ಯಳಂದೂರು ತಾಲ್ಲೂಕು

ಯಳಂದೂರು ತಾಲ್ಲೂಕು: ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. ೧೦೧೮ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು. ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ ಸಂಚಿ ಹೊನ್ನಮ್ಮ ರಚಿಸಿದ ಹದಿಬದಿಯ ಧರ್ಮ ಶ್ರೇಷ್ಠ ಕೃತಿಗಳಾಗಿವೆ. ಇಂತಹ ಪುಣ್ಯ ಭೂಮಿಯಲ್ಲಿ (ಸುವರ್ಣಾವತಿ) ಹೊನ್ನು ಹೊಳೆ ಹರಿಯುತ್ತದೆ. ಇದಕ್ಕೆ ಇರುವ ದಂತ ಕಥೆಯ ಉಲ್ಲೇಖವು ಶಾಸನವೊಂದರಲ್ಲಿ ದೊರೆಯುತ್ತದೆ. ಯಳಂದೂರು ಸಂಸದ್ಭರಿತವಾದ ಹಾಗೂ ಜನಾಕರ್ಷಕವಾದ ಸ್ಥಳವಾಗಿದ್ದು ನಿರ್ದಿಷ್ಟ ರಾಜಮನೆತನಗಳು ಇದ್ದವು ಎಂಬುದು ತಿಳಿದು ಬಂದಿದೆ.

ಬಳೇ ಮಂಟಪ

Chamarajnagarಯಳಂದೂರಿನ ಗೌರೀಶ್ವರ ದೇವಾಲಯದ ಮುಖ ಮಂಟಪವನ್ನು ಕ್ರಿ.ಶ. ೧೬೫೪ರಲ್ಲಿ ಮುದ್ದುರಾಜನು ಬಹಳ ರಮ್ಯವಾಗಿ ಕಟ್ಟಿಸಿದ್ದಾನೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ ೨೭ ಕಲ್ಲಿನ ರಥವನ್ನು ಹೋಲುತ್ತದೆ. ಈ ಮಂಟಪವು ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಈ ಮಂಟಪವೂ ಚತುರ್ಮುಖಗಳನ್ನು ಹೊಂದಿದ್ದು ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ. ಶಿಲೆಯ ಗೋಡೆಯಲ್ಲಿ ಶೈವ ಪುರಾಣದ, ರಾಮಾಯಣದ ಹಾಗೂ ಮಹಾಭಾರತದ ಕೆಲವು ಘಟನೆಗಳನ್ನು ಅತ್ಯಂತ ಮನೋಹರವಾಗಿ ಸುಂದರವಾಗಿ ಕೆತ್ತಿರುವುದನ್ನು ನೋಡಬಹುದು. ಈ ಮಂಟಪದ ಮಧ್ಯಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ಮನೋಹರವಾಗಿದೆ. ಈ ಮಂಟಪದ ಮೂಲೆಗಳಲ್ಲಿ ಬಳೆಗಳನ್ನು ಒಂದರೊಳಗೊಂದು ಜೋಡಿಸಿದಂತೆ ಒಂದೇ ಕಲ್ಲಿನಿಂದ ಮಾಡಿರುವುದು ಅದ್ಭುತವಾಗಿದೆ. ಈ ಬಳೆಗಳು ಇರುವುದರಿಂದಲೇ ರೂಢಿಯಿಂದ ಈ ಮಂಟಪವನ್ನು ಬಳೆ ಮಂಟಪ ಎಂದು ಕರೆಯುತ್ತಾರೆ.

ಗೌರೀಶ್ವರ ದೇವಾಲಯ

Gowri Templeಯಳಂದೂರಿನಲ್ಲಿರುವ ಗೌರೀಶ್ವರ ದೇವಾಲಯದ ವೈಶಿಷ್ಟತೆಯನ್ನು ತಿಳಿಯಲು ಇಲ್ಲಿರುವ ಶಿಲಾಶಾಸನ ಒಂದೇ ಆಧಾರ ಯಳಂದೂರಿನಲ್ಲಿ ಆಳಿದ ರಾಜ ಮನೆತನಗಳಲ್ಲಿ ಪದಿನಾಡ ಅರಸರೇ ಪ್ರಮುಖರು. ಈ ಮನೆತನದ ಮೊದಲನೆರಾಜ ಸಿಂಗದೇವಭೂಪನು ಗೌರೀಶ್ವರ ದೇವಾಲಯವನ್ನು ಮುದ್ದುರಾಜನು ಕ್ರಿ.ಶ. ೧೬೫೪ರಲ್ಲಿ ದೇವಾಲಯದ ಮುಖ ಮಂಟಪ ಪಂಚಲಿಂಗಗಳನ್ನೊಳಗೊಂಡ ಗುಡಿಗಳನ್ನು ಕಟ್ಟಿಸಿದ್ದಾನೆ. ಈ ಗೌರೀಶ್ವರನು ಹಿಂದೆ ಕೃತಾಯುಗದಲ್ಲಿ ಜಮದಗ್ನಿ ಮಹಾರ್ಷಿಯಿಂದ “ತ್ರಿಪುರಾಂತಕ”ನೆಂದೂ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ “ನೀಲಕಂಠ” ನೆಂದೂ, ದ್ವಾಪರಾಯುಗದಲ್ಲಿ ಪಾಂಡವರಿಂದ ಲೋಕೇಶ್ವರನೆಂದೂ ಕಲಿಯುಗದಲ್ಲಿ ಪದಿನಾಡಿನ ರಾಜ ವಂಶಸ್ಥರು ಗೌರೀಶ್ವರನೆಂದೂ ಪೂಜಿಸುತ್ತಿದ್ದರು. ಈ ದೇವಾಲಯದ ಆವರಣದಲ್ಲಿರುವ ಎರಡು ಪಗಡೆ ಮರಗಳು ದೇವಾಲಯದ ಆವರಣವನ್ನು ಬೇಸಿಗೆಯಲ್ಲೂ ತಂಪಾಗಿಸುತ್ತಿದೆ.

ಬಿಳಿಗಿರಿರಂಗನಬೆಟ್ಟ

Biligiri godಪೂರ್ವ ಘಟ್ಟದಲ್ಲಿ ಮಲೈ ಮಹಾದೇಶ್ವರ ಬೆಟ್ಟ ಶ್ರೇಣಿ ಹಾಗೂ ದಿಂಬಮ್ ಬೆಟ್ಟ ಶ್ರೇಣಿಗಳ ನಡುವೆ ೩೦ ಮೈಲಿ ದೂರ ಫಲವತ್ತಾದ ಮಣ್ಣು ಮತ್ತು ದಟ್ಟ ಅರಣ್ಯದಿಂದ ಕೂಡಿರುವ ಬೆಟ್ಟವೇ ಬಿಳಿಗಿರಿರಂಗನ ಬೆಟ್ಟ. ಯಳಂದೂರು ತಾಲ್ಲೂಕಿನಿಂದ ೨೪ ಕಿ.ಮೀ. ದೂರದಲ್ಲಿರುವ ಈ ಬೆಟ್ಟವು ಬಿಳಿಕಲ್ಲು ಬೆಟ್ಟ. ಶ್ವೇತಾದ್ರಿಬೆಟ್ಟ. ಬಿಳಿಗಿರಿರಂಗಸ್ವಾಮಿ ಬೆಟ್ಟ ಎಂದು ಹಲವಾರು ಹೆಸರುಗಳಿಂದ ಪ್ರಸಿದ್ಧವಾಗಿದೆ. ಈ ಬೆಟ್ಟವು ಸಮುದ್ರಮಟ್ಟದಿಂದ ೪೪೭೦ ಅಡಿಗಳ ಎತ್ತರದಲ್ಲಿದ್ದು, ಔಷಧಿ ಸಸ್ಯಗಳಿಂದಲೂ, ತೇಗ, ಬೀಟೆ, ಹೊನ್ನೇ, ಮತ್ತಿ, ಬಿದುರು, ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ, ಆನೆ, ಕಾಡೆಮ್ಮೆ, ಕರಡಿ, ಮುಂತಾದ ಕಾಡು ಮೃಗಗಳು ಇವೆ. ಈ ಕಾನನ ಪ್ರದೇಶವನ್ನು ಪಾಂಡವರ ಕಾಲದಲ್ಲಿ ಚಂಪಕಾರಣ್ಯ ಎಂದು, ಗಂಗರ ಕಾಲದಲ್ಲಿ ಗಜಾರಾಣ್ಯ ಎಂದು ಕರೆಯುತ್ತಿದ್ದರು. ಶಿಲಾಯುಗದ ಮಾನವರು ಬಳಸುತ್ತಿದ್ದ ಆಯುಧಗಳು, ಮಡಿಕೆಗಳು, ಮತ್ತು ಅವರ ಸಮಾಧಿಗಳು, ಕಂಡು ಬಂದಿದೆ. ಬಿಳಿಗಿರಿರಂಗಸ್ವಾಮಿ ಬೆಟ್ಟದಲ್ಲಿರುವ ಶ್ರೀ ರಂಗಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ದೊಡ್ಡ ಜಾತ್ರೆಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ.

ದೊಡ್ಡ ಸಂಪಿಗೆ

Dodda Sampigeಇದು ಬಿಳಿಗಿರರಂಗನ ಬೆಟ್ಟದ ಕಾಡಿಗೆ ಸೇರಿದ ಪ್ರದೇಶದಲ್ಲಿದ್ದು ಈ ಸ್ಥಳದಲ್ಲಿ ಭಾರ್ಗವೀ ನದಿ ನಯನ ಮನೋಹರವಾದ ಕಣಿವೆಯಲ್ಲಿ ಹರಿಯುತ್ತಿದೆ. ಪರಶುರಾಮನು ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸಾಚರಿಸಿದ ರೆಂದು ಪ್ರತೀತಿ. ಈ ಸ್ಥಳದಲ್ಲಿ ದೊಡ್ಡ ಸಂಪಿಗೆ ವೃಕ್ಷವಿದೆ. ಈ ಮಹಾವೃಕ್ಷದಲ್ಲಿ ೩ ಕೊಂಬೆಗಳಿದ್ದು ಇವು ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದು ತಿಳಿಯಲಾಗಿದೆ. ಈ ಮಹಾವೃಕ್ಷವನ್ನು ‘ಸೋಲಿಗರು’ ತಮ್ಮ ಆರಾಧ್ಯ ದೈವವಾಗಿ ಭಯ ಭಕ್ತಿಯಿಂದ ಪೂಜಿಸುತ್ತಾರೆ.

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ.)

Vivekananda Girija Kalyanaತಲೆತಲಾಂತರದಿಂದ ಗುಡ್ಡಗಾಡುಗಳಲ್ಲಿ ಸಂಚರಿಸುತ್ತಾ ನಾಡಿನ ಸಂಪರ್ಕವನ್ನು ಕಳೆದುಕೊಂಡಿದ್ದ ಸೋಲಿಗ ಬುಡಕಟ್ಟು ಜನರಲ್ಲಿ ಆತ್ಮ ವಿಶ್ವಾಸ ತುಂಬಿ ವಂಶ ಪರಂಪರೆಯಾಗಿ ಅವರಲ್ಲಿ ಮನೆ ಮಾಡಿದ್ದ ಅನಿಮಿಯ ರೋಗದಿಂದ ಅವರನ್ನು ಪಾರು ಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ದೆಸೆಯಲ್ಲಿ ೧೯೮೧ರಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರವೇ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ.

ಸೋಲಿಗರ ಪ್ರಗತಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಕೇಂದ್ರ ಅವರಿಗೆ ಸೀಮಿತವಾಗಿರದೆ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಪಣಿಯ, ಹಕ್ಕಿಪಿಕ್ಕಿ, ಯರವ, ಲಂಬಾಣಿ,ಕೊರಮ ಇತ್ಯಾದಿ ಬುಡಕಟ್ಟಿನ ಜನರ ಪ್ರಗತಿಗೆ ಶ್ರಮಿಸುತ್ತಿದೆ.

ಆರಂಭದಲ್ಲಿ ಏಳು ಮಕ್ಕಳ ಪ್ರವೇಶದೊಂದಿಗೆ ಆರಂಭವಾದ ಪ್ರಾಥಮಿಕ ಶಾಲೆ, ಇಂದು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಮತ್ತು ವೃತ್ತಿಪರ ಕಾಲೇಜನ್ನು ಹೊಂದಿರುವುದರ ಜೊತೆಗೆ ಸಾಮಾಜಿಕವಾಗಿಯೂ ಬೆಳೆದು ಹೆಮ್ಮರವಾಗಿದೆ. ಮತ್ತು ಬುಡಕಟ್ಟು ಜನರ ಅರಿವಿನ ಆಶ್ರಮಧಾಮವಾಗಿದೆ.
ಸೋಲಿಗರ ಬದುಕನ್ನು ಹಸನು ಮಾಡಲು ಜೀವನ ತ್ಯಾಗ ಮಾಡಿದ ಡಾ. ಎಚ್. ಸುದರ್ಶನ್ ರವರಿಗೆ ಮಹತ್ತ್ಯಾರ‍್ಯವನ್ನು ಪ್ರಶಂಸಿಸಿ ೯ ಡಿಸೆಂಬರ್ ೧೯೯೪ರಂದು ಅಂತರರಾಷ್ಟ್ರೀಯ ಸಂಸ್ಥೆಯೊಂದು ‘ರೈಟ್ ಲೈವಿಲಿಹುಡ್ ಅವಾರ್ಡ್’ನೀಡಿ ಗೌರವಿಸಿದೆ.

ಪುಸ್ತಕ: ಚಿಣ್ಣರ ಜಿಲ್ಲಾ ದರ್ಶನ ಚಾಮರಾಜನಗರ
ಪ್ರಕಾಶಕರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ
ಆಧಾರ: ಕಣಜ

Review Overview

User Rating: 5 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಹೊಯ್ಸಳ ವಾಸ್ತುಶಿಲ್ಪ

ಹೊಯ್ಸಳ ವಾಸ್ತುಶಿಲ್ಪ

ಕರ್ನಾಟಕವನ್ನು ಬಹುಕಾಲದವರೆವಿಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡನಾಡಿನಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಕನ್ನಡನಾಡಿನಲ್ಲಿ …

Leave a Reply

Your email address will not be published. Required fields are marked *