BT Lalithanayak

ಬಿ.ಟಿ. ಲಲಿತಾನಾಯಕ್

ಬಿ.ಟಿ. ಲಲಿತಾನಾಯಕ್ (೪-೪-೧೯೪೫): ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳೆರಡರಲ್ಲೂ ಅಸಾಧಾರಣ ಸಾಧನೆ ಮಾಡಿದ ಶ್ರೀಮತಿ ಲಲಿತಾನಾಯಕ್ ರವರ ಹುಟ್ಟಿದೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿತಾಂಡ. ತಂದೆ ಬಾಲಾಜಿನಾಯಕ್, ತಾಯಿ ಗಂಗಾಬಾಯಿ. ಏಕೋಪಾಧ್ಯಾಯ ಶಾಲೆ ತಾಂಡ್ಯದಲ್ಲಿ ೪ನೇ ತರಗತಿಯವರೆಗೆ ಓದು. ನಂತರ ಚಿತ್ರದುರ್ಗದಲ್ಲಿ ಎಂಟನೆಯ ತರಗತಿವರೆಗೆ. ವಿದ್ಯಾಭ್ಯಾಸ ಅವಕಾಶಗಳು ಇಲ್ಲದ ಕಾಲ. ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಪ್ರೌಢಶಾಲೆಯ ನಂತರ ಮನೆಯಲ್ಲಿಯೇ ವಿದ್ಯಾಭ್ಯಾಸ. ಕಲಿತದ್ದು ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ. ಬಿ.ಎ. ಓದುತ್ತಿದ್ದ ಅಣ್ಣ ಪ್ರತಿವಾರ ೩೦. ಕಿ.ಮೀ. ದೂರದ ಚಿಕ್ಕಮಗಳೂರಿನಿಂದ ಹಳ್ಳಿಗೆ ಬಂದು ತಂಗಿಗೆ ಕಲಿಸಿದ ವಿದ್ಯೆ. ಹಿಂದಿ ಪರೀಕ್ಷೆಯಲ್ಲಿ ವಿಶಾರದ. ಇವರು ರಚಿಸಿದ ನಾಟಕಗಳು ಧಾರವಾಡದ ಆಕಾಶವಾಣಿ ಕೇಂದ್ರದಿಂದ ಪ್ರಸಾರ. ಕಥೆ, ಕಾದಂಬರಿ, ನಾಟಕ ಎಲ್ಲದರ ಮೂಲದ್ರವ್ಯ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯ ಸಾಹಿತ್ಯ, ದಲಿತರ ನೋವು ಇವುಗಳನ್ನು ಕುರಿತದ್ದೆ. ೧೯೮೨ರಲ್ಲಿ ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿಯೂ ಆರು ವರ್ಷ ಗಳಿಸಿದ ಅನುಭವ.

೧೯೮೬ರಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದಿಂದಾಗಿ ರಾಜಕೀಯ ಪ್ರವೇಶ. ೧೯೮೬-೯೨ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿ. ೧೯೯೪ರಿಂದ ೯೯ರವರೆಗೆ ವಿಧಾನಸಭೆ ಸದಸ್ಯರಾಗಿ, ಸಚಿವೆಯಾಗಿ ಕಾರ‍್ಯನಿರ್ವಹಣೆ.

ಪ್ರಕಟಿತ ಕೃತಿಗಳು: ಚಂದ್ರಪರಾಭವ (ನಾಟಕ ಸಂಕಲನ) ; ಭಟ್ಟನ ಕನಸು (ಮಕ್ಕಳ ಕಥಾ ಸಂಕಲನ) ; ನೆಲೆ ಬೆಲೆ, ಗತಿ (ಕಾದಂಬರಿ) ; ಹಬ್ಬ ಮತ್ತು ಬಲಿ (ಕಥಾಸಂಕಲನ) ; ನಂ ರೂಪ್ಲಿ, ಇದೇ ಕೂಗು ಮತ್ತೆ ಮತ್ತೆ, ಒಡಲ ಬೇಗೆ, ಬಿದಿರು ಮೆಳೆ ಕಂಟಿಯಲ್ಲಿ, ಸವಾಸೇರು (ಕವನ ಸಂಕಲನ); ಚುಟುಕುಗಳ ಸಂಕಲನ ಪ್ರಕಟಿತ. ಗತಿ ಕಾದಂಬರಿ ಕರ್ನಾಟಕ ವಿಶ್ವವಿದ್ಯಾಲಯದ ೩ನೇ ವರ್ಷದ ಬಿ.ಎ. ತರಗತಿಗೆ, ಹಬ್ಬ ಮತ್ತು ಬಲಿ ಕಥಾಸಂಕಲನ ಗುಲಬರ್ಗಾ ವಿಶ್ವವಿದ್ಯಾಲಯದ ಎಂ.ಎ. ತರಗತಿಗೆ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಥಮ ಕಲಾ ತರಗತಿ ಪಠ್ಯಪುಸ್ತಕ ಕಾವ್ಯ ಸಂಗಮಕ್ಕೆ ೮ ಕವನಗಳು ಸೇರ‍್ಪಡೆಯಾಗಿ ಪಠ್ಯಪುಸ್ತಕಗಳಾಗಿವೆ.

ಸಂದ ಪ್ರಶಸ್ತಿ ಗೌರವಗಳು ಹಲವಾರು. ಉತ್ತಮ ಶಾಸಕಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜೀವಗಾಂ ಏಕತಾ ಪ್ರಶಸ್ತಿ, ಶ್ರೀಮತಿ ಸಾವಿತ್ರಮ್ಮ ದೇ.ಜ.ಗೌ. ಮಹಿಳಾ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ಕಿರಣ ಪ್ರಭಾ ಪ್ರಶಸ್ತಿ, ಕಾಯಕ ಸಮ್ಮಾನ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ ಮೊದಲುಗೊಂಡು ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಸಂದ ಪ್ರಶಸ್ತಿಗಳಲ್ಲಿ ಪ್ರಮುಖವಾದುವುಗಳು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 3.55 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *