Saturday , 2 March 2024
S Mangala Satyan

ಮಂಗಳಾ ಸತ್ಯನ್‌

ಮಂಗಳಾ ಸತ್ಯನ್‌ (೧೦.೪.೧೯೪೦): ಸಾಹಿತ್ಯ, ಸಂಗೀತ, ಸಮಾಜಸೇವೆ – ಹೀಗೆ ಒಂದಲ್ಲೊಂದು ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಮಂಗಳಾ ಸತ್ಯನ್‌ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ. ೧೯೪೦ ರ ಏಪ್ರಿಲ್‌ ೧೦ ರಂದು. ತಂದೆ ಪ್ರಖ್ಯಾತ ವಕೀಲರಾಗಿದ್ದ ಸಾಲಗಾಮ ಸುಬ್ಬರಾಯರು, ತಾಯಿ ಗುಂಡಮ್ಮ. ಹುಟ್ಟಿದೂರಿನಲ್ಲಿ ಪಡೆದ ಶಿಕ್ಷಣ.

ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಕಥೆ ಹೇಳುವ, ಕಥೆ ಕೇಳುವ ಹವ್ಯಾಸ. ಪ್ರತಿದಿನದ ನೀತಿಕಥೆಗಳು ಪೀರಿಯಡ್‌ನಲ್ಲಿ ಚಂದಮಾಮ, ಬಾಲಮಿತ್ರದ ಕಥೆಗಳನ್ನೂ ಓದಿಕೊಂಡು, ಮನೆಯಲ್ಲಿ ಹಿರಿಯರಿಂದ ಕಥೆ ಕೇಳಿಕೊಂಡು ಹೋಗಿ ಹೇಳಬೇಕಿತ್ತು. ಹೀಗೆ ಇವರ ಸರದಿ ಬಂದಾಗ ಪ್ರತಿಸಾರಿಯೂ ಕೇಳಿದ, ಓದಿದ ಕಥೆಗಳನ್ನು ಬಹುರಂಜನೀಯವಾಗಿ ತರಗತಿಯಲ್ಲಿ ಹೇಳುತ್ತಿದ್ದುದನ್ನು ಕಂಡ ಶಿಕ್ಷಕಿಯರೇ ಬೆರಗಾಗುತ್ತಿದ್ದರು. ಶಿಕ್ಷಕಿಯಾಗಿದ್ದ ಲಕ್ಷ್ಮೀದೇವಮ್ಮನವರು ಇವರನ್ನೂ ಹೊಸ ಹೊಸ ಕಥೆ ಬರೆಯಲು ಪ್ರೇರೇಪಿಸಿದರು.

ಹೀಗೆ ಬರೆದ ಮೊದಲ ಕಥೆ ‘ಕೋತಿಯ ಚತುರತೆ’ಯನ್ನು ಚಂದಮಾಮ ಪತ್ರಿಕೆಗೆ ಕಳುಹಿಸಿ ಪ್ರತಿ ತಿಂಗಳೂ ಕಾಯತೊಡಗಿದರು. ಆರು ತಿಂಗಳಾದರೂ ಪ್ರಕಟವಾಗದಿದ್ದಾಗ ಕೋಪದಿಂದ ಚಂದಮಾಮ ಓದುವುದನ್ನೇ ನಿಲ್ಲಿಸಿ ಕೋಪತೀರಿಸಿಕೊಂಡರು. ಒಂದು ದಿನ ಮುಖ್ಯೋಪಾಧ್ಯಾಯರು ಕಚೇರಿಗೆ ಕರೆಸಿದಾಗ ಹೆದರುತ್ತಲೇ ಹೋದರೆ, ಮುಖ್ಯೋಪಾಧ್ಯಾಯರು ‘ಏನಮ್ಮಾ ಚಂದಮಾಮಗೆ ಕಥೆ ಬರೆದಿದ್ದೀಯಾ’ ಎಂದು ತೋರಿಸಿದಾಗ ಇವರಿಗಾದ ಆನಂದ ಹೇಳತೀರದಾಗಿತ್ತು. ಅಂದು ಶಾಲೆಯ ಹುಡುಗರ ಬಾಯಲ್ಲೆಲ್ಲಾ ಇದೇಮಾತು.

ನಂತರ ತಂದೆಯ ಕಚೇರಿಗೆ ಬರುತ್ತಿದ್ದ ಕಕ್ಷಿದಾರರ ವ್ಯಾಜ್ಯದ ಘಟನೆಗಳು, ತಂದೆಯೊಡನೆ ಕೋರ್ಟಿಗೆ ಹೋಗಿ ವೀಕ್ಷಿಸುತ್ತಿದ್ದ ವಾದವಿವಾದಗಳು ಇವೆಲ್ಲವೂ ಸಾಮಾಜಿಕ ಕಥೆ ಬರೆಯಲು ಪ್ರೇರಣೆ ಹಾಗೂ ಮೂಲದ್ರವ್ಯವನ್ನೊದಗಿಸಿದವು. ಇವರು ಬರೆದ ಹಲವಾರು ಕಥೆಗಳು ತಾಯಿನಾಡು, ಪ್ರಜಾಮತ ಮತ್ತು ಜನಮನ (ಕೆ.ವಿ. ಶಂಕರಗೌಡರು ಮಂಡ್ಯದಿಂದ ಹೊರಡಿಸುತ್ತಿದ್ದ ವಾರಪತ್ರಿಕೆ) ಮುಂತಾದ ಪತ್ರಿಕೆಗಳಿಗೆ ಬರೆಯತೊಡಗಿದರು. ಹೀಗೆ ಬರೆದ ಸಣ್ಣ ಕಥೆಗಳು ‘ಸೋತುಗೆದ್ದವಳು’ ಸಂಕಲನದಲ್ಲಿ ಸೇರಿವೆ. ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಹೊಸ ಹಾದಿತೋರಿದ ಎಸ್‌.ವಿ. ರಂಗಣ್ಣನವರು ಇವರ ಚಿಕ್ಕಪ್ಪ.

ಇವರು ಬರೆದ ಮೊದಲ ಕಾದಂಬರಿ ‘ಹಣದ ಮಗಳು’ ೧೯೬೮ ರಲ್ಲಿ ಪ್ರಕಟಗೊಂಡಿತು. ನಂತರ ಅರಸಿ ಬಂದವಳು, ವಂಚಿತೆ, ನಿನಗಾಗಿ, ಆದರ್ಶ ಪುರುಷ, ಭಾಗ್ಯಜ್ಯೋತಿ, ಸ್ವರ್ಗ ಸನ್ನಿಧಿ, ಅಮೃತಮಯಿ, ಪ್ರೇಮದುಂಬಿ, ಮುಂತಾದ ೪೦ ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇವುಗಳಲ್ಲಿ ವಿಷದ ಒಡಲು, ಆಮುಖ, ಮುಗ್ಧಮಾನವ, ಬಂಗಾರ ಭೂಷಿತೆ, ಉದಾರಶೀಲ, ಅತಿಮಧುರ ಅನುರಾಗ, ನವ ವಸಂತ, ಮುರಳೀಗಾನ ಅಮೃತಪಾನ, ಕುಲದೀಪಕ ಮುಂತಾದ ಕಾದಂಬರಿಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಇವುಗಳಲ್ಲಿ ಭಾಗ್ಯಜ್ಯೋತಿ, ಮುಗ್ಧಮಾನವ, ಆ ಮುಖ (ಬಿಸಿಲು ಬೆಳದಿಂಗಳು) ಮುರಳೀಗಾನ …. ಮೊದಲಾದ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಖ್ಯಾತಿ ಪಡೆದಿವೆ. ಇದಲ್ಲದೆ ಫಣಿರಾಮಚಂದ್ರರವರ ನಿರ್ದೇಶನದ ‘ಹೂವೊಂದು ಬೇಕು ಬಳ್ಳಿಗೆ’ ಮತ್ತು ಶಿವಮಣಿ ನಿರ್ದೇಶನದ ‘ಸ್ವಾತಿ’ ಚಲನಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ದೇವಮಂದಿರ ಪ್ರೇಮಸಾಗರ, ಅತಿಮಧುರ ಅನುರಾಗ ಕಾದಂಬರಿಗಳು ಮೈಸೂರು ಆಕಾಶವಾಣಿಯಲ್ಲಿ ಧಾರಾವಾಹಿಯಾಗಿ ಬಿತ್ತರಗೊಂಡಿವೆ.

ನಾಟಕ ರಚನೆಯಲ್ಲಿಯೂ ಸಿದ್ಧ ಹಸ್ತರೆನಿಸಿರುವ ಮಂಗಳಾರವರು ಸಂಬಂಧ, ದೇವರ ಕೂಗು, ಸಹಚರ್ಯ, ಪಾಲಿಗೆ ಬಂದ ಪಂಚಾಮೃತ ಮುಂತಾದ ನಾಟಕಗಳು ಮೈಸೂರು ಆಕಾಶವಾಣಿಯಿಂದ ಪ್ರಸಾರಗೊಂಡಿದ್ದಲ್ಲದೆ ‘ಸಂಬಂಧ’ ನಾಟಕವು ಹಿಂದಿಭಾಷೆಗೂ ಅನುವಾದಗೊಂಡು ದೆಹಲಿಯ ರಾಷ್ಟ್ರೀಯ ಜಾಲದಲ್ಲಿಯೂ ಪ್ರಸಾರವಾಗಿದೆ.

ಮೈಸೂರು ದಸರಾ ಸ್ಮರಣ ಸಂಚಿಕೆ, ಇಳಾ, ಯಶಸ್ವಿನಿ, ಸ್ತ್ರೀಶಕ್ತಿ ಮೊದಲಾದ ಸಂಚಿಕೆಗಳನ್ನೂ ಜಿಲ್ಲಾ ಲೇಖಕಿಯರ ಸಂಘ, ಮಹಿಳಾ ಸಂಘಟನೆಗಳಿಗಾಗಿ ಸಂಪಾದಿಸಿಕೊಟ್ಟಿದ್ದಾರೆ.

ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಶ್ರೀಗಣೇಶ ಡ್ರಮ್ಯಾಟಿಕ್ಸ್‌, ರಂಜನಾ ಕಲಾರಂಗ, ಸ್ತ್ರೀಶಕ್ತಿಮಹಿಳಾ ಪ್ರತಿಷ್ಠಾನ ಮುಂತಾದವುಗಳ ಸ್ಥಾಪಕರಾಗಿ, ನಿರ್ದೇಶಕಿಯಾಗಿ, ಅಧ್ಯಕ್ಷೆಯಾಗಿ ಬಾಲಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿರುವುದಲ್ಲದೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥ ಆಯ್ಕೆ ಸಮಿತಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರ, ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದವುಗಳ ಸದಸ್ಯೆಯಾಗಿಯೂ ದುಡಿದಿದ್ದಾರೆ.

ಸಾಹಿತ್ಯ ಕಲಾ ಪ್ರಪೂರ್ಣೆ, ಕಾದಂಬರಿ ರತ್ನ, ಸಾಹಿತ್ಯ ಕಲಾ ಶಾರದೆ, ಸಾಹಿತ್ಯರತ್ನ, ಅತ್ತಿಮಬ್ಬೆ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ ಮುಂತಾದ ಪ್ರಶಸ್ತಿಗಳ ಜೊತೆಗೆ ೨೦೦೩ ರಲ್ಲಿ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಸತ್ಯಮಂಗಳಾ’.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.82 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *