ಬ್ರಹ್ಮಾಂಡ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ಈ ಪ್ರಪಂಚದ ಸೃಷ್ಟಿಯ ವಿಚಾರ ಬ್ರಹ್ಮನಿಂದ ಹೇಳಲ್ಪಟ್ಟಂತೆ ಇದರಲ್ಲಿ ವಿವರಿಸಲಾಗಿದೆ.ಸಕಲ ಲೋಕಗಳ ವಿಚಾರವಾಗಿ ಈ ಪುರಾಣದಲ್ಲಿ ವಿಸ್ತಾರವಾದ ವಿವರಗಳಿವೆ.

ಬ್ರಹ್ಮ – ಹಿಂದೂ ಧರ್ಮದಲ್ಲಿನ ತ್ರಿಮೂರ್ತಿ ದೇವತೆಗಳಲ್ಲೊಬ್ಬರು. ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರರು. ಚತುರ್ಮುಖ ಬ್ರಹ್ಮ ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ ಜಡಜಜ ಎಂಬ ಹೆಸರು ಉಂಟು. ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ.
ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ ಕಮಲ ಎಂದರ್ಥ. ಹಾಗಾಗಿ ವಿಷ್ಣುವಿನ ನಾಭಿಕಮಲದಲ್ಲಿ ಜನಿಸಿದ ಬ್ರಹ್ಮನನ್ನು ಜಡಜಜ ಎಂದು ಕರೆಯಲಾಗುತ್ತದೆ.

ಮಹಾವಿಷ್ಣು: ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಸ್ಥಿತಿಕರ್ತ ಎಂದು ಹಿಂದೂ ಧರ್ಮ ನಂಬುತ್ತದೆ.ಭಗವದ್ಗೀತೆಯಲ್ಲಿ ವರ್ಣಿಸಿದಂತೆ ‘ವಿಶ್ವರೂಪಿ’. ನಾರಾಯಣಎಂದೂ ಕರೆಯುತ್ತಾರೆ. ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ.

ಶಿವ: ಮಂಗಳಕರನೋ ಅವನೇ ಶಿವ. ಹಿಂದೂ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸುತ್ತಾರೆ. ಲಿಂಗಾಯತ ಮತದ ಪ್ರಕಾರ ಶಿವವೇ ಪರಬ್ರಹ್ಮ. ಕೆಲವರು ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ.
ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವ ಲಯಕಾರಕ ದೇವತೆ : ಶಿವ ಅಥವ ರುದ್ರ
ಋಗ್ವೇದದಲ್ಲಿ ಶಿವ ಎನ್ನುವ ದೇವತೆ ಇಲ್ಲ. ರುದ್ರ ಎನ್ನುವ ಹೆಸರಿನ ದೇವತೆ ಇದ್ದಾನೆ. ಈ ರುದ್ರನಿಗೆ ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ.
ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ ‘ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ವ್ಯುತ್ಪತ್ತಿಯು ಇನ್ನೂ ನಿಶ್ಚಯವಾಗಿಲ್ಲ. ಶಿವ ಶಬ್ದವು ಮೂಲದಲ್ಲಿ ಸಂಸ್ಕೃತ ಭಾಷೆಯ ಶಬ್ದವೇ ಅಲ್ಲ. ಆದುದರಿಂದಲೇ ಈ ಶಬ್ದಕ್ಕೆ ನಿರುಕ್ತ ದೊರೆಯು ವುದಿಲ್ಲ ಎಂದು ದ್ರಾವಿಡ ಭಾಷಾತಜ್ಞರು ಹೇಳುತ್ತಾರೆ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎನ್ನಲಾಗಿದೆ.
ಮೂಲ ದ್ರಾವಿಡ ಭಾಷೆಯಲ್ಲಿ ಶೆನ್, ಶಿನ್ ಎಂಬ ಬೀಜ ಶಬ್ದಗಳು ಇವೆ ಹಾಗು ಈ ಶಬ್ದಗಳಿಗೆ ಕೆಂಪು ಎನ್ನುವ ಅರ್ಥ ಇದೆ. ಆದ್ದರಿಂದ ಶಿವ ಶಬ್ದವು ಶೆನ್, ಶಿನ್ ಶಬ್ದದಿಂದಲೇ ಹುಟ್ಟಿದೆ ಎಂದು ಅಭಿಪ್ರಾಯ ಪಡುತ್ತಾರೆ. ಶಿನ್ (ದಂತೆ ಇರುವ) ಅವನೇ ಶಿವನು ಎಂದು ಹೇಳಿ, ಶಿವನನ್ನು ಕೆಂಪಗೆ ಇರುವ ದೇವತೆ ಎನ್ನುತ್ತಾರೆ . ಋಗ್ವೇದ ಭಾಷ್ಯದಲ್ಲಿ ಸಾಯಣರು ರುದ್ರ ಶಬ್ದಕ್ಕೆ ಆರು ಬಗೆಯಿಂದ ಆರ್ಥ ಮಾಡಬಹುದೆಂದು ತೋರಿಸಿದ್ದಾರಾದರೂ, ರುದ್ರ ಶಬ್ದಕ್ಕೆ ಕೆಂಪು ಎಂದು ಆರ್ಥಮಾಡಿಲ್ಲ.
ಪಿಶ್ಚಲ್ ಎಂಬ ವೇದ ವಿದ್ವಾಂಸ, ರುದ್ರ ಶಬ್ದಕ್ಕೆ ಕೆಂಪು ಎಂದು ಅರ್ಥಮಾಡಿದ್ದಾನೆ. ರುದ್ರ ಶಬ್ದ ಬಳಗದ ‘ರುಧಿರ’ ಶಬ್ದಕ್ಕೆ ಹೋಲಿಸಿದರೆ ರುದ್ರ ಶಬ್ದದಲ್ಲಿ ಅಡಗಿರುವ ಕೆಂಪು ಮನವರಿಕೆಯಾಗುತ್ತದೆ ಎನ್ನುತ್ತಾನೆ. ವೇದ ಋಷಿಗಳಿಗೆ ರುದ್ರ ದೇವತೆ ಕೆಂಪು ಮೂರ್ತಿಯಾಗಿ ಕಾಣಿಸಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.
ವೇದ ಋಷಿಗಳೇ ಅವನನ್ನು ‘ತಾಮ್ರವರ್ಣಿ‘ ಎಂದಿದ್ದಾರೆ. ಪ್ರಾಚೀನ ಕನ್ನಡ ಭಾಷೆಯಲ್ಲಿ ತಾಮ್ರಕ್ಕೆ ‘ಶೆಮ್ಬೋನ್‘ = ಕೆಂಪು ಲೋಹ ಎನ್ನುವ ಹೆಸರಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ವೈದಿಕ ಸಂದರ್ಭದಲ್ಲಿ ರುದ್ರನನ್ನು ಕೆಂಪನೆಯ ಸಾಯಂಕಾಲದ ಸೂರ್ಯನಲ್ಲಿ ಕಲ್ಪಿಸಿಕೊಳ್ಳಲಾಗಿದೆ ಮತ್ತು ಅವನು ಅಲ್ಲಿ ಚಂಡಮಾರುತದ ಪ್ರಭುವೆಂದು ಭಾವಿಸಲಾಗಿದೆ ಎಂದು ಋಗ್ವೇದದ ಕನ್ನಡಾನುವಾದದಲ್ಲಿ ಹೆಚ್.ಪಿ. ವೆಂಕಟರಾವ್ ಅವರು ತಿಳಿಸಿದ್ದಾರೆ .
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.
Nice
ಬ್ರಹ್ಮಾಂಡ ಪುರಾಣ | ಬ್ರಹ್ಮ – Brahma | ವಿಷ್ಣು – Vishnu | ಶಿವ – Shiva