BN Sundararao

ಬ.ನ. ಸುಂದರರಾವ್

ಬ.ನ. ಸುಂದರರಾವ್ (೨೬.೩.೧೯೧೮ – ೮.೧೦.೧೯೮೬): ವನವಿಹಾರಿ ಕಾವ್ಯನಾಮದ ಬ.ನ.ಸುಂದರರಾವ್ ಹುಟ್ಟಿದ್ದು ಬೆಂಗಳೂರು ದಕ್ಷಿಣ ತಾಲ್ಲೂಕಿನ ವರ್ತೂರಿನಲ್ಲಿ. ತಂದೆ ನರಸಿಂಹ ಮೂರ್ತಿಯವರು, ತಾಯಿ ವಸಂತ ಲಕ್ಷ್ಮಮ್ಮ. ಇವರ ತಾತ ರಾಮಣ್ಣನವರು ಸಂಸ್ಕೃತ, ಕನ್ನಡ, ತೆಲುಗು ಭಾಷೆಯಲ್ಲಿ ಪ್ರಕಾಂಡ ಪಂಡಿತರು. ಅವರ ಮಗ ನರಸಿಂಹ ಮೂರ‍್ತಿಯವರಿಗೆ ಈ ಪರಂಪರೆಯ ಜ್ಞಾನ ಹರಿದು ಬಂದುದಲ್ಲದೆ ಮಾಸ್ತಿಯವರ ಪರಮ ಶಿಷ್ಯರು. ಇವರ ಮಗನಾದ ಬ.ನ. ಸುಂದರ ರಾಯರಿಗೆ ಕನ್ನಡ ಸಾಹಿತ್ಯ ಒಲಿದು ಬರಲು ಇದೊಂದು ವಂಶ ಪಾರಂಪರ‍್ಯ ವರದಾನ. ವರ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಾಲೆಯಲ್ಲಿ ಇಂಗ್ಲಿಷ್ ಓದಿದ್ದು ಇಮ್ಮಡಿ ಹಳ್ಳಿಯ ಶಂಕರನಾರಾಯಣರ ಬಳಿ. ಹೈಸ್ಕೂಲು ಓದಿದ್ದು ಮಾಗಡಿಯಲ್ಲಿ.

ನಂತರ ಓದಿಗಾಗಿ ಸೇರಿದ್ದು ನ್ಯಾಷನಲ್ ವಿದ್ಯಾ ಸಂಸ್ಥೆ. ವಂಶಪಾರಂಪರ‍್ಯವಾಗಿ ಬಂದ ಸಾಹಿತ್ಯದ ಬಳುವಳಿ. ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ರಚನೆ. ಅಂತರ ಕಾಲೇಜಿನ ಸ್ಪರ್ಧೆ, ಚರ್ಚಾಕೂಟಗಳಲ್ಲಿ ಮೊದಲ ಬಹುಮಾನ ಕಟ್ಟಿಟ್ಟ ಬುತ್ತಿ. ಕಾಲೇಜಿಗೆ ತಂದ ಕೀರ್ತಿ.

ವ್ಯಾಸಂಗ ಮುಗಿಸಿದ ನಂತರ ಕೆಲಕಾಲ ಸೈನ್ಯದಲ್ಲಿ ಸೇವೆ, ನಂತರ ಮೈಸೂರು ಸರಕಾರದ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಲೆಕ್ಕ ತನಿಕಾಕಾರಿ. ಅಂದಿನ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಕೆ.ಎನ್. ಕಿಣಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ರಚಿಸಿದ ಶಿಕ್ಷಣಗ್ರಂಥ “ನಮ್ಮ ವಿದ್ಯಾಭ್ಯಾಸ” ಇಂದಿಗೂ ಉಪಾಧ್ಯಾಯರಿಗೆ ಅತ್ಯುತ್ತಮ ಕೈಪಿಡಿ. ಕನ್ನಡ ಕೃತಿಕಾರರಲ್ಲದೆ ಉತ್ತಮ ಸಂಶೋಧಕರು. ಬೆಂಗಳೂರಿನ ಇತಿಹಾಸದ ಬಗ್ಗೆ ಸಚಿವಾಲಯ ಕ್ಲಬ್‌ನಲ್ಲಿ ಸತತ ಮೂರು ವರ್ಷ ಭಾಷಣ. ರಚಿಸಿದ ಸಂಶೋಧನಾ ಗ್ರಂಥ ಸುಮಾರು ೭೦೦ ಪುಟದ ‘ಬೆಂಗಳೂರು ಇತಿಹಾಸ.’ ಬೆಂಗಳೂರಿನ ಬಗ್ಗೆ ಸಮಗ್ರ ಮಾಹಿತಿಯ ಉದ್ಗ್ರಂಥ.

ಇವರು ರಚಿಸಿದ ಕೃತಿಗಳು ವೈವಿಧ್ಯಮಯ. ಸೈನ್ಯದ ಅನುಭವದ ಕೃತಿ ಭಾರತ ಪಾಕ್ ಸಮರ ಇತಿಹಾಸ, ಬಾಂಗ್ಲೋದಯ, ಯುದ್ಧದ ಹಡಗು ಹಾಗೂ ಸೈನಿಕ. ಗ್ರಾಮ ಜೀವನಕ್ಕೆ ಸಂಬಂಸಿ ಕೃತಿಗಳು-ಸುಗ್ಗಿಯ ಕತೆಗಳು, ಯೋಜನೆಯ ಕತೆಗಳು. ಮಕ್ಕಳಿಗಾಗಿ ಬರೆದದ್ದು-ಆಯ್ದ ಐದು ಕಥೆಗಳು, ಮಂತ್ರಿ ಅಪ್ಪಾಜಿ, ಮಾನಿಟರ್ ಮಾಧು, ಜೀವನಚರಿತ್ರೆ-ನರಹರಿ ಶಾಸ್ತ್ರಿಗಳು, ಚ.ವಾಸುದೇವಯ್ಯನವರು, ಕರ್ನಾಟಕ ವೀರಯೋಧರು. ಕವನ ಸಂಗ್ರಹ-ಕಂದನ ಕಹಳೆ, ಸಂಧ್ಯಾವಿಹಾರ. ಇದಲ್ಲದೆ ಬೆಂಗಳೂರಿನ ಭವ್ಯಕತೆ, ಚಲೋ ಮೈಸೂರು, ಚಲೋ ಹೈದರಾಬಾದ್, ರಸಿಕ ಕವಿ ಜಗನ್ನಾಥ ಮುಂತಾದುವು ಸೇರಿ ೨೫ಕ್ಕೂ ಹೆಚ್ಚು ಕೃತಿ ರಚಿತ. ನಿಧನರಾದದ್ದು ೮.೧೦.೧೯೮೬ರಲ್ಲಿ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *