Wednesday , 22 May 2024

ಕವಿರಾಜ ಮಾರ್ಗದ ರಸೋಚಿತ-ಗುಣವಿಶೇಷಗಳು

ಕವಿರಾಜ ಮಾರ್ಗದ ರಸೋಚಿತ-ಗುಣವಿಶೇಷಗಳು

ಗೀತಿಕೆ || ಬಗೆದು ಮಾರ್ಗ-ದ್ವಿತಯ-ಗತಿಗಳಂ

ಪ್ರ[1]ಗುಣ-ಗುಣ-ಗಣೋದಯರ್ಕಳ್ ವಿತರ್ಕದಿಂ |

ಸೊಗಯಿಸುವಂತು ವಚನ-ರಚನೆಯಿಂ

ನೆಗೞರೆ ಬೆರಸಿ ಪೇೞ್ಗೆ ರಸ-ವಿಶೇಷದೊಳ್ ||೯೮||

ಉತ್ಪಲಮಾಲೆ || ವೀರ-ರಸಂ ಸ್ಫುಟೋಕ್ತಿಯಿನುದಾರ- ಕರುಣಾ-ರಸಂ ಮೃದೂ- |

ಚ್ಚಾರಣೆಯಿಂದಮದ್ಭುತ-ರಸಂ ನಿಬಿಡೋಕ್ತಿಗಳಿಂದಮಲ್ತೆ ಶೃಂ- |

ಗಾರ-ರಸಂ ಸಮಂತು ಸುಕುಮಾರ-ತರೋಕ್ತಿಗಳಿಂ ಪ್ರಸನ್ನ-ಗಂ-

ಭೀರ-ತರೋಕ್ತಿಯಿಂ ಪ್ರಕಟಮಕ್ಕೆ ರಸಂ ಸತತಂ ಪ್ರ[2]ಶಾಂತಮುಂ ||೯೯||

೯೮. *ಉತ್ತರಮಾರ್ಗ ದಕ್ಷಿಣಮಾರ್ಗ ಎಂಬ* ಎರಡು ಮಾರ್ಗಗಳ ಪರಿಗಳನ್ನೂ ಗುಣಾತಿಶಯಸಮೇತರಾದ ಕವೀಶ್ವರರು ಚೆನ್ನಾಗಿ ಪರಾಮರ್ಶಿಸಿ, ಪದ ರಚನೆ ಸೊಗಯಿಸುವಹಾಗೆ (ವಿಶಿಷ್ಟ) ಗುಣಗಳನ್ನು ವಿಶಿಷ್ಟರಸಗಳಲ್ಲಿ ಬಳಸಿ ಹೇಳಬೇಕು. *ರಸವಿಶೇಷಗಳಿಗೆ ಗುಣವಿಶೇಷಗಳ ನಿರ್ದೇಶನ ದಂಡಿಭಾಮಹರಲ್ಲಿಲ್ಲ; ರುದ್ರಟನಲ್ಲಿ ಮಾತ್ರ ಇದರ ಛಾಯೆ ಕಾಣಬರುತ್ತದೆ.*

೯೯. ‘ಸ್ಪುಟ’ವಾದ ಪದರಚನೆಯಿಂದ ‘ವೀರರಸ’, ‘ಮೃದು’ವಾದ ಪದಬಂಧದಿಂದ ಉತ್ತಮವಾದ ‘ಕರುಣಾರಸ’, ‘ನಿಬಿಡ’ ಉಕ್ತಿಗಳಿಂದ ‘ಅದ್ಭುತರಸ’, ಅತ್ಯಂತ ‘ಸುಕುಮಾರ’ವೆನಿಸುವ ಉಕ್ತಿಗಳಿಂದ ‘ಶೃಂಗಾರರಸ’, ‘ಪ್ರಸನ್ನ’ ಬಂಧರೋಕ್ತಿಗಳಿಂದ ‘ಶಾಂತರಸ’ ಪ್ರಕಟವಾಗಬೇಕು. *ಭರತಾದಿಗಳು ಪ್ರಾಯಿಕವಾಗಿ ‘ಕರುಣರಸ’ವೆಂದಿರುವುದನ್ನೇ ಇಲ್ಲಿ ಗ್ರಂಥಕಾರನು ‘ಕರುಣಾರಸ’ವೆಂಬ ಹೆಸರಿನಿಂದ ಕರೆದಿರುವುದು ಗಮನಾರ್ಹ. “ಕಾರುಣ್ಯಂ ಕರುಣಾ ಘೃಣಾ ಕೃಪಾ ದಯಾ-ನುಕಂಪಾ ಸ್ಯಾದನುಕ್ರೋಶೋ-ಪಿ” ಎಂಬ ನಾಟ್ಯವರ್ಗದ ಶ್ಲೋಕದಲ್ಲಿಯೂ ನಾಟ್ಯದ ‘ರಸಭಾವ’ಗಳ ಪ್ರಸಕ್ತಿಬಂದಾಗ ಉದ್ದೇಶಪೂರ್ವಕವಾಗಿಯೇ ‘ಕರುಣ’ ಎಂಬ ಪುಲ್ಲಿಂಗಶಬ್ದವನ್ನು ಕೈಬಿಟ್ಟು ‘ಕರುಣಾ’ ಎಂಬ ಸ್ತ್ರೀಲಿಂಗಶಬ್ದವನ್ನು ಬಳಸಲಾಗಿದೆ. ‘ಕರುಣ’ ಎಂದರೆ ‘ಘೋರ’, ‘ದುಃಖಕರ’ ಎಂದೇ ಅರ್ಥ; “ಕರುಣಾ” ಎಂದರೆ ದಯೆ, ಅನುಕಂಪೆ, ಕಾರುಣ್ಯ. ಎರಡೂ ಸಮಾನಾರ್ಥಕವೆಂದು ಭಾವಿಸುವುದಕ್ಕೆ ಕವಿಗಳ ಪ್ರಯೋಗಗಳೂ ಸಾಧಕವಾಗಿಲ್ಲ. ‘ರಸ’ ಶಬ್ದ ಪುಲ್ಲಿಂಗವಾಗಿರುವಾಗ ಅದರ ವಿಶೇಷಣ ಪುಲ್ಲಿಂಗವಿರಬೇಕಾದ್ದೇ-‘ಕರುಣ’ ಎಂದಿರಬೇಕಾದ್ದೇ- ಪ್ರಸಕ್ತ; ‘ಕರುಣಾ’ ಎಂಬ ಸ್ತ್ರೀಲಿಂಗಾಂತವಲ್ಲ. ಆದರೂ ಬುದ್ಧನನ್ನು ಕರುಣಾಸಿಂಧುವೆಂದು ಬಣ್ಣಿಸುವ ಬೌದ್ಧ ಅಮರಸಿಂಹನು ಕರುಣೆಯನ್ನೇ-ಶೋಕವನ್ನಲ್ಲ-ನಾಟ್ಯರಸವೆಂದು ಭಾವಿಸಿರಬೇಕೆಂದು ಭಾಸವಾಗುತ್ತದೆ. ಪ್ರಕೃತ ಜೈನ ಗ್ರಂಥಕಾರನೂ ಈ ವಿಷಯದಲ್ಲಿ ಭರತನ ಪರಿಭಾಷೆಯನ್ನು ಕೈಬಿಟ್ಟಿರುವುದಕ್ಕೆ ಅಮರಸಿಂಹನ ಪ್ರಭಾವವೇ ಕಾರಣವಿರಬೇಕು ಅಥವಾ ಜೈನ ಪರಂಪರೆಯಲ್ಲಿಯೂ ರಸಗಳನ್ನು ಹೆಸರಿಸುವಾಗ ‘ಕರುಣಾ” ಎಂಬ ಶಬ್ದವೇ ದಯೆಯೆಂಬರ್ಥದಲ್ಲೇ ಪ್ರಚುರವಾಗಿದ್ದಿರಬೇಕು. ಇದು ಈ ಲೇಖಕನ ಸ್ಪಷ್ಟಕಲ್ಪನೆ.*

ಉತ್ಪಲಮಾಲೆ || ಉತ್ಸವದಿಂದೆ ಹಾಸು-ರಸಮಾ ಮಧೂರೋಕ್ತಿಗಳಿಂದಮಲ್ತೆ ಬೀ-

ಭತ್ಸ-ರಸಾಂತರಂ ಶಿಥಿಲ-ಬಂಧನದಿಂ ಸತತಂ ಭಯಾನಕೋ-

ದ್ಯತ್ಸುರಸಂ ಕರಂ ವಿಮ-ಬಂಧನದಿಂ ನೃಪತುಂಗ-ದೇವ-ಮಾ-

ರ್ಗೋತ್ಸವಮೂರ್ಜಿತೋಕ್ತಿಗಳಿನಕ್ಕತಿರೌದ್ರರಸಂರಸಾವಹಂ ||೧೦೦||

ಉತ್ಪಲಮಾಲೆ || ಮಾ[3]ತುಗಳಾವುವಾನುಮುಪವರ್ಣಿತ-ಮಾರ್ಗ-ಯುತ-ಪ್ರಯೋಗ-ಸಂ |

ಜಾತ-ವಿಭಾಗದಿಂ ನೆಗೞ್ವ ಕನ್ನಡದೊಳ್ ಗುಣಮಂ ತಗುಳ್ಚುಗುಂ |

ನೀತಿ-ನಿರಂತರಾನುಗತ-ವೃತ್ತಿ-ವಿ[4]ಕಲ್ಪಿತಮಂ ತದೀಯನಿ-

ರ್ಣೀತಿಯನೀ ತೆಱತ್ತು ತಱಸಲ್ಗೆ ಬುಧೋತ್ತಮರುಕ್ತಿ-ಪೂರ್ವಕಂ ||೧೦೧||

ಮಾರ್ಗಾನುರೂಪ ಪದ-ಪ್ರಯೋಗ ವಿಚಾರ

ಉತ್ಪಲಮಾಲೆ || ನೋಡುವೆನಾ ಮಹೀಪತಿಯನರ್ಥಿ-ಗಣಾರ್ಥಿತ-ಕಲ್ಪವೃಕ್ಷನಂ

ಬೇಡುವೆನರ್ಥ-ಸಂಚಯಮನೆಂಬುದಿದುತ್ತರ-ಮಾರ್ಗ-ವಾಚಕಂ |

ನೀ[5]ಡುಮುದಾತ್ತ-ಚಾರು-ಗುಣನಂ ಮನದೊಳ್ ನೆ[6]ಱೆನೋೞೊನೞಯೊಳ್

ಕೂಡಿರವೇೞ್ಪೆನೆಂಬುದಿದು ದಕ್ಷಿಣ-ಮಾರ್ಗ-ವಿಚಕ್ಷಣೋದಿತಂ ||೧೦೨||

೧೦೦. *ಇಲ್ಲಿ ‘ಉತ್ಸವ’ ಯಾವ ಗುಣದ ಹೆಸರೂ ಅಲ್ಲ; ಮುಂದೆ ಬೀಭತ್ಸದೊಡನೆ ಪ್ರಾಸಸೌಕರ್ಯಕ್ಕಾಗಿ ಮಾತ್ರ ಬಂದಿದೆಯೋ ಎನಿಸುತ್ತದೆ.* ಹರ್ಷಾತಿ ರೇಕದ ‘ಮಧುರ’ ವಚನಗಳ ಮೂಲಕ ‘ಹಾಸ್ಯ’ ರಸ, ‘ಶಿಥಿಲ’ಬಂಧದಿಂದ ‘ಬೀಭತ್ಸ’ ರಸ, ‘ವಿಷಮ’ಬಂಧದಿಂದ ‘ಭಯಾನಕ’ರಸ, ‘ಊರ್ಜಿತ’ ಅಥವಾ ಓಜೋಮಯ ಉಕ್ತಿಗಳಿಂದ ‘ರೌದ್ರರಸ’- ಇವು ಆಸ್ವಾದ್ಯವಾಗುವುವೆಂಬುದು ನೃಪತುಂಗನ ಮತ.

೧೦೧. ಯಾವ ಮಾತುಗಳೇ ಇರಲಿ, ಅವು ಇದುವರೆಗೆ ಹೇಳಲಾದ ಮಾರ್ಗದ್ವಯ ವಿಭಾಗದ ಲಕ್ಷಣಾನುಸಾರವಾಗಿ ಪ್ರಯುಕ್ತವಾದರೆ ಕನ್ನಡದಲ್ಲಿ ಗುಣವನ್ನೇ ತಳೆಯುತ್ತವೆ. ನೃಪತುಂಗನು ಹೇಳಿರುವ ಅದರ ಭೇದಗಳನ್ನು ಕುರಿತ ನಿರ್ಣಯವನ್ನು ವಿದ್ವಾಂಸರು ಪ್ರಯೋಗಪುರಸ್ಸರವಾಗಿ ಹೀಗೆಂದು ನಿಶ್ಚಯಿಸಿಕೊಳ್ಳಲಿ-

೧೦೨. *ಕನ್ನಡದಲ್ಲಿ ಮಾರ್ಗಾನುಗುಣ ಪದಪ್ರಯೋಗದ ಬಗೆಗೆ ಹೆಚ್ಚಿನ ವಿವರಣೆ-* ದೀನರಿಗೆ ಬೇಡಿದ್ದನ್ನೀವ ಕಲ್ಪವೃಕ್ಷವಾಗಿರುವ ಆ ರಾಜನನ್ನು ‘ನೋಡುವೆನು’; ಹಣದ ರಾಶಿಯನ್ನು ‘ಬೇಡುವೆನು’- ಎಂಬ ಪ್ರಯೋಗಗಳು ಉತ್ತರಮಾರ್ಗದ ಸೂಚಕಗಳು; ಹಾಗೆಯೇ, ಆ ಉದಾತ್ತ ಹಾಗು ಶೋಭನ ಗುಣಶಾಲಿಯನ್ನು ಮನದಲ್ಲಿ ನೆರೆ‘ನೋಳ್ಪೆನು’; ಪ್ರೀತಿಯಿಂದ ‘ಕೂಡಿರವೇಳ್ಪೆನು’ ಎಂಬ ರೀತಿಯ ಪ್ರಯೋಗಗಳು ದಕ್ಷಿಣಮಾರ್ಗದ ಸೂಚಕಗಳು.*

ಉತ್ಪಲಮಾಲೆ || ಸೂಡುವೆನೆಂಬುದಲ್ಲದಣಮಾಗದು ಸೋೞ್ಪೆನಮೋಘಮೆಂಬುದಂ

ಕೂಡುವೆನೆಂಬುದಲ್ಲದಿನಿಸಾವುದುಮಾಗದು ಕೂೞ್ಪೆನೆಂಬುದುಂ |

ಕಾಡುವೆನೆಂಬುದಲ್ಲದೆ ಸಮಾರ್ಗದೊಳಾಗದು ಕಾೞ್ಪೆನೆಂಬುದುಂ

ತೋಡುವೆನೆಂಬುದಲ್ಲ[7]ದಿಡಲಾಗದು ನಿಕ್ಕುವ ತೋೞ್ಪೆ[8]ನೆಂಬುದಂ ||೧೦೩||

ಚಂಪಕಮಾಲೆ || ಬರಿಸುವೆನಿಂದು ನಂದನವನಾಂತರದಲ್ಲಿಗೆ ಕಾಂತನಂ ಸಮಂ

ತಿ[9]ರಿಸುವೆನಂತನಂತ-ಸುಖ-ಸಂಗತ-ಮಂಗಳ-ಕಾರಣಂಗಳಂ |

ತರಿಸುವೆನಾಂ ಮನೋ-ನಯನ-ವಲ್ಲಭನೊಳ್ ಮನದೊಂದಲಪಿನಿಂ

ನೆರೆವೆನಮೋಘಮೆಂಬುದಿದು ದಕ್ಷಿಣ-ಮಾರ್ಗ-ವಿಶೇಷ-ಭಾಷಿತಂ ||೧೦೪||

ಚಂಪಕಮಾಲೆ || ಬರಿಪೆನಮೋಘ[10]ಮಿಂದುಪವನಾಂತರದಲ್ಲಿಗೆ ನಲ್ಲನಂ ತಗು-

ೞ್ದರಿಪೆನನಾರತಂ ಸುರತ-ರಾಗ-ನಿರೂಪಣ-ಕಾರಣಂಗಳಂ |

ತರಿಪೆನನಾಕುಳಂ ಮನದಲಂಪಿನೊಳಾ ಮದನೋಪಮಾನನೊಳ್

ನೆರೆವೆನ[11]ಭಂಗದೆಂಬವಚನಂಗಳಿವುತ್ತರ-ಮಾರ್ಗ-ವರ್ತಿಗಳ್ ||೧೦೫||

೧೦೩. *ಕೆಲವು ಅಪವಾದಗಳು-* (ಮಾರ್ಗ ಯಾವದೇ ಇರಲಿ). ‘ಸೂಡುವೆನು’ ಎಂಬ ಪ್ರಯೋಗ ಸರಿಯೇ ವಿನಾ ‘ಸೂೞ್ಪೆನು’ ಎಂಬುದು ಎಂದೂ ಸರಿಯಾಗದು. ‘ಕೂಡುವೆನು’ ಎಂದಾಗಬೇಕೇ ಹೊರತು ‘ಕೂೞ್ಪೆನು’ ಎಂದಾಗದು. ‘ಕಾಡುವೆನು’ ಎಂದಾಗಬೇಕೇ ಹೊರತು ‘ಕಾೞ್ಪೆನು’ ಎಂದು ‘ಮಾರ್ಗ’ದಲ್ಲಿ ಹೇಳುವಂತಿಲ್ಲ. ‘ತೋಡುವೆನು’ ಎನ್ನಬೇಕೇ ಹೊರತು ‘ತೋೞ್ಪೆನು’ ಎನ್ನಬರುವುದಿಲ್ಲ.

೧೦೪. ಇಂದು ನಲ್ಲನನ್ನು ತಪ್ಪದೆ ನಂದನವನದೆಡೆಗೆ ‘ಬರಿಸುವೆನು’ ಅವನನ್ನು ಸಮಾಧಾನದಿಂದ ‘ಇರಿಸುವೆನು’; ಅಲ್ಲಿ ಸಕಲ ಸುಖಭೋಗ-ಸಾಧನಗಳಾದ ಮಂಗಳ ಸಾಮಗ್ರಿಗಳನ್ನೆಲ್ಲ ‘ತರಿಸುವೆನು’. ಆ ಮನೋನಯನವಲ್ಲಭನಲ್ಲಿ ಒಲವಿಂದ ನೆರೆವೆನು-ಎಂಬ ರೀತಿಯ ಕ್ರಿಯಾರೂಪಗಳು ದಕ್ಷಿಣಮಾರ್ಗದ ಉಕ್ತಿವೈಶಿಷ್ಟ್ಯಗಳಾಗಿವೆ.

೧೦೫. ಇಂದು ನಲ್ಲನನ್ನು ತಪ್ಪದೆ ಉಪವನದೆಡೆಗೆ ‘ಬರಿಪೆನು’; ಸಮಾಧಾನವಾಗಿ ಅವನನ್ನು ‘ಇರಿಪೆನು’; ಸುಖಭೋಗದ ಸಾಧನ ಸಾಮಾಗ್ರಿಗಳನ್ನೆಲ್ಲ ‘ತರಿಪೆನು’; ನಿರಾತಂಕವಾಗಿ ಮನದೊಲವಿಂದ ಮನ್ಮಥಸಮಾನನಾದ ಅವನಲ್ಲಿ ನೆರೆವೆನು-ಎಂಬ ಉಕ್ತಿಗಳು ಉತ್ತರಮಾರ್ಗದ ವೈಶಿಷ್ಟ್ಯಗಳು.

ಚಂಪಕಮಾಲೆ || ಅನುಪಮನಂ ಬರಿಪ್ಪೆನನುರಾಗದೆ ನಲ್ಲನನಿಂದು ಮಿಕ್ಕ ನಂ

ದನ-ವನದಲ್ಲಿಗಲ್ಲಿಗೆ ತರಿಪ್ಪೆನನಂಗ-ಸುಖೋಚಿತಂಗಳಾನ್ |

ಅನುನಯದಿಂದಿರಿಪ್ಪೆ[12]ನನಿತಂ ಸುರತಾಸವ-ಸೇವನಾ-ಸನಾ-

ತ*ನು-ಸುಖದಿಂದಿರಿಪ್ಪೆನನುರಾಗದಿನೆಂಬುದಿದುತ್ತರೋತ್ತರಂ ||೧೦೬||

ಚಂಪಕಮಾಲೆ || ಪರಸುವೆನೆನ್ನದಾಂ ಪರಪೆನೆಂಬುದಿದಾಗದು ಚಿತ್ತನಾಥನೊಳ್

ಬೆರಸುವೆನೆನ್ನದಾಂ ಬೆರಪೆನೆಂಬುದಿದಾಗದು ಮಾರ್ಗ-ಯುಗ್ಮದೊಳ್ |

ನಿರತಿಶಯಾನುಭಾವ-ಭವನಪ್ಪ ಮಹಾ-ನೃಪತುಂಗ-ದೇವನಾ-

ದರದೊಳೆ ಪೇೞ್ದ ಮಾರ್ಗ-ಗ[13]ತಿಯಿಂ ತಱಸಲ್ಗಿದನಿಂತೆಕಬ್ಬಿಗರ್ ||೧೦೭||

೧೦೬. ಆ ಅನುಪಮನಾದ ನಲ್ಲನನ್ನು ನಂದನವನದೆಡೆಗೆ ‘ಬರಿಪ್ಪೆನು’; ಅನಂಗ-ಸುಖೋಚಿತ ಸಾಮಗ್ರಿಗಳನ್ನು ಅಲ್ಲಿಗೆ ‘ತರಿಪ್ಪೆನು’; ಅಣಿಯಾಗಿ ‘ಇರಿಪ್ಪೆನು’. ಬಳಿಕ ಪ್ರೇಮಪುರಸ್ಸರವಾಗಿ ಸುರತ, ಮದ್ಯಪಾನಾದಿಗಳಿಂದ ಅವನನ್ನು ಸುಖದಿಂದ ‘ಇರಿಪ್ಪೆನು’-ಎಂಬುದು ‘ಉತ್ತರೋತ್ತರ’ ಮಾರ್ಗವೆನಿಸುವುದು *ಸಂಸ್ಕೃತದಲ್ಲಿ ಉತ್ತರ (=ಗೌಡ) ಮತ್ತು ದಕ್ಷಿಣ (=ವೈದರ್ಭ) ಎಂದು ಎರಡೇ ಮಾರ್ಗಗಳು; ಆದರೆ ಕನ್ನಡದಲ್ಲಿ ಪ್ರಾದೇಶಿಕ ಮಾರ್ಗಭೇದಗಳು ಇನ್ನೂ ಅಧಿಕವೆಂಬುದು ಗ್ರಂಥಕಾರನ ಆಶಯವಿರಬೇಕು; ಅಥವಾ ಇದೂ ಉತ್ತರಮಾರ್ಗಕ್ಕೇ ಸೇರಿದ್ದೆಂದು ಅವನ ತಾತ್ಪರ್ಯವೆಂದು ಕಲ್ಪಿಸಬೇಕು.*

೧೦೭. *ಮೇಲಿನದಕ್ಕೆ ಅಪವಾದ-* ಎರಡು ಮಾರ್ಗದಲ್ಲೂ ‘ಪರಸುವೆನು’ ಎನ್ನಬಹುದೇ ಹೊರತು ‘ಪರಪೆನು’ ಎನ್ನಲು ಬರುವುದಿಲ್ಲ. ಹೃದಯೇಶ್ವರನಲ್ಲಿ ‘ಬೆರಸುವೆನು’ ಎನ್ನಬೇಕೇ ಹೊರತು ‘ಬೆರಪೆನು’ ಎನ್ನಲಾಗುವುದಿಲ್ಲ. ನಿರತಿಶಯ ಪ್ರಭಾವಶಾಲಿಯಾದ ನೃಪತುಂಗನು ಆದರದಿಂದ ಹೇಳಿರುವ ಮಾರ್ಗಸ್ವರೂಪವನ್ನು ಹೀಗೆ ಕವಿಗಳು ನಿರ್ಣಯಿಸಿಕೊಳ್ಳಬೇಕು.

ಚಂಪಕಮಾಲೆ || ಮನದೊಳಗಾಗಳುಂ ನಿಱಸದಾ ಮುಳಿಸಂ ಗತ-ರಾಗ-ಮೋಹನೊ-

ಯ್ಯನೆ ಮುನಿ-ನಾಥನೆಂಬ ವಚನಾಂತರಮಿಂತಿದು ದಾಕ್ಷಿಣಾತ್ಯಕಂ |

ಮನದೊಳ[14]ಗಾಗಳುಂ ನಿಱಸದೊಯ್ಯನೆ ಮೋ[15]ಹಮನಂತೆ ರಾಗಮಂ

ಮುನಿಸುಮನೊಲ್ಲದಂ ಮುನಿಪನೆಂಬುದಿದಕ್ಕುಮುದೀಚ್ಯ-ವಾಚಕಂ ||೧೦೮||

ಚಂಪಕಮಾಲೆ || ತ್ರಿದಶ-ಗಣೇಶ-ಮೌಳೀ-ಮಣಿ-ಪೀಠ[16]ನಿಷೇವಿಗಳೊಳ್‌ಮುನೀಂದ್ರನಾ

ಪದ-ಯುಗಳಂಗಳೊಳ್ ಮುದದೆ ಬಾಗುವೆನೆಂಬುದು ದಕ್ಷಿಣಾಯನಂ |

ವಿದಿತ-ಸುರಾಧಿರಾಜ-ಮ[17]ಕುಟಾಗ್ರ-ಸಮರ್ಪಿತದೊಳ್‌ಮುನೀಂದ್ರನಾ |

ಪದ-ಯುಗದೊಳ್ ಮನೋಮುದದೆ ಬಾಗುವೆನೆಂಬುದಿದುತ್ತರಾಯಣಂ ||೧೦೯||

೧೦೮. “ಮನಸ್ಸಿನಲ್ಲಿ ಯಾವಾಗಲೂ ಮುಳಿಸನ್ನು ಇಟ್ಟುಕೊಳ್ಳದೆ ವಿಗತ-ರಾಗ- ಮೋಹನಾದವನೇ ನಿಜವಾಗಿಯೂ ಮುನಿನಾಥ” ಎಂಬುದು ದಕ್ಷಿಣಮಾರ್ಗ; ಅದನ್ನೇ-“ಮನಸ್ಸಿನಲ್ಲಿ ಯಾವಾಗಲೂ ಮೋಹವನ್ನೂ ರಾಗವನ್ನೂ ಮುಳಿಸನ್ನೂ ಸೇರಿಸದವನೇ ಮುನೀಶ್ವರ” ಎಂದರೆ ಉತ್ತರಮಾರ್ಗ *ಮೊದಲ ಪ್ರಯೋಗದಲ್ಲಿ ‘ವಿಗತ-ರಾಗ-ಮೋಹ’ ಎಂಬುದು ಬಹುವ್ರೀಹಿ-ಸಮಾಸವಾಗಿ ‘ಮುನಿನಾಥ’ನೆಂಬ ಪದದೊಡನೆ ಅನ್ವಯಿಸುತ್ತದೆ; ಅದೇ ದಕ್ಷಿಣಮಾರ್ಗದ ಪರಿ. ಆದರೆ ‘ಮೋಹವನ್ನೂ’ ‘ರಾಗವನ್ನೂ’ ಎಂದು ಬಿಡಿಸಿ ವ್ಯಸ್ತವಾಗಿ ಹೇಳಿದಾಗ, ಆ ಪದಗಳು ‘ಸೇರಿಸದವನು’ ಎಂಬಲ್ಲಿಯ ಕ್ರಿಯೆಯೊಡನೆ ಅನ್ವಯಿಸುತ್ತವೆ. ಅಷ್ಟೇ ಮಾರ್ಗಭೇದ. ಎರಡೂ ಸರಿಯೆ.*

೧೦೯. ‘ಸುರೇಂದ್ರಮಣಿಕಿರೀಟ ಸೇವ್ಯಗಳಾದ ಮುನೀಂದ್ರನ ಪದಯುಗಗಳಲ್ಲಿ ಭಕ್ತಿಯಿಂದ ನಮಸ್ಕರಿಸುವೆನು’ ಎಂಬುದು ದಕ್ಷಿಣಮಾರ್ಗ. ‘ಸುರೇಂದ್ರಮಣಿ ಕಿರೀಟಸೇವ್ಯವಾದ ಮುನೀಂದ್ರನ ಪದಯುಗಲದಲ್ಲಿ ಭಕ್ತಿಯಿಂದ ನಮಸ್ಕರಿಸುವೆನು’ ಎಂಬುದು ಉತ್ತರಮಾರ್ಗ. *ಇಲ್ಲಿಯ ಮೊದಲ ಉದಾಹರಣೆಯಲ್ಲಿ ‘ಪದಯುಗಳ’ ಶಬ್ದ ಮತ್ತು ಅದರ ವಿಶೇಷಣಗಳು ಬಹುವಚನದಲ್ಲಿವೆ; ಎರಡನೆಯ ಉದಾಹರಣೆಯಲ್ಲಿ ಅವು ಏಕವಚನದಲ್ಲಿವೆ. ಅಷ್ಟೇ ಮಾರ್ಗಕೃತವಾದ ವ್ಯತ್ಯಾಸ. ಎರಡೂ ಸರಿಯೆ.*

ಚಂಪಕಮಾಲೆ || ವಿಳಸಿತ-ಸಸ್ಯ-ಸಂಪದಭಿರಾಮ-ಗುಣೋದಯೆ ತಾಳ್ದಿದಳ್ ಧರಾ-

ಲಳನೆ ವಿಶಾಲ-ಲಕ್ಷ್ಮಿಯ[18]ನನಾರತಮೆಂಬುದು ದಕ್ಷಿಣಾಪಥಂ |

ಜಳನಿಧಿ-ಮೇಖಲಾ-ವಲಯಿತಾಂಗಿ ಕರಂ ಸೊಗಯಿಪ್ಪುದಾಯ್ತುಭೂ-

ಲಳನೆ ವಿಶಾಲ-[19]ಲಕ್ಷ್ಮಿಯಿನನಾಕುಳ ಮೆಂಬುದಿದುತ್ತರಾಪಥಂ ||೧೧೦||

ಗೀತಿಕೆ || ನಿಕ್ಕುವಮಿಂತು ಮಾರ್ಗ-ಯುಗದೊಳ್

ತಕ್ಕುದನಱಯೆ ಪೇೞ್ದೆನಿನಿಸೊಂದುದ್ದೇಶಮಂ |

ಮಿಕ್ಕ ಗುಣೋದಯರ್ ಕಳೆಯದೆಂತು ಸ-

ಯ್ತಕ್ಕುಮಂತಾಗೆ ಬಗೆದು ಪೇೞ್ಗೆ ಕಬ್ಬದೊಳ್ ||೧೧೧||

*…………………………………………..

ಮಿಕ್ಕ ಶಬ್ದಾಲಂಕಾರಮಕ್ಕುಂ ದುಷ್ಕರಂ |

[1] ಪ್ರಗುಣಗುಣೋದಯರ್ಕಳ್ ‘ಬ’.

[2] ಪ್ರಶಾಂದಿಂ ‘ಪಾ, ಮ, ಸೀ’. ‘ಪ್ರಶಾಂತದಾ’ ಬಿ.ಎಂ.ಶ್ರೀಸೂಚಿತಪಾಠ; ಆದರೆ ಇಲ್ಲಿ ವ್ಯಾಕರಣರೀತ್ಯಾ ಪ್ರಥಮಾಂತವೇಅಗತ್ಯವಾದ್ದರಿಂದ ಹೀಗೆ ಅವಧಾರಣಾಸಹಿತವಾಗಿ ಪರಿಸ್ಕರಿಸಿದೆ.

[3] ಮಾತುಗಳಾವುವಾನುಪ ‘ಅ’.

[4] ವಿ…ತಮಂ ‘ಬ’.

[5] ನೋಡುವೆನರ್ದ್ಧಿ ‘ಅ’.

[6] ಮರಿ ‘ಬ’.

[7] ದಿರಲಾಗದು ‘ಮ’.

[8] ನೆಂಬುದಂ ‘ಮ’.

[9] ತಿರುಸುವೆನಂತನಂಗಸುಖ ಬಿ.ಎಂ. ಶ್ರೀ. ಸೂಚಿತಪಾಠ.

[10] ಮೆಂದು ‘ಬ’.

[11] ನಭಂಗವೆಂಬ ‘ಬ, ಕ’.

[12] ನಿನಿತುಂ ‘ಪಾ, ಮ, ಸೀ’; ಅರ್ಥಪುಷ್ಟಿಗಾಗಿ ಪರಿಷ್ಕೃತಪಾಠ ಕೊಟ್ಟಿದೆ. ಮುಳಿಯ ತಿಮ್ಮಪ್ಪಯ್ಯನವರಿಂದ ಸೂಚಿತ, ‘ಕವಿರಾಜಮಾರ್ಗವಿವೇಕ’, ಪು. ೨೧೭.

* ರತ ‘ಅ’.ಇದು ಪಾಸಾನ-ಗುಣವಲ್ಲದ್ದರಿಂದ ಅಪಪಾಠ.

[13] ಗತಿಯಂ ‘ಬ, ಆ’.

[14] ಗಾಗದುಂ ‘ಅ’.

[15] ಮೋಹಮದಂತೆ ‘ಕ’.

[16] ನಿಷೇದಿ ‘ಅ’.

[17] ಮಕುಟಾಗ್ರ ‘ಕ’.

[18] ನನಾಕುಳ ‘ಕ’.

[19] ಲಕ್ಷ್ಮಿಯ ‘ಪಾ, ಮ, ಸೀ’. ಆದರೆ ಅನ್ವಯ ಸರಿಹೋಗಲೆಂದು ಇಲ್ಲಿ ಪಾಠವನ್ನು ‘ಲಕ್ಷ್ಮಿಯಿಂ’ ಪರಿಷ್ಕರಿಸಿದೆ. * ಈ ಗೀತಿಕೆಯ ಮಿಕ್ಕಸಾಲುಗಳಿಲ್ಲದ್ದನ್ನು ನೋಡಿದರೆ ಗ್ರಂಥಪಾತವಾದಂತಿದೆ.- ದುಷ್ಕರ-ಕಾವ್ಯವನ್ನು ಕುರಿತ ಲಕ್ಷ್ಯ-ಲಕ್ಷಣಗಳು ಅಪಪಾಠಗಳಿಂದ ತುಂಬಿ ಅನುವಾದಕ್ಕೆ ಅಶಕ್ಯವಾಗಿವೆ.

Kanaja

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *