ಮುಜಾವರ ಅಸಿಫ ಅಲಿ (೧೧-೪-೧೯೫೩ – ೧೯೯೬): ಸಾಹಿತ್ಯ, ಛಾಯಾಗ್ರಹಣ ಕಲೆಯಲ್ಲಿ ಪರಿಣತರಾಗಿದ್ದ ಮುಜಾವರರು ಹುಟ್ಟಿದ್ದು ಬೈಲಹೊಂಗಲ ತಾಲ್ಲೂಕು ತುರಮುರಿಗ್ರಾಮ. ತಂದೆ ಹುಸೇನಸಾಬ, ತಾಯಿ ಇಮಾಮಬಿ. ಓದಿದ್ದು ಎಸ್.ಎಸ್.ಎಲ್.ಸಿ. ಪಾಸಾದ ನಂತರ ಆರ್ಥಿಕ ತೊಂದರೆಯಿಂದ ಮುಂದೆ ಓದಲಾರದೆ ಸೇರಿದ್ದು ಪೊಲೀಸ್ ಇಲಾಖೆಗೆ. ಬೆಳಗಾವಿ ಉಪನಗರದ ವಡಗಾವಿಯ ಪೊಲೀಸ್ ಠಾಣೆಯಲ್ಲಿ ಉದ್ಯೋಗ. ಅಪರಾಗಳಿಗೆ ಸಂಬಂಸಿದ ಕಡತಗಳನ್ನು ನ್ಯಾಯಾಲಯಕ್ಕೆ ಹೊತ್ತೊಯ್ಯುವ ಕೆಲಸ.
ಪೊಲೀಸ್ ಠಾಣೆಯ ಎದುರಿಗಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಪುಂಡಲೀಕ ಪಾಟೀಲರ ಸ್ನೇಹದಿಂದ ಸಾಹಿತ್ಯ ರಚನೆಯ ಕಡೆ ಬೆಳೆದ ಒಲವು. ಕಥೆ, ಕವನ, ಕಾದಂಬರಿಗಳ ಬಗ್ಗೆ ಬಿಡುವಿನ ವೇಳೆಯಲ್ಲಿ ಚರ್ಚೆ, ಚಿಂತನ-ಮಂಥನ. ಬರೆದ ಕಥೆ, ಕವನಗಳನ್ನು ಮೊದಲ ಓದುಗರೆಂದರೆ ಪುಂಡಲೀಕ ಪಾಟೀಲರೇ !
ಸ್ಥಳೀಯ ಪತ್ರಿಕೆಗಳಾದ ಜನಜೀವನ, ಲೋಕದರ್ಶನ, ಕನ್ನಡಮ್ಮ ಪತ್ರಿಕೆಗಳಲ್ಲಿ ಪ್ರಕಟಿತ. ಪೊಲೀಸ್ ಇಲಾಖೆಗೆ ಸೇರಿದವರು ಕಠಿಣ ಹೃದಯದವರು ಎಂಬ ಅಪಖ್ಯಾತಿಯನ್ನು ತೊಡೆಯಲೆಂಬಂತೆ ಇವರು ಬರೆದುದೆಲ್ಲವೂ ಮಾನವೀಯತೆಯ ಮೂಲಸೆಲೆಯಿಂದ ಕೂಡಿದ ವಸ್ತುಗಳನ್ನೊಳಗೊಂಡ ಕಥೆಗಳೇ. ಮುಜಾವರರು ಹೆಚ್ಚಾಗಿ ನ್ಯಾಯಾಲಯದ ‘ಡ್ಯೂಟಿ’ಗಾಗಿಯೇ ಅಲೆದಾಡುತ್ತಿದ್ದುದರಿಂದ ವಕೀಲರ ಸಂಗ. ಆರೋಪಿಗಳ ಜೊತೆ ಓಡಾಟ, ನೊಂದವರ, ಹಿಂಸೆಗೊಳಗಾದವರ ಪರಿಚಯ…ಇವೇ ಸಾಹಿತ್ಯ ರಚನೆಯ ವಸ್ತುಗಳು. ಬರೆದುದು ಕಡಿಮೆ, ಸತ್ವಭರಿತ ಕೃತಿಗಳೇ. ಇಲಾಖೆಯಿಂದಲೂ ಪಡೆದ ಮನ್ನಣೆ.
ಮೊದಲ ಕವನ ಸಂಕಲನ ‘ಮುಂಬೆಳಕು’ ಹುಟ್ಟಿದೂರಿನಲ್ಲಿ ಮದುವೆಯ ಮನೆಯ ಸಡಗರದ ವಾತಾವರಣದಲ್ಲಿ ಖ್ಯಾತ ಸಾಹಿತಿಗಳಾದ ಆರ್.ಸಿ. ಹಿರೇಮಠರವರಿಂದ ಬಿಡುಗಡೆ. ಮತ್ತೊಂದು ಕೃತಿ ‘ಪ್ರಕೃತಿ’ ಕಾದಂಬರಿಗೆ ಬಸವರಾಜ ಕಟ್ಟೀಮನಿಯವರು ಮುನ್ನುಡಿ ಬರೆದು ಹಾರೈಸಿದರೆ ಇಲಾಖೆಯ ಹಿರಿಯ ಅಕಾರಿಗಳಾದ ಎಸ್.ಪಿ. ಮಡಿಯಾಳ್‌ರವರು ಬೆನ್ನುಡಿ ಬರೆದು ಹಾರೈಸಿದ್ದಾರೆ. ಮತ್ತೊಂದು ಕಾದಂಬರಿ ‘ಮರಣದಂಡನೆ’ಗೆ ಅಂದಿನ ಜಿಲ್ಲಾ ಪೊಲೀಸ್ ಅಕಾರಿಗಳಾಗಿದ್ದ ಜ್ಯೋತಿ ಪ್ರಕಾಶ ಮಿರ್ಜಿಯವರು ಮುನ್ನುಡಿ ಬರೆದು ಹಾರೈಸಿದರೆ, ಐ.ಪಿ.ಎಸ್. ಅಕಾರಿಯಾಗಿದ್ದ ಡಾ.ಎಸ್. ಕೃಷ್ಣಮೂರ್ತಿಯವರು ಬೆನ್ನುಡಿಯಲ್ಲಿ ಶುಭಕೋರಿದ್ದಾರೆ.
ಇವರ ಒಟ್ಟು ಪ್ರಕಟಿತ ಕೃತಿಗಳು ಒಂದು ನಾಟಕ, ಒಂದು ಕವನ ಸಂಕಲನ, ಹತ್ತು ಕಾದಂಬರಿಗಳು. ಸುಖೀಜೀವನ ಸಮಾಜವನ್ನಾಗಿ ಪರಿವರ್ತಿಸುವ ಆಶಯ, ದೇಶಕ್ಕೆಲ್ಲಾ ಒಂದೇ ರೀತಿಯ ಕಾನೂನು, ನಾಗರಿಕ ಸಂಹಿತೆ ಇರಬೇಕೆಂಬ ವಿಚಾರಧಾರೆ ಹೊತ್ತ ಮುಜಾವರರು ೧೯೯೬ರಲ್ಲಿ. ದುರ್ಘಟನೆಯೆಂದರೆ ಮಹಜರ್ ತಯಾರಿಸುವಲ್ಲಿ ಎದುರಿನಿಂದ ಬಂದ ಲಾರಿ ನಿಲ್ಲಿಸಲು ಆದೇಶಿಸಿದರೂ ನಿಲ್ಲದೆ ಇವರನ್ನೇ ಬಲಿ ತೆಗೆದುಕೊಂಡ ದುರ್ದೈವಿ ಘಟನೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಅರಳಬೇಕಾಗಿದ್ದ ಮುಜಾವರರ ಬದುಕು ಮುರುಟಿ ಹೋಯಿತು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.