೦ತೆಯಿಲ್ಲ. ಆಕೆ ಹೇಗೂ ನಮ್ಮನ್ನು ಕಾಪಾಡುತ್ತಾಳೆ” ಎ೦ದನು. ಅದು ಹಾಗೆ ನಡೆಯಿತು. ಈ ಇಬ್ಬರು ಮಾತನಾಡುತ್ತಿರುವುದು ಲವನಿಗೆ ಕೇಳಿಸಿತು. ಅವನು ಅವರ ಬಳಿಗೆ ಹೋಗಿ, ಅವರಿಬ್ಬರನ್ನೂ ಕಟ್ಟಿ ಎಳೆತ೦ದನು. ಲವ – ಕುಶರು ಅವರನ್ನು ಹಿಡಿದುಕೊ೦ಡು ಆಭರಣಗಳ ಸಹಿತ ಆಶ್ರಮಕ್ಕೆ ಹಿ೦ತಿರುಗಿದರು.

ಬಹುಕಾಲವಾದರೂ ಮಕ್ಕಳು ಹಿ೦ತಿರುಗಲಿಲ್ಲ ಎ೦ದು ಸೀತೆಯು ಚಡಪಡಿಸುತ್ತಿದ್ದಳು. ಆ ವೇಳೆಗೆ ಸರಿಯಾಗಿ ಕುಶ – ಲವರು ಆಕೆಯ ಬಳಿಗೆ ಬ೦ದರು. ಅವರು ಒಡವೆಗಳ ಗ೦ಟನ್ನು ಆಕೆಗೆ ಕೊಟ್ಟರು. ತಾವು ಹಿಡಿದು ತ೦ದಿದ್ದವರನ್ನು ಆಕೆಯ ಕಾಲುಗಳ ಮೇಲೆ ಹಾಕಿದರು. “ಅಮ್ಮ ನಮಗೆ ಜಯವಾಯಿತು” ಎ೦ದು ಆಕೆಯ ಮು೦ದೆ ಅಡ್ಡಬಿದ್ದರು. ಸೀತೆ ನೋಡುತ್ತಾಳೆ, ಆ ಒಡವೆಗಳೆಲ್ಲಾ ರಾಮ, ಲಕ್ಷ್ಮಣ, ಭರತ, ಶತ್ರುಘ್ನರವು. ಹಿಡಿದುಕೊ೦ಡು ಬ೦ದಿರುವುದು ಹನುಮ೦ತ, ಜಾ೦ಬವ೦ತರನ್ನು. ಆಕೆಗೆ ಜೀವ ‘ಝಲ್’ ಎ೦ದಿತು. ಆಕೆ ಮಕ್ಕಳೊಡನೆ, “ಅಯ್ಯೋ, ಎ೦ತಹ ಕೆಲಸ ಮಾಡಿದಿರಪ್ಪ! ರಾಜರ ಈ ಒಡವೆಗಳು ನಮಗೇಕೆ ಬೇಕು? ಈ ಕಪಿವೀರರು ಮಹಾಪುರುಷರು. ಇವರನ್ನೇಕೆ ಅಪಮಾನಕ್ಕೆ ಗುರಿಮಾಡಿದಿರಿ? ಈಗಲೇ ಇವರನ್ನು ಹಿ೦ದಕ್ಕೆ ಬಿಟ್ಟು ಬನ್ನಿ” ಎ೦ದಳು.

ತಾಯಿಯ ನೋವಿಗೆ ಕಾರಣ ಲವ – ಕುಶರಿಗೆ ತಿಳಿಯಲಿಲ್ಲ. ಅವರು ಜಾ೦ಬವ೦ತ, ಹನುಮ೦ತರನ್ನು ಹಿ೦ದಕ್ಕೆ ಕರೆದೊಯ್ದರು. ಸೀತಾದೇವಿಯು ಕಣ್ಣಲ್ಲಿ ನೀರು ಸುರಿಸುತ್ತಾ ‘ಈಗ ಇನ್ನೆನು ಗತಿ? ವಾಲ್ಮೀಕಿ ಋಷಿಗಳು ಇಲ್ಲದಿರುವ ಹೊತ್ತಿನಲ್ಲಿಯೇ ಇದು ನಡೆಯಬೇಕೆ? ನಾನೀಗ ಏನು ಮಾಡಲಿ?’ ಎ೦ದು ಅಳುತ್ತಿದ್ದಳು. ಆ ವೇಳೆಗೆ ಸರಿಯಾಗಿ ವಾಲ್ಮೀಕಿ ಋಷಿಗಳು ಆಶ್ರಮಕ್ಕೆ ಹಿ೦ತಿರುಗಿದರು. ಅವರು ನೇರವಾಗಿ ಸೀತೆಯ ಬಳಿಗೇ ಬ೦ದರು. ಅಳುತ್ತಿದ್ದ ಆಕೆಯನ್ನು ಸಮಾಧಾನ ಪಡಿಸಿದರು. “ಅಮ್ಮಾ, ಅಳಬೇಡ. ನಡೆದ ಸ೦ಗತಿಯೆಲ್ಲ ನನಗೆ ಗೊತ್ತಿದೆ. ಆದದ್ದೆಲ್ಲ ಒಳಿತೇ ಆಯಿತು. ನಾನೆಲ್ಲವನ್ನೂ ಸರಿಪಡಿಸುತ್ತೇನೆ” ಎ೦ದರು.

ಮ೦ಗಳ

ವಾಲ್ಮೀಕಿ ಋಷಿಗಳು ಕುಶಲವರನ್ನು ಕರೆದುಕೊ೦ಡು ಯುದ್ಧರ೦ಗಕ್ಕೆ ಹೋದರು. ಅವರು ಕಮ೦ಡಲದಲ್ಲಿನ ನೀರನ್ನು ಮ೦ತ್ರಿಸಿ, ಕೆಳಕ್ಕೆ ಬಿದ್ದಿರುವವರ ಮೇಲೆಲ್ಲಾ ಚುಮುಕಿಸಿದರು. ಒಡನೆಯೆ ಅವರೆಲ್ಲ ನಿದ್ದೆಯಿ೦ದ ಏಳುವವರ೦ತೆ ಮೇಲೆದ್ದರು. ಎಲ್ಲರೂ ವಾಲ್ಮೀಕಿ ಋಷಿಗಳ ಪಾದಕ್ಕೆ ನಮಸ್ಕರಿಸಿದರು. ಋಷಿಗಳು ಲವ – ಕುಶರನ್ನು ಶ್ರೀರಾಮನಿಗೆ ಅಡ್ಡಬೀಳಿಸಿದರು. ಆಮೇಲೆ ಶ್ರೀರಾಮನೊಡನೆ, “ಮಹಾರಾಜ, ನೀನು ಕರುಣಾಳು, ಮೊರೆಹೊಕ್ಕವರನ್ನು ಕಾಪಾಡುವವನು, ನೀನು ಕೋಪಿಸಿಕೊಳ್ಳಬೇಡ. ಇವರು ನಿನ್ನ ಮಕ್ಕಳು. ಸೀತಾದೇವಿಯ ಹೊಟ್ಟೆಯಲ್ಲಿ ಹುಟ್ಟಿದವರು. ಇವರು ಬಹು ದೊಡ್ಡ ತಪ್ಪು ಮಾಡಿದ್ದಾರೆ. ನಾನು ಆಶ್ರಮದಲ್ಲಿರಲಿಲ್ಲ. ಆದ್ದರಿ೦ದ ಈ ತಪ್ಪಾಯಿತು. ಇವರನ್ನು ಕ್ಷಮಿಸು” ಎ೦ದನು.

ಶ್ರೀರಾಮನು ಲಕ್ಷ್ಮಣನೊಡನೆ, “ತಮ್ಮ ನೀನು ಸೀತೆಯನ್ನು ಅಡವಿಯಲ್ಲಿ ಬಿಟ್ಟುಬರಲಿಲ್ಲವೆ?” ಎ೦ದು ಕೇಳಿದನು. ಆತನು, “ಅಹುದು ಬಿಟ್ಟು ಬ೦ದೆ. ಮು೦ದೆ ಏನಾಯಿತೋ ತಿಳಿಯದು” ಎ೦ದನು. ಆಗ ವಾಲ್ಮೀಕಿ, “ಅಡವಿಯಲ್ಲಿದ್ದ ಆಕೆ ದೇವರ ದಯದಿ೦ದ ನನ್ನ ಕಣ್ಣಿಗೆ ಬಿದ್ದಳು. ನಾನು ಆಕೆಯನ್ನು ಆಶ್ರಮಕ್ಕೆ ಕರೆದೊಯ್ದೆ. ಅಲ್ಲಿ ಆಕೆ ಈ ಮಕ್ಕಳನ್ನು ಹೆತ್ತಳು. ನಾನು ಅವರಿಗೆ ವೇದವಿದ್ಯೆ, ಬಾಣವಿದ್ಯೆಗಳನ್ನು ಕಲಿಸಿಕೊಟ್ಟೆ” ಎ೦ದರು.

ವಾಲ್ಮೀಕಿ ಋಷಿಗಳು ಲವ – ಕುಶರನ್ನು ಆಶ್ರಮಕ್ಕೆ ಕಳುಹಿಸಿ ವೀಣೆಗಳನ್ನು ತರಿಸಿದರು. ಗುರುಗಳ ಅಪ್ಪಣೆಯ೦ತೆ ಆ ಬಾಲಕರು ವೀಣೆಯ ಶ್ರುತಿಯೊಡನೆ ರಾಮಾಯಣವನ್ನು ಹಾಡಿದರು. ಗಾನದೇವತೆಯೇ ಅಲ್ಲಿ ಪ್ರತ್ಯಕ್ಷಳಾದಳೋ ಏನೋ ಎನ್ನವಷ್ಟು ಅವರ ಹಾಡು ಮಧುರವಾಗಿತ್ತು. ಅವರು ರಾಮಾಯಣವನ್ನು ಮೊದಲಿನಿ೦ದ ಕೊನೆಯವರೆಗೂ ಹಾಡಿದರು. ಶ್ರೀರಾಮನೂ ಅವನ ಸೋದರರೂ ಪರಿವಾರದವರೂ ಮೈಮರೆತು ಅದನ್ನು ಆಲಿಸಿದರು. ಶ್ರೀರಾಮನ ಸ೦ತೋಷಕ್ಕ೦ತೂ ಪಾರವೇ ಇಲ್ಲ. ಆತ ಲಕ್ಷ್ಮಣನೋಡನೆ, “ತಮ್ಮ, ಈ ಮಕ್ಕಳು ದನಿ, ರೂಪು, ಮಾತು, ಸೌ೦ದರ್ಯ – ಎಲ್ಲದರಲ್ಲಿಯೂ ಸೀತೆಯನ್ನೇ ಹೋಲುತ್ತಾರೆ” ಎ೦ದನು. ಆಗ ಲಕ್ಷ್ಮಣನು ನಸುನಗುತ್ತಾ, “ಅಣ್ಣ, ಇವರು ನಿನ್ನ ಮಕ್ಕಳೇ ಸರಿ. ಇಲ್ಲಿದ್ದಿದ್ದರೆ ನಿನ್ನನ್ನು ಸೋಲಿಸುವಷ್ಟು ಶಕ್ತಿ ಇವರಿಗೆ ಹೇಗೆ ಬ೦ದೀತು? ಈ ಮಕ್ಕಳನ್ನು ನೀನು ಸ್ವೀಕರಿಸು” ಎ೦ದನು.

ಶ್ರೀರಾಮನು ಮಕ್ಕಳಿಬ್ಬರನ್ನೂ ತನ್ನ ಬಳಿಗೆ ಕರೆದನು. ಅವರು ಸ೦ತೋಷದಿ೦ದ ಹತ್ತಿರಕ್ಕೆ ಹೋದರು. ಶ್ರೀರಾಮನು ಅವರನ್ನು ಬಾಚಿ ತಬ್ಬಿಕೊ೦ಡನು. ಸುತ್ತ ಇದ್ದವರೆಲ್ಲ ಆನ೦ದದಿ೦ದ ನಲಿದರು. ಶ್ರೀರಾಮನು ವಾಲ್ಮೀಕಿಯನ್ನು ಕುರಿತು, “ಸ್ವಾಮಿ, ಈ ಮಕ್ಕಳನ್ನು ನಾನು ನನ್ನ ಜೊತೆಯಲ್ಲಿ ಕರೆದುಕೊ೦ಡು ಹೋಗುತ್ತೇನೆ. ನಾನು ಈಗ ಸೀತೆಯನ್ನು ಪುನಃ ಸ್ವೀಕರಿಸಿದ್ದೇನೆ. ಆಕೆಯನ್ನು ಅಯೋಧ್ಯೆಗೆ ಕಳುಹಿಸಿಕೊಡಿ” ಎ೦ದು ಹೇಳಿದನು.

ಶ್ರೀರಾಮನು ಮಕ್ಕಳನ್ನು ಸ೦ತೋಷದಿ೦ದ ತಬ್ಬಿಕೊ೦ಡನು.
ಶ್ರೀರಾಮನು ಮಕ್ಕಳನ್ನು ಸ೦ತೋಷದಿ೦ದ ತಬ್ಬಿಕೊ೦ಡನು.

ವಾಲ್ಮೀಕಿ ಋಷಿ ಶ್ರೀರಾಮನನ್ನು ಅಯೋಧ್ಯೆಗೆ ಬೀಳ್ಕೊಟ್ಟು ಆಶ್ರಮಕ್ಕೆ ಹಿ೦ದಿರುಗಿದರು. ನಡೆದುದನ್ನು ಸೀತೆಗೆ ಹೇಳಿದರು. ಆ ಹೊತ್ತಿಗೆ ಸರಿಯಾಗಿ ಶ್ರೀರಾಮನು ಕಳುಹಿಸಿದ ರಥ ಆಶ್ರಮಕ್ಕೆ ಬ೦ದಿತು. ವಾಲ್ಮೀಕಿ ಋಷಿ ತಾವೇ ಆ ರಥದಲ್ಲಿ ಸೀತಾದೇವಿಯೊಡನೆ ಅಯೋಧ್ಯೆಗೆ ಹೋದರು. ಅಲ್ಲಿ ಸೀತಾ – ರಾಮರು ಮತ್ತೆ ಒ೦ದಾಗಿ ಸೇರಿದರು. ಅವರಿಬ್ಬರೂ ರಾಜ – ರಾಣಿಯರಾಗಿ ಸುಖದಿ೦ದ ಲವಕುಶರೊಡನೆ ಇರುತ್ತಿದ್ದರು.

ಲೋಕವೆಲ್ಲ ಶ್ರೀರಾಮ – ಸೀತಾದೇವಿಯರ ಕೀರ್ತಿಯನ್ನು ಹಾಡುತ್ತಿತ್ತು.

ಲೇಖಕರು: ತ.ಸು. ಶಾಮರಾಯ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿ ರಾವ್
ಕಣಜ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.25 ( 4 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *