Wednesday , 24 April 2024
BL Veenu

ಬಿ.ಎಲ್‌. ವೇಣು

ಬಿ.ಎಲ್‌. ವೇಣು (೦೫.೦೫.೧೯೪೫): ಕಥೆ, ಕಾದಂಬರಿ, ನಾಟಕ, ಚಿತ್ರಕಥೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ವೈಚಾರಿಕತೆ, ಪ್ರಯೋಗಶೀಲತೆಗಳಿಂದ, ಪ್ರಗತಿಪರ ವಿಚಾರಗಳಿಂದ ಯಾವ ಗುಂಪಿಗೂ ಸೀಮಿತವಾಗದೆ ಸಾಹಿತ್ಯರಚನೆಯಲ್ಲಿ ನಿರತರಾಗಿರುವ ವೇಣುರವರು ಹುಟ್ಟಿದ್ದು ಕೋಟಿಕೊತ್ತಲಗಳ ಊರಾದ ಚಿತ್ರದುರ್ಗದಲ್ಲಿ. ೧೯೪೫ರ ಮೇ ೫ ರಂದು. ತಂದೆ ವೃತ್ತಿರಂಗಭೂಮಿಯ ನಟರಾದ ಲಕ್ಷ್ಮಯ್ಯ, ತಾಯಿ ಸುಶೀಲಮ್ಮ ಹಾರ್ಮೋನಿಯಂ ವಾದಕಿ.

ರಂಗಭೂಮಿನಟರೆಂದ ಮೇಲೆ ಅನಿಯತ ವರಮಾನದಿಂದ ಬೆನ್ನಿಗೆ ಕಟ್ಟಿಕೊಂಡೇ ಬಂದ ಬಡತನದ ಬದುಕು. ಆದರೂ ವೇಣುವಿಗೆ ಪ್ರೈಮರಿ ಶಾಲೆಯಲ್ಲಿದ್ದಾಗಲೇ ನಾಟಕದ ಬಗ್ಗೆ ಎಲ್ಲಿಲ್ಲದ ಆಸ್ಥೆ ಬೆಳೆಯತೊಡಗಿತು. ದುರ್ಗಕ್ಕೆ ಬಂದು ಮೊಕ್ಕಾಂ ಮಾಡುತ್ತಿದ್ದ ಕಂಪನಿ ನಾಟಕಗಳನ್ನು ನೋಡಿ ಬಂದು ಸ್ನೇಹಿತರನ್ನು ಸೇರಿಸಿಕೊಂಡು ಮನೆಯ ಹಿತ್ತಲಲ್ಲಿ ಸೀರೆಯ ಪರದೆ ಕಟ್ಟಿ, ರಂಗಸಜ್ಜಿಕೆ ನಿರ್ಮಿಸಿ, ಬಣ್ಣಬಣ್ಣದ ಬಳಪಗಳನ್ನು ಪುಡಿಮಾಡಿ ಮುಖಕ್ಕೆ ಬಳಿದು, ಇದ್ದಿಲಿನಿಂದ ಮೀಸೆ ಬರೆದು ನಾಟಕದ ಪಾತ್ರಧಾರಿಗಳಾಗುತ್ತಿದ್ದರು.

[sociallocker]ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಮಾಸ್ಟರ್ ಹಿರಣ್ಣಯ್ಯನವರ ಕಂಪನಿ ನಾಟಕದಲ್ಲಿ ವಹಿಸಿದ ಬಾಲ ಕಲಾವಿದನ ಪಾತ್ರ. ಎಸ್.ಎಸ್.ಎಲ್‌.ಸಿ ಯಲ್ಲಿ ಉತ್ತೀರ್ಣರಾದ ನಂತರ ಪಡೆದ ವಿದ್ಯಾರ್ಥಿವೇತನದಿಂದ ಸಾಗಿದ ಓದು.

ಬಿ.ಎಸ್ಸಿ. ಮುಗಿಸಿದ ನಂತರ ಪಿಡಬ್ಲ್ಯೂಡಿ ಗುತ್ತಿಗೆದಾರರ ಕೈ ಕೆಳಗೆ ಮೇಸ್ತ್ರಿಯಾಗಿ, ಚಿತ್ರದುರ್ಗ ಲಾ ಕಾಲೇಜಿನಲ್ಲಿ ಗುಮಾಸ್ತರಾಗಿ, ಕಾಲೇಜು ಹುಡುಗ ಹುಡುಗಿಯರಲ್ಲಿ ಹಾಡು ಬರುವವರ ದಂಡುಕಟ್ಟಿ ಉಮಾವಾದ್ಯಗೋಷ್ಠಿ ನೇತಾರರಾಗಿ – ಹೀಗೆ ಹತ್ತು ಹಲವು ವೃತ್ತಿ-ಪ್ರವೃತ್ತಿಗಳು.

ಕೆ.ಪಿ.ಎಸ್‌.ಸಿ. ಪರೀಕ್ಷೆಗೆ ಕುಳಿತು ಫಲ ಕೊಟ್ಟಿದ್ದು, ಗುಲಬರ್ಗಾ ಜಿಲ್ಲಾ ಆಸ್ಪತ್ರೆಯಲ್ಲಿ ದೊರೆತ ಎರಡನೆಯ ದರ್ಜೆಯ ಗುಮಾಸ್ತೆ ಕೆಲಸ. ಸಂಜೆ ಹೊತ್ತು ಕಳೆಯಲು ಲೈಬ್ರರಿ ಸಹವಾಸ. ಕುವೆಂಪು, ಕಾರಂತ, ಭೈರಪ್ಪ, ಮುಂತಾದವರ ಸಾಹಿತ್ಯ ಓದಿ ಪ್ರಚೋದಿತರಾಗಿ ಬರೆದ ಕಥೆಗಳು ಜನಪ್ರಗತಿ ಪತ್ರಿಕೆಯಲ್ಲಿ ಪ್ರಕಟಿತ. ನಂತರ ಬರೆದದ್ದು ಸುಧಾ, ಮಯೂರ, ಪ್ರಜಾವಾಣಿ, ಕನ್ನಡಪ್ರಭ, ಪತ್ರಿಕೆಗಳಿಗೆ ಸಣ್ಣ ಕತೆಗಳು. ಪ್ರೇಮ ವಂಚಿತರಾಗಿ ಬರೆದ ಕಥೆ ‘ಪ್ರೇಮ ಮದುವೆ ಮತ್ತು ಶೀಲ’ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡು ವಿಶೇಷ ಚರ್ಚೆಗೆ ನಾಂದಿ ಹಾಡಿತು.

ಬಂಡಾಯದ ಬಿಸಿ ಹತ್ತಿಸಿಕೊಂಡ ವೇಣುರವರು ಬರೆದ ‘ಲಿಂಗನೆಟ್ಟ ಪ್ರಸಂಗ’ ಕಥೆಗೆ (೧೯೭೮), ‘ಬೆತ್ತಲೆ ಸೇವೆ’ ಕಾದಂಬರಿಗೆ (೧೯೭೯) ಪ್ರಜಾಮತ ವಾರಪತ್ರಿಕೆಯ ಸ್ಪರ್ಧೆಯಲ್ಲಿ ಮತ್ತು ಪ್ರಜಾವಾಣಿ ದೀಪಾವಳಿ ಕಥಾ ಸ್ಪಧೆಯಲ್ಲಿ ‘ಸುಡುಗಾಡು ಸಿದ್ಧನ ಪ್ರಸಂಗ’ ಕಥೆಗೆ ಪ್ರಥಮ ಬಹುಮಾನ ಪಡೆದವು.

ಬೆಲ್ಚಿಯ ನಾರಾಯಣ ಪುರದಲ್ಲಿ ಸವರ್ಣೀಯರು ದಲಿತರನ್ನು ಜೀವಂತವಾಗಿ ಸುಟ್ಟ ವರದಿಯನ್ನಾಧರಿಸಿ ಬರೆದ ‘ಅತಂತ್ರರು’ ಕಾದಂಬರಿಗೆ ಸುಧಾ ಪತ್ರಿಕೆಯ ಮೊದಲ ಬಹುಮಾನ (೧೯೮೨) ಪಡೆದಿದ್ದಲ್ಲದೆ ಧಾರಾವಾಹಿಯಾಗಿ ಪ್ರಕಟಗೊಂಡಾಗ ವೇಣುರವರ ಸಾಹಿತ್ಯ ಸೃಷ್ಟಿಯ ಬಗ್ಗೆ ಸಾಹಿತ್ಯಾಸಕ್ತರು ಗಮನಹರಿಸಿದರು.

ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ‘ದೊಡ್ಡಮನೆ’ ಕಥೆಯಾಧರಿಸಿ ‘ದೊಡ್ಡಮನೆ ಎಸ್ಟೇಟ್‌’ ಚಲನಚಿತ್ರವಾಯಿತು. ಸಿದ್ಧಲಿಂಗಯ್ಯನವರ ನಿರ್ದೇಶನದಲ್ಲಿ ಪರಾಜಿತ ಕಾದಂಬರಿ ಚಲನಚಿತ್ರವಾಗಿ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಿಕೊಂಡಿತು. ಈ ಮಧ್ಯೆ ಚಿತ್ರದುರ್ಗದ ಇತಿಹಾಸದ ಮದಕರಿನಾಯಕ ಕಾದಂಬರಿ ಬರೆದು ವಾದವಿವಾದಗಳಾದರೂ ಸಮರ್ಥವಾಗಿ ಉತ್ತರಿಸಿದರು. ‘ಪ್ರೇಮಪರ್ವ’ ಕಾದಂಬರಿಯು ಚಲನಚಿತ್ರವಾಗಿ ಲವ್‌ಸ್ಟೋರಿಗಳ ಟ್ರೆಂಡ್‌ಗೆ ನಾಂದಿ ಹಾಡಿತು. ಇದೇ ಚಲನಚಿತ್ರವು ತಮಿಳಿನಲ್ಲಿ ‘ಪೂವಿಳಂಗು’ ತೆಲುಗಿನಲ್ಲಿ ವಾಲಕ್ಕೋಸಿ ಮತ್ತು ಹಿಂದಿಯಲ್ಲಿ ‘ಜೀನಾ ಮರ್ನಾ ತೇರೇಸಂಗ್‌’ ಆಗಿ ಜಯಭೇರಿ ಬಾರಿಸಿತು.

ಅಮೃತಘಳಿಗೆ’ ಚಲನಚಿತ್ರಕ್ಕೆ ಸಂಭಾಷಣೆ ಬರೆಯಲು ಪುಟ್ಟಣ್ಣ ಕಣಗಾಲರು ಆಹ್ವಾನಿಸಿದರು. ಹೀಗೆ ಚಲನಚಿತ್ರಗಳಿಗೆ ಸಂಭಾಷಣೆ, ಕಾದಂಬರಿಗಳ ರಚನೆಯಲ್ಲಿ ತೊಡಗಿದ್ದು ತರಂಗವಾರಪತ್ರಿಕೆಯೂ ‘ಪ್ರೀತಿವಾತ್ಸಲ್ಯ’ ಎಂಬ ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಿತು.

ಚಲನಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದಂತೆಲ್ಲ ಹಲವಾರು ನಿರ್ದೇಶಕರ ಪರಿಚಯದ ಲಾಭ. ಭಾರ್ಗವರವರು ನಿರ್ದೇಶಿಸಿದ, ವಿಷ್ಣುವರ್ಧನ್‌ ನಾಯಕ ನಟರಾಗಿ ಅಭಿನಯಿಸಿದ ಜನನಾಯಕ, ಕೃಷ್ಣರುಕ್ಮಿಣಿ ಚಿತ್ರಗಳಿಗೂ ಸಂಭಾಷಣೆ ಬರೆದಿದ್ದು ಯಶಸ್ವಿ ಚಿತ್ರಗಳೆನಿಸಿದವು.

ಸಾಹಿತ್ಯ ಕ್ಷೇತ್ರದಲ್ಲಿ, ಚಲನಚಿತ್ರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದ್ದಂತೆ ಒಮ್ಮೆ ಅಪಘಾತಕ್ಕೀಡಾಗಿ ಬಲಗೈ ಮುರಿದುಕೊಂಡು ಬರವಣಿಗೆಯೇ ಸಂಪೂರ್ಣ ನಿಂತೇ ಹೋಯಿತೇನೋ ಎಂಬ ಅಧೀರತೆ ಮನಸ್ಸಿಗೆ ಬಂದರೂ ಧೃತಿಗೆಡದೆ ಎಡಗೈಯಲ್ಲೇ ಬರೆಯುವುದನ್ನು ರೂಢಿಸಿಕೊಂಡು ಪತ್ರಿಕೆಗಳಿಗೆ ಬರೆಯತೊಡಗಿದರು. ಚೇತರಿಸಿಕೊಳ್ಳುತ್ತಿರುವಾಗಲೇ ಬಲಗೈಗೆ ಪೆನ್ನು ಕಟ್ಟಿಕೊಂಡು ಬೃಹನ್ಮಠದ ಮೂಲಪುರುಷರ ಬಗ್ಗೆ ಬರೆದ ಐತಿಹಾಸಿಕ ಕಾದಂಬರಿ ‘ಕ್ರಾಂತಿಯೋಗಿ ಮರುಳ ಸಿದ್ಧ’. ಮತ್ತೊಮ್ಮೆ ಅಪಘಾತದಲ್ಲಿ ಕಾಲುಮುರಿದುಕೊಂಡು ಮೂರು ತಿಂಗಳು ಹಾಸಿಗೆ ಹಿಡಿದರು.

ಓದುವಾಗ, ಆರ್ಕೆಸ್ಟ್ರಾ ತಂಡ ಕಟ್ಟಿ ಕಾರ್ಯಕ್ರಮ ಕೊಟ್ಟಾಗ, ಕೆಲಸವಿಲ್ಲದೆ ಕುಳಿತಿದ್ದಾಗ, ತಮ್ಮನೊಬ್ಬ ರಕ್ತಕ್ಯಾನ್ಸ್‌ಗೆ ಒಳಗಾದಾಗ, ತಂದೆತಾಯಿಗಳಿಗೆ ಹೃದಯಾಘಾತವಾದಾಗ, ಅಪಘಾತದಲ್ಲಿ ಕೈ ಮತ್ತು ಕಾಲು ಮುರಿದುಕೊಂಡಾಗ ಜೀವನವೇ ಮುಗಿದುಹೋಯಿತೇನೋ ಎನ್ನಿಸಿಬಿಡುವುದು ಸಹಜವಾದರೂ – ಧೃತಿಗೆಡದೆ ಇದಕ್ಕೆಲ್ಲ ಸಡ್ಡುಹೊಡೆದು ಹೊಸಮನುಷ್ಯನಾಗಿ ಮೈಕೊಡವಿಕೊಂಡು ಎದ್ದುನಿಂತು ಬರೆಯತೊಡಗಿದರು.

ಕಥೆ, ಕಾದಂಬರಿಗಳನ್ನು ಬರೆಯುತ್ತಾ ಹೋದಂತೆ ಇವರಿಗೆ ರಕ್ತಗತವಾಗಿ ಬಂದಿದ್ದ ನಾಟಕದ ಸೆಲೆ ಬತ್ತಿ ಹೋಗದೆ, ಬರೆದ ನಾಟಕ ‘ಯಮಲೋಕದಲ್ಲಿ ಮಾನವ’. ರಾಜಕಾರಣಿ, ಹಿಪ್ಪಿ, ಡಾಕ್ಟರ್, ವಿದ್ಯಾರ್ಥಿ, ಸಿನಿಮಾನಟ, ಕಿಂಕರರು, ಚಿತ್ರಗುಪ್ತ, ಯಮರಾಜ ಮುಂತಾದ ಪಾತ್ರಗಳಿಂದ ಕೂಡಿದ್ದು ಭ್ರಷ್ಟವ್ಯವಸ್ಥೆಯ ದುಷ್ಪರಿಣಾಮಗಳನ್ನೂ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ಕಥಾಸಂಕಲನಗಳು: ಬಣ್ಣಗಳು, ದೊಡ್ಡಮನೆ ಎಸ್ಟೇಟ್‌, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ ಮತ್ತು ಬಣ್ಣದ ಗೊಂಬಿ.
ನಾಟಕಗಳು – ಯಮಲೋಕದಲ್ಲಿ ಮಾನವ (ನಗೆನಾಟಕ) ಭೂಲೋಕಕ್ಕೆ ಬಂದ ಬಸವಣ್ಣ, ರಾಜಾ ವೀರ ಗಂಡುಗಲಿ ಮದಕರಿನಾಯಕ, ಹೋರಾಟ (ಏಡ್ಸ್‌ ಬಗ್ಗೆ)

ಮಿನಿಕಾದಂಬರಿಗಳು: ಗುಹೆ ಸೇರಿದವರು (ಮಕ್ಕಳಿಗಾಗಿ), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ ಮೊದಲಾದವು.

ಕಾದಂಬರಿಗಳು: ಪರಾಜಿತ, ಪ್ರೇಮಪರ್ವ, ಅಜೇಯ, ಮೋಬಳ್ಳಿಯೋರ ಬೆತ್ತಲೆಸೇವೆ, ಅತಂತ್ರರು ಮುಂತಾದ ೨೬ ಕಾದಂಬರಿಗಳು, ಇವುಗಳಲ್ಲಿ ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಕತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ಧ, ಹೆಬ್ಬುಲಿ ಹಿರೇಮದಕರಿನಾಯಕ ಮುಂತಾದ ೫ ಐತಿಹಾಸಿಕ ಕಾದಂಬರಿಗಳು ಸೇರಿ ೫೦ ಕ್ಕೂ ಹೆಚ್ಚು ಕೃತಿ ರಚಿತ’ವಾಗಿವೆ.

ಇವುಗಳಲ್ಲಿ ಚಲನಚಿತ್ರಗಳಾದ ಕಾದಂಬರಿಗಳೆಂದರೆ ಪರಾಜಿತ, ಪ್ರೇಮಪರ್ವ, ಅಜೇಯ, ದೊಡ್ಡಮನೆ ಎಸ್ಟೇಟ್‌ ಮುಂತಾದ ಸಣ್ಣಕಥೆ ಮತ್ತು ೯ ಕಾದಂಬರಿಗಳಲ್ಲಿ ಪ್ರೇಮಪರ್ವ ೪ ಭಾಷೆಗಳಲ್ಲಿ ಚಲನಚಿತ್ರವಾಗಿದ್ದು ಅಜೇಯ ತಮಿಳಿನಲ್ಲೂ ಬಂದಿದೆ.

ಚಿತ್ರಕತೆ ರಚಿಸಿದ ಚಲನಚಿತ್ರಗಳೆಂದರೆ ರಾಜಾಮಹಾರಾಜ, ನನ್ನವರು, ಮೂರುಜನ್ಮ, ಅಪರಂಜಿ, ಒಲವಿನ ಉಡುಗೊರೆ ಮುಂತಾದವುಗಳಾದರೆ ಸಂಭಾಷಣೆ ರಚಿಸಿದ ಚಲನಚಿತ್ರಗಳ ಪಟ್ಟಿಯೂ ದೊಡ್ಡದೇ ಇದೆ. ದೊಡ್ಡಮನೆ ಎಸ್ಟೇಟ್‌, ಪರಾಜಿತ, ಬೆತ್ತಲೆ ಸೇವೆ, ಅಜೇಯ, ಬಿಡುಗಡೆಯ ಬೇಡಿ, ಪ್ರೇಮಗರಿಗೆ ಮೊದಲಾದ ೬೦ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಇವುಗಳಲ್ಲಿ ಪರಾಜಿತ, ಪ್ರೇಮಪರ್ವ, ಪೂವಿಳಂಗು, ಪ್ರೀತಿವಾತ್ಸಲ್ಯ, ದೇವ, ಒಲವಿನ ಉಡುಗೊರೆ, ವೀರಪ್ಪನಾಯಕ, ಆಟೋಶಂಕರ್ ಮೊದಲಾದ ೮ ಚಲನಚಿತ್ರಗಳು ಶತದಿನೋತ್ಸವ ಆಚರಿಸಿವೆ.

ಚಲನಚಿತ್ರ ಮತ್ತು ಸಾಹಿತ್ಯಕ್ಷೇತ್ರದಿಂದ ಬಂದ ಪ್ರಶಸ್ತಿಗಳು ಹಲವಾರು. ಅಪರಂಜಿ ಚಿತ್ರದ ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿ ಹಾಗೂ ‘ಕಲ್ಲರಳಿ ಹೂವಾಗಿ’ ಚಿತ್ರಕ್ಕಾಗಿ ಚೆನ್ನೈನ SICA (SOUTH INDIAN CENEMATOGRAPHY ASSOCIATION), ಅವಾರ್ಡ್‌ 2006-07ರಲ್ಲಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಪಡೆದುದಲ್ಲದೆ ಗೋವಾದ ಪನೋರಮಾ ವಿಭಾಗದಲ್ಲೂ ಪ್ರದರ್ಶನಗೊಂಡಿದೆ. ಪ್ರೇಮಪರ್ವ ಮತ್ತು ಒಲವಿನ ಉಡುಗೊರೆ ಚಲನಚಿತ್ರಗಳಿಗಾಗಿ ಚಿತ್ರರಸಿಕರ ಸಂಘದ ಪ್ರಶಸ್ತಿಗಳು ದೊರೆತಿವೆ.

ಸಾಹಿತ್ಯ ಪ್ರಶಸ್ತಿಗಳಾದ ರನ್ನ ಸಾಹಿತ್ಯ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಚಿತ್ರದುರ್ಗದ ಬೃಹನ್ಮಠದಿಂದ, ಸಿರಿಗೆರೆ ಶ್ರೀ ಗಳಿಂದ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳ ಜೊತೆಗೆ ಚಿತ್ರದುರ್ಗ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳಾನಾಧ್ಯಾಕ್ಷತೆಯ ಗೌರವ, ಚನ್ನಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳಾನಾಧ್ಯಕ್ಷತೆಯ ಗೌರವಗಳಲ್ಲದೆ ಚಿತ್ರದುರ್ಗದ ನಗರಸಭೆ ವತಿಯಿಂದ ಪೌರಸನ್ಮಾನ, ‘ಸಾಹಿತ್ಯ ಮದಕರಿ’ ಪುರಸ್ಕಾರ ಮುಂತಾದ ಗೌರವ ಪುರಸ್ಕಾರಗಳು ದೊರೆತಿವೆ.

ಬಿ.ಎಲ್‌. ವೇಣು ಸಾಹಿತ್ಯ: ಒಂದು ಅಧ್ಯಯನ ಮಹಾಪ್ರಬಂಧ ಮಂಡಿಸಿ ಉಪನ್ಯಾಸಕರಾದ ಟಿ. ನರಸಿಂಹರಾಜರವರು ಡಾಕ್ಟರೇಟ್‌ ಪಡೆದಿದ್ದರೆ, ಕೆ.ಟಿ. ತಿಮ್ಮಾರೆಡ್ಡಿಯವರು ಎಂ.ಫಿಲ್‌ ಪದವಿ ಪಡೆದಿದ್ದಾರೆ. ಇನ್ನೂ ಇಬ್ಬರು ಪಿಹೆಚ್.ಡಿ. ಅಧ್ಯಯನ ನಡೆಸಿದ್ದಾರೆ.

ದಲಿತರ ನೋವು, ಬಲಿತರ ದಬ್ಬಾಳಿಕೆ ಮುಂತಾದವುಗಳ ನೈಜ ಚಿತ್ರಣ ನೀಡಿರುವ, ಕತೆಕಾದಂಬರಿಗಳಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿರುವ ವೇಣು ಅವರಿಗೆ ೨೦೦೯ರಲ್ಲಿ ಅರ್ಪಿಸಿದ ಅಭಿನಂದನ ಗ್ರಂತ ‘ಚಿನ್ಮೂಲಾದ್ರಿಸಿರಿ’.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ[/sociallocker]

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.43 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *