ಬಿ.ವಿ. ರಾಮಮೂರ್ತಿ (೧೪-೧೦-೧೯೩೩ – ೨೪-೩-೨೦೦೪) ಪ್ರಖ್ಯಾತ ವ್ಯಂಗ್ಯ ಚಿತ್ರಕಾರರಾದ ರಾಮಮೂರ್ತಿಯವರು ಹುಟ್ಟಿದ್ದು ಬೆಂಗಳೂರಿನ ರಾಣಾಸಿಂಗ್ ಪೇಟೆಯಲ್ಲಿ. ತಂದೆ ಗಿರಿಯಪ್ಪ, ತಾಯಿ ಹುಚ್ಚಮ್ಮ. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಬೆಳೆದ ಆಸಕ್ತಿ. ಮನೆಯ ಗೋಡೆಗಳೇ ಚಿತ್ರ ರಚನೆಯ ಕ್ಯಾನ್ವಾಸ್. ಓದಿದ್ದು ಬಿ.ಎಸ್ಸಿ.
ವೃತ್ತಿಗಾಗಿ ಆಯ್ದುಕೊಂಡಿದ್ದು ವ್ಯಂಗ್ಯ ಚಿತ್ರರಚನೆಯ ಬದುಕು. ಆಂಗ್ಲ ವ್ಯಂಗ್ಯಚಿತ್ರಕಾರ ಡೇವಿಡ್‌ಲೋ ರವರಿಂದ ಪಡೆದ ಸ್ಫೂರ್ತಿ. ೧೯೫೦ ರಲ್ಲಿ ಶೇಷಪ್ಪನವರ ಕಿಡಿ ಪತ್ರಿಕೆಗಾಗಿ ಬಿಡಿಸಿದ ರಾಜಕೀಯ ವ್ಯಂಗ್ಯ ಚಿತ್ರಗಳು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಪದಕರಾಗಿದ್ದ ಪೋತನ್ ಜೋಸಫ್‌ವರರಿಂದ ನೇಮಕಗೊಂಡು ಉದ್ಯೋಗಿಯಾಗಿ ಸೇರಿದ್ದು ಡೆಕ್ಕನ್ ಹೆರಾಲ್ಡ್ ಬಳಗ. ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಿಗೆ ಬರೆದ ಅಸಂಖ್ಯಾತ ವ್ಯಂಗ್ಯ ಚಿತ್ರಗಳು. ಮೈಸೂರು ಪೇಟ ಧರಿಸಿದ ಮಿ. ಸಿಟಿಜನ್ ಕಾರ್ಟೂನ್ ಮೂಲಕ ಅಂದಿನ ಸ್ಥಿತಿಗತಿಗಳ ಪರಿಣಾಮಕಾರಿ ಆನಾವರಣ. ವ್ಯಂಗ್ಯ ಚಿತ್ರ ಪ್ರೇಮಿಗಳನ್ನು ಬಹಳಷ್ಟು ಆಕರ್ಷಿಸಿದ ಕಾಲಂ. ೪೯ ವರ್ಷಗಳ ಸೇವೆಯ ನಂತರ ನಿವೃತ್ತಿ.
ವ್ಯಂಗ್ಯ ಚಿತ್ರದ ಜೊತೆಗೆ ಬರೆದ ಹಲವಾರು ತೈಲ ವರ್ಣ ಚಿತ್ರಗಳು. ೧೯೭೪ ರಲ್ಲಿ ತೈಲ ವರ್ಣ ಚಿತ್ರ ಪ್ರದರ್ಶನದಿಂದ ಗಳಿಸಿದ ಅಪಾರ ಜನ ಮೆಚ್ಚುಗೆ. ೧೯೭೮, ೧೯೮೨ ರಲ್ಲಿ ಜರ್ಮನಿಯಲ್ಲೂ ಪ್ರದರ್ಶಿತವಾದ ವ್ಯಂಗ್ಯ ಚಿತ್ರಗಳು, ಬಾಪ್ಕೋ ಪ್ರದರ್ಶನದಿಂದ ೩ ಸಂಪುಟಗಳಲ್ಲಿ ಮಿ. ಸಿಟಿಜನ್ ಪ್ರಕಟಿತ.
ವ್ಯಂಗ್ಯಚಿತ್ರಕಾರರ ಸಂಘದ ಪ್ರಧಾನ ಪೋಷಕರಾಗಿ ೨೫ವರ್ಷಗಳು ಸಲ್ಲಿಸಿದ ಸೇವೆ. ಕರ್ನಾಟಕದಾದ್ಯಂತ ಸಂಚರಿಸಿ, ಸಂಘಟನೆ ಮಾಡಿ ನಡೆಸಿಕೊಟ್ಟ ಹಲವಾರು ಕಾರ್ಯಾಗಾರಗಳು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಸಂದೇಶ್ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡಮಿಯಿಂದ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಿಂದ ಸಂದ ಸನ್ಮಾನ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.