ಬಿ.ಎಸ್. ಚಂದ್ರಕಲಾ (೨೧.೩.೧೯೩೧ – ೪.೩.೨೦೦೫): ಸಾಹಿತಿ, ಸಂಗೀತರತ್ನ ಬಿರುದಾಂಕಿತೆ ಚಂದ್ರಕಲಾರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಜಿ.ಆರ್. ಸಿದ್ದಪ್ಪ, ತಾಯಿ ಭದ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಇಂಟರ್ ಮೀಡಿಯೇಟ್‌ವರೆಗೆ ಓದಿದ್ದು ಬೆಂಗಳೂರಿನಲ್ಲಿ . ಬಾಲ್ಯದಿಂದಲೇ ಹತ್ತಿದ ಸಂಗೀತದ ಗೀಳು, ಬಾಲಕಿಗೆ ಶ್ರೀಮತಿ ಪದ್ಮಾವತಮ್ಮನವರಲ್ಲಿ ಸಂಗೀತ ಪಾಠ. ಶಂಭುಲಿಂಗಪ್ಪನವರಿಂದ ರೇಣುಕ ಗೀತೆ ಪಾಠ. ಏಳನೇ ವರ್ಷದಲ್ಲೇ ರೇಣುಕ ಗೀತೆಗಳ ಕಛೇರಿ ನಡೆಸಿದ್ದರು. ಹಾರ‍್ಮೋನಿಯಂ ನುಡಿಸಿ ಸಂಗೀತ ಕಲಿಯುತ್ತಿದ್ದವಳಿಗೆ ಸಂಬಂಯೊಬ್ಬರು ಪಿಟೀಲು ಕೈಲಿ ಹಾಕಿದರು. ಹತ್ತೊಂಬತ್ತನೇ ವಯಸ್ಸಿಗೆ ವೈಧವ್ಯ. ದುಃಖ ಮರೆಯಲು ಮೊರೆ ಹೋದದ್ದು ಸಂಗೀತಕ್ಕೆ. ಸಂಗೀತದ ಗುರು ಆರ್.ಆರ್. ಕೇಶವ ಮೂರ್ತಿಯವರ ಬಳಿ ಪಿಟೀಲು ಕಲಿಕೆ.
ಸಂಗೀತದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ೨ನೇ ರ‍್ಯಾಂಕಿನಿಂದ ವಿಜೇತಳಾಗಿ ಪಡೆದ ಚಿನ್ನದ ಪದಕ. ೧೯೬೧ರಲ್ಲಿ ಬೆಂಗಳೂರು ನಗರಸಭಾ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿ ಹುದ್ದೆ. ಶಾಲೆಯಲ್ಲಿ ಸಂಗೀತ ತರಗತಿ ನಿಂತು ಜನಪದ ಗೀತೆಗಳ ಬೋಧನೆ. ಜಾನಪದ ಗೀತೆಗಳಿಗೆ ಸ್ವರಪ್ರಸ್ತಾರ ಹಾಕಿ ‘ಜಾನಪದ ಸ್ವರ ಸಂಪದ’ ಕೃತಿ ಪ್ರಕಟಣೆ. ಕಬ್ಬಿಣದಕಡಲೆಯಂತಿದ್ದ ನಿಜಗುಣರ ೪೨ ಪದಗಳಿಗೆ ಅರ್ಥ ಬರೆದು ರಾಗ ಸಂಯೋಜಿಸಿ, ಸ್ವರಪ್ರಸ್ತಾರ ಹಾಕಿ ರಚಿಸಿದ ಕೃತಿ ‘ನಿಜಗುಣ ಸ್ವರಸರಿತಾ.’ ಸ್ವಂತ ಕವನಗಳಿಗೆ ಸ್ವರಪ್ರಸ್ತಾರ ಹಾಕಿ ರಾಗ ಸಂಯೋಜನೆ ಮಾಡಿ ಪ್ರಕಟಿಸಿದ್ದು ‘ಝೇಂಕಾರ’ ಎಂಬ ಕೃತಿ. ರಾಮೋತ್ಸವ, ಸಂಘ, ಸಮಾಜಗಳಲ್ಲಿ ನಡೆಸಿಕೊಟ್ಟ ಸಂಗೀತ ಕಚೇರಿಗಳು.
ರಚಿಸಿದ ಗ್ರಂಥಗಳು ಹಲವಾರು. ಸಂಗೀತ ಬಾಲಪಾಠ, ಝೇಂಕಾರ, ನಿಜಗುಣ ಸ್ವರಸರಿತಾ, ಜಾನಪದ ಸ್ವರಸಂಪದ-ಸಂಗೀತದ ಹೊತ್ತಗೆಗಳು. ಸಂಗೀತದ ಸುಳಿಯಲ್ಲಿ, ಬಿಸಿಲು-ನೆರಳು- ಕಾದಂಬರಿ. ಕಾಂಚನದ ಕಮರು-ನಾಟಕ. ಕವಿತಾ ಕಿರಣ, ರಸರಾಗರಸಿಕೆ, ಪ್ರಕೃತಿಯಾರಾಧನೆ ಮುಂತಾದ ಕವನ ಸಂಕಲನಗಳೂ ಸೇರಿ ೨೦ಕ್ಕೂ ಹೆಚ್ಚು ಕೃತಿ ಪ್ರಕಟಿತ.
ಉತ್ತಮ ಶಿಕ್ಷಕಿ ಪ್ರಶಸ್ತಿ, ಸಂಗೀತರತ್ನ ಬಿರುದು ಪಡೆದುದಕ್ಕಿಂತ ನಿವೃತ್ತಿಯಿಂದ ಬಂದ ಹಣದಲ್ಲಿ ಸ್ವರ-ಲಿಪಿ-ಪ್ರತಿಷ್ಠಾನ ರಚಿಸಿ ಪ್ರತಿವರ್ಷ ಹಿರಿಯ ವಿದುಷಿ ಹಾಗೂ ಹಿರಿಯ ಸಾಹಿತಿ (ಮಹಿಳಾ)ಗಳಿಗೆ ಸ್ವರಭೂಷಿಣಿ, ಲಿಪಿಪ್ರಾಜ್ಞೆ ಪ್ರಶಸ್ತಿ ಕೊಟ್ಟು, ಸಂಗೀತ-ಸಾಹಿತ್ಯದ ಬಗ್ಗೆ ಇದ್ದ ಕಾಳಜಿ ತೋರಿಸಿದ್ದಾರೆ. ಸದಾ ಸಂಗೀತ ಸಾಹಿತ್ಯದಲ್ಲಿ ತೊಡಗಿದ್ದು ನಿಧನರಾದದ್ದು ೪.೩.೨೦೦೫ರಲ್ಲಿ.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.