Thursday , 13 June 2024
Raghavendra Khasanisa

ರಾಘವೇಂದ್ರ ಖಾಸನೀಸ

ರಾಘವೇಂದ್ರ ಖಾಸನೀಸ (೦೨.೦೩.೧೯೩೩ – ೧೯.೦೩.೨೦೦೭): ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿದಲ್ಲಿ ೧೯೩೩ರ ಮಾರ್ಚ್ ೨ರಂದು. ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಓವರ್‌ಸೀಯರ್ ಆಗಿದ್ದ ತಂದೆಯು ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ಹೋಮ್ಸ್‌ನ ಪತ್ತೇದಾರಿ ಕಾದಂಬರಿಗಳು ಮತ್ತು ದೆವ್ವದ ಕಥೆಗಳನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಗನಿಗೆ ಹೇಳುತ್ತಿದ್ದುದರಿಂದಲೇ ಒಳಗೊಬ್ಬ ಕಥೆಗಾರ ಇವರಲ್ಲಿ ರೂಪಗೊಳ್ಳತೊಡಗಿದ.

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ, ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತಿ.ತಾ.ಶರ್ಮರ ವಿಶ್ವಕರ್ನಾಟಕ ಪತ್ರಿಕೆಗೆ ಕಥೆ ಬರೆದುಕಳುಹಿಸಿದಾಗ ಮಕ್ಕಳ ಕಥಾ ವಿಭಾಗದಲ್ಲಿ ಆ ಕಥೆ ಪ್ರಕಟಗೊಂಡಾಗ ಇವರಿಗಾದ ಆನಂದ ಹೇಳತೀರದ್ದು, ಕಥೆಯನ್ನು ಓದಿದ ಶಾಲೆಯ ಉಪಾಧ್ಯಾಯರುಗಳೂ ಬೆನ್ನು ತಟ್ಟಿದರು.

ಕಾಲೇಜಿಗೆ ಸೇರಿದ್ದು ಧಾರವಾಡದಲ್ಲಿ ಪ್ರೊ. ವಿ.ಎಂ. ಇನಾಂದಾರ್‌, ಎಸ್.ಆರ್‌.ಮಳಗಿ, ಸ.ಸ.ಮಾಳವಾಡ ಮುಂತಾದವರುಗಳಲ್ಲಿ ಶಿಷ್ಯತ್ವ. ಇನಾಂದಾರರ ‘ಸ್ವರ್ಗದಬಾಗಿಲು’, ಗೋಕಾಕರ ‘ಸಮರಸವೇ ಜೀವನ’ ಕಾದಂಬರಿಗಳಿಗೆ ಇವರು ವಿಮರ್ಶೆ ಬರೆದಿದ್ದರು. ಜೊತೆಗೆ ಹಲವಾರು ಕಥೆಗಳು ಓಲೇಟಿ ವಿ.ಗುಪ್ತ ಮತ್ತು ಡಿ.ಎಸ್.ರಾಮರಾವ್‌ರವರ ಕಥಾವಳಿ ಪತ್ರಿಕೆ ಮತ್ತು ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗಳಲ್ಲಿ ಪ್ರಕಟವಾಗದವು.

ಬಿ.ಎ. ಪವಿಯ ನಂತರ (೧೯೫೪) ಮುಂಬಯಿಯ ಎನ್‌ಫಿನ್ಸ್‌ಟನ್ ಕಾಲೇಜಿನಿಂದ ಪಡೆದ ಎಂ.ಎ. (ಇಂಗ್ಲೀಷ್) ಪದವಿ ಜೊತೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಗಳಿಸಿದ್ದು ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮ.

ಉದ್ಯೋಗಕ್ಕಾಗಿ ಸೇರಿದ್ದು ಪುಣೆಯ ಎಸ್.ಪಿ. ಕಾಲೇಜಿನಲ್ಲಿ ಗ್ರಂಥಾಲಯದಲ್ಲಿ have a peek here. ನಂತರ ವಲ್ಲಭ ವಿದ್ಯಾನಗರದ ಬಿರ್ಲಾ ಎಂಜನಿಯರಿಂಗ್ ಕಾಲೇಜಿನ ಗ್ರಂಥಾಲಯದಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ನೇಮಕಗೊಂಡು ೧೯೯೧ರಲ್ಲಿ ನಿವೃತ್ತರಾದರು.
ಪುಣೆಯ ಎಸ್.ಪಿ.ಕಾಲೇಜಿನಲ್ಲಿ ಗ್ರಂಥಾಲಯದಲ್ಲಿದ್ದಾಗಲೇ ಮರಾಠಿ ಭಾಷೆ ಹಾಗೂ ಸಾಹಿತ್ಯವನ್ನು ಓದಿ, ಅನೇಕ ಬಂಗಾಳಿಕಥೆಗಳನ್ನು ಮರಾಠಿಯಿಂದ ಕನ್ನಡಕ್ಕೆ ತಂದರು.

ಖಾಸನೀಸರ ಮೊದಲ ಕಥಾಸಂಕಲ ‘ಖಾಸನೀಸರ ಕಥೆಗಳು’

೧೯೮೪ರಲ್ಲಿ ಪ್ರಕಟವಾಯಿತು. ಕೇವಲ ಐದು ಕಥೆಗಳಿದ್ದು ಆ ಸಂಕಲನ ಕಥಾಸಕ್ತರ ಗಮನ ಸೆಳೆಯಿತು. ಅದೇ ವರ್ಷವೇ ಕರ್ನಾಟಕ ಸಾಹಿತ್ಯ ಅಕಾಡಮಿಯು ‘ಖಾಸನೀಸರ ಕಥೆಗಳು’ ಅತ್ಯುತ್ತಮ ಸೃಜನ ಶೀಲ ಕೃತಿ ಎಂದು ಪ್ರಶಸ್ತಿ ನೀಡಿ ಪುರಸ್ಕರಿಸಿತು.

ಎರಡನೆಯ ಕಥಾ ಸಂಕಲನ ‘ಬೇಡಿಕೊಂಡವರು’ ೧೯೮೯ರಲ್ಲ ಪ್ರಕಟವಾಯಿತು. ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯು ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿತು. ಪ್ರಿಸಮ್‌ಬುಕ್ಸ್ ಪ್ರೈ.ಲಿ. ಬೆಂಗಳೂರು ಇವರು ೨೦೦೬ರಲ್ಲಿ ‘ಖಾಸನೀಸರ ಸಮಗ್ರಕಥೆಗಳು’ ಎಂದು ಪ್ರಕಟವಾಗಿರುವುದರಲ್ಲಿ ಕೇವಲ ಒಂಬತ್ತೇ ಕಥೆಗಳಿವೆ. ೨೦೧೧ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯು ಖಾಸನೀಸರ ಎಲ್ಲ ಕಥೆಗಳನ್ನು ಸೇರಿಸಿ ‘ಸಮಗ್ರ ಕಥೆಗಳನ್ನು’ ಪ್ರಕಟಿಸಿದೆ.

ಖಾಸನೀಸರ ಅನೇಕ ಕಥೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿದೆ. ಅವುಗಳಲ್ಲಿ ‘ತಬ್ಬಲಿಗಳು’ ಎಂಬ ಕಥೆಯು ORPHANS ಎಂಬ ಹೆಸರಿನಿಂದ ಡಾ. ವಿಕ್ರಮರಾಜ ಅರಸ್ ರವರು ಸಂಪಾದಿಸಿರುವ ‘AN ANTHOLOGY OF KANNADA SHORT STORIES’ ಸಂಕಲನದಲ್ಲಿ ಸೇರಿದೆ……. ಈ ಕಥೆಯು ಎಸ್.ದಿವಾಕರ್‌ ರವರು ಸಂಪಾದಿಸಿರುವ ಶತಮಾನದ ಸಣ್ಣಕಥೆಗಳು ಸಂಗ್ರಹದಲ್ಲಿಯೂ ಸೇರಿದೆ. ‘ಹೀಗೂ ಇರಬಹುದು!’ ಎಂಬ ಕಥೆಯು ದೂರದರ್ಶನದ ಕಥೆಗಾರ ಮಾಲಿಕೆಯಲ್ಲಿ ಪ್ರಸಾರಗೊಂಡಿದೆ. ಇದಲ್ಲದೆ ಗ್ರಂಥಾಲಯಕ್ಕೆ ಸಂಬಂಧಿಸಿದ ಅನೇಕ ಬಿಡಿ ಬರಹಗಳೂ ಪ್ರಕಟವಾಗಿವೆ.

“ಈ ಪ್ರಪಂಚದಲ್ಲಿ ನಡೆಯುವ ಘಟನಾವಳಿಗಳೆಲ್ಲವೂ ಪೂರ್ವ ನಿಯೋಜಿತವಾದದ್ದು, ಮನುಷ್ಯನ ಇಷ್ಟಾನಿಷ್ಟಗಳಿಗೆ ಇಲ್ಲಿ ಬೆಲೆಯೂ ಇಲ್ಲ. ನಡೆಯುದ ಘಟನೆಗಳಿಗೆ ಮೂಕ ಪ್ರೇಕ್ಷಕನಾಗಿ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೇ ವಿನಃ ಅನ್ಯಮಾರ್ಗವಿಲ್ಲ” ಎಂಬುದು ಹಲವಾರು ಕಥೆಗಳಲ್ಲಿ ಕಾಣಬರುವ ಅಂಶ.

ಹೀಗೆ ಅತ್ಯಂತ ಯಶಸ್ವಿ ಕಥೆಗಳನ್ನು ಕನ್ನಡದ ಕಥಾಲೋಕಕ್ಕೆ ನೀಡಿದ ರಾಘವೇಂದ್ರ ಖಾಸನೀಸರಿಗೆ ನಿವೃತ್ತಿಯಾದ ಮರುವರ್ಷದಿಂದಲೇ ಪಾರ್ಕಿನ್‌ಸನ್ ಖಾಯಿಲೆಯು ಕಾಡತೊಡಗಿ, ಚೇತರಿಸಿಕೊಳ್ಳಲಾಗಿದೆ ಕಥಾಲೋಕವನ್ನು ತೊರೆದದ್ದು ೨೦೦೭ರ ಮಾರ್ಚ್ ೧೯ರಂದು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *