Thursday , 13 June 2024
marriage

ಮದುವೆ ಮನೆಯಲ್ಲಿ ಜರೆಯುವ ಹಾಡು

ಹವ್ಯಕರ ಮದುವೆ ಮನೆಯಲ್ಲಿ ಬಹಳ ಹಿಂದೆ ಜರೆಯುವ ಹಾಡು ಹೇಳುವ ಪದ್ಧತಿ ಇತ್ತು. ಈಗ ಮದುವೆಯಲ್ಲಿ ಯಾವ ಹಾಡನ್ನು ಹೇಳುವುದೂ ಅಪರೂಪವಾಗಿದೆ. ಹಾಡಿನ ಮೂಲಕ ನೆಂಟರು ಒಬ್ಬರನ್ನೊಬ್ಬರು ಜರೆಯುವುದು ಆಕ್ಷೇಪಕ್ಕೆಂದಲ್ಲ. ಅದು ಒಂದು ಖುಷಿಗಾಗಿ ಅಷ್ಟೆ. ಇದಕ್ಕೆ “joking relationship” ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಹೊಸ ಬಾಂಧವ್ಯ ನಿಕಟವಾಗುತ್ತದೆಯೆಂದು ಭಾವಿಸಲಾಗುತ್ತದೆ. ಹವ್ಯಕರಲ್ಲಿ ಮದುವೆ ಕಾರ್ಯಕ್ರಮದ ವಿಧಿಗಳಲ್ಲಿ ಮಂತ್ರಗಳು ಹೇಗಿವೆಯೋ ಹಾಗೆ ಪ್ರತಿಯೊಂದು ವಿಧಿಗೂ ಪ್ರತ್ಯೇಕ ಮತ್ತು ವೈವಿಧ್ಯವಾದ ಹಾಡುಗಳಿವೆ.

ಹವ್ಯಕರ ಮದುವೆ ಮನೆಯಲ್ಲಿ ಜರೆಯುವ ಹಾಡು

ಗಂಡಿನ ಕಡೆಯವರು:

ಕಲ್ಯಾಣವೇ ಕಪ್ಪಿನ ಕಲ್ಯಾಣವೇ ||
ಮದುವೆ ಮಂಟಪದಲ್ಲಿ ಮದವಣತಿ ಕಪ್ಪು | ಮದವಣತಿ ಅಕ್ಕ ತಂಗಿಯರೇ ಕಪ್ಪು |
ಅವರ್ವಮ್ಶೆಲ್ಲಾ ಕಪ್ಪು ಮೂರು ಲೋಕಕ್ಕೂ ಸಾಕು | ಚಪ್ಪರ ತುಂಬಿತು ಹಗಲುಗಪ್ಪು || 1 ||
ಧಾರೆ ಮಂಟಪದಲ್ಲಿ ಮದವಣತಿ ಕಪ್ಪು | ಮದವಣತಿ ತಾಯಿ ತಂದೆಯರೇ ಕಪ್ಪು |
ಅವರ ಬಳಗೆಲ್ಲಾ ಕಪ್ಪು ಮೂರು ಲೋಕಕ್ಕೂ ಸಾಕು | ಚಪ್ಪರ ತುಂಬಿತು ಹಗಲುಗಪ್ಪು || 2 ||

ಹೆಣ್ಣಿನ ಕಡೆಯವರ ಉತ್ತರ:

ಕರಿಯಳೆಂದು ನೀ ಜರೆಯಬೇಡ | ಬಿಳಿಗೆಳತಿಯ ಗರ್ವದಿಂದ ಕಪ್ಪಿಗಿಂತ ಬಿಳಿಬಣ್ಣ ಹೆಚ್ಚು ಹೇಳ್ವೆ ಯಾವ ಹಿರಿಮೆಯಿಂದ || ಪ ||
ಕಬ್ಬಿಣವು ಕಪ್ಪು ಯಂತ್ರಗಳು ಕಪ್ಪು | ಕಲ್ಲಿದ್ದಲು ಕಪ್ಪು ಕಪ್ಪು |
ವಾಹನದ ಗಾಳಿ ಅದರುಸಿರು ಕಪ್ಪು | ಡಾಂಬರಿನ ಬೀದಿ ಕಪ್ಪು || 1 ||
ಈ ಕಪ್ಪು ಪ್ರಿಯವು ಅಪ್ರಿಯವು ಏಕೆ | ಹೇಳೆನ್ನ ಮೈಯೆ ಕಪ್ಪು |
ಕಬ್ಬು ಕಪ್ಪು ಎಂದು ಗಬ್ಬದಿರೆ | ಕಬ್ಬಿನ ಹಾಲಿನ ಸವಿಯ ನೋಡು ಬಾರೆ || 2 ||
ಕಪ್ಪು ಕಪ್ಪು ನೇರಳೆ ಕಪ್ಪು | ತಿಂದು ನೋಡಿದರೆ ರುಚಿ ಒಪ್ಪು |
ನೀ ಮೃಗವು ನಿನ್ನ ನಾಭಿಯೊಳು ನಾನು ಕಸ್ತೂರಿಯಷ್ಟೆ ಬಾರೇ || 3 ||
ಓ ಶ್ವೇತ ಚೆನ್ನೆ ಕಲಿಸುವೆ ಬಾರೆ | ಶೃಂಗಾರ ಸಾರವನ್ನು |
ಕುಂಕುಮವನಿಡುವೆ ಬಿಡು ಕೆಂಪು ಕೇಡು | ಎಂಬೀ ವಿಚಾರವನ್ನು || 4 ||
ಕಪ್ಪು ಕಪ್ಪು ಆಕಳು ಕಪ್ಪು | ಕರೆದು ನೋಡಿದರೆ ಬಿಳಿ ಹಾಲು |
ಹಚ್ಚುವೆನು ಕಣ್ಗೆ ಕಾಡಿಗೆಯ ನೋಡು | ದರ್ಪಣದಿಂ ರೂಪವನ್ನು || 5 ||

ಪ್ರಸ್ತುತಿ : ಎಂ. ಗಣಪತಿ . ಕಾನುಗೋಡು.
[sociallocker]
—————————————————-

ಹವ್ಯಕರ ಮದುವೆ ಮನೆಯಲ್ಲಿ ಜರೆಯುವ ಹಾಡು

ಗಂಡಿನ ಕಡೆಯವರು ಜರೆದದ್ದು:

ಹತ್ತು ಮಂದಿಯೊಳಗೆ ತಾಯವ್ವಗೆ | ಚೊಚ್ಚಲ ಮಗನಿವನು |
ಮತ್ತೆ ಇವರ್ ಮನೆ ಹೆಣ್ಣು ತರಲಾಗ ಎಂದರೆ | ಬ್ರಹ್ಮ ಸಂಕಲ್ಪವು ತಪ್ಪಲೇ ಇಲ್ಲ |
ಬ್ರಹ್ಮ ಬರೆದನಲ್ಲ | ಇದು ಈಗ ನಮ್ಮ ಮನಸು ಇಲ್ಲ || 1 ||
ನೂರು ಮಂದಿಯು ಬಂದರು ನಮ್ಮನೆಗೆ | ರಂಭೆಯ ಚೆಲುವಿನವಳು |
ತಮ್ಮ ಮಗಳೆಂದು ಕುಣಿಯುತ ಬಂದರು ಒಳಗೆ | ಎಲ್ಲಾ ಬಿಟ್ಟು ಇಲ್ಲಿಗೆ ಬಂದೇವಲ್ಲ |
ಬ್ರಹ್ಮ ಬರೆದನಲ್ಲ | ಇದು ಈಗ ನಮ್ಮ ಮನಸು ಇಲ್ಲ || 2 ||

ಹೆಣ್ಣಿನವರ ಉತ್ತರ:

ವರನ ವರುಷವ ನೋಡೆ | ಎರಡಾಳುದ್ದವ ನೋಡೆ |
ಅಳಿಯನಿಗಿಂತ ಮಾವ ಕಿರಿದಾದ | ಕಿರಿದಾದ ಮಾವಯ್ಯ |
ಎಲ್ಲಿ ದೊರಕಿದನೋ ಮಗಳೀಗೆ || 1 ||
ಮೂರು ಲೋಕಕು ಗಂಡು | ನಮ್ಮ ಚಿನ್ನದ ಕುವರಿ ಇಂದು |
ನಿಮ್ಮ ಮಗನು ಬಾಣಲಿ ಗುಂಡು | ಕಂಡರೆ ಬರಿಯ ಬೆಂಡು |
ಎಲ್ಲಿ ದೊರಕಿದನೋ ಮಗಳೀಗೆ || 2 ||

ಪ್ರಸ್ತುತಿ : ಎಂ. ಗಣಪತಿ. ಕಾನುಗೋಡು.

————————————————-

ಹವ್ಯಕರ ಮದುವೆ ಮನೆಯಲ್ಲಿ ಜರೆಯುವ ಹಾಡು :

ಗಂಡಿನ ಕಡೆಯವರು:
ಸೀರೆಯನ್ನುಡು ಎಂದರೆ ನಿಮ್ಮ ಮಗಳು | ಸರಕ್ಕನೆ ಜಾರುವವಳಲ್ಲಾ |
ಸೊಂಟಕೆ ಚೂಡಿದಾರವ ಸಿಕ್ಕಿಸಿಕೊಂಡು | ತೈ ತೈ ಎನ್ನುವ ಫಾರಿನ್ ಸೊಸೆಯನು ತಂದೇವಲ್ಲಾ ||
ರಂಗೋಲಿ ಹಾಕೆಂದರೆ ನಿಮ್ಮ ಮಗಳು | ಸೀಮೆಸುಣ್ಣ ಗೀಚಿದಳಲ್ಲಾ ||
ರಂಗನು ಹಚ್ಚಿದ ತೊಂಡೆಹಣ್ಣಿನ ತುಟಿಯಾ | ಕಂಡು ವಿದ್ಯಾವಂತಳೆಂದು ನಾವು ತಂದೇವಲ್ಲಾ ||
ಅಡುಗೆ ಮಾಡೆಂದರೆ ನಿಮ್ಮ ಮಗಳು | ಯಾಕ್ವರ್ಡ್ [ Awkward ] ಎಂದು ಎರಗಿದಳಲ್ಲಾ |
ಹಾಲಿಗೆ ಒಗ್ಗರಣೆ ಕೊಟ್ಟು ಆಲ್ ರೈಟ್ ಎಂದ | ವಳನ್ನು ಬರಿದೇ ನಾವು ತಂದೇವಲ್ಲಾ ||

ಹೆಣ್ಣಿನವರ ಉತ್ತರ:

ಕಟ ಕಟೆ ಅತ್ತೇರು ಕಿಟಿ ಕಿಟಿ ಮಾವ್ನೋರು ಸೂತ್ರದ ಗೊಂಬೆ ನನ ಗಂಡ |
ಪಂಜರದ ಧಗೆಯಲ್ಲಿ ಬಾಳುವುದೇ ಕಷ್ಟ ಮನೆಯಲ್ಲಿ ||
ಮಾವ್ನೋರು ಮಾತಾಡಿದರೆ ಸಿಂಹ ಘರ್ಜಿಸಿದಂತೆ ಅತ್ತೇರು ಘಟಸರ್ಪ |
ಘಟಸರ್ಪಕೆ ಬಾಗಿದ ನನ ಗಂಡನೆ ನಷ್ಟ ಮನೆಯಲ್ಲಿ ||
ಅತ್ತೆ ಮಾವರ ಜಗಳ ಮಾತಿಗೆ ಮಾತು ಬಹಳ ನನಗೆ ಪೀಕಲಾಟ |
ಪೀಯ ಪಿಟ್ಟ ಉಸಿರದ ಗಂಡ ಬೆಂಕಿಯ ಚೆಂಡು ಮನೆಯಲ್ಲಿ ||

ಪ್ರಸ್ತುತಿ : ಎಂ. ಗಣಪತಿ. ಕಾನುಗೋಡು.

—————————————————————-

ಗಂಡಿನ ಕಡೆಯವರು ಜರೆದದ್ದು:
ಅಂಗಳ ತುಂಬೆಲ್ಲಾ ಜೋಡು ಒಲೆ ಹೂಡಿ ಹೇನಾರಿ ಕಟ್ಟಿಗೆ ಕೂಡಿ |
ಮಿತ್ರೆ ಅತ್ಯೆಮ್ಮ ಎಡಗೈಯಾ | ಎಡಗೈಯ ಕಾಸುತ್ತಾ |
ಸಾರಿಗೆ ಉಪ್ಪ ಹಾಕದಕೆ ಮರೆತಳು ||
ಸಾಂಬಾರು ಕಲಸಿದ ಅನ್ನವ ನಮ್ಮ ಭೀಗರು ಗಟ್ಟಿ ಜಗಿಯಲಾಗಿ |
ಹಲ್ಲಿಗೆ ಹಲ್ಲು ಸಿಕ್ಕಿತೋ ಹಲ್ಲ ನೋಡಲಾಗಿ |
ಅತ್ಯೆಮ್ಮ ಕಟ್ಟಿಸಿದ ಹಲ್ಲು ಸೆಟ್ಟು ||
ಪಾಯಸ ಬಡಿಸಿದ ಅತ್ಯೆಮ್ಮನ ಬಡಿವಾರ ಭುಗಿಲೆದ್ದು ಕುಣಿಯಿತು ಕಾಣಿ |
ದ್ರಾಕ್ಷಿಯೆಂದು ಅವಳ ಸರದ ಹವಳ ತೆವಳಾಡಿತು |
ಅಬ್ಬರದ ಪಾಯಸದ ಸವಿಯ ಬನ್ನಿ ||

ಹೆಣ್ಣಿನ ಕಡೆಯವರ ಉತ್ತರ:

ಉಪ್ಪು ಹಾಕಲು ಮರೆತರೆ ಮೇಲುಪ್ಪ ಮರೆತೆರೇನೆ |
ಉಂಡು ದೂರುವ ದರ್ಭಾರಿನ ನೆಂಟರು ನೀವು |
ಯಾರು ಮಾಡದ ಅಡುಗೆಯ ನಾ ಮಾಡಿದೆನೇನೆ ? |
ಉಂಡು ದೂರುವುದು ಥರವಲ್ಲ ||
ಔತಣವನುಂಡು ದೂರುವ ದೂರುಗಳ್ಳೆರಾ ನೀವು |
ಬಾಳೆಯಲಿ ಅನ್ನದ ಅಗುಳ ಉಳಿಸಿದಿರೇನೆ ?
ಒಲ್ಲದ ಗಂಡನಿಗೆ ಮೊಸರಲಿ ಕಲ್ಲ ಕಂಡ |
ಭಂಡತನ ಇದು ಥರವಲ್ಲ ||

ಪ್ರಸ್ತುತಿ : ಎಂ. ಗಣಪತಿ ಕಾನುಗೋಡು .

————————————————————-

ಗಂಡಿನವರು ಜರೆದದ್ದು:

ಮೈಲುದ್ದಕೂ ಶ್ಯಾಮಿಯಾನದ ಚಪ್ಪರ ಅಂಗಳವೆಲ್ಲಾ ರಂಗೋರಂಗು |
ಹಾಸಿದ ಜಮಖಾನದ ಮೇಲೆ ತಾಂಬೂಲದ ಹರಿವಾಣ ||
ಹತ್ತಾರು ಹರಿವಾಣಗಳೆಂದು ನಾವು ಹಿಗ್ಗಿದೆವಲ್ಲ ಹರಿವಾಣ ತೆಗೆದರೆ
ಜಮಖಾನ ಹರಕೋ ಹರಕು ನೋಡಿರಿ ಭೀಗರ ದವಲತ್ತು ||
ಭೀಗರು ಬಾಯಿ ತೆರೆದರೆ ಸಾಟಿ – ಮೇಟಿ ಇಲ್ಲದ ಕೋಟಿ ಕೋಟಿಯ ಮಾತು |
ಮಾತಿನ ಬಂಗಾರ ಮಗಳಿಗೆ, ನೋಡಿರಿ ಭೀಗರ ದವಲತ್ತು ||

ಹೆಣ್ಣಿನವರ ಉತ್ತರ:

ನಮ್ಮ ಬಳಗ ದೇಶದುದ್ದಕೂ ಬಹಳ ನಿಮ್ಮ ಕಿಷ್ಕಿಂಧೆ ಸಾಲದೆನ್ದಿರಲ್ಲೇ |
ಶಹರದ ರಂಗಿನಲ್ಲಿ ಮದುವೆ ಹಂದರ ಮೆರೆಯಲೆಂದಿರಲ್ಲೇ ||
ತಾಂಬೂಲ ಜಗಿವುದ ಬಿಟ್ಟು ಹರಿವಾಣವೆತ್ತಿ ಹುಳುಕ ಹರಡುವುದೇನೆ ? |
ನಿಮಗಿಟ್ಟ ಗೌರವ ಸರಿಸಿ ಸೊಸೆ ತವರ ಹೆಂಚಿನ ಲೆಕ್ಕವೇನೆ ? ||
ನಮ್ಮ ಮಗಳೆ ಬಂಗಾರ, ಅರಗಿಲ್ಲದ ಅರಗಿಣಿಗೆ ಮೇಲು ಬಂಗಾರವೇಕೆ ? |
ನಿಮ್ಮ ಮನೆಯ ಬೆಳಗುವ ಚಿನ್ನದ ಕನ್ಯಾ ಇದುವೆ ನಮ್ಮ ಗಮ್ಮತ್ತು ||

ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.
—————————————————————–

ಹವ್ಯಕರ ಮದುವೆ ಮನೆಯಲ್ಲಿ ಜರೆವ ಹಾಡು:

ಗಂಡಿನವರು ಜರೆದದ್ದು:

ನಿಮ್ಮ ಮಗಳ ರೂಪವ ನೋಡಿರೆ ಮೂರು ಲೋಕದಲ್ಲೂ ಕಾಣದ ಚೆಲುವೆ |
ಮೋಸಹೋದನಲ್ಲೆ ನಮ್ಮ ಮಗ ಅವಳ ಪಕ್ಕ ಕುಳಿತವಳ ಮುಖ ನೋಡಿ |
ತರಗ ಎಳೆಯುವ ಜಾಲರಿ ಹಲ್ಲು, ಬಿಲ್ಲನು ನಾಚಿಸುವ ಗೂನು ಬೆನ್ನು |
ಕನ್ನಡದ ‘ಡ’ ತೋರಿಸುವ ಚಪ್ಪಟ್ಟೆ ಮೂಗು, ಕಿವಿಯವರೆಗೂ ಬಾಯಿ |
ವಿದ್ಯಾವಂತಳೆಂದು ಹೇಳಿದಿರಲ್ಲ ಎರಡು ಸೊನ್ನೆಯ ಮುಂದೆ ಒಂದಂ-
ಕೆಯ ಬರೆದು ನೂರು ಎಂದಳಲ್ಲ, ಜಾಣೆ ನಿಮ್ಮ ಮುದ್ದಿನ ಮಗಳು |

ಹೆಣ್ಣಿನವರ ಉತ್ತರ:

ತನ್ನ ರೂಪಕೆ ಅನುರೂಪದ ಬಾಲೆ ಎಂದನಲ್ಲೆ ನಿಮ್ಮ ಚೆಲುವ ಚೆನ್ನಿಗರಾಯ |
ನಮ್ಮ ಮಗಳ ಚೆಲುವಿಗಿಂತ ನಿಮ್ಮ ಮಗನ ಚೆಲುವೇ ಮೇಲೆಂದು ಸಾರಿದರು ಎಲ್ಲಾ |
ನಿಮ್ಮ ಕಂದನ ಸೊಟ್ಟ ಮೆರುಗನರಿಯದೆ ಬರಿದೆ ನಮ್ಮ ಕುವರಿಯ ಓರೆಯ ಕಂಡಿರೇನೆ |
ವರನಿಗೆ ತಕ್ಕ ವಾರಿಗೆ ನಮ್ಮ ಚೆನ್ನೆ, ಕಬ್ಬು ಡೊಂಕಾದರೆ ಸವಿ ಡೊಂಕಲ್ಲ ಕಾಣೆ |
ಬಳೆಯನಿಟ್ಟಮೇಲೆ ಕೈಕೊಡವಿದರೆ ವರಿಸಿದ ಬಂಧನ ದೂರ ಸರಿದೀತೇನೆ |
ತೊಟ್ಟ ಒಡವೆಯ ಒರೆಯನೆಣಿಸದೆ ಕೊಟ್ಟ ಸುಖವನರಸಿ ಅರಸಾಗು ಎನ್ನೆ ಮಗನಿಗೆ ||

ಪ್ರಸ್ತುತಿ : ಎಂ. ಗಣಪತಿ ಕಾನುಗೋಡು

—————————————————————————–

ಹವ್ಯಕರ ಮದುವೆಯ ಜರೆವ ಹಾಡು:

ಗಂಡಿನವರು ಜರೆದದ್ದು:

ನೋಡಿರಣ್ಣ ಹೇಗಿದೆ ಭೀಗರಣ್ಣನ ಜೋಡಿ ಭೀಗಿತಿಯ ಕೂಡಿ ಕೂಡಿ |
ಮದುವೆ ಚಪ್ಪರದಲ್ಲೆಲ್ಲಾ ಹಳೆಜೋಡಿಯ ದರ್ಭಾರ ಭಲೇ ಅಬ್ಬರ ||
ಭೀಗರಣ್ಣನ ಹಾರಿದ ಹುಬ್ಬಿಗೆ ಭೀಗಿತಿ ಕುಣಿಸಿದಳು ತನ್ನ ಹುಟ್ಟುಮೀಸೆ |
ಭೀಗಿತಿಯ ಕಣ್ಣ ಸನ್ನೆಗೆ ತಣ್ಣಗಾಯಿತು ಭೀಗರಣ್ಣನ ಬಾಯಿ ಕಹಳೆ |
ಭೀಗಿತಿಯ ಕೈ ಕೈ ತಾಳ ಭೀಗರಣ್ಣನ ತೈ ತೈ ಕುಣಿತ, ಹೆಂಡತಿ ಕೈಯ ಗಂಡ |
ಗಮ್ಮತ್ತಿನ ನೆಂಟಸ್ತಿಕೆಯ ಮಾಡಿದೆವಲ್ಲಾ ನಾವು, ನಮಗೆ ಬೇಕು ದಂಡ ||

ಹೆಣ್ಣಿನವರ ಉತ್ತರ:

ಮಕ್ಕಳ ಮದುವೆಯಾದರೆ ನಾವು ಹಳೆ ಮುದುಕರೇನೆ |
ಮುದುಡಿ ಮೂಲೆ ಸೇರಬೇಕೇನೆ ||
ಹಣ್ಣಾಗುವ ಎಲೆಯಲ್ಲ ನಾವು ನಿತ್ಯಹರಿಧ್ವರ್ಣ |
ಎಳೆಯ ಚಿಗುರಿಗೆ ತಂಪಿನ ಆಸರೆ |
ಕೂಡಿ ನಲಿಯುವ ಮಾದರಿ ಜೋಡಿ ನಂಜಲ್ಲ ನೋಡಿ |
ಮದುವೆ ಮಕ್ಕಳಿಗೆ ನಮ್ಮದೇ ಮೋಡಿ ||
ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.

———————————————————————————–

ಹವ್ಯಕರ ಮದುವೆ ಮನೆಯಲ್ಲಿ ಜರೆವ ಹಾಡು:

ಗಂಡಿನವರು ಜರೆದದ್ದು:

ಗಂಡಿನವರು ನಾವು ಕೇಳಲೆಂದು ಸಿ.ಡಿ. ಹಾಕಿ ಮೈಕ್ ಸೆಟ್ ಸಾರಿದಿರಲ್ಲಾ |
ಹೆಣ್ಣಿನ ಪಾಳೆಯದಲಿ ಹಾಡಿನ ಕಲೆಯ ಹೆಂಗಸರಿಲ್ಲ ||
ಹಾಡು ಬರೋದಿಲ್ಲ ಸೇಡಿ ಬರೋದಿಲ್ಲ ನಾವೈದೇವಕ್ಕ ದುರ್ದುಂಡೇರು |
ಎಂದು ಬೀಗುವಿರಲ್ಲ ಫ್ಯಾಶನ್ನಿನ ಲೇಡಿಯರೇ ಎಲ್ಲ ||
ಎದುರುಗೊಂಬುವ ಹಾಡಿನ ಬದಲಿಗೆ ‘ವಿರಹಾ ನೂರು ನೂರು ತರಹ’ ಎಂಬುದೇನೆ |
ನಮ್ಮ ವರನಿಗೆ ವರಹವ ನೀಡುವ ಸೊಲ್ಲ ಉಸುರಿದವರಿಲ್ಲ ||

ಹೆಣ್ಣಿನವರ ಉತ್ತರ:

ಗಂಡಿನ ದಿಬ್ಬಣದಲಿ ಶಾಸ್ತ್ರದ ಹಾಡು ಸವಿಯುವ ರಸಿಕರೇ ಸೊನ್ನೆ |
ರಾಗವೆಂದರೆ ಸೊಳ್ಳೆರಾಗವೆಂದು ಸಸಾರಗೈಯುವ ಶೂನ್ಯರೆ ಎಲ್ಲ ||
ಸಭೆಯಲಿ ಕೂರುವ ಗಂಡಸರೆಲ್ಲಾ ಉಪ್ಪರಿಗೆ ಹತ್ತಿಹರು ಇಸ್ಪೀಟಿಗೆ |
ಯಕ್ಕ,ರಾಜ,ರಾಣಿಯ ಎದುರು ಎದುರುಗೊಂಬುವ ಹಾಡು ಯಡವಟ್ಟು ||
ಟಾಕುಟೀಕಿನ ಹುಡುಗಿಯರು ವಾಟ್ಸ್ ಅಪ್ ಅಲೆಯಲಿ ತೇಲಾಡುವರಲ್ಲ |
ರಂಗು ರಂಗಿನ ಚಿತ್ರದ ಮುಂದೆ ಸಂಪ್ರದಾಯವೇ ವಿಚಿತ್ರ ಎಂದರಲ್ಲ ||
ಹರೆಯದ ಹುಡುಗರ ಕುಡಿನೋಟ ನಮ್ಮ ಬೆಡಗಿಯರಯತ್ತ ಕುದುರೆಯೋಟ |
ಕೋಟಲೆ ಅವರಿಗೆ ಹರಿ ಹಾಡಿನ ಪಾಠ, ಸಾಕು ನಿಮ್ಮ ದೊಂಬರಾಟ ||

ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.

———————————————————————————-
ಹವ್ಯಕರ ಮದುವೆ ಮನೆಯಲ್ಲಿ ಜರೆವ ಹಾಡು

ಗಂಡಿನವರು ಜರೆದದ್ದು:

ಕೇಳು ಬಾರೆ ಅತ್ತಿಗೆ ಆಲಿಸು ಬಾರೋ ಅಣ್ಣಯ್ಯ ನೆಂಟರ ಮನೆ ಸುದ್ದಿ |
ಹುಣ್ಣಿಮೆ ಬೆಳಕಿನ ತಂಪನು ಮರೆಸುವ ಹೊಸ ಬೀಗರ ನಯ ತಳುಕಿನ ಬುದ್ಧಿ ||
ಬೀಗರೇ ಬಂಗಾರ ಬೀಗಿತಿಯೆ ಬಂಗಾರ ಒಡವೆಯ ಕವಚವೆ ಮೈತುಂಬಾ |
ಒಳಗೆಲ್ಲಾ ಅಳುಕು ಮೇಲೆ ಬಂಗಾರದ ತಳುಕು ಮುಖ ಹೊಳಪೋ ಹೊಳಪು ||
ಮಗಳ ಬಳುವಳಿ ಕೇಳಿ ಕಬ್ಬಿಣದ ಪಾತ್ರೆ – ಪಗಡೆ ಲಾರೀ ತುಂಬಾ |
ಮಗಳ ಕೊರಳಿಗೆ ಕಬ್ಬಿಣದ ಸರಿಗೆಯಲ್ಲಿ ದೃಷ್ಟಿ – ತಾಯಿತದ ಮೆಹರ್ಬಾನು ||
ತನ್ನ ಬಾಲೆಯ ಬಣ್ಣವೇ ಬಂಗಾರ ಹಲ್ಲುಗಳೇ ಬೆಳ್ಳಿಯ ಸೆಟ್ಟು |
ಎಂದು ತುಪ್ಪವ ಸುರಿಸಿ ಬೀಗರು ಕುಣಿಸಿದರು ಮುತ್ತ ಸುರವಿದ ಮೀಸೆಯ ||

ಹೆಣ್ಣಿನವರ ಉತ್ತರ:

ಕ್ವಿಂಟಾಲ್ ಮೂಟೆಯ ಬಂಗಾರದ ನೆಂಟರೆಂದು ಮರುಳಾದಿರಿ ನಮಗೆ ಮಗಳಿಗಲ್ಲ |
ಬಾಲೆಯ ನೋಡದೆ ವರನ ಚಪ್ಪರಕೆ ತಂದಿರಲ್ಲ ಒಡವೆಯೇ ನಿಮಗೆ ವಧುವಾಯ್ತೇ ||
ನೆಂಟರೆ ಕೇಳಿ ನಮ್ಮ ಹೊಳಪಿನ ಬಂಗಾರ ಸಂತೆ ಪೇಟೆಯ ನಕಲಿ ಬಂಗಾರ |
ಕಳ್ಳರ ಭಯದಿಂದೆ ಕ್ವಿಂಟಾಲ್ ಒಡವೆಯ ಬ್ಯಾಂಕ್ ಲಾಕರಿಗಿಟ್ಟೆವು ಗುಟ್ಟೇನು ||
ಮಗಳ ತೂಕದ ಚಿನ್ನದೊಡವೆಯ ಭಂಡಾರ ಘಟ್ಟಿ ಲಾಕರಿನಲ್ಲಿದೆ ಆಲೋಕ |
ಸೊಸೆಯ ಕೊರಳ ಕೊಳವೆಯಲ್ಲಿಟ್ಟೆವು ಲಾಕರ್ ಕೀಯನು ತಾಯಿತವಲ್ಲ, ಜೋಪಾನ||

ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.

————————————————————————-

ಹವ್ಯಕರ ಮದುವೆ ಮನೆಯಲ್ಲಿ ಜರೆವ ಹಾಡು:

ಗಂಡಿನವರು ಜರೆದದ್ದು:

ಚೂರು ಹೋಳಿಗೆ ಸೂಜಿಲಿ ತುಪ್ಪವ ಬಡಿಸಿದಳೇ ಬೀಗಿತ್ತಿ | ಹಾರ್ರ್ಯಾಡಿದಳೇ ಬೀಗಿತ್ತಿ || ಪ ||
ಬೀಗಿತ್ತಿ ಮಾಡಿದ ಸಾಸಿಮೆಯು ಕಯ್ ಕಯ್ ಕಯ್ ಕಯ್ ಆಗಿತ್ತು |
ಬೀಗಿತ್ತಿ ಮಾಡಿದ ಸಾಸಿಮೆ ಸುದ್ಧಿ ಸಾಗರದ ತನಕ ಅದೇ ಸುದ್ಧಿ | ಶಿರಸಿ ತನಕ ಅದೇ ಸುದ್ಧಿ || ೧ ||
ಬೀಗಿತ್ತಿ ಮಾಡಿದ ಹಪ್ಪಳವು | ಖರ್ಚಾಗದೆಯೇ ಉಳಿದಿತ್ತು | ಪುಟ್ಟಿ ತುಂಬಾ ತುಂಬಿತ್ತು | ಮೊದಲೇ ಕಪ್ ಕಪ್ ಆಗಿತ್ತು | ಬೀಗಿತ್ತಿ ಮಾಡಿದ ಹಪ್ಪಳದ ಸುದ್ಧಿ ಎಲ್ಲೀ ನೋಡಿದರಲ್ ಸುದ್ಧಿ || ೨ ||
ಬೀಗಿತ್ತಿ ಮಾಡಿದ ಉಪ್ಪಿನಕಾಯಿ ಹಳಸೀ ಅಲ್ಲೇ ಮುಗ್ಗಿತ್ತು |
ಪಾತ್ರೆ ತುಂಬಾ ಒದಗಿತ್ತು | ಇಂಥಾ ಚತುರೆ ಬೀಗಿತ್ತಿ ಸುದ್ಧಿ ಯಾವಾಗ್ಲೂ ಹೇಳ್ತಾ ಇರಬೇಕು | ಇವರತ್ರ ಕಲಿಬೇಕು || ೩ ||

ಹೆಣ್ಣಿನವರ ಉತ್ತರ:

ನೆಂಟರ ಮನೆ ಸುದ್ಧಿ ಬಂದ್ಕೇಳು ಅಜ್ಜಮ್ಮ |
ಹತ್ತು ಬಾಗಿಲಿಗೂ ಕದ ಒಂದು | ಕದವೊಂದು ಕೀಲೆರಡು |
ನೆಂಟರ ಮನೆ ಸುದ್ಧಿ ಶುಭನವ || ಪ ||
ದಬ್ಬಣಧಾರೆ ತುಪ್ಪ ಇಬ್ಬರಿಂದ್ಹೋಳಿಗೆ | ಬಗ್ಗಿ ಬಗ್ಗಿ ತುಪ್ಪ ಎರೆವಳು |
ಎರೆವಾಗ ಯಜಮಾನನ ಹುಬ್ಬು ಹಾರಿದಾವೆ ಗಗನಾಕೆ || ೧ ||
ಆಚೆ ಪಂಕ್ತಿಗೆ ದೊನ್ನೆ ಈಚೆ ಪಂಕ್ತಿಗೆ ದೊನ್ನೆ | ನಮ್ಮ ಪಂಕ್ತಿಗೆ ಕೈಯ ಸನ್ನೆ |
ಕೈಸನ್ನೆ ಬೀಗರ ಡಮಕ ಕೇಳಿದರೆ ಶಿವ ಬಲ್ಲ || ೨ ||
ಹೋಳಿಗೆ ಪುಟ್ಟಿಗೆ ಯಜಮಾನನ ಕಾವಲು | ಮನೆ ಅಳಿಯ ಎಂಬ ತಳವಾರ |
ತಳವಾರ, ಬೀಗರ ಸುದ್ಧಿ ಇನ್ನೇನ ಹೊಗಳಾಲಿ || ೩ ||
ಒಂದಕ್ಕಿ ಬೆಂದರೆ ಒಂದಕ್ಕಿ ಬೇಯಲಿಲ್ಲ | ನಂದಿಯ ಸವುದಿ ಉರಿಲಿಲ್ಲ |
ಉರಿಲಿಲ್ಲ ತಂಗ್ಯವ್ವ ಹೊಟಗಚ್ಚು ನಮಗೆ ಹಿರಿದಾದ || ೪ ||
ಆನೆ ಆನೆ ತೂಕ ಆನೆ ಸರಪಳಿ ತೂಕ | ಬೀಗ ಬೀಗಿತ್ತಿ ಸಮತೂಕ |
ಸಮತೂಕ ಇಂಥಾ ನೆಂಟು ಸಿಕ್ಕಿತು ಶಿವನ ಕೃಪೆಯಿಂದ || ೫ ||
ವಿ. ಸೂ : ಬೀಗ, ಬೀಗಿತ್ತಿ ಸಪುರ ಇದ್ದರೆ ” ಮೇಕೆ ಮೇಕೆಯ ತೂಕ ಮೇಕೆ ಹಂಗಡ ತೂಕ ” ಎಂದು ಹೇಳಿಕೊಳ್ಳಬೇಕು.

ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.97 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

ಅಲೆಮಾರಿಗಳ ‘ಬುಡ್ಗನಾದ’

ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ …

Leave a Reply

Your email address will not be published. Required fields are marked *