ಮಾರ್ಗಂವಿಚಾರಂ

ನೋಂದಾಯಿಸಿ | ರಹಸ್ಯಪದವನ್ನು ಮರೆತಿರೆ?
ಕಣಜ ತಿಳಿಯಿರಿ
ಕಣಜವನ್ನು ತುಂಬಿ!
ಬರೆಯಲು ಆರಂಭಿಸಿ!
ಕೀಲಿಮಣೆ ಸಹಾಯ
ನಮ್ಮನ್ನು ಸಂಪರ್ಕಿಸಿ
ಮಾಹಿತಿ ಬಳಕೆ ಸೂಚನೆ
ಅಬಾಧ್ಯತೆ ಘೋಷಣೆ
ಕನ್ನಡ ಬ್ಲಾಗ್ ಸೂಚಿ
ಕಣಜವನ್ನು ಪಸರಿಸಿ
ಕಣಜ > ಕನ್ನಡ > ಪ್ರಾಚೀನ ಕೃತಿಗಳು > ಕವಿರಾಜಮಾರ್ಗ > ಮಾರ್ಗಂವಿಚಾರಂ
ಮಾರ್ಗಂವಿಚಾರಂ

ಮಾರ್ಗಂವಿಚಾರಂ

ಗೀತಿಕೆ || ಆಱದು ಪೀನಂ ಮಾರ್ಗ-ಗ[1]ತಿಯಂ

ತ[2]ಱಸಲಲಾಗದಾರ್ಗಂ ಬಹು-ವಿಕಲ್ಪದೊಳ್ |

ಕುಱತು ಪೂರ್ವ-ಶಾಸ್ತ್ರ-ಪ[3]ದವಿಯಂ

ತೆೞೆದಿರೆ ಪೇೞ್ವೆನಿನಿಸಂ ಕನ್ನಡದೊಳ್ ||೪೬||

೪೩. ಹೀಗಿರುವುದು “ಅನುಪ್ರಾಸ”. ಒಂದು ಪಾದಾಂತ್ಯದಲ್ಲಿ ಇಟ್ಟ ಅಕ್ಷರವನ್ನೇ ಮುಂದಿನ ಎಲ್ಲ ಪಾದಾಂತ್ಯಗಳಲ್ಲಿಯೂ ಇಟ್ಟು ಹೇಳುವುದೇ “ಅಂತ್ಯಪ್ರಾಸ.”

೪೪. ಅತಿಧವಳ ಯಶಶ್ಚರಿತ್ರನೂ (=ಯಶವನ್ನು ತರುವಂತಹ ಕಾರ‍್ಯಗಳಲ್ಲಿ ತತ್ಪರನು), ಸಕಲ ಶತ್ರುಮಂಡಲವನ್ನೂ ಪಾದಾನತ ಮಾಡಿಕೊಂಡವನೂ, ವಿಪುಲ ಸಮಪದ್ಭರಿತನೂ, ಇಂದ್ರನಿಗೆ ಸಮಾನವಾದ ಪ್ರಭಾವವುಳ್ಳವನೂ ಆದ ಆತನು ಒಲವನ್ನು ತಳೆದನು.

೪೫. (ವಿನುತ) ಪ್ರಾಸ, ಅನುಪ್ರಾಸ, ಅಂತ್ಯಪ್ರಾಸಗಳೆಂಬ ಮೂರೂ ಕನ್ನಡಕ್ಕೆ ಅತಿಶಯವೆನಿಸುವ (ಎಂದರೆ ಕನ್ನಡಕ್ಕೆ ಮಾತ್ರ ವಿಶಿಷ್ಟವಾಗಿರುವ) ಪ್ರಾಸಗಳು. ಉಳಿದ ಮೂರು ಬಗೆಗಳು (ಎಂದರೆ ‘ಶಾಂತಪ್ರಾಸ’, ‘ವರ್ಗಪ್ರಾಸ’, ‘ಸಮೀಪಪ್ರಾಸ’ಗಳು) ನೃಪತುಂಗನ ವಿಹಿತ ಮಾರ್ಗದ ಪ್ರಕಾರ ‘ಪ್ರಾಸಾಭಾಸ’ಗಳು (ಅಥವಾ ತೋರಿಕೆಯ ಪ್ರಾಸಗಳು ಮಾತ್ರ).

೪೬. ಅನೇಕ ಪ್ರಕಾರಗಳನ್ನೊಳಗೊಳ್ಳುವ ಕಾವ್ಯಮಾರ್ಗದ ಸೂಕ್ಷ್ಮಗತಿಯನ್ನೆಲ್ಲ ಪೂರ್ಣವಾಗಿ ತಿಳಿದು ನಿಶ್ಚಯಿಸಿ ಹೇಳುವುದು ಯಾರಿಗೂ ಆಗದು. ಪೂರ್ವದ ಲಕ್ಷಣಶಾಸ್ತ್ರದ ಸರಣಿಯಿಂದ ವಿಶದವಾಗಿ ಸ್ವಲ್ಪವನ್ನು ಮಾತ್ರ ಕನ್ನಡಕ್ಕೆ ಅನ್ವಯಿಸಿದಂತೆ ಹೇಳುತ್ತೇನೆ. *ಇಲ್ಲಿ ಪೂರ್ವದ ಶಾಸ್ತ್ರವೆಂಬುದು ದಂಡಿ ಭಾಮಹಾದಿಗಳಿಂದ ಸಂಸ್ಕೃತದಲ್ಲಿ ಉಕ್ತವಾದ ಲಕ್ಷಣಶಾಸ್ತ್ರವೇ ಉದ್ದಿಷ್ಟವಿರಬಹುದೆಂದು ತೋರುತ್ತದೆ. ‘ಕನ್ನಡದೊಳ್’ ಎಂದರೆ ‘ಕನ್ನಡದ ಭಾಷಾಪ್ರಯೋಗದಲ್ಲಿ ಅನ್ವಯಿಸಿದಂತೆ’ ಎಂಬ ಅರ್ಥ ವಿವಕ್ಷಿತ; ಕೇವಲ ಕನ್ನಡ ಭಾಷೆಯಲ್ಲಿ ತಾನು ಬರೆಯುವನೆಂದಲ್ಲ.*

ಕರ-ಚರಣ-ಶರೀರ-ಶಿರೋದರ-ವದನಾದ್ಯವಯವಂಗಳಿವು ತಂತಮ್ಮೊಳ್ |

ದೊರೆಕೊಂಡೆಡೆಗಳೊಳಚವಾಗಿರೆಯುಂ ನರರೊರ್ವರೊರ್ವರಂ ಪೋಲದವೋಲ್ ||೪೭||

ವರ-ಶಬ್ದಾಲಂಕಾರದ ವಿರಚನೆಗಳ್ ನೋೞ್ಪೊಡೊಂದೆ ತೋರ್ಕೆಗಳಿಂತುಂ |

ಪೊ[4]ರಗಿರಲೊಂದೊಂದರೊಳಾ ಪರಮ-ಕವೀಶ-ಪ್ರಯೋಗ-ಗತ-ಮಾರ್ಗಂಗಳ್ ||೪೮||

ಕವಿಗಳುಮನಾದಿ-ಲೋಕೋದ್ಭವರಪ್ಪುದಱಂದನಂತ-ಗಣನಾನುಗತಂ |

ಸವಿಶೇಷೋಕ್ತಿಗಳುಮನಂತ-ವಿಧಂಗಳನಂತ-ಭೇದವದಱಂ ಮಾ[5]ರ್ಗಂ ||೪೮||

ಜನಿತ-ವಿಭಾಗಂಗಳ್ ವಾಙ್ಮನಸಾತೀತಂಗಳಿಂತು ಮಾರ್ಗೋಕ್ತಿಗಳೊಳ್ |

ನೆನೆಱಪಲಾರ್ಪರಾರದನನಿಶ್ಚಿತ-ಕ್ರಮ-ವಿಶೇಷ-ಗುಣ-ಯುಕ್ತಕಮಂ ||೫೦||

೪೭-೪೮. ಕೈ, ಕಾಲು, ಮೈ, ತಲೆ, ಹೊಟ್ಟೆ, ಮುಖ ಮೊದಲಾದ ಅವಯವಗಳು ತಮ್ಮ ತಮ್ಮ ತಮ್ಮ ಸ್ಥಾನದಲ್ಲಿ ಒಂದೇ ರೀತಿಯಾಸಗಿ ಮನುಷ್ಯರಲ್ಲೆಲ್ಲ ಸೇರಿಕೊಂಡಿದ್ದರೂ ಕೂಡ, ಒಬ್ಬರು ಇನ್ನೊಬ್ಬರನ್ನು ಹೇಗೆ ಹೋಲುವುದಿಲ್ಲವೋ ಹಾಗೆಯೇ, ಶಬ್ದಾಲಂಕಾರದ ರಚನೆಗಳು ಶ್ರೇಷ್ಠ ಕವೀಶ್ವರರ ಪ್ರಯೋಗ ಮಾರ್ಗದಲ್ಲಿ ಮೇಲ್ನೋಟಕ್ಕೆ ಒಂದೇ ಎಂಬಂತೆ ತೋರಿಬಂದರೂ ಸಹ, ಒಂದೊಂದಕ್ಕೂ (ವೈಶಿಷ್ಟ್ಯವಿರುವ್ಯದರಿಂದ) ಈ ತೋರಿಕೆಯು ಹೊರಗಿನದಷ್ಟೇ ಸರಿ ! *ಇಲ್ಲಿ ‘ಪೆರಗಿರಲ್’ (S) ಎಂಬ ಪಾಠವಿಟ್ಟುಕೊಂಡು ‘ಸಮೀಪವರ್ತಿ’ಯೆಂದು ಅರ್ಥಯಿಸಿದರೆ ಪ್ರಕ್ರಾಂತವಾದ ‘ಹೋಲುವುದಿಲ್ಲ’ವೆಂಬ ಮುಖ್ಯ ತಾತ್ಪರ್ಯಕ್ಕೇ ಬಾಧೆ ಬರುತ್ತದೆ.*

೪೯. ಲೋಕವು ಅನಾದಿಯೆಂದಮೇಲೆ ಕವಿಗಳೂ (ಲೋಕದಷ್ಟೇ) ಅನಾದಿಕಾಲದಿಂದ ಜನಿಸುತ್ತ ಬಂದಿದ್ದಾರೆ (ಎಂದಾಯಿತು); ಆದ್ದರಿಂದ ಒಬ್ಬೊಬ್ಬರ ವೈಶಿಷ್ಟ್ಯವನ್ನೂ ಒಳಗೊಳ್ಳುವ ಅವರ ಉಕ್ತಿಪ್ರಕಾರಗಳೂ ಅನಂತ ಅಥವಾ (ಲೆಕ್ಕಮಾಡದಷ್ಟು) ಅಸಂಖ್ಯವೇ ಸರಿ. ಆದ್ದರಿಂದ ಮಾರ್ಗದ ಭೇದಗಳು ಅನಂತವೇ. *ಈ ಗ್ರಂಥಕಾರನು ಜೈನನೆಂಬುದಕ್ಕೆ ‘ಲೋಕವನ್ನು ಅನಾದಿ’ಯೆನ್ನುವ ಇಲ್ಲಿಯ ಸಿದ್ಧಾಂತವೂ ಒಂದು ಸಾಕ್ಷಿಯೆನ್ನಬಹುದು. ವೈದಿಕರು ಜಗತ್ತಿನ ಸೃಷ್ಟಿಯನ್ನೊಪ್ಪುವ ಸೃಷ್ಟಿವಾದಿಗಳು; ಜಗತ್ತಿಗೆ ಭಗವಂತನು ಆದಿಯೆನ್ನುವವರು. ಜೈನರು ಜಗತ್ತಿನ ಸೃಷ್ಟಿಯನ್ನು ಒಪ್ಪುವುದಿಲ್ಲ; ಜಗತ್ತು ಅನಾದಿಯೆಂದು ಅವರ ಸಿದ್ಧಾಂತ.*

೫೦. ಹೀಗೆ ಮಾರ್ಗದ ಉಕ್ತಿಗಳಲ್ಲಿ ಸಂಭವಿಸುವ ವಿಭಾಗಗಳು ಮಾತಿಗೂ ಮನಸ್ಸಿಗೂ ಅತೀತವಾಗಿದೆ; ಎಂದಮೇಲೆ ಒಂದೊಂದರಲ್ಲೂ ಇರುವ ಅನಿಶ್ಚಿತ ಗುಣ ವಿಶೇಷದ ಪರಿಯನ್ನು ಅರಿತು ಹೇಳಬಲ್ಲವರು ಯಾರು?

ದಕ್ಷಿಣೋತ್ತರ ಮಾರ್ಗಗಳು

ಅಂ[6]ತುಂ ಭೇದಮನಿನಿಸಾರ್ಪಂತುತ್ತರ-ದಕ್ಷಿಣೋರು-ಮಾರ್ಗದ್ವಯದಾ |

ಚಿ[7]ತಿತ-ಪುರಾಣ-ಕವಿ-ವಿದಿತಾಂತರಮಂ ಪೇೞ್ವೆನಱವ ಮಾೞ್ಕೆಯೊಳೆನ್ನಾ ||೫೧||

ನಿಗದಿತ-ಕಾವ್ಯೋಕ್ತಿಗಳೊಳ್ ನೆಗೞ್ದುವು ಮಾರ್ಗಂಗಳಿಂತುಮೆರಡುಕ್ತಿಗಳುಂ |

ಬ[8]ಗೆವಾಗಳೆರಡು ಮಾೞ್ಕೆಯೊಳೊಗೆದವು ವಕ್ರ-ಸ್ವಭಾವ-ನಿಯತಿ-ಕ್ರಮದಿಂ ||೫೨||

ಸತತಂ ದಕ್ಷಿಣ-ಮಾರ್ಗೋದಿತೋಕ್ತಿ-ಭೇದಕ-ಗುಣಂ ಸ್ವಭಾವಾಖ್ಯಾನಂ |

ವಿ[9]ದಿತೋತ್ತರ-ಮಾರ್ಗ-ಗತಂ ಪ್ರತೀತ-ವಕ್ರೋಕ್ತಿ-ಕೃತಮನಲ್ಪ-ವಿಕಲ್ಪಂ ||೫೩||

೫೧. ಹೇಗೂ ಇರಲಿ; ಪೂರ್ವ ಕವಿಗಳಲ್ಲಿ ಸ್ಪಷ್ಟವಾಗಿ ಕಂಡುಬರುವ ಭೇದಗಳಲ್ಲಿ (ಮುಖ್ಯವಾದ) ದಕ್ಷಿಣಮಾರ್ಗ-ಉತ್ತರಮಾರ್ಗವೆಂಬ ಭೇದವನ್ನು ಸ್ವಲ್ಪ ಮಟ್ಟಿಗೆ ಯಥಾಶಕ್ತಿ ನನಗೆ ತಿಳಿದಂತೆ ಹೇಳುವೆನು.

೫೨. ಕಾವ್ಯದ ಉಕ್ತಿಭೇದಗಳಲ್ಲಿ ಪ್ರಸಿದ್ಧವಾದ ಎರಡು ಮಾರ್ಗಗಳಿವೆ. ‘ವಕ್ರತೆ’ ಮತ್ತು ‘ಸ್ವಭಾವ’ ಎಂಬ ನಿಯಮ ಭೇದವನ್ನಾಶ್ರಯಿಸಿ “ವಕ್ರೋಕ್ತಿ”, “ಸ್ವಭಾವೋಕ್ತಿ” ಎಂದು ಎರಡು ರೀತಿಯಾಗಿ ಹುಟ್ಟಿಕೊಂಡಿವೆ.

೫೩. ಅವುಗಳಲ್ಲಿ “ಸ್ವಬಾವೋಕ್ತಿ”ಯೆಂಬುದು ದಕ್ಷಿಣಮಾರ್ಗವನ್ನು ಪ್ರತ್ಯೇಕವಾಗಿ ಎತ್ತಿತೋರಿಸುವ ವಿಶಿಷ್ಟ ಧರ್ಮವಾಗಿದೆ. ಹಾಗೆಯೇ “ವಕ್ರೋಕ್ತಿ”ಯ ಹಲವಾರು ವಿಕಲ್ಪಗಳು ಉತ್ತರಮಾರ್ಗದಲ್ಲಿ ಅಂತರ್ಗತವಾಗಿರುತ್ತವೆ. *ದಂಡಿಭಾಮಹರ ಪ್ರಕಾರ ವರ್ಣಿತ ಪದಾರ್ಥಗಳ ಜಾತಿ, ಗುಣ, ದ್ರವ್ಯ, ಕ್ರಿಯೆಗಳ ಸಹಜ ಸ್ವಬಾವದ ಅಖ್ಯಾನವೇ ‘ಸ್ವಭಾವೋಕ್ತಿ’; ಕವಿ ಪ್ರತಿಭೆಯ ಕಲ್ಪನಾಚಮತ್ಕಾರದಿಂದ ದೊಡ್ಡದು ಮಾಡಿ ಬಣ್ಣಿಸುವುದೇ “ವಕ್ರೀಕ್ತಿ” ಅಥವಾ “ಅತಿಶಯೋಕ್ತಿ”. ವಕ್ರೋಕ್ತಿಯೇ ಅರ್ಥಾಲಂಕಾರಗಳೆಲ್ಲಕ್ಕೂ ಮೂಲಭೂತತತ್ತ್ವವೆಂಬುದು ಭಾಮಹನ ಮತ; ದಂಡಿಗೂ ಇದು ಒಪ್ಪಿಗೆಯೇ. ಆದರೆ ದಂಡಿ ಸ್ಪಷ್ಟವಾಗಿ ‘ಸ್ವಬಾವೋಕ್ತಿ’ಯನ್ನೂ ಒಂದು ಅಲಂಕಾರವೆಂದು ಪರಿಗಣಿಸುತ್ತಾನೆ; ಭಾವಹನು ಪರಿಗಣಿಸುವನೋ ಇಲ್ಲವೋ ಎಂಬುದು ಸಂಶಯಾಸ್ಪದವಾಗಿ ಉಳಿದಿದೆ. ಕುಂತಕನಂತೂ ಸರ್ವಥಾಸ್ವಭಾವವು ‘ಅಲಂಕಾರ್ಯವೇ ವಿನಾ, ಎಂದೂ ‘ಅಲಂಕಾರ’ವೆನಿಸದೆಂದು ವಾದಿಸುತ್ತಾನೆ.*

ಸಮ-ಮಧುರ-ನಿಬಿಡ-ಕಾಂತ-ಸುಕುಮಾರ-ಸುಸಮಾಹಿತ-ಪ್ರಸನ್ನೋದಾರ-|

ಪ್ರ[10]ಮಿತ-ಗ್ರಾಮ್ಯೋಜಸ್ವಿ-ಕ್ರಮದಿಂ ದಶ-ಭೇದಮಲ್ಲಿ ದಕ್ಷಿಣಮಾರ್ಗಂ ||೫೪||

ಅವರ ವಿಷರ್ಯಯ-ವೃತ್ತಿ-ಪ್ರವಿಭಕ್ತ-ವಿಕಲ್ಪಮಕ್ಕುಮುತ್ತರ-ಮಾರ್ಗಂ |

ಸವಿಶೇಷ-ಗುಣಮನತಿಶಯ-ಧವಳೋಕ್ತಿ-ಕ್ರಮದಿನಱಪುವೆಂ ತ[11]ದ್ದ್ವಯದೊಳ್ ||೫೫||

೫೪. ದಕ್ಷಿಣಮಾರ್ಗವು ‘ಸಮ’, ‘ಮಧುರ’, ‘ನಿಬಿಡ’, ‘ಕಾಂತ’, ‘ಸುಕುಮಾರ’, ‘ಸಮಾಹಿತ’, ‘ಪ್ರಸನ್ನ’, ‘ಉದಾರ’, ‘ಅಗ್ರಾಮ್ಯ’, ‘ಓಜಸ್ವಿ’ ಎಂಬ ಹತ್ತು ಗುಣಗಳಿಂದಾಗಿ ಹತ್ತು ಬಗೆಗಳನ್ನುದಾಗುತ್ತದೆ.

೫೫. ಉಕ್ತ ಗುಣಗಳ ವಿಪರ್ಯಯ ಸ್ವರೂಪವೇ ಉತ್ತರಮಾರ್ಗವನ್ನು ಪ್ರತ್ಯೇಕಿಸುವ ವೈಶಿಷ್ಟ್ಯ. ಹೀಗೆ ಎರಡೂ ಮಾರ್ಗಗಳ ವಿಶೇಷ ಗುಣಗಳನ್ನು ನೃಪತುಂಗನ ಮತದಂತೆ ತಿಳಿಸುವೆನು. *ಇಲ್ಲಿ ಆರ್ಥಕ್ಲೇಶ ಪರಿಹಾರಕ್ಕಾಗಿ ‘ತದ್ದ್ವಯಂ’ ಎಂದು ಬಿ. ಎಂ. ಶ್ರೀ ಅವರ ಸೂಚಿತ ಪಾಠವನ್ನು ಸ್ವೀಕರಿಸಿದೆ. ಆದರೆ ಹಸ್ತಪ್ರತಿಗಳ ಪ್ರಕಾರ ಮೂಲ ಪಾಠವಿರುವುದು “ತದ್ಭವದೊಳ್” ಎಂದು. ಇಲ್ಲಿ ‘ತದ್ಭವ ಎಂದರೆ ‘ಕವಿಮಾರ್ಗ’ವೆಂಬ ಗ್ರಂಥಾಶತರದ ಆಧಾರಮೇಲೆ ರಚಿಸಲ್ಪಟ್ಟ ಪ್ರಸ್ತುತ ‘ಕವಿರಾಜಮಾರ್ಗ’ವೆಂದೂ, “ತಜ್ಜನ್ಯವಾದ ಲಕ್ಷ್ಯಸಂದರ್ಭ” ಎಂದೂ, “ದಕ್ಷಿಣ ಮಾರ್ಗಜನ್ಯ ರೀತಿ”ಯೆಂದೂ ಬಗೆಬಗೆಯ ವಿವರಣೆಗಳನ್ನು ವಿದ್ವಾಂಸರು ಮಾಡಿದ್ದಾರೆ. ಇದಾವ ವಿವರಣೆಯೂ ಸಂದರ್ಭೋಚಿತವಾಗಿಲ್ಲ. ಸಂದರ್ಭೋಚಿತವಾಗಿ ಕೊಡಬಹುದಾದ ವಿವರಣೆಯೆಂದರೆ ಮಿಕ್ಕೆಡೆಗಳಲ್ಲಿ “ಪೇೞ್ವೆನಿನಿಸಂ ಕನ್ನಡದೊಳ್” (MM-೪೬) ಎಂದಂತೆ ಇಲ್ಲಿಯೂ ಕನ್ನಡ ಕಾವ್ಯೋಕ್ತಿಗೆ ಸಂಬಂಧಿಸಿದಂತೆ ಎಂಬುದೊಂದೇ ಎಂದು ನಮ್ಮ ಭಾವನೆ. ಆ ಆರ್ಥ ನೇರವಾಗಿಯೇ “ತದ್ಭವದೊಳ್” ಎಂಬುದರಿಂದ ಬರುವ ಸಂಭಾವ್ಯತೆಯೂ ಇದೆ; ‘ತತ್’ ಎಂದರೆ ಇಲ್ಲಿ ದಶಗುಣಗಳನ್ನು ಮೊದಲು ಲಾಕ್ಷಣಿಕರು ಹೇಳಿರುವ ‘ಸಂಸ್ಕೃತ’ ಎಂದಿಟ್ಟುಕೊಂಡರೆ. ಸಂಸ್ಕೃತ-ಜನ್ಯವಾದ ಕಾವ್ಯಭಾಷೆಯೇ ಕನ್ನಡ ಕಾವ್ಯದ ಭಾಷೆಯೆಯೆಂದು ಅಂದಿನ ಲಾಕ್ಷಣಿಕರು ತಿಳಿದಿದ್ದರೆ ಸೋಜಿಗವೇನೂ ಇಲ್ಲ; ಇಂದಿನ ಆರ್ಯ-ದ್ರಾವಿಡ ಭಾಷಾವರ್ಗಗಳ ಪರಿಜ್ಞಾನವನ್ನು ಅವರ ತಲೆಗೆ ಕಟ್ಟಬೇಕಾದ ಪ್ರಮೇಯ ಅನಗತ್ಯ.


[1] ಗತಿಯಿಂ ‘ಅ, ಕ’.

[2] ತಱಸಲಾಗದಾರ್ಗಂ

‘ಪಾ, ಮ, ಸೀ,;ಇಲ್ಲಿ ಸ್ವೀಕೃಥಪಾಠಕ್ಕೆ ಆಧಾರ ‘ಬ’. ಇದೇ ಪಾಠ ‘ಸೀ’ ಮೈಸೂರು

ಆವೃತ್ತಿಯಲ್ಲೂ ಸ್ವೀಕೃತ.

[3] ಪದನಿಧಿಯಂ ‘ಮ, ಸೀ’.

[4] ಪೊರದಿರೆಯೊಂದೊಂದಂ ‘ಬ’. ಪೊರೆಗಿರಲ್ ‘ಪಾ, ಸೀ’; ಇಲ್ಲಿ ಅರ್ಥಕ್ಕೆ ಸಮನ್ವಯವಾಗಲೆಂದು ಪರಿಷ್ಕೃತ ಪಾಠವನ್ನು ಕೊಟ್ಟಿದೆ.

[5] ಮಾತುಂ ‘ಅ, ಕ, ಮ’.

[6] ಎಂತುಂ ‘ಬ’.

[7] ಚಿಂತಿಸಿ ‘ಬ’.

[8] ಬಗೆವಾಗಳೆರಡೆ ‘ಬ’.

[9] ತಕಾರಕ್ಕೆ ದಕಾರ ಪ್ರಾಸ ಸಲ್ಲದೆಂದು ‘ಮ, ಸೀ’ಇದನ್ನು ‘ವಿತತೋ’ ಎಂದು ಪರಿಷ್ಕರಿಸುವರು; ವರ್ಗಾಕ್ಷರವಾದ್ದರಿಂದ ಈ ತಿದ್ದುವಿಕೆ ಅನಗತ್ಯ.

[10] ಪ್ರಮಿತ ಗ್ರಾಮ್ಯೋಜಷ್ವಿ ‘ಪಾ, ಸೀ’. ದಂಡಿಯಲ್ಲಿರುವಂತೆ ಇಲ್ಲಿಯೂ ‘ಅಗ್ರಾಮ್ಯ’ವೆಂಬುದೇ ಸರಿಯಾದ ಪಾಠವೆಂದು ನಿಸ್ಸಂಸಯ ‘ಗ್ರಾಮ್ಯ’ ಎಂದೂ ಗುಣವಲ್ಲ.

[11] ‘ತದ್ಭವದೊಳ್’ ‘ಪಾ, ಮ, ಸೀ’; ಇದು ಅಪಾತತಃ ಇಲ್ಲಿ ಅಸಂಬದ್ಧವೋ ಎನಿಸುವುದಲ್ಲದೇ ವಿಪರೀತ ಶುಷ್ಕಚರ್ಚೆಗೆ ಎಡೆಮಾಡಿದೆ. ಬಿ.ಎಂ. ಶ್ರೀ ಸೂಚಿಸಿದಂತೆ ಈ ಪರಿಷ್ಕರಣ ಮಾಡಿಕೊಂಡರೆ ಸಂದರ್ಭಕ್ಕೆ ಹೊಂದುತ್ತದೆ.

ಆಧಾರ: ಕಣಜ

ಇವುಗಳೂ ನಿಮಗಿಷ್ಟವಾಗಬಹುದು

Kumaravyasa

ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. …

Leave a Reply

Your email address will not be published. Required fields are marked *