Wednesday , 12 June 2024
Shivaratri

ಮಹಾಶಿವರಾತ್ರಿ ನಿಮಿತ್ತ ತಮ್ಮ ದುರ್ಗುಣ ನಾಶವಾಗಲು ಪ್ರಯತ್ನಿಸಿ, ಶಿವನ ಕೃಪೆಯನ್ನು ಸಂಪಾದಿಸಿ !

‘ಶಿವ’ ಈ ಶಬ್ದದ ಅರ್ಥ: ‘ಶಿವ’ ಈ ಶಬ್ದದ ಅರ್ಥ ‘ಮಂಗಲಮಯ ಮತ್ತು ಕಲ್ಯಾಣಸ್ವರೂಪ’ ಎಂದಾಗಿದೆ.

೨. ಶಿವನಿಗೆ ಪ್ರಾರ್ಥನೆಯನ್ನು ಏಕೆ ಮಾಡುತ್ತೇವೆ ?: ಹಿಂದೂ ಧರ್ಮದಲ್ಲಿ ದೇವತೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆನಂದ ಮತ್ತು ಶಾಂತಿ ನೀಡುವಂತಹ ಶಕ್ತಿಯನ್ನು ಕರುಣಿಸುತ್ತಾರೆ; ಆದರೆ ಅದಕ್ಕಾಗಿ ನಾವು ದೇವತೆಗಳ ಉಪಾಸನೆ ಅಂದರೆ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆಯು ದೇವತೆಗಳನ್ನು ಪ್ರಸನ್ನಗೊಳಿಸುವ ಸಹಜ ಮತ್ತು ಸುಲಭ ಮಾರ್ಗವಾಗಿದೆ. ಇತರ ದೇವತೆಹ್ಗಳಂತೆ ಶಿವನಿಗೂ ಪ್ರಾರ್ಥನೆ ಮಾಡಿದರೆ ಅವನು ಶೀಘ್ರವಾಗಿ ಪ್ರಸನ್ನಗೊಂಡು ಕೃಪೆ ಮಾಡುತ್ತಾನೆ.

೩. ಶಿವನ ಪ್ರಚಲಿತ ಹೆಸರುಗಳು ಮತ್ತು ಅವುಗಳ ಭಾವಾರ್ಥ: ೩ ಅ. ಮಹಾದೇವ : ಶಿವನಲ್ಲಿ ಪರಿಪೂರ್ಣ ಪಾವಿತ್ರ್ಯ ಮತ್ತು ಜ್ಞಾನವಿದೆ. ಅದಕ್ಕಾಗಿ ನಾವು ಅವನಿಗೆ ‘ಮಹಾದೇವ’ ಎಂದು ಹೇಳುತ್ತೇವೆ. ಸ್ನೇಹಿತರೇ, ಇಂತಹ ಮಹಾದೇವನ ಉಪಾಸನೆ ಮಾಡಿದರೆ ನಾವು ಕೂಡಾ ಪರಿಪೂರ್ಣರಾಗಬಹುದು.

ಆ. ತ್ರಿನೇತ್ರ : ಶಂಕರನಿಗೆ ‘ತ್ರಿನೇತ್ರ’ ಎಂದೂ ಕರೆಯುತ್ತಾರೆ. ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ಕಾಲ ಇವುಗಳ ಎಲ್ಲ ಘಟನೆಗಳನ್ನು ನೊಡಬಲ್ಲವರಿಗೆ ‘ತ್ರಿನೇತ್ರ’ ಎಂದು ಹೇಳುತ್ತಾರೆ.

ಇ. ಕರ್ಪೂರಗೌರ : ಶಿವನ ಬಣ್ಣವು ಕರ್ಪೂರದಂತಿದೆ; ಆದುದರಿಂದ ಅವನಿಗೆ ‘ಕರ್ಪೂರಗೌರ’ ಎಂದು ಕರೆಯುತ್ತಾರೆ.

೪. ಶಿವನ ಹಣೆಯಲ್ಲಿರುವ ಚಂದ್ರನಕಲೆ ಹಾಗೂ ವ್ಯಾಘ್ರಾಂಬರ ಇವುಗಳ ವೈಶಿಷ್ಟ್ಯಗಳು: ೪ ಅ. ಶಿವನ ತಲೆಯ ಮೇಲೆ ಚಂದ್ರನಿರುವುದರ ವೈಶಿಷ್ಟ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಗುಣಗಳು : ಶಿವನ ತಲೆಯ ಮೇಲೆ ಚಂದ್ರನಿದ್ದಾನೆ. ಆ ಚಂದ್ರವು ಶಿವನಲ್ಲಿರುವ ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ ಈ ಗುಣಗಳನ್ನು ದರ್ಶಿಸುತ್ತದೆ. ಆ ಗುಣಗಳ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಅ ೧. ಮಮತೆ : ಮಮತೆ ಅಂದರೆ ಪ್ರೇಮ ! ನಮ್ಮಲ್ಲಿ ಇತರರ ಬಗ್ಗೆ ತುಂಬಾ ಪ್ರೀತಿಯಿರಬೇಕು. ಇಂದು ಮಕ್ಕಳು ಪರಸ್ಪರರನ್ನು ವಿಕೃತವಾಗಿ ಹೊಡೆಯುತ್ತಾರೆ, ಚೇಷ್ಟೆ-ತಮಾಷೆ ಮಾಡುತ್ತಾರೆ. ಇದು ಮಮತೆಯೇ ? ಅಲ್ಲವಲ್ಲ ? ನಾವು ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸಬೇಕು. ಎಲ್ಲರಿಗೆ ಸಹಾಯ ಮಾಡಬೇಕು. ಚಿಕ್ಕವರಲ್ಲಿ ದೊಡ್ಡವರಲ್ಲಿ ನಮ್ರತೆಯಿಂದ ಮಾತನಾಡಬೇಕು. ಹೀಗೆ ಮಾಡಿದರೆ ಶಿವನ ಕೃಪಾದೃಷ್ಟಿ ಸದಾ ಉಳಿಯುತ್ತದೆ.

ಅ ೨. ಕ್ಷಮಾಶೀಲತೆ : ಯಾರಾದರೊಬ್ಬ ಸ್ನೇಹಿತನಿಂದ ತಪ್ಪಾದರೆ ನಾವು ಅವನನ್ನು ಕ್ಷಮಿಸಬೇಕು. ಇಂದಿನ ಮಕ್ಕಳು ಚಿಕ್ಕ-ಪುಟ್ಟ ಕಾರಣಗಳಿಗೆ ಕೂಡಲೇ ಹೊಡೆದಾಡುತ್ತಾರೆ. ಯಾರಲ್ಲಿ ಕ್ಷಮಾಶೀಲತೆ ಇದೆಯೋ ಅವನು ಶಾಂತನಾಗಿ ಸ್ವಂತದ ತಪ್ಪು ಹೇಳುತ್ತಾನೆ ಮತ್ತು ತನ್ನನ್ನು ಸುಧಾರಿಸಲು ಪ್ರಯತ್ನಿಸುತ್ತಾನೆ. ಇಂತಹ ಮಕ್ಕಳಿಗೆ ಶೀಘ್ರವಾಗಿ ಶಿವನ ಕೃಪೆಯಾಗುತ್ತದೆ. ಎಲ್ಲರೂ ಅದನ್ನು ಸಾಧಿಸಲು ಪ್ರಯತ್ನಿಸಬೇಕು.

ಅ ೩. ವಾತ್ಸಲ್ಯ : ಎಲ್ಲರಿಗೂ ತಾಯಿಯ ಪ್ರೀತಿಯನ್ನು ನೀಡುವುದೇ ವಾತ್ಸಲ್ಯ ! ಇದು ಶಿವನ ಗುಣವಾಗಿದ್ದು ಅದನ್ನು ತನ್ನಲ್ಲಿ ತರಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ನಾವು ಹತ್ತಿರದ ಸ್ನೇಹಿತರನ್ನು ಹೆಚ್ಚು ಪ್ರೀತಿಸುತ್ತೇವೆ; ಆದರೆ ಇತರರನ್ನು ಪ್ರೀತಿಸುವುದಿಲ್ಲ. ಇಂತಹ ಇಬ್ಬಗೆಯ ವರ್ತನೆ ಶಿವನಲ್ಲಿಲ್ಲ. ಅವನು ಎಲ್ಲರನ್ನು ಸಮಾನವಾಗಿ ಪ್ರೀತಿಸುತ್ತಾನೆ.

ಆ. ವ್ಯಾಘ್ರಾಂಬರ : ಹುಲಿ ಕ್ರೌರ್ಯದ ಪ್ರತೀಕ. ಇಂತಹ ಕ್ರೂರ ಹುಲಿಯನ್ನು ಕೊಂದು ಶಿವನು ಅದರ ಆಸನವನ್ನು ತಯಾರಿಸಿದನು. ಮಕ್ಕಳೇ, ನಮ್ಮಲ್ಲಿರುವ ದುಗುರ್ಣಗಳೇ ನಮ್ಮನ್ನು ಕ್ರೂರರನ್ನಾಗಿಸುತ್ತವೆ. ಅವು ನಮ್ಮನ್ನು ಆನಂದದಾಯಕ ಮತ್ತು ಆದರ್ಶ ಜೀವನದಿಂದ ದೂರ ಕೊಂಡೊಯ್ಯುತ್ತವೆ. ಇಂತಹ ದುಗುರ್ಣಗಳನ್ನು ನಾಶ ಪಡಿಸಿ ತಮ್ಮ ಜೀವನವನ್ನು ಆನಂದದಾಯಕ ಮಾಡಬೇಕು.

೫. ಶಿವನ ಆಧ್ಯಾತ್ಮಿಕ ವೈಶಿಷ್ಟ್ಯಗಳು: ೫ ಅ. ಮಹಾತಪಸ್ವಿ ಮತ್ತು ಮಹಾಯೋಗಿ : ಸತತ ನಾಮಜಪ ಮಾಡುವ ಒಬ್ಬ ದೇವನೆಂದರೆ ‘ಶಿವ’. ಶಿವನು ಸತತ ಧ್ಯಾನಮುದ್ರೆಯಲ್ಲಿ ಮತ್ತು ಆಸೀನನಾಗಿರುತ್ತಾನೆ.

ನಮಗೆ ದೇವರು ಬೇಕಾಗಿದ್ದಾನೆ ಅಥವಾ ದೇವರಂತೆ ಆಗಲಿಕ್ಕಿದೆ, ಅದಕ್ಕಾಗಿ ಸತತವಾಗಿ ಆತನ ನಾಮಸ್ಮರಣೆಯನ್ನು ಮಾಡಬೇಕು. ನಾಮಸ್ಮರಣೆ ಮಾಡಿದರೆ ದುರ್ಗುಣಗಳು ನಾಶವಾಗಿ ನಾವೂ ಆನಂದದಲ್ಲಿರುತ್ತೇವೆ; ಆದರೆ ಅದಕ್ಕಾಗಿ ಸತತವಾಗಿ ನಾಮಜಪ ಮಾಡಲು ಪ್ರಯತ್ನಿಸಬೇಕು. ಕೆಲವು ಮಕ್ಕಳು ಪರಸ್ಪರರನ್ನು ನಿಂದಿಸುವುದು, ತಂದೆ-ತಾಯಿಯರ ಹೆಸರಿಂದ ಚುಡಾಯಿಸುವುದು ಈ ರೀತಿ ಅಯೋಗ್ಯವಾಗಿ ವರ್ತಿಸುತ್ತಾರೆ. ನಾವು ಸತತವಾಗಿ ನಾಮಜಪ ಮಾಡಿದರೆ ಮಾತಿನಲ್ಲಿ ಮಾಧುರ್ಯ ಮತ್ತು ನಮ್ರತೆ ಬಂದು ನಾವು ಇತರರ ಪ್ರೀತಿಗೆ ಪಾತ್ರರಾಗಬಹುದು. ಅದಕ್ಕಾಗಿ ಮುಂಬರುವ ಶಿವರಾತ್ರಿಗೆ ಎಲ್ಲರೂ ನಾಮಜಪ ಮಾಡಲು ನಿಶ್ಚಯಿಸೋಣ.

ಆ. ಇತರರ ಸುಖಕ್ಕಾಗಿ ಯಾವುದೇ ಕಷ್ಟಗಳನ್ನು ಸಹಿಸಲು ಸಿದ್ಧನಾಗಿರುವವನು : ಸಮುದ್ರಮಂಥನದಿಂದ ಉತ್ಪನ್ನವಾದ ಹಾಲಾಹಲ ವಿಷವು ಸಂಪೂರ್ಣ ವಿಶ್ವವನ್ನು ಸುಡುವಂತಿತ್ತು. ಆಗ ಯಾವುದೇ ದೇವತೆಯು ಅದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಆಗ ಶಿವನು ಆ ವಿಷವನ್ನು ಸ್ವೀಕರಿಸಿದನು ಮತ್ತು ಅರಗಿಸಿಕೊಂಡನು. ಇಲ್ಲದಿದ್ದರೆ ವಿಶ್ವವು ನಾಶವಾಗುತ್ತಿತ್ತು. ಶಿವನು ವಿಷವನ್ನು ಕುಡಿದು ವಿಶ್ವವನ್ನು ವಿನಾಶದಿಂದ ರಕ್ಷಿಸಿದನು.

೫ ಆ ೧. ‘ಇತರರ ಕಷ್ಟವನ್ನು ಸಹಿಸುವುದು’ ಈ ವ್ಯಾಪಕ ವಿಚಾರ ಮಕ್ಕಳಲ್ಲಿ ನಿರ್ಮಾಣವಾದರೆ ಮಾತ್ರ ಎಲ್ಲ ಸಮಸ್ಯೆಗಳು ಬಗೆಹರಿದು ರಾಷ್ಟ್ರ ಮತ್ತು ಸಮಾಜವು ಆನಂದದಿಂದಿದ್ದು ಶಿವನ ಕೃಪೆಯಾಗುವುದು : ಶಿವನು ಇತರರ ಕಲ್ಯಾಣಕ್ಕಾಗಿ ಯಾವುದೇ ಕಷ್ಟಗಳನ್ನು ಭೋಗಿಸಲು ಸಿದ್ಧನಿರುತ್ತಾನೆ. ನಾವು ಕೂಡಾ ಇತರರ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಸರ್ವಸ್ವದ ತ್ಯಾಗ ಮಾಡಬೇಕು. ಆದರೆ ನಾವು ಇಂದೇನು ನೋಡುತ್ತೇವೆ ? ಪ್ರತಿಯೊಬ್ಬರು ‘ನಾನು ಮತ್ತು ನನ್ನ ಕುಟುಂಬ’ ಎಂಬ ಸ್ವಾರ್ಥದಿಂದ ವರ್ತಿಸುತ್ತಾರೆ. ಯಾರೂ ಕೂಡಾ ರಾಷ್ಟ್ರ ಮತ್ತು ಸಮಾಜದ ವಿಚಾರ ಮಾಡುವುದಿಲ್ಲ. ಸಮಾಜದಲ್ಲಿ ಇತರರ ಕಷ್ಟ ನಿವಾರಿಸುವುದಲ್ಲ, ಇತರರಿಗೆ ಕಷ್ಟ ನೀಡುವ ವೃತ್ತಿಯು ಹೆಚ್ಚಾಗುತ್ತಿದೆ. ಶಾಲೆಯಲ್ಲಿ ಮಕ್ಕಳು ಇತರರಿಗೆ ಹೊಡೆಯುವುದು, ಬೆದರಿಸುವುದು ಇತ್ಯಾದಿಗಳನ್ನು ಮಾಡುತ್ತಾರೆ. ಇಂತಹವರಿಗೆ ಶಿವನ ಕೃಪೆಯಾಗುವುದೇ ? ‘ಇತರರಿಗಾಗಿ ಕಷ್ಟ ಸಹಿಸುವುದು’ ಇಂತಹ ವ್ಯಾಪಕ ವಿಚಾರವು ಮಕ್ಕಳಲ್ಲಿ ನಿರ್ಮಾಣವಾದರೆ ಮಾತ್ರ ಎಲ್ಲ ಸಮಸ್ಯೆಗಳು ಬಗೆಹರಿದು ರಾಷ್ಟ್ರ ಮತ್ತು ಸಮಾಜವು ಅನಂದಾಯಕವಾಗುವುದು. ಛತ್ರಪತಿ ಶಿವಾಜಿಯು ಸ್ವರಾಜ್ಯಕ್ಕಾಗಿ ಅನೇಕ ಕಷ್ಟಗಳನ್ನು ಸಹಿಸಿದರು; ಏಕೆಂದರೆ ಇತರರಿಗಾಗಿ ಯಾವುದೇ ಕಷ್ಟಗಳನ್ನು ಸಹಿಸುವ ವೃತ್ತಿಯು ಅವರಲ್ಲಿತ್ತು. ಇದುವೇ ನಿಜವಾದ ತ್ಯಾಗವಾಗಿದೆ.

ಮಹಾಶಿವರಾತ್ರಿಯ ನಿಮಿತ್ತ ಮಕ್ಕಳು, ‘ನಾನು ಇತರರಿಗೆ ದುಃಖವಾಗುವಂತಹ ಯಾವುದೇ ಕೃತಿಗಳನ್ನು ಮಾಡುವುದಿಲ್ಲ’ ಎಂದು ನಿಶ್ಚಯಿಸಿ, ಶಿವನ ಚರಣಗಳಲ್ಲಿ ಮುಂದಿನಂತೆ ಪ್ರಾರ್ಥಿಸೋಣ, “ಹೇ ಭೋಲೆನಾಥಾ, ಇಂದಿನ ತನಕ ನಾನು ಯಾರಿಗಾದರೂ ದುಃಖವಾಗುವಂತೆ ವರ್ತಿಸಿದ್ದರೆ ಅಥವಾ ಮಾತುಗಳು ಆಡಿದ್ದರೆ ನನ್ನನ್ನು ಕ್ಷಮಿಸು. ಈ ಮಹಾಶಿವರಾತ್ರಿಯಿಂದ ಇತರರ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಯಾವುದೇ ಕಷ್ಟಗಳನ್ನು ಸಹಿಸುವ ಶಕ್ತಿಯನ್ನು ಮತ್ತು ಬುದ್ಧಿಯನ್ನು ನೀನೇ ನನಗೆ ನೀಡು, ಇದೆ ನಿನ್ನ ಚರಣಗಳಲ್ಲಿ ಪ್ರಾರ್ಥನೆ’.

೫ ಇ. ಕೋಪಿಷ್ಠ – ಯಾರಾದರೂ ಧ್ಯಾನವನ್ನು ಕೆಡಿಸದರೆ ನಾಮಜಪದಿಂದ ನಿರ್ಮಾಣವಾದ ಶಕ್ತಿಯಿಂದ ಎದುರಿನಲ್ಲಿರುವುದನ್ನೆಲ್ಲ ಭಸ್ಮ ಮಾಡುವುದು ಮತ್ತು ತಾನಾಗಿ ಧ್ಯಾನದಿಂದ ಎಚ್ಚರವಾದರೆ ಹಾಗೆ ಆಗದಿರುವುದು : ‘ಶಿವ’ ಅಂದರೆ ಕೋಪಿಷ್ಠ’ ಎಂಬುದು ನಮ್ಮ ತಿಳುವಳಿಕೆಯಾಗಿದೆ. ಪ್ರತ್ಯಕ್ಷದಲ್ಲಿ ಹಾಗಿದೆಯೇ ? ನೀವು ‘ಶಿವನು ಮೂರನೆಯ ಕಣ್ಣನ್ನು ತೆರೆದರೆ ಎಲ್ಲವೂ ಭಸ್ಮವಾಗುತ್ತದೆ’ ಎಂದು ಕೇಳಿರಬಹುದು. ಯಾವ ದೇವರು ಇತರರಿಗಾಗಿ ವಿಷವನ್ನು ಗ್ರಹಿಸುತ್ತಾನೆಯೋ ಅವನು ಈ ರೀತಿ ಮಾಡುವನೇ ? ಇಲ್ಲವಲ್ಲ ? ಶಿವನು ಸತತವಾಗಿ ಧ್ಯಾನಾವಸ್ಥೆಯಲ್ಲಿ ನಾಮಜಪ ಮಾಡುತ್ತಿರುತ್ತಾನೆ. ನಾಮಜಪ ಮಾಡಿದ್ದರಿಂದ ಬಹಳ ಶಕ್ತಿ ನಿರ್ಮಾಣವಾಗುತ್ತದೆ. ಯಾರಾದರೂ ಅವನ ಧ್ಯಾನವನ್ನು ಕೆಡಿಸಿದರೆ ಅವನು ಮೂರನೆಯ ಕಣ್ಣನ್ನು ತೆರೆಯುತ್ತಾನೆ. ನಾಮಜಪದಿಂದ ನಿರ್ಮಾಣವಾದ ಶಕ್ತಿಯಿಂದ ಎದುರಿಗಿರುವ ಎಲ್ಲವುಗಳನ್ನು ಭಸ್ಮ ಮಾಡುತ್ತದೆ. ಅವನು ತಾನಾಗಿ ಧ್ಯಾನದಿಂದ ಎಚ್ಚರವಾದರೆ ಏನೂ ಆಗುವುದಿಲ್ಲ; ಎಕೆಂದರೆ ಆ ಶಕ್ತಿಯ ಮೇಲೆ ಅವನ ನಿಯಂತ್ರಣವಿರುತ್ತದೆ.

ಈ. ಭಕ್ತಿಯಿಂದಾಗಿ ಸಹಜವಾಗಿ ಪ್ರಸನ್ನಗೊಳ್ಳುವವನು : ಎಲ್ಲರೂ ಭಾವಪೂರ್ಣ ಪ್ರಾರ್ಥನೆ ಮತ್ತು ನಾಮಜಪ ಮಾಡಿದರೆ ಶಿವನು ಕೂಡಲೇ ಪ್ರಸನ್ನಗೊಳ್ಳುತ್ತಾನೆ. ಅದಕ್ಕಾಗಿ ನಾವು ಅವನ ಭಕ್ತಿಯನ್ನು ಹೆಚ್ಚೆಚ್ಚು ಮಾಡೋಣ.

ಉ. ಭೂತಗಳ ಸ್ವಾಮಿ : ಶಿವನು ಭೂತಗಳ ಸ್ವಾಮಿಯಾಗಿದ್ದಾನೆ. ದೇವತೆಗಳು ಸೂಕ್ಷ್ಮ ಮತ್ತು ವಾಯೂರೂಪದಲ್ಲಿರುತ್ತದೆ, ಅದರಂತೆಯೇ ಭೂತಗಳಿರುತ್ತವೆ. ಇವುಗಳೆಂದರೆ ಕೆಲವು ಮಕ್ಕಳಿಗೆ ಭಯವೆನಿಸುತ್ತದೆ, ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳುವಂತಹ ತೊಂದರೆಗಳಾಗುತ್ತವೆ. ಕೆಟ್ಟ ಶಕ್ತಿಗಳು ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಸಂಚರಿಸುತ್ತವೆ. ಶಿವನು ಕೆಟ್ಟ ಶಕ್ತಿಗಳ ಸ್ವಾಮಿಯಾಗಿದ್ದಾನೆ. ನಾವು ಪ್ರತಿದಿನ ಮಲಗುವ ಮೊದಲು ೫ ನಿಮಿಷ ಶಿವನ ಜಪ ಮಾಡಿದರೆ ಯಾವುದೇ ಕೆಟ್ಟ ಕನಸುಗಳು ಬೀಳುವುದಿಲ್ಲ. ನಾಮಜಪ ಮಾಡುವಾಗ ನಾವು ದೇವರನ್ನು ಕರೆಯುತ್ತೇವೆ. ಇಂದಿನಿಂದ ಎಲ್ಲರೂ ರಾತ್ರಿ ಮಲಗುವ ಮೊದಲು ಶಿವನ ಜಪವನ್ನು ಮಾಡಬೇಕು. ನಾವು ಮಾಲಕನನ್ನು ಕರೆದರೆ ಅವನ ಮುಂದೆ ನೌಕರರ ಮಾತು ಏನೂ ನಡೆಯುವುದಿಲ್ಲವಲ್ಲ ?

೬. ಶಿವನ ಕಾರ್ಯ: ೬ ಅ. ವಿಶ್ವದ ಕಾರ್ಯ (ಉತ್ಪತ್ತಿ, ಸ್ಥಿತಿ ಮತ್ತು ಲಯ) ನೋಡುವುದು : ಸ್ನೇಹಿತರೇ, ಶಿವ-ಪಾರ್ವತಿಯರು ‘ವಿಶ್ವದ ತಾಯಿ-ತಂದೆ’ ಎಂದು ಕರೆಯಿಸಲ್ಪಡುತ್ತಾರೆ. ವಿಶ್ವದ ನಾಶವಾದ ಮೇಲೆ ನವನಿರ್ಮಿತಿಗಾಗಿ ಶಿವನು ಶಕ್ತಿಯನ್ನು ನೀಡುತ್ತಾನೆ. ಭಾರತೀಯ ಸಂಸ್ಕೃತಿಯಲ್ಲಿ ನಾವು ‘ಮಾತೃದೇವೊ ಭವ ಪಿತೃದೇವೊ ಭವ’ ಎಂದು ಹೇಳುತ್ತೇವೆ. ತಂದೆ-ತಾಯಂದಿರು ನಮಗೆ ದೇವರಿಗೆ ಸಮಾನ. ಅವರ ಮಾಧ್ಯಮದಿಂದ ದೇವರೇ ನಮ್ಮ ಪಾಲನೆ ಪೋಷಣೆಯನ್ನು ಮಾಡುತ್ತಾರೆ. ಮಕ್ಕಳೇ, ವಿಚಾರ ಮಾಡಿ, ನಾವು ನಮ್ಮ ಹೆತ್ತವರೊಂದಿಗೆ ‘ಅವರು ದೇವರಾಗಿದ್ದಾರೆ’ ಎಂಬ ಭಾವವಿಟ್ಟು ವರ್ತಿಸುತ್ತೇವೆಯೇ ? ಅವರಿಗೆ ಪ್ರತಿದಿನ ನಮಸ್ಕಾರ ಮಾಡುತ್ತೇವೆಯೇ ?’ ಇಂದಿನಿಂದ ಎಲ್ಲರೂ ನಿಮ್ಮ ತಂದೆ ತಾಯಿಯನ್ನು ‘ಶಿವ-ಪಾರ್ವತಿ’ ಎಂದೆನಿಸಿ ಪ್ರತಿಯೊಂದು ಕೃತಿಯನ್ನು ಆ ಭಾವದಿಂದಲೇ ಮಾಡಲು ಪ್ರಯತ್ನಿಸಬೇಕು.

೭. ಶಿವನ ಒಂದು ರೂಪ – ನಟರಾಜ: ೭ ಅ. ನೃತ್ಯವು ಈಶ್ವರಭಕ್ತಿಯ ಸಾಧನವಾಗಿದ್ದರಿಂದ ಎಲ್ಲರಿಗೆ ಆನಂದ ಮತ್ತು ಶಾಂತಿ ದೊರಕುವುದು : ಶಿವನಿಗೆ ಎರಡು ರೂಪಗಳಿವೆ. ಒಂದು ಸಮಾಧಿರೂಪ ಮತ್ತು ಮತ್ತೊಂದು ನೃತ್ಯರೂಪ. ಸಮಾಧಿರೂಪವು ನಿರ್ಗುಣವಾಗಿದ್ದು ನೃತ್ಯರೂಪವು ಸಗುಣವಾಗಿದೆ. ಶಿವನು ನಮಗೆ ನೃತ್ಯಕಲೆಯನ್ನು ನೀಡಿದನು. ಆದುದರಿಂದ ನಾವು ಅವನಿಗೆ ‘ನಟರಾಜ’ ಎಂದು ಸಂಬೋಧಿಸುತ್ತೇವೆ. ನಮ್ಮ ಸಂಸ್ಕೃತಿಯಂತೆ ನೃತ್ಯವು ಈಶ್ವರಭಕ್ತಿಯ ಸಾಧನವಾಗಿದೆ. ನೃತ್ಯದಿಂದ ನಮಗೆ ದೇವತೆಗಳ ಶಕ್ತಿಯು ದೊರೆಯುತ್ತದೆ. ನೃತ್ಯ ನೋಡುವವನಿಗೆ ಮತ್ತು ಮಾಡುವವನಿಗೆ ಆನಂದ ಮತ್ತು ಶಾಂತಿ ದೊರೆಯುತ್ತದೆ.

ಆ. ವಿದೇಶಿ ರೀತಿಯ ಭೀಭತ್ಸ ನೃತ್ಯ ಮಾಡದಿರುವುದೇ ನಿಜವಾದ ಶಿವಭಕ್ತಿಯಾಗಿರುವುದು : ನಾವು ಅನೇಕ ರೀತಿಯಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡುತ್ತಿದ್ದೇವೆ. ‘ಪಾಪ್’ ಮತ್ತು ‘ರೀಮಿಕ್ಸ’ ಇವುಗಳಂತಹ ‘ಸಂಗೀತಕ್ಕೆ’ ನರ್ತಿಸಿ ಸಮಾಜಕ್ಕೆ ಮತ್ತು ತನಗೆ ದುಃಖವನ್ನೇ ನೀಡುತ್ತಿದ್ದೇವೆ. ಈ ವಿದೇಶಿ ನೃತ್ಯದ ವಿಧಗಳು ಎಂದರೆ ನಟೇಶ್ವರನ (ಶಿವನ) ಅಪಮಾನವೇ ಆಗಿದೆ. ಇಂತಹ ಭೀಭತ್ಸ ನೃತ್ಯಗಳನ್ನು ಮಾಡಿದರೆ ನಮ್ಮ ಮೇಲೆ ಶಿವನ ಅವಕೃಪೆಯೇ ಆಗುತ್ತದೆ. ಇಂದಿನಿಂದಲೇ ಎಲ್ಲರೂ ‘ನಾನು ಎಂದಿಗೂ ವಿದೇಶಿ ರೀತಿಯ ನೃತ್ಯ ಮಾಡಲಾರೆನು ಮತ್ತು ಯಾರಾದರೂ ಮಾಡುತ್ತಿದ್ದರೆ ಅವರಿಗೆ ಪ್ರಬೋಧನೆ ಮಾಡುವೆನು’ ಎಂದು ನಿಶ್ಚಯಿಸೋಣ. ಹೀಗೆ ಮಾಡಿದರೆ ಶಿವನ ಕೃಪೆಯಾಗುವುದು ಮತ್ತು ಅದುವೇ ನಿಜವಾದ ಶಿವಭಕ್ತಿಯಾಗಿದೆ.

೮. ಮೂರ್ತಿವಿಜ್ಞಾನ: ಅ. ಡಮರು : ಶಿವನ ಕೈಯಲ್ಲಿ ಡಮರು ಇರುತ್ತದೆ. ಡಮರುವಿನ ನಾದದಿಂದ ಸಂಪೂರ್ಣ ವಿಶ್ವದ ಉತ್ಪತ್ತಿಯಾಯಿತು ಹಾಗೂ ೫೨ ಅಕ್ಷರಗಳ ಮೂಲ ಧ್ವನಿ ಅದರಿಂದಲೇ ನಿರ್ಮಾಣವಾಗಿದೆ.

೮. ಆ. ತ್ರಿಶೂಲ : ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರು ಅವಸ್ಥೆಗಳ ಪ್ರತೀಕವೆಂದರೆ ತ್ರಿಶೂಲ. ಉತ್ಪತ್ತಿಯೆಂದರೆ ನಿರ್ಮಿತಿ, ಸ್ಥಿತಿ ಅಂದರೆ ಸ್ಥಿರವಾಗಿಡುವುದು ಮತ್ತು ಲಯವೆಂದರೆ ನಾಶ. ಪ್ರತಿಯೊಂದು ವಿಷಯಕ್ಕೆ ಈ ಮೂರು ಅವಸ್ಥೆಗಳಿರುತ್ತವೆ, ಉದಾ. ನಮ್ಮ ಜನ್ಮವೆಂದರೆ ಉತ್ಪತ್ತಿ. ಅದರ ನಂತರ ನಾವು ಕೆಲವು ವರ್ಷ ಜೀವನ ನಡೆಸುತ್ತೇವೆ, ಅದಕ್ಕೆ ‘ಸ್ಥಿತಿ’ ಎಂದು ಹೇಳುತ್ತೇವೆ ಮತ್ತು ಮೃತ್ಯುವಾಗುತ್ತದೆಂದರೆ ‘ಲಯ’ವಾಗುತ್ತದೆ.

೮. ಇ. ಪರಶು : ಇದು ಅಜ್ಞಾನದ ನಾಶದ ಪ್ರತೀಕವಾಗಿದೆ. ಶಿವನು ಅಜ್ಞಾನದ ನಾಶ ಮಾಡುತ್ತಾನೆ. ಅಜ್ಞಾನದ ನಾಶದಿಂದಲೇ ಆನಂದ ಸಿಗುತ್ತದೆ.

೯. ಶಿವನ ಉಪಾಸನೆಯ ಪದ್ಧತಿ: ೯ ಅ. ಭಸ್ಮ ಹಚ್ಚುವುದು : ಶಿವನ ಉಪಾಸನೆ ಮಾಡುವವರು ಭಸ್ಮದ ಮೂರು ರೇಖೆಗಳನ್ನು ಹಣೆಯಲ್ಲಿ ಅಡ್ಡವಾಗಿ ಹಚ್ಚುತ್ತಾರೆ. ಈ ಮೂರು ರೇಖೆಗಳೆಂದರೆ ಜ್ಞಾನ, ಪಾವಿತ್ರ್ಯ ಮತ್ತು ಉಪಾಸನೆಯ ಪ್ರತೀಕವಾಗಿವೆ, ಹಾಗೆಯೇ ಆ ರೇಖೆಗಳನ್ನು ‘ಶಿವನ ಮೂರು ಕಣ್ಣುಗಳು’ ಎಂದೂ ಕರೆಯಲಾಗುತ್ತದೆ.

೯. ಆ. ರುದ್ರಾಕ್ಷಿಗಳ ಮಾಲೆಯನ್ನು ಕೊರಳಲ್ಲಿ ಧರಿಸುವುದು : ‘ಶಿವಪೂಜೆ ಮಾಡುವವರು ರುದ್ರಾಕ್ಷಿಗಳ ಮಾಲೆಯನ್ನು ಕೊರಳಲ್ಲಿ ಧರಿಸಬೇಕು’ ಎಂದು ಹೇಳುತ್ತಾರೆ. ರು+ಅಕ್ಷ – ಇವರೆಡು ಶಬ್ದಗಳಿಂದ ‘ರುದ್ರಾಕ್ಷ’ ಈ ಶಬ್ದವು ನಿರ್ಮಾಣವಾಗಿದೆ. ಯಾವುದು ಎಲ್ಲವನ್ನು ನೋಡಬಹುದು ಮತ್ತು ಮಾಡಬಲ್ಲದು ಅದಕ್ಕೆ ‘ರುದ್ರಾಕ್ಷ’ ಎಂದು ಹೇಳುತ್ತಾರೆ. ರುದ್ರಾಕ್ಷವು ವಿಶ್ವದ ದೇವತೆಗಳ ಪ್ರಕಾಶ ಲಹರಿಗಳನ್ನು ಮಾನವನ ನಾದಲಹರಿಗಳಲ್ಲಿ ಮತ್ತು ನಾದಲಹರಿಗಳನ್ನು ಪ್ರಕಾಶ ಭಾಷೆಯಲ್ಲಿ ರೂಪಾಂತರಿಸುತ್ತದೆ. ಮಾನವನ ವಿಚಾರಗಳನ್ನು ದೇವರ ಭಾಷೆಯಲ್ಲಿ ರೂಪಾಂತರಗೊಳಿಸುವುದು ರುದ್ರಾಕ್ಷ. ರುದ್ರಾಕ್ಷವು ಒಂದು ದೂರವಾಣಿಯಂತೆ ಕೆಲಸ ಮಾಡುತ್ತದೆ.

೯. ಇ. ಶಿವನಿಗೆ ತ್ರಿದಲ ಬಿಲ್ವ ಅರ್ಪಿಸುವುದು : ಕೌಮಾರ್ಯ, ಯೌವ್ವನ ಮತ್ತು ವೃದ್ಧಾವಸ್ಥೆ ಇವುಗಳಾಚೆ ಹೋಗಿ ‘ನಾವು ಆನಂದಸ್ವರೂಪ ಆತ್ಮವೇ ಆಗಿದ್ದೇವೆ’ ಇದರ ಅನುಭವ ಬರಬೇಕೆಂಬ ಉದ್ದೇಶದಿಂದ ನಾವು ಶಿವನಿಗೆ ತ್ರಿದಲ ಅರ್ಪಿಸುತ್ತೇವೆ. ತ್ರಿದಲ ಅಂದರೆ ಸತ್ತ್ವ, ರಜ ಮತ್ತು ತಮ ಈ ಮೂರೂ ಗುಣಗಳನ್ನು ಶಿವನಿಗೆ ಅರ್ಪಿಸುವುದರ ಪ್ರತೀಕವಾಗಿದೆ.

೧೦. ಶಿವನ ಪೂಜೆಯನ್ನು ಹೇಗೆ ಮಾಡಬೇಕು ?: ೧೦ ಅ. ಶಿವನಿಗೆ ಬಿಲ್ವಪತ್ರವನ್ನು ಅರ್ಪಿಸುವ ಪದ್ಧತಿ : ಶಿವಲಿಂಗದ ಮೇಲೆ ಬಿಲ್ವಪತ್ರೆವನ್ನು ತಿರುವಿ ಅರ್ಪಿಸುವ ಪದ್ಧತಿಯಿದೆ. ಈ ರೀತಿಯಲ್ಲಿ ಬಿಲ್ವವನ್ನು ಅರ್ಪಿಸುವುದರಿಂದ ಅದರಿಂದ ಶಿವನ ಶಕ್ತಿಯು ಹೆಚ್ಚು ಪ್ರಕ್ಷೇಪಿಸಲ್ಪಟ್ಟು ಬಿಲ್ವವನ್ನು ಅರ್ಪಿಸುವವರಿಗೆ ಲಾಭವಾಗುತ್ತದೆ.

೧೦ ಆ. ಹೂವುಗಳು : ಶಿವನಿಗೆ ನಿಶಿಗಂಧ, ಮಲ್ಲಿಗೆ, ಜಾಜಿ ಹೂ, ಮಲ್ಲಿಗೆ ಈ ಹೂವುಗಳನ್ನು ೧೦ ಪಟ್ಟುಗಳಲ್ಲಿ ಅರ್ಪಿಸಬೇಕು.

೧೦. ಇ. ಊದುಬತ್ತಿ : ಕೇದಗೆ, ಮಲ್ಲಿಗೆ ಮತ್ತು ಹೀನಾ ಈ ಸುಗಂಧಗಳ ಊದುಬತ್ತಿಗಳನ್ನು ಎರಡು ಸಂಖ್ಯೆಯಲ್ಲಿ ಬೆಳಗಿಸಬೇಕು.

೧೦ ಈ. ಸುಗಂಧ ದ್ರವ್ಯ : ಶಿವನ ಉಪಾಸನೆಗಾಗಿ ಕೇದಗೆಯ ಸುಗಂಧದ್ರವ್ಯ ಬಳಸುತ್ತಾರೆ.

೧೦. ಉ. ಪ್ರದಕ್ಷಿಣೆಯನ್ನು ಹೇಗೆ ಹಾಕಬೇಕು ? : ಶಿವಲಿಂಗಕ್ಕೆ ಅರ್ಧವರ್ತುಲಾಕಾರ ಪ್ರದಕ್ಷಿಣೆಯನ್ನು ಹಾಕಬೇಕು.

ಈ ಲೇಖನದಲ್ಲಿ ಶಿವನ ಉಪಾಸನೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ? ಉಪಾಸನೆಗಾಗಿ ಯಾವ ವಸ್ತುಗಳನ್ನು ಬಳಸಬೇಕು ? ಇದರ ಬಗ್ಗೆ ಮಾಹಿತಿಯನ್ನು ನೋಡಿದೆವು. ಹಿಂದೂ ಧರ್ಮದ ದೇವತೆಗಳ ವಿಷಯದ ಶಾಸ್ತ್ರೀಯ ಮಾಹಿತಿಯು ಎಲ್ಲರಿಗೂ ತಿಳಿದಿರಬೇಕು; ಏಕೆಂದರೆ ದೇವತೆಗಳ ಮಹತ್ವವು ತಿಳಿದ ನಂತರವೇ ನಮಗೆ ದೇವರ ಮೇಲಿರುವ ಶ್ರದ್ಧೆ ಮತ್ತು ಭಾವವು ಹೆಚ್ಚಾಗುತ್ತದೆ. ದೇವರ ಬಗ್ಗೆ ಪ್ರೀತಿ ನಿರ್ಮಾಣವಾಗುತ್ತದೆ ಮತ್ತು ನಾವು ಯೋಗ್ಯ ಉಪಾಸನೆಯನ್ನು ಮಾಡಲಾರಂಭಿಸುತ್ತೇವೆ.

– ಶ್ರೀ. ರಾಜೇಂದ್ರ ಪಾವಸಕರ, ಪನವೆಲ
ಆಧಾರ: balsanskar

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *