ದುರ್ಗಗುಡಿ, ಐಹೊಳೆ
ಬಾದಾಮಿಯ ಜಂಬುಲಿಂಗ ದೇವಾಲಯವು ಮತ್ತೊಂದು ತೆರನಾದ ತಲವಿನ್ಯಾಸದಲ್ಲಿ ರಚಿತವಾಗಿದೆ. ಕ್ರಿ.ಶ. ೬೯೯ರಲ್ಲಿ ವಿನಯವತಿ ರಾಜಮಾತೆಯು ಇದನ್ನು ಕಟ್ಟಿಸಿದಳು. ಇಲ್ಲಿ ಬ್ರಹ್ಮ, ಈಶ್ವರ ಮತ್ತು ವಿಷ್ಣುದೇವರಿಗಾಗಿ ಮೂರು ಪ್ರತ್ಯೇಕ ಗರ್ಭಗುಡಿಗಳಿದ್ದು ದಕ್ಷಿಣ ಭಾರತದ ಪ್ರಥಮ ತ್ರಿಕೂಟಾಲಯವೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಮೂರು ಗರ್ಭಗುಡಿಗಳಿಗೆ ಹೊಂದಿಕೊಂಡ ಸಭಾಮಂಟಪ ಮತ್ತು ಮುಖಮಂಟಪ ಇದರ ಉಳಿದ ಭಾಗಗಳು. ಹೆಚ್ಚು ವಿಕಾಸಗೊಡಿರುವ ಶೈವ ರಾಚನಿಕ ದೇವಾಲಯಗಳಲ್ಲಿ ಪ್ರತ್ಯೇಕ ನಂದಿ ಮಂಟಪಗಳಿವೆ. ಮಹಾಕೂಟ, ಪಟ್ಟದಕಲ್ಲಿನ ಪ್ರಧಾನ ದೇವಾಲಯಗಳಲ್ಲಿ ಇಂತಹ ನಂದಿ ಮಂಟಪಗಳನ್ನು ಕಾಣುತ್ತೇವೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯವು ಭಾರತದ ಶ್ರೇಷ್ಠ ದೇವಾಲಯಗಳಲ್ಲಿ ಒಂದಾಗಿದೆ. ವಿಶಾಲವಾದ ಪ್ರಾಕಾರ, ರಕ್ಷಣಾಗೋಡೆ, ಅದಕ್ಕೆ ಹೊಂದಿಕೊಂಡ ಪರಿವಾರ ದೇವತೆಗಳ ಕೋಷ್ಠಗಳು, ದ್ವಾರಮಂಟಪ ಮೊದಲಾದ ವಾಸ್ತು ರಚನೆಗಳಿಂದ ಕೂಡಿದ ಈ ಗುಡಿಯ ತಲವಿನ್ಯಾಸವು ಅತ್ಯಂತ ಸಂಕೀರ್ಣ ಬಗೆಯದು.
ಚಾಲುಕ್ಯರ ರಾಚನಿಕ ಮಂದಿರಗಳ ಮತ್ತೊಂದು ವಾಸ್ತು ವಿಶೇಷವೆಂದರೆ ಎತ್ತರವಾದ ಅಧಿಷ್ಠಾನ. ಇದರ ಪ್ರಧಾನ ಭಾಗಗಳೆಂದರೆ ಉಪಾನ ಗಳ ಮತ್ತು ಕಪೋತ. ಮಹಾಕೂಟೇಶ್ವರ ದೇವಾಲಯದ ಅಧಿಷ್ಠಾನವು ಉಪಾನ, ಕಪೋತ, ಕುಮುದ, ವ್ಯಾಲಗಳ ಪಟ್ಟಿಕೆ ಮತ್ತು ಪುಟ್ಟಶಿಲ್ಪಗಳಿಂದ ಅಲಂಕೃತವಾದ ಗಳ ಎಂಬ ಭಾಗಗಳನ್ನೊಳಗೊಂಡು ಶ್ರೀಮಂತವಾಗಿದೆ. ದುರ್ಗ ದೇವಾಲಯದಲ್ಲಿ ಎರಡು ಅಧಿಷ್ಠಾನಗಳನ್ನು ಸಂಯೋಜಿಸಲಾಗಿದೆ.
ದೇವಾಲಯದ ಹೊರಗೋಡೆಗಳು ದೇವಕೋಷ್ಠಗಳಿಂದಾಗಿ ಹೆಚ್ಚು ಸುಂದರವಾಗಿವೆ. ಸಾಮಾನ್ಯವಾಗಿ ಮೂರು ಗೋಡೆಗಳ ಮೇಲೆ ಮೂರು ದೇವಕೋಷ್ಠಗಳಿರುವುದು ವಾಡಿಕೆ. ದುರ್ಗ ದೇವಾಲಯವು ಇಂತಹ ಹನ್ನೊಂದು ದೇವಕೋಷ್ಠಗಳನ್ನು ಹೊರಗೋಡೆಯಲ್ಲಿ ಹೊಂದಿದೆ.
ಜಾಲಂಧರಗಳು ವಾಸ್ತು ವಿಜ್ಞಾನದ ದೃಷ್ಟಿಯಿಂದ ಮಹತ್ವದ ಭಾಗಗಳು. ಇವು ಸಭಾಮಂಟಪದಲ್ಲಿ ನೆರೆದ ಜನರಿಗೆ ಗಾಳಿ, ಬೆಳಕನ್ನು ಒದಗಿಸುತ್ತವೆ. ರೂವಾರಿಗಳ ಕೌಶಲ್ಯದಿಂದಾಗಿ ಜಾಲಂಧರಗಳು ಕಲಾತ್ಮಕವಾಗಿ ರೂಪಗೊಂಡಿವೆ. ಇವು ಮಂದಿರದ ಸೌಂದರ್ಯವನ್ನು ಹೆಚ್ಚಿಸಿವೆ. ಇವುಗಳ ಆಕಾರ, ನಕ್ಷೆಗಳಲ್ಲಿ ವೈವಿಧ್ಯವನ್ನು ಕಾಣಬಹುದು. ಪಟ್ಟದಕಲ್ಲಿನ ವಿರೂಪಾಕ್ಷ, ಐಹೊಳೆಯ ಲಾಡಖಾನ ಗುಡಿಯ ಜಾಲಂಧ್ರಗಳು ಚಿತ್ತಾಕರ್ಷಕವಾಗಿವೆ.
ಚಾಲುಕ್ಯ ದೇವಾಲಯದ ಮಂಜೂರಿನ ಒಳಭಾಗದಲ್ಲಿ ಹಂಸಮಾಲೆಗಳ ಕೆತ್ತನೆ ಇರುವುದು ವಿಶೇಷ ಲಕ್ಷಣ. ಕಂಬಗಳು ಸಾಮಾನ್ಯವಾಗಿ ಚೌಕಾಕಾರವಾಗಿವೆ. ಕಂಬಗಳ ದಂಡ ಭಾಗವು ಸಾಮಾನ್ಯವಾಗಿ ಸಮಾಂತರ ಪಟ್ಟಿಕೆಗಳಿಂದ ಕೂಡಿರುತ್ತದೆ. ವಿಕಾಸಗೊಂಡ ದೇವಾಲಯದ ಕಂಬಗಳ ಬದಿಗಳಲ್ಲಿ ಮಧ್ಯಮ ಗಾತ್ರದ ಶಿಲ್ಪಗಳನ್ನು ಕಂಡರಿಸಲಾಗಿದೆ. ನಾಗನಾಥ ಗುಡಿಯ ಮುಖಮಂಟಪದ ಕಂಬಗಳಲ್ಲಿ ಮಿಥುನ ಶಿಲ್ಪಗಳಿವೆ. ಪಟ್ಟದಕಲ್ಲಿನ ಪ್ರಧಾನ ಗುಡಿಗಳ ಕಂಬಗಳಲ್ಲಿ ರಸಿಕ ದಂಪತಿಗಳು ಒಡಮೂಡಿದ್ದಾರೆ. ಚಾಲುಕ್ಯ ದೇವಾಲಯಗಳ ಕಂಬಗಳಿಗೆ ಬೋದುಗೆಗಳಿರುವುದು ಇನ್ನೊಂದು ವಿಶೇಷ ಲಕ್ಷಣವಾಗಿದೆ.
ದೇವಾಲಯಗಳ ಬಾಗಿಲುವಾಡಗಳು ಪಂಚಶಾಖೆಗಳಿಂದ ಅಲಂಕೃತವಾಗಿವೆ. ನದಿ ದೇವತೆಗಳಾದ ಗಂಗೆ, ಯಮುನೆಯರು ಬಾಗಿಲುವಾಡಗಳಲ್ಲಿರುವುದು ವಾಡಿಕೆ. ಮಿಥುನ ಶಿಲ್ಪಗಳನ್ನು ಕೂಡ ಕಾಣಬಹುದು.
ಇಳಿಜಾರಾದ ಮಾಳಿಗೆಗಳು ಚಾಲುಕ್ಯರ ರಾಚನಿಕ ಮಂದಿರಗಳ ವಾಸ್ತು ವಿಶೇಷತೆಯಾಗಿವೆ. ಸಭಾಮಂಟಪದಲ್ಲಿ ಮೂರು ಭಾಗಗಳಿದ್ದು ಮಧ್ಯದ ದೊಡ್ಡದಾದ ಭಾಗದ ಮಾಳಿಗೆಯು ನೆಲಕ್ಕೆ ಸಮಾಂತರವಾಗಿದ್ದು ಅದರ ಎಡ, ಬಲಗಳಲ್ಲಿಯ ಮಾಳಿಗೆಗಳು ಇಳಿಜಾರಾಗಿ ಇರುತ್ತವೆ. ದೇವಾಲಯವು ಸಾಂಧಾರವಾಗಿದ್ದರೆ ಪ್ರದಕ್ಷಿಣಾ ಪಥದ ಮೇಲಿನ ಮಾಳಿಗೆ ಕೂಡ ಇಳಿಜಾರಾಗಿ ಇರುತ್ತದೆ. ಸುತ್ತಲೂ ಇಂಥ ಮಾಳಿಗೆ ಇರುವ ಲಾಡಖಾನ ಗುಡಿಯು ಅತ್ಯಂತ ಆಕರ್ಷಕವಾಗಿದೆ.
ಚಾಲುಕ್ಯರ ರಾಚನಿಕ ಮಂದಿರಗಳ ಶಿಖರಗಳಲ್ಲಿ ಕಂಡುಬರುವ ವೈವಿಧ್ಯವು ಗಮನಾರ್ಹ ವಾಗಿದೆ. ಮುಖ್ಯವಾಗಿ ಮೂರು ಪ್ರಕಾರದ ಶಿಖರ ಶೈಲಿಗಳಲ್ಲಿ ಸ್ಥಪತಿಗಳು ತಮ್ಮ ವಾಸ್ತುವಿದ್ಯೆಯ ಚಾತುರ್ಯವನ್ನು ವ್ಯಕ್ತಪಡಿಸಿದ್ದಾರೆ. ಅವು ೧. ದ್ರಾವಿಡ ವಿಮಾನ ಶೈಲಿ ೨. ರೇಖಾನಾಗರ ಶಿಖರ ಶೈಲಿ ೩. ಕದಂಬನಾಗರ (ವೇಸರ) ಶೈಲಿ.
೧. ದ್ರಾವಿಡ ವಿಮಾನ ಶೈಲಿ ದಕ್ಷಿಣ ಭಾರತದ ಶಿಖರ ಶೈಲಿ. ಶಿಖರದ ತಳಭಾಗವು ಚಚ್ಚೌಕವಾಗಿದ್ದು ಅದರ ಮೇಲ್ಭಾಗದ ಸ್ತೂಪಿಯು ಆರು ಇಲ್ಲವೆ ಎಂಟು ಬದಿಗಳನ್ನು ಹೊಂದಿದ್ದರೆ ಅದು ದ್ರಾವಿಡ ಶಿಖರವೆನಿಸುತ್ತದೆ. ಇಂತಹ ಶಿಖರಗಳಲ್ಲಿ ಮೆಟ್ಟಿಲುಗಳಂತೆ, ಮೇಲಕ್ಕೆ ಹೋದಂತೆ ಕ್ರಮೇಣ ಚಿಕ್ಕದಾಗುವ ಅಂತಸ್ತುಗಳಿರುತ್ತವೆ. ಶಿಲ್ಪ ಪಟ್ಟಿಕೆಗಳು ಭೂಮಿಗೆ ಸಮಾಂತರವಾಗಿರುತ್ತವೆ. ಮಹಾಕೂಟದ ಮಹಾಕೂಟೇಶ್ವರ, ಮಲ್ಲಿಕಾರ್ಜುನ ಗುಡಿ ಮತ್ತು ಬಾದಾಮಿಯ ಮಾಲೆಗಿತ್ತಿ ಶಿವಾಲಯಗಳು ಈ ಶೈಲಿಯಲ್ಲಿವೆ.
೨. ರೇಖಾನಾಗರ ಶಿಖರ ಶೈಲಿಯು ಔತ್ತರೇಯ ಶೈಲಿಯಾಗಿದ್ದು ಈ ಬಗೆಯ ಶಿಖರಗಳನ್ನು ಒರಿಸ್ಸಾ, ಉತ್ತರ ಪ್ರದೇಶ, ಬಿಹಾರಗಳಲ್ಲಿ ಕಾಣುತ್ತೇವೆ. ದೇವಾಲಯವು ಶಿಖರದ ತಳದಿಂದ ಸ್ತೂಪಿಯವರೆಗೆ ಚೌಕಾಕಾರವಾಗಿರುತ್ತದೆ. ಆಮಲಕವು ಶಿಖರದ ಆಕರ್ಷಣೀಯ ಭಾಗವಾಗಿರುತ್ತದೆ. ಮೇಲಕ್ಕೆ ಹೋದಂತೆ ಶಿಖರವು ಬಾಗಿರುವಂತೆ ತೋರುತ್ತದೆ. ಶಿಲ್ಪಪಟ್ಟಿಕೆಗಳು ಭೂಮಿಗೆ ಲಂಬವಾಗಿ ಚಾಚಿಕೊಂಡಿರುತ್ತವೆ. ಶಿಖರಕ್ಕೆ ಹೊಂದಿಕೊಂಡು ಸುಕನಾಸಿ ಎಂಬ ವಿಶೇಷ ಭಾಗವಿರುತ್ತದೆ. ಐಹೊಳೆಯ ಹುಚ್ಚಿ ಮಲ್ಲಿಗುಡಿ, ಪಟ್ಟದಕಲ್ಲಿನ ಗಳಗನಾಥ ಗುಡಿಗಳು ಈ ಬಗೆಯ ಶಿಖರಗಳನ್ನು ಪ್ರದರ್ಶಿಸುತ್ತವೆ.
೩. ಕದಂಬ ನಾಗರ ಶಿಖರವನ್ನು ವೇಸರ ಎಂದೂ, ಫಂಸನಾ ಎಂದೂ ಕರೆಯಲಾಗುತ್ತದೆ. ಮೆಟ್ಟಿಲುಗಳನ್ನು ಒಳಗೊಂಡು ಮೇಲಕ್ಕೆ ಹೋದಂತೆ ಚಿಕ್ಕದಾಗುವ, ಪಿರಾಮಿಡ್ಡನ್ನು ಹೋಲುವ ಶಿಖರ ಶೈಲಿ ಇದು. ಐಹೊಳೆಯ ಮಲ್ಲಿಕಾರ್ಜುನ ಗುಡಿ, ಮಹಾಕೂಟದ ಪುಟ್ಟಗುಡಿಗಳು ಈ ಬಗೆಯ ಶಿಖರಗಳಿಂದ ಶೋಭಿತವಾಗಿವೆ.
ಚಾಲುಕ್ಯ ಶಿಲ್ಪ ವೈಶಿಷ್ಟ್ಯಗಳು
ಭಾರತೀಯ ಕಲೆಯ ಯಾವ ಪ್ರಕಾರಕ್ಕೂ ಅಧ್ಯಾತ್ಮ ಅಥವಾ ಧರ್ಮವೇ ಕೇಂದ್ರಬಿಂದು. ಶಿಲ್ಪಕಲೆಗೂ ಅಷ್ಟೆ. ನಿರಾಕಾರನಾದ ದೇವನಿಗೆ ಒಂದು ರೂಪವನ್ನು ಕಲ್ಪಿಸಿ ಅದನ್ನು ಪೂಜೆ ಮಾಡತೊಡಗಲು ಶಿಲ್ಪಕಲೆಗೆ ದಾರಿಯಾಯಿತು. ಕರ್ನಾಟಕದಲ್ಲಿ ಈ ಕಲೆಯು ಬಹುದೊಡ್ಡ ಪ್ರಮಾಣದಲ್ಲಿ ಮೊದಲು ಕಾಣಿಸಿಕೊಳ್ಳುವುದು ಬಾದಾಮಿ ಚಾಲುಕ್ಯರ ಕಾಲದಲ್ಲಿಯೇ. ಚಾಲುಕ್ಯ ಪೂರ್ವ ಕಾಲದ ಶಿಲ್ಪಗಳು ಬಿಡಿ ಬಿಡಿಯಾಗಿ, ವಿರಳವಾಗಿ ದೊರೆಯುತ್ತವೆ.
ಚಾಲುಕ್ಯ ಅರಸ ಅರಸಿಯರು, ಐಹೊಳೆಯ ವಣಿಕ ಸಂಘದ ಧನಿಕರು, ಬಾದಾಮಿ ಪರಿಸರದಲ್ಲಿ ಗುಹಾಲಯ ಮತ್ತು ರಾಚನಿಕ ಮಂದಿರಗಳನ್ನು ಕಟ್ಟಿಸಿ ಅವನ್ನು ಶಿಲ್ಪಗಳಿಂದ ಅಂದಗೊಳಿಸಿದರು. ಬಾದಾಮಿ, ಐಹೊಳೆ, ಮಹಾಕೂಟಗಳು ಶಿಲ್ಪಕಲೆಯ ಮೊದಲ ಹಂತವನ್ನು ಪ್ರದರ್ಶಿಸುತ್ತವೆ. ಚಾಲುಕ್ಯ ಶಿಲ್ಪಕಲೆಯು ಉಚ್ಛ್ರಾಯ ಸ್ಥಿತಿಯನ್ನು ತಲುಪಿದುದು ಪಟ್ಟದಕಲ್ಲಿನಲ್ಲಿ. ಈ ಶಿಲ್ಪಕಲೆಗೆ ಪುರಾಣ ಸಾಹಿತ್ಯವು ಪ್ರೇರಣೆಯಾಗಿದೆ. ಮಹಾಕಾವ್ಯಗಳ ಸನ್ನಿವೇಶಗಳೂ, ಪಂಚತಂತ್ರದ ಕತೆಗಳೂ ಶಿಲ್ಪಕಲೆಯ ವಸ್ತುಗಳಾಗಿವೆ. ಏಕಶಿಲಾ ಮಂದಿರ ಹಾಗೂ ರಾಚನಿಕ ಮಂದಿರಗಳಲ್ಲಿ ಕಂಡರಿಸಲಾದ ಶಿಲ್ಪ ಲಕ್ಷಣಗಳನ್ನು ಸ್ಥೂಲವಾಗಿ ಹೀಗೆ ಸಮೀಕ್ಷಿಸಬಹುದು.
೧. ಗುಹಾ ಮಂದಿರಗಳ ಬೃಹತ್ ಗಾತ್ರದ ಶಿಲ್ಪಗಳಲ್ಲಿ ಸಾಮಾನ್ಯವಾಗಿ ಸ್ಫುಟವಾದ ಕಣ್ಣಿನ ಹುಬ್ಬುಗಳು, ತೆರೆದ ಕಣ್ಣುಗಳು, ಎರಡು ಗೆರೆಗಳಿಂದ ನಿಚ್ಚಳವಾಗಿ ಮೀನಿನಾಕಾರದಲ್ಲಿ ರೇಖಿಸಿರುವ ಕಣ್ಣೆವೆಗಳು ಕಂಡುಬರುತ್ತವೆ. ಬಾದಾಮಿಯ ಎರಡನೆಯ ಗುಹೆಯ ಶಿಲ್ಪಗಳು ಸ್ವಲ್ಪ ಭಿನ್ನವಾಗಿ ಕಾಣುತ್ತವೆ. ಇಲ್ಲಿ ಹುಬ್ಬುಗಳು ಅಸ್ಪಷ್ಟವಾಗಿದ್ದು, ಕಣ್ಣುಗಳು ಮುಚ್ಚಿರುವಂತೆ ತೋರುತ್ತವೆ. ಈ ಗುಹೆಯ ಹತ್ತಿರ ಶಿಲ್ಪಗಳ ಹೆಸರುಗಳನ್ನು ೬ನೆಯ ಶತಮಾನದ ಕನ್ನಡ ಅಕ್ಷರಗಳಲ್ಲಿ ಬರೆಯಲಾಗಿದೆ. ಇನ್ನು ಕೆಲವು ಸಿದ್ಧಮಾತೃಕಾ ಲಿಪಿಯಲ್ಲಿವೆ. ಇದರಿಂದ ಕೆಲವರು ಮಹಾರಾಷ್ಟ್ರ ಪ್ರದೇಶದಿಂದ ಬಂದವರಾಗಿರಬೇಕು. ಅನೇಕ ಶಿಲ್ಪಿಗಳ ಹೆಸರುಗಳು ‘ಮಂಚಿ’ ಎಂಬ ಪದದಿಂದ ಕೊನೆಗೊಳ್ಳುತ್ತವೆ(ಉದಾ. ಕೋಳಿಮಂಚಿ, ಸಿಂಗಮಂಚಿ ಇತ್ಯಾದಿ). ಇದು ಈಗಲೂ ಆಂಧ್ರದಲ್ಲಿ ಪ್ರಚಲಿತವಿರುವ ಪದ. ಆದ್ದರಿಂದ ಆಂಧ್ರಪ್ರದೇಶದಿಂದಲೂ ರೂವಾರಿಗಳು ವಲಸೆ ಬಂದಿರಬಹುದು. ಹೀಗಾಗಿ ಚಾಲುಕ್ಯ ಶಿಲ್ಪಗಳಲ್ಲಿ ಏಕಸ್ವಾಮ್ಯವಿರದೆ, ಸಂಕೀರ್ಣತೆ, ವೈವಿಧ್ಯಗಳು ಎರಕಗೊಂಡಿವೆ.
೨. ಬೃಹದಾಕಾರದ ಶಿಲ್ಪಗಳಲ್ಲಿ ರೂಪಸೌಂದರ್ಯದ ಜೊತೆಗೆ ತತ್ವಸೌಂದರ್ಯವು ಅಡಕವಾಗಿದೆ. ನಟರಾಜನ ವಿಗ್ರಹವು ತಿರೋಭಾವ, ಸೃಷ್ಟಿ, ಸ್ಥಿತಿ, ಲಯ ಮತ್ತು ಅನುಗ್ರಹ ಎಂಬ ಶಿವನ ಪಂಚಕೃತ್ಯಗಳನ್ನು ಸಂಕೇತಿಸುತ್ತದೆ. ಅರ್ಧನಾರೀಶ್ವರ ಶಿಲ್ಪವು ಶಿವ, ಶಕ್ತಿಯರು ಅಭಿನ್ನರು ಎಂದು ತಿಳಿಸುವಂತೆ ಸ್ತ್ರೀಪುರುಷರು ಸಮಾನರು ಎಂದು ಸೂಚಿಸುತ್ತದೆ. ಇಡಿ ಭೂಮಿತಾಯಿಯನ್ನೇ ಆಟಿಕೆಯಂತೆ ಹಿಡಿದಿರುವ ವರಾಹನು ಅದೆಷ್ಟು ಶಕ್ತಿಶಾಲಿ! ಒಂದು ಪಾದದಿಂದ ಆಕಾಶವನ್ನು ಆವರಿಸಿದ ತ್ರಿವಿಕ್ರಮ ಸರ್ವವ್ಯಾಪಿ ಅಲ್ಲದೆ ಈ ಬೃಹತ್‌ಶಿಲ್ಪಗಳು ದೈವೀಶಕ್ತಿಯ ಅರಿವನ್ನುಂಟುಮಾಡುತ್ತವೆ.
೩. ಮಧ್ಯಮ ಗಾತ್ರದ ಶಿಲ್ಪಗಳು ಇನ್ನೊಂದು ಬಗೆಯದ್ದಾಗಿವೆ. ಈ ಶಿಲ್ಪಗಳಲ್ಲಿ ರಸಿಕ ದಂಪತಿಗಳು, ಸಾಲಭಂಜಿಕೆ, ಗಂಧರ್ವ ದಂಪತಿಗಳು ಮೂಡಿಬಂದಿದ್ದಾರೆ. ಇವರು ಲೌಕಿಕ ಜೀವನದ ಅನುಭವಗಳನ್ನು ಪ್ರತಿನಿಧಿಸುವಂತಿದ್ದಾರೆ. ಈ ಶಿಲ್ಪಗಳಲ್ಲಿ ಭಾವಸೌಂದರ್ಯ ಹೆಪ್ಪುಗಟ್ಟಿದೆ. ಬಾದಾಮಿಯ ಮಹಾವಿಷ್ಣುಗೃಹದ ಸಾಲಭಂಜಿಕೆಯನ್ನು ಉದಾಹರಿಸಬಹುದು. ಈ ಶಿಲ್ಪದಲ್ಲಿ ಚೆಲುವೆಯೊಬ್ಬಳು ಮರದ ಅಡಿಯಲ್ಲಿ ಮಂದಹಾಸದೊಂದಿಗೆ ನಿಂತಿರುವ ದೃಶ್ಯವಿದೆ. ಆ ಹಣ್ಣುಗಳು ಅದು ಮಾವಿನ ಮರ ಎಂಬುದನ್ನೂ, ವಸಂತ ಕಾಲ ಎಂಬುದನ್ನೂ ಸೂಚಿಸುತ್ತವೆ. ಆ ಹಣ್ಣುಗಳಿಗಾಗಿ ಎರಡು ಮಂಗಗಳು ಹಾತೊರೆಯುವುದನ್ನು ಶಿಲ್ಪಿ ಚಿತ್ರಿಸಿದ್ದಾನೆ. ಚೆಲುವೆಯೊಬ್ಬಳು ಹೀಗೆ ವಯ್ಯರದಿಂದ ತರುಣನ ಎದುರು ನಿಂತರೆ ಆತನ ಪಾಡು ಆ ಮಂಗಗಳ ಪಾಡು! ಹೀಗೆ ರೂವಾರಿಯು ಬಂಡೆಯಲ್ಲಿ ಭಾವವನ್ನು ತುಂಬಿದ್ದಾನೆ. ಈ ಶಿಲ್ಪಗಳು ಕರ್ನಾಟಕದ ಪ್ರಪ್ರಥಮ ಮದನಿಕಾಶಿಲ್ಪಗಳು.
೪. ವೈವಿಧ್ಯ ಚಾಲುಕ್ಯ ಶಿಲ್ಪಗಳಲ್ಲಿ ಕಂಡುಬರುವ ಇನ್ನೊಂದು ವೈಶಿಷ್ಟ್ಯವಾಗಿದೆ. ಒಂದೇ ಸನ್ನಿವೇಶವನ್ನು ವಿವಿಧ ರೀತಿಯಲ್ಲಿ ಕೆತ್ತನೆ ಮಾಡಲಾಗಿದೆ. ಬಾದಾಮಿಯ ಶಿವಗುಹೆಯ ಮಹಿಷಾಸುರ ಮರ್ದಿನಿ ಶಿಲ್ಪಕ್ಕಿಂತ ರಾವಣಫಡಿಯ (ಐಹೊಳೆ) ಮಹಿಷಾಸುರ ಮರ್ದಿನಿ ಮೂರ್ತಿಯು ವಿಭಿನ್ನವಾಗಿದೆ. ಹಾಗೆಯೆ ರಾಚನಿಕ ಮಂದಿರಗಳಲ್ಲಿ ಕೂಡ. ದುರ್ಗಗುಡಿಯ ಕೋಷ್ಟದಲ್ಲಿರುವ ದೇವಿ, ಪಟ್ಟದಕಲ್ಲಿನ ವಿರೂಪಾಕ್ಷಗುಡಿಯ ಉಪಗರ್ಭ ಗೃಹದ ದುರ್ಗಾಶಿಲ್ಪಗಳಲ್ಲಿ ಮೂಡಿಬಂದ ಅಭಿವ್ಯಕ್ತಿ ವ್ಯತ್ಯಾಸವು ಶಿಲ್ಪ ಬೆಳವಣಿಗೆಯನ್ನು ಗುರುತಿಸಲು ಸಹಾಯಕವಾಗಿದೆ. ಉದಾಹರಣೆಗೆ ಪ್ರಾರಂಭದ ಕಾಲದ ದುರ್ಗಾಮೂರ್ತಿಗಳಲ್ಲಿ ಅಸುರನು ಕೋಣದ ಮುಖದೊಂದಿಗೆ ಚಿತ್ರಿತನಾಗಿದ್ದರೆ ಅಂತಿಮ ಹಂತದ ಚಾಲುಕ್ಯ ಶಿಲ್ಪಗಳಲ್ಲಿ ಅಸುರನು ಕೋಡುಗಳಿರುವ ಮಾನವ ರೂಪದಲ್ಲಿದ್ದಾನೆ.
೫. ಕಥಾನಕ ಶಿಲ್ಪಗಳು ಕತೆ ಹೇಳುವ ಶಿಲ್ಪಗಳು. ದೇವಾಲಯಗಳು ಕೇವಲ ಧಾರ್ಮಿಕ ಆಚರಣೆಗಳ ಕೇಂದ್ರವಾಗಿರದೆ ಜನಸಾಮಾನ್ಯರಿಗೆ ಕಾವ್ಯ ಹಾಗೂ ಪುರಾಣದ ಕತೆಗಳನ್ನು ಶಿಲ್ಪಗಳ ಮೂಲಕ ನೆನಪಿಸುತ್ತ ನೀತಿಶಿಕ್ಷಣ ನೀಡುವ ಕೆಲಸವನ್ನು ಮಾಡಿವೆ. ಓದುಬರಹ ಬಾರದ ಸಾಮಾನ್ಯರು ಪುರಾಣ, ಪ್ರವಚನಗಳಲ್ಲಿ ಕೇಳಿ ತಿಳಿದ ಕತೆಗಳನ್ನು ಸ್ಮರಿಸಿಕೊಳ್ಳಲು ಈ ಶಿಲ್ಪಗಳು ನೆರವಾಗುತ್ತವೆ.
ಭಾರತದಲ್ಲಿ ಮೊದಲಬಾರಿಗೆ ಕಥಾನಕ ಶಿಲ್ಪಗಳನ್ನು ನಿರ್ಮಿಸಿದ ಖ್ಯಾತಿ ಬೌದ್ಧರಿಗೆ ಸಲ್ಲುತ್ತದೆ. ಕಲ್ಲುಗಳಲ್ಲಿ ರಾಮಾಯಣ, ಮಹಾಭಾರತ ಹಾಗೂ ಹಿಂದೂ ಪುರಾಣ ಕತೆಗಳನ್ನು ಕಂಡರಿಸಿದವರಲ್ಲಿ ಚಾಲುಕ್ಯ ಶಿಲ್ಪಿಗಳೇ ಮೊದಲಿಗರು. ಗುಹೆಗಳಲ್ಲಿ ಮತ್ತು ರಾಚನಿಕ ಮಂದಿರಗಳಾದ ಮೇಲಿನ ಶಿವಾಲಯ, ಮಹಾಕೂಟೇಶ್ವರ, ಪಾಪನಾಥ ಗುಡಿಗಳ ಕಂಬ, ಗೋಡೆಗಳ ಮೇಲೆ ಇವನ್ನು ಕೆತ್ತಲಾಗಿದೆ. ಪಂಚತಂತ್ರದ ನೀತಿಕತೆಗಳನ್ನು ಹೇಳುವ ಪಟ್ಟದಕಲ್ಲು, ಆಲಂಪುರದ ಶಿಲ್ಪಗಳು ಲೌಕಿಕ ಶಿಲ್ಪಗಳು.
೬. ಅಜಂತಾ ವರ್ಣಚಿತ್ರಗಳಲ್ಲಿ ಬುದ್ಧನು ಬೃಹದಾಕಾರದಲ್ಲಿ ವರ್ಣಿತನಾಗಿದ್ದರೆ ಆತನ ಶಿಷ್ಯರು ಗಾತ್ರದಲ್ಲಿ ತೀರ ಚಿಕ್ಕವರಾಗಿ ಚಿತ್ರಿತರಾಗಿದ್ದಾರೆ. ಇದು ದೇಹದ ವಾಸ್ತವಿಕ ಪ್ರಮಾಣ(Proportion) ವಲ್ಲ, ಬುದ್ಧನ ಆಂತರಿಕ ವ್ಯಕ್ತಿತ್ವದ ಎತ್ತರ. ಈ ಬಗೆಯ ‘ಪ್ರಾಧಾನ್ಯ’ವನ್ನು ಚಾಲುಕ್ಯ ಶಿಲ್ಪಗಳಲ್ಲಿ ಕಾಣುತ್ತೇವೆ. ಅರಸು ದಂಪತಿಗಳು ಇಲ್ಲವೆ ಸಾಲಭಂಜಿಕಾ ಶಿಲ್ಪಗಳಲ್ಲಿ ಸೇವಕರು ಹೀಗೆ ಕುಬ್ಜರಾಗಿ ಶಿಲ್ಪಿತರಾಗಿದ್ದಾರೆ.
೭. ಪುಟ್ಟಗಣಗಳ ಶಿಲ್ಪಪಟ್ಟಿಕೆಗಳು ಚಾಲುಕ್ಯ ಶಿಲ್ಪಕಲೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಇವು ಅಲೌಕಿಕ ಶಿಲ್ಪಗಳು. ಗುಹಾಲಯಗಳಲ್ಲಿ ಭವ್ಯಗಾತ್ರದ ಧಾರ್ಮಿಕ ದೇವಶಿಲ್ಪಗಳ ಕೆಳಭಾಗದಲ್ಲಿ, ಇಲ್ಲವೆ ರಾಚನಿಕ ದೇಗುಲದ ಅಧಿಷ್ಠಾನದ ಗಳ ಭಾಗದಲ್ಲಿ ಇವನ್ನು ಕೆತ್ತಲಾಗಿದೆ. ಸೈನಿಕರು, ಕುಸ್ತಿಪಟುಗಳು, ಸೇವಕರು, ಸಂಗೀತಗಾರರು, ಹಾವಾಡಿಗರು, ಗುರು ಶಿಷ್ಯರು ಮತ್ತು ಅವರ ಜೀವನದ ನಿತ್ಯ ಸನ್ನಿವೇಶಗಳು ಈ ಶಿಲ್ಪಗಳಿಗೆ ವಸ್ತುಗಳಾಗಿವೆ.
೮. ಸಂಯುಕ್ತ ಪ್ರತಿಮೆಗಳನ್ನು ಕಂಡರಿಸುವಲ್ಲಿ ಚಾಲುಕ್ಯ ರೂವಾರಿಗಳು ಒಲವು ತೋರಿದ್ದಾರೆ. ಅರ್ಧನಾರೀಶ್ವರ, ಹರಿಹರ ಭವ್ಯ ಶಿಲ್ಪಗಳಲ್ಲಿ ಎರಡು ಒಂದಾಗಿರುವಂತೆ ತೋರಿಸಿದ್ದಾರೆ. ಆನೆ, ನಂದಿಗಳ ಮುಖಗಳು ಒಂದೇ ಸಾಮಾನ್ಯಕೃತಿಯಲ್ಲಿವೆ. ಹೀಗೆಯೆ ಎರಡು ಮುಖಗಳೊಂದಿಗೆ ನಾಲ್ವರ ಚಿತ್ರಣ, ನಾಲ್ಕು ಕಾಲುಗಳೊಂದಿಗೆ ಮೂವರ ಶಿಲ್ಪಗಳನ್ನು ರೂಪಿಸುವಲ್ಲಿ ಕಲಾವಿದರ ನೈಪುಣ್ಯ ಹಾಗೂ ಮನೋವಿಲಾಸ ವ್ಯಕ್ತವಾಗಿವೆ. ಈ ಬಗೆಯ ಶಿಲ್ಪಗಳು ಚಾಲುಕ್ಯ ಕಲಾವಿದರ ಆವಿಷ್ಕಾರವೆನಿಸಿವೆ.
೯. ಪ್ರತಿಯೊಬ್ಬ ಕಲಾಕಾರನು ತನ್ನ ಎಡಬಲದ ಪರಿಸರದಿಂದ ಪ್ರಭಾವಿತನಾಗಿರುತ್ತಾನೆ. ಸಮಕಾಲೀನ ಜನಜೀವನವು ಆತನ ಕಲಾಕೃತಿಗಳಲ್ಲಿ ಪ್ರತಿಫಲನಗೊಳ್ಳುತ್ತದೆ. ಹೀಗಾಗಿ ಚಾಲುಕ್ಯರ ಶಿಲ್ಪಗಳಲ್ಲಿ ಅಂದಿನ ಉಡಿಗೆ ತೊಡಿಗೆ, ಕೇಶಾಲಂಕಾರ ವಿಧಗಳು, ಆಭರಣಗಳು, ಬಳಕೆ ವಸ್ತುಗಳು, ಶಯನ ಪೀಠೋಪಕರಣಗಳು, ಆಯುಧಗಳು, ಸಂಗೀತವಾದ್ಯಗಳು ಮತ್ತು ನಿತ್ಯ ಜೀವನದ ಸುಖದುಃಖದ ಸನ್ನಿವೇಶಗಳು ಚಿತ್ರಿತವಾಗಿದ್ದು ಚಾಲುಕ್ಯರ ಕಾಲದ ಸಂಸ್ಕೃತಿಯನ್ನು ಪರಿಚಯಿಸುತ್ತವೆ.
ಬಗೆಬಗೆಯ ಹೂಬಳ್ಳಿಗಳು, ಜಲಚರ ಭೂಚರ ಪ್ರಾಣಿಗಳು, ಪಕ್ಷಿಸಂಕುಲಗಳು ಕಂಬಗಳನ್ನು, ಬಾಗಿಲುವಾಡಗಳನ್ನು, ಛತ್ತನ್ನು ಅಲಂಕರಿಸಿವೆ. ಇಷ್ಟು ಮಾತ್ರವಲ್ಲದೆ ವರ್ತುಲಗಳು, ಅರ್ಧ ವರ್ತುಲಗಳು, ತ್ರಿಕೋನಗಳು ಚೌಕೋನ ಮೊದಲಾದ ಜ್ಯಾಮಿತಿ ನಕ್ಷೆಗಳು, ಅಸಂಖ್ಯ ಪುಷ್ಪ ನಕ್ಷೆಗಳು ಈ ರೂವಾರಿಗಳ ಅಗಾಧ ಕಲ್ಪನಾ ಶಕ್ತಿಯನ್ನು ಪರಿಚಯಿಸುತ್ತವೆ.
ಸ್ಥಪತಿಗಳು, ರೂವಾರಿಗಳು
ಶಾಸನೋಕ್ತ ಚಾಲುಕ್ಯ ಸ್ಥಪತಿಗಳಲ್ಲಿ ಆರ್ಯಮಂಚಿ ಉಪಾಧ್ಯಾಯನು ಮೊದಲಿಗ. ಈತ ಬಾದಾಮಿಯ ಬಂಡೆಯೊಂದರ ಮೇಲೆ ಮತ್ತೊಂದು ಬಂಡೆಯಂತೆ ಕಾಣುವ ಮಾಲೆಗಿತ್ತಿ ಶಿವಾಲಯವನ್ನು ನಿಲ್ಲಿಸಿದ್ದಾನೆ. ನರಸೊಬ್ಬನು ಐಹೊಳೆಯ ಪ್ರಸಿದ್ಧ ಸೂತ್ರಧಾರಿ. ಈತನು ಶಿಲ್ಪಿಯೂ ಆಗಿದ್ದನು. ಹುಚ್ಚಪ್ಪಯ್ಯನ ಗುಡಿ ಈತನ ರಚನೆ. ಅಲ್ಲಿಯ ಶಾಸನವೊಂದು ನರಸೊಬ್ಬನಂತಹ ಸೂತ್ರಧಾರಿ ಹಿಂದೆ ಇರಲಿಲ್ಲ, ಮುಂದೆಯೂ ಇರಲಾರ ಎಂಬ ಹೊಗಳಿಕೆಯ ಮಾತನ್ನು ಹೇಳಿದೆ. ಆದರೆ ನಂತರ ಬಂದ ಸರ್ವಸಿದ್ದಿ ಆಚಾರಿ, ಗುಂಡ ಅನಿವಾರಿತಾಚಾರಿ ಮತ್ತು ರೇವಡಿ ಓವಜ್ಜ ಎಂಬುವರು ಪಟ್ಟದಕಲ್ಲಿನಲ್ಲಿ ಅತ್ಯದ್ಭುತ ರಾಚನಿಕ ಮಂದಿರಗಳನ್ನು ಸೃಷ್ಟಿಸಿದರು. ಅರಸರು ಇವರಿಗೆ ಬಿರುದು ನೀಡಿ ಗೌರವಿಸಿದರು.
ನೂರಾರು ಶಿಲ್ಪಿಗಳು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟಗಳಲ್ಲಿ ಸಾವಿರಾರು ಶಿಲ್ಪಗಳನ್ನು ರಚಿಸಿದ್ದಾರೆ. ನೆಲವರ್ಕಿ, ಪಾಕ, ಬಲದೇವ, ಆದಿತ್ಯ, ಚೆಂಗಮ್ಮ, ಪುಲ್ಲಪ್ಪ ಮೊದಲಾದವರು ಪ್ರಖ್ಯಾತ ಶಾಸನೋಕ್ತ ಶಿಲ್ಪಿಗಳು.
ಬಾದಾಮಿಯ ಸ್ಮಾರಕಗಳು
ಕ್ರಿ.ಶ. ೫೪೩ರಲ್ಲಿ ಒಂದನೆಯ ಪುಲಿಕೇಶಿಯು ಅಭೇದ್ಯವಾದ ಕೋಟೆಯನ್ನು ನಿರ್ಮಿಸುವುದರ ಮೂಲಕ ಬಾದಾಮಿಯಲ್ಲಿ ವಾಸ್ತುಚಟುವಟಿಕೆಗಳು ತೀವ್ರಗೊಂಡವು. ಗುಹಾ ದೇವಾಲಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಚಾಲುಕ್ಯರು ಪೌರಾಣಿಕ ಮತ್ತು ಧಾರ್ಮಿಕ ತತ್ವಗಳ ಪ್ರಚಾರಕ್ಕೆ ಮುಂದಾದರು. ಹೀಗೆ ಅವರು ವೈದಿಕ ಮತ್ತು ಭಾಗವತ ಸಂಸ್ಕೃತಿಯನ್ನು ಪ್ರಸಾರ ಮಾಡಿದರೂ ಅಂಧಾಭಿಮಾನಿಗಳಾಗಿರಲಿಲ್ಲ. ಉಳಿದ ಮತೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ವಿದ್ದಿತು. ಧರ್ಮ ಸಹಿಷ್ಣುತೆಯನ್ನು ತೋರಿದ ಹೃದಯ ವೈಶಾಲ್ಯ ಚಾಲುಕ್ಯರದು.
ಇವರ ವಾಸ್ತು ನಿರ್ಮಿತಿಗಳನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಮೊದಲ ಹಂತದ ನಿರ್ಮಾಣಗಳು ಕ್ರಿ.ಶ. ೫೪೦ರ ಅವಧಿಯಿಂದ ಪ್ರಾರಂಭವಾಗಿ ಇಮ್ಮಡಿ ಪುಲಕೇಶಿಯ ಅಂತ್ಯದವರೆಗೆ ರೂಪಗೊಂಡವು. ಈ ಹಂತದ ಪ್ರಧಾನ ವಾಸ್ತು ರಚನೆಗಳೆಂದರೆ ಗುಹಾ ದೇವಾಲಯಗಳು. ಇವುಗಳ ಜೊತೆಗೆ ಕೆಲವು ರಾಚನಿಕ ಮಂದಿರಗಳೂ ವಾತಾಪಿ(ಬಾದಾಮಿ)ಯ ಚೆಲುವನ್ನು ಹೆಚ್ಚಿಸಿದವು. ಎರಡನೆಯ ಹಂತದಲ್ಲಿ (ಕ್ರಿ.ಶ. ೬೫೫ರಿಂದ ೭೫೭) ವಾಸ್ತು ಚಟುವಟಿಕೆಗಳು ಮುಖ್ಯವಾಗಿ ಮಂದಿರ ನಿರ್ಮಾಣಕ್ಕೆ ಸೀಮಿತವಾದವು. ಬೃಹತ್ ಪ್ರಮಾಣದಲ್ಲಿ ಗುಡಿಕಟ್ಟುವ ಕಾರ್ಯವು ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಆಲಂಪುರಗಳಲ್ಲಿ ನಡೆಯಿತು. ಪಟ್ಟದಕಲ್ಲಿನ ದೇವಾಲಯಗಳು ವಿಶ್ವಪರಂಪರೆಯ ಸ್ಮಾರಕಗಳೆನಿಸಿವೆ.
ಅ. ಗುಹಾದೇವಾಲಯಗಳು
ಬಾದಾಮಿಯ ಗುಹಾದೇವಾಲಯಗಳನ್ನು ಸ್ಥಳೀಯರು ಮೇಣಬಸದಿಗಳೆನ್ನುತ್ತಾರೆ. ಇವು ನೆಲದ ಮಟ್ಟಕ್ಕಿಂತ ಹೆಚ್ಚು ಎತ್ತರದಲ್ಲಿರುವುದರಿಂದ ಮೇಲಿನ (ಮೇಗಣ) ಬಸದಿಗಳೆನಿಸಿರಬೇಕು. ಮೇಗಣ ಬಸದಿಗಳು ಮೇಣಬಸದಿಗಳಾಗಿವೆ. ಬಾದಾಮಿಯ ದಕ್ಷಿಣಭಾಗದಲ್ಲಿರುವ ಬೆಟ್ಟವನ್ನು ರಣಮಂಡಲ ಎನ್ನಲಾಗುತ್ತದೆ. ಈ ಕಲ್ಬೆಟ್ಟದಲ್ಲಿ ನಾಲ್ಕು ಗುಹಾದೇವಾಲಯ (ಮೇಣಬಸದಿ)ಗಳನ್ನು ಕೊರೆದು ಮಾಡಲಾಗಿದೆ. ಇವುಗಳಲ್ಲಿ ಒಂದನೆಯದು ಶೈವ, ಮುಂದಿನವೆರಡು ವೈಷ್ಣವ, ಕೊನೆಯದು ಜಿನಾಲಯ. ಪ್ರಾಯಶಃ ಕಾಲಾನುಕ್ರಮದಲ್ಲಿ ಶೈವಗುಹೆ ಅತಿ ಪ್ರಾಚೀನವಾದುದು. ಜಿನಾಲಯ ಕೊನೆಯ ರಚನೆ.
ಶೈವಗುಹೆ
ಮೊದಲನೆಯ ಗುಹಾಲಯದಲ್ಲಿ ಮೊಗಸಾಲೆ, ಸಭಾಮಂಟಪ ಹಾಗೂ ಗರ್ಭಗೃಹಗಳ ಜೊತೆಗೆ ಪಶ್ಚಿಮ ಗೋಡೆಯಲ್ಲಿ ಚಿಕ್ಕದಾದ ಗುಹೆಯನ್ನು ಕೊರೆಯಲಾಗಿದೆ. ಈ ಉಪಗುಹೆಗೆ ಹೊಂದಿಕೊಂಡ ಗೋಡೆಯ ಮೇಲೆ ನಟರಾಜ(ಮಹಾನಟ)ನ ಅಪೂರ್ವ ಶಿಲ್ಪವಿದೆ. ಸಂದರ್ಶಕರನ್ನು ದೂರದಿಂದಲೇ ತನ್ನತ್ತ ಸೆಳೆಯುವ ಚೆಲುವು ಇದರದ್ದು. ಸಹಜ ಮಾನವಾ ಕೃತಿಯ ಈ ನಟರಾಜನು ೧೮ ಕೈಗಳಿಂದ ಶೋಭಿತನಾಗಿದ್ದು ಅವು ವಿಭಿನ್ನ ಚಲನೆ (ಕರಣ)ಗಳನ್ನು ಸೂಚಿಸುತ್ತವೆ. ಸರ್ಪ, ಪಾಶ, ವೀಣೆ, ತ್ರಿಶೂಲ ಮೊದಲಾದವುಗಳನ್ನು ಹಿಡಿದುಕೊಂಡು ಶಿವನು ನಾಟ್ಯ ನಿರತನಾಗಿದ್ದಾನೆ.
ತಾತ್ವಿಕವಾಗಿ ನಟರಾಜನ ನೃತ್ಯವು ಆತನ ಐದು ಕೃತ್ಯಗಳನ್ನು ಸಂಕೇತಿಸುತ್ತದೆ. ಸೃಷ್ಟಿ (ಹುಟ್ಟು, ಬೆಳವಣಿಗೆ), ಸ್ಥಿತಿ(ರಕ್ಷಣೆ), ಸಂಹಾರ(ಲಯ), ತಿರೋಭಾವ (ವಿಶ್ರಾಂತಿ) ಮತ್ತು ಅನುಗ್ರಹ (ಮುಕ್ತಿ) ಇವೇ ಶಿವನ ಪಂಚಕೃತ್ಯಗಳು. ಇವು ಪ್ರತ್ಯೇಕವಾಗಿ, ಕ್ರಮವಾಗಿ ಬ್ರಹ್ಮ, ವಿಷ್ಣು, ರುದ್ರ, ಮಹೇಶ್ವರ ಮತ್ತು ಸದಾಶಿವರ ಕ್ರಿಯೆಗಳೆಂದು ಹೇಳಲಾಗುತ್ತದೆ.
ಮೊದಲನೆಯ ಗುಹಾಲಯದ ಮುಖಮಂಟಪದಲ್ಲಿಯ ಎರಡು ಪ್ರಧಾನ ಶಿಲ್ಪಗಳೆಂದರೆ ಹರಿಹರ ಮತ್ತು ಅರ್ಧನಾರೀಶ್ವರ.
ಹರಿಹರ ವಿಗ್ರಹವು ಪೂರ್ವದ ಗೋಡೆಯನ್ನೆಲ್ಲ ಆವರಿಸಿದೆ. ಹರಿಹರನ ಬಲ ಅರ್ಧಭಾಗವು ಶಿವನದಾದರೆ, ಎಡ ಅರ್ಧವು ವಿಷ್ಣುವಿನದು. ಶಿವನ ಹತ್ತಿರ ಪಾರ್ವತಿ, ವಿಷ್ಣುವಿನ ಹತ್ತಿರ ಲಕ್ಷ್ಮಿ ವಸ್ತ್ರಾಭರಣಗಳಿಂದ ಅಲಂಕೃತರಾಗಿ ನಿಂತಿದ್ದಾರೆ. ಈ ಎರಡೂ ಶಿಲ್ಪಗಳಲ್ಲಿಯ ನಿಲುವು, ಮೈಮಣಿತಗಳಲ್ಲಿ ಸಾಮ್ಯಗಳಿರುವುದೊಂದು ವಿಶೇಷ ಸಂಗತಿ. ಶಿವ ಹಾಗೂ ವಿಷ್ಣು ಅಭಿನ್ನರು. ಅವರಲ್ಲಿ ಭೇದವಿಲ್ಲವೆಂದು ಸಾರುವ ಉದ್ದೇಶ ಈ ಸಂಯುಕ್ತ ಪ್ರತಿಮೆಯ ತಾತ್ವಿಕ ಹಿನ್ನೆಲೆ. ಈ ಬೃಹತ್ ಶಿಲ್ಪವು ಗಣಗಳಿರುವ ಪಟ್ಟಿಕೆಯ ಮೇಲೆ ನಿಂತಿರುವಂತೆ ರಚಿಸಲಾಗಿದೆ. ಗಣ ಸಮೂಹದಲ್ಲಿ ಸಂಗೀತಕಾರರು, ನರ್ತಕರು ಒಡಮೂಡಿದ್ದಾರೆ.
ಅರ್ಧನಾರೀಶ್ವರ ಶಿಲ್ಪವು ಈ ಗುಹಾಲಯದ ಇನ್ನೊಂದು ಉತ್ಕೃಷ್ಟ ಕಲಾಕೃತಿ. ಇದೂ ಕೂಡ ಒಂದು ಸಂಯುಕ್ತ ಪ್ರತಿಮೆ. ಬಲ ಅರ್ಧಭಾಗ ಶಿವನದಾದರೆ ಎಡ ಅರ್ಧ ಪಾರ್ವತಿಯದು. ವಾಹನ ನಂದಿ, ಭಕ್ತ ಭೃಂಗಿ, ಸೇವಕಿ ಜೊತೆಗಿದ್ದಾರೆ. ವಿಶಿಷ್ಟ ಕೇಶಾಲಂಕಾರ, ಆಭರಣಗಳಿಂದ ಪಾರ್ವತಿ ಹಾಗೂ ಸೇವಕಿಯರ ಶಿಲ್ಪಗಳು ಚಿತ್ತಾಕರ್ಷಕವಾಗಿವೆ. ಪ್ರಮಾಣ ಹಾಗೂ ಸಂಯೋಜನೆಯ ದೃಷ್ಟಿಯಿಂದ ಕಲಾತ್ಮಕ ಶಿಲ್ಪವಿದು. ತಾತ್ವಿಕವಾಗಿ ಶಿವ ಮತ್ತು ಶಕ್ತಿ ಇವರೀರ್ವರ ಏಕತೆಯನ್ನು ಇದು ಸಮರ್ಥಿಸುತ್ತದೆ. ಶಿವಪಾರ್ವತಿಯರು ಕೂಡಿಯೇ ವೀಣೆಯನ್ನು ನುಡಿಸುತ್ತಿರುವಂತೆ ಈ ವಿಗ್ರಹವನ್ನು ಕಂಡರಿಸಲಾಗಿದೆ. ವೀಣೆಯನ್ನು ನುಡಿಸುವ ಒಂದು ಕೈ ಶಿವನದಾದರೆ ಇನ್ನೊಂದು ಪಾರ್ವತಿಯದು. ಗಂಡು, ಹೆಣ್ಣಿನ ಬಾಳಸ್ವರಗಳು ಪೂರಕವಾಗಿದ್ದರೆ ಮಾತ್ರ ಬಾಳಸಂಗೀತ ಸುಮಧುರವಾಗಿರುತ್ತದೆ ಎಂದು ಸೂಚಿಸುವಂತಿದೆ.
ಶೈವಗುಹೆಯ ಪಶ್ಚಿಮಕ್ಕಿರುವ ಉಪಗುಹೆ ಮಹಿಷಮರ್ದಿನಿಯದು. ಮಹಿಷನು ಕೋಣನ ರೂಪದಲ್ಲಿರುವ ರಾಕ್ಷಸ. ಇವನು ಅಹಂಕಾರಿ. ಈತನ ಅಹಂಕಾರವನ್ನು ನಾಶ ಮಾಡಿದುದನ್ನು ಈ ಶಿಲ್ಪವು ಚಿತ್ರಿಸುತ್ತದೆ. ಚತುರ್ಭುಜೆಯಾಗಿರುವ ದೇವಿಯು ಕೇವಲ ಎರಡು ಕೈಗಳನ್ನು ಮಾತ್ರ ಪ್ರಯೋಗಿಸಿ ಅನಾಯಾಸವಾಗಿ, ನಗುಮೊಗದಿಂದ, ನಾಟ್ಯ ಭಂಗಿಯಲ್ಲಿರುವಂತೆ ಲೀಲಾ ಜಾಲವಾಗಿ ಮಹಿಷನ ವಧೆ ಮಾಡುತ್ತಿದ್ದಾಳೆ. ಅವಳ ಶಕ್ತಿ ಅಪಾರವಾದುದನ್ನು ಈ ಶಿಲ್ಪವು ತಿಳಿಸುತ್ತದೆ.
ಈ ಉಪಗುಹೆಯ ಉತ್ತರಗೋಡೆಯಲ್ಲಿ ಗಣಪತಿಯ ಮೂರ್ತಿ ಇದೆ. ಈತನು ವಿದ್ಯಾದೇವತೆ. ಆತನ ತಲೆಯ ಮೇಲೆ ಕಮಲದ ಕೆತ್ತನೆ ಇದೆ. ಇದು ಸಹಸ್ರಾರು ಕಮಲ (ಯೋಗ ಚಕ್ರ)ದ ಸಂಕೇತ. ದಕ್ಷಿಣಗೋಡೆಯಲ್ಲಿ ನವಿಲಿನ ಮೇಲೆ ಕುಳಿತು ಹೊರಟಿರುವ ಕಾರ್ತಿಕೇಯನನ್ನು ಕಂಡರಿಸಲಾಗಿದೆ. ಒಟ್ಟಾರೆ ಈ ಉಪಗುಹೆಯಲ್ಲಿ ಶಿವನ ಪರಿವಾರವಿದೆ.
ಶೈವಗುಹೆಯ ಮೊಗಸಾಲೆಯ ಛತ್ತಿನಲ್ಲಿರುವ ಐದು ಹೆಡೆಗಳಿರುವ ನಾಗರಾಜ, ವಿದ್ಯಾಧರ ದಂಪತಿಗಳು, ದ್ವಾರಪಾಲಕರ ಕೆಳಗೆ ಇರುವ ಗಜವೃಷಭ ಶಿಲ್ಪಗಳು ಸಹೃದಯನಿಗೆ ಮುದ ನೀಡುವ ಮೂರ್ತಿಗಳಾಗಿವೆ.
ವೈಷ್ಣವ ಗುಹೆ
ಶೈವಗುಹೆಯ ಪೂರ್ವದ ಕಡೆಗೆ ಇರುವ ಮೆಟ್ಟಿಲುಗಳನ್ನು ಹತ್ತಿ ಸಾಗಿದರೆ ಎರಡನೆಯ ಗುಹೆ ಕಣ್ಣಿಗೆ ಬೀಳುತ್ತದೆ. ಇದು ವೈಷ್ಣವ ಗುಹೆ. ಗಾತ್ರ, ಆಕಾರದಲ್ಲಿ ಶೈವ ಗುಹೆಗಿಂತ ಚಿಕ್ಕದು. ಗುಹೆಯ ಅಧಿಷ್ಠಾನದ ಗಣಶಿಲ್ಪಗಳು ಹೆಚ್ಚು ನಿಚ್ಚಳವಾಗಿ ಉಳಿದುಕೊಂಡಿವೆ. ಸವಕಳಿಗೆ ಸಿಲುಕಿಲ್ಲ. ಆದ್ದರಿಂದ ಗುಹೆಯ ಅಂದ ಹೆಚ್ಚಿದೆ.
ವಾಡಿಕೆಯಂತೆ ಮೊಗಸಾಲೆಯ ಗೋಡೆಗಳಲ್ಲಿ ಬೃಹದಾಕಾರದ ಶಿಲ್ಪಗಳನ್ನು ಕೆತ್ತಲಾಗಿದೆ. ಪೂರ್ವದ ಗೋಡೆಯಲ್ಲಿ ಭೂವರಾಹನ ಭವ್ಯ ಮೂರ್ತಿ ಇದೆ. ಇದರ ಕೆಳಭಾಗದಲ್ಲಿ ಗಣಗಳ ಪಟ್ಟಿಕೆ ಕೆತ್ತನೆಗೊಂಡಿದೆ. ಚಾಲುಕ್ಯಶಿಲ್ಪ ಸಂಪ್ರದಾಯದ ಸಾಮಾನ್ಯ ಅಂಶವಿದು. ಚಾಲುಕ್ಯ ಅರಸರು ವರಾಹ ರೂಪವನ್ನು ತಮ್ಮ ರಾಜಲಾಂಛನವನ್ನಾಗಿ ಸ್ವೀಕರಿಸಿದರು. ವರಾಹನಂತೆ ತಾವೂ ಭೂರಕ್ಷಕರು ಎಂಬ ನಿಲುವನ್ನು ಅವರು ತಳೆದಿದ್ದರು. ಚಿನ್ನದ ನಾಣ್ಯಗಳ ಮೇಲೆ ವರಾಹದ ಮುದ್ರೆ ಇರುತ್ತಿತ್ತು. ಅವು ವರಹಗಳೆನಿಸಿದವು. ವಿಜಯನಗರ ಅರಸರೂ ಈ ಸಂಪ್ರದಾಯವನ್ನು ಮುಂದುವರೆಸಿದರು.
ಈ ಗುಹೆಯಲ್ಲಿ ಭೂವರಾಹನು ಚತುರ್ಭುಜನಾಗಿದ್ದು ಎಡಗೈಯಲ್ಲಿ ಭೂದೇವಿಯನ್ನು ಎತ್ತಿ ಹಿಡಿದಂತೆ ತೋರಿಸಲಾಗಿದೆ. ವರಾಹನು ಪ್ರತ್ಯಾಲೀಢ ಭಂಗಿಯಲ್ಲಿದ್ದಾನೆ. ಮೂಲೆಯಲ್ಲಿ ನಾಗದಂಪತಿಗಳನ್ನು ಶಿಲ್ಪಿಸಲಾಗಿದೆ. ವರಾಹ ಮೂರ್ತಿಯು ಬಗೆ ಬಗೆಯ ಆಭರಣಗಳಿಂದ ಅಲಂಕೃತವಾಗಿದೆ. ಮೇಲ್ಭಾಗದ ಮೂಲೆಗಳಲ್ಲಿ ವಿದ್ಯಾಧರರು ಕೆತ್ತನೆಗೊಂಡಿದ್ದರಿಂದ ಶಿಲ್ಪ ಸಂಯೋಜನೆ ಪೂರ್ಣಗೊಂಡಿದೆ.
ಪಶ್ಚಿಮ ಗೋಡೆಯಲ್ಲಿ ವಿಷ್ಣುವಿನ ಇನ್ನೊಂದು ಅವತಾರದ ಚಿತ್ರಣವಿದೆ. ವಾಮನಾವತಾರದ ಕತೆ ಹೇಳುವ ಇದು ಒಂದು ಕಥಾನಕ ಶಿಲ್ಪವಾಗಿ ಮೂಡಿಬಂದಿದೆ. ತ್ರಿವಿಕ್ರಮನು ಆಕಾಶದತ್ತ ಕಾಲು ಚಾಚಿದ್ದು ಅದರ ಕೆಳಗಿರುವ ಶಿಲ್ಪಗಳು ಪೂರ್ವದ ಕತೆಯನ್ನು ನೆನಪಿಸುತ್ತವೆ. ವಿಷ್ಣು ಕುಬ್ಜ ವಿಪ್ರನಾಗಿ ನಿಂತಿದ್ದಾನೆ. ಆತನ ಎದುರು ಬಲಿ ಚಕ್ರವರ್ತಿಯ ಗುರುಗಳಾದ ಶುಕ್ರಾಚಾರ್ಯರು ಅರ್ಘ್ಯ ನೀಡುತ್ತಿದ್ದಾರೆ. ತನ್ನ ಪರಿವಾರದೊಂದಿಗೆ ಬಲಿಯು ಗುರುಗಳ ಸಮ್ಮುಖದಲ್ಲಿ ಕುಬ್ಜ ಬ್ರಾಹ್ಮಣನಿಗೆ ಮೂರು ಹೆಜ್ಜೆಗಳ ದಾನವನ್ನು ನೀಡುತ್ತಿದ್ದಾನೆ.
ಬಲಿಯು ದಾನಗೈಯ್ಯುತ್ತಲೆ ವಿಷ್ಣು ವಿರಾಟರೂಪವನ್ನು ತಳೆದು ಒಂದು ಪಾದದಿಂದ ಭೂಮಿಯನ್ನು, ಇನ್ನೊಂದು ಪಾದದಿಂದ ಆಕಾಶವನ್ನೆಲ್ಲ ಆವರಿಸಿದುದನ್ನು ಇಲ್ಲಿ ಸಾಂಕೇತಿಕವಾಗಿ ತೋರಿಸಲಾಗಿದೆ. ತ್ರಿವಿಕ್ರಮನು ತನ್ನ ಏಳು ಕೈಗಳಲ್ಲಿ ಶಂಖ, ಚಕ್ರ, ಗದೆ, ಬಾಣ, ಢಾಲು, ಖಡ್ಗ, ಬಿಲ್ಲುಗಳನ್ನು ಹಿಡಿದುಕೊಂಡು ಘೋರ ರೂಪ ತಾಳಿದ್ದಾನೆ. ಇನ್ನೊಂದು ಕೈ ಆಕಾಶದತ್ತ ಬೆರಳು ಚಾಚಿದೆ. ಇಡೀ ಆಕಾಶವನ್ನು ಆವರಿಸಿದ್ದೇನೆ. ಮೂರನೆಯ ಹೆಜ್ಜೆಗೆ ಸ್ಥಳವೆಲ್ಲಿ ಎಂದು ಅದು ಪ್ರಶ್ನಿಸುವಂತಿದೆ. ಇದೊಂದು, ರೂವಾರಿಯ ಸುಂದರ ಕಲ್ಪನೆಯಾಗಿದೆ.
ಈ ಗುಹೆಯ ಮೊಗಸಾಲೆಯ ತೊಲೆಗಳ ಮೇಲೆ ಕಥಾನಕ ಶಿಲ್ಪಗಳ ಪಟ್ಟಿಕೆಗಳಿವೆ. ಇವು ಕೃಷ್ಣ ಚರಿತೆ, ಕೃಷ್ಣ ಲೀಲೆಗಳಿಗೆ ಸಂಬಂಧಿಸಿದವುಗಳು. ಭಾಗವತ ಕತೆಗಳನ್ನು ಮೊದಲಬಾರಿಗೆ ಕಲ್ಲಿನಲ್ಲಿ ಕೆತ್ತಿದ ಖ್ಯಾತಿ ಚಾಲುಕ್ಯ ಶಿಲ್ಪಗಳಿಗೆ ಸಲ್ಲುತ್ತದೆ. ಮೊಗಸಾಲೆಯ ಛತ್ತು ಸ್ವಸ್ತಿಕ ಮತ್ತು ಮತ್ಸ್ಯ ಚಕ್ರಗಳಿಂದ ಅಲಂಕೃತವಾಗಿದೆ. ಇಡಿ ಗುಹೆಯು ವರ್ಣರಂಜಿತವಾಗಿತ್ತು. ಅಲ್ಲಲ್ಲಿ ಗೋಚರಿಸುವ ಬಣ್ಣದ ಅವಶೇಷಗಳು ಇದನ್ನು ಸಮರ್ಥಿಸುತ್ತವೆ.
ನೈಸರ್ಗಿಕ ಗುಹೆ
ಎರಡನೆಯ ಗುಹಾಲಯದಿಂದ ಪೂರ್ವಕ್ಕೆ ಹತ್ತಿರದಲ್ಲಿ ಒಂದು ಸ್ವಾಭಾವಿಕ ಗುಹೆ ಗೋಚರಿಸುತ್ತದೆ. ಈ ನೈಸರ್ಗಿಕ ಗುಹೆಯ ಪೂರ್ವದ ಗೋಡೆಯಲ್ಲಿ ಬಹಳಷ್ಟು ಹಾಳಾಗಿರುವ ಶಿಲ್ಪವೊಂದಿದೆ. ಇದು ಪದ್ಮಪಾಣಿ ಬುದ್ಧನದು ಎಂದು ಗುರುತಿಸಲಾಗಿದೆ. ಬಾದಾಮಿಯಲ್ಲಿ ಸಿಗುವ ಬೌದ್ಧ ಶಿಲ್ಪ ಇದೊಂದೇ.
ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಶೀಲಾಕಾಂತ ಪತ್ತಾರ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ