Thursday , 13 June 2024
Mahabala Murthy

ಮಹಾಬಲ ಮೂರ್ತಿ ಕೊಡ್ಲೆಕೆರೆ

ಮಹಾಬಲ ಮೂರ್ತಿ ಕೊಡ್ಲೆಕೆರೆ (೦೧.೦೪.೧೯೫೮): ಕವಿ, ಕತೆಗಾರ, ಯಕ್ಷಗಾನ ಕಲೆಯ ಹವ್ಯಾಸಿ ನಟರಾದ ಮಹಾಬಲ ಮೂರ್ತಿ ಕೊಡ್ಲೆಕೆರೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ೧೯೫೮ರ ಏಪ್ರಿಲ್ ೧ರಂದು. ತಂದೆ ಗಜಾನನ ಅನಂತ ಭಟ್ಟ ಕೊಡ್ಲೆಕೆರೆ, ತಾಯಿ ಭೂದೇವಿ ಗಜಾನನ ಕೊಡ್ಲೆಕೆರೆ.

ಪ್ರಾರಂಭಿಕ ಶಿಕ್ಷಣ ಗೋಕರ್ಣ, ಕುಮಟಾದ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ (ರಾಜಕೀಯ ಶಾಸ್ತ್ರ) ಎಂ.ಎ. ಪದವಿ ಜೊತೆಗೆ ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮ. ಉದ್ಯೋಗಕ್ಕಾಗಿ ಸೇರಿದ್ದು ಕರ್ನಾಟಕ ಬ್ಯಾಂಕ್‌ನಲ್ಲಿ. ಹಿರಿಯ ವ್ಯವಸ್ಥಾಪಕರ ಹುದ್ದೆಗೇರಿ ಪಡೆದ ನಿವೃತ್ತಿ. ಪ್ರಸ್ತುತ ವಾಣಿಜ್ಯ ಮತ್ತು ವಿದೇಶಿ ವಿನಿಮಯದ ವ್ಯವಹಾರಗಳ ಸಲಹೆಗಾರರು.

ಮಾನವತಾವಾದಿ, ವಿಚಾರವಾದಿ, ಸಾಹಿತಿ, ಅಧ್ಯಾಪಕರಾಗಿದ್ದ ಗೌರೀಶ ಕಾಯ್ಕಿಣಿಯವರಿಂದ ಪ್ರಭಾವಿತರಾದವರು. ಮನೆಯಲ್ಲಿಯೂ ಸಾಹಿತ್ಯ ಮತ್ತು ಸುಸಂಸ್ಕೃತ ವಾತಾವರಣ. ಯಕ್ಷಗಾನ ವೇಷಧಾರಿ, ಅರ್ಥದಾರಿಯಾಗಿದ್ದ ತಂದೆಯವರಿಂದ ಯಕ್ಷಗಾನದ ವಿದ್ಯೆ ಬಂದ ಬಳುವಳಿ.

ಎಂಬತ್ತರ ದಶಕದಿಂದಲೂ ಕತೆ, ಕವನಗಳನ್ನು ರಚಿಸುತ್ತಾ ಬಂದಿರುವ ಕೊಡ್ಲೆಕೆರೆಯವರ ಕಥೆಗಳಲ್ಲಿ ಮಾನವ ಸ್ಥಿತಿಯ ಬಗ್ಗೆ, ಅನೂಹ್ಯ ಜಗತ್ತಿನ ನಿಗೂಢತೆಯ ಬಗ್ಗೆ, ಅಜ್ಞಾತವಾಗಿರುವ ಹುಟ್ಟು ಸಾವುಗಳ ಬಗ್ಗೆ ಬರೆದ ಹಲವಾರು ಕಥೆಗಳು, ಪ್ರತಿಷ್ಠಿತ ಪತ್ರಿಕೆಗಳಾದ ಪ್ರಜಾವಾಣಿ, ಕನ್ನಡ ಪ್ರಭ, ಉತ್ಥಾನ ಪತ್ರಿಕೆಗಳಿಂದ ಪಡೆದ ಬಹುಮಾನ.

ಕಥಾಸಂಕನಗಳು – ‘ಮತ್ತೊಂದು ಮೌನ’, ‘ಯಕ್ಷಸೃಷ್ಟಿ’, ‘ಅವನ ಜಗತ್ತಿನ ಹಗಲು’, ‘ನೆರಳು’, ‘ಇತಿಹಾಸದ ನಂತರ’ ಮತ್ತು ೨೦೧೦ರಲ್ಲಿ ಪ್ರಕಟವಾಗಿರುವ ‘ನೆರಳು ಮತ್ತು ಇತರ ಆಯ್ದ ಕಥೆಗಳು’.

‘ಚಂದ್ರಾಸ್ತಮಾನ’, ‘ಸದ್ದು’, ‘ಸ್ತ್ರೀಶಾಪ’, ‘ಬೀಜಗರ್ಭ’ ಮುಂತಾದ ಕಾದಂಬರಿಗಳು, ‘ಮಾತು ಮತ್ತು ಪರಸ್ಪರ’, ‘ಜೀವ’, ‘ಮತ್ತೆ ಏಳಲು ಪೂರ್ವದಿಂದ’, ‘ಒಂದು ಗಿಳಿ’ ಮುಂತಾದ ಕವನ ಸಂಕಲನಗಳು ಸೇರಿ ಸುಮಾರು ೨೦ ಕೃತಿಗಳು ಪ್ರಕಟಿತ.

ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳ ಹಾಗೂ ಇಂಗ್ಲಿಷ್ ಪತ್ರಿಕೆಗಳ ಅಂಕಣಕಾರರು. ವಿವಿಧ ರಾಷ್ಟ್ರೀಯ, ಅಂತಾರಾಷ್ಟ್ರೀಯ ಜ್ಯೋತಿಷ್ಯ ಪತ್ರಿಕೆಗಳಿಗೂ ಬರೆದ ಅಂಕಣಗಳು. ಅಂಕಣ ಬರಹಗಳ ಪುಸ್ತಕ ‘ಭಿನ್ನ ವಿಭಿನ್ನ ಕಥೆಗಳೊಂದಿಗೆ’ ಪ್ರಕಟಿತ.

ಹಲವಾರು ನಾಟಕಗಳನ್ನು ರಚಿಸಿದ್ದು, ‘ಅದಲು ಬದಲು’, ‘ಹಿಡಿಯದೇ ಉಳಿದ ಹಾದಿ’ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿಯವರ ಪ್ರಸಿದ್ಧ ಕತೆ ‘ವೆಂಕಟಗನ ಹೆಂಡತಿ’ಯನ್ನು ನಾಟಕಕ್ಕೆ ಅಳವಡಿಸಿದ್ದಾರೆ.

ಇವರ ಸಂಪಾದಕತ್ವದಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ ಅಭಿನಂದನ ಗ್ರಂಥ ‘ಶ್ರೀ ಕೆ.ಎಸ್.ಎನ್’ ಮತ್ತು ಗೋಪಾಲಕೃಷ್ಣ ಅಡಿಗರ ‘ಅಡಿಗ-೭೦’ ಪ್ರಕಟಗೊಂಡಿವೆ.

ಸಾಂಸ್ಕೃತಿಕ ಜಗತ್ತಿನೊಂದಿಗೆ ನಿಕಟ ಸಂಪರ್ಕಹೊಂದಿದ್ದು ಟಿವಿಯ ಚಂದನವಾಹಿನಿಗಾಗಿ ಸಾಂಸ್ಕೃತಿಕ ಮತ್ತು ಸಾಹಿತ್ಯ ರಂಗದ ಅನೇಕ ಹಿರಿಯರ ಜೊತೆಗೆ ಚರ್ಚೆ, ಮಾತುಕತೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ.

ಯಕ್ಷಗಾನಲೋಕದಲ್ಲಿ ಪ್ರಸಿದ್ಧರಾದ ೫೦ ಜನ ಹಿರಿಯ ಯಕ್ಷಗಾನ ನಟರನ್ನು ಚಂದನ ವಾಹಿನಿಗಾಗಿ ಸಂದರ್ಶನ ಯಕ್ಷಗಾನ ಕಥನ ಸಂವಾದಗಳನ್ನು ನಡೆಸಿಕೊಟ್ಟಿದ್ದಾರೆ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಗಾಗಿ ಕರ್ನಾಟಕದ ಬಡಗು ಮತ್ತು ತೆಂಕು ಯಕ್ಷಗಾನ ವೇಷಗಳ ಕುರಿತಾದ ಸಾಕ್ಷಚಿತ್ರ ರಚನೆ ಮತ್ತು ನಿರ್ಮಾಣ ಮಾಡಿದ್ದಾರೆ.

ಯಕ್ಷಗಾನದ ತಂಡದ ಸದಸ್ಯರಾಗಿ ೨೦೦೦ನೇ ವರ್ಷದಲ್ಲಿ ಅಮೆರಿಕದ ಕನ್ನಡಿಗರ ಕೂಟವಾದ ‘ಅಕ್ಕ’ ಮತ್ತು ಇಂಗ್ಲೆಂಡಿನ ‘ಮಿಲೇನಿಯಂ ಕನ್ನಡ ಹಬ್ಬ’ಗಳಿಗಾಗಿ ಹಲವಾರು ಸ್ಥಳಗಳಲ್ಲಿ ಭೀಮ, ಸುಭದ್ರಾ, ಚಾಣೂರ ಮುಂತಾದ ಪಾತ್ರಧಾರಿಗಳಾಗಿ ಯಕ್ಷಗಾನ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದಾರೆ.

ಕಿರುತೆರೆ ಹಾಗೂ ಚಲನಚಿತ್ರಗಳಲ್ಲೂ ಭಾಗಿಯಾಗಿದ್ದು ಕವಿತಾ ಲಂಕೇಶ್, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರ ನಿರ್ದೇಶನದಲ್ಲಿ ನಟನೆ, ಚಲನಚಿತ್ರಗೀತೆಗಳ ರಚನೆಯಲ್ಲೂ ಭಾಗಿ.

ಬಾನುಲಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಕಥೆ, ಕವಿತೆ, ಚಿಂತನೆ, ರೇಡಿಯೋ ರೂಪಕಗಳ ಪ್ರಸ್ತುತಿಯ ಜೊತೆಗೆ ರಾಷ್ಟ್ರೀಯ ಮಟ್ಟದ ಕವಿಗೋಷ್ಠಿಗಳಲ್ಲೂ ಭಾಗಿ.

ನಾಟಕಗಳಲ್ಲಿ ನಟರಾಗಿದ್ದಷ್ಟೇ ಅಲ್ಲದೆ ಮಂಗಳೂರ್ ಮತ್ತು ಬೆಂಗಳೂರಿನ ಬ್ಯಾಂಕ್ ರಿಕ್ರಿಯೇಷನ್ ಕ್ಲಬ್‌ಗಳಿಗಾಗಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಪ್ರಜಾವಾಣಿ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಪುರಸ್ಕಾರ ಪಡೆದ ಕಥೆ ‘ವೈಶಂಪಾಯನ ತೀರ’ವು, ‘ಕಾಲದ ಕಡಲು’ ಎಂಬ ಹೆಸರಿನಿಂದ ಮೆಗಾ ಧಾರಾವಾಹಿಯಾಗಿದ್ದಲ್ಲದೆ, ಪ್ರೊ. ಸಿ.ಜಿ. ಕೃಷ್ಣಸ್ವಾಮಿಯವರ ನಿರ್ದೇಶನದಲ್ಲಿ ನಾಟಕವಾಗಿ ಬೆಂಗಳೂರು, ದೆಹಲಿ, ಚಂಡೀಘಡ, ಮುಂಬೈ, ಫರೀದಾಬಾದ್, ಮಂಗಳೂರು, ಸಿಮ್ಲಾ ಮುಂತಾದೆಡೆಯಲ್ಲಿ ಐವತ್ತಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ.

ನ್ಯಾಶನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡಮಿಗಳು ಅಯೋಜಿಸಿದ ‘ಮೀಟ್ ದ ಆಥರ್ಸ್‌’, ‘ದೀಸ್ ಆರ್ ಅವರ್ ರೈಟರ್ಸ್’ ಕಾರ್ಯಕ್ರಮಗಳಲ್ಲದೆ ಪುದುಚೇರಿ, ಪಂಜಿಮ್ ಮುಂತಾದೆಡೆಗಳಲ್ಲಿ ನಡೆದ ಕವಿಗೋಷ್ಠಿಗಳಲ್ಲಿ, ಗುಲಬರ್ಗಾ, ದಾವಣಗೆರೆ, ತುಮಕೂರು ಮತ್ತು ಗದಗ್‌ನಲ್ಲಿ ನಡೆದ ಅಖಿಲಭಾರತ ಕವಿಗೋಷ್ಠಿಗಳಲ್ಲಿ ಕವಿಯಾಗಿ, ಪ್ರಬಂಧ ಮಂಡಕರಾಗಿ, ಸಂವಾದಕರಾಗಿಯೂ ಭಾಗಿಯಾಗಿದ್ದಾರೆ.

ಸಣ್ಣ ಕಥಾಲೋಕದಲ್ಲಿಯೇ ಅಪರೂಪದ ಪತ್ರಿಕೆ ಎನಿಸಿರುವ ‘ಒಂದಲ್ಲ ಒಂದೂರಿನಲ್ಲಿ’ ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿರುವ ಕೊಡ್ಲೆಕೆರೆವಯರಿಗೆ ಕವಿ ಮುದ್ದಣ ಕಾವ್ಯ ಪುರಸ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *