ರಂಗವಲ್ಲಿ ಅಥವಾ ರಂಗೋಲಿ ಚಿತ್ರಕಲೆಯ ಬಿಂದುಜ ಎಂಬ ವಿಭಾಗಕ್ಕೆ ಸೇರಿದ ಒಂದು ಜಾನಪದ ಕಲೆ.ರಂಗವಲ್ಲಿ ಎಂದರೆ ಬಣ್ಣಗಳಿಂದ ಅಲಂಕರಿಸಿದ ಲತೆಗಳು ಎಂದರ್ಥವಿದೆ.ಸ್ತ್ರೀಯರು ತಮ್ಮ ಕಲಾನೈಪುಣ್ಯ,ಕಲ್ಪನಾ ಶಕ್ತಿಯ ಅಭಿವ್ಯಕ್ತಿಯಾಗಿ ಬೆರಳುಗಳ ಸಹಾಯದಿಂದ ಮೂಡಿಸುವ ಕಲೆಯಾಗಿ ಹೆಚ್ಚು ಪ್ರಚಲಿತ.ಹುಡಿಮಣ್ಣು,ಸುಣ್ಣ,ಬಣ್ಣದ ಹುಡಿಗಳನ್ನು ಉಪಯೋಗಿಸುವ ಚಿತ್ರಗಳು.
ಮುಂಜಾನೆ ಕೋಳಿ ಕೂಗುವ ವೇಳೆ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಹೊಸ್ತಿಲಿಗೆ ರಂಗೋಲಿ ಇಟ್ಟು, ಮನೆಯ ಮುಂದಿನ ಅಂಗಳದಲ್ಲಿಯೂ ರಂಗೋಲಿ ಇಡುವ ಸಂಸ್ಕೃತಿ ನಮ್ಮದು. ಮನೆಯ ಮೆಟ್ಟಿಲ ಮುಂದೆ ಒಪ್ಪವಾಗಿ ಸಾರಿಸಿದ ಜಾಗದಲ್ಲಿ ಬಿಳಿಯ ರಂಗೋಲಿ ಪುಡಿಯಿಂದ ಇಟ್ಟ ಚುಕ್ಕಿ ರಂಗೋಲಿಯ ಸೊಗಸೇ ಬೇರೆ. ಆ ರಂಗೋಲಿಯೇ ಮನೆಗೊಂದು ಶೋಭೆ.

ಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭದ ಸಂಕೇತ. ರಂಗೋಲಿ ಇಲ್ಲದ ಮನೆ ಅಂದರೆ ಅದು ಅಶುಭ ಎಂಬ ನಂಬಿಕೆ ಇತ್ತು ಹೀಗಾಗಿ ಹಿಂದೆ ರಂಗೋಲಿಯಿಲ್ಲದ ಮನೆಗೆ ಸಾಧು ಸಂತರು ಭೇಟಿ ಕೊಡುತ್ತಿರಲಿಲ್ಲವಂತೆ. ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ.
ಮನೆಯ ಗೃಹಿಣಿ ಮುಂಜಾನೆ ಸ್ನಾನ ಮಾಡಿ ಶುಭ್ರಗೊಂಡು, ಎಲ್ಲಕ್ಕಿಂತ ಮೊದಲು ಮಾಡುವ ಕೆಲಸವೇ ಮನೆಯ ಮುಂದಿನ ಬಾಗಿಲು ಸಾರಿಸಿ ರಂಗೋಲಿ ಇಡುವುದು. ರಂಗೋಲಿ ಇಟ್ಟ ನಂತರ ತುಳಸಿಯ ಪೂಜೆ ಮಾಡಿಯೇ ಉಳಿದ ಕೆಲಸಗಳನ್ನು ಮಾಡುವುದು ಸಂಪ್ರದಾಯ. ಶುಭ ಕಾರ್ಯಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಮನೆಯ ಮುಂದೆ ವಿಶೇಷವಾಗಿ ರಂಗೋಲಿ ಹಾಕುವುದೇ ಒಂದು ಸಂಭ್ರಮ. ಲಲನೆಯರ ಗುಂಪೇ ರಂಗೋಲಿ ಸುತ್ತ ನೆರೆದಿರುತ್ತದೆ.
ಈ ರಂಗೋಲಿ ಸಂಸ್ಕೃತಿಗೆ 5000 ವರ್ಷಗಳ ಇತಿಹಾಸವಿದೆ. ಸಿಂಧೂ ನಾಗರಿಕತೆಯ ಸಂದರ್ಭದಲ್ಲಿಯೂ ಅಲ್ಲಿಯ ಜನರಿಗೆ ರಂಗೋಲಿ ಕಲೆ ಗೊತ್ತಿತ್ತು ಎಂಬುದು ತಿಳಿದುಬಂದಿದೆ. ಅವರಲ್ಲಿಯೂ ಕೂಡ ಮುಂಜಾನೆಯಲ್ಲಿ ಮನೆಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿ ಹಾಕುವ ಸಂಸ್ಕೃತಿ ರೂಢಿಯಲ್ಲಿತ್ತು. ಆ ಕಾಲದಿಂದಲೇ ರಂಗೋಲಿ ಕಲೆ ಭಾರತೀಯ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿದೆ.
ಭಾರತದ ಕನ್ಯಾಕುಮಾರಿಯಿಂದ ಹಿಡಿದು, ಹಿಮಾಲಯದ ವರೆಗಿನ ವಿವಿಧ ಹಿಂದೂ ಸಂಸ್ಕೃತಿಗಳಲ್ಲಿಯೂ ವಿಶಿಷ್ಠ ರಂಗೋಲಿ ಕಲೆಗಳಿವೆ. ಸಂಸ್ಕೃತಿಗಳಲ್ಲಿ ವೈವಿಧ್ಯತೆಗಳಿರುವಂತೆ ರಂಗೋಲಿಯ ಕಲೆಗಳಲ್ಲಿಯೂ ವೈವಿಧ್ಯತೆಗಳಿವೆ. ಆದರೆ ಆ ಎಲ್ಲ ಸಂಪ್ರದಾಯ, ಸಂಸ್ಕೃತಿಗಳಲ್ಲಿಯೂ ರಂಗೋಲಿಗೆ ವಿಶಿಷ್ಠ ಮೌಲ್ಯವಿದೆ ಅದರದ್ದೆ ಆದ ಗೌರವಗಳಿವೆ.
ಬಹಳಷ್ಟು ಬುಡಕಟ್ಟು ಜನಾಂಗಗಳಲ್ಲಿ ಅತ್ಯಂತ ಅಪರೂಪ ಅಂದೆನಿಸೊ ರಂಗೋಲಿಗಳು ಇಂದಿಗೂ ಜೀವಂತವಾಗಿವೆ. ಮನೆಯ ಗೋಡೆಗಳ ಮೇಲೆ ವಿಶಿಷ್ಟವಾಗಿ ಬರೆಯುವ ಜಾನಪದ ರಂಗೋಲಿ ಎಂಥವರನ್ನೂ ಆಕರ್ಷಿಸುವಂತಿದೆ. ಉತ್ತರಕನ್ನಡದ ಹಾಲಕ್ಕಿ ಸಮಾಜ, ದಕ್ಷಿಣ ಕರ್ನಾಟಕದಲ್ಲಿಯ ಗೋಮಕ್ಕಲು ಸಮಾಜದಲ್ಲಿ ಇಂದಿಗೂ ಬಳಕೆಯಲ್ಲಿರುವ ಈ ರಂಗೋಲಿ ಕಲೆಗೆ ಶೇಡಿ ಕಲೆ ಎಂಬ ಹೆಸರೂ ಇದೆ.
ಶೇಡಿ ಕಲೆ ಎಂಬ ಹೆಸರು ರಂಗೋಲಿ ಕಲೆಯ ಪರ್ಯಾಯ ನಾಮ. ಶೇಡಿ ಎಂದರೆ ಜೇಡಿಮಣ್ಣು.ಇದು ಬಿಳಿ ಬಣ್ಣದ್ದಿರುತ್ತದೆ. ಇದು ಕರಾವಳಿ ಪ್ರದೇಶದಲ್ಲಿ ವಿಶೇಷವಾಗಿ ದೊರಕುವ ವಿಶಿಷ್ಠ ಮಣ್ಣು. ಅವರ ಮನೆಯ ಮುಂದಿನ ಗೋಡೆಗೆ ಮೇಲೆ ಕೆಂಪು ಮಣ್ಣು ಬಳಿದು, ಈ ಬಿಳಿಯ ಶೇಡಿಯಿಂದ ರಂಗೋಲಿ ಬರೆಯುತ್ತಾರೆ. ಶೇಡಿ ಕಲೆಯಲ್ಲಿ ಬಳಕೆಯಾಗುವ ಕುಂಚಗಳು ಸ್ಥಳೀಯ ವಸ್ತುಗಳಿಂದ ತಯಾರಾಗುತ್ತವೆ. ಅಡಕೆಯ ಸಿಪ್ಪೆಯ ನಾರನಿಂದ ಕುಂಚಗಳನ್ನು ತಯಾರಿಸಿಕೊಂಡು ಅದನ್ನು ಶೇಡಿ ಬರೆಯಲು ಉಪಯೋಗಿಸುತ್ತಾರೆ.
ಇಂದಿಗೂ ಮಲೆನಾಡ ಸಂಸ್ಕೃತಿಯಲ್ಲಿ, ದೀಪಾವಳಿ ಹಬ್ಬದಲ್ಲಿ ಮನೆಯಲ್ಲಿ, ಕೊಟ್ಟಿಗೆಯ ಮುಂದೆ, ಗೋವುಗಳನ್ನು ಕಟ್ಟುವ ಸ್ಥಳದಲ್ಲಿ ಶೇಡಿ ಬರೆಯುವ ಸಂಸ್ಕೃತಿ ಇದೆ. ಶೇಡಿ ಬರೆದ ಮಣೆಗೆ ಅತ್ಯಂತ ಪ್ರಾಮುಖ್ಯತೆ ಇದ್ದು, ಮದುಮಕ್ಕಳು ಹಾಗು ಮುಂಜಿಯ ಬಾಲಕ ಕೂರು ಮಣೆಗೂ ಕೂಡ ಶೇಡಿ ಬರೆಲಾಗುತ್ತದೆ.
ರಂಗೋಲಿಯ ಮತ್ತೊಂದು ಪರುತಾನ ವೈವಿಧ್ಯಗಳಲ್ಲೊಂದಾಗ ಹಸೆ ಚಿತ್ತಾರ ಕೂಡ ಮಲೆನಾಡ ಪ್ರದೇಶಗಳಲ್ಲಿ ಕಂಡುಬರುವ ವಿಶಿಷ್ಟ ಕಲೆ. ರಂಗೋಲಿ, ನೆಲದ ಮೇಲಾದ್ದರಿಂದ ಬಿಳಿ ಹಾಗೂ ಬಣ್ಣದ ಪುಡಿಗಳನ್ನು ಬಳಸಲಾಗುತ್ತದೆ. ಹಸೆ ಚಿತ್ತಾರ ಗೋಡೆಯ ಮೇಲಾದ್ದರಿಂದ ದಪ್ಪ ದ್ರಾವಣವನ್ನು ಚಿತ್ರ ರಚಿಸಲು ಬಳಸಲಾಗುತ್ತದೆ. ನೆಲದ ಮೇಲಿನ ರಂಗೋಲಿ ತಾತ್ಕಾಲಿಕವಾದುದು; ಗೋಡೆಯ ಮೇಲಿನ ಹಸೆ ಕೆಲವು ಕಾಲ ಉಳಿಯುವಂತಹುದು.

ಹಿಂದೆ ರಂಗೋಲಿಯ ರಂಗು ಹೆಚ್ಚಿಸುವುದಕ್ಕೆ, ಶೇಡಿ, ರಂಗೋಲಿ ಪುಡಿಗಳ ಜೊತೆ ಬಣ್ಣ ಬಣ್ಣದ ಕಲ್ಲಿನ ಪುಡಿಗಳನ್ನು ಬಳಸುತ್ತಿದ್ದರು. ಬೇರೆ ಬೇರೆ ಬಣ್ಣದ ಕಲ್ಲುಗಳನ್ನು ತಂದು ಅದನ್ನು ಪುಡಿ ಮಾಡಿ, ರಂಗೋಲಿಗೆ ಬರೆಯಲು ಬಳಸುತ್ತಿದ್ದರಂತೆ. ಕಪ್ಪು ಬಣ್ಣಕ್ಕಾಗಿ “ರಾಗಿ”ಯ ಬಳಸುತ್ತಿದ್ದರಂತೆ. ರಾಗಿಯ ಜೊತೆ ತೆಂಗಿನ ಕಾಯಿಯ ಸಣ್ಣ ಚೂರನ್ನು ಹಾಕಿ ಅವೆಲ್ಲವೂ ಕಪ್ಪಾಗುವವರೆಗೆ ಹುರಿದು ನಾರನ್ನು ಸೇರಿಸಿ ಅರೆದು ಕುದಿಸಿ ಕಪ್ಪು ಬಣ್ಣಕ್ಕಾಗಿ ಬಳಸುತ್ತಿದ್ದರಂತೆ.
ಕೇರಳದಲ್ಲಿ ಓಣಂ ಹಬ್ಬದ ವಿಶೇಷವಾಗಿರುವ ಪುಷ್ಪರಂಗೋಲಿಯ ವೈಭವವಂತೂ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದೆ.
ಹೀಗೆ ವೈವಿಧ್ಯ ಸಂಪ್ರದಾಯ, ಕಲೆಯೊಂದಿಗೆ ಅತ್ಯಂತ ಸಿರಿವಂತೆ ನಮ್ಮ ಭಾರತ ಮಾತೆ. ಸಾಮಾನ್ಯವಾಗಿ ಸಂಸ್ಕೃತಿ ಜೀವಂತವಾಗಿರುವುದೇ ಗ್ರಾಮೀಣ ಪ್ರದೇಶದಲ್ಲಾಗಿರುವುದರಿಂದ ರಂಗೋಲಿಯ ನಿಜವಾದ ರಂಗು, ಅದಕ್ಕಿರುವ ನೈಜ ಗೌರವವನ್ನು ಅರಿಯಬೇಕೆಂದರೆ ನಾವು ಹಳ್ಳಿಗಳಿಗೆ ಹೋಗಿ ನೋಡಲೇ ಬೇಕು. ರಂಗೋಲಿಯ ವೈವಿಧ್ಯ ಮತ್ತು ಅದಕ್ಕಿರುವ ಗೌರವದ ನಿಜವಾದ ಅನುಭವವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ, ದೇವಸ್ಥಾನಗಳಲ್ಲಿ ಮಾತ್ರ ನಾವು ಈ ರಂಗೋಲಿಗಳನ್ನು ನೋಡುತ್ತಿದ್ದೇವೆ. ಆಧುನಿಕತೆಯ ಭರಾಟೆಯಲ್ಲಿ ರಂಗೋಲಿ ಸಂಸ್ಕೃತಿ ನಿಧಾನವಾಗಿ ಅಳಿವಿನತ್ತ ವಾಲುತ್ತಿದೆ ಎಂಬುದನ್ನು ಮಾತ್ರ ಸಿದ್ಧ ಸತ್ಯ. ಭಾರತದ ಅತ್ಯಂತ ವಿಶಿಷ್ಠ ಸಂಸ್ಕೃತಿಯಾದ ಈ ರಂಗೋಲಿ ಕಲೆ ಉಳಿವಿಗೆ ಪ್ರಯತ್ನಿಸಲೇಬೇಕಾದ ಜವಾಬ್ದಾರಿ ಎಲ್ಲ ಸಂಸ್ಕೃತಿವಂತ ಭಾರತೀಯರ ಮೇಲಿದೆ.
ಆಧಾರ: bangalorewaves ಅಮೃತಾ ಹೆಗಡೆ. ಚಿತ್ರ: mariappanart.blogspot.in