ಯಾಮಿನಿ ಕೃಷ್ಣಮೂರ್ತಿ (ಜನನ: ೧೯೪೦, ಚಿದಂಬರಂ, ತಮಿಳುನಾಡು, ಒಂದು ತೆಲುಗು ಕುಟುಂಬದಲ್ಲಿ) ಭಾರತದ ಒಬ್ಬ ಪ್ರಸಿದ್ಧ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯ ಕಲಾವಿದೆ. ಹುಣ್ಣಿಮೆಯ ದಿನ ಜನಿಸಿದ್ದ ಅವರಿಗೆ ಅವರ ಅಜ್ಜ ಪ್ರೀತಿಯಿಂದ, ‘ಪೂರ್ಣತಿಲಕ’, ಎಂದು ನಾಮಕರಣಮಾಡಲು ಸೂಚಿಸಿದ್ದರು.
೧೯೫೭ ರಲ್ಲಿ ಚೆನ್ನೈನಲ್ಲಿ (ಹಿಂದಿನ ಹೆಸರು ಮದ್ರಾಸು) ಆರಂಭವಾದ ಯಾಮಿನಿಯವರ ನೃತ್ಯ ವೃತ್ತಿ ಹಲವು ಪ್ರಮುಖ ಘಟನೆಗಳನ್ನು ಒಳಗೊಂಡಿದೆ. ಅವರಿಗೆ ತಿರುಪತಿ ತಿರುಮಲ ದೇವಸ್ಥಾನದ ಆಸ್ಥಾನ ನರ್ತಕಿಯಾಗುವ ಗೌರವ ಪ್ರಾಪ್ತವಾಗಿದೆ. ಅವರ ನೃತ್ಯ ವೃತ್ತಿಯಲ್ಲಿ ಅವರಿಗೆ ಪದ್ಮಶ್ರೀ (೧೯೬೮), ಪದ್ಮಭೂಷಣ (೨೦೦೧), ಸಂಗೀತ ನಾಟ್ಯ ಅಕ್ಯಾಡಮಿ ಪ್ರಶಸ್ತಿ (೧೯೭೭) ಸಹಿತ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಜನನ, ಮತ್ತು ಬಾಲ್ಯ :
ಪ್ರಖ್ಯಾತ ಕುಚಿಪುಡಿ ನಾಟ್ಯ ಪ್ರದರ್ಶನದಿಂದ ಭಾರತೀಯ ನೃತ್ಯ ಪರಂಪರೆಯಲ್ಲಿ ಒಂದು ಹೊಸ ಅಧ್ಯಾಯವನ್ನು ಸ್ಥಾಪಿಸಿದ ಪ್ರಖ್ಯಾತ ನೃತ್ಯಾಂಗನೆ, ಶ್ರೀಮತಿ ಯಾಮಿನಿ ಕೃಷ್ಣಮೂರ್ತಿ. ತಮಿಳುನಾಡಿನ ಚಿದಂಬರಂ ನಲ್ಲಿ, ೧೯೪೦ ರಲ್ಲಿ ಜನಿಸಿದರು. ಅವರ ತಂದೆ ತಾಯಿಗಳು ತೆಲುಗು ಬ್ರಾಹ್ಮಣರು. ಕೇವಲ ೫ ವರ್ಷದವರಾಗಿದ್ದಾಗಲೇ, ಮದ್ರಾಸ್ ನಲ್ಲಿದ್ದಾಗ, ಅಂದಿನಕಾಲದ, ಅತ್ಯಂತ ಪ್ರಖ್ಯಾತ ನೄತ್ಯಾಂಗನ, ಶ್ರೀಮತಿ ರುಕ್ಮಿಣೀದೇವಿ ಅರುಂಡೇಲ್, ರವರಿಂದ ಪ್ರಶಿಕ್ಷಣ ಪಡೆದರು. ಮುಂದಿನ ವಿದ್ಯಾಭ್ಯಾಸವನ್ನು, ಹಲವು ಗುರುಗಳಲ್ಲಿ ಕಲಿತರು.
ನಾಟ್ಯಕಲೆಯಲ್ಲಿ ಪ್ರಶಿಕ್ಷಣ :
ಪ್ರಾಥಮಿಕ ಶಿಕ್ಷಣದ ನಂತರ, ತಂಜಾವೂರಿನ, ಕಿಟ್ಟಪ್ಪಪಿಳ್ಳೆ, ಯವರ ಮಾರ್ಗದರ್ಶನದಲ್ಲಿ ಕಲಿತರು. ಧಂಡಾಯುಧ ಪಿಳ್ಳೆ, ಕಂಚೀಪುರಂ ಎಲ್ಲಪ್ಪ ಪಿಳ್ಳೆ, ಮತ್ತು ಮೈಸೂರು ಗೌರಮ್ಮ, ಅವರಲ್ಲಿದ್ದ ನೃತ್ಯಾಸಕ್ತಿಗೆ ನೀರೆರದು ಚೆನ್ನಾಗಿ ಪೋಶಿಸಿದರು. ಇದಾದ ಕೂಡಲೇ ಮದ್ರಾಸ್ ನಲ್ಲಿ ೧೯೫೭ ರಲ್ಲಿ, ತಮ್ಮ ಮೊಟ್ಟಮೊದಲ ಪ್ರದರ್ಶನವನ್ನು ಏರ್ಪಡಿಸಿದರು. ತಮ್ಮ ಅಸಮಾನ್ಯ ಸೌಂದರ್ಯ, ಆಕರ್ಶಕ ವ್ಯಕ್ತಿತ್ವ, ಕಲಾಪ್ರತಿಭೆಗಳಿಂದ, ಸ್ವಲ್ಪಸಮಯದಲ್ಲಿಯೇ, ಅವರು ಎಲ್ಲರ ಕಣ್ಮಣಿಯಾದರು.
೧೯೯೦ ರ ಹೊತ್ತಿಗೆ, ಅವರು, ನೃತ್ಯಕಲಾ ಕ್ಷೇತ್ರದಲ್ಲಿ ಒಂದು ಪರಂಪರೆಯನ್ನೇ ಸ್ಥಾಪಿಸಿದ್ದರು. ರಾಷ್ಟ್ರದ ಮೂಲೆ ಮೂಲೆಗಳಲ್ಲೂ ನೃತ್ಯಕಲಾ ಕ್ಷೇತ್ರದಲ್ಲಿ ಅವರ ಹೆಸರು ಕೇಳಿಬರುತ್ತಿತ್ತು. ಆ ಹೆಸರನ್ನು ಇನ್ನೂ ಉಚ್ಛಸ್ಥಾನಕ್ಕೆ ಕೊಂಡೊಯ್ಯಲು ಅವರು ಸದಾ ಶ್ರಮಿಸುತ್ತಿದ್ದರು. ಈಗ ನಾಲ್ಕೂವರೆ ದಶಕಗಳ ನಂತರವೂ, ತಮ್ಮ ಅಪಾರ ಪ್ರಶಸ್ತಿಗಳು, ಸನ್ಮಾನಗಳು ಅವರನ್ನು ತಣಿಸಿಲ್ಲ. ಇನ್ನೂ ಉನ್ನತ ಶಿಖರಮಟ್ಟವನ್ನು ಏರಲು ಸತತ ಪ್ರಯತ್ನನಡೆಯುತ್ತಿದೆ.
ನವ-ದೆಹಲಿಯಲ್ಲಿ, ವಾಸ್ತವ್ಯಹೂಡಿರುವ ಯಾಮಿನಿಯವರು, ತಮ್ಮ ನೃತ್ಯ ಶಿಕ್ಷಣಶಾಲೆಯನ್ನು ತೆರೆದರು. ಅಲ್ಲಿ ಭಾರತದ ಭಾವಿ ಯುವ-ಕಲಾಕಾರರರನ್ನು ತಯಾರಿಸುವ ಪ್ರಯತ್ನದಲ್ಲಿ, ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.