Lalitha Sreenivaasan

ಲಲಿತಾ ಶ್ರೀನಿವಾಸನ್

ಲಲಿತಾ ಶ್ರೀನಿವಾಸನ್ (೨೪.೦೩.೧೯೪೩): ಸುಳಾದಿ ನೃತ್ಯ ಪ್ರಕಾರದಲ್ಲಿ ಪರಿಣತಿ ಪಡೆದಿರುವ ಲಲಿತಾ ಶ್ರೀನಿವಾಸನ್ ರವರು ಹುಟ್ಟಿದ್ದು ಶಿವಸಮುದ್ರ.

ಓದಿದ್ದು ಬೆಂಗಳೂರು. ಎಂ.ಎ. (ಚರಿತ್ರೆ) ಪದವಿ. ಸಂಸ್ಕೃತ ಕೋವಿದ ಪರೀಕ್ಷೆಯಲ್ಲಿ ವಿದ್ವತ್ ಹಾಗೂ ಭರತನಾಟ್ಯದಲ್ಲಿ ಪಡೆದ ಪ್ರಥಮ ರ್ಯಾಂಕ್.

ನೃತ್ಯಾಭ್ಯಾಸ ಮಾಡಿದ್ದು ಎಚ್.ಆರ್. ಕೇಶವಮೂರ್ತಿ ಮತ್ತು ಆಸ್ಥಾನ ನೃತ್ಯಗಾರ್ತಿಯಾಗಿದ್ದ ಮೈಸೂರಿನ ಕೆ. ವೆಂಕಟಲಕ್ಷ್ಮಮ್ಮ ಮತ್ತು ಜೇಜಮ್ಮನವರಿಂದ. ನೃತ್ಯಾಭಿನಯದಲ್ಲಿ ಪಡೆದ ವಿಶೇಷ ಪರಿಣತಿ. ಶ್ರೀಮತಿ ನರ್ಮದಾ ರವರಿಂದ ದೊರೆತ ಮಾರ್ಗದರ್ಶನ.

ಸೃಜನಶೀಲ ನೃತ್ಯ ಸಂಯೋಜ ರೆನಿಸಿದ ಇವರ ನವ್ಯ ಪ್ರಯೋಗಗಳು ಅಂಗಭಾವ, ಕಾವ್ಯ ನೃತ್ಯ, ಸುಲಲಿತ ನೃತ್ಯಗಳು ಜನಮನ್ನಣೆಗಳಿಸಿದ ಪ್ರಕಾರಗಳಾಗಿವೆ. ಸುಲಲಿತ ನೃತ್ಯ ಸಂಶೋಧನೆಗಾಗಿ ಕೇಂದ್ರ ಸಂಸ್ಕೃತಿ ಇಲಾಖೆಯಿಂದ ದೊರೆತ ಸಂಶೋಧನಾ ನೆರವು. ಅನೇಕ ಪ್ರಾತ್ಯಕ್ಷಿಕೆ ಮತ್ತು ನೃತ್ಯ ಕಾರ್ಯಾಗಾರಗಳ ನಿರ್ವಹಣೆ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವ, ಸಾಂಸ್ಕೃತಿಕ ಉತ್ಸವಗಳಲ್ಲಿ ನೀಡಿದ ನೃತ್ಯ ಕಾರ್ಯಕ್ರಮ. ವಿಶೇಷ ಆಹ್ವಾನದ ಮೇರೆಗೆ ದಿಲ್ಲಿ, ಮದರಾಸ್, ಪುಣೆ, ಸಿಮ್ಲಾ, ಲಕ್ನೋ, ಜಯಪುರ್, ಕೊಚ್ಚಿನ್ ಮುಂತಾದ ನಗರಗಳಲ್ಲಿ ನಡೆಸಿಕೊಟ್ಟ ಪ್ರಾತ್ಯಕ್ಷಿಕೆ, ನೃತ್ಯ ಪ್ರದರ್ಶನಗಳು. ಶೃಂಗಾರ ಗಾಯಿಕಾ, ಶ್ರೀಕೃಷ್ಣ ಪಾರಿಜಾತ, ಬೀಬಿ ನಾಚ್ಚಿಯಾರ್, ಚಿತ್ರಾಂಗದಾ, ಪ್ರೇಮ-ಭಕ್ತಿ-ಮುಕ್ತಿ, ಲಾಸ್ಯೋತ್ಸವ, ಗೌಡರಮಲ್ಲಿ, ದೇವಕನ್ನಿಕಾ ಮುಂತಾದ ಪ್ರಮುಖ ನೃತ್ಯ ರೂಪಕಗಳು.

ವಿಶ್ವ ಕನ್ನಡ ಸಮ್ಮೇಳನ-ಲಂಡನ್, ಅಮೆರಿಕದ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ವಿಶೇಷ ಅಧ್ಯಯನ ಮತ್ತು ‘ನಿತ್ಯ ನೃತ್ಯ’ ನೃತ್ಯೋತ್ಸವ ಕಾರ್ಯಕ್ರಮಗಳು. ಹಂಪೆ ನೃತ್ಯೋತ್ಸವ, ನೃತ್ಯ ಕಲಾಪರಿಷತ್‌ನ ಸಮ್ಮೇಳನ, ಇಂಟರ್ ನ್ಯಾಷನಲ್ ಡಾನ್ಸ್-ಅಲಿಯನ್ಸ್ ದಿನಾಚರಣೆ, ಭಾರತೀಯ ವಿದ್ಯಾಭವನ, ಕೂರ್ಗ್ ಫೌಂಡೇಶನ್ ಮುಂತಾದೆಡೆ ನೀಡಿದ ನೃತ್ಯ ಕಾರ್ಯಕ್ರಮಗಳು.

ಸಂದ ಪ್ರಶಸ್ತಿ ಗೌರವಗಳು. ಸಿಖ್ ಸಂಸ್ಥೆಯಿಂದ ಶಿರೋಮಣಿ, ಭಾರತೀಯ ನೃತ್ಯ ಪ್ರಚಾರಕ್ಕಾಗಿ ಲಯನ್ಸ್ ಕ್ಲಬ್‌ನಿಂದ, ಭಾರತೀಯ ಸಂಪನ್ಮೂಲ. ಇಲಾಖೆಯಿಂದ ಪ್ರಿಯದರ್ಶಿನಿ, ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಝೇಂಕಾರ್ ಸಂಸ್ಥೆಯಿಂದ ಕರ್ನಾಟಕ ರತ್ನ, ಆರ್ಯಭಟ ಸಂಸ್ಥೆಯಿಂದ ನಾಟ್ಯ ಶಾಂತಲಾ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *