ಲಕ್ಷ್ಮೀ ಎನ್.ಮೂರ್ತಿ (೦೯.೦೪.೧೯೫೯): ಭರತನಾಟ್ಯ, ಸಂಗೀತ, ಯೋಗ, ಕ್ರೀಡೆ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಕಲೆಗಳ ಜೊತೆಗೆ ಅಬಲೆಯರ ಸ್ವಾವಲಂಬನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಡಿಯುತ್ತಿರುವ ಲಕ್ಷ್ಮಿಯರು ಹುಟ್ಟಿದ್ದು ಬೆಂಗಳೂರು. ತಂದೆ ಶ್ರೀಕಂಠಯ್ಯ, ತಾಯಿ ಗೌರಮ್ಮ, ಬಿ.ಎಂ.ಶ್ರೀಯವರ ಮೊಮ್ಮಗಳು. ಸಾಹಿತ್ಯ, ಕಲೆಗಳ ಬೀಡಾದ ಮನೆತನ.
ಓದಿದ್ದು ಎಂ.ಎ. ಬಾಲ್ಯದಿಂದಲೂ ನೃತ್ಯದ ಬಗ್ಗೆ ಬೆಳೆದ ವಿಶೇಷ ಒಲವು. ಕಲಿತದ್ದು ಭರನತಾಟ್ಯ. ಬಿ.ಆರ್. ಅಲಮೇಲು ರವರಲ್ಲಿ ನೃತ್ಯಕಲಿಕೆ. ಯು.ಎಸ್.ಕೃಷ್ಣರಾವ್ ದಂಪತಿಗಳ ಶಿಷ್ಯೆಯಾಗಿ ಗುರುಕುಲ ಪದ್ಧತಿಯಲ್ಲಿ ಪಡೆದ ನೃತ್ಯಶಿಕ್ಷಣ. ಭರತನಾಟ್ಯದಲ್ಲಿ ವಿದ್ವತ್, ಸುಗಮಸಂಗೀತ, ಕೂಚುಪುಡಿ, ಯೋಗ, ನಟನೆ, ಚಿತ್ರಕಲೆ ಮುಂತಾದವುಗಳಲ್ಲಿ ಪಡೆದ ಪರಿಣತಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಖ್ಯಾತಿ. ಬೆಂಗಳೂರು, ದಸರಾ ಉತ್ಸವ, ದೆಹಲಿ, ಮುಂಬಯಿ, ಚೆನ್ನೈ, ದುಬಾಯ್, ಅಬುದಾಬಿ, ಯು.ಎ.ಇ. ಮುಂತಾದಡೆಗಳಲ್ಲಿ ನೃತ್ಯಪ್ರದರ್ಶನ. ಪತಿ, ಪ್ರಖ್ಯಾತ ಯೋಗಪಟು ನಾಗೇಶ್‌ಮೂರ್ತಿಯೊಡನೆ ಯೋಗ, ನೃತ್ಯ ಮುದ್ರೆಗಳಿಗೆ ಕೊಟ್ಟ ಅರ್ಥರೂಪ.
ನೃತ್ಯಶಿಕ್ಷಣಕ್ಕಾಗಿ ಪ್ರಾರಂಸಿದ್ದು ಅಜಂತಾ ಕಲಾಕೇಂದ್ರ. ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಭರತನಾಟ್ಯ, ಕೂಚುಪುಡಿ, ಸಂಗೀತ, ಯೋಗ, ನಾಟಕದ ಬಗ್ಗೆ ನೀಡಿದ ತರಬೇತಿ. ಯೋಗ ಶಿಕ್ಷಣದ ಬಗ್ಗೆ, ಮಕ್ಕಳ ಮನೋ ವಿಜ್ಞಾನದ ಬಗ್ಗೆ ಬರೆದ ಲೇಖನ ಮಾಲೆ. ಭರತನಾಟ್ಯ, ಕೂಚುಪುಡಿ, ನೃತ್ಯವಿಷಯಗಳ ಮೇಲೆ ಜ್ಯೂನಿಯರ್, ಸೀನಿಯರ್, ವಿದ್ವತ್ ಹಂತದವರೆಗೆ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಣೆ. ಅಜಂತಾ ಕಲಾಕೇಂದ್ರದ ಮೂಲಕ ನಡೆಸುತ್ತಿರುವ ಬೇಸಿಗೆ ಶಿಬಿರದಲ್ಲಿ ನೃತ್ಯ, ಚಿತ್ರಕಲೆ, ಸಂಗೀತ ಮುಂತಾದ ಸಾಂಸ್ಕೃತಿಕ ಕಲೆಗಳ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಯೋಗ, ಕರಾಟೆ, ಉತ್ತಮ ಆಹಾರಾಭ್ಯಾಸ, ಸುಂದರ ವ್ಯಕ್ತಿತ್ವ ನಿರ್ವಹಣೆಗೆ ಸೌಂದರ್ಯ ಸ್ಪರ್ಧೆ, ಸೌಂದರ್ಯಕಾರಿಣಿ ತರಬೇತಿ. ಮಕ್ಕಳ ಮಿಂಚಿನ ಬುದ್ಧಿಶಕ್ತಿಗಾಗಿ ಅಬಕಸ್, ಕ್ರೀಡಾತರಬೇತಿ, ಅಬಲೆಯರ ಜೀವನ ನಿರ್ವಹಣೆಗಾಗಿ ವೃತ್ತಿಪರ ತರಬೇತಿಗಳಿಂದ ನೊಂದ ಮಹಿಳೆಯರಿಗೆ ಮಾರ್ಗದರ್ಶನ.
ಪ್ರಶಸ್ತಿ ಗೌರವಗಳು ಹಲವಾರು. ಚಾರುಕೀರ್ತಿ ಭಟ್ಟರಕ ಸ್ವಾಮೀಜಿಯವರಿಂದ ಉತ್ತಮ ಸಾಂಸ್ಕೃತಿಕ ನಿರ್ದೇಶಕಿ, ಡಾ.ರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ನಾಟ್ಯರತ್ನ ಪ್ರಶಸ್ತಿ, ಹಾಸನದ ಕಲಾಮೇಳದಿಂದ ನಾಟ್ಯಮಯೂರಿ, ಜ್ಞಾನಮಂದಾರ ಶಿಕ್ಷಣ ಸಂಸ್ಥೆಯಿಂದ ಸಮಾಜರತ್ನ, ದುಬಾಯ್, ಅಬುದಾಬಿ, ಯು.ಎ.ಇಯಿಂದ ’ವಿಶ್ವಯಮಾನ್ಯರು’ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಜ್ಞಾನಸರಸ್ವತಿ, ವಿಕಾಸರತ್ನ ಪ್ರಶಸ್ತಿ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.