ರಾಘವೇಂದ್ರ ಗುರೂಜಿ (೧೮.೦೩.೧೮೯೧ – ೦೪.೦೮.೧೯೯೬): ಮಠದ ಪೀಠಾಧಿಪತಿಗಳಾಗಿ, ಆತ್ಮ ಸಂಯಮಿಗಳಾಗಿ ಸಮಾಜ ಸೇವೆಯಂತೆ ಸಾಹಿತ್ಯ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವವರು ವಿರಳವೆ. ಕೇರಳದಲ್ಲಿ ಹುಟ್ಟಿದರೂ ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯನ್ನು ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತೀಯ ಸೌಹಾರ್ದಕ್ಕಾಗಿ ದುಡಿದ ರಾಘವೇಂದ್ರ ಗುರೂಜಿಯವರು ಹುಟ್ಟಿದ್ದು ಕೇರಳದಲ್ಲಿ. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಹುಟ್ಟಿದ ಮಗುವಿಗೆ ದೇಹ, ಮೆದುಳಿನ ಬೆಳವಣಿಗೆಯಲ್ಲಿ ಏರುಪೇರಾಗಿ ಸದಾಕಾಲ ಇಹದ ಪರಿವೆಯೇಯಿಲ್ಲದೆ ಮಲಗಿರುತ್ತಿದ್ದ ಮಗುವನ್ನೆತ್ತಿಕೊಂಡು ಒಮ್ಮೆ ಮೂಕಾಂಬಿಕ ದರ್ಶನ ಪಡೆಯಲು ಹೊರಟ ದಂಪತಿಗಳು ತಂಗಿದ್ದು ಬಾರಕೂರಿನಲ್ಲಿ.
ಅಚಾನಕವಾಗಿ ಅದೇ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳಿಂದ ಫಲಮಂತ್ರಾಕ್ಷತೆ, ಆಶೀರ‍್ವಚನ ಪಡೆದ ಪದ್ಮಾಂಬಗಳಿಗೆ ‘ಮಗು ಪ್ರವರ್ಧಮಾನಕ್ಕೆ ಬರುತ್ತಾನೆ, ಕೀರ್ತಿವಂತನಾಗುತ್ತಾನೆ’ ಎಂದು ಹರಸಿದ್ದು ಕೇಳಿ ಆನಂದ ಭರಿತರಾಗಿ ಪದೇ ಪದೇ ಒಂದು ವಾರ ಅದನ್ನೇ ಹೇಳುತ್ತಾ ಉಕ್ಕಿಬಂದ ಸಂತಸದಲ್ಲೇ ಸಾವನಪ್ಪುತ್ತಾರೆ. ತಂದೆ ನಂಬೂದರಿ ಮಗುವನ್ನು ಸಾಕಲಾಗದೆ ಆ ಮನೆಯ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿಯವರಿಗೇ ದತ್ತುಕೊಟ್ಟು ಉತ್ತರ ಭಾರತ ಯಾತ್ರೆ ಹೊರಡುತ್ತಾರೆ.
ರಾಘವೇಂದ್ರನೆಂದು ನಾಮಕರಣ ಮಾಡಿ ಸೇರಿಸಿದ್ದು ಬಾರಕೂರಿನ ಎಲಿಮೆಂಟರಿ ಶಾಲೆ. ಸ್ವಾಮಿಗಳ ಆಶೀರ್ವಾದದಿಂದ ಸಹಜ ಸ್ಥಿತಿಗೆ ಬಂದ ಹುಡುಗ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಹೈಸ್ಕೂಲಿಗೆ ಸೇರಿದ್ದು ಕುಂದಾಪುರದ ಶಾಲೆಗೆ. ಕನ್ನಡ ಸಂಸ್ಕೃತಗಳಲ್ಲಿ ಪಡೆದ ವಿಶೇಷ ಜ್ಞಾನ.
ಒಮ್ಮೆ ಬಾರಕೂರಿಗೆ ಬಂದಿದ್ದ ನಿತ್ಯಾನಂದ ಸ್ವಾಮಿಗಳಿಂದ ‘ಶಕ್ತಿಪಾತಯೋಗ’ದ ಅನುಗ್ರಹ. ಸಂಪೂರ್ಣ ಅಧ್ಯಾತ್ಮಿಕದ ಕಡೆ ಹೊರಳಿದ ಜೀವನ. ದೇವರನ್ನು ಕಾಣಬೇಕೆಂಬ ಹಂಬಲದಿಂದ ಸಿಕ್ಕಸಿಕ್ಕ ಬಾಬಾ, ಬೈರಾಗಿ, ಸಂನ್ಯಾಸಿ, ಮಠಾಧೀಶರಲ್ಲಿ ‘ದೇವರನ್ನು ತೋರಿಸಿ’ ಎಂಬ ಬೇಡಿಕೆ. ಹೀಗೆ ಸುತ್ತಿದ್ದು ಹಲವಾರು ಸ್ಥಳಗಳು.
ಹೊಟ್ಟೆ ಪಾಡಿಗಾಗಿ ಸೇರಿದ್ದು ತುಮಕೂರಿನಲ್ಲಿ ಮೊಕ್ಕಾಂ ಮಾಡಿದ್ದ ಮುಂಡಾಜೆ ರಂಗನಾಥ ಭಟ್ಟರ ‘ಅಂಬಾ ಪ್ರಸಾದಿತ ನಾಟಕ ಮಂಡಲಿ’. ಟಿಕೆಟ್ ಮಾರಾಟ, ಲೆಕ್ಕಪತ್ರ, ಸಂಬಳ ಬಟವಾಡೆ ಜವಾಬ್ದಾರಿಗಳ ಜೊತೆಗೆ ಚಿಕ್ಕಪುಟ್ಟ ಪಾತ್ರಗಳ ಅಭಿನಯ. ತುಮಕೂರಿನಲ್ಲಿದ್ದಾಗ ಪಳನೀ ಸ್ವಾಮಿಗಳ್ಳೊಬ್ಬರಿಂದ ಕಲಿತ ‘ಹಠಯೋಗ ಸಾಧನೆಯ ಶಿಕ್ಷಣ’ ದೇವರನ್ನು ಕಾಣಬೇಕೆಂಬ ಹಂಬಲದಿಂದ ಸುತ್ತಾಟ. ಒಂದೆಡೆ ನಿಲ್ಲದ ಜೀವ. ಪಂಡರಾಪುರದಲ್ಲಿ ‘ಸ್ವಾಮಿ ಶಿವಾನಂದರ ಪ್ರವಚನ’ ಎಂದು ಪತ್ರಿಕೆಯೊಂದರಲ್ಲಿ ಕಂಡದ್ದೇ ಪಂಡರಾಪುರದತ್ತ ಪ್ರಯಾಣ. ಸ್ವಾಮಿಗಳ ಭೇಟಿ. ಪಳನೀ ಸ್ವಾಮಿಗಳು ಯೋಗ ತಜ್ಞರಾಗಿದ್ದರೆ, ಸ್ವಾಮಿ ಶಿವಾನಂದರು ಸ್ವಾತಂತ್ರ್ಯ ಹೋರಾಟಗಾರರು, ಒಳ್ಳೆಯ ವಾಗ್ಮಿ. ಇವರ ಮುಂದೆ ಯೋಗ ವಿದ್ಯೆ ಪ್ರದರ್ಶನ ಮಾಡಿ ಪಡೆದ ಪ್ರಶಂಸೆ.
ಸ್ವಾಮಿ ಶಿವಾನಂದರು ಪ್ರವಚನ ಪ್ರಾರಂಭಿಸಿದರೆ ಶೋತೃಗಳು ಮಂತ್ರ ಮುಗ್ಧರಾಗುತ್ತಿದ್ದರು. “ಪೂಜ್ಯ ಭಾರತಾಂಬೆ, ವಿದೇಶಿಯರ ಬಂಧನಕ್ಕೊಳಗಾಗಿ ನಿಮ್ಮ ಕಡೆ ನೋಡುತ್ತಿದ್ದಾಳೆ. ನೀವಿಂದು ಜಾಗೃತರಾಗಬೇಕು, ಜಾತಿ – ಮತ – ಪಂಥ ತೊರೆದು ಐಕ್ಯತೆಯಿಂದ ರಾಷ್ಟ್ರಮಾತೆಯನ್ನು ಬಿಡುಗಡೆಗೊಳಿಸೋಣ” ಎಂದು ಹೇಳಿ – ನಮ್ಮ ವೀರಕಲಿಗಳಿಂದ ಶಕ್ತಿ ಪ್ರದರ್ಶನವೆಂದಾಗ ಇವರ ಗುಂಪಿನಿಂದ ಯೋಗ ಪ್ರದರ್ಶನ. ಇದನ್ನು ನೋಡಿದ ಜನ ಬೆಕ್ಕಸ ಬೆರಗಾಗುವರು.
ಹೀಗೊಮ್ಮೆ ಪ್ರವಚನದ ನಂತರ ರಾತ್ರಿ ಊಟ ಮಾಡದೆ ಮೂಲೆ ಹಿಡಿದು ಕುಳಿತ ರಾಘವೇಂದ್ರನನ್ನು ಸ್ವಾಮೀಜಿ ಏಕೆ ಊಟ ಮಾಡಿಲ್ಲವೆಂದರು. ಇವರ ಮನಸ್ಸು ತೊಳಲಾಟದಲ್ಲಿತ್ತು. ದೇವರನ್ನರಸುವ ಬಗೆ ತಿಳಿಯದೆ ಚಡಪಡಿಸುತ್ತಿದ್ದರು.
“ದೇವರಿಗಾಗಿ ಏಕೆ ಅಳುವೆ, ನಿನ್ನ ಸುತ್ತ ಕಷ್ಟದಲ್ಲಿರುವವರೇ ದೇವರ ಸ್ವರೂಪ, ಇವರ ದುಃಖ ದುಮ್ಮಾನಗಳನ್ನು ನಿನ್ನದಾಗಿಸಿಕೋ ಇವರ ಕಣ್ಣೀರು ಒರೆಸುವ ಕಾರ್ಯದಲ್ಲಿ ತತ್ಪರನಾಗು, ದೇವರನ್ನು ಕಾಣುವೆ” ಎಂದು ಉಪದೇಶಿಸಿದಾಗ ಮನಸ್ಸಿನಲ್ಲಾದ ಪರಿವರ್ತನೆ. ಸ್ವಾಮಿ ಶಿವಾನಂದರ ಆಣತಿಯಂತೆ ಬರೋಡಾದ ಜುಮ್ಮಾದಾದ ವ್ಯಾಯಾಮ ಶಾಲೆಯಲ್ಲಿ ಪ್ರೊ. ಮಾಣಿಕ್ಯರಾಯರ ನೇತೃತ್ವದಲ್ಲಿ ಕಲಿತ ವ್ಯಾಯಾಮ – ಲಾಠಿ, ಭರ್ಜಿ, ತಲವಾರ್, ಕುಸ್ತಿ, ಕುದುರೆ ಸವಾರಿ ಮುಂತಾದವುಗಳಲ್ಲಿ ಪಡೆದ ಪರಿಣತಿ.
ಲಾಹೋರಿಗೆ ತೆರಳಿ ಕೈವಲ್ಯಾಶ್ರಮದ ಬಾಬಾ ಲಕ್ಷ್ಮಣ ದಾಸರಲ್ಲಿ ಆಯುರ್ವೇದ ಶಿಕ್ಷಣ. ಆಯುರ್ವೇದ ಗ್ರಂಥ ಶಾಸ್ತ್ರಗಳ ಪರಿಚಯ. ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ನಿಘಂಟುಗಳ ಕಂಠಪಾಠ. ಆಶ್ರಮಕ್ಕೆ ಬರುವ ರೋಗಿಗಳ ಚಿಕಿತ್ಸೆ, ಔಷಧಿ ತಯಾರಿಕೆಯಲ್ಲಿಯೂ ಶಿಕ್ಷಣ.
ಹೀಗೆ ಶಿಕ್ಷಣ ಪಡೆದ ರಾಘವೇಂದ್ರರಾಯರು ಪುನಃ ಕರ್ನಾಟಕಕ್ಕೆ ಹಿಂದಿರುಗಿ, ಉಡುಪಿಯಲ್ಲಿ ಅಷ್ಟಮಠಾಧೀಶರ ಮುಂದೆ ಪ್ರದರ್ಶಿಸಿದ ಯೋಗ ವಿದ್ಯೆ, ಪಡೆದ ಎಲ್ಲರ ಮೆಚ್ಚುಗೆ. ಹೀಗೆ ಎಂಟು ವರ್ಷಗಳ ಕಾಲ ನೆಲೆನಿಲ್ಲದೆ ಕರ್ನಾಟಕ ದಾದ್ಯಂತ ಸುತ್ತುತ್ತಾ ನೀಡಿದ ಯೋಗ ಶಿಕ್ಷಣ, ಸೂರ್ಯ ನಮಸ್ಕಾರ, ಪ್ರಾಣಾಯಾಮ, ಧ್ಯಾನದ ಜೊತೆಗೆ ಕೆರೆ-ಬಾವಿ ಹೂಳೆತ್ತಿ, ರಸ್ತೆ ರಿಪೇರಿ ಮುಂತಾದ ರಚನಾತ್ಮಕ ಕಾರ್ಯಗಳಲ್ಲಿ ಭಾಗಿ.
೧೯೪೩ ರಲ್ಲಿ ಬಂದು ನೆಲೆನಿಂತದ್ದು ಮಲ್ಲಾಡಿ ಹಳ್ಳಿಯಲ್ಲಿ. ಶ್ರೀ ಪರಪ್ಪ ಸ್ವಾಮಿಗಳ ಮಠ ಕಟ್ಟಿ ಮಲ್ಲಾಡಿಹಳ್ಳಿಯನ್ನು ಭೂಪಟದಲ್ಲಿ ಗುರುತಿಸುವಂತೆ ಮಾಡಿದರು. ನರ್ಸರಿಯಿಂದ ಪದವಿ ಪೂರ್ವಕಾಲೇಜು, ಆಯುರ್ವೇದ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಭೋಜನ ಶಾಲೆ, ವೃದ್ಧಾಶ್ರಮ, ಯೋಗ ಕೇಂದ್ರ ಒಂದೇ… ಎರಡೇ… ಇಷ್ಟೆಲ್ಲ ಕಟ್ಟಿದ್ದು ತಿರುಕನಾಗಿ ಜೋಳಿಗೆ ಹಿಡಿದು… ‘ತಿರುಕ’ನೆಂದೇ ಕರೆದುಕೊಂಡರು.
ಶಿಕ್ಷಣಕ್ಕಾಗಿ, ಸಮಾಜದ ಸ್ವಾಸ್ಥ್ಯಕ್ಕಾಗಿ, ಮತೀಯ ಸಾಮರಸ್ಯಕ್ಕಾಗಿ ಜೀವನಪೂರ್ತಿ ದುಡಿದರು.
ಇಂದಿನ ಯುವಕರ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಪುಸ್ತಕಗಳನ್ನು ರಚಿಸಿದ್ದೇ ಹೆಚ್ಚು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ಅಂಗ ಮರ್ಧನ, ಯೋಗಾಸನ ಮುಂತಾದ ಕನ್ನಡ ಇಂಗ್ಲಿಷ್‌ಯೋಗ ಶಿಕ್ಷಣ ಕೃತಿಗಳು; ಕೊನೆಯ ಗುಟುಕು, ಮೂಳೆಯ ಹಂದರ, ಚಿತೆಯೋ ಸಮಾಧಿಯೋ ಮುಂತಾದ ೯ ಕಾದಂಬರಿಗಳು; ರಣಚಂಡಿ, ಮಹಾಕವಿ ಭಾರವಿ, ಉಷಾ ಸ್ವಯಂವರ ಮೊದಲಾದ ೧೨ ಸಾಮಾಜಿಕ ನಾಟಕಗಳು; ಧ್ಯಾನಭಾರತಿ, ಜ್ವಾಲಾಮುಖಿ ಮುಂತಾದ ಆರು ಏಕಪಾತ್ರಾಭಿನಯಗಳು ಇವುಗಳಲ್ಲದೆ ಕವನ ಸಂಕಲನಗಳು, ಕಥಾಸಂಕಲನಗಳು, ವೈದ್ಯಕೀಯ ಗ್ರಂಥಗಳು, ಕೀರ್ತನ ಸಾಹಿತ್ಯ ಮುಂತಾದ ೬೦ ಕ್ಕೂ ಹೆಚ್ಚು ಕೃತಿ ಪ್ರಕಟಿತ. ೧೯೭೮ರಲ್ಲಿ ತ.ಸು. ಶಾಮರಾಯರ ಸಂಪಾದಕತ್ವದಲ್ಲಿ ಇವರಿಗೆ ಅರ್ಪಿಸಿದ ಅಭಿನಂದನ ಗ್ರಂಥ ‘ನಂದನವನ’
ಹೀಗೆ ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲೇ ತೊಡಗಿಸಿಕೊಂಡು ವಿಶ್ವಕುಟುಂಬಿಯಾಗಿದ್ದ ರಾಘವೇಂದ್ರ ಗುರೂಜಿಯವರು ಪರಮಾತ್ಮನಲ್ಲಿ ಒಂದಾಗಿದ್ದು ೧೯೯೬ರ ಆಗಸ್ಟ್ ೪ ರಂದು.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.