ಭದ್ರಾಚಲ ರಾಮದಾಸರು

ರಾಮಾಯಣದ ಕಾಲದಿಂದಲೂ ನಮ್ಮ ಜನ ಶ್ರೀರಾಮನನ್ನು ದೇವರೆಂದು ನಂಬಿದ್ದಾರೆ. ಹಾಗೆ ನಂಬಿ ಆತನನ್ನು ಪೂಜಿಸುವ ರಾಮಭಕ್ತರನ್ನು ನಾವು ನಮ್ಮ ದೇಶದ ಎಲ್ಲ ಕಡೆಯಲ್ಲಿಯೂ ಕಾಣಬಹುದು. ನಂಬಿ ಕರೆದರೆ ದೇವರು ಬಂದೇ ಬರುತ್ತಾನೆ ಎಂದು ಸಾರುವ ಕಷ್ಟದಲ್ಲಿದ್ದ ಭಕ್ತರನ್ನು ಶ್ರೀರಾಮನು ಉದ್ಧಾರ ಮಾಡಿದ ಎಷ್ಟೋ ಕಥೆಗಳು ಪ್ರಚಾರದಲ್ಲಿವೆ. ಅಂತಹ ಕಥೆಗಳಲ್ಲಿ ಭದ್ರಾಚಲ ರಾಮದಾಸರ ಕಥೆಯೂ ಒಂದು.

ಶ್ರೀ ರಾಮನ ಆಶಿರ್ವಾದ: “ಭದ್ರಾಚಲ” ಎಂದರೆ ಭದ್ರ, ಎಂಬ ಹೆಸರಿನ ಒಂದು ಪರ್ವತ ಎಂದು ಅರ್ಥ. ಈ ಪರ್ವತ ಆಂಧ್ರಪ್ರದೇಶದ ಖಮ್ಮಮ್ಮ ಜಿಲ್ಲೆಯಲ್ಲಿದೆ. ಅದರ ಪಕ್ಕದಲ್ಲಿ ಗೋದಾವರಿ ನದಿ ಹರಿಯುತ್ತದೆ. ಈ ಪರ್ವತವನ್ನು ಕುರಿತು ಬ್ರಹ್ಮಾಂಡವೆಂಬ ಪುರಾಣದಲ್ಲಿ ಬಲು ಸುಂದರವಾದ ಒಂದು ಕಥೆಯಿದೆ. ಪರ್ವತಗಳ ರಾಜ ಅಮೇರು. ಅವನ ಹೆಂಡತಿ ಮೇನಕಿ, ಬ್ರಹ್ಮನ ವರದಿಂದ ಅವರಿಗೆ ಭದ್ರ ಎಂಬ ಮಗ ಹುಟ್ಟಿದ. ಪರ್ವತದ ಮಗ ಪರ್ವತವೇ ತಾನೆ! ಭದ್ರ ಪರ್ವತ ಬೆಳೇದು ದೊಡ್ಡವನದನು. ಅವನು ಗೋದಾವರಿ ನದಿಯ ತೀರದಲ್ಲಿ ಕುಳಿತು ಭಕ್ತಿಯಿಂದ ತಪಸ್ಸು ಮಾಡುತ್ತಿದ್ದನು.

ಭದ್ರನು ತಪಸ್ಸು ಮಾಡುತ್ತಿದ್ದ ಪ್ರದೇಶವು ದಟ್ಟವಾದ ಅರಣ್ಯವಾಗಿತ್ತು. ಅದಕ್ಕೆ ದಂಡಕಾರಣ್ಯವೆಂದು ಹೆಸರು. ಶ್ರೀರಾಮನು ತಂದೆ ಮಾತನ್ನು ಉಳಿಸುವುದಕ್ಕಾಗಿ ಕಾಡಿಗೆ ಹೊರಟನು. ರಾಮ, ಅವನ ಹೆಂಡತಿ ಸೀತೆ, ತಮ್ಮ ಲಕ್ಷ್ಮಣ- ಮೂವರು ಭದ್ರನು ತಪಸ್ಸು ಮಾಡುತ್ತಿದ್ಧ ಸ್ಥಳಕ್ಕೆ ಬಂದರು. ನಡೆದು- ನಡೆದು ಅವರಿಗೆ ಬಲು ಆಯಾಸಾವಾಗಿತ್ತು. ಆದ್ದರಿಂದ ಭದ್ರ ಪರ್ವತನೊಂದು ಬಂಡೆಯ ಮೇಲೆ ಕುಳಿತುಕೊಂಡರು. ಕೂಡಲೇ ಅವರಿಗೆ ಅಪೂರ್ವವಾದ ಶಾಂತಿ ದೊರೆಯಿತು. ಭದ್ರನ ತಪಸ್ಸೆ ಅದಕ್ಕೆ ಕಾರಣವೆಂದು ಶ್ರೀರಾಮನಿಗೆ ಅರ್ಥವಾಯಿತು. ಆತನು ಸಂತೋಷದಿಂದ, “ಭದ್ರಾ , ಇಲ್ಲಿ ಬಾ” ಎಂದು ಕರೆದನು. ಭದ್ರನು ಮುನಿರೂಪದಿಂದ ಆತನ ಬಳಿಗೆ ಬಂದು ಭಕ್ತಿಯಿಂದ ನಮಸ್ಕರಿಸಿದನು. ಶ್ರೀ ರಾಮನು “ಮಗು, ನಿನೇಕೆ ತಪಸ್ಸು ಮಾಡುತ್ತಿರುವೆ? ನಿನಗೇನು ಬೇಕು?” ಎಂದು ಕೇಳಿದನು. ಭದ್ರನು, “ಸ್ವಾಮಿ, ನೀನು ಸೀತೆ ಲಕ್ಷ್ಮಣರೊಡನೆ ಇಲ್ಲಿಯೇನೆಲೆಯಾಗಿ ನಿಲ್ಲಬೇಕು: ನನ್ನನ್ನೂ , ನಿನ್ನ ಭಕ್ತರನ್ನೂ ಉದ್ಧಾರಮಾಡಬೇಕು” ಎಂದು ಬೇಡಿಕೊಂಡನು. ಶ್ರೀರಾಮನು “ಆಗಲಿ” ಎಂದು ಅವನು ಕೇಳೀದ ವರವನ್ನು ಕರುಣಿಸಿದನು. ಮರು ನಿಮಿಷದಲ್ಲಿ ಅವರು ನಿಂತಿದ್ದ ಕಲ್ಲು ಸೀತಾರಾಮ ಲಕ್ಷ್ಮಣರ ಆಕಾರವನ್ನು ತಾಳಿತು. ಭದ್ರ ಎಂದರೆ ಮಂಗಳ ಎಂದರ್ಥ. ಮಂಗಳಕರವಾದ ಶ್ರೀರಾಮನ ಪಾದಗಳು ಪರ್ವತವನ್ನು ಮೆಟ್ಟಿದುದರಿಂದಲೂ ಆದಕ್ಕೆ ಭದ್ರಾ ಚಲವೆಂಬ ಹೆಸರು. ಸಾರ್ಥಕವಾಯಿತು.

ಭದ್ರಾಚಲದ ಶ್ರೀರಾಮನ ಪೂಜೆ: ಭದ್ರಾಚಲವು ದಟ್ಟವಾದ ಅಡವಿಯ ಮಧ್ಯದಲ್ಲಿ ಇದ್ದುದರಿಂದ ಬಹುಕಾಲದವರೆಗೆ ಮನುಷ್ಯರು ಯಾರೂ ಅಲ್ಲಿಗೆ ಹೋಗುವಂತಿರಲಿಲ್ಲ. ಆದ್ದರಿಂದ ಅಲ್ಲಿದ್ದ ಸೀತಾರಾಮ ಲಕ್ಷ್ಮಣರ ವಿಗ್ರಹಗಳನ್ನು ದೇವತೆಗಳು ಮತ್ತು ಋಷಿಗಳು ಮಾತ್ರ ಪೂಜಿಸುತ್ತಿದ್ದರು. ಮಾನವರಲ್ಲಿ ಮೊಟ್ಟ ಮೊದಲು ಆ ವಿಗ್ರಹಗಳನ್ನು ಕಂಡು ಪೂಜಿಸಿದವರು ಮಹಾಮಹಿಮರಾದ ಜಗದ್ಗುರು ಶ್ರೀ ಶಂಕರಾಚಾರ್ಯರಂತೆ! ಅವರು “ಶ್ರೀರಾಮ ಕರ್ಣಾಮೃತ” ಎಂಬ ಸ್ತೋತ್ರದಲ್ಲಿ ಅಲ್ಲಿನ ವಿಗ್ರಹಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಆ ವರ್ಣನೆಯ ಶ್ಲೋಕಗಳನ್ನು ಭದ್ರಾಚಲದ ರಾಮಭಕ್ತರು ನಿತ್ಯವೂ ಹಾಡಿಕೊಳ್ಳುತ್ತಾರೆ.

ಭದ್ರಾಚಲಕ್ಕೆ ಸುಮಾರು ಒಂದು ಮೈಲಿಯ ದೂರದಲ್ಲಿ ಭದ್ರ ರೆಡ್ಡಿ ಪಾಳ್ಯ ಎಂಬ ಒಂದು ಗ್ರಾಮವಿದೆ. ಈಗ ಸುಮಾರು ಮುನ್ನೂರೈವತ್ತು ವರ್ಷಗಳ ಹಿಂದೆ ಅಲ್ಲಿ ಬೇಢರು ವಾಸಿಸುತ್ತಿದ್ದರು. ಬೇಟೆಯೇ ಅವರ ಉದ್ಯೋಗ. ಆ ಬೇಡರಲ್ಲಿ ದಮ್ಮಕ್ಕ ಎಂಬ ಒಬ್ಬ ರಾಮಭಕ್ತಳು ಇದ್ದಳೂ. ಅವರ ಮನೆತನಕ್ಕೆ ಪೋಕಲ ಎಂದು ಹೆಸರು. ಆದ್ದರಿಂದ ಆಕೆಯನ್ನು “ಪೋಕದ ದಮ್ಮಕ್ಕ” ಎಂದು ಕರೆಯುತ್ತಿದ್ದರು. ಒಂದು ರಾತ್ರಿ ಶ್ರೀರಾಮನು ಆಕೆಯ ಕನಸಿನಲ್ಲಿ ಕಾಣಿಸಿಕೊಂಡು, “ಆಮ್ಮ, ನಾನು ಸೀತೆ ಲಕ್ಷ್ಮಣರೊಡನೆ ಭದ್ರಗಿರಿಯ ಮೇಲೆ ಇದ್ದೇನೆ. ಹತ್ತಿರದಲ್ಲಿಯೇ ಒಂದು ತಾಳೆಯ ಮರವಿದೆ. ಅದೇ ಗುರುತು. ನೀನು ದಿನವೂ ಅಲ್ಲಿಗೆ ಬಂದು ಪೂಜೆ ಮಾಡು” ಎಂದು ಹೇಳಿದಂತಾಯಿತು. ಬೆಳಗಾಗುತ್ತಲೇ ಆಕೆ ಇದನ್ನು ಹಳ್ಳೀಯವರಿಗೆಲ್ಲ ಹೇಳಿದಳು. ಆದ್ದರಿಂದ ಆಕೆಯ ಮಾತಿನಂತೆ ಅವರು ಅಡವಿಯನ್ನು ಸವರಿ ದಾರಿ ಮಾಡಿಕೊಳ್ಳುತ್ತಾ ಬೆಟ್ಟವನ್ನು ಹತ್ತಿದರು. ಆಕೆ ತಿಳಿಸಿದಂತೆ ಅಲ್ಲೊಂದು ತಾಳೆಯ ಮರ ಕಾಣಿಸಿತು. ಅದರ ಹತ್ತಿರದಲ್ಲಿ ಸೀತಲಕ್ಷ್ಮಣರ ವಿಗ್ರಹಗಳೂ ಕಾಣಿಸಿದವು. ಅವನ್ನು ಕಂಡು ಅವರಿಗೆಲ್ಲ ಬಹು ಸಂತೋಷವಾಯಿತು. ಭಕ್ತಳಾದ ದಮ್ಮಕ್ಕನ ಅಪೇಕ್ಷೆಯಂತೆ ಅವರು ಅಗಲೇ ಅಲ್ಲಿನ ಸೊಪ್ಪುಸದೆಗಳಿಂದ ವಿಗ್ರಹಗಳ ಮೇಲೆ ಒಂದು ಗುಡಿಸಲನ್ನು ಕಟ್ಟಿದರು. ಅದೇ ಭದ್ರಾಚಲದಲ್ಲಿ ಮೊಟ್ಟ ಮೊದಲ ರಾಮದೇವರ ಗುಡಿಯಾಯಿತು. ದಮ್ಮಕ್ಕ ದಿನವೂ ಅಲ್ಲಿಗೆ ಹೋಗಿ ಕಾಡು ಹೂಗಳಿಂದ ಪೂಜೆ ಮಾಡುತ್ತಾ ಮರದಿಂದ ಬಿದ್ದ ತಾಳೆಯ ಹಣ್ಣುಗಳನ್ನು ನೈವೇದ್ಯ ಮಾಡುತ್ತಿದ್ದಳು.

ಗೋಪನ್ನ: ದಮ್ಮಕ್ಕನ ಗುಡಿಸಲಿನಂತಿದ್ದ ಗುಡಿ ಇದ್ದ ಕಡೆಗೆ ಈಗ ದಿವ್ಯವಾದ ದೇವಾಲಯವಿದೆ. ಇದನ್ನು ಕಟ್ಟಿಸಿದ ಕೀರ್ತಿ ರಾಮದಾಸರಿಗೆ ಸಲ್ಲುತ್ತದೆ. ರಾಮದಾಸರೆಂಬ ಹೆಸರಿನಿಂದ ಪ್ರಸಿದ್ಧರಾದವರು ನಮ್ಮ ದೇಶದಲ್ಲಿ ಇಬ್ಬರು. ಒಬ್ಬರು ಸಮರ್ಥ ರಾಮದಾಸರು; ಆವರು ಛತ್ರಪತಿ ಶಿವಾಜಿ ಮಹಾರಾಜನ ಗುರುಗಳೂ. ಇಲ್ಲಿ ನಾವು ಹೇಳುತ್ತಿರುವುದು ಭದ್ರಾಚಲ ರಾಮದಾಸರ ಕಥೆಯನ್ನು. ಭದ್ರಾಚಲ ಮತ್ತು ರಾಮದಾಸರು- ಈ ಎರಡು ಹೆಸರುಗಳೂ ಒಂದೇ ಎನ್ನುವಷ್ಟು -ಅವೆರಡಕ್ಕೂ ಬಿಡದ ಸಂಬಂಧವಿದೆ. ಆದ್ದರಿಂದಲೇ ಇವರನ್ನು ಭದ್ರಾಚಲ ರಾಮದಾಸರು” ಎಂದು ಕರೆಯುವುದು.

ಇವರ ನಿಜವಾದ ಹೆಸರು ಗೋಪನ್ನ ಎಂದು. ಈ ಗೋಫನ್ನರು ರಾಮದಾಸರಾದ ಕಥೆ ಅತ್ಯಂತ ಮನೋಃರವಾಗಿದೆ. ಈ ಕಥೆ ನಡೆದುದು ಹದಿನೇಳನೇ ಶತಮಾನದ ಮಧ್ಯಭಾಗದಲ್ಲಿ.

ಭಧ್ರಾಚಲವಿರುವುದು ಖಮ್ಮಮ್ಮ ಜಿಲ್ಲೆಯಲ್ಲಿ ಎಂದು ಮೇಲೆಯೇ ಹೇಳಿದೆಯೆಷ್ಟೆ. ಆ ಕಾಲದಲ್ಲಿ ಆ ಜಿಲ್ಲೆಯು ಗೋಲ್ಕಂಡದ ನವಾಬನಿಗೆ ಸೇರಿತ್ತು. ಆ ಜಿಲ್ಲೆಯಲ್ಲಿ ನೆಲಕೊಂಡಪಲ್ಲಿ ಎಂಬ ಹೆಸರಿನ ಒಂದು ಗ್ರಾಮವಿದೆ. ಅಲ್ಲಿ ಲಿಂಗನಮಂತ್ರಿ ಮತ್ತು ಕಾಮಮ್ಮ ಎಂಬ ದಂಪತಿಗಳು ಇವರಿಗೊಬ್ಬ ಮಗ. ಅವನಿಗೆ ಗೋಪನ್ನ ಎಂದು ಹೆಸರಿಟ್ಟರು. ಮಗು ಮುದ್ದು ಮುದ್ದಾಗಿತ್ತು. ಹಳ್ಳಿಯವರೆಲ್ಲರ ಅಕ್ಕರೆಯ ಕೂಸಾಗಿ ಬೆಳೆದು ಬಾಲಕನಾಯಿತು. ಲಿಂಗನಮಂತ್ರಿ ಮಗನನ್ನು ಶಾಲೆಗೆ ಸೇರಿಸಿದ. ಚುರುಕು ಬುದ್ಧಿಯ ಗೋಪನ್ನ ಬಹು ಬೇಗ ತೆಲುವು,ಸಂಸ್ಕೃತಗಳನ್ನು ಕಲಿತು ದೊಡ್ಡ ಪಂಡಿತನಾದ. ಅಂದು ರಾಜಭಾಷೆಗಳಾಗಿದ್ದ ಉರ್ದು ಮತ್ತು ಪರ್ಷಿಯನ್ನ ಭಾಷೆಗಳಲ್ಲಿಯೂ ಆತ ವಿಧ್ವಾಂಸನಾದ. ಆಗ ಗೋಪನ್ನ ಕೇವಲ ೧೨-೧೩ ವರ್ಷದ ಹುಡುಗ.

ಗೋಪನ್ನನಿಗೆ ಎಳೆತನದಿಂದಲೂ ದೇವರಲ್ಲಿ ಬಹು ಭಕ್ತಿ. ಆತನ ಮನೆಯ ಹತ್ತಿರ ಒಂದು ಮಾರುತಿಯ ಗುಡಿಯಿತ್ತು. ಗೋಪನ್ನ ಮುಂಜಾನೆ, ಸಂಜೆ ದೇವರ ಪೂಜೆಗಾಗಿ ಹೂ, ತುಳಸಿಗಳನ್ನು ಬಿಡಿಸಿಕೊಡುವನು: ಗುಡಿಯಲ್ಲಿನ ಕಸ ಗುಡಿಸುವವನು: ಗುಡಿಯ ಸುತ್ತ ಪ್ರದಕ್ಷಿಣೆ ಮಾಡಿ, ದೇವರಿಗೆ ನಮಸ್ಕಾರ ಮಾಡುವನು: ಗುಡಿಗೆ ಬಂದ ಭಕ್ತರು ಹೇಳಿದ ಕೆಲಸಗಳನ್ನು ನಗುನಗುತ್ತ್ ಮಾಡುವನು. ಅಲ್ಲಿ ಭಕ್ತರು ಹಾಡುತ್ತಿದ್ದ ಕೀರ್ತನೆ ಗಳನ್ನು ಮೈಯೆಲ್ಲ ಕಿವಿಯಾಗಿ ಕೇಳುವನು: ಅವರಂತೆಯ ತಾನೂ ಹಾಡುತ್ತ ಆನಂದದಿಂದ ಕಣ್ಣೀರು ಕರೆಯುವನು. ಮೈಮರೆಯುವನು. ಅವನ ವಿದ್ಯೇ ವಿನಹ, ದೈವಭಕ್ತಿಗಳನ್ನು ಕಂಡು ಊರಿನ ಜನ ಅಚ್ಚರಿಗೊಳ್ಳುತ್ತಿದ್ದರು.

ದೇವರನ್ನು ಕಾಣಲು ಅಡ್ಡಿಯೇ?

ಗೋಪನ್ನ ಪ್ರಾಯಕ್ಕೆ ಬರುವ ಮೊದಲೇ ಆತನ ತಂದೆ-ತಾಯಿಗಳಿಬ್ಬರೂ ಕಾಲವಾದರು. ಆದರೆ ನೆಲಕೊಂಡಪಲ್ಲಿಯ ಜನ ಗೋಪನ್ನನನ್ನು ತಬ್ಬಲಿಯಾಗುವುದಕ್ಕೆ ಬಿಡಲಿಲ್ಲ. ಅವರ ಆದರ, ಉಪಚಾರ, ಪ್ರೇಮಗಳಿಂದ ಆತನು ತನ್ನ ದುಃಖವನ್ನು ಬಹು ಬೇಗ ಮರೆತನು. ತನ್ನ ಒಂದು ಮನೆಗೆ ಬದಲಾಗಿ ಹತ್ತಾರು ಮನೆಗಳು ಆತನದಾದುವು. ಆತನು ಹಾರುವ ಹಕ್ಕಿಯಂತೆ ನಿರಾಳವಾಗಿದ್ದುಕೊಂಡು, ದೇವರ ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದನು.

ಹೀಗೆ ಕೆಲವು ವರ್ಷಗಳು ಉರುಳಿದವು. ಒಂದು ಸಲ ಆ ಊರಿನವರೆಲ್ಲ ರಾಮೋತ್ಸವವನ್ನು ವಿಜೃಂಭಣೆಯಿಂದ ನಡೆಸಬೇಕೆಂದು ನಿಶ್ಚಯಿಸಿದರು. ಊರಿನಲ್ಲಿದ್ದ ರಾಮದೇವರ ಗುಡಿಯಲ್ಲಿ ಚೈತ್ರ ಶುದ್ಧ ಪಾಡ್ಯದಿಂದ ನವಮಿಯವರೆಗೆ ವಿಶೇಷ ಪೂಜೆ ನಡೆಯಿತು. ಹಗಲೂ ರಾತ್ರಿ ರಾಮಭಜನೆ ಅಥವಾ ಹರಿಕಥೆ ಅಥವಾ ಸಂಗೀತ, ಗೋಪನ್ನನಿಗೆ ಬಿಡುವಿಲ್ಲದ ಸಡಗರ. ಎಲ್ಲೆಲ್ಲಿಯೂ ಆತನ ಓಡಾಟ, ಸೇವೆ. ಈ ವೈಭವವನ್ನು ನೋಡಲು ಸುತ್ತಮುತ್ತಲಿನ ಊರುಗಳಿಂದ ಮಾತ್ರವೇ ಅಲ್ಲದೇ ದೂರದ ಊರುಗಳಿಂದಲೂ ಜನರು ತಂಡ- ತಂಡವಾಗಿ ಬರುತ್ತಿದ್ದರು.

ಅಂದು ರಾಮೋತ್ಸವದ ಕಡೆಯ ದಿನ. ರಾಮದೇವರ ಗುಡಿಯ ಮುಂದೆ ಜನರು ಕಿಕ್ಕಿರಿದು ನೆರೆದಿದ್ದಾರೆ. ಅವರ ಮಧ್ಯದಲ್ಲಿ ಒಬ್ಬ ಮುಸಲ್ಮಾನ ಸಂತನು ಸೇರಿಕೊಂಡಿದ್ದನು. ಆತನಿಗೆ ಗುಡಿಯನ್ನು ಹೊಕ್ಕು, ದೇವರನ್ನು ದರ್ಶನ ಮಾಡಬೇಕೆಂದು ಆಶೆ. ಆದರೆ ಅಲ್ಲಿದ್ದ ಜನ ಮುಸಲ್ಮಾನನಾದ ಆತನನ್ನು ಒಳಗೆ ಬಿಡಲಿಲ್ಲ. ಆಗ ಆತನು ಗಳಗಳ ಅಳುತ್ತಾ, “ತಂದೆ ರಾಮಚಂದ್ರಾ! ಪ್ರಭೋ, ಸೀತಾರಾಮ! ಇದೆಂತಹ ಅನ್ಯಾಯ? ನಿನ್ನ ದರ್ಶನಕ್ಕೆ ಅಡ್ಡಿಯೇ?” ಎಂದು ಗಟ್ಟಿಯಾಗಿ ಕೂಗಿಕೊಂಡನು. ಗುಡಿಯಲ್ಲಿದ್ದ ಗೋಪನ್ನನಿಗೆ ಇದು ಕೇಳಿಸಿತು. ಆತನು ಹೊರಕ್ಕೆ ಓಡಿ ಬಂದನು. ಆ ಮುಸ್ಲಮಾನ ಸಾಧುವಿನ ಎತ್ತರವಾದ ಆಕಾರ, ಭವ್ಯವಾದ ನಿಲುವು, ದಿವ್ಯವಾದ ತೇಜಸ್ಸು- ಇವು ಗೋಪನ್ನನ ಹೃದಯವನ್ನು ಸೆರೆಹಿಡಿದವು. “ಆ ಸಾಧುವು ದೇವರನ್ನು ಕಂಡವನಿರಬೇಕು” ಎಂದು ಆತನ ಮನಸ್ಸು ಹೇಳೀತು. ಆತನು ಅಲ್ಲಿನ ಜನರನ್ನು ಕುರಿತು, “ಅಣ್ಣಗಳಿರಾ, ಆಕಾಶವನ್ನು ನೋಡುವುದಕ್ಕೆ ನೂಕುನುಗ್ಗಲೇ? ದೇವರನ್ನು ಕಾಣಲು ಅಡ್ಡಿಯೇ? ಬೇಡ ಬೇಡ. ನಾನು ನಿಮಗೆ ಅಡ್ಡ ಬಿದ್ದು ಕೇಳಿಕೊಳ್ಳುತ್ತೇನೆ. ಈ ಸಾಧುವನ್ನು ಒಳಗೆ ಬಿಡಿ” ಎಂದು ಕೇಳಿಕೊಂಡನು. ಜನರು ಗೋಪನ್ನನ ಮಾತನ್ನು ಮನ್ನಿಸಿ, ಸಾಧುವನ್ನು ಒಳಗೆ ಬಿಟ್ಟರು. ಗೋಪನ್ನನು ಆತನ ಕೈಹಿಡಿದು ಕರೆದುಕೊಂಡು ಹೋಗಿ, ದೇವರ ಇದಿರಿನಲ್ಲಿ ಕೂಡಿಸಿದನು. ಸಾಧುವು ದೇವರಿಗೆ ನಮಸ್ಕರಿಸಿ, ತನ್ನ ಕೋಗಿಲೆಯಂತಹ ಕಂಠದಿಂದ ಶ್ರೀರಾಮನ ಕೀರ್ತನೆಯನ್ನು ಹಾಡತೊಡಗಿದನು. ಎಲ್ಲರೂ ಮೈಮರೆತು ಅದನ್ನು ಕೇಳುತ್ತಿದ್ದರು.

“ಮೈಲಿಗೆಯಾದ ಕಡೆ ದೇವರು ಹೇಗಿದ್ದಾನು?”

ಅಷ್ಟರಲ್ಲಿ ಶಿವಪೂಜೆಯ ನಡೆವೆ ಕರಡಿ ಬಂದ ಹಾಗೆ ಗುಡಿಯ ಧರ್ಮಾಧಿಕಾರಿಯೂ ಅಲ್ಲಿಗೆ ಬಂದನು. ಗುಡಿಯನ್ನು ಹೊಕ್ಕಿದ ಮುಸಲ್ಮಾನನ್ನು ಕಂಡು ಆತನು ಕೋಪದಿಂದ ಕಿಡಿ-ಕಿಡಿಯಾದನು. ಆತನು ತುಟಿಯನ್ನು ಕಚ್ಚಿ, ಆ ಸಾಧುವನ್ನು ಹೇಳದೇ ಕೇಳದೇ ರಟ್ಟೆಯನ್ನು ಹಿಡಿದು ಹೊರಕ್ಕೆ ಎಳೆದು ಹಾಕಿನು. ಅಲ್ಲಿದ್ದವರೆಲ್ಲ ಆ ಅಧಿಕಾರಿಗೆ ಹೆದರಿ ಈ ಅನ್ಯಾಯವನ್ನು ನೋಡುತ್ತ ಸುಮ್ಮನಿದ್ದರು.

ಸಾಧುವನ್ನು ಎಳೆದು ಹಾಕಿದ ಧರ್ಮಾಧಿಕಾರಿ ಬಹು ದೊಡ್ಡ ಕೆಲಸವನ್ನು ಸಾಧಿಸಿದನಂತೆ ಗಂಭೀರವಾದ ದನಿಯಿಂದ, “ಮುಸಲ್ಮಾನನು ಹೊಕ್ಕು ಗುಡಿಯೆಲ್ಲ ಹೊಲೆಯಾಯಿತು. ಇದನ್ನು ಈಗಲೇ ಶುದ್ಧಿ ಮಾಡಿಸಬೇಕು. ಪುರೋಹಿತರನ್ನು ಕರೆ. ಇಂತಹ ಮೈಲಿಗೆಯಾದ ಕಡೆ ದೇವರು ಹೇಗಿದ್ದಾನು?” ಎಂದು ಹೇಳುತ್ತಾ ಹುಂಜದಂತೆ ಕತ್ತೆತ್ತಿ ದೇವರ ಕಡೆ ನೋಡಿದನು.

ಎಲ ಎಲ ! ಅಲ್ಲಿ ಸೀತಾ ಲಕ್ಷ್ಮಣರ ವಿಗ್ರಹಗಳೇ ಇಲ್ಲ! ಅವನ ಬಾಯಿಂದ ಮಾತು ನಿಜವಾಗಿ ಹೋಗಿತ್ತು!

ಮುಂದೇನು ಗತಿ! ಅವನಿಗೆ ಸಿಡಿಲುಬಡಿದಷ್ಟು ಭಯವಾಯಿತು. ಮುಸಲ್ಮಾನನು ಅಲ್ಲಿಗೆ ಬಂದುದರಿಂದಲೇ ಹೀಗಾಯಿತೆಂದು ಅವನ ಭಾವನೆ ಅವನು ಕೋಪದಿಂದ ಅಲ್ಲಿದ್ದ ಜನರನ್ನೆಲ್ಲ ಬಾಯಿಗೆ ಬಂದಂತೆ ಬೈದನು. ಎಲ್ಲರೂ ಹೆದರಿ ಸುಮ್ಮನಿದ್ದರು. ಆಗ ಗೋಪನ್ನ ಧೈರ್ಯದಿಂದ ಆತನ ಬಳಿಗೆ ಹೋಗಿ, “ಸ್ವಾಮಿ, ನೀವು ಎಳೆದು ಹಾಕಿದ ಮನುಷ್ಯ ಭಕ್ತಿಯಲ್ಲಿ ಮಹಾನುಭಾವ. ನೀವು ಆತನನ್ನು ಓಡಿಸಿದುದರಿಂದ ದೇವರೂ ಆತನ ಹಿಂದೆಯೇ ಓಡಿ ಹೋಗಿರಬೇಕು. ಈಗಲೂ ಕಾಲ ಮಿಂಚಿಲ್ಲ. ಆ ಸಾಧುವನ್ನು ಹಿಂದಕ್ಕೆ ಕರೆತರೋಣ. ಆಗ ನಮ್ಮ ದೇವರೂ ಹಿಂದಕ್ಕೆ ಬಂದಾನು!” ಎಂದು ಹೇಳಿದನು. ಅಹಂಕಾರಿಯಾದ ಆ ಆಧಿಕಾರಿಗೆ ಗೋಪನ್ನನ ಮಾತು ನುಂಗಲಾರದ ತುತ್ತಾಗಿತ್ತು. ಆದರೆ ಮಾಡುವುದೇನು? ಹೋದ ವಿಗ್ರಹಗಳು ಹಿಂದಕ್ಕೆ ಬಂದರೆ ಸಾಕು ಎನ್ನಿಸಿತ್ತು. ಆದ್ದರಿಂದ “ಏನಾದರೂ ಮಾಡಿಕೊಳ್ಳಿ” ಎಂದು ಗೊಣಗಿಕೊಂಡನು.

ಗೋಪನ್ನ ತನ್ನ ಗೆಳೆಯರೊಡನೆ ಅ ಸಾಧುವನ್ನು ಹುಡುಕಿಕೊಂಡು ಹೊರಟ. ಊರ ಮುಂದಿನ ಅರಳೀ ಮರದ ಕೆಳಗೆ ಆ ಸಾಧುವು ಶ್ರೀ ರಾಮನಾಮವನ್ನು ಸ್ಮರಿಸುತ್ತ ಹಾಡುತ್ತ ಕುಳಿತ್ತಿದ್ದನು. ಆವರು ಆತನಿಗೆ ಅಡ್ಡ ಬಿದ್ದು ಆತನನ್ನು ಮತ್ತೇ ಗುಡಿಗೆ ಕರೆ ತಂದರು. ಆತನು ಅಲ್ಲಿ ಕುಳಿತು ಹಿಂದೆ ಹಾಡುತ್ತಿದ್ದ ಕೀರ್ತನೆಯನ್ನೇ ಮುಂದುವರೆಸಿದನು. ಆತನ ಹಾಡು ಮುಗಿಯುತ್ತಿದ್ದಂತೆಯೇ ಅಲ್ಲಿ ಮುಂಚಿ ಮಿಂಚಿದಂತಾಯಿತು. ಎಲ್ಲರ ಕಣ್ಣುಗಳು ಮುಚ್ದಿದವು. ಅವರು ಕಣ್ಣು ತೆರೆದಾಗ ದೇವರ ವಿಗ್ರಹಗಳೂ ಎಂದಿನಂತೆಯೇ ಇದ್ದ ಕಡೆಯೇ ಇದ್ದವು.

ಉಳಿದದ್ದು ರಾಮಭಕ್ತಿಯೊಂದೇ !

ಗುಡಿಯಲ್ಲಿ ಉತ್ಸವ, ಪೂಜೆಗಳು ಮುಂದುವರೆದವು. ಆದರೆ ಗೋಫನ್ನನ್ನ ಮನಸ್ಸು ಮಾತ್ರ ಮುಸಲ್ಮಾನ ಸಾಧುವಿನತ್ತ ತಿರುಗಿತು. ತನಗೆ ದಾರಿ ತೋರುವ ಒಬ್ಬ ಗುರುವನ್ನು ಕರುಣಿಸೆಂದು ಆತನು ಬಹುಕಾಲದಿಂದ ಶ್ರೀರಾಮನನ್ನು ಬೇಡುತ್ತಿದ್ದನು. ಈ ಸಾಧುವನ್ನು ಶ್ರೀರಾಮನೇ ತನ್ನ ಬಳೀ ಕಳಿಸಿರಬೇಕೆಂದು ಆತ ಭಾವಿಸಿದನು. ಆದ್ದರಿಂದ ಆತನು ಆ ಸಾಧುವಿನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, “ನೀನಾರು ಮಹಾತ್ಮ? ನನ್ನನ್ನು ಕೈ ಹಿಡಿದು ಕಾಪಾಡು” ಎಂದು ಬೇಡಕೊಂಡನು. ಸಾಧುವು ಆತನ ಕೈ ಹಿಡಿದು, ಗುಡಿಯಿಂದ ಹೊರಕ್ಕೆ ಬಂದನು. ಅವರಿಬ್ಬರೂ ಅಲ್ಲಿಂದ ನಡೆದು, ಯಾರು ಇಲ್ಲದೊಂದು ಸ್ಥಳಕ್ಕೆ ಬಂದರು. ಅಲ್ಲಿ ಆ ಸಾಧುವು, “ಮಗು, ನಾನು ರಾಮಭಕ್ತನಾದ ಕಬೀರ‍್. ನಿನ್ನ ರಾಮಭಕ್ತಿಯನ್ನು ಕೇಳಿ, ನಿನ್ನನ್ನು ನೋಡುವುದಕ್ಕಾಗಿ ಬಂದೆ.ನಿನ್ನ ಭಕ್ತಿ, ನಿಷ್ಠೆ, ವಿನಯಗಳನ್ನು ಕಂಡು ಸಂತೋಷವಾಯಿತು. ಶ್ರೀರಾಮನಾಮದ ಮಂತ್ರವನ್ನು ನಿನಗೆ ಉಪದೇಶ ಮಾಡುತ್ತೇನೆ. ಅದನ್ನು ಜಪಿಸುತ್ತಾ ಹೋಗು. ಇದರಿಂದ ನೀನೂ ಉದ್ದಾರವಾಗುತ್ತೀ, ಲೋಕವನ್ನೂ ಉದ್ದಾರ ಮಾಡುತ್ತೀ” ಎಂದು ಹೇಳಿ ಆ ಮಂತ್ರವನ್ನು ಉಪದೇಶಿಸಿದನು. ಆ ಮೇಲೆ ಆತನ ತಲೆಯ ಮೇಲೆ ಕೈಯಿಟ್ಟು ಹರಸಿ, ಅಲ್ಲಿಂದ ಹೊರಟು ಹೋದನು.

ಕಬೀರನಿಂದ ಉಪದೇಶವನ್ನು ಪಡೆದ ಮೇಲೆ ಗೋಪನ್ನನ ನಡವಳೀಕೆ ಸಂಪೂರ್ಣವಾಗಿ ಬದಲಾಯಿಸಿತು. ಜನರ ಮಧ್ಯದಲ್ಲಿ ಯಾವಾಗಲೂ ನಕ್ಕು ನಲಿಯುತ್ತ ಓಡಾಡುತ್ತಿದ್ದವನು ಈಗ ಜನರಿಂದ ಸದಾ ದೂರವಾಗಿರಲು ಪ್ರಾರಂಭಿಸಿದನು. ಜನರೊಡನೆ ಮಾತಿಲ್ಲ. ಕಥೆಯಿಲ್ಲ. ನಿಂತಲ್ಲಿ, ಕೂತಲ್ಲಿ ಜಪ; ಅತನ ಕಣ್ಣು ತೆರೆದಿದ್ದರೂ ಏನನ್ನೂ ನೋಡುವುದಿಲ್ಲ; ಕಿವಿಗೆ ಇತರರ ಮಾತು ಕೇಳಿಸುವುದಿಲ್ಲ: ಒಮ್ಮೊಮ್ಮೆ ಕಾರಣವಿಲ್ಲದೆ ನಗುವನು. ಮತ್ತೊಮ್ಮೆ ಕಾರಣವಿಲ್ಲದೇ ಅಳುವನು. ಆತನಿಗೆ ಹಸಿವೆ ಕಾಣದು, ಬಾಯಾರಿಕೆ ಕಾಣದು. ಬಲವಂತವಾಗಿ ಯರಾದರೂ ಆತನನ್ನು ಹಿಡಿದು ಊಟವನ್ನು ಮಾಡಿಸಬೇಕು. ತನ್ನ ಮನೆಗೆ ಹೋದರೆ ಇಲ್ಲದಿದ್ದರೆ ಇಲ್ಲ. ಮರದ ಕೆಳಗೋ ಕಂಡವರ ಮನೆಯ ಬಾಗಿಲಿನಲ್ಲಿಯೋ ಮಲಗುವನು. ಆತನ ಬಟ್ಟೆಗಳು ಮಾಡಸಿದವು, ತಲೆ ಕೆದರಿತು. ನೋಡುವವರಿಗೆ ಆತನು ಹುಚ್ಚನಂತೆ ಕಾಣಿಸುತ್ತಿದ್ದನು,. ಜನರಿಗೆ ಆತನು ಒಂದು ಸಮಸ್ಯೆಯಾದನು. ಆತನಿಗೆ ಏನಾಗಿದೆ? ತಂದೆ ತಾಯಿಗಳು ಹೋದ ದುಃಖವೇ? ಮದುವೆಯಾದರೆ ಸರಿ ಹೋದಾನೆ?

ದೇವರು ತನ್ನ ಭಕ್ತರ ಐಶ್ವರ್ಯವನ್ನೆಲ್ಲ ಕಿತ್ತುಕೊಳ್ಳುತ್ತಾನಂತೆ! ಗೋಪನ್ನನ್ನಿಗೆ ಬಹು ಬೇಗ ಇದರ ಅನುಭವವಾಯಿತು ದೇಶದಲ್ಲಿ ಬರ ಬಂದಿತು. ಜನರು ಹೊಟ್ಟೆಗಿಲ್ಲದೆ ಸಂಕಟ ಪಡುತ್ತಿದ್ದರು. ಗೋಪನ್ನನ್ನಿಗೆ ಇದನ್ನು ನೋಡಿ ಸುಮ್ಮನಿರಲು ಆಗಲಿಲ್ಲ: ಕೇಳದವರಿಗೆ ಕೆಳಿದುದನ್ನು ಕೊಟ್ಟಿದ್ದರಿಂದ ಆತನ ಮನೆ ಬರಿದಾಯಿತು. ಕೆಲವು ಮೋಸಗಾರರು ಆತನ ಹೊಲ,ಗದ್ದೆಗಳನ್ನೆಲ್ಲ ತಮ್ಮದಾಗಿ ಮಾಡಿಕೊಂಡರು. ಗೋಪನ್ನ ಎಲ್ಲವನ್ನೂ ಕಳೆದುಕೊಂಡು ಭಿಕಾರಿಯಾದ. ಆತನಿಗೆ ಉಳಿದುದು ರಾಮಭಕ್ತಿಯೊಂದೆ. ಇದನ್ನು ಕಂಡು ಊರಿನ ಜನ ತುಂಬಾ ಮರುಗಿದರು.

ಶ್ರೀ ರಾಮನಾಮವನ್ನು ಜಪಿಸುತ್ತ ಹೋಗು
ಶ್ರೀ ರಾಮನಾಮವನ್ನು ಜಪಿಸುತ್ತ ಹೋಗು

ಸೋದರ ಮಾವಂದಿರ ವಾತ್ಸಲ್ಯ: ಗೋಪನ್ನನಿಗೆ ಇಬ್ಬರು ಸೋದರ ಮಾವಂದಿರಿದ್ದರು. ಅವರ ಹೆಸರು ಅಕ್ಕನ್ನ, ಮಾದನ್ನ ಎಂದು. ಅವರು ಗೋಲ್ಕಂಡದ ನವಾಬದಲ್ಲಿ ಮಂತ್ರಿಗಳಾಗಿದ್ದರು. ಅವರಿಗೆ ಗೋಪನ್ನ ದಿಕ್ಕಿಲದವನಂತೆ ಅಲೆಯುತ್ತಿರುವುದು ತಿಳಿಯಿತು. ಅದನ್ನು ಕೇಳೀ ಅವರಿಗೆ ಬಲು ಸಂಕಟವಾಯಿತು. ಆತನನ್ನು ಗೋಲ್ಕಂಡಕ್ಕೆ ಕರೆಸಿಕೊಂಡರು. ಸೋದರಿಳಿಯನ ದುಃಸ್ಥಿತಿಯನ್ನು ಕಂಡ ಅಕ್ಕನ್ನ, ಮಾದನ್ನರ ಕಣ್ಣೀರು ಸುರಿಸುತ್ತಾ, “ಮಗು, ನೀಣು ಎಷ್ಟು ಬಡವಾಗಿರುವೆ! ನಾವು ಬದುಕಿರುವಾಗ ನಿನಗೆ ಇಷ್ಟ ಕಷ್ಟವೇ? ಇನ್ನು ಮುಂದೆ ನೀನು ಎಲ್ಲಿಯೂ ಹೋಗಬೇಡ: ಇಲ್ಲಿಯೇ ಇರು. ನಿನ್ನ ವಂಶಕ್ಕೆ ಇರುವವನು ನೀನೊಬ್ಬನೇ. ನಿನ್ನಿಂದ ನಿನ್ನ ವಂಶ ಬೆಳೆಯಬೇಕು” ಎಂದು ಹೇಳಿದರು. “ಗೋಪನ್ನ ಹಾಗೆಯೇ ಆಗಲಿ” ಎಂದು ಅವರ ಮನೆಯಲ್ಲಿಯೇ ನಿಂತನು.

ಮಾವಂದಿರ ಮನೆಯಲ್ಲಿ ಗೋಫನ್ನ ಹೊಸ ಮನುಷ್ಯನಾದನು. ಅಲ್ಲಿನ ಆದರ, ಉಪಚಾರಗಳಿಂದ ಅತನಲ್ಲಿ ಲವಲವಿಕೆ ಹುಟ್ಟಿತ್ತು. ಮೊದಲೇ ಸುಂದರನಾಗಿದ್ದ ಆತ, ಈಗ ಪ್ರಾಯಕ್ಕೆ ಕಾಲಿಡುತ್ತಿದ್ದುದರಿಂದ ಮತ್ತಷ್ಟು ಸುಂದರನಾಗಿ ಕಾಣಿಸಿದ. ಆತನ ವಿದ್ಯೆ, ವಿನಯ, ದೈಭಕ್ತಿಗಳನ್ನು ಕಂಡು ಸೋದರ ಮಾವಂದಿರು ಇಬ್ಬರು ಹಿಗ್ಗಿದರು. ಮಾದನನ್ನಿಗೆ ಮದುವೆಯ ವಯಸ್ಸಿನ ಮಗಳೋಬ್ಬಳಿದ್ದಳೂ. ಆತನು ಆಕೆಯನ್ನು ಗೋಪನ್ನನಿಗೆ ಕೊಟುಟ ಮದುವೆ ಮಾಡಿದನು. ತಮ್ಮನವಾಬನಿಗೆ ಹೇಳಿ ಗೋಪನ್ನನಿಗೆ ಒಂದು ಒಳ್ಳೆಯ ನೌಕರಿಯನುನ ಕೊಡಿಸಬೇಕೆಂದು ಮಾದನ್ನ, ಅಕ್ಕನ ನಿಶ್ಚಯಿಸಿದರು.

ನನ್ನ ತಪ್ಪನ್ನು ಮನ್ನಿಸಿ, ನಿಮ್ಮ ಯೋಗ್ಯತೆಯನ್ನು ತಿಳಿಯದೇ ಸಂಕಟ ಪಡಿಸಿದೆ"
ನನ್ನ ತಪ್ಪನ್ನು ಮನ್ನಿಸಿ, ನಿಮ್ಮ ಯೋಗ್ಯತೆಯನ್ನು ತಿಳಿಯದೇ ಸಂಕಟ ಪಡಿಸಿದೆ”

ನವಾಬ ಅಧಿಕಾರಿ: ಗೋಲ್ಕಂಡ ರಾಜ್ಯದಲ್ಲಿ ಆಗ ಅಬೂಬ್ ಹಸನ್ ಕುತುಬ್ ಷಾಹಿ ಎಂಬ ಹೆಸರಿನ ನವಾಬನು ರಾಜ್ಯಭಾರ ಮಾಡುತ್ತಿದ್ದನು. ಜನರು ಆತನನ್ನು “ತಾನೀಷಾ” ಎಂದು ಕರೆಯುತ್ತಿದ್ದರು. ತಾನೀಷಾ ಎಂದರೆ ಒಳ್ಳೆಯ ರಾಜ ಎಂದು ಅರ್ಥ. ಆ ಹೆಸರಿಗೆ ತಕ್ಕಂತೆ ಆತನು ಬಲು ಒಳ್ಳೆಯ ರಾಜನಾಗಿದ್ದನು. ಅಕ್ಕನ್ನ, ಮಾದನ್ನರ ಗೋಪನನ್ನನ್ನು ಆತನ ಬಳಿಗೆ ಕರೆದುಕೊಂಡು ಹೋದರು. ಆತನು ಮಾದನನ್ನ ಆಳಿಯನೆಂಬುವುದನ್ನು ಕೇಳಿ ತಾನಿಷ ನಿಗೆ ಸಂತೋಷವಾಯಿತು. ಅಳಿಯನಿಗೆ ಒಂದು ಉದ್ಯೋಗವನ್ನು ಕೊಟ್ಟು ಕಾಪಾಡಬೇಕೆಂದು ಅವರು ಆತನನ್ನು ಬೇಡಿದರು. ಆಗ ತಾನಿಷ್ ನು, “ಮಂತ್ರಿಗಲೇ. ನೀವು ನಮ್ಮವರು. ಆದ್ದರಿಂದ ನಿಮ್ಮ ಆಳಿಯನೂ ನಮ್ಮವನೇ. ಎಲ್ಲಿ ಉದ್ಯೋಗಕ್ಕೆ ಅವಕಾಶವಿದ್ದರೆ ಅಲ್ಲಿ ಆತನನ್ನು ನೇಮಿಸಿ ಬಿಡಿ” ಎಂದನು. ಒಡನೆಯೇ ಗೋಪನನ್ನು ಖಮ್ಮಮ್ಮ ಜಿಲ್ಲೆಯ ಮುಖ್ಯ ಕಾರ್ಯಲಯದಲ್ಲಿ ಒಬ್ಬ ಸಣ್ಣ ಅಧಿಕಾರಿಯಾಗಿ ನೇಮಿಸಲಾಯಿತು. ತಾನೀಷನು ಆತನನ್ನು ಕುರಿತು, “ಗೋಪನ್ನ, ನಿನ್ನ ಕೆಲಸದಲ್ಲಿ ಜಾಗರೂಕನಾಗಿರು. ನಿನಗೂ ನಿನ್ನ ಮಾವಂದಿರಿಗೂ ಕೀರ್ತಿ ಬರುವಂತೆ ನೋಡಿಕೋ! ನಮಗೆ ಸಂತೋಷವಾಗುತ್ತದೆ” ಎಂದನು.

ಗೋಪನ್ನನನಿಗೆ ವೇಳೆಗಾಗಲೇ ಒಂದು ಮಗುವಾಗಿತ್ತು. ಅದನ್ನು ತನ್ನ ಇಷ್ಟ ಬಂದ ದೈವದ ಹೆಸರಿನಲ್ಲಿ “ರಘುರಾಮ? ಎಂದು ಕರೆದನು. ಹೆಂಡತಿ ಮತ್ತು ಮಗನೊಡನೆ ಮಾವನ ಮನೆಯಲ್ಲಿ ಉದ್ಯೋಗವಿಲ್ಲದೆ ಕುಳಿತು ತಿನ್ನುವುದು ಆತನಿಗೆ ಬೇಸರವಾಗಿತ್ತು. ಶ್ರೀ ರಾಮಚಂದ್ರನ ದಯೆಯಿಂದ ಉದ್ಯೋಗ ದೊರೆಯಲು, ಆತನ ಹೆಂಡತಿ ಮತ್ತು ಮಗುವಿನೊಡನೆ ಖಮಮ್ಮಗೆ ಹೊರಟನು. ಅಲ್ಲಿ ಕೆಲವು ಕಾಲ ಕಳೆಯಿತು. ಗೋಪನ್ನನನು ಪ್ರಾಮಾಣಿಕನಾಗಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದನು. ಆದನ್ನ ಕಂಡು ಮೆಚ್ಚಿದ ತಾನೀಷನು ಆತನನ್ನು ಹಸನಸಾಅಬ್ ಎಂಬ ಪರಗಣೆಯ ಮುಖ್ಯಾಧದಿಕಾರಿಯಾಗಿ ನೇಮಿಸಿದನು. ಆ ಪರಗಣೆಗೆ ಪಾಲ್ವಂಚ, ಬುರ್ಗುಂಪಾಡು, ಭದ್ರಾಚಲ, ಎಂಬ ಮೂರು ತಾಲ್ಲೂಕುಗಳು ಸೇರಿದ್ದವು. ಪಾಲ್ವಂಚವು ಅವುಗಳ ಮುಖ್ಯ ಸ್ಥಳ. ಗೋಪನ್ನನು ಅಲ್ಲಿಗೆ ಹೋಗಿ ತನ್ನ ಸಂಸಾರವನ್ನು ಹೂಡಿದನು.

ಹಸನಾಬಾದ್ ಪರಗಣೆಯಲ್ಲಿ ಕಂದಾಯ ಬಹಳವಾಗಿ ಬಾಕಿ ಬಿದ್ದಿತ್ತು. ಅದನ್ನು ವಸೂಲಿ ಮಾಡುವ ಹೊಣೆ ಗೋಪನ್ನನ ಮೇಲೆ ಬಿತ್ತು. ಇದು ಬಹು ಕಷ್ಟಕರವಾದ ಕೆಲಸವಾಗಿತ್ತು. ಆದರೆ ಗೊಪನ್ನ ದೇವರ ಮೇಲೆ ಭಾರ ಹಾಕಿ ತನ್ನ ಕೆಲಸಕ್ಕೆ ಕೈಹಾಕಿದನು. ಆತನು ಬಹು ದಯಾಳುವಾಗಿದ್ದನು. ಆತನ ಒಳ್ಳೆಯತನವನ್ನು ಕಂಡು ಜನರು ಕರಗಿ ಹೋದರು. ಆ ಪರಗಣೆಯಿಂದ ಬರಬೇಕಾಗಿದ್ದ ಕಂದಾಯ ಸುಲಭವಾಗಿಯೇ ವಸೂಲಾಯಿತು. ಆದ್ದರಿಂದ ಗೋಪನ್ನ ತನ್ನ ಮನಸ್ಸನ್ನು ಶ್ರೀರಾಮಚಂದ್ರನ ಕಡೆಗೆ ತಿರುಗಿಸಿದನು. ದಿನದ ಬಹುಕಾಲವನ್ನು ರಾಮಭಜನೆ, ಪೂಜೆಗಳಲ್ಲಿ ಕಳೆಯುತ್ತಿದ್ದನು. ದೇವರ ಹೆಸರಿನಲ್ಲಿ ಅನ್ನದಾನವೂ ನಿರಂತರವಾಗಿ ನಡೆಯುತ್ತಿತ್ತು. ಇದನ್ನು ಕೇಳಿದ ಜನ ಗುಂಪು ಗುಂಪಾಗಿ ಆತನ ಮನೆಗೆ ಬರುತ್ತಿದ್ದರು.

ಭದ್ರಾಚಲಕ್ಕೆ: ಗೋಪನ್ನ ಒಮ್ಮೆ ಭದ್ರಾಚಲಕ್ಕೆ ಹೋದನು.ದಮ್ಮಕ್ಕ ಪಾಲ್ವಂಚಕ್ಕೆ ಹೋಗಿ ಆತನನ್ನು ಕಂಡಳು. ಅವಳಿಂದ ಭದ್ರಗಿರಿಯ ಸೀತಾರಾಮಲಕ್ಷ್ಮಣರ ವಿಗ್ರಹಗಳ ಕಥೆಯನ್ನು ಕೇಳೀ ಗೋಪನ್ನ ಅಲ್ಲಿಗೆ ಹೋದ ಎಂದು ಹೇಳುತ್ತಾರೆ. ಅಂತೂ ಅವನು ಭದ್ರಾಚಲಕ್ಕೆ ಹೋದ. ಅಲ್ಲಿನ ವಿಗ್ರಹಗಳನ್ನು ಕಾಣುತ್ತಲೇ ಆತನ ಭಕ್ತಿ ಉಕ್ಕಿತ್ತು. ಮೈಮರೆತು ಆತನ ಬಾಯಿಂದ “ದಾಶರಥಿ” ಕರುಣಾ ಪಯೋನಿಧಿ” ಎಂಬ ಕವಿತೆ ಹರಿದು ಬಂದಿತು. ಪ್ರತಿ ಸಲವೂ ಅಲ್ಲಿನ ವಿಗ್ರಹಗಳನ್ನು ಕಂಡಾಗಲೂ ಇಂದು ಒಂದೊಂದು ಕವಿತೆಯನ್ನು ಆತನು ಹಾಡಿದನಂತೆ! ಆಂತಹ ನೂರಾರು ಪದ್ಯಗಳು “ದಾಶರಥಿ ಶತಕ” ಎಂಬ ಹೆಸರಿನಿಂದ ತೆಲುಗಿನಲ್ಲಿ ಪ್ರಸಿದ್ಧವಾಗಿವೆ. ಆಂಧ್ರರ ಶತಕ ಸಾಹಿತ್ಯದಲ್ಲಿ ಭಕ್ತಿ, ಭಾವ ಮತ್ತು ಕವಿತಾ ಸಂಪತ್ತಿನಲ್ಲಿ ದಾಶರಥಿ ಶತಕವು ಅತ್ಯಂತ ಶ್ರೇಷ್ಠವೆನಿಸಿದೆ.

ಅಂದಿನಿಂದ ಮುಂದೆ ಗೋಫನ್ನನ್ನು ತನ್ನ ಸಂಸಾರದೊಡನೆ ಭದ್ರಾಚಲಕ್ಕೆ ಬಂದು ನೆಲೆಸಿದನು. ಭದ್ರಾಚಲದ ಬುಡದಲ್ಲಿ ಭದ್ರಾಚಲವೆಂಬ ಊರು ಇದೆ. ಅದೇ ಭದ್ರಾಚಲ ತಾಲ್ಲೂಕಿನ ಮುಖ್ಯ ಪಟ್ಟಣ. ಅಲ್ಲಿಗೆ ಬಂದ ಗೋಪನ್ನ ಪರ್ವತದ ಮೇಲಿದ್ದ ಶ್ರೀ ರಾಮಚಂದ್ರ ಮೂರ್ತಿಯನ್ನು ತನ್ನ ಮನೆ ದೇವರಾಗಿ ಭಾವಿಸಿದನು. ಇಲ್ಲಿನ ರಾಮದೇವರಿಗೆ ನಾಲ್ಕು ಕೈಗಳಿವೆ. ಆತನ ಬಲಗೈಲಿ ಶಂಖವಿದೆ. ಎಡಗೈಲಿ ಚಕ್ರವಿದೆ. ಆತನು ರಾಕ್ಷಸರನ್ನು ಸಂಹಾರ ಮಾಡುವ ಕಾರ್ಯವನ್ನು ಮುಗಿಸಿರುವನೆಂದು ಇದರ ಅರ್ಥ. ಆದ್ದರಿಂದ ಇಲ್ಲಿನ ರಾಮನನ್ನು ವೈಕುಂಠ ರಾಮ, ರಾಮನಾರಾಯಣ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ರಾಮಮೂರ್ತಿಯನ್ನು ಗೋಪನ್ನ ದಿನದಿನವೂ ಪೂಜಿಸುತ್ತಾ ಹೋದಂತೆ ಆತನ ಭಕ್ತಿಯೂ ಬೆಳೆಯುತ್ತಾ ಹೋಯಿತು. ಎಂದಿನಂತೆ ಆತನ ಅನ್ನದಾನವೂ ತಡೆಯಿಲ್ಲದೆ ನಡೆಯುತ್ತಿತ್ತು.

ರಾಮನ ದಾಸ: ಗೋಪನ್ನನ ಹೆಂಡತಿ ಗಂಡನಿಗೆ ತಕ್ಕವಳು. ಆತನ ಕಾರ್ಯದಲ್ಲಿ ಆಕೆ ಸದಾ ಅನುಕೂಲಳಾಗಿ ಇರುತ್ತಿದ್ದಳು.ಆಕೆ ಎಂತಹ ಮಹಾನುಭಾವಳು ಎಂಬುವುದನ್ನು ಲೋಕಕ್ಕೆ ತೋರಿಸುವಂಥಹ ಒಂದು ಸಂಗತಿ ಒಮ್ಮೆ ನಡೆಯಿತು. ಒಂದು ದಿನ ಮಧ್ಯಾಹ್ನ ಎಂದಿನಂತೆ ಗೋಪನ್ನನ ಮನೆಯಲ್ಲಿ ನೂರಾರು ಜನ ಭಕ್ತರು ಊಟಕ್ಕೆ ಕುಳಿತ್ತಿದ್ದಾರೆ. ಗೋಪನ್ನನು ಅವರನ್ನು ಅಧರಿಸಿ ಉಪಚರಿಸುತ್ತಾ ಇದ್ದಾನೆ. ಒಳಮನೆಯಲ್ಲಿ ಆತನ ಹೆಂಡತಿ ತಾಂಬೂಲನ್ನು ಸಿದ್ಧಪಡಿಸುತ್ತಾ ಕುಳಿತಿದ್ದಾಳೆ. ಮಗು ರಘುರಾಮನು ಓಡಾಡುತ್ತ ಬಂದು, ಎಡವಿ ಗುಂಡಿಯಲ್ಲಿ ಬಿದ್ದು ಒಡನೆಯೇ ಸತ್ತು ಹೋದನು. ಇದನ್ನು ನೋಡಿದ ಆಕೆ ಏನು ಮಾಡಬೇಕು? ಮಗುವನ್ನು ಮೇಲಕ್ಕೆತ್ತಿ ಚಾಪೆಯ ಮೇಲೆ ಮಲಗಿಸಿದಳು. ಅದರ ಮೇಲೆ ಒಂದು ಬಟ್ಟೆಯನ್ನು ಹೊದಿಸಿದಳು. ಆಕೆಗೆ ತಡೆಯಲಾರದಷ್ಟು ಸಂಕಟವಾಯಿತು. ಆದರೂ ಗಟ್ಟಿಯಾಗಿ ಅಳಲಿಲ್ಲ. ಸುದ್ಧಿ ತಿಳಿದರೆ ಊಟ ಮಾಡುವವರು ತಮ್ಮ ಊಟವನ್ನು ನಿಲ್ಲಿಸುತ್ತಾರೆ. ಆದ್ದರಿಂದ ಆಕೆ ಆಗ ಸುಮ್ಮನಿದ್ದು, ಎಲ್ಲರ ಮುಟವಾದ ಮೇಲೆ ಗೋಪನ್ನನ ಮುಂದೆ ಗುಟ್ಟಾಗಿ ಅದನ್ನು ತಿಳಿಸಿದಳು.

ಮಗನ ಸಾವಿಗಾಗಿ ಗೋಪನ್ನ, ಅಳಲಿಲ್ಲ: ತನ್ನ ಹೆಂಡತಿಯ ದೊಡ್ಡ ಗುಣ ಕ್ಕಾಗಿ ಸಂತೋಷಗೊಂಡನು. ಆತನು ಸತ್ತ ಮಗುವನ್ನು ಎತ್ತಿಕೊಂಡು ಶ್ರೀರಾಮನ ಪಾದಗಳ ಬಳಿ ಇಟ್ಟು, “ಕೋದಂಡರಾಮ ಏ ಬುದ್ಧಿ ವೀಡು,ಎರಗುನಿವಾಡು, ಪಾಪಡುವೀಡು ಬಡಲಿಯನ್ನಾಡು, ಪಾಪಜೇಸಿ ಪ್ರಜಲನು ಗಲ್ದಿ ಆ ಪದ ಬಾಪಿ ಆಟು ಪ್ರೇಮ ಚೂಪು” (ಹೇ ಸ್ವಾಮಿ , ಇವನು ತಿಳಿಯದ ಎಳೆ ಮಗು, ಬಳಲಿದ್ದಾನೆ: ಅಂತಹ ಈ ಮಗುವನ್ನು ಎಬ್ಬಿಸಿ, ಆಪತ್ತನ್ನು ಹೋಗಲಾಡಿಸು: ಅಂತಹ ಪ್ರೇಮವನ್ನು ತೋರು) ಎಂದು ಬೇಡಿಕೊಂಡನು: ಶ್ರೀರಾಮನ ತೀರ್ಥವನ್ನು ಮಗುವಿನ ಮೇಲೆ ಚುಮುಕಿಸಿದನು. ಒಡನೆಯೇ ಮಗು ಮೇಲಕ್ಕೆದ್ದಿತು. ಇದನ್ನು ಕಂಡ ಜನ ಗೋಪನ್ನನ್ನ ಭಕ್ತಿಯನ್ನು ಬಾಯ್ತುಂಬ ಹೊಗಳಿದರು. ಗೋಪನ್ನನಿಗೆ ಅಲ್ಲಿನ ವಿಗ್ರಹಗಳು ಬರಿಯ ಕಲ್ಲಾಗಿರದೆ ಸಜೀವವಾದ ದೇವಮೂರ್ತಿಯಾಗಿ ಕಾಣಿಸಿತು.

ರಾಮ ಭಕ್ತ ಗೋಪನ್ನ ರಾಮದಾಸರಾದರು. ಇನ್ನು ಮುಂದೆ ಅವರನ್ನು ರಾಮದಾಸರು ಎಂದೇ ಕರೆಯೋಣ.

ಶ್ರೀರಾಮನಿಗೆ ದೇವಾಲಯ: ರಾಮದಾಸರು ಸೀತಾರಾಮಲಕ್ಷ್ಮಣರ ವಿಗ್ರಹಗಳತ್ತ ನೋಡಿದರು. ಆವರ ಮನಸ್ಸಿನಲ್ಲಿ, “ಎಲಾ, ಇಲ್ಲಿ ಈ ಮೂವರು ನೆಲೆಸಿದ್ದಾರೆ. ಇವರಿಗೆ ಒಂದಾದರೂ ಒಡವೆಯಿಲ್ಲ. ಧರಿಸಲು ಪಟ್ಟೇ ವಸ್ತ್ರಗಳಿಲ್ಲ. ಇವರು ನೆಲೆಸಿರಲು ಸರಿಯಾಧ ಒಂದು ದೇವಾಲಯವಿಲ್ಲ; ಲೋಕಕ್ಕೆಲ್ಲ ಸ್ವಾಮಿಯಾದ ಶ್ರೀರಾಮಚಂದ್ರನು ದಿಕ್ಕಿಲ್ಲದವನಂತೆ ಗುಡಿಸಲಿನಲ್ಲಿಯೇ ಇರಬೇಕೆ? ನನಗೆ ಈ ದೇವ ದೇವನು ಇಷ್ಟು ದೊಡ್ಡ ಅಧಿಕಾರವನ್ನು ಕೊಟ್ಟಿದ್ದಾನೆ. ನಾನೇಕೆ ಈ ಕೊರತೆಗಳನ್ನೆಲ್ಲ ಹೋಗಲಾಡಿಸಬಾರದು? ಎಂಬ ಭಾವನೆ ಹುಟ್ಟಿತು. ಆದರೆ ಅದಕ್ಕೆ ಹಣ ಎಲ್ಲಿಂದ ತರುವುದು? ರಾಮದಾಸರು ತಮ್ಮ ಆದಾಯವನ್ನೆಲ್ಲ ಅನ್ನದಾನಕ್ಕಾಗಿ ವೆಚ್ಚ ಮಾಡುತ್ತಿದ್ದರು. ಅವರ ಕೈ ಯಾವಾಗಲೂ ಬರಿದು.

ಗುಡಿಯನ್ನು ಕಟ್ಟಿಸುವುದೆಂದರೆ ಹುಡುಗಾಟವೇ?

ರಾಮದಾಸರಿಗೆ ತಟ್ಟನೆ ಒಂದು ಉಪಾಯ ಹೊಳೆಯಿತು. ಭದ್ರಾಚಲ ತಾಲ್ಲೂಕಿನ ಕಂದಾಯವು ಆಗ ತಾನೇ ವಸೂಲಾಗಿತ್ತು. ಆರು ಲಕ್ಷ ರೂ. ಖಜಾನೆಯಲ್ಲಿ ಕುಳಿತ್ತಿತ್ತು. ಅದನ್ನು ಬಳಸಿಕೊಂಡರೆ ಹೇಗೆ? ಅದು ರಾಜನ ಹಣ. ಆದರೇನು? ಅದನ್ನು ಸಲ್ಲಿಸಬೇಕಾದ ದಿನ ನೋಡಿಕೊಳ್ಳೋಣ ಎಂದು, ಅವರು ಆ ಹಣವನ್ನು ಬಳಸಿಕೊಳ್ಳಲು ನಿಶ್ಚಯಿಸಿದರು. ತಾವು ಮಾಡುತ್ತಿರುವುದು ಧರ್ಮದ ಕೆಲಸ: ದೇವರು ಕಾಪಾಡುತ್ತಾನೆ ಎಂದು ಧೈರ್ಯವನ್ನು ತಂದುಕೊಂಡರು. “ಶ್ರೀರಾಮ! ನೀನೇ ಗತಿ” ಎಂದು ಹೇಳಿ ಕಟ್ಟಡವನ್ನು ಕಟ್ಟಿಸಲು ಪ್ರಾರಂಭಿಸಿದರು.

ರಾಮದಾಸರ ಭವ್ಯವಾದ ರಾಮಂದಿರವನ್ನು ಕಟ್ಟುವುದಕ್ಕಾಗಿ ದೇಶದ ಬೇರೆ ಬೇರರೆ ಕಡೆಗಳಿಂದ ನೂರಾರು ಮಂದಿ ಒಳ್ಳೆಯ ಶಿಲ್ಪಿಗಳನ್ನು ಕರೆರಸಿದರು. ಸಾವಿರಾರು ಜನ ಆಳುಗಳು ಅವರ ಕೈಕೆಳಗೆ ಕೆಲಸ ಮಾಡಲು ನೇಮಕವಾದರು. ಕಟ್ಟಡಕ್ಕಾಗಿ ಅಗತ್ಯವಾದ ಸಾಮಾನುಗಳನ್ನು ರಾಶಿರಾಶಿಯಾಗಿ ಬಂದು ಬಿದ್ದವು. ಜನರು ಹಗಲು, ರಾತ್ರಿ ಎಂದು ನೋಡದೇ ಉತ್ಸಾಹದಿಂದ ಕೆಲಸಕ್ಕೆ ತೊಡಗಿದರು. ಗರ್ಭಗುಡಿ, ಗೋಪುರ, ಕೈಸಾಲೆ,ಮೇಲ್ಕಟ್ಟು ಮಂಟಪ, ರಥ, ಕೊಳ, ಪ್ರಾಕಾರ, -ಎಲ್ಲವನ್ನೂ ಅತ್ಯಂತ ಸುಂದರವಾಗಿ, ಭವ್ಯವಾಗಿ ಕಲಾಮಯವಾಗಿ ಕಟ್ಟಿದರು. ಒಳಗಿದ್ದ ದೇವರುಗಳಿಗೆ ಪಟ್ಟೆ ಪೀತಾಂಬರಗಳನ್ನೂ ಮುತ್ತು ರತ್ನಗಳ ಒಡವೆಗಳನ್ನೂ ಮಾಢಿಸಿದುದಾಯಿತು. ಎಲ್ಲವೂ ರಾಮದಾಸರ ಮನಸ್ಸಿಗೆ ತುಂಬ ಸಂತೋಷವನ್ನು ನೀಡಿದುವು. ಅವರು ಒಂದು ಮಂಗಳಖರವಾದ ದಿನ ದೇವರನ್ನು ಮತ್ತೇ ಪ್ರತಿಷ್ಠಾಪಿಸಿ, ಭಕ್ತಿಯಿಂದ ಪೂಜೆ ಮಾಡಿದರು. ಕಣ್ತುಂಬ ನೋಡಿ ಆನಂದಪಟ್ಟರು.

ಆದರೆ ಖಜಾನೆಯಲ್ಲಿದ್ದ ಆರು ಲಕ್ಷ ರೂ.ಗಳು ಖರ್ಚಾಗಿ ಹೋಗಿದ್ದವು.

ರಾಮದಾಸರ ಕಾರ್ಯವನ್ನು ಕಂಡು ಬಹುನ ಸಂತೋಷಪಟ್ಟರು. ಆವರನ್ನು ಬಾಯ್ತುಂಬ ಹೊಗಳಿದರು. ಆದರೆ ಮತ್ತೇ ಕೆಲವರು ರಾಜರ ಹಣವನ್ನು ವೆಚ್ಚ ಮಾಡಿದುದಕ್ಕಾಗಿ ರಾಮದಾಸರಿಗೆ ಯಾವ ಶಿಕ್ಷೆಯಾಗುವುದೋ ಎಂದು ಹೆದರಿದರು. ಆದರೆ ರಾಮದಾಸರಿಗೆ ಯಾವ ಹೆದರಿಕೆಯೂ ಇರಲಿಲ್ಲ. ಜಗತ್ತಿನಲ್ಲಿ ಇರುವುದೆಲ್ಲ ಶ್ರೀರಾಮಚಂದ್ರನದೇ. ಆತನದನ್ನು ಆತನಿಗಾಗಿ ವೆಚ್ಚ ಮಾಡಿದ್ದೇನೆ. ಅದರಲ್ಲಿ ಒಂದು ಚಿಕ್ಕಾಸು ನಾನು ನನಗಾಗಿ ಬಳಸಿಲ್ಲ. ಎಂದ ಮೇಲೆ ನನಗೇಕೆ ಭಯ? ಶ್ರೀ ರಾಮನ ದಯೆ ಇರುವವರೆಗೆ ಭಯವಿಲ್ಲ. ಅದು ತಪ್ಪಿ, ಕಷ್ಟ ಬಂದರೆ ಅನುಭವಿಸೋಣ” ಎಂದು ಅವರಿಗೆ ಸಮಾಧಾನ ಹೇಳುತ್ತಿದ್ದನು. ಆ ಭಕ್ತನಿಗೆ ತನ್ನ ಕಾರ್ಯ ತಪ್ಪೆಂಬ ಭಾವನೆಯೇ ಬರಲಿಲ್ಲ.

ದೇವರ ಕೃಪೆ ದೊರೆತರೆ: ಇತ್ತ ರಾಮದಾಸರು ಆನಂದದಿಂದ ದಿನ ದಿನವೂ ರಾಮೋತ್ಸವವನ್ನು ಮಾಡುತ್ತಿದ್ದರೆ ಅತ್ತ ಗೋಲ್ಕಂಡದಲ್ಲಿ ಭದ್ರಾಚಲದಿಂದ ಕಂದಾಯದ ಹಣ ಏಕೆ ಬರಲಿಲ್ಲ ಎಂಬ ಯೋಚನೆ ಹುಟ್ಟಿತು. ಅಕ್ಕನ್ನನ್ನು ಅಳಿಯನಿಗೆ,”ಮಗು ಕಂದಾಯ ಹಣವನ್ನು ಆಕೆ ಕಳುಹಿಸಿಲ್ಲ? ನವಾಬರಿಗೆ ತಿಳಿದರೆ ಕೋಗೊಳ್ಳುವರು. ಆದ್ದರಿಂದ ಒಡವೆ ಹಣ ಕಳೂಹಿಸು ” ಎಂದು ಪತ್ರ ಬರೆದನು. ರಾಮದಾಸನು ಅದಕ್ಕೆ ಉತ್ತರವಾಗಿ “ಹಣವನ್ನೆಲ್ಲ ಶ್ರೀ ರಾಮಚಂದ್ರನ ಗುಡಿಯನ್ನು ಕಟ್ಟಲು ಬಳಸಿದ್ದೇನೆ. ದೇವರ ಕೃಪೆ ದೊರೆತರ ಎ ಈ ಭೂಮಿಯ ಮೇಲಿರುವ ರಾಜನ ಕೃಪೆಯೂ ಆಗುತ್ತದೆ” ಎಂದು ಬರೆದರು.ಈ ಸಮಾಧಾನದ ಮಾತುಗಳನ್ನು ಓದಿಕೊಂಡು ಅಕ್ಕನ್ನ ಗಡಗಡನೆ ನಡುಗಿದ. ಇತ್ತ ರಾಮದಾಸರಿಗೂ ಭಯವಾಗದೆ ಹೋಗಲಿಲ್ಲ. ಅವರು ತನ್ನ ಶ್ರೀರಾಮಚಂದ್ರನನ್ನು ಕುರಿತು, “ಮುರಿಪೇಮುತೋ ನಾ ಸ್ವಾಮಿನಿ ನೀವನಿ ಮುಂದಗ ತೆಲಿಸಿತಿ ರಾಮಾ! ಮರುವಕ ಇಕನಭಿಮಾನ ಮುಂಚು ನೀ ಮುರುಗು ಬೊಚ್ಚೀತಿನಿ ರಾಮಾ” (“ರಾಮಾ! ನೀನು ನನ್ನ ಸ್ವಾಮಿ” ಎಂದು ಈಗಾಗಲೇ ನಾನು ಅಕ್ಕರೆಯಿಂದ ತಿಳಿದಿದ್ದೇನೆ: ಇದನ್ನು ಮರೆಯದೇ ನನ್ನ ಮೇಲೆ ಅಭಿಮಾನವನ್ನು ಇಟ್ಟುಕೋ. ನಿನ್ನ ಮೊರೆ ಹೊಕ್ಕಿದ್ದೇನೆ, ರಾಮಾ) ಎಂದು ಬೇಡಿಕೊಂಡರು.

ರಾಮದಾಸರು ಸರಕಾರದ ಹಣವನ್ನೆ ಗುಡಿಯನ್ನು ಕಟ್ಟಿಸುವುದಕ್ಕಾಗಿ ಬಳಸಿಕೊಂಡರು ಎಂಬುವುದು ತಾನೀಷನಿಗೆ ಗೊತ್ತಾಯಿತು. ಆತನು ಕೋಪದಿಂದ ಕುರುಡನಾಗಿ “ಈಗಾಗಲೇ ಹೋಗಿ ಆ ಗೋಪನ್ನನ್ನ ಎಂಬುವನನ್ನು ಕೈಗೆ ಕೋಳಗಳನ್ನು ಹಾಕಿ ಎಳೆತನ್ನಿ” ಎಂದು ಇಬ್ಬರು ರಾಜದೂತರನ್ನು ಅಟ್ಟಿದನು. ಅವರು ಭಧ್ರಾಚಲಕ್ಕೆ ಬಂದು ರಾಮದಾಸರಿಗೆ ನವಾಬನ ಅಪ್ಪಣೆಯನ್ನು ತಿಳಿಸಿದರು. ಯಮದೂತರಂತೆ ಇದ್ದ ಅವರನ್ನು ಕಂಡ ರಾಮದಾಸರು, ಅಕಟಕಟ, ನನ್ನನ್ನು ರಕ್ಷಿಸುವುದಕ್ಕೆ ರಾಮಚಂದ್ರನು ಬೇಗ ಬರಬಾರದೆ? ಎಂದು ಅಂಗಲಾಚಿದರು. ಇಲ್ಲಿಂದ ಮುಂದೆ ಅವರ ಬಾಯಿಂದ ರಾಮನ ಕೀರ್ತಿಗಳು ತಾವೇ ತಾವಾಗಿ ಹರಿದು ಬಂದವು. ಅವೆಲ್ಲವು ತೆಲುಗಿನಲ್ಲಿವೆ. ಅವು ಬಹು ಸುಂದರವಾಗಿವೆ. ಅವುಗಳನ್ನು “ಭಕ್ತಿ ರಸದಲ್ಲಿ ನೆನೆದ ಕಲ್ಲುಸಕ್ಕರೆ” ಎಂದು ವಿಧ್ವಾಂಸರು ಬಣ್ಣಿಸಿದ್ದಾಋಎ.

ರಾಮದಾಸರು ಕೀರ್ತನೆಗಳನ್ನು ಹಾಡುತ್ತಾ ರಾಜದೂತರ ವಶವಾದರು. ದೂತರು ಅವರ ಕೈಗೆ ಕೋಳಗಳನ್ನು ತೊಡಿಸಿ ದರ ದರನೆ ಎಳೆದುಕೊಂಡು ಹೋದರು. ಊರಿನ ಜನರು ಇದನ್ನು ಕಂಡು ಕಂಡು ಕಣ್ಣೀರಿಟ್ಟರು.ರಾಮದಾಸರು, “ಇತರರು ಎನಗಿಲ್ಲಯ್ಯ, ನೀನೇ ಗತಿಯಯ್ಯ” ಎಂದು ರಾಮನನ್ನು ಬೇಡುತ್ತಾ ಗೋಲ್ಕಂಡವನ್ನು ಸೇರಿದರು. ಅಲ್ಲಿ ಅವರನ್ನು ಸೆರಮನೆಗೆ ನೂಕಿದರು.

ರಾಮದಾಸರು ೧೬೭೪ರಿಂದ ೧೬೮೬ರವರೆಗೆ ೧೨ ವರ್ಷಗಳ ಕಾಲ ಸೆರಮನೆಯಲ್ಲಿ ಬಿದ್ದಿರಬೇಕಾಯಿತು. ಅಲ್ಲಿ ರಾಜದೂತರು ಅವರನ್ನು ಪರಿಪರಿಯಾಗಿ ಹಿಂಸಿಸಿದರು. ಚೂಪಾದ ಮೋಳೆಗಳನ್ನು ನಾಟಿದ ನೆಲದ ಮೇಲೆ ಕೂಡಿಸುವರು, ಚಾಟಿಯಿಂದ, ಹೊಡೆಯುವವರು. ಬಿಸಿಲಿನಲ್ಲಿ ಬರಿ ಮೈ ಮಾಡಿ ನಿಲ್ಲಿಸುವರು, ಬೆಣಚುಕಲ್ಲುಗಳ ಮೇಲೆ ನಡೆದಾಡಿಸುವರು, “ರಾಜರ ಹಣವನ್ನು ಕೊಡು” ಎಂದು ಕೆನ್ನೆಗೆ ಹೊಡೆಯುವರು. ಪಾಪ ರಾಮದಾಸರು ಏನು ಮಾಡಬೇಕು? ಒಂದೊಂದು ಬಗೆಯಾಗಿ ಶ್ರೀರಾಮನನ್ನು ಸ್ತೋತ್ರ ಮಾಡುತ್ತಿದ್ದರು. “ನನ್ನ ತಪ್ಪುಗಳನ್ನೆಲ್ಲ ಕ್ಷಮಿಸು, ಜಗನ್ನಾಥ! ನಿನ್ನವರನ್ನು ರಕ್ಷಿಸುವೆ ಎಂದು ಬೇಡುವರು. “ಏನು ರಾಮ, ನನ್ನಲ್ಲಿ ಏನು ತ್ಪಿದೆ ರಾಮ? ಎಂದು ಧೈರ್ಯವಾಗಿ ಕೇಳುವರು. “ನಾನು ಏನು ಮಾಡಲಿ? ನಾನು ಎಷ್ಟು ಬೇಡಿದರೂ ನೀನು ಬರದೆಯಿರುವೆಲ್ಲ!” ಎಂದು ಕಣ್ಣಿರು ಸುರಿಸಿದರು. ತಪ್ಪು ಮಾಢದ ನಿನ್ನ ಭಕ್ತ ಹೀಗೆ ಅತ್ತರೆ ನಿನಗೆ ಮರ್ಯಾದೆಯೇ? ಎಂದು ಹಂಗಿಸಿದರು. “ನೀನು ಕೈ ಬಿಟ್ಟರೆ ನಾನು ಯಾರ ಬಳಿ ಹೋಗಲಿ?” ಎಂದು ಅಂಗಲಾಚಿದರು. ಯಾವುದಕ್ಕೂ ರಾಮನಿಂದ ಉತ್ತರ ಬರಲಿಲ್ಲ.

ರಾಮದಾಸರಿಗೆ ಕೋಪ ಬಂತು. ಕೆಟ್ಟ ಮಾತಾಡದ ಹೊರತು ಕೆಲಸ ಕೈಗೂಡದೆಂದು ಅವರು ಭಾವಿಸಿದರು. ತಾವು ಗುಡಿ ಕಟ್ಟಿಸಿದುದನ್ನೂ ಸೀತಾಲಕ್ಷ್ಮಣರಿಗೆ ಒಡವೆಗಳನ್ನು ಮಾಡಿಸಿದುದನ್ನೂ ಪಟ್ಟಿ ಮಾಡಿ ಹೇಳಿದರು.- ಭರತನಿಗೆ ಪಚೆಚೆಯ ಪದಕ ಮಾಢಿಸಿದೆ, ಹತ್ತು ಸಾವಿರ ರೂಪಾಯಿ ವೆಚ್ಚವಾಯಿತು: ಶತ್ರುಘ್ನನಿಗೆ ಉಡಿದಾರ ಮಾಢಿಸಿದೆ, ಲಕ್ಷ್ಮಣನಿಗೆ ಮುತ್ತುಗಳ ಪದಕ ಮಾಡಿಕಸಿದೆ, ಸಿತಮ್ಮನಿಗೆ ಚಿಂತಾಕು ಸರ ಮಾಡಿಸಿದೆ, ನಿನಗೆ ರತ್ನದ ತುರಾಯಿ ಮಾಡಿಸಿದೆ. ಇದಕ್ಕಾಗಿ ನೀನೇನು ಮಾಡಿದೆ? ಕಾಲುಗಳಿಗೆ ಸಂಖೊಲೆ ತೊಡಿಸಿದೆ! ಒಡವೆಗಳನ್ನು ಹಾಕಿಕೊಂಡು ಹೆಂಡತಿ ಮತ್ತು ತಮ್ಮಂದಿರೊಡನೆ ಕುಲು ಓಡಾಡುತ್ತಿರುವೆಯಲ್ಲಾ! ಯಾರ ಒಡವೆಗಳವು ರಾಮಚಂದ್ರ?” ಎಂದು ತಮ್ಮ ಸ್ವಾಮಿಯನ್ನು ಗದರಿಸಿದರು. ಆದರೆ, ಒಡನೆಯೇ “ಶ್ರೀ ರಾಮನಿಗೆ ಕೋಪಬಂದರೆ ತನಗೆ ಇನ್ನಾರು ದಿಕ್ಕು?” ಎಂದು ಕೆನ್ನೆಗೆ ಹೊಡೆದುಕೊಂಡು, “ಅಪ್ಪ! ಬೈದನೆಂದು ಕೋಪಿಸಬೇಡ. ಪೆಟ್ಟು ತಾಳಲಾರದೆ ಬೈದೆನಪ್ಪ” ಎಂದು ಪಶ್ಚಾತಾಪ ಪಟ್ಟರು.

ಒಂದಲ್ಲ, ಎರಡಲ್ಲ, ಹನ್ನೆರಡು ವರ್ಷಗಳು ಸೆರೆಮನೆಯಲ್ಲಿ ಬಿದ್ದಿರುವುದು ಎಷ್ಟು ಕಷ್ಟ? ರಾಮದಾಸರು ಹಗಲು,ರಾತ್ರಿ, ಶ್ರೀರಾಮನನ್ನು ಸ್ತೋತ್ರ ಮಾಡಿದರು. ಇನ್ನೊಬ್ಬರಾಗಿದ್ದರೆ “ಎಲ್ಲಿಯ ರಾಮ?” ಎಂದುಕೊಳ್ಳುತ್ತಿದ್ದರು. ರಾಮದಾಸರು ಹಾಗೆಂದು ಕೊಳ್ಳಲಿಲ್ಲ. ರಾಮನು ಬಂದೇ ಬರುವನೆಂಬ ನಂಬಿಕೆ ಅವರಿಗೆ ತಪ್ಪಲಿಲ್ಲ. ಒಮ್ಮೊಮ್ಮೆ ಕೋಪದಿಂದ ಅವನೊಡನೆ ಕುಸ್ತಿ ಮಾಡುವವರಂತೆ,” ನೀನು ಹೊಸ್ತಿಲು ಧಟಿ ಹೋಗುವುದಕ್ಕೆ ಬಿಡುವುದಿಲ್ಲ. ನನ್ನನ್ನು ಕಾಪಾಡಲು ಬಾ! ನೀನು ಹಾಯಾಗಿ ಕುಳಿತಿದ್ದೀಯಾ? ನಿನ್ನನ್ನು ಹಾಗೆ ಕೂಡಲು ಬಿಡುವುದಿಲ್ಲ. ಕೋಪ ಮಾಡಿಕೊಳ್ಳುತ್ತೀಯಾ? ನಾನೇನು ಹೆದರುವುದಿಲ್ಲ. ನಿನಗೆ ಕೈಲಾಗದಿದ್ದರೆ ನಮ್ಮಮ್ಮ ಸೀತಮ್ಮನಿಗೆ ಹೇಳು. ಆಕೆಯಾದರೂ ಬಂದು ಕಾಪಾಡುತ್ತಾಳೆ” ಎಂದು ರಾಮನಲ್ಲಿ ಕೋಪವನ್ನು ಕೆರಳಿಸಲು ಯತ್ನಿಸಿದರು.

ಏನಾದರೂ ಶ್ರೀರಾಮ ಬರಲಿಲ್ಲ: ರಾಮದಾಸರಿಗೆ ಒಂದು ಉಪಾಯ ಹೊಳೆಯಿತು. ತಂದೆಯಾದ ರಾಮನಿಂದ ಕೆಲಸವಾಗಬೇಕಾದರೆ ತಾಯಿಯಾದ ಸೀತಮ್ಮನ ಮುಂದೆ ತನ್ನ ಸಂಕಟವನ್ನು ಹೇಳಿಕೊಳ್ಳಬೇಕು. ಎಷ್ಟೇ ಆಗಲಿ, ತಾಯಿಯ ಮನಸ್ಸು ಮೃದು, ಬೇಗ ಕರಗುತ್ತದೆ- ಎಂದು ರಾಮದಾಸರು ಆಕೆಯನ್ನು ಕುರಿತು, “ಅಮ್ಮ ರಾಮಚಂದ್ರನು ನನ್ನ ಮೇಲೆ ಹಟ ತೊಟ್ಟಿದ್ದಾನೆ, ಮಾತನಾಡುತ್ತಿಲ್ಲ. ನೀನು ಆತನಿಗೆ ಹೇಳಮ್ಮ” ಎಂದು ಕೇಳೀಕೊಂಡರು. ಆಕೆ ಭಕ್ತನಿಗಾಗಿ ಹಾಗೆಯೇ ಮಾಡಿದಳಂತೆ! ” ನನ್ನ ಪ್ರಾರ್ಥನೆ ಕೇಳೋ ಪ್ರಾಣನಾಥ! ರಾಮದಾಸನ ಕಾಯೊ ಪ್ರಾಣನಾಥ” ಎಂದು ಆಕೆ ಹೇಳುತ್ತಲೇ ಶ್ರೀರಾಮ “ಆಗಲಿ” ಎಂದನಂತೆ.

ಆ ದಿನ ರಾತ್ರಿ ರಾಮದಾಸರು, “ಈ ದಿನ ರಾತ್ರಿ ಶ್ರೀರಾಮನು ನನ್ನನ್ನು ಸೆರೆಯಿಂದ ಬಿಡಿಸದಿದ್ದರೆ ವಿಷವನ್ನು ಕುಡಿದು ಸತ್ತು ಹೋಗುತ್ತೇನೆ” ಎಂದು ನಿಶ್ಚಯಿಸಿದರು. ಅದಕ್ಕಾಗಿ ತಮ್ಮ ಹಾಸಿಗೆಯ ಪಕ್ಕದಲ್ಲಿ ವಿಷದ ಬಟ್ಟಲನ್ನು ಇಟ್ಟುಕೊಂಡು ಮಲಗಿದರು. ಶ್ರೀರಾಮನಿಗೆ, “ನನ್ನ ಭಕ್ತನನ್ನು ಇನ್ನು ಪರೀಕ್ಷಿಸುವುದು ಬೇಡ” ಎನಿಸಿತ್ತು. ಆವನು ಲಕ್ಷ್ಮಣನೊಡನೆ ಸೇವಕನ ವೇಷ ಧರಿಸಿ, ತಾನೀಷನ ಅರಮನೆಯ ಬಳಿಗೆ ಹೋದನು. ಆಗ ಅರ್ಧರಾತ್ರಿಯಾಗಿತ್ತು. ಎಲ್ಲರೂ ಮಲಗಿ ನಿದ್ರೆ ಹೋಗಿದ್ದರು. ರಾಮಲಕ್ಷ್ಮಣರು ತಾನೀಷನು ಮಲಗುವ ಮನೆಯ ಬಾಗಿಲಲ್ಲಿ ನಿಂತು ಅವರನ್ನು ಎಬ್ಬಿಸಿದರು.

ಗಾಬರಿಯಿಂದ ಮೇಲಕ್ಕೆದ್ದ ತಾನೀಷನು ಅವರನ್ನು ಕಂಡು ಅರ್ಧರಾತ್ರಿಯಲ್ಲಿಯೇ ಮಾತನಾಡಿಸಿದನು.

ತಾನೀಷ್ : ನೀವು ಯಾವ ದೇಶದವರು? ಎಲ್ಲಿಂದ ಬಂದಿದ್ದೀರಿ?
ರಾಮ ಲಕ್ಷ್ಮಣರು : ನಾವು ಗೋದಾವರಿ ತೀರದವರು ಭದ್ರಾಚಲ ನಮ್ಮ ಸ್ಥಳ.
ತಾನೀಷ್ : ನೀವು ಯಾರ ಜವಾನರು ? ಯಾರು ಕಳಿಸಿದರು ?
ರಾಮಲಕ್ಷ್ಮಣರು : ನಾವು ದಾಸರ ಜವಾನರು, ರಾಮದಾಸರು ಕಳಿಸಿದ್ದಾರೆ.
ತಾನೀಷ್ : ನಿಮ್ಮ ಹೆಸರೇನು ?
ರಾಮಲಕ್ಷ್ಮಣರು : ರಾಮೋಜೀ, ಲಕ್ಷ್ಮೋಜಿ ಎಂದು ನಮ್ಮ ಹೆಸರು.
ತಾನೀಷ್: ನಿಮ್ಮನ್ನು ಏಕೆ ಕಳಿಸಿದ್ದಾರೆ ?
ರಾಮಲಕ್ಷ್ಮಣರು : ಸರ್ಕಾರದ ಬಾಕಿಯನ್ನು ತೀರಿಸುವುದಕ್ಕೆ.
ತಾನೀಷ್ : ಎಲ್ಲ ಹಣವನ್ನೂ ತಂದಿದ್ದೀರಾ?
ರಾಮಲಕ್ಷ್ಮಣರು : ಓಹೋ, ಎಣಿಸಿಕೊಳ್ಳಿ, ಆರು ಲಕ್ಷ ರೂಪಾಯಿಗಳಿವೆ.

ಹೀಗೆಂದು ಹೇಳಿ ಅವರು ಅಷ್ಟು ಹಣವನ್ನೂ ಆತನ ಮುಂದೆ ರಾಶಿ ಹಾಕಿದರು. ತಾನೀಷ್ನಿಗೆ ಅಶ್ಚರ್ಯವಾಯಿತು. ಆತನು ಹಣ ಸಂದ ರಸೀತಿಯನುನ ಅವರಿಗೆ ಕೊಟ್ಟನು. ಒಡನೆಯೇ ಅಲ್ಲಿಂದ ಅವರು ಹರೊಟು ಹೋದರು. ಅವರು ಅತ್ತ ಹೋಗುತ್ತಲೆತಾನೀಷನಿಗೆ “ಎಲ ಎಲಾ! ಇವರು ಯಾರು? ನಡುರಾತ್ರಿಯಲ್ಲಿ ನನ್ನ ಮಲಗುವ ಮನೆಗೆ ಹೇಗೆ ಬಂದರು? ರಾಮದಾಸ ಸೆರೆಯಲ್ಲಿದ್ದಾನೆ; ಅವನು ಹೇಗೆ ಇವರನ್ನು ಕಳಿಸುತ್ತಾನೆ? ಇಷ್ಟು ಹಣ ಎಲ್ಲಿಂದ ಬರುವುದಕ್ಕೆ ಸಾಧ್ಯ? ರಾಮದಾಸನು ದೊಡ್ಡ ರಾಮಭಕ್ತ?. ಆತನ ದೇವರೇ ಜವಾನರ ರೂಪದಿಂದ ಬಂದಿರಬಹುದೆ?” ಎಂಬ ಯೋಚನೆ ಹತ್ತಿತ್ತು. ಆತನ ನಿದ್ರೆ ಹಾರಿಹೋಐಇತು. ಬೆಳಕು ಹರಿಯಿಯುವುದನ್ನೇ ಕಾಯುತ್ತಾ ಆತನು ಕುಳಿತುಕೊಂಡನು.

ಇತ್ತ ಸೆರೆಯಲ್ಲಿದ್ದ ರಾಮದಾಸರಿಗೆ ಬೆಳಗಾಗುವ ಮುನ್ನ ಒಂದು ಕನಸು. ಆ ಕನಸಿನಲ್ಲಿ ಇಬ್ಬರು ರಾಜದೂತರು ಬಂದು, “ಅಯ್ಯಾ, ನಿನ್ನಿಂದ ಬರಬೇಕಾದ ಹಣವೆಲ್ಲ ಬಂದಿದೆ. ಇಗೋ ರಸೀತಿ. ಇದನ್ನು ತೆಗೆದುಕೋ. ನಿನಗೆ ಸೆರೆಯಿಂದ ಬಿಡಗಡೆಯಾಗಿದೆ” ಎಂದು ಹೇಳಿದಂತಾಯಿತು.
ರಾಮದಾಸರು ಜಗ್ಗನೆ ಮೇಲಕ್ಕೆದ್ದರು. ಕನಸು ನನಸೆನ್ನುವಂತೆ ಹಾಸಿಗೆಯ ಪಕ್ಕದಲ್ಲಿಯೇ ರಸೀತಿ ಬಿದ್ದಿತು. ರಾಮದಾಸರಿಗೆ ಅಚ್ಚರಿಯಾಯಿತು. ಗರ ಬಡಿದವರಂತೆ ಕುಳಿತಿರಲು ಬೆಳ್ಳಂ ಬೆಳಗಾಯಿತು. ಅಷ್ಟರಲ್ಲಿತಾನೀಷನ ಜವಾನರಿಬ್ಬರು ಅವರ ಬಳಿಗೆ ಬಂದು, ಅವರಿಗೆ ಕೈಮುಗಿದು, ಕೈಕಾಲುಗಳೀಗೆ ಹಾಕಿದ್ದ ಕೋಳವನ್ನು ತೆಗೆದುಹಾಕಿದರು. ಅವರು ಅಪೇಕ್ಷೆಯಂತೆ ರಾಮದಾಸರು ಸ್ನಾನ ಮಾಡಿ, ನವಾಬನು ತಮಗಾಗಿ ಕಳಿಸಿದ್ದ ಹೊಸ ಬಟ್ಟೆಗಳನ್ನು ಧರಿಸಿದನು. ಆಮೇಲೆ ನವಾಬನು ಕಳೂಹಿಸಿದ್ದ ಪಲ್ಲಕ್ಕಿಯಲ್ಲಿ ಕುಳಿತು ಅರಮನೆಗೆ ಹೋದರು. ತಾನೀಷನು ಬಾಗಿಲ್ಲಿಯೇ ಅವರನ್ನು ಇದಿರುಗೊಂಡು ಅರಮನೆಯೊಳಗೆ ಕೈ ಹಿಡಿದುಕೊಂಡು ಕರೆದೊಯ್ದರು. ಅಲ್ಲಿ ಅವರಿಗಾಗಿ ಸಿದ್ಧವಾಗಿದ್ದ ಒಂದು ಎತ್ತರವಾದ ಪೀಟದಲ್ಲಿ ಕುಳ್ಳಿರಿಸಿ, ಕೈಮುಗಿದುಕೊಂಡು, “ಸ್ವಾಮಿ , ನನ್ನ ತಪ್ಪನ್ನು ಮನ್ನಿಸಿ. ನಿಮ್ಮ ಯೋಗ್ಯತೆಯನ್ನು ತಿಳಿಯದೇ, ನಿಮ್ಮನ್ನು ದೇವರು ತಂದು ಒಪ್ಪಿಸಿದ ಹಣವನ್ನೆಲ್ಲ ನಿಮಗೇ ಒಪ್ಪಿಸುತ್ತಿದ್ದೇನೆ. ಇದನ್ನು ಸ್ವೀಕರಿಸಿ. ಇನ್ನು ಮುಂದೆ ಭದ್ರಾಚಲದ ತಾಲ್ಲೂಕಿನಿಂದ ಬರುವ ಕಂದಾಯವನ್ನೆಲ್ಲ ನೀವು ನಿಮ್ಮ ಪೂಜೆಗಾಗಿ ವೆಚ್ಚ ಮಾಡಬಹುದು” ಎಂದು ಹೇಳಿದನು.

ರಾಮದಾಸರು ತಾನೀಷನು ಕೊಟ್ಟ ಹಣವನ್ನು ತೆಗೆದುಕೊಳ್ಳಳಿಲ್ಲ. ಅವುಗಳೆಲ್ಲ ಬಂಗಾರದ ನಾಣ್ಯಗಳು. ಅವುಗಳನ್ನು ರಾಮಟಂಕೀ ವರಹಗಳೆಂದು ಕರೆಯುತ್ತಾರೆ. ರಾಮದಾಸರು, ಅವುಗಳಲ್ಲಿ ಎರಡನ್ನೂ ಮಾತ್ರ ತೆಗೆದುಕೊಂಡು, “ತಾನೀಷಾ,ನನ್ನ ಪುಣ್ಯಕ್ಕಿಂತ ನಿನ್ನ ಪುಣ್ಯ ದೊಡ್ಡದು. ನನ್ನ ಶ್ರೀರಾಮಚಂದ್ರ ಮೂರ್ತಿಯನ್ನು ನೀನು ಕಣ್ಣಾರೆ ಕಂಡೆ. ನನಗೆ ಆ ಭಾಗ್ಯ ಇಲ್ಲ.ನೀನು ಧನ್ಯ” ಎಂದು ಹೇಳಿ, ಅಲ್ಲಿಂದ ಹಿಂದಿರುಗಿದರು. ಅವರ ಸೋದರ ಮಾವಂದಿರಾದ ಅಕ್ಕನ್ನ, ಮಾದದನ್ನರಿಗೂ ಹೆಂಡತಿ ಮತ್ತು ಮಗನಿಗೂ ಅವರನ್ನು ಕಂಡು ಅತ್ಯಂತ ಸಂತೋಷವಾಯಿತು.

ರಾಮದಾಸರು ಭದ್ರಾ ಚಲಕ್ಕೆ ಬರುವ ಸುದ್ಧಿಯನ್ನು ಕೇಳಿದ ಜನರು ತಾಳ-ಮೇಳಗಳೊಡನೆ ಅತ್ಯಂತ ವೈಭವದಿಂದ ಅವರನ್ನು ಇದಿರುಗೊಂಡರು. ರಾಮದಾಸರು ನೇರವಾಗಿ ರಾಮದೇಔರ ಗುಡಿಗೆ ನಡೆದು, ಅಲ್ಲಿನ ಸೀತಾಮಲಕ್ಷ್ಮಣರ ವಿಗ್ರಹಗಳನ್ನು ಕಣ್ತುಂಬ ನೋಡಿದರು. ಅವರಲ್ಲಿ ಕಣ್ಣಲ್ಲಿ ಸಂತೋಷ ಕೋಡಿಯಗಿ ಹರಿಯಿತು. ಅವರು ಗದ್ಗದ ಕಂಠದಲ್ಲಿ, “ಆಂತಾರಾಮಮಯಂ ಈ ಜಗಮಂತಾ ರಮಮಯಂ” (ಎಲ್ಲವೂ ರಾಮಮಯ, ಈ ಜಗತ್ತೆಲ್ಲವೂ ರಾಮಮಯ_ ಎಂದು ಹಾಡಿದರು. ತಾವು ತಂದಿದ್ದ ರಾಮ ಟಂಕೀ ವರಾಹಗಳನ್ನು ಶ್ರೀರಾಮ ಸೀತೆಯರ ವಿಗ್ರಹಗಳ ಬಳಿಯಿಟ್ಟರು. ಈಗಲೂ ಆ ನಾಣ್ಯಗಳು ರಾಮಸೀತೆಯರ ವಿಗ್ರಹಗಳನ್ನು ಅಲಂಕರಿಸಿವೆ ಎಂದು ಅರ್ಚಕರು ಅಲ್ಲಿಗೆ ಹೋದ ಭಕ್ತಾದಿಗಳಿಗೆ ತೋರಿಸುತ್ತಾರೆ.

ರಾಮದಾಸರು ತಾನೀಷನು ಕೊಟ್ಟ ಮಾನ್ಯದಿಂದ ಬಂದ ಹಣವನ್ನೆಲ್ಲ ಶ್ರೀರಾಮನ ಪೂಜೆಗಾಗಿ ವೆಚ್ಚ ಮಾಡುತ್ತಾ ಕಾಲ ಕಳೆದರು. ಅವರ ಭಕ್ತಿಯೂ ಶ್ರೀ ರಾಮಚಂದ್ರನ ಕರುಣೆಯೂ ದೇಶಧಲ್ಲೆಲ್ಲ ಪ್ರಚಾರವಾಯಿತು. ಆಗಿನಿಂದ ಭದ್ರಾಚಲವು ಬಹು ದೊಡ್ಡ ಯಾತ್ರಸ್ಥಳವಾಗಿದೆ. ರಾಮದಾಸರು ದಿನದಿನವೂ ರಾಮೋತ್ಸವ ವನ್ನು ನಡೆಸುತ್ತಾ ತಮ್ಮ ಬಾಳೆಲ್ಲವನ್ನೂ ಸವೆಸಿದರು. ಅವರಿಗೆಮುಪ್ಪು ಬಂದಿತು. ಅದರ ಜೊತೆಗಿನ ಕಾಲಿನ ನೋವು ಗಂಟು ಬಿತ್ತು. ಅವರು ರಾಮದೇವರ ಗುಡಿಗೆ ನಡೆದು ಹೋಗುವುದು ಕಷ್ಟವಾಯಿತು. ಕುಳಿತಲ್ಲಿಯೇ ತಮಗೆ ದರ್ಶನವನ್ನು ಕೊಡಬೇಕೆಂದು ದೇವರನ್ನು ಬೇಡಿಕೊಂಡರು. ಶ್ರೀರಾಮಚಂರ್ಧರನು ಅವರ ಬಯಕೆಯಂತೆ ಅವರು ಇದ್ದಲ್ಲಿಯೇ ದರ್ಶನವೀಯುತ್ತಿದ್ದನು. ಒಂದುದಿನ ಅವರು ಹಾಗೇ ಶ್ರೀರಾಮನನ್ನು ನೋಡುತ್ತಲೇ ತನ್ನ ಕಡೆಯ ಉಸಿರನ್ನು ಎಳೆದರು.

ಭದ್ರಾಚಲ ರಾಮದಾಸರು ಈಗ ಇಲ್ಲ. ಆದರೆ ಅವರು ಕಟ್ಟಿಸಿದ ಗುಡಿ, ಅವರು ಹಾಡಿದ ಕೀರ್ತನೆಗಳು ಅವರ ಹೆಸರನ್ನೂ ಇಂದಿಗೂ ಉಳಿಸಿವೆ. ಗೋಲ್ಕಂಡ ಕೋಟೆಯಲ್ಲಿ ರಾಮದಾಸರು ಸೆರೆಯಿದ್ದು, ರಾಮ,ಸೀತೆ, ಲಕ್ಷ್ಮಣರ ಪೂಜೆ ಮಾಡುತ್ತಿದ್ದ ಸ್ಥಳ ಎಂದೂ ಒಂದು ಸ್ಥಳವನ್ನೂ ತೋರಿಸುತ್ತಾರೆ. ಅಲ್ಲಿ ಈಗಲೂ ಪೂಜೆ ನಡೆಯುತ್ತದೆ.

ಆ ರಾಮಭಕ್ತರ ಹೆಸರನ್ನು ಹೇಳುವುದು ಪುಣ್ಯಕರ. ನಾವೂ ಅವರ ಹೆಸರನ್ನು ಹೇಳಿ ಪುಣ್ಯ ವಂತರಾಗೋಣ!
ಲೇಖಕರು: ತ.ಸು. ಶಾಮರಾಯ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿ ರಾವ್
ಕಣಜ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.86 ( 5 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *