Malaprabhe

ಬಾದಾಮಿ ಚಾಲುಕ್ಯರು : ಮಲಪ್ರಭೆಯ ಮಡಿಲು

ಬಾದಾಮಿ ಪರಿಸರವು ದೇವ ನಿರ್ಮಿತ ನೈಸರ್ಗಿಕ ಚೆಲವು, ಮಾನವ ನಿರ್ಮಿತ ವಾಸ್ತುಶಿಲ್ಪಗಳ ಬೆಡಗು ಬೆಸಗೊಂಡು ಭವ್ಯವಾದ ಕಲಾಕ್ಷೇತ್ರವೆನಿಸಿದೆ. ಹಲವು ಧರ್ಮ, ಮತ, ಪಂಥಗಳಿಗೆ ಆಸರೆ ನೀಡಿದ ಧರ್ಮಕ್ಷೇತ್ರವೂ ಹೌದು. ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲುಗಳು ಬಾಗಲಕೋಟೆ ಜಿಲ್ಲೆಯ ಸಾಂಸ್ಕೃತಿಕ ಜೀವನಾಡಿಯಾಗಿವೆ. ಮಲಪ್ರಭೆ ಇವಕ್ಕೆ ಜೀವ ನೀಡಿದ ಜಲಧಾರೆ. ಈ ನದಿಯು ನಿರ್ಮಿಸಿದ ಸುಮಾರು ೨೫ ಕಿ.ಮೀ. ಉದ್ದದ ಮತ್ತು ಐದಾರು ಕಿಲೋಮೀಟರ್ ಅಗಲದ ಭೂಪ್ರದೇಶವು ಸಮೃದ್ಧವಾದ ಕಲಾ ಪೈರನ್ನು ಬೆಳೆಯಿತು. ಈ ಪ್ರದೇಶವು ಮರಳುಗಲ್ಲಿನ ಭವ್ಯ ಬಂಡೆಗಳ ಶ್ರೇಣಿಗಳಿಂದ ಸುತ್ತುವರೆಯಲ್ಪಟ್ಟು ಕಲಾಕೃತಿಗೆ ಬೇಕಾದ ಶಿಲೆಯನ್ನು ಹೇರಳವಾಗಿ ಒದಗಿಸಿತು.

ಕರ್ನಾಟಕದ ರಾಜಕೀಯ, ಆರ್ಥಿಕ, ಧಾರ್ಮಿಕ ಹಾಗೂ ಕಲಾ ಬೆಳವಣಿಗೆಯಲ್ಲಿ ಮಲಪ್ರಭಾ ನದಿಯು ಮಹತ್ವದ ಪಾತ್ರ ವಹಿಸಿದೆ. ಲಕ್ಷಾಂತರ ವರ್ಷಗಳ ಹಿಂದೆ ಹಳೆಯ ಶಿಲಾಯುಗದ ಮಾನವನು ಈ ನದಿಯ ತೀರದಲ್ಲಿ ನೆಲೆ ಕಂಡ. ಮಲಪ್ರಭೆಯ ಬಯಲಿನಲ್ಲಿ ದೊರೆಯುತ್ತಿದ್ದ ಮರಳುಕಲ್ಲಿನ ಗಟ್ಟಿಗಳಿಂದ ಆದಿಮಾನವನು ಶಿಲಾ ಉಪಕರಣಗಳನ್ನು ತಯಾರಿಸಿ ಗೆಡ್ಡೆಗೆಣಸುಗಳನ್ನು ಅಗೆಯಲು, ಪ್ರಾಣಿಗಳನ್ನು ಕೊಲ್ಲಲು, ಅವುಗಳ ಎಲಬುಗಳಿಂದ ಮಾಂಸವನ್ನು ಕೀಳಲು ಬಳಸುತ್ತಿದ್ದ. ಈ ನದಿಯ ಪರಿಸರದಲ್ಲಿ ದೊರೆತ ಪ್ರಾಚೀನತಮ ಕಲ್ಲಿನ ಆಯುಧಗಳು ಕನಿಷ್ಟ ಸುಮಾರು ಮೂರು ಲಕ್ಷ ವರ್ಷ ಹಿಂದಿನವು. ಬಾದಾಮಿಯ ಸಾಬರ ಫಡಿಯಲ್ಲಿ ಈ ಬಗೆಯ ಆಯುಧಗಳು ದೊರೆತಿವೆ. ಈ ಭೂಭಾಗದಲ್ಲಿ ಚಾಚಿ ಕೊಂಡಿರುವ ಕಲ್ಬೆಟ್ಟದ ಶ್ರೇಣಿಯಲ್ಲಿಯ ಕಲ್ಲಾಸರೆಗಳು, ನೈಸರ್ಗಿಕ ಗುಹೆಗಳು ಶಿಲಾಯುಗದ ಮಾನವನಿಗೆ ಆಶ್ರಯ ತಾಣಗಳಾದವು.

ಐತಿಹಾಸಿಕ ಹಿನ್ನೆಲೆ

ಇತಿಹಾಸ ಕಾಲದ ಪ್ರಾರಂಭದಲ್ಲಿ ಕರ್ನಾಟಕವು ಮೌರ್ಯ ರಾಜ್ಯಕ್ಕೆ ಸೇರಿತ್ತು. ಆ ಬಳಿಕ ಶಾತವಾಹನರು ದಕ್ಷಿಣ ಭಾರತದ ಪ್ರಭುಗಳಾದರು. ಬಾದಾಮಿಯ ಸುತ್ತಮುತ್ತಲಿನ ನಾಗರಾಳ, ಬಾಚನಗುಡ್ಡ, ಐಹೊಳೆ ಮೊದಲಾದ ಕಡೆಗಳಲ್ಲಿ ಶಾತವಾಹನರ ಕಾಲದ ಮೃತ್‌ಪಾತ್ರೆಗಳು ನಾಣ್ಯಗಳು ದೊರೆತಿವೆ. ಇತ್ತೀಚಿನ ಉತ್ಖನನದಲ್ಲಿ ಬಾಚನಗುಡ್ಡದಲ್ಲಿ ದೊರೆತ(ಪಟ್ಟದಕಲ್ಲಿನ ಹತ್ತಿರ) ಇಟ್ಟಿಗೆಗಳ ತಳಪಾಯವು ದೇವಾಲಯದ್ದೆಂದೂ ಅದು ಸುಮಾರು ನಾಲ್ಕನೆಯ ಶತಮಾನದ್ದೆಂದೂ ತರ್ಕಿಸಲಾಗಿದೆ.

ಶಾತವಾಹನರ ಕಾಲಕ್ಕೆ ಬಾದಾಮಿ ಪ್ರಸಿದ್ಧ ನಗರವಾಗಿ ಹೆಸರು ಪಡೆದಿತ್ತು ಎಂದು ತೋರುತ್ತದೆ. ಟಾಲೆಮಿ (ಕ್ರಿ.ಶ. ೧೫೦) ಎಂಬಾತನು ರಚಿಸಿದ (A Guide to Geography) ಗ್ರಂಥದಲ್ಲಿ ಈ ಊರು ಉಲ್ಲೇಖಿತವಾಗಿದೆ. ಹೀಗೆ ಬೆಳೆದಿದ್ದ ನಗರವನ್ನು ಚಾಲುಕ್ಯರು (ಚಲುಕ್ಯರು) ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಅದಕ್ಕೆ ಅಧಿಷ್ಠಾನದ ಘನತೆ, ಗೌರವಗಳನ್ನು ತಂದುಕೊಟ್ಟರು.

ಭೌಗೋಳಿಕವಾಗಿ ಬಾದಾಮಿಯು ‘ಕಲಾದಗಿ ಶಿಲಾಶ್ರೇಣಿ’ಗೆ ಸೇರಿದೆ. ಇಲ್ಲಿಯ ಕೆಂಪು ಮರಳುಗಲ್ಲಿನ ಬೆಟ್ಟಗಳನ್ನು ಬಾದಾಮಿಸಿಸ್ಟ್ಬ್ ಎಂದು ಕರೆಯಲಾಗುತ್ತದೆ. ಇಂತಹ ಬೆಟ್ಟದ ಶ್ರೇಣಿಗಳಿಂದ ಸುತ್ತುವರೆಯಲ್ಪಟ್ಟ ಈ ನಗರಕ್ಕೆ ನೈಸರ್ಗಿಕ ರಕ್ಷಣೆ ಲಭಿಸಿತು. ಈ ಬೆಟ್ಟದ ಬಂಡೆಗಳು ಕಡಿದಾಗಿವೆ, ಎತ್ತರವಾಗಿವೆ, ಅಂತೆಯೇ ಅಭೇದ್ಯವಾಗಿವೆ. ನಿಸರ್ಗವೇ ನಿರ್ಮಿಸಿದ ಕೋಟೆಯಂತಿರುವ ಈ ಬೆಟ್ಟವನ್ನು ಗಿರಿದುರ್ಗವನ್ನಾಗಿ ಮಾಡಿಕೊಂಡ ಜಾಣ್ಮೆ ಚಾಲುಕ್ಯ ವಂಶದ ಮೊದಲ ಸ್ವತಂತ್ರ ಅರಸನಾದ ಒಂದನೆಯ ಪುಲಕೇಶಿಯದ್ದಾಗಿದೆ.

ಚಾಲುಕ್ಯರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಸರ್ಗವನ್ನು ಬಳಸಿಕೊಂಡ ಬಗೆ ಅನುಕರಣೀಯವಾಗಿದೆ. ಕಲ್ಬೆಟ್ಟದಿಂದ ಮಳೆಯ ನೀರು ಜಲಪಾತವಾಗಿ, ಹಳ್ಳವಾಗಿ ಕೊಳ್ಳದಲ್ಲಿ ಹರಿಯುತ್ತಿದ್ದು ಅದಕ್ಕೆ ಅಡ್ಡಗೋಡೆಯನ್ನು ಕಟ್ಟಿ ಕೆರೆ ಅಗಸ್ತ್ಯತೀರ್ಥಯನ್ನು ನಿರ್ಮಿಸಿರುವಲ್ಲಿ ಅಂದಿನವರ ವಾಸ್ತುವಿದ್ಯಾ ಕೌಶಲ್ಯ ಪ್ರಕಟವಾಗಿದೆ.

ಬಾದಾಮಿಯ ಬೆಟ್ಟಗಳು ಅರಸರನ್ನು ಆಕರ್ಷಿಸಿದಂತೆ ಸ್ಥಪತಿಗಳನ್ನೂ, ರೂವಾರಿಗಳನ್ನೂ ಕೈಮಾಡಿ ಕರೆದವು. ಬಾದಾಮಿ, ಐಹೊಳೆಗಳಲ್ಲಿ ಬಂಡೆಗಳನ್ನು ಕೊರೆದು ಸ್ಥಪತಿಗಳು ಗುಹಾಮಂದಿರಗಳನ್ನು ರಚಿಸಿದರು. ಅವನ್ನು ರೂವಾರಿಗಳು ಶಿಲ್ಪಗಳಿಂದ ಸಿಂಗರಿಸಿದರು. ಬಾದಾಮಿಯ ಮಹಾವಿಷ್ಣುಗೃಹವು ಭಾರತದ ಶ್ರೇಷ್ಠ ಗುಹಾದೇವಾಲಯಗಳ ಸಾಲಿಗೆ ಸೇರುತ್ತದೆ. ಬಾದಾಮಿ, ಐಹೊಳೆ, ಮಹಾಕೂಟ ಹಾಗೂ ಪಟ್ಟದಕಲ್ಲುಗಳಲ್ಲಿ ರಾಚನಿಕ ಮಂದಿರಗಳ ನಿರ್ಮಾಣವು ಕೂಡ ದೊಡ್ಡ ಪ್ರಮಾಣದಲ್ಲಿ ನಡೆಯಲು ಈ ಕಲ್ಬೆಟ್ಟಗಳೇ ಆಕರ ಹಾಗೂ ಪ್ರೇರಣೆ.

ಅ. ಚಾಲುಕ್ಯರ ಕಾಲ

ಚಾಲುಕ್ಯ (ಚಲುಕ್ಯ) ಎಂಬುದು ಬಾದಾಮಿಯನ್ನು ತಮ್ಮ ರಾಜಕೀಯ ಕೇಂದ್ರವನ್ನಾಗಿ ಮಾಡಿಕೊಂಡು ರಾಜ್ಯಭಾರ ಮಾಡಿದ ಅರಸು ಮನೆತನದ ಹೆಸರು. ದಕ್ಷಿಣ ಭಾರತದಲ್ಲಿ ಪ್ರಬಲ ಸಾಮ್ರಾಜ್ಯವನ್ನು ಕಟ್ಟಿದ ಘನಗೌರವ ಈ ರಾಜವಂಶಕ್ಕೆ ಸಲ್ಲುತ್ತದೆ. ಚಾಲುಕ್ಯರ ಮೂಲವು ಪುರಾಣ ಕತೆಗಳಲ್ಲಿ ಸಿಲುಕಿಕೊಂಡು ಕಾಣದಾಗಿದೆ. ಈ ಅರಸು ಮನೆತನದ ಹೆಸರನ್ನು ಶಾಸನಗಳು ಚಲುಕ್ಯ ಎಂದೇ ಕರೆದಿವೆ. ಆದರೆ ಜನಪದರಲ್ಲಿ ಬಳಕೆಯಲ್ಲಿರುವ ಚಾಲುಕ್ಯ ಎಂಬ ಪದವನ್ನೇ ಇಲ್ಲಿ ಸ್ವೀಕರಿಸಲಾಗಿದೆ.

ಚಾಲುಕ್ಯರದು ಮಾನವ್ಯಗೋತ್ರ. ಇವರ ಕುಲದೇವತೆ ವಿಷ್ಣು. ವರಾಹ ಇವರ ರಾಜಲಾಂಛನ. ವೈಷ್ಣವ ಮತಾವಲಂಬಿಗಳಾದ ಇವರು ಪರಮ ಭಾಗವತರೆಂದು ಬಣ್ಣಿತರು. ನಂತರದ ಚಾಲುಕ್ಯ ಅರಸರು ಶೈವ ಧರ್ಮವನ್ನು ಪಾಲಿಸಿದರು. ಅವರು ಪರಮ ಮಾಹೇಶ್ವರರೆನಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಶಿವದೇವಾಲಯಗಳು ತಲೆ ಎತ್ತಿದವು. ಚಾಲುಕ್ಯರು ಕಾರ್ತಿಕೇಯನನ್ನು ಪೂಜಿಸಿದರು. ಸಪ್ತ ಮಾತೃಕೆಯರನ್ನು ಆರಾಧಿಸಿದರು. ಅವರ ಧರ್ಮಪ್ರಜ್ಞೆ ವಿಶಾಲವಾಗಿತ್ತು. ಅವರ ಆಶ್ರಯದಲ್ಲಿ ಸೌರಮತ, ಗಾಣಾಪತ್ಯ, ಶಾಕ್ತ, ಜೈನ ಮೊದಲಾದ ಮತ, ಧರ್ಮಗಳು ನಿರಾಂತಕವಾಗಿ ನೆಲೆಗೊಂಡಿದ್ದವು. ಚಾಲುಕ್ಯರು ಸರ್ವ ಧರ್ಮಗಳನ್ನು ಗೌರವಿಸಿದರು. ಅಂತೆಯೇ ಸರ್ವಧರ್ಮ ಸಮನ್ವಯತೆಯ ಹರಿಕಾರರೆನಿಸಿದರು.

ಚಾಲುಕ್ಯ ವಂಶದ ಮೂಲ ಪುರುಷ ಜಯಸಿಂಹ. ಈತನ ಮಗ ರಣರಾಗ. ಇವರೀರ್ವರ ಬಗ್ಗೆ ವಿವರಗಳು ಲಭ್ಯವಿಲ್ಲ. ಇವರು ಕದಂಬರ ಮಾಂಡಲಿಕರಾಗಿ ಐಹೊಳೆಯಲ್ಲಿ ಆಳ್ವಿಕೆ ನಡೆಸಿರಬಹುದೆಂದು ತೋರುತ್ತದೆ. ರಣರಾಗನ ಮಗನಾದ ಒಂದನೆಯ ಪುಲಿಕೇಶಿ (ಪೊಲೆಕೇಶಿ)ಯೇ ಈ ಅರಸು ಮನೆತನದ ನಿಜಸ್ಥಾಪಕನು. ಸುಮಾರು ಕ್ರಿ.ಶ. ೫೪೦ರಲ್ಲಿ ವಾತಾಪಿ(ಬಾದಾಮಿ)ಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಇವನು ಅಶ್ವಮೇಧ ಮೊದಲಾದ ಯಜ್ಞಗಳನ್ನು ಮಾಡಿ ಶ್ರೀವಲ್ಲಭನೆನಿಸಿದನು.

ಈತನ ಮಗನಾದ ಒಂದನೆಯ ಕೀರ್ತಿವರ್ಮನು ರಾಜ್ಯವನ್ನು ವಿಸ್ತರಿಸಿ ವಾತಾಪಿಯ ಪ್ರಥಮ ವಿಧಾತಾ ಎಂಬ ಗೌರವಕ್ಕೆ ಪಾತ್ರನಾದನು. ಇವನು ವೈರಿಗಳಿಗೆ ಕಾಳರಾತ್ರಿ ಯಾಗಿದ್ದನೆಂದು ಶಾಸನವು ಬಣ್ಣಿಸಿದೆ. ಒಂದನೆಯ ಕೀರ್ತಿವರ್ಮನು ಆಳುತ್ತಿರುವಾಗ ಆತನ ತಮ್ಮನಾದ ಮಂಗಳೇಶನು ಬಾದಾಮಿಯಲ್ಲಿ ಅತ್ಯದ್ಭುತ ವಾಸ್ತುರಚನೆ ಎನಿಸಿರುವ ‘ಮಹಾವಿಷ್ಣು ಗೃಹ’ವನ್ನು ಕೊರೆಯಿಸಿದನು.

ಒಂದನೆಯ ಕೀರ್ತಿವರ್ಮನು ತೀರಿದಾಗ ಮಗನಾದ ಇಮ್ಮಡಿ ಪುಲಿಕೇಶಿಯು ಚಿಕ್ಕವನಾದ್ದರಿಂದ ಮಂಗಳೇಶನು ರಾಜ್ಯಭಾರವನ್ನು ತಾನೇ ಹೊತ್ತುಕೊಂಡನು. ಇವನು ಬಲಾಢ್ಯ ಯೋಧನಾಗಿದ್ದನು. ಕಳಚೂರಿಯ ಶಂಕರಗಣ ಮತ್ತು ಬುದ್ಧವರ್ಮರನ್ನು ಸೋಲಿಸಿ ಯುದ್ಧ ಸಂಪತ್ತನ್ನು ಮಹಾಕೂಟದ ಮಕುಟೇಶ್ವರನಾಥನಿಗೆ ಸಮರ್ಪಿಸಿ ಧರ್ಮಸ್ತಂಭವನ್ನು ನಿಲ್ಲಿಸಿದನು. ಇಮ್ಮಡಿ ಪುಲಿಕೇಶಿಯು ಪ್ರಾಪ್ತ ವಯಸ್ಕನಾದ ನಂತರವೂ ಮಂಗಳೇಶನು ಸಿಂಹಾಸನವನ್ನು ಬಿಟ್ಟುಕೊಡಲಿಲ್ಲ. ತರುಣ ಯುವರಾಜನು ಸೈನ್ಯವನ್ನು ಸಂಘಟಿಸಿ ಮಂಗಳೇಶನ ಮೇಲೆ ಏರಿಬಂದನು. ಯುದ್ಧದಲ್ಲಿ ಚಿಕ್ಕಪ್ಪನನ್ನು ಕೊಂದು ತನ್ನ ಹಕ್ಕಿನ ಸಿಂಹಾಸನವನ್ನೇರಿದನು. ದಂಗೆ ಎದ್ದ ಮಾಂಡಲಿಕರನ್ನು ಬಗ್ಗು ಬಡಿದನು. ಬನವಾಸಿಯ ಕದಂಬರು, ತಲಕಾಡಿನ ಗಂಗರು, ಆಳುಪರು, ಕೊಂಕಣದ ಮೌರ್ಯರು, ಲಾಟದ ಅರಸರು ಇಮ್ಮಡಿ ಪುಲಿಕೇಶಿಯ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. ಉತ್ತರದ ಸಾಮ್ರಾಟನಾಗಿದ್ದ ಹರ್ಷವರ್ಧನನನ್ನು ನರ್ಮದೆಯ ತೀರದಲ್ಲಿ ಪರಾಭವಗೊಳಿಸಿ ದಕ್ಷಿಣಾಪಥೇಶ್ವರನೆನಿಸಿದ. ಪಲ್ಲವ ಅರಸನಾದ ಒಂದನೆಯ ಮಹೇಂದ್ರವರ್ಮನನ್ನು ಸೋಲಿಸಿದ. ಇದರಿಂದಾಗಿ ಇಮ್ಮಡಿ ಪುಲಿಕೇಶಿಯ ಸಾಮ್ರಾಜ್ಯವು ನರ್ಮದಾ ಮತ್ತು ಕಾವೇರಿಗಳ ನಡುವಿನ ಭೂಭಾಗವನ್ನು ಆವರಿಸಿತ್ತು. ಪೂರ್ವಪಶ್ಚಿಮಗಳ ಸಮುದ್ರತೀರದವರೆಗೆ ಚಾಚಿಕೊಂಡಿತ್ತು. ಈ ಸಮ್ರಾಟನು ೯೯೦೦೦ ಗ್ರಾಮಗಳನ್ನೊಳಗೊಂಡ ಮಹಾರಾಷ್ಟ್ರಕ ತ್ರಯವೆನಿಸಿದ ವಿಶಾಲ ಭೂಪ್ರದೇಶದ ಪ್ರಭುವಾಗಿದ್ದನು. ಈತನ ಕಾಲದಲ್ಲಿ ದಕ್ಷಿಣ ಭಾರತವನ್ನು ಸಂದರ್ಶಿಸಿದ ಚೀನೀ ಯಾತ್ರಿಕ ಹ್ಯೂಯೆನ್‌ತ್ಸಾಂಗನು ಚಾಲುಕ್ಯರ ನಾಡು, ನಾಡವರ ಬಗ್ಗೆ ಕೊಂಡಾಡಿದ್ದಾನೆ.

ಇಮ್ಮಡಿ ಪುಲಿಕೇಶಿಯು ಕಲಾ ಪೋಷಕನೂ ಆಗಿದ್ದನು. ಇವನ ಆಸ್ಥಾನ ಕವಿಯಾಗಿದ್ದ ರವಿಕೀರ್ತಿಯು ಐಹೊಳೆಯಲ್ಲಿ ಜಿನಾಲಯವನ್ನು ನಿರ್ಮಿಸಿದನು. ಕ್ರಿ.ಶ. ೬೩೪ರಲ್ಲಿ ನಿರ್ಮಾಣಗೊಂಡ ಈ ಮೇಗುತಿಯು ಕರ್ನಾಟಕದ ವಾಸ್ತುಕಲೆಯ ವಿಶಿಷ್ಟ ಕಲಾಕೃತಿ ಎನಿಸಿದೆ.

ಚಾಲುಕ್ಯ ವಂಶದ ಸರ್ವಶ್ರೇಷ್ಠ ಸಾಮ್ರಾಟನಾದ ಇಮ್ಮಡಿ ಪುಲಿಕೇಶಿಯು ಬಾದಾಮಿ ಯಲ್ಲಿಯೇ ಪಲ್ಲವ ನರಸಿಂಹವರ್ಮನಿಂದ ಪರಾಭವಗೊಂಡಿದ್ದು ವಿಧಿಯ ಅಟ್ಟಹಾಸವೇ ಸರಿ. ತಂದೆಯಾದ ಒಂದನೆಯ ಮಹೇಂದ್ರವರ್ಮನ ಸೋಲಿನ ಸೇಡನ್ನು ತೀರಿಸಿಕೊಂಡು ನರಸಿಂಹವರ್ಮನು ವಾತಾಪಿಕೊಂಡನೆನಿಸಿದನು. ಸುಮಾರು ಹದಿಮೂರು ವರ್ಷಗಳ ಕಾಲ ಚಾಲುಕ್ಯ ಸಿಂಹಾಸನವು ರಾಜಕೀಯ ಗ್ರಹಣದ ಕತ್ತಲಲ್ಲಿ ಉಳಿಯಿತು.

ಕ್ರಿ.ಶ. ೬೫೫ರಲ್ಲಿ ಪಲ್ಲವರ ಏಡಿ ಹಿಡಿತದಿಂದ ಬಾದಾಮಿಯನ್ನು ಬಿಡಿಸಿಕೊಳ್ಳುವಲ್ಲಿ ಇಮ್ಮಡಿ ಪುಲಿಕೇಶಿಯ ಮಗನಾದ ಒಂದನೆಯ ವಿಕ್ರಮಾದಿತ್ಯನು ಯಶಸ್ವಿಯಾದನು. ನರಸಿಂಹವರ್ಮನನ್ನು ಮಾತ್ರವಲ್ಲದೆ ಆತನ ಮಗ ಇಮ್ಮಡಿ ಮಹೇಂದ್ರವರ್ಮ, ಮೊಮ್ಮಗ ಒಂದನೆಯ ಪರಮೇಶ್ವರನನ್ನು ಯುದ್ಧದಲ್ಲಿ ಸೋಲಿಸಿ ಯಶೋವಂತನೆನಿಸಿದನು. ಈತನ ಗೆಲುವಿಗೆ ಆತನ ಕುದುರೆ ಚಿತ್ರಕಂಠ ಮತ್ತು ಖಡ್ಗಗಳು ನೆರವಾದವೆಂದು ಬಣ್ಣಿಸಲಾಗಿದೆ.

ವಿಕ್ರಮಾದಿತ್ಯನು ಸುದರ್ಶನಾಚಾರ್ಯರಿಂದ ಶಿವಮಂಡಲ ದೀಕ್ಷೆಯನ್ನು ಪಡೆದದ್ದು ಮಹತ್ವದ ಘಟನೆ. ಇವನ ನಂತರದ ಚಾಲುಕ್ಯ ಅರಸರು ಶೈವಧರ್ಮಕ್ಕೆ ಹೆಚ್ಚಿನ ಒಲವು ತೋರಿದ್ದರಿಂದ ಮಹಾಕೂಟ ಮತ್ತು ಪಟ್ಟದಕಲ್ಲು ಶೈವ ಕೇಂದ್ರಗಳಾಗಿ ಬೆಳೆದವು.

ವಿಕ್ರಮಾದಿತ್ಯನು ಮಡಿದ ನಂತರ ಮಗನಾದ ವಿನಯಾದಿತ್ಯನು ಪಟ್ಟವೇರಿದನು. ಈತನ ಆಳ್ವಿಕೆ (೬೮೧-೬೯೬) ಶಾಂತಿಯುತವೂ, ವೈಭವಯುತವೂ ಆಗಿತ್ತೆಂದು ಶಾಸನಗಳು ಬಣ್ಣಿಸಿವೆ. ಇವನ ಅರಸಿ ವಿನಯವತಿಯು ಬಾದಾಮಿಯಲ್ಲಿ ಬ್ರಹ್ಮ, ಈಶ್ವರ, ವಿಷ್ಣು ವಿಗ್ರಹಗಳಿಗಾಗಿ ಮೂರು ಪ್ರತ್ಯೇಕ ಗರ್ಭಗೃಹಗಳಿರುವ ಜಂಬುಲಿಂಗ ದೇವಾಲಯವನ್ನು ಕಟ್ಟಿಸಿದಳು. ಇದು ದಕ್ಷಿಣ ಭಾರತದ ಪ್ರಪ್ರಥಮ ತ್ರಿಕೂಟಾಲಯವೆನಿಸಿದೆ. ಆಂಧ್ರಪ್ರದೇಶದ ಆಲಂಪುರದಲ್ಲಿ ನಿರ್ಮಿತವಾದ ಸ್ವರ್ಗಬ್ರಹ್ಮ ದೇವಾಲಯವು ವಿನಯಾದಿತ್ಯನ ಕಾಲದ ಮತ್ತೊಂದು ಮಹತ್ವದ ವಾಸ್ತು ರಚನೆಯಾಗಿದೆ.

ಈತನ ಮಗನಾದ ವಿಜಯಾದಿತ್ಯನು ಕ್ರಿ.ಶ. ೬೯೬ರಲ್ಲಿ ಸಿಂಹಾಸನವನ್ನೇರಿ ೭೩೩ರ ವರೆಗೆ ಸುದೀರ್ಘ ಕಾಲ ರಾಜ್ಯವನ್ನಾಳಿದನು. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ ದೇವಾಲಯ ವನ್ನು ನಿರ್ಮಿಸಿ ಆ ನಗರವನ್ನು ಸಿಂಗರಿಸಿದನು. ಸಮೀಪದ ಮಹಾಕೂಟ, ನಾಗರಾಳಗಳಲ್ಲಿ, ದೂರದ ಆಲಂಪುರ (ಆಂಧ್ರಪ್ರದೇಶ)ದಲ್ಲಿ ದೇವಾಲಯಗಳನ್ನು ನಿರ್ಮಿಸಿದನು. ಈತನ ಪ್ರಾಣವಲ್ಲಭೆಯಾಗಿದ್ದ ವಿನಾಪೋಟಿಯು ಮಹಾಕೂಟದ ಮಕುಟೇಶ್ವರನಿಗೆ ಬೆಳ್ಳಿಯ ಕೊಡೆ, ರತ್ನಖಚಿತ ಪೀಠವನ್ನು ಮತ್ತು ೮೦೦ ಮತ್ತರ ಭೂಮಿಯನ್ನು ಅರ್ಪಿಸಿದಳು.

ವಿಜಯಾದಿತ್ಯನ ಬಳಿಕ ಆತನ ಮಗ ಇಮ್ಮಡಿ ವಿಕ್ರಮಾದಿತ್ಯನು ಪಟ್ಟಕ್ಕೆ ಬಂದನು. ತಂದೆಯು ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿಯೇ ವಿಕ್ರಮಾದಿತ್ಯನು ದಂಡೆತ್ತಿ ಬಂದು ಕಾಂಚಿಪುರವನ್ನು ಹೊಕ್ಕು ಪಲ್ಲವನನ್ನು ಸೋಲಿಸಿ ಕಪ್ಪ, ಕಾಣಿಕೆಗಳನ್ನು ಪಡೆದುಕೊಂಡಿದ್ದನು. ತನ್ನ ಆಳ್ವಿಕೆಯಲ್ಲಿ ಮತ್ತೆ ಕಾಂಚಿಯನ್ನು ಮುತ್ತಿದ. ಪಲ್ಲವ ದೊರೆ ರಾಜಲಾಂಛನಗಳನ್ನು ತೊರೆದು ಪಲಾಯನ ಮಾಡಿದ. ಇಮ್ಮಡಿ ವಿಕ್ರಮಾದಿತ್ಯನು ಕಾಂಚಿ ರಾಜಧಾನಿಯನ್ನು ವಶಪಡಿಸಿಕೊಂಡ. ಅಲ್ಲಿದ್ದ ರಾಜಸಿಂಹೇಶ್ವರ ಗುಡಿಯನ್ನು ಕಂಡು ವಿಸ್ಮಿತನಾದ. ಯುದ್ಧ ಸಂಪತ್ತನ್ನು ದೇವಾಲಯಕ್ಕೆ ಬಿಟ್ಟುಕೊಟ್ಟು ಚಾಲುಕ್ಯ ದೊರೆಯು ಔದಾರ್ಯವನ್ನು ತೋರಿದ. ಇತಿಹಾಸದಲ್ಲಿ ಇದೊಂದು ಅಪರೂಪದ ಘಟನೆ.

ಕಾಂಚಿ ವಿಜಯದ ಸವಿ ನೆನಪಿಗಾಗಿ ಈತನ ಅರಸಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯವರು ಎರಡು ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ಅವೇ ಇಂದು ಪಟ್ಟದಕಲ್ಲಿನಲ್ಲಿ ನಾವು ನೋಡುವ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ಗುಡಿಗಳು. ಅದರ ಸ್ಥಪತಿಗಳಾದ ಸರ್ವಸಿದ್ದಿ ಆಚಾರಿ ಹಾಗೂ ಗುಂಡ ಅನಿವಾರಿತಾಚಾರಿಗಳಿಗೆ ಅರಸನು ಬಿರುದುಗಳನ್ನು ನೀಡಿ ಸನ್ಮಾನಿಸಿದುದು ಚಾಲುಕ್ಯ ಅರಸರ ಕಲಾಪ್ರೀತಿಯ ದ್ಯೋತಕವಾಗಿದೆ.

ಬಾದಾಮಿ ಚಾಲುಕ್ಯರ ವಂಶಾವಳಿ

Badaami Tree

ಇಮ್ಮಡಿ ವಿಕ್ರಮಾದಿತ್ಯನ ಮಗನಾದ ಇಮ್ಮಡಿ ಕೀರ್ತಿವರ್ಮನು (೭೪೫-೭೫೭) ಚಾಲುಕ್ಯ ವಂಶದ ಕೊನೆಯ ಅರಸ. ಯುವರಾಜನಾಗಿ ಪಲ್ಲವರೊಡನೆ ಹೋರಾಡಿ ಜಯಶಾಲಿಯಾಗಿದ್ದ. ಆದರೆ ಅರಸನಾಗಿ ರಾಷ್ಟ್ರಕೂಟ ದಂತಿದುರ್ಗನಿಂದ ಪರಾಜಿತನಾದ. ಅಲ್ಲಿಗೆ ಚಾಲುಕ್ಯ ಆದಿತ್ಯ ಅಸ್ತಂಗತನಾದ.

ಆ. ಚಾಲುಕ್ಯೋತ್ತರ ಕಾಲ

ರಾಜಧಾನಿಯ ಪಟ್ಟದಿಂದ ವಂಚಿತವಾದ ಬಳಿಕ ಬಾದಾಮಿಯು ಬೇರೆ ಬೇರೆ ಅರಸು ಮನೆತನಗಳ ಆಡಳಿತಕ್ಕೆ ಒಳಪಟ್ಟಿತು. ದಂತಿದುರ್ಗ, ಅಮೋಘವರ್ಷ, ಇಮ್ಮಡಿಕೃಷ್ಣ, ಖೊಟ್ಟಿಗ, ಅಮೋಘವರ್ಷ ಮೊದಲಾದ ರಾಷ್ಟ್ರಕೂಟ ಅರಸರು ಈ ಪ್ರದೇಶವನ್ನು ಆಳಿದುದು ಶಾಸನಗಳಿಂದ ವಿದಿತವಾಗುತ್ತದೆ. ಹಾಗೆಯೇ ಕಲ್ಯಾಣಚಾಲುಕ್ಯ ವಂಶದ ಮೊದಲನೆಯ ಜಗದೇಕಮಲ್ಲ, ಮೊದಲನೆಯ ಸೋಮೇಶ್ವರ, ಇಮ್ಮಡಿ ಸೋಮೇಶ್ವರ, ಆರನೆಯ ವಿಕ್ರಮಾದಿತ್ಯ, ಇಮ್ಮಡಿ ಜಗದೇಕಮಲ್ಲ ಮೊದಲಾದ ಅರಸರ ಒಡೆತನಕ್ಕೆ ಬಾದಾಮಿ ಪ್ರದೇಶವು ಸೇರಿದಿ್ದತು.

ಇಮ್ಮಡಿ ಜಗದೇಕಮಲ್ಲನ (ಕ್ರಿ.ಶ. ೧೧೩೯-೪೦ರ) ಶಾಸನದಲ್ಲಿ ಕಾಣಿಸಿಕೊಂಡ ಬಾದಾಮಿಯ ಹೆಸರು ಮತ್ತೆ ಉಕ್ತವಾದದ್ದು ವಿಜಯನಗರದ ಅರಸು ಹರಿಹರರಾಯನ (ಕ್ರಿ.ಶ. ೧೩೩೯-೪೦) ಶಾಸನದಲ್ಲಿ. ಈ ನಡುವಿನ ಇನ್ನೂರು ವರ್ಷಗಳ ಬಾದಾಮಿಯ ಇತಿಹಾಸವು ಕಾಲದ ಕತ್ತಲಲ್ಲಿ ಅವಿತುಕೊಂಡಿದೆ. ಹರಿಹರರಾಯನ ವೇಳೆಗೆ ಬಾದಾಮಿ ಪುಟ್ಟಗ್ರಾಮದ ಗಾತ್ರಕ್ಕೆ ಕುಗ್ಗಿತ್ತು.

ರಕ್ಕಸತಂಗಡಿ ಕದನ(೧೫೬೫)ದ ನಂತರ ಬಾದಾಮಿ ಪ್ರದೇಶವು ಆದಿಲಶಾಹಿಗಳ ಒಡೆತನಕ್ಕೆ ಸೇರಿತ್ತು. ಆ ಬಳಿಕ ಅದು ಸವಣೂರಿನ ನವಾಬನ ಆಧೀನವಾಯಿತು. ನಂತರ ಮರಾಠಾ ಪೇಶ್ವೆ ಬಾದಾಮಿಯನ್ನು (೧೭೫೬ರಲ್ಲಿ) ನವಾಬನಿಂದ ಕಸಿದುಕೊಳ್ಳುವಲ್ಲಿ ಯಶಸ್ವಿಯಾದನು.

೧೭೭೪-೭೮ರ ಅವಧಿಯಲ್ಲಿ ಹೈದರನು ಕೃಷ್ಣಾನದಿಯ ದಕ್ಷಿಣ ಭಾಗವನ್ನು ಆಕ್ರಮಿಸಿಕೊಂಡನು. ನಾನಾ ಪಡ್ನವೀಸನು ನಿಜಾಮನ ಸೈನ್ಯದ ಸಹಾಯದಿಂದ ೧೭೮೬ ಮೇ, ೧ರಂದು ಬಾದಾಮಿ ಪ್ರದೇಶವನ್ನು ಮುತ್ತಿದನು. ಈ ಯುದ್ಧದಲ್ಲಿ ಟೀಪುಸುಲ್ತಾನನು ಜಯಶಾಲಿಯಾದನು. ಆದರೆ ೧೭೮೭ರ ಶಾಂತಿ ಒಪ್ಪಂದವು ಮರಾಠರಿಗೆ ಲಾಭದಾಯಕ ವಾಯಿತು. ಅದರನ್ವಯ ಟೀಪು ಬಾದಾಮಿ, ನರಗುಂದ, ಗಜೇಂದ್ರಗಡ ಮತ್ತು ಕಿತ್ತೂರು ಗಳನ್ನು ಬಿಟ್ಟು ಕೊಡಬೇಕಾಯಿತು. ಮುಂದೆ ೧೮೧೮ರಲ್ಲಿ ನಡೆದ ಮರಾಠಾ ಯುದ್ಧದಲ್ಲಿ ಜನರಲ್ ಮನ್ರೋ ಬಾದಾಮಿಯನ್ನು ಬ್ರಿಟಿಶರ ಆಡಳಿತಕ್ಕೆ ಸೇರಿಸಿದ.

ಚಾಲುಕ್ಯ ವಾಸ್ತು ಲಕ್ಷಣಗಳು

ಬಾದಾಮಿ ಚಾಲುಕ್ಯರ ವಾಸ್ತು ನಿರ್ಮಿತಿಗಳು ಪ್ರಧಾನವಾಗಿ ಬಾದಾಮಿ, ಐಹೊಳೆ, ಮಹಾಕೂಟ, ಪಟ್ಟದಕಲ್ಲು, ಆಲಂಪುರ(ಆಂಧ್ರಪ್ರದೇಶ)ಗಳಲ್ಲಿ ಕೇಂದ್ರೀಕೃತವಾಗಿವೆ. ಕ್ರಿ.ಶ. ೬-೮ನೆಯ ಶತಮಾನಗಳಲ್ಲಿ ನಿರ್ಮಾಣಗೊಂಡ ಈ ಸ್ಮಾರಕಗಳು ಭಾರತದ ಉತ್ಕೃಷ್ಟ ದೇವಾಲಯಗಳ ಸಾಲಿಗೆ ಸೇರಿವೆ. ಈ ದೇವಾಲಯಗಳಲ್ಲಿ ಕಂಡುಬರುವ ವಾಸ್ತುವೈವಿಧ್ಯಗಳು ವಿಸ್ಮಯಕಾರಿಯಾಗಿವೆ. ಬಗೆಬಗೆಯ ತಲ ವಿನ್ಯಾಸಗಳು, ವಿಭಿನ್ನ ಶಿಖರಶೈಲಿಗಳು, ವಿವಿಧ ಪ್ರಕಾರದ ಶಿಲ್ಪಗಳು ಅಂದಿನ ಸ್ಥಪತಿಗಳ, ರೂವಾರಿಗಳ ಸೃಜನಶೀಲತೆ ಹಾಗೂ ಉತ್ಸಾಹದ ಪ್ರತೀಕವಾಗಿವೆ. ಈ ಎರಡು ಶತಮಾನಗಳಲ್ಲಿ ವಾಸ್ತುಕಲೆ ಸಮೃದ್ಧವಾಗಿ ಬೆಳೆಯಿತು. ಚಾಲುಕ್ಯ ವಾಸ್ತುಕಲೆಯು ಭಾರತೀಯ ಕಲಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.

ಚಾಲುಕ್ಯರ ವಾಸ್ತುಕಲೆಯು ಐಹೊಳೆ, ಬಾದಾಮಿಗಳಲ್ಲಿ ಚಿಗುರೊಡೆಯಿತು. ಅಜಂತಾ, ಎಲ್ಲೋರಾದ ಗುಹಾದೇವಾಲಯಗಳು ಬಾದಾಮಿ ಪ್ರದೇಶದ ಕಲಾವಿದರ ಕಲಾಸತ್ವವನ್ನು ಬಡಿದೆಬ್ಬಿಸಿರಬೇಕು. ವಾಕಾಟಕರ ಕಲಾ ಪರಂಪರೆಯಿಂದ ಪ್ರಭಾವಿತರಾದ ಇಲ್ಲಿಯ ಸ್ಥಪತಿಗಳು, ರೂವಾರಿಗಳು, ಗುಹಾಲಯಗಳಲ್ಲಿ ರಾಚನಿಕ ಮಂದಿರಗಳಲ್ಲಿ ತಮ್ಮದೇ ಆದ ಕಲಾ ವೈಶಿಷ್ಟ್ಯವನ್ನು ಸ್ಥಾಪಿಸಿದ್ದಾರೆ. ಪ್ರಯೋಗಶೀಲ ಗುಣವಿಶೇಷದಿಂದಾಗಿ ವೈವಿಧ್ಯವನ್ನು, ಸಂಕೀರ್ಣತೆಯನ್ನು ಮತ್ತು ಪರಿಪೂರ್ಣತೆಯನ್ನು ಸಾಧಿಸಿದ್ದಾರೆ.

ಚಾಲುಕ್ಯರ ವಾಸ್ತು ಕಲಾಕೃತಿಗಳನ್ನು ಸ್ಥೂಲವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು. ಅವು ೧. ಗುಹಾ ದೇವಾಲಯಗಳು ೨. ರಾಚನಿಕ ದೇವಾಲಯಗಳು. ಇವೆರಡು ಬಗೆಯ ಕಟ್ಟಡ ರಚನಾತಂತ್ರ ವಿಭಿನ್ನವಾದುದು. ಗುಹಾ ದೇವಾಲಯವೆಂದರೆ ಬೃಹದಾಕಾರದ ಕಲ್ಲನ್ನು ಕೊರೆದು ನಿರ್ಮಿಸಲಾದ ದೇವಾಲಯ. ರಚಿತ ಮಂದಿರದಲ್ಲಿ ಕಂಬ, ತೊಲೆ ಮೊದಲಾದ ಭಾಗಗಳನ್ನು ಇಚ್ಛಿಸಿದ ಬಗೆಯಲ್ಲಿ ಜೋಡಿಸಲಾಗುತ್ತದೆ. ಈ ವಾಸ್ತು ರಚನೆಯು ಕಟ್ಟಡದ ತಳಪಾಯದಿಂದ ಪ್ರಾರಂಭವಾಗುತ್ತದೆ. ನಂತರ ಹಂತ ಹಂತವಾಗಿ ಅಧಿಷ್ಠಾನ, ಗೋಡೆ, ಶಿಖರಗಳನ್ನು ಕಟ್ಟಲಾಗುತ್ತದೆ. ಗುಹಾಲಯ ನಿರ್ಮಾಣದಲ್ಲಿ ಬಂಡೆಯನ್ನು ಕೊರೆಯುವ ಕೆಲಸವು ಮೇಲ್ಭಾಗದಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಗುಹಾಲಯದ ಮೇಲ್ಛಾವಣಿಯು ಮೊದಲು ಸಿದ್ಧವಾಗುತ್ತದೆ. ಕೊನೆಯ ಹಂತದಲ್ಲಿ ಅಧಿಷ್ಠಾನ, ಪಾವಟಿಗೆಗಳನ್ನು ಕಂಡರಿಸಲಾಗುತ್ತದೆ. ಬೇಡಾದ ಶಿಲಾಭಾಗವನ್ನು ಕತ್ತರಿಸಿ ಹೊರತೆಗೆಯುವ ತಂತ್ರ ಗುಹಾಲಯಗಳದ್ದು. ಆದ್ದರಿಂದ ಗುಹಾ ನಿರ್ಮಾಣದ ಸೂತ್ರ ವ್ಯವಕಲನ. ಬೇಕಾದ ಭಾಗಗಳನ್ನು ತಂದು ಕೂಡಿಸುವ ತಂತ್ರ ರಚಿತ ಕಟ್ಟಡದ್ದು. ಹೀಗಾಗಿ ರಾಚನಿಕ ಗುಡಿಗಳ ರಚನಾಸೂತ್ರ ಸಂಕಲನ. ಆದ್ದರಿಂದ ಇವೆರಡು ವಾಸ್ತುರಚನೆಗಳ ಲಕ್ಷಣಗಳನ್ನು ಪ್ರತ್ಯೇಕವಾಗಿ ಅಭ್ಯಸಿಸಬಹುದು.

೧. ಗುಹಾದೇವಾಲಯಗಳು

ಚಾಲುಕ್ಯ ರೂವಾರಿಗಳು ಬಾದಾಮಿ ಮತ್ತು ಐಹೊಳೆಯಲ್ಲಿ ಒಟ್ಟು ಒಂಬತ್ತು ಗುಹಾ ದೇವಾಲಯಗಳನ್ನು ಕೊರೆದಿದ್ದಾರೆ. ಅವುಗಳಲ್ಲಿ ಐದು ಗುಹಾಲಯಗಳು ಐಹೊಳೆಯಲ್ಲಿವೆ. ನಾಲ್ಕು ಬಾದಾಮಿಯಲ್ಲಿವೆ. ಇವುಗಳಲ್ಲಿಯ ಸಾಮಾನ್ಯ ವಾಸ್ತು ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಬಹುದು.

೧. ಗುಹಾದೇವಾಲಯಗಳ ಮುಂಭಾಗದಲ್ಲಿ ವಿಶಾಲವಾದ ಅಂಗಳವಿರುತ್ತದೆ. ಈ ಅಂಗಳದ ವಿಸ್ತೀರ್ಣ ಹೆಚ್ಚು ಕಡಿಮೆಯಾಗಿರಬಹುದು.

೨. ಗುಹಾಲಯಗಳ ತಳವಿನ್ಯಾಸವು ಸಾಮಾನ್ಯವಾಗಿ ಚಿಕ್ಕ ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪವನ್ನು ಒಳಗೊಂಡಿರುತ್ತದೆ. ಐಹೊಳೆಯ ರಾವಣಫಡಿಯ ತಲವಿನ್ಯಾಸವು ತೀರ ಭಿನ್ನವಾಗಿದ್ದು ವಾಕಾಟಕರ ವಾಸ್ತು ಪ್ರಭಾವಕ್ಕೆ ಸಿಲುಕಿದಂತೆ ತೋರುತ್ತದೆ.

೩. ಗುಹಾಲಯಗಳಿಗೆ ಅಧಿಷ್ಠಾನ ಭಾಗವಿರುತ್ತದೆ ಮತ್ತು ಅದರಲ್ಲಿ ಗಣಗಳ ಸಾಲನ್ನು ಕೆತ್ತಲಾಗಿರುತ್ತದೆ.

೪. ಗರ್ಭಗೃಹಕ್ಕೆ ಪ್ರತ್ಯೇಕ ಮೆಟ್ಟಿಲುಗಳಿದ್ದು ದೇವಪೀಠವು ಎತ್ತರದಲ್ಲಿರುವಂತೆ ರೂಪಿಸಲಾಗಿರುತ್ತದೆ.

೫. ಈ ಗುಹಾಲಯಗಳಿಗೆ ಪ್ರದಕ್ಷಿಣಾ ಪಥವಿಲ್ಲ.

೬. ಮುಖಮಂಟಪದ ಮುಂಭಾಗದಲ್ಲಿ ಸಾಮಾನ್ಯವಾಗಿ ನಾಲ್ಕು ಕಂಬಗಳಿರುತ್ತವೆ. ಐಹೊಳೆಯ ರಾವಣಫಡಿಯಲ್ಲಿ ಎರಡು ಕಂಬಗಳಿದ್ದರೆ ಬಾದಾಮಿಯ ಮಹಾವಿಷ್ಣು ಗೃಹಕ್ಕೆ ಆರು ಕಂಬಗಳಿವೆ.

೭. ಮುಖಮಂಟಪದ ಎಡಬಲಕ್ಕಿರುವ ಗೋಡೆಗಳ ಮೇಲೆ ಬೃಹತ್‌ಶಿಲ್ಪಗಳನ್ನು ಕಂಡರಿಸಲಾಗಿದೆ. ಇವು ಸಾಮಾನ್ಯವಾಗಿ ದೇವಶಿಲ್ಪಗಳು.

೮. ಕಂಬಗಳು ಚೌಕಾಕಾರವಾಗಿವೆ. ಅವುಗಳ ಮೇಲಿನ ಅರ್ಧಭಾಗದಲ್ಲಿ ಜ್ಯಾಮಿತಿ, ಪುಷ್ಪ ನಕ್ಷೆಗಳ ಕೆತ್ತನೆ ಇರುತ್ತದೆ.

೯. ಗುಹಾಲಯದ ಮುಖಮಂಟಪ ಮತ್ತು ಸಭಾಮಂಟಪವನ್ನು ಬೇರ್ಪಡಿಸುವ ಎರಡು ಇಲ್ಲವೆ ನಾಲ್ಕು ಕಂಬಗಳನ್ನು ಹೆಚ್ಚು ಕಲಾತ್ಮಕವಾಗಿ ರೂಪಿಸಲಾಗಿದೆ.

೧೦. ಗುಹಾಲಯಗಳ ತೊಲೆಗಳು ಕಥಾನಕ ಶಿಲ್ಪಗಳಿಂದ ಅಲಂಕೃತವಾಗಿವೆ.

೧೧. ಛತ್ತಿನಲ್ಲಿ ಸ್ವಸ್ತಿಕ, ಪುಷ್ಪನಕ್ಷೆಗಳು ಇಲ್ಲವೆ ಗಂಧರ್ವ ದಂಪತಿ, ನಾಗರಾಜ, ದಿಕ್ಪಾಲಕರ ಉಬ್ಬು ಶಿಲ್ಪಗಳಿವೆ.

೧೨. ಈ ಗುಹಾಲಯಗಳು ವರ್ಣಚಿತ್ರಗಳಿಂದ ಕೂಡಿ ಹೆಚ್ಚು ಆಕರ್ಷಕವಾಗಿದ್ದವು. ಬಾದಾಮಿಯ ವೈಷ್ಣವ ಗುಹೆಗಳಲ್ಲಿ, ಐಹೊಳೆಯ ರಾವಣಫಡಿಯಲ್ಲಿ ಬಣ್ಣದ ಅವಶೇಷಗಳನ್ನು ಈಗಲೂ ಕಾಣಬಹುದು.

೨. ರಾಚನಿಕ ದೇವಾಲಯಗಳು

ಚಾಲುಕ್ಯ ಅರಸ, ಅರಸಿಯರು ಮತ್ತು ಧನಿಕರು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸುಮಾರು ೨೫ ಸ್ಥಳಗಳಲ್ಲಿ ನೂರಾರು ರಾಚನಿಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ರಾಜಧಾನಿಯಾದ ಬಾದಾಮಿಯಲ್ಲಿ ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿಶೇಷವಾಗಿ ಐಹೊಳೆ, ಮಹಾಕೂಟ, ಪಟ್ಟದಕಲ್ಲುಗಳಲ್ಲಿ ಗುಡಿಗುಚ್ಛಗಳು ತಲೆ ಎತ್ತಿವೆ. ಆಂಧ್ರಪ್ರದೇಶದ ಆಲಂಪುರದಲ್ಲಿಯೂ ಇಂತಹ ದೇವಾಲಯ ಸಮುಚ್ಚಯವನ್ನು ಕಾಣುತ್ತೇವೆ. ಜೊತೆಗೆ ಸತ್ಯಾವೊಲು, ಮಹಾನಂದಿ, ಕುಡವೇಲಿ, ಕಡಮರ ಕಾಲವ ಮೊದಲಾದವುಗಳಲ್ಲಿ ಚಾಲುಕ್ಯರ ರಾಚನಿಕ ಮಂದಿರಗಳು ಚದುರಿಕೊಂಡಿವೆ. ಈ ದೇವಾಲಯಗಳ ವಾಸ್ತು ವಿಶೇಷಗಳಲ್ಲಿ ಅಚ್ಚರಿಗೊಳಿಸುವ ವೈವಿಧ್ಯಗಳನ್ನು ಕಾಣುತ್ತೇವೆ. ಆದಾಗ್ಯೂ ಕೆಲವು ಸಾಮಾನ್ಯ ಅಂಶಗಳನ್ನು ಸ್ಥೂಲವಾಗಿ ಹೀಗೆ ಪಟ್ಟಿ ಮಾಡಬಹುದಾಗಿದೆ.

ತಲವಿನ್ಯಾಸಗಳು

ಚಾಲುಕ್ಯ ಸ್ಥಪತಿಗಳು ವಿಭಿನ್ನ ತಲವಿನ್ಯಾಸಗಳಿರುವ ದೇವಾಲಯಗಳನ್ನು ಸೃಷ್ಟಿಸಿದ್ದಾರೆ. ಬಹುಪಾಲು ಗುಡಿಗಳಿಗೆ ಸರಳವಾದ ತಲವಿನ್ಯಾಸವಿದೆ. ಇವು ಚೌಕಾಕಾರದ ಚಿಕ್ಕ ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿದ್ದು ಪೂಜಾ ವಿಧಿಗಳಿಗೆ ಪೂರಕವಾಗಿವೆ. ಮಹಾಕೂಟದ ಬಾಣಂತಿ ಗುಡಿ, ಐಹೊಳೆಯ ಸೂರ್ಯದೇವಾಲಯಗಳು ಈ ಬಗೆಯ ವಿನ್ಯಾಸದಲ್ಲಿ ರಚಿತವಾಗಿವೆ. ಪ್ರದಕ್ಷಿಣಾ ಪಥವಿಲ್ಲದ ಇವನ್ನು ನಿರಂಧಾರ ಮಂದಿರಗಳೆಂದು ಕರೆಯಲಾಗುತ್ತದೆ.

ಪ್ರದಕ್ಷಿಣಾ ಪಥವಿರುವ ದೇವಾಲಯಗಳನ್ನು ಸಾಂಧಾರವೆಂದು ಗುರುತಿಸಲಾಗುತ್ತದೆ. ದೇವತಾ ಶಿಲ್ಪವನ್ನು ಸುತ್ತು ಹಾಕಲು ಸಾಧ್ಯವಾಗುವಂತೆ ಗರ್ಭಗೃಹದ ಸುತ್ತ ಪ್ರದಕ್ಷಿಣಾ ಪಥವನ್ನು ನಿರ್ಮಿಸಲಾಗಿರುತ್ತದೆ. ಐಹೊಳೆಯ ಹುಚ್ಚಿ ಮಲ್ಲಿಗುಡಿ, ಪಟ್ಟದಕಲ್ಲಿನ ಸಂಗಮೇಶ್ವರ, ಮಹಾಕೂಟದ ಮಲ್ಲಿಕಾರ್ಜುನ ಗುಡಿಗಳನ್ನು ಹೆಸರಿಸಬಹುದು. ಐಹೊಳೆಯ ಲಾಡಖಾನ ಗುಡಿಯ ತಲವಿನ್ಯಾಸ ಇನ್ನೊಂದು ಬಗೆಯದು. ಗರ್ಭಗೃಹವು ಸಭಾಮಂಟಪದ ಭಾಗವಾಗಿದ್ದು ಅವೆರಡರ ಹಿಂದಿನ ಗೋಡೆ ಒಂದೇ ಆಗಿದೆ. ಹೀಗೆ ಸಭಾಮಂಟಪವು ಗರ್ಭಗೃಹವನ್ನು ಗರ್ಭೀಕರಿಸಿಕೊಂಡು ಹೆಚ್ಚು ವಿಶಾಲವಾಗಿದೆ.

ಚಾಲುಕ್ಯರ ಕಾಲದಲ್ಲಿ ನೂರಾರು ಗುಡಿಗಳು ನಿರ್ಮಾಣಗೊಂಡಿದ್ದರೂ ಅವುಗಳಲ್ಲಿ ಗಜಪೃಷ್ಠ ತಲವಿನ್ಯಾಸವಿರುವ ದೇವಾಲಯಗಳು ಅಪರೂಪವಾಗಿವೆ. ಐಹೊಳೆ, ಹಳೆಯ ಮಹಾಕೂಟ, ಪಾಪನಾಶನಂ ಮತ್ತು ಸತ್ಯಾವೋಲುಗಳಲ್ಲಿ ಇವನ್ನು ಕಾಣಬಹುದು. ದೇವಾಲಯದ ಹಿಂಭಾಗ ಚಾಪಾಕಾರದ್ದಾಗಿರುತ್ತದೆ. ಈ ತಲವಿನ್ಯಾಸವು ಪಶ್ಚಿಮ ಘಟ್ಟದಲ್ಲಿಯ ಬೌದ್ಧ ಚೈತ್ಯಾಲಯಗಳ ತಲವಿನ್ಯಾಸವನ್ನು ಹೋಲುತ್ತದೆ. ಐಹೊಳೆಯ ದುರ್ಗ ದೇವಾಲಯವು ಈ ಬಗೆಯ ತಲವಿನ್ಯಾಸವಿರುವ ದೇವಾಲಯಗಳಲ್ಲಿಯೇ ಉತ್ಕೃಷ್ಟವಾದುದು. ಈ ಗುಡಿಗೆ ಎರಡು ಪ್ರದಕ್ಷಿಣ ಪಥಗಳಿರುವುದು ಒಂದು ವಿಶೇಷ ಸಂಗತಿ. ಚಾಪಾಕಾರದ ಗರ್ಭಗೃಹ, ಅದಕ್ಕೆ ಅನುಗುಣವಾದ ಪ್ರದಕ್ಷಿಣಾಪಥ, ಸಭಾಮಂಟಪ ಹಾಗೂ ಮುಖಮಂಟಪ ಈ ಬಗೆಯ ದೇವಾಲಯದ ವಾಸ್ತು ಅಂಗಗಳು.

ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಶೀಲಾಕಾಂತ ಪತ್ತಾರ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ

Review Overview

User Rating: 4.7 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *