B V Karanth

ಬಿ. ವಿ. ಕಾರಂತ

ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು.   ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕಾರಂತರು ಹೊಸ ಭಾಷ್ಯ ಬರೆದಂತಹವರು.

ಬಾಬುಕೋಡಿ ವೆಂಕಟರಮಣ ಕಾರಂತರು ಜನಿಸಿದ್ದು ಸೆಪ್ಟೆಂಬರ್ 19, 1929ರಂದು ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ.   ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗನಾದ ವೆಂಕಟರಮಣನನ್ನು (ಬಿ.ವಿ.ಕಾರಂತ) ತಾಯಿ ಲಕ್ಷ್ಮಮ್ಮ ಕೊಂಡಾಟದಿಂದ’ ‘ಬೋಯಣ್ಣ’ಎಂದು ಕರೆಯುತ್ತಿದ್ದರು. ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು,  ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು,  ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, ಪಾತ್ರಿಯ ದರ್ಶನ, ವಾದ್ಯಗಳ ಧ್ವನಿ ವಿನ್ಯಾಸ ಇವುಗಳಿಂದ ಬೋಯಣ್ಣನ ಭಾವಕೋಶ ಸಮೃದ್ಧವಾಯಿತು. ಮುಂದೆ ಕುಕ್ಕಾಜೆ ಪ್ರಾಥಮಿಕ ಶಾಲೆಯ ನಾಟಕಗಳಲ್ಲಿ ಬೋಯಣ್ಣನಿಗೆ ‘ಪಾರ್ಟು ಸಿಕ್ಕಿದವು. ಅಧ್ಯಾಪಕ ಕಳವಾರು ರಾಮರಾಯರು ನಿರ್ದೇಶಿಸಿದ ‘ಸುಕ್ರುಂಡೆ ಐತಾಳರು – ಕುಂಬಳಕಾಯಿ ಭಾಗವತರು’ ನಾಟಕದಲ್ಲಿ ಮೂರನೇ ಕ್ಲಾಸಿನ ಬೋಯಣ್ಣನದು ಪುರೋಹಿತ ಐತಾಳನ ಪಾತ್ರ.

ಎಲ್ಲೆಡೆ ಬೋಯಣ್ಣನೆನೆಸಿದ ಬಿ. ವಿ. ಕಾರಂತರು ಪುರೋಹಿತ ಭಾಗವತನಾಗಬಯಸಿ ಸಂಗೀತವನ್ನು ಮಂತ್ರದ ಧಾಟಿಯಲ್ಲಿ ಹೇಳುತ್ತಿದ್ದರು. ಐದನೆಯ ಕ್ಲಾಸಿನಲ್ಲಿದ್ದಾಗ ಅಧ್ಯಾಪಕ ಪಿ.ಕೆ. ನಾರಾಯಣರು ನಿರ್ದೇಶಿಸಿದ ‘ನನ್ನ ಗೋಪಾಲ’ದಲ್ಲಿ ‘ಬೋಯಣ್ಣ’ ಗೋಪಾಲನಾದ. ಬೋಯಣ್ಣನ ಹಾಡು ಕೇಳಿ ಮೆಚ್ಚಿದ ಊರಿನ ಪಟೇಲರು ಎರಡು ಊಪಾಯಿ ಬಹುಮಾನ ಕೊಟ್ಟು ಪ್ರೋತ್ಸಾಹಿಸಿದಾಗಲೇ ಅವರನ್ನು ರಂಗಭೂಮಿಯು ಎಳೆತನದಲ್ಲಿಯೆ ಸೆಳೆಯಿತು. ಎಂಟನೇ ಕ್ಲಾಸು ಮುಗಿಸಿದ ಬೋಯಣ್ಣ ಪುತ್ತೂರಿನ ಕುಕ್ರಬೈಲು ಕೃಷ್ಣಭಟ್ಟರ ಮನೆಯಲ್ಲಿ ಮನೆಪಾಠ ಹೇಳುವ ಮಾಸ್ಟ್ರಾದರು!  ಮಹಾಬಲ ಭಟ್ಟರ ‘ತ್ಯಾಗರಾಜ ಸಂಗೀತಶಾಲೆ’ಯಲ್ಲಿ ಸಂಗೀತಾಭ್ಯಾಸ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಗೀತ ಕಲಿಕೆ, ಆಗಾಗ ಶಿವರಾಮ ಕಾರಂತರ ‘ಬಾಲವನ’ಕ್ಕೆ ಭೇಟಿ ಇವು ಬೋಯಣ್ಣನ  ಆಸ್ಥೆಗಳಾದವು. ಒಮ್ಮೆ ಗುಬ್ಬಿ ಕಂಪನಿಯ ‘ಕೃಷ್ಣಲೀಲಾ’ ನಾಟಕ ನೋಡಲು ಪಾಣೆಮಂಗಳೂರಿನಿಂದ ಮಂಗಳೂರಿಗೆ ಹೂಗುವಾಗ ಸೈಕಲಿನಿಂದ ಬಿದ್ದು ಬೋಯಣ್ಣ ಹಲವು ದಿನ ನರಳಿದ್ದರು. ಕಾರಂತರ ‘ಬಾಲಪ್ರಪಂಚ’ ‘ಸಿರಿಗನ್ನಡ ಅರ್ಥಕೋಶ’ – ಇಂಥ ಪುಸ್ತಕಗಳನ್ನು ತಗೊಳ್ಳಲಿಕ್ಕಾಗಿ ಬೋಯಣ್ಣ ಧಣಿಗಳ ಮನೆಯಲ್ಲಿ ಕದಿಯತೊಡಗಿದಾಗ ಕದ್ದು ಸಿಕ್ಕಿಬಿದ್ದಾಗ ಕೃಷ್ಣಭಟ್ಟರು ಬುದ್ಧಿವಾದ ಹೇಳಿದರು.

ಮುಂದೆ ಕಾರಂತರು ಮನೆಯಿಂದ ಓಡಿ ಹೋಗಿ ಪ್ರಖ್ಯಾತ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯನ್ನು ಸೇರಿಕೊಂಡರು. ಅಲ್ಲಿ ಅವರು ರಾಜ್ ಕುಮಾರ್ ಮುಂತಾದವರ  ಜೊತೆಗೆ ಕೆಲಸಮಾಡಿದರು.  ಊರು ಬಿಟ್ಟು ಓಡಿಹೋಗಿ ಸುಮಾರು 25 ವರ್ಷಗಳ ಅನಂತರ ಬಿ.ವಿ. ಕಾರಂತರು ತನ್ನ ತಾಯಿ-ತಂದೆಯನ್ನು ಭೇಟಿಯಾದರು. ಈ ಭೇಟಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ಏವಂ ಇಂದ್ರಜಿತು’ ಪ್ರದರ್ಶನದ ದಿನದಂದು ನಡೆಯಿತು. ಗುಬ್ಬಿ ವೀರಣ್ಣನವರು ಕಾರಂತರನ್ನು ಬನಾರಸ್ಸಿಗೆ ಕಲಾಪ್ರಕಾರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕಳುಹಿಸಿದರು. ಅಲ್ಲಿ ಅವರು ಗುರು ಓಂಕಾರನಾಥರ ಶಿಷ್ಯತ್ವದಲ್ಲಿ  ಹಿಂದೂಸ್ತಾನಿ ಸಂಗೀತದ ತರಬೇತಿಯನ್ನೂ ಪಡೆದರು.

1958ರಲ್ಲಿ ಬಿ.ವಿ. ಕಾರಂತ-ಪ್ರೇಮಾ ದಂಪತಿಗಳಾದರು.   ಶಿಕ್ಷಕಿಯಾಗಿದ್ದ ಪ್ರೇಮಾ ಮದುವೆಯಾದ ಮೇಲೆ ಕೆಲಸ ಕಳೆದುಕೊಂಡರು. ನಂತರ ಅವರು ತಮ್ಮ ಹೆಂಡತಿ ಪ್ರೇಮಾ ಕಾರಂತರ ಜತೆಗೂಡಿ ಬೆಂಗಳೂರಿನ ಅತ್ಯಂತ ಹಳೆಯ ತಂಡಗಳಲ್ಲೊಂದಾದ “ಬೆನಕ”ವನ್ನು ಕಟ್ಟಿದರು. ಅದು ಬೆಂಗಳೂರು ನಗರ ಕಲಾವಿದರು ಎಂಬುದರ ಸಂಕ್ಷಿಪ್ತ ರೂಪ.   ಕಾರಂತರ ನಿಧನಾನಂತರದಲ್ಲಿ ‘ಫಣಿಯಮ್ಮ’ ಅಂತಹ ಶ್ರೇಷ್ಠ ಚಿತ್ರವನ್ನು ನಿರ್ದೇಶಿಸಿದ ಕಾರಂತರ ಪತ್ನಿ ಪ್ರೇಮಾ ಕಾರಂತರು 2007ರ ವರ್ಷದಲ್ಲಿ ಅವರು ನಿಧನರಾಗುವವರೆಗೆ ‘ಬೆನಕ’ ತಂಡವನ್ನು  ನಡೆಸಿಕೊಂಡು ಬಂದಿದ್ದರು.

1962ರಲ್ಲಿ ಕಾರಂತರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿ ಪಡೆದರು.  1969 ಮತ್ತು 1972ರ ಅವಧಿಯಲ್ಲಿ  ದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ನಾಟಕ ಶಿಕ್ಷಕರಾಗಿ ಕೆಲಸಮಾಡಿದರು. ನಂತರ ಹೆಂಡತಿಯೊಡನೆ ಬೆಂಗಳೂರಿಗೆ ಮರಳಿದರು. ಅಲ್ಲಿ ಸಿನಿಮಾ ಮತ್ತು ಸಂಗೀತದಲ್ಲಿ ಕೆಲಸಮಯ ಕಳೆದರು. ಆಗ ಗಿರೀಶ್ ಕಾರ್ನಾಡ್ ಮತ್ತು ಯು. ಆರ್. ಅನಂತಮೂರ್ತಿಯಂತಹವರ ಒಡನಾಟ ಅವರಿಗೆ ದೊರಕಿತು.  1977ರಲ್ಲಿ ಅವರು ರಾಷ್ಟ್ರೀಯ ನಾಟಕ ಶಾಲೆ ಮರಳಿದರು,, ಆದರೆ ಈ ಬಾರಿ ಅವರು ಅದರ ನಿರ್ದೇಶಕರು.  ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ರಂಗಭೂಮಿಯನ್ನು ದೇಶದ ಮೂಲೆಮೂಲೆಗೆ ಕೊಂಡೊಯ್ದರು. ತಮಿಳುನಾಡಿನ ಮದುರೈಯಂತಹ ದೂರ ದೂರದದ ಸ್ಥಳಗಳಲ್ಲಿ ಕೂಡಾ ಅನೇಕ ಕಮ್ಮಟಗಳನ್ನು ನಡೆಸಿದರು. ನಂತರ ಮಧ್ಯಪ್ರದೇಶ ಸರ್ಕಾರವು ‘ಭಾರತಭವನ’ದ ಆಶ್ರಯದಲ್ಲಿದ್ದ ರಂಗಮಂಡಲ ರೆಪರ್ಟರಿಯ ಮುಖ್ಯಸ್ಥರಾಗಿರಲು ಅವರನ್ನು ಆಹ್ವಾನಿಸಿತು. ಅಲ್ಲಿ 1981ರಿಂದ 1986ರ ವರೆಗೆ ಸೇವೆ ಸಲ್ಲಿಸಿ ಅವರು ಕರ್ನಾಟಕಕ್ಕೆ ಮರಳಿದರು.

1989ರಲ್ಲಿ ಕರ್ನಾಟಕ ಸರಕಾರವು ಮೈಸೂರಿನಲ್ಲಿ ರೆಪರ್ಟರಿ ಸ್ಥಾಪಿಸಲು ಅವರನ್ನು ಕರೆಯಿತು. ಅದಕ್ಕೆ ರಂಗಾಯಣ ಎಂದು ಹೆಸರಿಟ್ಟು 1995ರವರೆಗೆ ಅದರ ಮುಖ್ಯಸ್ಥರಾಗಿದ್ದರು.

ಬಿ ವಿ ಕಾರಂತರು ಅನೇಕ ನಾಟಕಗಳನ್ನು ನಿರ್ದೇಶಿಸಿರುವುದರ ಜೊತೆಗೆ  ನಾಟಕಗಳಿಗೆ ಸಂಗೀತವನ್ನೂ ಮೋಹಕವಾಗಿ ಸೃಜಿಸುತ್ತಿದ್ದರು.  ಕಾರಂತರು ತಮ್ಮ ನಾಟಕಗಳಲ್ಲಿ ಯಕ್ಷಗಾನ ಜಾನಪದ ಪದ್ಧತಿಗಳನ್ನೂ ಸೇರಿಸಿಕೊಂಡು ಕನ್ನಡ ನಾಟಕರಂಗದಲ್ಲಿ ಅಪಾರ ಪ್ರಭಾವ ಬೀರಿದವರಾಗಿದ್ದಾರೆ. ‘ಈಡಿಪಸ್’,  ‘ಹಯವದನ’, ‘ಸತ್ತವರ ನೆರಳು’, ‘ಕತ್ತಲೆ ಬೆಳಕು’, ‘ಹುಚ್ಚು ಕುದುರೆ’, ‘ಏವಂ ಇಂದ್ರಜಿತ್’, ‘ಸಂಕ್ರಾಂತಿ’, ಜೋಕುಮಾರಸ್ವಾಮಿ’, ‘ಹುತ್ತವ ಬಿಡರೆ’, ‘ಗೋಕುಲ ನಿರ್ಗಮನ’  ಅಂತಹ ನಾಟಕಗಳು ಬಿ. ವಿ. ಕಾರಂತರ ಪ್ರಖ್ಯಾತಿಯನ್ನು ಮೇರು ಮಟ್ಟಕ್ಕೆ ಕೊಂಡೊಯ್ದಿದ್ದವು.    ಮಕ್ಕಳ ನಾಟಕಗಳಲ್ಲಿ ‘ಪಂಜರ ಶಾಲೆ’, ‘ಅಳಿಲು ರಾಮಾಯಣ’, ‘ನೀಲಿ ಕುದುರೆ’, ‘ಹೆಡ್ಡಾಯಣ’, ‘ಡಿ ಗ್ರೇಟ್ಫುಲ್ ಮ್ಯಾನ್’ ಪ್ರಮುಖವಾದವು.

ಹಿಂದಿಯಲ್ಲಿ ‘ಅಂಧೇರ್ ನಾಗರಿ ಚೌಪಟ್ ರಾಜಾ’,  ‘ಕಿಂಗ್ ಲಿಯರ್’, ‘ಸ್ಕಂದಗುಪ್ತ’, ‘ಚಂದ್ರಹಾಸ’, ‘ಘಾಶೀರಾಂ ಕೊತ್ವಾಲ್’,  ಮುಂತಾದವು ಕಾರಂತರ ಪ್ರಸಿದ್ಧ ನಾಟಕಗಳು.  ಕನ್ನಡ ಹಿಂದಿಗಳಲ್ಲದೆ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಪಂಜಾಬಿ, ಉರ್ದು, ಸಂಸ್ಕೃತ ಭಾಷೆಗಳಲ್ಲೂ ನಾಟಕಗಳನ್ನು ನಿರ್ದೇಶಿಸಿದ್ದರು ಎಂಬುದು ಅವರೆಷ್ಟು ವಿದ್ವಾಂಸರು ಎಂಬುದನ್ನು ಸಾಬೀತು ಪಡಿಸುತ್ತದೆ.

ಕನ್ನಡ ಚಿತ್ರರಂಗಕ್ಕೆ ವಿಶ್ವಖ್ಯಾತಿಯನ್ನು ತಂದ ‘ತಬ್ಬಲಿಯು ನೀನಾದೆ ಮಗನೆ’, ‘ಚೋಮನ ದುಡಿ’,  ‘ವಂಶವೃಕ್ಷ’  ಚಿತ್ರಗಳನ್ನು ನಿರ್ದೇಶಿಸಿದವರು ಬಿ. ವಿ. ಕಾರಂತರು.  ಅವರು ‘ಫಣಿಯಮ್ಮ’, ಘಟಶ್ರಾದ್ಧ’, ‘ಕನ್ನೇಶ್ವರ ರಾಮ’, ‘ ಚೋಮನದುಡಿ’, ‘ಕಾಡು’, ‘ಋಷ್ಯಶೃಂಗ’ ಚಿತ್ರಗಳಿಗೆ ನೀಡಿದ ಸಂಗೀತವನ್ನಂತೂ ಜನ ನಿರಂತರ ಕೊಂಡಾಡುತ್ತಾರೆ.  ‘ಹಂಸಗೀತೆ’ಯಲ್ಲಿ ಅವರು ನಿರ್ವಹಿಸಿದ ಸಂಗೀತಕಾರನ ಪಾತ್ರವೂ ನೆನಪಾಗುತ್ತದೆ.  ಕೆಲವೊಂದು ಹಿಂದಿ ಬಂಗಾಳಿ ಚಿತ್ರಗಳಿಗೂ ಸಂಗೀತ ನೀಡಿದ್ದರು.     ಕಾರಂತರ ನಾಟಕ ಮತ್ತು ಸಿನಿಮಾಗಳಿಂದ ಕನ್ನಡಕ್ಕೆ ದೊರೆತ ಪ್ರತಿಭೆಗಳ ದಂಡು ಕೂಡಾ ಅಮೂಲ್ಯವಾದದ್ದು.  ಅದಕ್ಕೂ ಮಿಗಿಲಾದದ್ದು ಅದು ಕನ್ನಡದ ಹವ್ಯಾಸಿ ರಂಗಭೂಮಿ ಮತ್ತು ಕಲಾತ್ಮಕ ಚಿತ್ರಗಳ ಶ್ರೇಷ್ಠ ಪರಂಪರೆಗೆ ನೀಡಿದ ವೈವಿಧ್ಯಮಯ ಪರಂಪರೆ.

ಕಾರಂತರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕಾಳಿದಾಸ ಸಮ್ಮಾನದಂತಹ ಮಹಾನ್ ಗೌರವಗಳು ಅರಸಿ ಬಂದವು.  ಬಿ ವಿ ಕಾರಂತರು 2002ರ  ವರ್ಷದಲ್ಲಿ ನಿಧನರಾದರು.

ದೇಶದಲ್ಲೆಡೆ ರಂಗಭೂಮಿ, ಸಿನಿಮಾ, ಸಂಗೀತ ಕ್ಷೇತ್ರಗಳಲ್ಲಿ  ಮಹಾನ್ ಸಾಧನೆಗೈದ ಬಿ.ವಿ. ಕಾರಂತರು ನಾಡಿನಲ್ಲಿ ಚಿರಸ್ಮರಣೀಯರು.   ಈ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನಗಳು.

ಕನ್ನಡ

  • ಈಡಿಪಸ್ (ಗ್ರೀಕ್ ರುದ್ರನಾಟಕ)
  • ಹಯವದನ (ಗಿರೀಶ್ ಕಾರ್ನಾಡ್ ಅವರ ನಾಟಕ)
  • ಪ೦ಜರ ಶಾಲೆ
  • ಗೊಕುಲ ನಿರ್ಗಮನ
  • ಸತ್ತವರ ನೆರಳು
  • ಜೊಕುಮಾರ ಸ್ವಾಮಿ

ಹಿಂದಿ

  • ಅ೦ಧೇರ್ ನಾಗರಿ ಚೌಪಟ್ ರಾಜಾ
  • ಕಿ೦ಗ್ ಲಿಯರ್ (ಶೇಕ್ಸ್‍ಪಿಯರ್ ನ ನಾಟಕ)

ಚಿತ್ರಗಳು

ಬಿ ವಿ ಕಾರ೦ತರು ಚಿತ್ರರ೦ಗದಲ್ಲಿ ಅನೇಕ ಚಿತ್ರಗಳಿಗೆ ಸ೦ಗೀತ ನಿರ್ದೇಶನ ನೀಡಿರುವುದಲ್ಲದೆ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಅವರ ಕೆಲವು ಚಿತ್ರಗಳು

  • ತಬ್ಬಲಿಯು ನೀನಾದೆ ಮಗನೆ (೧೯೭೭)
  • ಚೋಮನ ದುಡಿ (೧೯೭೫, ಶಿವರಾಮ ಕಾರ೦ತರ ಕಾದ೦ಬರಿಯಾಧಾರಿತ, ೧೯೭೫ ರ ಅತ್ಯುತ್ತಮ ಚಿತ್ರ ಪ್ರಶಸ್ತಿ)
  • ವಂಶವೃಕ್ಷ (೧೯೭೧, ಗಿರೀಶ್ ಕಾರ್ನಾಡ್ಪುಟ್ಟಣ್ಣ ಕಣಗಾಲ್ರೊಂದಿಗೆ ನಿರ್ದೇಶನ)

ಕನ್ನಡದಲ್ಲಿ ಅವರು ಸ೦ಗೀತ ನೀಡಿದ ಕೆಲ ಚಿತ್ರಗಳು:

  • ಫಣಿಯಮ್ಮ (೧೯೮೩)
  • ಘಟಶ್ರಾದ್ಧ (೧೯೭೭)
  • ಕನ್ನೇಶ್ವರ ರಾಮ (೧೯೭೭)
  • ಚೋಮನ ದುಡಿ (೧೯೭೫)
  • ಕಾಡು (೧೯೭೩)

ಪ್ರಶಸ್ತಿಗಳು

  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೭೯)
  • ಪದ್ಮಶ್ರೀ ಪ್ರಶಸ್ತಿ(೧೯೮೧)
  • ಗುಬ್ಬಿ ವೀರಣ್ಣ ಪ್ರಶಸ್ತಿ
  • ಕಾಳಿದಾಸ ಸಮ್ಮಾನ

ಸಲ್ಲಾಪ & wikipedia

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *