ಮುದೇನೂರು ಸಂಗಣ್ಣ (೧೭.೦೩.೧೯೨೭ – ೨೬.೧೦.೨೦೦೮): ‘ಜಾನಪದ ಜಂಗಮ’ರೆಂದು ಪ್ರಖ್ಯಾತಿ ಪಡೆದಿದ್ದು ಜಾನಪದ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರಾಗಿದ್ದಾರೆ.
ಜೀವನ: ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ್ಲಿ ದೊಡ್ಡ ವ್ಯಾಪಾರಿ ಹಾಗೂ ಜಮೀನುದಾರಿ ಕುಟುಂಬದಲ್ಲಿ ಸಂಗಣ್ಣನವರು ಮಾರ್ಚ್ 17, 1927ರಲ್ಲಿ ಜನಿಸಿದರು. ಅವರಿಗೆ ಬಾಲ್ಯದಿಂದಲೂ ಸಂಗೀತ ನಾಟಕ ಹುಚ್ಚು. ಬಳ್ಳಾರಿ ಸೀಮೆಯ ಈ ಸಿರಿವಂತ ಕುಟುಂಬಗಳ ಒಂದು ಲಕ್ಷಣವಿದು ಎಂದು ಕಾಣುತ್ತದೆ. ಜೋಳದರಾಶಿ ದೊಡ್ಡನಗೌಡರಿಗೂ ಇದಿತ್ತು. ಇದೇ ಕಾರಣಕ್ಕೆ ಸಂಗಣ್ಣನವರಿಗೆ ರಂಗಭೂಮಿಯ ವ್ಯಕ್ತಿತ್ವಗಳಾದ ಶಿವರಾಮ ಕಾರಂತ, ಕೆ ವಿ ಸುಬ್ಬಣ್ಣ ಮುಂತಾದವರ ಜತೆ ಗೆಳೆತನವಿತ್ತು.
ಚಿಗಟೇರಿಗೆ ಸಂಗಣ್ಣನವರ ತಂದೆ ಮುದೇನೂರು ಕೊಟ್ರಬಸಪ್ಪನವರು. ಇವರ ಅಜ್ಜ ಬಡ್ಡಿಖಾತೆ ವ್ಯವಹಾರ ಮಾಡುತ್ತಿದ್ದವರು. ಯಾವುದೇ ಪತ್ರಗಳೇ ಇಲ್ಲದ ಹಾಗೆ ಎಲ್ಲಾ ವಿಶ್ವಾಸದಿಂದ ವ್ಯವಹಾರ ನಡೆಸುತ್ತಿದ್ದವರು. ಸುಮಾರು 700 ಎಕರೆ ಜಮೀನು ಇವರ ಸ್ವಾದೀನದಲ್ಲಿತ್ತು. ಎಳೆವಯಸ್ಸಿನಲ್ಲಿ ಅವರು ರಾಜಕಾರಣದಲ್ಲಿದ್ದರು. ಬೆಳಗಾಂವಿಯಲ್ಲಿ ಆದಂತ ಅಖಿಲಭಾರತ ಕಾಂಗ್ರೆಸ್ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಂಥವರು. ಕೊನೇವರಗೂ ರಾಜಕೀಯದಲ್ಲಿ ಸಕ್ರಿಯವಾಗಿ ಇದ್ರು. ಕಾಂಗ್ರೆಸ್‌ನಲ್ಲೇ ಇದ್ದವರು.
ಬಾಲ್ಯದಲ್ಲೇ ಅರಳಿದ ಸಾಹಿತ್ಯ ಪ್ರತಿಭೆ: ಸಂಗಣ್ಣನವರು ಚಿಕ್ಕವಯಸ್ಸಿನಲ್ಲಿ ಊರ್ನಬಲ್ಲಿ ಚೆಂಡು ಆಡೋದು, ಚಿಣಿ ಆಡೋದು ಇದ್ರೆ, ಸಾವ್ಕಾರ್ ಮಗ ಅಂತ ಪಾರ್ಟಿ ಕಟ್ಟಿ ಯಾವುದೋ ಒಂದು ಪಕ್ಷಕ್ಕೂ ಸೇರಿಸುತ್ತಿರಲಿಲ್ಲವಂತೆ. ‘ಕೆಲವರು ಯಾವಾಗಲೂ ಆಡೋದೇ, ಸೋಲೊ ಪ್ರಶ್ನೆ ಇಲ್ಲೇ ಇಲ್ಲ. ಹುಳಿಸೊಪ್ಪು ಅಂತಾರ ಅದಕೆ. ಯಾವುದಕ್ಕ ಹಾಕಿದ್ರೂ ಹೊಂದಾಣಿಕೆ ಆಗ್ತದಂತೆ. ಹಂಗ ನಾನು ಬೆಳೆದವ. ಈ ಕಾರಣದಿಂದ ನನಗೆ ಕ್ರೀಡಾ ಮನೋಭಾವ ಇದ್ದಿಲ್ಲ.” ಎನ್ನುತ್ತಿದ್ದರು ಸಂಗಣ್ಣ. ಹರಪನಹಳ್ಳಿ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳೋಣ ಅಂತ ಹೆಡ್‌ಮಾಸ್ತರ್ ಹತ್ರ ಹೆಸರು ಕೊಡ್ಲಿಕ್ಕೆ ಹೊದ್ರೆ ”ನೀನೇನ್ ಭಾಷ್ಣ ಮಾಡ್ತಿಯೋ? ನಾಳಿ ಬಂದು ಕರ್ನಾಟಕ ಏಕೀಕರಣದ ಬಗ್ಗೆ ಒಂದೈದ್ ನಿಮಿಷ ಮಾತಾಡು” ಅಂದರಂತೆ. ಇವರಿಗೇ ಪ್ರಥಮ ಬಹುಮಾನ ಬಂತು. ಅದರಿಂದ ಸ್ಫೂರ್ತಿ ಬಂದಂತಾಗಿ ‘ಮಾಸ್ತಿ’ ಮೇಲೆ ಒಂದು ಪದ್ಯ ಬರೆದರು. ಗುರುಗಳು ಅದನ್ನ ತಿದ್ದುಪಡಿ ಮಾಡಿ ಮುದ್ರಣ ಮಾಡಿಸಿದ್ದೇ ಅಲ್ಲದೆ ಅದನ್ನ ಅಳವಡಿಸಿ ಸಣ್ಣ ಹುಡಿಗೇರಿಂದ ಹಾಡಿಸಿದರು. ಹಿಂಗಾಗಿ ಸಾಹಿತ್ಯದ ಬಗ್ಗೆ ಸಂಗಣ್ಣನವರಿಗೆ ಸಾಹಿತ್ಯದಲ್ಲಿ ಇನ್ನಿಲ್ಲದ ಉತ್ಸಾಹ ಮೂಡಿಬಂತು. ಮುಂದೆ ಹರಪನಹಳ್ಳಿಯ ಪ್ರೌಢಶಾಲೆಯಲ್ಲಿನ ಸಮಾರಂಭಗಳಿಗೆ ಬೇಂದ್ರೆ, ಬಿ ಎಂ ಶ್ರೀಕಂಠಯ್ಯ, ವಿ.ಸೀತಾರಾಮಯ್ಯ, ಅ.ನ.ಕೃಷ್ಣರಾಯರು ಬಂದು ಹೋಗಿದ್ದು ಸಾಹಿತ್ಯದ ಬಗ್ಗೆಯೇ ಗುಂಗು ಹಿಡಿಸೊ ವಾತಾವರಣವೊಂದು ಸಂಗಣ್ಣನವರಲ್ಲಿ ಬೀಡುಬಿಟ್ಟಿತ್ತು. ಪದ್ಯ ಬರಿಯಲಿಕ್ಕೆ ಪ್ರಾರಂಭ ಮಾಡಿದರು. ಇನ್ನೂ ಹೈಸ್ಕೂಲಿನ ಎರಡನೇ ವರ್ಷದಲ್ಲಿ ಓದುತ್ತಿರುವಾಗಲೇ ಇವರ ಪದ್ಯಗಳು ಪ್ರಸಿದ್ಧ ’ಜಯಂತಿ’ಯಲ್ಲಿ ಪ್ರಕಟಗೊಂಡಿದ್ದವು; ’ಜೀವನ’ ಪತ್ರಿಕೆಯಲ್ಲಿ ಕಥೆ, ಲೇಖನಗಳನ್ನು ಬರೆಯುತ್ತಿದ್ದರು.
ಕಾಲೇಜು ದಿನಗಳು: ಸಂಗಣ್ಣನವರು ಬಳ್ಳಾರಿ ಜಿಲ್ಲೆಯವರು. ವಿಚಿತ್ರ ಅಂದರೆ ಅವರ ಸಂಪರ್ಕ ಹೆಚ್ಚು ಇದ್ದದ್ದು ದಕ್ಷಿಣ ಕನ್ನಡದಲ್ಲಿ. ಸಂಗಣ್ಣನವರು ಸೇರಿದ್ದು ಮದನಪಲ್ಲಿಯ ಥಿಯಾಸಾಪಿsಕಲ್ ಕಾಲೇಜು. ಇವರ ಗುರುಗಳಲ್ಲಿ ಒಬ್ಬರು ಅನಂದರಾಯ ಅಂತ ಇದ್ರು. ಅವರ ಶಿಫಾರಸ್ಸಿನ ಮೇಲೆ ಸಂಗಣ್ಣನವರು ಥಿಯಾಸಾಪಿsಕಲ್ ಕಾಲೇಜ್ ಸೇರಿದೆರು. ಅಂದಿನ ದಿನದಲ್ಲಿ ಅಲ್ಲಿ ಎಲ್ಲಾ ದೈತ್ಯ ಪ್ರತಿಭೆಯವರೇ ಇದ್ದರಂತೆ. “ಡಾ.ಗುರುಮೂರ್ತಿ ಅಂತ ಇದ್ರು. ಬಹಳ ಅದ್ಭುತವಾದ ವ್ಯಕ್ತಿ ಅವ್ರು. ಏನ್ ಇಂಗ್ಲಿಷ್ ಅವರದು? ಡಾ.ರಾಧಾಕೃಷ್ಣನ್‌ಗೆ ಬಹಳ ಬೇಕಾದಂಥವ್ರು. ಬಹಳ ಸಾಮಾನ್ಯ, ಉದಾತ್ತ ಜೀವನ ನಡೆಸುತ್ತಾ ಇದ್ದಂಥ ಪ್ರಾಧ್ಯಾಪಕವರ್ಗ ಇತ್ತು, ಅಲ್ಲಿ.” ಎಂದು ಸಂಗಣ್ಣನವರು ಹೇಳುವಾಗ ಅವರ ಕಣ್ಣುಗಳು ಮಿನುಗುತ್ತಿದ್ದುವು.
ಬ್ರಿಟಿಷರ ಆಡಳಿತದ ಬಗ್ಗೆ ಮಾತನಾಡುತ್ತಿದ್ದ ಸಂಗಣ್ಣ ಹೇಳುತ್ತಿದ್ದರು “ಅಲ್ಲಿ ಬಹಳ ಶಿಸ್ತು ಇತ್ತು. ಸರಕಾರ ಭ್ರಷ್ಟವಾಗಿರಲಿಲ್ಲ. ಎಲ್ಲಾ ದೃಷ್ಟಿಯಿಂದಲೂ ಅವರು ನಿಗಾ ಇಟ್ಟಿರತಿದ್ರು. ಅದೇನೋ ’ಕತ್ತಿ ಪರದೇಶಿ ಆದರೆ ನೋವೆ, ನಮ್ಮವರೇ ಹದಹಾಕಿ ತಿವಿದರೆ ಅದು ಹೂವೆ’ ಅಂತ, ಕುವೆಂಪು ಹೇಳ್ತಾರಲ್ಲ, ತಿವಿಯಾದೆಲ್ಲ ಈಗಿನವರು. ಅವರು ವಸಾಹತುಶಾಹಿಗಳು. ಶೋಷಿಸತಿದ್ದರು ಹಾಗೆ ಹೀಗೆ ಅಂತ ಹೇಳತಾರೆ. ಏನ ಹೇಳಿದರೂ ಕೂಡಾ ಅವರ ಅಡಳಿತ ಸಡಿಲ ಇರಲಿಲ್ಲ. ಪ್ರಾಮಾಣಿಕತೆ ಹೆಚ್ಚಿತ್ತು ಅನ್ನಬೇಕು. ಆದರೆ ಸ್ವಾತಂತ್ರ್ಯಕ್ಕಾಗಿ ಜನ ಮಾಡ್ತಿದ್ದ ಚಳವಳಿಗಳನ್ನ ದಮನ ಮಾಡತಿದ್ದರು. ತಮ್ಮ ಸ್ವಾರ್ಥ ಇಟ್ಕೊಂಡೇ ಆಳತಾ ಇದ್ದಂಥವರು. ಅವಾಗ ಭಾಷಣ ಮಾಡಾಕ ಅಂದಾನಪ್ಪ ದೊಡ್ಡಮೇಟಿ, ಕಮಲಾದೇವಿ ಚಟ್ಟೋಪಾಧ್ಯಾಯ ಅಂಥವರೆಲ್ಲಾ ಬರತಿದ್ದರು ನಮ್ಮ ಕಡಿಗೆ. “ಈ ಇಂಗ್ಲೆಂಡಿನವರು ಬೆಳೆಯೋದೆಲ್ಲಾ ಏಳ ವಾರಕ್ಕಾಗುವಷ್ಟು ಆಹಾರ. ಎಲ್ಲಾ ನಮ್ಮದಾ ಲೂಟಿ ಮಾಡಕೊಂಡ ಹೋಗತಾರ. ಅಲ್ಲಿ ಎಲ್ಲಾ ಉತ್ಪತ್ತಿಯಾಗೋದು ನಮ್ಮ ದೇಶದ ಕಚ್ಚಾ ಸರಕಲಿಂದ” ಹೀಂಗೆಲ್ಲಾ ನಮಗ ಆವೇಶ ತುಂಬತ್ತಿದ್ದರು. ಟೇಕೂರ ಸುಬ್ರಹ್ಮಣ್ಯಂ. ಬೂದಿಹಾಳ್ ಅನಂತಾಚಾರ್, ಬೆಲ್ಲದ ಚೆನ್ನಪ್ಪ ಇದ್ರು. ಡಾ.ನಾಗನಗೌಡ. ಹೊಸಪಾಲಪ್ಪ, ರಂ ರಾ ದಿವಾಕರರ ಮುಂತಾದ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಇದ್ರು. ಕೊಟ್ಟೂರು ಬಹುಶಃ ಆಗ ತುಂಬಾ ಆಕ್ಟೀವ್ ಆಗಿತ್ತು.
ಜನಪದ ಸಾಹಿತ್ಯದಲ್ಲಿ: ಸಂಗಣ್ಣನವರು ಜನಪದ ಸಾಹಿತ್ಯಕ್ಕೆ ಬಂದ ರೀತಿ ಮತ್ತೊಂದು ಸೊಗಸಿನದ್ದು. ಇವರ ಮನೆಯಲ್ಲಿ ಸಂಬಳದ ಆಳುಗಳಿದ್ರು. ಅವರು ಬೀಸುವಾಗ, ಹಗ್ಗ ಹೊಸೆಯುವಾಗ, ಹೊಲದಲ್ಲಿ ಗೊಬ್ಬರ ಹೇರುವಾಗ ಹಾಡ್ತಿದ್ರು. ಹಾಡತಕ್ಕಂತದ್ದು, ಕಥೆ ಹೇಳತಕ್ಕಂತದ್ದು, ಜೀವನದ ಒಂದು ಭಾಗ ಆಗಿತ್ತು. ಪ್ರಾರಂಭದಲ್ಲಿ ಸಂಗಣ್ಣನವರಿಗೆ ಅದರಲ್ಲಿ ವಿಶೇಷವೇನೂ ಕಂಡಿರಲಿಲ್ಲ. ಅವರಿಗೆ ಅದರ ಮಹತಿ ಗೊತ್ತಾದದ್ದು ೧೯೪೭ರಲ್ಲಿ. ಆವಾಗ ಅವರಿಗೆ ದೊರೆತದ್ದು ’ಗರತಿಯ ಹಾಡು’ ಮತ್ತು ಎಲ್ ಗುಂಡಪ್ಪನವರ ಜಾನಪದ ಪುಸ್ತಕ. ’ಗರತಿಯ ಹಾಡು’ ಸಂಗಣ್ಣನವರ ಮೇಲೆ ಅಪಾರವಾದ ಪ್ರಭಾವ ಬೀರಿತು. ’ಅರೇ! ಇದು ಬಹಳ ಅಪರೂಪದ ಸಾಹಿತ್ಯ. ಇದು ಜೀವನಾನ ನಿರ್ವಚಿಸ್ತದೆ’ ಹೀಗೆ ಅಂದ್ಕೊಂಡು ಆಕಡೆ ಲಕ್ಷ್ಯ ಹೋಯಿತು ಎನ್ನುತ್ತಿದ್ದರು ಸಂಗಜ್ಜ. ’ಹಳ್ಳಿಯ ಹಾಡುಗಳು’ ಎಂಬ ಕೃತಿಯನ್ನು ಸಂಗಣ್ಣ ಮತ್ತು ವಿರೂಪಾಕ್ಷಗೌಡ್ರು ಎಂಬುವರು ಒಟ್ಟುಗೂಡಿ ಪ್ರಕಟಿಸಿದರು.
ಸಾಹಿತ್ಯ ಸೇವೆ: ಸಂಗಣ್ಣನವರು ತಂಬಾಕು ವ್ಯಾಪಾರ ಮಾಡಿಕೊಂಡು ಸಾಹಿತ್ಯದ ಕೆಲಸ ಮಾಡಿದರು. ಮುಖ್ಯವಾಗಿ ಜನಪದ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಗಳನ್ನು ಮಾಡಿದರು. ಅವರ ಮುಖ್ಯ ಕೃತಿಗಳು ಇವು: ’ನವಿಲು ಕುಣಿದಾವ’ (ನಾಟಕ) ’ಚಿತ್ರಪಟ ರಾಮಾಯಣ’ (ಜನಪದ ನಾಟಕ), ’ಜನಪದ ಮುಕ್ತಕಗಳು’ (ಜನಪದ ಕಾವ್ಯ) ’ಆ ಅಜ್ಜ ಈ ಮೊಮ್ಮಗ’ (ಕಾವ್ಯ), ’ಗೊಂದಲಿಗ ದೇವೇಂದ್ರಪ್ಪನ ಹಾಡುಗಳು’ (ಜನಪದ ಆಟಗಳ ಸಂಗ್ರಹ) ’ಬಾಳಬಿಕ್ಷುಕ’ (ನಾಟಕ)’, ’ಸೂಳೆಸಂಕವ್ವ’ (ನಾಟಕ) ’ಚಿಗಟೇರಿ ಪದಕೋಶ’ (ನಿಘಂಟು); ಸಂಗಣ್ಣನವರ ಪ್ರತಿಭೆ ಜಾನಪದದ ಪ್ರೇರಣೆಯಿಂದ ಅರೆಜಾನಪದ ಆಧುನಿಕ ಕೃತಿಗಳನ್ನು ರಚಿಸಿದೆ.
ಮೇಲೆ ಕಾಣಿಸಿದ ಕೃತಿಗಳಲ್ಲಿ ಕೊನೆಯದು ಸಂಗಣ್ಣನವರ ಒಂದು ವಿದ್ವತ್ ಕಾರ್ಯವಾಗಿದೆ. ಇದು ಒಂದು ಹಳ್ಳಿಯಲ್ಲಿ ಇರುವ ವಿಶಿಷ್ಟ ಪದಗಳಿಗಾಗಿಯೆ ನಿರ್ಮಾಣವಾಗಿರುವ ಸಾಂಸ್ಕೃತಿಕ ಪದಕೋಶ. ಕರ್ನಾಟಕದಲ್ಲಿ ಒಂದೊಂದು ಸೀಮೆಯಲ್ಲಿ ಇಂತಹ ಕೋಶಗಳನ್ನು ಸಿದ್ಧಪಡಿಸುವ ಸಾಧ್ಯತೆಯನ್ನು ಊಹಿಸುವುದಾದರೆ, ಕನ್ನಡ ಭಾಷೆಯ ಸಮೃದ್ಧತೆಯ ಸ್ವರೂಪ ಗೊತ್ತಾದೀತು. ಸಂಗಣ್ಣನವರ ಈ ಕೆಲಸವನ್ನು ದ್ರಾವಿಡ ಭಾಷೆಗಳ ಸಂಘಟನೆಯು ಗುರುತಿಸಿ ಪ್ರಶಸ್ತಿ ನೀಡಿದೆ.
ವಿಶಿಷ್ಟ ಸಾಂಸ್ಕೃತಿಕ ಆಸಕ್ತಿಗಳು: ಸಂಗಣ್ಣನವರು ಮೂಲತಃ ತಂಬಾಕು ವ್ಯಾಪಾರಸ್ಥರಾದರೂ ಅವರಿಗಿದ್ದ ಸಾಂಸ್ಕೃತಿಕ ಆಸಕ್ತಿಗಳು ಬೆರಗು ಹುಟ್ಟಿಸುವಂತಹವು. ಹಿಂದೂಸ್ಥಾನಿ ಸಂಗೀತದಲ್ಲಿ ಅವರಿಗೆ ಅಪಾರ ಆಸಕ್ತಿ. ಮಹಾರಾಷ್ಟ್ರದ ಸಂಪರ್ಕದಿಂದ ಮರಾಠಿ ಕಲಿತಿದ್ದರು. ಅಲ್ಲಿಯ ವ್ಯಾಪಾರಿ ಮಿತ್ರರು ಸಂಗಣ್ಣನವರಿಗಿದ್ದ ಮರಾಠಿ ನಾಟಕದಲ್ಲಿನ ಆಸಕ್ತಿ ನೋಡಿ ಒಳ್ಳೆಯ ನಾಟಕ ಇದ್ದಾಗ ಕೊಲ್ಲಾಪುರಕ್ಕೆ, ಸಾಂಗ್ಲಿಗೆ ಮೀರಜಗೆ ಬಂದರೆ, ಟೆಲಿಗ್ರಾಂ ಕೊಟ್ಟು ಕರಿಸಿಕೊಳ್ಳತಿದ್ದರು.
ಶ್ರೇಷ್ಠರೊಂದಿಗಿನ ಆತ್ಮೀಯ ಸಂಬಂಧ: ಸಂಗಣ್ಣನವರಿಗೆ ಶಿವರಾಮ ಕಾರಂತರ ಜತೆ ಗಾಢವಾದ ಸಂಬಂಧ ಇತ್ತು. ಬೇಂದ್ರೆ, ಗೋಕಾಕರ ಜೊತೆಯೂ ಸಂಪರ್ಕ ಇತ್ತು. ಸಂಗಣ್ಣನವರಿಗೆ ಕಾರಂತರ ಚಿಂತನ ಸ್ವಾತಂತ್ರ್ಯ ಬಹಳ ಮುಖ್ಯವಾಗಿ ಕಾಣಿಸುತ್ತಿತ್ತು. “ಆ ನಮೂನಿ ಮನೋಭಾವದ ಹೇಳಿಕೆಗಳನ್ನ, ನಾನು ಥಿಯಾಸಾಫಿಕಲ್ ಕಾಲೇಜಲ್ಲಿ ಕೇಳತಿದ್ದೆ. ಜೆ ಎಚ್ ಕಸಿನ್ಸ್ ಅವರೆಲ್ಲರೂ ಅಲ್ಲಿಗೆ ಬರತಿದ್ದರು. ಹರೀಂದ್ರನಾಥ ಚಟ್ಟೋಪಾಧ್ಯಾಯ ಅಲ್ಲಿಗೆ ಬಂದು ಹೋದರು. ಸರೋಜಿನಿ ನಾಯ್ಡು ಬಂದು ಹೋದಂಥವರು. ಆ ನಮೂನಿ ಮುಕ್ತಚಿಂತನೆ ಮತ್ತು ದಿಟ್ಟವಾಗಿ ಹೇಳತಕ್ಕಂಥದ್ದು, ನನಗೆ ಭಾಳ ಖುಶಿಕೊಟ್ಟಿತು. ಅದೇ ಹೊತ್ತಲ್ಲಿ ಅವರ ’ಬಾಳ್ವೆಯೇ ಬೆಳಕು’ ಶಂಬಾ ಜೋಶಿ ಪ್ರಕಟ ಮಾಡಿದ್ದರು. ಒಂದು ರೂಪಾಯಿ ನಾಕಾಣೆ ಪುಸ್ತಕ. ಅವರು ಹೇಳಬೇಕಾದಂತಹ ಇಡೀ ಚಿಂತನೆಯನ್ನು ಸೂತ್ರರೂಪದಲ್ಲಿ ಅ ಪುಸ್ತಕದಲ್ಲಿ ಹೇಳಿದ್ದಾರಂತ ನಾನಿವತ್ತಿಗೂ ಅಂದುಕೊಂಡಿರುವೆ. ಅವರ ಪುಸ್ತಕಗಳ ರಾಶಿಗೆ ಅದೊಂದು ಶಿಖರಪ್ರಾಯ.” ಇದು ಸಂಗಣ್ಣನವರ ನೇರ ಅಭಿಪ್ರಾಯ.
ಜಾನಪದ ರಂಗಕಲೆಗಳೊಂದಿಗಿನ ಬಾಂಧವ್ಯ: ಸಂಗಣ್ಣನವರು ಜಾನಪದ ರಂಗಕಲೆಗಳೊಂದಿಗೇ ಬೆಳೆದವರು. ಹಾಗಾಗಿ ಅವರ ಬಹುತೇಕ ಕೃತಿಗಳು ರಂಗಭೂಮಿಗೆ ಸಂಬಂಧಿಸಿವೆ. ಅವರಿಗೆ ಮಹಾನ್ ರಂಗ ತಜ್ಞ ಬಳ್ಳಾರಿ ರಾಘವರ ಜೊತೆಗೆ ಅಪಾರವಾದ ಒಡನಾಟವಿತ್ತು. ಸಂಗೀತ, ಜನಪದ ರಂಗಭೂಮಿ, ಜನಪದ ಸಾಹಿತ್ಯ ಸಂಗ್ರಹ ಮಾಡ್ತಾ ಇದ್ದ ಸಂಗಣ್ಣನವರಿಗೆ ನಗರದ ಶಿಷ್ಟ ನಾಗರಿಕ ಸಮುದಾಯದ ಜೊತೆಗೆ ಒಂದು ಸಂಬಂಧ ಏರ್ಪಟ್ಟಿತು. ಯಾವಾಗಲೂ ಜನಪದ ಕಲಾವಿದರ ಜೊತೆಗೆ ಸಂಗಣ್ಣನವರದು ಹೆಚ್ಚು ಒಡನಾಟ. “ಬಹುತೇಕ ಅವರು ಗೊತ್ತಿರತಕ್ಕಂಥವರು. ಅವರನ್ನು ಪ್ರೀತಿಯಿಂದ ಕಂಡುಬಿಟ್ಟರೆ, ಅವರು ತೆರೆದ ಹೃದಯಿಗಳಾಗತಾರೆ. ಯಾವುದೇ ಹಿಂಜರಿಕೆ ಇರೋದಿಲ್ಲ.” ಎನ್ನುತ್ತಿದ್ದರು ಸಂಗಜ್ಜ. ಸಂಗಣ್ಣನವರು ಜಾನಪದವನ್ನು ಸಂಗ್ರಹ ಮಾಡಿ ಪ್ರಕಟಿಸಿದ್ದು ಒಂದು ಕೆಲಸವಾದರೆ, ಇದನ್ನ ಸೃಜನಶೀಲವಾಗಿ ಬಳಸಿಕೊಂಡು ಹೊಸ ಸಾಹಿತ್ಯ ಮಾಡಿದ್ದು ಮತ್ತೊಂದು ಮಹತ್ಸಾದನೆ.
ರಾಜಕೀಯದಲ್ಲಿ: ಸಂಗಣ್ಣನವರು ಒಮ್ಮೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ನಂತರ ರಾಜಕೀಯದಿಂದ ಹೊರಬಂದರು. ಊರಿನ ವಿಚಿತ್ರ ರಾಜಕಾರಣ, ದೇಶದ ನೈತಿಕ ಅಧಃಪತನ ಮೊದಲಾದವನ್ನು ನೋಡಿ, ಅಂತರ್ಮುಖಿಗಳಾಗುತ್ತಾ, ಅಸಹಾಯಕತೆಯಿಂದ ಸಾತ್ವಿಕ ಸಿಟ್ಟಿಗೆ ಒಳಗಾಗುತ್ತಿದ್ದರು.
ಲೋಕಹಿತ ಮನೋಧರ್ಮ: ಸಾಂಪ್ರದಾಯಿಕ ಕುಟುಂಬದ ಹಿನ್ನೆಲೆಯಿದ್ದರೂ ಅವರೆಂದೂ ಶಿವಪೂಜೆ ಮಾಡಿದವರಲ್ಲ. ಮಾಡುವವರಿಗೆ ಬೇಡವೆಂದವರಲ್ಲ. ಮೂಢನಂಬಿಕೆಗಳಿಂದ ಬಹು ದೂರವಿದ್ದವರು. ಅವರು ಉಯಿಲು ಬರೆದು ಮಗನಿಗೆ ಕಟ್ಟುನಿಟ್ಟಾಗಿ ಹೇಳಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿ ಎಂದು ತಮ್ಮ ದೇಹದಾನ ಮಾಡಿದರು. ಅವರ ಕಣ್ಣುಗಳು ಬೇರೊಬ್ಬ ಕುರುಡನಿಗೆ ಬೆಳಕನ್ನು ಕೊಟ್ಟವು. ಗ್ರಾಮೀಣ ಪ್ರತಿಭೆಯ ಆದರ್ಶ ವ್ಯಕ್ತಿಯಾಗಿ ಸದ್ದಿಲ್ಲದೆ ಬದುಕಿ, ಸದ್ದಿಲ್ಲದೆ 2006ರ ವರ್ಷದ ಅಕ್ಟೋಬರ್ 26ರಂದು ಈ ಲೋಕದಿಂದ ನಿರ್ಗಮಿಸಿದರು. ಜಾನಪದ ಜಂಗಮರೆನಿಸಿದ್ದ ಮುದೇನೂರು ಸಂಗಣ್ಣನವರು ಇಂದು ನಮ್ಮೊಡನಿಲ್ಲದ ಒಂದು ಕಾಲದ ಭವ್ಯ ಪರಂಪರೆಯ ಪ್ರತಿನಿಧಿಗಳಾಗಿದ್ದವರು. ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ.
ಕೃತಿಗಳು
ಕಾವ್ಯ: ಆ ಅಜ್ಜ ಈ ಮೊಮ್ಮಗ
ನಾಟಕ: ಚೌತಿಚಂದ್ರ, ಬಂಗಾರದ ತಟ್ಟೆ, ಕರುಣೆಯ ಕಂದ, ಜನಅರಣ್ಯ, ಮೋಚಿಮಾವ, ಅಂಗುಲಿಮಾಲ, ಅವ್ವಣ್ಣೆವ್ವ, ಶೀಲಾವತಿ, ಬುದ್ಧ, ಬಾಲ ಭಿಕ್ಷುಕರಾಜ, ಸೂಳೆ ಸಂಕವ್ವೆ, ಸುನಾಮಿ ಸುನಾಮಿ.
ಜೀವನ ಚರಿತ್ರೆ: ಕೊಂಡಜ್ಜಿ ಬಸಪ್ಪ
ಅನುವಾದ: ಘಾಸಿರಾಮ ಕೋತ್ವಾಲ್, ಭಾರತದ ಪ್ರೇಮ ಕತೆಗಳು.
ಜಾನಪದ: ನವಲು ಕುಣದಾವ, ಚಿತ್ರಪಟ ರಾಮಾಯಣ, ಲಕ್ಷಾಪತಿ ರಾಜನ ಕತೆ, ಜಾನಪದ ಮುಕ್ತಕಗಳು, ಹಳ್ಳಿಯ ಹಾಡುಗಳು, ಗೊಂದಲಿಗರ ದೇವೇಂದ್ರಪ್ಪನ ಆಟಗಳು, ಗೊಂಬಿಗೌಡರ ಸೂತ್ರದ ಗೊಂಬಿ ಆಟಗಳು, ಚಿಗಟೇರಿ ಪದಕೋಶ.
ಪುರಸ್ಕಾರ:
- ೧೯೮೯ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್
- ೧೯೯೨ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ
- ೧೯೯೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ೨೦೦೦ನೆಯ ಸಾಲಿನಲ್ಲಿ ಸೂಳೆ ಸಂಕವ್ವೆ ನಾಟಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಬಹುಮಾನ
- ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ೨೦೦೬ರಲ್ಲಿ ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕಿಕರಣ ಪ್ರಶಸ್ತಿ
- ೨೦೦೬ರಲ್ಲಿ ನಾಡೋಜ ಪುರಸ್ಕಾರ ಲಭಿಸಿದೆ
- ಚಿಗಟೇರಿ ಪದಕೋಶಕ್ಕೆ ತ್ರಿವೇಂದ್ರಮ್ ದ್ರಾವಿಡ ಭಾಷಾ ಸಂಸ್ಥೆಯ ಪುರಸ್ಕಾರ.
ಗೌರವ:
- ೧೯೮೪ರಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
- ೧೯೯೪ರಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
- ೨೦೦೬ರಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
ಸಾಮಾಜಿಕ:
- ೧೯೫೭ರಲ್ಲಿ ಚಿಗಟೇರಿ ಗ್ರಾಮಪಂಚಾಯತಿ ಅಧ್ಯಕ್ಷರಾಗಿದ್ದರು
- ೧೯೬೨ರಲ್ಲಿ ಹರಪನಹಳ್ಳಿ ತಾಲೂಕು ಬೋರ್ಡ ಸದಸ್ಯರಾಗಿದ್ದರು.
ರಹಮತ್ ತರೀಕೆರೆ ಅವರು ಸಂಗಣ್ಣನವರೊಂದಿಗೆ ನಡೆಸಿದ ಸಂದರ್ಶನ ಮತ್ತು ‘ಕನ್ನಡ ಪ್ರಭ’ದಲ್ಲಿ ಎಂ. ಪಿ. ಪ್ರಕಾಶರು ಮೂಡಿಸಿದ್ದ ಲೇಖನಗಳು.
ಶ್ರೇಯಾಂಕ
ಇದ್ದಾಗ ಸದ್ದು ಗದ್ದಲವಿಲ್ಲದೆ ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದ ಸಂಗಣ್ಣನವರು ಮರಣಕ್ಕೆ ಮುಂಚೆಯೇ ಇಚ್ಛಾ ಸಂಸ್ಕಾರ ಪತ್ರ ಬರೆದು ದಾವಣಗೆರೆಯ ಜೆಜೆಎಂ ವೈದ್ಯ ಕಾಲೇಜಿಗೆ ದೇಹದಾನ ನೀಡಿ ಮರಣದ ನಂತರವೂ ವಿಶೇಷತೆಯನ್ನು ತೋರಿದವರು.