ಬಾದಾಮಿ : ನಾಮ ವಿವೇಚನೆ
ಶಾಸನಗಳಲ್ಲಿ ಈ ಊರ ಹೆಸರು ವಾತಾಪಿ, ಬಾದಾಮಿ ಎಂಬ ರೂಪಗಳಲ್ಲಿವೆ. ಬಾದಾಮಿಯ ಉಲ್ಲೇಖವು ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಟೊಲೆಮಿ (ಸುಮಾರು ಕ್ರಿ.ಶ. ೧೫೦) ಬರೆದ A guide to geography ಎಂಬ ಪುಸ್ತಕದಲ್ಲಿ. ಆತ ಹೆಸರಿಸಿದ ದಕ್ಷಿಣ ಭಾರತದ ನಗರಗಳಲ್ಲಿ ಬದಿಯಮಯೋಯ್ (Badiamaioi) ಒಂದಾಗಿದೆ. ಇಂದಿನ ಬಾದಾಮಿಯೇ ಟೊಲೆಮಿ ಪ್ರಸ್ತಾಪಿಸಿದ ಬದಿಯಮಯೋಯ್ ಎಂದು ಮಕ್ರಿಂಡಲ್ ಅವರು ಗುರುತಿಸಿದ್ದಾರೆ.[1] ಇದರಿಂದ ಕ್ರಿ.ಶ. ೨ನೆಯ ಶತಮಾನದ ಮಧ್ಯದಲ್ಲಿ ಈ ಊರಿನ ಹೆಸರು ಬಾದಾಮಿ ಎಂದಿತ್ತೆಂದು ತಿಳಿಯುತ್ತದೆ ಮತ್ತು ಪುರಾಣ ಹಿನ್ನೆಲೆಯುಳ್ಳ ಈ ಊರು ಅಷ್ಟು ಹೊತ್ತಿಗೆ ನಗರವಾಗಿ ಬೆಳೆದಿತ್ತೆಂದು ತಿಳಿಯಬೇಕಾಗುತ್ತದೆ. ಈ ಊರು ವಾತಾಪಿ ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಒಂದನೆಯ ಪೊಲೆಕೇಶಿಯ ಶಕ ವರ್ಷ ೪೬೫(ಕ್ರಿ.ಶ. ೫೪೩)ರ ಸಂಸ್ಕೃತ ಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ.[2] ಚಲುಕ್ಯರು ಕನ್ನಡಿಗರೇ ಆಗಿದ್ದರು. ಆಡುಭಾಷೆ ಕನ್ನಡವಾಗಿತ್ತು ಮತ್ತು ಪಂಡಿತರ ಭಾಷೆ ಸಂಸ್ಕೃತವಾಗಿತ್ತು. ಆದ್ದರಿಂದ ಶಾಸನವನ್ನು ರಚಿಸುವಾಗ ‘ಬಾದಾಮಿ’ಯ ಬದಲು ವಾತಾಪಿ ಎಂಬ ಸಂಸ್ಕೃತದ ರೂಪವನ್ನು ಬಳಸಿದ್ದಾರೆ. ವಾತಾಪಿ ಎಂಬ ಹೆಸರಿನಲ್ಲಿ ಈ ಊರು ಚಲುಕ್ಯರ ಕಾಲದಲ್ಲಿ ಮಾತ್ರ ನಿರ್ದೇಶಿತವಾಗಿದೆ. ಚಲುಕ್ಯರ ಪೂರ್ವ ಹಾಗೂ ಚಲುಕ್ಯೋತ್ತರ ಕಾಲದಲ್ಲಿ ಬಾದಾವಿ ಎಂದು ಕರೆಯಲ್ಪಟ್ಟಿದೆ. ಇನ್ನೂ ಒಂದು ಗಮನಾರ್ಹ ಸಂಗತಿ ಎಂದರೆ ರಾಜಕೀಯ ಮಹತ್ವವಿಲ್ಲದ ೭-೮ ಶತಮಾನದವುಗಳೆಂದು ಹೇಳಲಾದ ಬಿಡಿ, ಪುಟ್ಟ ಶಿಲಾಲೇಖಗಳಲ್ಲಿ ಬಾದಾವಿ ಎಂದು ನಿರ್ದೇಶಿಸಲಾಗಿದೆ.[3] ಇದರಿಂದ ಆ ಹೆಸರೇ ಬಳಕೆಯಲ್ಲಿತ್ತೆಂದು ಸ್ಪಷ್ಟವಾಗುತ್ತದೆ.
ಬಾದಾಮಿ ಮತ್ತು ಮಲಪ್ರಭಾ ನದಿಯ ನಡುವಿನ ಬಯಲಿನಲ್ಲಿ ಬನಶಂಕರಿ ಕ್ಷೇತ್ರವಿದೆ. ಈ ಕ್ಷೇತ್ರವು ಸ್ಕಂದ ಪುರಾಣದಲ್ಲಿ ವರ್ಣಿತವಾಗಿದೆ.[4] ಅಪ್ರಕಟಿತ ‘ಶ್ರೀ ಬನಶಂಕರಿ ಮಹಾತ್ಮೆ’ ಎಂಬ ಸ್ಥಳ ಪುರಾಣದಲ್ಲಿ ಬನಶಂಕರಿ ಕ್ಷೇತ್ರ ಮತ್ತು ಹರಿದ್ರಾ ತೀರ್ಥದ ವರ್ಣನೆ ಇದೆ.[5] ಈ ಪುರಾಣದಲ್ಲಿ ಅಗಸ್ತ್ಯನು ಶ್ರೀ ಬನದೇವಿಯನ್ನು ಪೂಜಿಸಿದರೆಂದು ಹೇಳಲಾಗಿದೆ.[6] ಇದರಿಂದ ಪ್ರಾಚೀನ ಕಾಲದಿಂದಲೂ ಬನಶಂಕರಿ ಕ್ಷೇತ್ರದಲ್ಲಿ ಬನದೇವಿಯ ಪೂಜೆ ನಡೆಯುತ್ತಿರಬಹುದೆಂದು ತೋರುತ್ತದೆ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ವನದೇವತೆಯು ಪೂಜಿತಳಾಗಿ ಗ್ರಾಮದೇವತೆಯಾದ ಬನದಮ್ಮಳಿಂದಾಗಿ ಈ ಊರಿಗೆ ಬಾದಾಮಿ ಎಂಬ ಹೆಸರು ಬಂದಿರಬಹುದೆಂದು ತಿಳಿಯಲಾಗಿದೆ.
ಭೂಸ್ಥಿತಿಯ ಮೇಲಿಂದ ಊರುಗಳಿಗೆ ಹೆಸರು ಕೊಡುವ ಪದ್ಧತಿಯನ್ನು ಇತಿಹಾಸದ ಮೊದಲ ಘಟ್ಟದಲ್ಲಿ ಕಾಣುತ್ತೇವೆ. ಬಾದಾಮಿಯಲ್ಲಿ ಅತ್ಯಂತ ಆಕರ್ಷಕವಾದ ನೈಸರ್ಗಿಕ ದೃಶ್ಯವೆಂದರೆ ಮೂರು ದಿಕ್ಕುಗಳಲ್ಲಿ ಕಲ್ಬೆಟ್ಟಗಳಿಂದ ಆವೃತವಾದ ಭೂಪ್ರದೇಶ. ಈ ಪ್ರದೇಶದಲ್ಲಿ ಚಲುಕ್ಯರು ‘ಅಗಸ್ತ್ಯತೀರ್ಥ’ ಎಂಬ ಕೆರೆಯನ್ನು ಕಟ್ಟುವ ಮುನ್ನವೂ ಇಲ್ಲಿ ತೊರೆ ಇದ್ದಿತು.
ಚಲುಕ್ಯರು ಕೆರೆ ಕಟ್ಟುವ ಮೊದಲು ಈ ಜಲಾನಯನ ಪ್ರದೇಶದಲ್ಲಿ ಬಾವಿ ಇದ್ದಿರಬೇಕು. ಹಳ್ಳದ ದಂಡೆಯ ಮೇಲೆ ಬಾವಿಯನ್ನು ತೋಡುವುದು ಸಾಮಾನ್ಯ. ಜನಪದರು ಅಗಸ್ತ್ಯ ತೀರ್ಥದಲ್ಲಿ ಹನ್ನೆರಡು ಬಾವಿಗಳಿವೆ ಎಂದು ಹೇಳುತ್ತಾರೆ. ಬದುವು ಎಂದರೆ ಎತ್ತರವಾದ ದಿನ್ನೆ ಎಂದರ್ಥ. ಈ ಅಚ್ಚ ಕನ್ನಡದ ಪದವನ್ನು ಹಳ್ಳಿಗರು ಈಗಲೂ ಬಳಸುತ್ತಾರೆ. ಬದುವಿನಲ್ಲಿಯ ಬಾವಿಯನ್ನು ಜನಪದರು ಬದುವಿನ ಬಾವಿ, ಬದುಬಾವಿ ಎಂದು ಕರೆದಿದ್ದರೆ ಅಸಹಜವೇನಲ್ಲ. ಪ್ರಸಿದ್ಧವಾಗಿದ್ದಿರಬಹುದಾದ ಈ ಶಾಸನಗಳಲ್ಲಿ ಈ ಊರಿನ ಹೆಸರು ಬಾದಾವಿ ಎಂಬ ಹೆಸರು ಬಂದಿರಬಹುದು. ಶಾಸನಗಳಲ್ಲಿ ಈ ಊರಿನ ಹೆಸರು ಬಾದಾವಿ ಎಂದೇ ಇದೆ. ಹಳ್ಳಿಗರ ಬಾಯಲ್ಲಿ ಕೂಡ ಇಂದಿಗೂ ಅದು ಬಾದಾವಿಯೇ ಆಗಿದೆ.
ವಾತಾಪಿ
ವಾತಾಪಿ ಕತೆಯು ಮೊದಲು ಕಥಿತವಾದದ್ದು ವಾಲ್ಮೀಕಿ ರಾಮಾಯಣದಲ್ಲಿ. ಮಹಾಭಾರತ ಹಾಗೂ ಪುರಾಣಗಳಲ್ಲಿ ಈ ಕತೆ ಮತ್ತೆ ಕಾಣಿಸಿಕೊಂಡಿದೆ.[7] ಸ್ಥಳ ಪುರಾಣವಾದ ಶ್ರೀ ಮಹಾಕೂಟೇಶ್ವರ ಪುರಾಣದಲ್ಲಿ ವಾತಾಪಿ ಇಲ್ವಲರ ಕತೆಯನ್ನು ಹೀಗೆ ಹೇಳಲಾಗಿದೆ.[8] ವಾತಾಪಿ ಇಲ್ವಲರೆಂಬ ರಾಕ್ಷಸ ಸಹೋದರರು ಲೋಕಕಂಟಕರಾದ್ದರಿಂದ ಇಂದ್ರಾದಿ ದೇವತೆಗಳು ರಕ್ಷಣೆ ಕೋರಿ ಬ್ರಹ್ಮದೇವನಿಗೆ ಮೊರೆ ಹೋಗುತ್ತಾರೆ. ಬ್ರಹ್ಮನು ‘ಕಾಶಿಯಲ್ಲಿರುವ ಅಗಸ್ತ್ಯನನ್ನು ಮಹಾಕೂಟಕ್ಕೆ ಕರೆದೊಯ್ಯಲು ಸೂಚಿಸುತ್ತಾನೆ. ದೇವತೆಗಳು ಕಾಶಿಗೆ ಬಂದು ಅಗಸ್ತ್ಯನಲ್ಲಿ ವಿನಂತಿಸುತ್ತಾರೆ. ಮುನಿಯು ಅವರ ವಿನಂತಿಯನ್ನು ಮನ್ನಿಸಿ ಮಹಾಕೂಟದತ್ತ ಸಾಗುತ್ತಾನೆ.
ಮಹಾಕೂಟವು ವಾತಾಪಿ ಇಲ್ವಲರ ವಾಸಸ್ಥಳ. ಅವರು ಬ್ರಾಹ್ಮಣರ ವೇಷದಲ್ಲಿ ಅಗಸ್ತ್ಯನನ್ನು ಭೇಟಿಯಾಗಿ ಎಂದಿನಂತೆ ಶ್ರಾದ್ಧದ ಊಟಕ್ಕೆ ಬರಬೇಕೆಂದು ಬಿನ್ನವಿಸುತ್ತಾರೆ. ವಾಡಿಕೆಯಂತೆ ಇಲ್ವಲನು ವಾತಾಪಿಯನ್ನು ಕೊಂದು ಮಾಂಸದ ಅಡಿಗೆಯನ್ನು ಅಗಸ್ತ್ಯನಿಗೆ ಉಣಬಡಿಸುತ್ತಾನೆ. ಅಗಸ್ತ್ಯನು ಒಳಗಣ್ಣಿನಿಂದ ಎಲ್ಲವನ್ನೂ ತಿಳಿಯುತ್ತಾನೆ. ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ಊಟ ಮಾಡುತ್ತಾನೆ. ಅನಂತರ ಇಲ್ವಲನು ‘ವಾತಾಪಿ ಹೊರಗೆ ಬಾ’ ಎಂದು ಕೂಗುತ್ತಾನೆ. ಅಗಸ್ತ್ಯನು ಸಿಟ್ಟಿಗೆದ್ದು ‘ನಿನ್ನ ವಾತಾಪಿ ನನ್ನ ಜಠರಾಗ್ನಿಯಲ್ಲಿ ಸುಟ್ಟು ಹೋಗಿದ್ದಾನೆ’ ಎಂದು ಹೇಳುತ್ತಾನೆ. ಇಲ್ವಲನು ಈಟಿಯಿಂದ ಅಗಸ್ತ್ಯನನ್ನು ಇರಿಯಲು ಹೋಗುತ್ತಾನೆ. ಅಗಸ್ತ್ಯನ ಒದೆತಕ್ಕೆ ಉರುಳುತ್ತಾನೆ. ಮತ್ತೆ ಏಳುವಷ್ಟರಲ್ಲಿ, ಅಗಸ್ತ್ಯನ ಕೋಪಾಗ್ನಿಯ ಜ್ವಾಲೆಯಲ್ಲಿ ಬೆಂದು ಹೋಗುತ್ತಾನೆ. ವಾತಾಪಿ ಇಲ್ವಲರು ದುಷ್ಟರಾಗಿದ್ದರೂ ಮಹಾಕೂಟ ಕ್ಷೇತ್ರದಲ್ಲಿ ಮರಣ ಹೊಂದಿದ್ದರಿಂದ ಶಂಕರನು ಅವರಿಬ್ಬರಿಗೂ ಸದ್ಗತಿಯನ್ನು ನೀಡುತ್ತಾನೆ. ಈ ಸ್ಥಳ ಪುರಾಣದ ಮುಖ್ಯ ಉದ್ದೇಶವು ಮಹಾಕೂಟ ಕ್ಷೇತ್ರದ ಮಹಿಮೆಯನ್ನು ಬಣ್ಣಿಸುವುದೇ ಆಗಿದೆ.
‘ಬಹುಶಃ ಕನ್ನಡ ವೀರನೊಬ್ಬನು ಬಾದಾಮಿಯಲ್ಲಿ ವಾಸವಾಗಿದ್ದನೆಂದೂ ಅಗಸ್ತ್ಯನು ದಕ್ಷಿಣಯಾತ್ರೆಯಲ್ಲಿ ಅವನನ್ನು ವಶೀಕರಿಸಿ ಆರ್ಯದೀಕ್ಷೆಯನ್ನು ಕೊಟ್ಟನೆಂಬ ಧ್ವನಿ ಹೊರಡುತ್ತದೆ[9] ಎಂಬ ರಂ.ಶ್ರೀ. ಮುಗಳಿಯವರ ವಿಚಾರವು ಸ್ವಾಗತಾರ್ಹವೆನಿಸುತ್ತದೆ.
ಭೌಗೋಳಿಕ ನೆಲೆ
ಒಂದು ಜನಾಂಗದ ಸಂಸ್ಕೃತಿಯು ಅದು ನೆಲೆವೂರಿದ ಭೌಗೋಳಿಕ ಪರಿಸರವನ್ನು ಅವಲಂಬಿಸಿರುತ್ತದೆ. ಇತಿಹಾಸಕ್ಕೆ ಭೂಗೋಳವೇ ನೆಲೆ ಆದ್ದರಿಂದ ಬಾದಾಮಿಯ ಭೌಗೋಳಿಕ ಪರಿಸರವನ್ನು ಮೊದಲು ಗಮನಿಸೋಣ.
ಬಾದಾಮಿ (೧೫೦-೫೫’ ಉತ್ತರ, ೭೫೦-೪೧’ ಪೂರ್ವ) ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ತಾಲೂಕಾ ಕೇಂದ್ರ. ಭೌಗೋಳಿಕವಾಗಿ ಬಾದಾಮಿ ಪರಿಸರವು ಕಲಾದಗಿ ವರ್ಗದ ಬಂಡೆಗಲ್ಲುಗಳಿಂದ ಆವೃತ್ತವಾಗಿದೆ. ಇವು ಕ್ವಾರ್ಟಜೈಟ್ ಉಸುಕುಕಲ್ಲು, ಕಾಂಗ್ಲೋಮರೇಟ್, ಸುಣ್ಣದಕಲ್ಲು, ಜೇಡಿಯ ಚಿಪ್ಪುಕಲ್ಲು(Shale)ಗಳನ್ನು ಒಳಗೊಂಡಿವೆ. ಇವುಗಳಲ್ಲಿ ಬಾದಾಮಿಯಲ್ಲಿ ವಿಶೇಷವಾಗಿ ಕಂಡುಬರುವ ಶಿಲಾಪ್ರಕಾರಗಳೆಂದರೆ ಕ್ವಾರ್ಟಜೈಟ್ ಹಾಗೂ ಉಸುಕು ಕಲ್ಲುಗಳು.
ಬಾದಾಮಿ ಪರಿಸರದ ಈ ಕ್ವಾರ್ಟಜೈಟ್ ಹಾಗೂ ಉಸುಕುಕಲ್ಲುಗಳು ಕಲಾದಗಿ ವರ್ಗದ ಶಿಲೆಗಳಿಗಿಂತ ಭಿನ್ನವಾದುದನ್ನು ಗಮನಿಸಿ ಅವನ್ನು ಕಲಾದಗಿ ವರ್ಗದಿಂದ ಬೇರ್ಪಡಿಸಿ ‘ಬಾದಾಮಿ ವರ್ಗ’ ಎಂಬ ಗುಂಪಿಗೆ ವಿಶ್ವನಾಥಯ್ಯ ಸೇರಿಸುತ್ತಾರೆ.[10] ಜಯ ಪ್ರಕಾಶ ಮತ್ತು ಇತರರು.[11] ಕಲಾದಗಿ ವರ್ಗವನ್ನು ‘ಕಲಾದಗಿ ಉಚ್ಚವರ್ಗ’ (Kaladagi Super Group) ವೆಂದು ಪುನರ್ನಾಮಕರಣ ಮಾಡುತ್ತಾರೆ. ಬಾದಾಮಿ ಶಿಲಾವರ್ಗವು ಕಲಾದಗಿ ಶಿಲಾವರ್ಗದ ಮೇಲೆ ಹೊಂದಿಕೊಳ್ಳದೆ ಒರಗಿದೆ. ಬೆಣಚುಗಲ್ಲು ಕೆಂಪು ಬಣ್ಣದ್ದಾಗಿದ್ದು ಇದು ಈ ವರ್ಗದ ಒಂದು ಮುಖ್ಯ ಅಂಶವಾಗಿದೆ. ಬಾದಾಮಿ ವರ್ಗದ ಶಿಲೆಗಳು ಬಿಜಾಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪೂರ್ವದಲ್ಲಿ ಹನುಮಸಾಗರದ ಬಳಿಯಿಂದ ಗಜೇಂದ್ರಗಡ ಮತ್ತು ಐಹೊಳೆಯಿಂದ ಹಿಡಿದು ಪಶ್ಚಿಮದಲ್ಲಿ ರಾಮದುರ್ಗ ಮತ್ತು ಗೋಕಾಕದವರೆಗೆ ಚಾಚಿಕೊಂಡಿವೆ.[12] ಕಲಾದಗಿ ವರ್ಗದ ಶಿಲೆಗಳಿಗಿಂತ ಕಿರಿಯ ವಯಸ್ಸಿನ ಬಾದಾಮಿ ವರ್ಗದ ಶಿಲೆಗಳು ಸಮಾಂತರ ಹಾಸುಗಳುಳ್ಳ (horizontally bedded) ಉಸುಕು ಕಲ್ಲುಗಳು. ಬಾದಾಮಿಯ ಈ ಬಂಡೆಗಳಲ್ಲಿ ಅನೇಕ ಕಲ್ಲಾಸರೆಗಳು ಸ್ವಾಭಾವಿಕ ಗುಹೆಗಳು ಸೃಷ್ಟಿಗೊಂಡಿವೆ. ಇವು ಶಿಲಾಯುಗದ ಮಾನವನ ಚಟುವಟಿಕೆಗಳಿಗೆ ಉತ್ತಮ ಸ್ಥಳಗಳಾದವು. ಶಿಲ್ಪನಿರ್ಮಾಣಕ್ಕೆ ಇವು ತುಂಬಾ ಯೋಗ್ಯವಾದುದರಿಂದ ಇತಿಹಾಸಕಾಲದ ಶಿಲ್ಪಿಗಳನ್ನು ಆಕರ್ಷಿಸಿದವು. ಬಾದಾಮಿ ಹಾಗೂ ಐಹೊಳೆ ಜಗತ್ಪ್ರಸಿದ್ಧ ಗುಹಾಲಯಗಳು ಕೊರೆಯಲ್ಪಟ್ಟಿದ್ದು ಈ ಶಿಲೆಗಳಲ್ಲಿಯೆ.
ಬಾದಾಮಿ ಸುತ್ತ ಹಾಗೂ ಉತ್ತರದ ಕಡೆಗೆ ಕೆಂಪು ಮಣ್ಣು ಪಸರಿಸಿದೆ. ಇದು ಉಸುಕು ಮಣ್ಣು. ಬಾದಾಮಿಯ ದಕ್ಷಿಣಕ್ಕೆ ಶಿವುಪುರ ಗ್ರಾಮದ ಹತ್ತಿರ ಸರಸ್ವತಿ ಹಳ್ಳದ ದಂಡೆಯ ಮೇಲೆ ಉದರಪಾದಿ ಚಿಪ್ಪು(gastropod Shell)ಗಳು ದೊರೆಯುತ್ತವೆ.[13] ಸರಸ್ವತಿ ಹಳ್ಳವು ಮಲಪ್ರಭೆಯನ್ನು ಸೇರುವ ಪ್ರದೇಶದಲ್ಲಿ ಬನಶಂಕರಿಯ ಹತ್ತಿರ ಸರಂಧ್ರ ಸುಣ್ಣಕಲ್ಲು (calcareoustufa) ಹರಡಿದೆ.[14] ಮತ್ತು ಭಾಗಶಃ ಸರಂಧ್ರೀಯ ಕೆಂಪು ಮಣ್ಣಿ(Laterite) ನಿಂದ ಕೂಡಿದೆ. ಇದು ಸುಮಾರು ೫ ಚ. ಕಿ.ಮೀ. ವಿಸ್ತೀರ್ಣವುಳ್ಳದ್ದು, ಮಲಪ್ರಭಾ ನದಿಯ ಉತ್ತರ ದಂಡೆಯ ಮೇಲೆ ಕೆಂಪು (ಕಂದು) ಮಣ್ಣು ಕಂಡುಬಂದರೆ ದಕ್ಷಿಣ ದಂಡೆಯ ಮೇಲೆ ಕಪ್ಪು ಮಣ್ಣು ಕಾಣಸಿಗುತ್ತದೆ. ಈ ಕಪ್ಪು ಮಣ್ಣು ಭಾಗಶಃ ನದಿಯ ಮತ್ತು ಅದರ ಹಳ್ಳಗಳ ರೇವೆ ಮಣ್ಣು. ಪೂರ್ವ ಕಾಲದಲ್ಲಿ ಈ ಪ್ರದೇಶವು ದಟ್ಟಕಾಡಿನಿಂದ ಕೂಡಿತ್ತು. ಮಣ್ಣು ಕಪ್ಪಾಗಿರಲು ಇದೇ ಕಾರಣ.[15]
ಬಾದಾಮಿಯ ಪ್ರದೇಶವು ಮಾನ್ಸೂನ್ ಹವಾಮಾನ ಕ್ಷೇತ್ರದಲ್ಲಿ ಬರುತ್ತಿದ್ದರೂ ಮಳೆಯ ಪ್ರಮಾಣ ಕಡಿಮೆ. ವಾರ್ಷಿಕ ಮಳೆಯ ಸರಾಸರಿ ೫೦ ಸೆ.ಮೀ.ದಿಂದ ೭೦ ಸೆಂ.ಮೀ. ಆದ್ದರಿಂದ ಅರೆ ಒಣಹವೆಯ ಪ್ರದೇಶವೆಂದು ಕರೆಯಬಹುದು.
ಕುಡಿಯಲು ನದಿ ನೀರು, ತಿನ್ನಲು ಗಡ್ಡೆ ಗೆಣಸುಗಳು, ಪ್ರಾಣಿಗಳು, ಅಸರೆಗಾಗಿ ನೈಸರ್ಗಿಕ ಗುಹೆಗಳು, ಬಯಲು ಜೀವನಕ್ಕೆ ಅನುಕೂಲಕರ ಹವಾಮಾನ ಇವುಗಳನ್ನು ಶಿಲಾಯುಗದ ಮಾನವನಿಗೆ ನೆಲೆಸಲು ತಕ್ಕ ವಾತಾವರಣವನ್ನು ನೀಡಿದವು. ಮಲಪ್ರಭೆಯ ಬಯಲು ಸಂಸ್ಕೃತಿಯ ತೊಟ್ಟಿಲಾಯಿತು.
ಪ್ರಾಗೈತಿಹಾಸಿಕ ಸಂಸ್ಕೃತಿಗಳು
ಪ್ರಾಗಿತಿಹಾಸ ಕಾಲವು ಶಿಲಾಯುಗದ ಕಾಲ. ಅದನ್ನು ೧. ಹಳೆಯ ಶಿಲಾಯುಗ ೨. ಸೂಕ್ಷ್ಮಶಿಲಾಯುಗ ೩. ನವಶಿಲಾಯುಗ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಬಾದಾಮಿ ಪ್ರದೇಶದಲ್ಲಿ ಈ ಮೂರು ಬಗೆಯ ಸಂಸ್ಕೃತಿಗಳು ನೆಲೆಗೊಂಡದ್ದು ತಿಳಿದುಬರುತ್ತದೆ.
ಹಳೆಯ ಶಿಲಾಯುಗ
ಹಳೆ ಶಿಲಾಯುಗದ ಸಂಸ್ಕೃತಿಯಲ್ಲಿ ಮೂರು ಹಂತಗಳನ್ನು ಗುರುತಿಸಬಹುದು. ಅ. ಆದಿ ಹಳೆ ಶಿಲಾಯುಗದ ಸಂಸ್ಕೃತಿ, ಆ. ಮಧ್ಯ ಹಳೆ ಶಿಲಾಯುಗದ ಸಂಸ್ಕೃತಿ, ಇ. ಅಂತ್ಯ ಶಿಲಾಯುಗ ಸಂಸ್ಕೃತಿ ಮಾನವನು ಉಪಯೋಗಿಸಿದ ಉಪಕರಣಗಳನ್ನು ಅವುಗಳ ಪ್ರಕಾರಗಳನ್ನು, ಅವನ್ನು ಸಿದ್ಧಮಾಡಲು ಅನುಸರಿಸಿದ ತಂತ್ರಗಳನ್ನು ಮತ್ತು ಕಾಲಾನುಕ್ರಮವನ್ನು ಆಧರಿಸಿ ಈ ವರ್ಗೀಕರಣವನ್ನು ಮಾಡಲಾಗಿದೆ. ಈ ಉಪಕರಣಗಳು ಮಾನವನ ಜೀವನ ವಿಕಾಸವನ್ನು ಪ್ರತಿನಿಧಿಸುತ್ತವೆ.
ಅ. ಆದಿ ಹಳೆಶಿಲಾಯುಗದ ಸಂಸ್ಕೃತಿ
೧೮೭೩ರಲ್ಲಿ ರಾಬರ್ಟ್ ಬ್ರೂಸ್ ಫೂಟ್ ಅವರು ಬಾದಾಮಿ ಸಮೀಪ ಮಲಪ್ರಭಾ ನದಿ ಪಾತ್ರದಲ್ಲಿ ಢಾಣಕಶಿರೂರು, ಖ್ಯಾಡ, ಮೆಣಸಗಿ ಮೊದಲಾದ ಗ್ರಾಮಗಳ ಹತ್ತಿರ ಆದಿ ಹಳೆ ಶಿಲಾಯುಗದ ಉಪಕರಣಗಳನ್ನು ಶೋಧಿಸಿದರು. ನಂತರ ಆರ್.ವ್ಹಿ.ಜೋಶಿ (೧೯೫೬) ಅವರು ಈ ನದಿ ಬಯಲಿನ ಹಿರೆಮುಲಂಗಿ, ಆಲೂರು(ತಳಕವಾಡ), ಮಣ್ಣೇರಿ, ಢಾಣಕಶಿರೂರ, ತಮಿನಹಾಳ, ಹೊಳೆ ಆಲೂರು, ಮೊದಲಾದವುಗಳಲ್ಲಿ ಈ ಕಾಲದ ಮಾನವನ ಉಪಕರಣಗಳನ್ನು ಸಂಗ್ರಹಿಸಿದರು. ಎಂ.ಎನ್.ದೇಶಪಾಂಡೆ ಮತ್ತು ಅ.ಸುಂದರ (೧೯೭೭) ಅವರು ನಂದಿಕೇಶ್ವರ, ಭದ್ರನಾಯಕನ ಜಾಲಿಹಾಳ ಮತ್ತು ಐಹೊಳೆಗಳಲ್ಲಿ ಈ ಶಿಲಾಯುಧಗಳನ್ನು ಶೋಧಿಸಿದರು.[16] ಬಾದಾಮಿಯ ಸಿಡಿಲಫಡಿ[17] ಮತ್ತು ಪಟ್ಟದಕಲ್ಲು[18] ಆದಿ ಹಳೆಯ ಶಿಲಾಯುಗದ ನೆಲೆಗಳಾಗಿದ್ದವೆಂಬುದು ತಿಳಿದುಬಂದಿದೆ. ಶ್ರೀನಿವಾಸ ಪಾಡಿಗಾರ ಅವರು ಬಾದಾಮಿಯ ಸಾಬರಫಡಿಯ ಹತ್ತಿರ ಆದಿ ಹಳೆ ಶಿಲಾಯುಗದ ಕೈಕೊಡಲಿ, ಮಚ್ಚುಗಳನ್ನು ಶೋಧಿಸಿದವರು. ಇದರಿಂದ ಬಾದಾಮಿ ಸುತ್ತಮುತ್ತಲಿನ ಪರಿಸರವೆಲ್ಲ ಆದಿ ಹಳೆಯ ಶಿಲಾಯುಗದ ಸಂಸ್ಕೃತಿಯ ನೆಲೆಯಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಮಲಪ್ರಭೆಯ ಬಯಲಿನ ಉಪಕರಣಗಳು ಹೆಚ್ಚಾಗಿ ಫ್ರಾನ್ಸ್ ದೇಶದ ಸೋನ್ ನದಿಯ ಸೇಂಟ್ ಅಶೂಲದಲ್ಲಿಯ ಆಯುಧಗಳನ್ನು ಹೋಲುತ್ತವೆ. ಆದ್ದರಿಂದ ಇಲ್ಲಿಯ ಆಯುಧ ಕೈಗಾರಿಕಾ ತಂತ್ರವನ್ನು ಅಶೂಲಿಯನ್ ತಂತ್ರವೆಂದು ಕರೆಯಲಾಗಿದೆ. ಈ ಪ್ರದೇಶದ ಆದಿ ಮಾನವನು ಕ್ಲ್ಯಾಕ್ಟೋನಿಯನ್ ತಂತ್ರವನ್ನೂ ಕೂಡ ಬಳಸಿರುವುದು ತಿಳಿದುಬಂದಿದೆ.
ಆ. ಮಧ್ಯ ಹಳೆಶಿಲಾಯುಗ ಸಂಸ್ಕೃತಿ
ಬಾದಾಮಿ ಹತ್ತಿರ ಮಲಪ್ರಭಾ ನದಿ ಬಯಲಿನ ತಮಿನಹಾಳದಲ್ಲಿ ಮಧ್ಯ ಹಳೆಶಿಲಾಯುಗದ ನೆಲೆಯಿದೆ. ಇಲ್ಲಿ ಕೂಡ ಹಳ್ಳದ ದಂಡೆಯ ಕೆಳ ಪದರದಲ್ಲಿ ಆದಿ ಹಳೆಶಿಲಾಯುಗ ಅವಶೇಷಗಳು ಮತ್ತು ಮೇಲ್ಪದರದಲ್ಲಿ ಮಧ್ಯ ಹಳೆಶಿಲಾಯುಗದ ಉಪಕರಣಗಳು ದೊರೆತವು.[19] ಕೆಲವು ವರ್ಷಗಳ ಹಿಂದೆ ಬಾದಾಮಿಯಲ್ಲಿ ಇಂತಹ ಶಿಲಾಯುಧಗಳು ಸಿಕ್ಕವು.[20] ಬಾಗಲಕೋಟ ಜಿಲ್ಲಾ ಪ್ರದೇಶದಲ್ಲಿ ಶೋಧಿಸಲಾದ ಹಲವಾರು ಪೂರ್ವಭಾವಿ ಇತಿಹಾಸ ನೆಲೆಗಳಲ್ಲಿ ಬಾದಾಮಿಯ ಸಿಡಿಲಫಡಿಯೂ ಒಂದು.[21]
ಬಾದಾಮಿಯಲ್ಲಿ ಸಾಬರ ಫಡಿಯ ಹಿಂಭಾಗದಲ್ಲಿ ಕ್ವಾರ್ಟಜೈಟ್ ಶಿಲೆಯ ಈ ಕಾಲದ ಉಪಕರಣಗಳು ದೊರೆತಿವೆ. ಬಾದಾಮಿ ಹಾಗೂ ಸಿಡಿಲಫಡಿ ನದಿಯ ದಂಡೆಯ ಪ್ರದೇಶದಿಂದ ದೂರದ ಬಯಲಿನಲ್ಲಿವೆ. ಇಲ್ಲಿ ಮಧ್ಯ ಹಳೆಶಿಲಾಯುಗದ ನೆಲೆಗಳು ಇದ್ದುದ್ದು ಈ ಮಾನವನು ಭಿನ್ನ ವಾತಾವರಣದಲ್ಲಿ ಜೀವಿಸುವ ಸಾಮರ್ಥ್ಯವನ್ನು ಪಡೆದದ್ದನ್ನು ಸೂಚಿಸುತ್ತದೆ.
ಇ. ಅಂತ್ಯ ಹಳೆಶಿಲಾಯುಗ
ಮಧ್ಯ ಹಳೆಶಿಲಾಯುಗ ಮತ್ತು ಮಧ್ಯ ಶಿಲಾಯುಗ ಇವುಗಳ ಮಧ್ಯದ ಅವದಿ ಇದು. ಬಾದಾಮಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಕೆಲವು ಗವಿವರ್ಣ ಚಿತ್ರಗಳು ಪ್ರಾಯಶಃ ಈ ಕಾಲದ್ದಾಗಿರಬಹುದೆಂಬ ಶಂಕೆ ಇದೆ.[22]
ಸೂಕ್ಷ್ಮ ಶಿಲಾಯುಗ
ಸೂಕ್ಷ್ಮ ಶಿಲಾಯುಗವು ಬೇಟೆಯಾಡುವ ಮತ್ತು ಆಹಾರ ಸಂಗ್ರಹ ಮಾಡುವ ಜೀವನ ವಿಧಾನದಿಂದ ಆಹಾರ ಬೆಳೆಯುವ ಸಂಸ್ಕೃತಿಯ ಮಧ್ಯಂತರ ಪರ್ವಕಾಲವಾಗಿದೆ.
ಬಾದಾಮಿಯ ಹತ್ತಿರದ ಸಿಡಿಲಫಡಿಯಲ್ಲಿ ಅ.ಸುಂದರ ಅವರು ಈ ಸಂಸ್ಕೃತಿಯ ಉಪಕರಣಗಳನ್ನು ಶೋಧಿಸಿದರು.[23] ಬಾದಾಮಿಯಲ್ಲಿಯ ಬಂಡೆಗಳ ಗುಹೆಗಳು ಸೂಕ್ಷ್ಮ ಶಿಲಾಯುಗದ ಜನರಿಗೆ ವಾಸಸ್ಥಳಗಳಾಗಿದ್ದವು.[24] ರವಿ ಕೋರಿಶೆಟ್ಟರ ಮತ್ತು ಮೈಕೆಲ್ ಪೆಟ್ರಾಗ್ಲಿಯಾ ಅವರು ಬಾದಾಮಿಯ ಕಲ್ಲಾಸರೆಯ ಹತ್ತಿರ, ಗುಡ್ಡದ ಅಡಿಯಲ್ಲಿ, ದಿನ್ನೆಯ ಮೇಲಿನ ಬಯಲಿನಲ್ಲಿ ಈ ಕಾಲದ ಶಿಲಾ ಉಪಕರಣಗಳನ್ನು ಕಂಡುಹಿಡಿದರು.[25] ಈ ಪ್ರಬಂಧಕಾರನ ಕ್ಷೇತ್ರಕಾರ್ಯದಲ್ಲಿ ಬಾದಾಮಿಯ ರಂಗನಾಥಗುಡ್ಡದ ಹತ್ತಿರ ಈ ಕಾಲದ ಉಪಕರಣಗಳು ದೊರೆತಿವೆ. ಸ್ಥಳೀಯವಾಗಿ ಲಭ್ಯವಿರುವ ಮುದ್ದೆಗಟ್ಟು ಶಿಲೆ(conglomerate) ಗಳಲ್ಲಿ ಬಂಧಿತವಾದ ಕ್ವಾರ್ಟ್ಜ್, ಚರ್ಟ್ ಮತ್ತು ಅಗೇಟ್ ತುಂಡುಗಳಿಂದ ಈ ಉಪಕರಣಗಳನ್ನು ರಚಿಸಲಾಗಿದೆ. ಸೂಕ್ಷ್ಮ ಶಿಲಾಯುಗದ ಸಂಸ್ಕೃತಿಯ ಕಲಾತ್ಮಕ ಅಭಿವ್ಯಕ್ತಿಯನ್ನು ಕೂಡ ಬಾದಾಮಿಯ ಕಲ್ಲಾಸರೆಗಳಲ್ಲಿ ಕಾಣಬಹುದು. ಈ ಚಿತ್ರಗಳು ಕೆಮ್ಮಣ್ಣಿನ ಬಣ್ಣ ಮತ್ತು ಸುಣ್ಣದಂತಹ ಬಿಳಿಯ ಬಣ್ಣದಲ್ಲೂ ಇವೆ.[26] ಇತ್ತೀಚೆಗೆ ಎರ‌್ವಿನ್ ನ್ಯೂಮೇಯರ್ ಅವರು ರಂಗನಾಥ ಗುಡ್ಡದ ಬೃಹದಾಕಾರದ ಬಂಡೆಯ ಮೇಲೆ ಕೆಮ್ಮಣ್ಣಿನ ಬಣ್ಣದ ಚಿತ್ರಗಳನ್ನು ಶೋಧಿಸಿದ್ದಾರೆ.[27] ಒಟ್ಟಿನಲ್ಲಿ ಸೂಕ್ಷ್ಮ ಆಯುಧಗಳನ್ನು ತಯಾರಿಸುವಲ್ಲಿ ಈ ಕಾಲದ ಮಾನವನ ನೈಪುಣ್ಯವನ್ನು, ಆಯುಧಗಳನ್ನು ಬಗೆ ಬಗೆಯಾಗಿ ಬಳಸುವಲ್ಲಿ ಆತನ ಬೌದ್ದಿಕ ವಿಕಾಸವನ್ನು, ಚಿತ್ರಕಲೆಯ ಅಭಿವ್ಯಕ್ತಿಯಲ್ಲಿ ಆತನ ಭಾವನಾತ್ಮಕ ಬೆಳವಣಿಗೆಯನ್ನು ಗುರುತಿಸಬಹುದು. ‘ಚಿತ್ರಕಲೆ’ ಕುರಿತಾದ ಅಧ್ಯಾಯದಲ್ಲಿ ಹೆಚ್ಚಿನ ವಿವರಗಳನ್ನು ಚರ್ಚಿಸಲಾಗಿದೆ.
ನವಶಿಲಾಯುಗ
ನವಶಿಲಾಯುಗದ ಮಾನವ ತನ್ನ ಕಲಾ ಪ್ರಜ್ಞೆಯನ್ನು ವ್ಯಕ್ತಪಡಿಸಿದ್ದಾನೆ. ಉಪಯುಕ್ತತೆಗಾಗಿ ತಾನು ನಿರ್ಮಿಸಿದ ಮಣ್ಣಿನ ಪಾತ್ರೆಗಳಿಗೆ ಕಲೆಯ ಸಂಸ್ಕಾರ ನೀಡಿದನು. ಈ ಪಾತ್ರೆಗಳ ಮೇಲೆ ಬಗೆ ಬಗೆಯ ಜ್ಯಾಮಿತಿ ರೇಖಾ ಚಿತ್ರಗಳನ್ನು ಮೂಡಿಸಿದನು. ಇಂತಹ ರೇಖಾಚಿತ್ರಗಳುಳ್ಳ ಮಣ್ಣಿನ ಪಾತ್ರೆಗಳ ಚೂರುಗಳು ಮಲಪ್ರಭಾ ಪ್ರದೇಶದಲ್ಲಿವೆ.[28] ಈ ಕಾಲದ ಜನರು ದೇಹಾಲಂಕಾರಕ್ಕಾಗಿ ಜಾಸ್ಪರ್. ಅಗೇಟ್, ಜಾತಿಯ ಶಿಲಾಮಣಿಗಳ ಸರವನ್ನು ಧರಿಸುತ್ತಿದ್ದರು. ಈ ಪ್ರದೇಶದಲ್ಲಿ ಆರ್.ಎಸ್.ಪಂಚಮುಖಿ ಅವರು ಶಂಖದ ಆಭರಣಗಳನ್ನು ಸಂಗ್ರಹಿಸಿದ್ದಾರೆ.[29] ಬಾದಾಮಿ, ಹೊಸ ಮಹಾಕೂಟ ಐಹೊಳೆಗಳ ಬಂಡೆಗಲ್ಲುಗಳ ಮೇಲೆ ಕೆಮ್ಮಣ್ಣಿನ ಬಣ್ಣದ ವಿವಿಧ ಪ್ರಾಣಿ ಹಾಗೂ ಮನುಷ್ಯರ ರೇಖಾಚಿತ್ರಗಳಿವೆ. ಈ ಚಿತ್ರಗಳು ನವಶಿಲಾಯುಗದ ಮಾನವನ ಕಲಾಪ್ರಿಯತೆಯ ದ್ಯೋತಕ. ಇವುಗಳಲ್ಲಿ ಕೆಲವು ಆ ಕಾಲದ ಧಾರ್ಮಿಕ ಜೀವನ ಇಲ್ಲವೆ ಹಬ್ಬದ ಆಚರಣೆಗೆ ಸಂಬಂಧಿಸಿದವುಗಳಾಗಿವೆ.
ಬೃಹತ್ ಶಿಲಾಯುಗ
ಬಾದಾಮಿ ಹತ್ತಿರ ಪಟ್ಟದಕಲ್ಲ, ಅಕ್ಕರಗಲ್ಲ, ಐಹೊಳೆ ಸಿದ್ಧನಕೊಳ್ಳ, ಕ್ಯಾದಿಗೇರಿ, ಮತ್ತು ಚಿಲಾಪುರಗಳಲ್ಲಿ ಬೃಹತ್ ಶಿಲಾ ಸಂಸ್ಕೃತಿಯ ಕಲ್ಗೋರಿಗಳಿವೆ. ಕಲ್ಗೋರಿಗಳನ್ನು ಕಟ್ಟಲು ಈ ಸಂಸ್ಕೃತಿಯ ಜನರು ಕಲ್ಬೆಟ್ಟದ ಪ್ರದೇಶವನ್ನು ಆಯ್ಕೆ ಮಾಡಿದುದು ಸಹಜವೇ ಆಗಿದೆ. ಬೃಹದಾಕಾರದ ಬಂಡೆಗಳನ್ನು ಕೊರೆದು ತೆಗೆಯುವಲ್ಲಿ, ಅವನ್ನು ನಿರ್ದಿಷ್ಟ ಸ್ಥಳಕ್ಕೆ ಸಾಗಿಸುವಲ್ಲಿ, ವಿವಿಧ ಪ್ರಕಾರದ ಕಲ್ಗೋರಿಗಳನ್ನು ನಿರ್ಮಿಸುವಲ್ಲಿ ಕುಶಲತೆಯನ್ನು ತೋರಿದ್ದಾರೆ.
ಬಾದಾಮಿ ಪ್ರದೇಶದ ಬೃಹತ್ ಶಿಲಾ ಸಂಸ್ಕೃತಿಯ ಜನರು ತೋರಿದ ವಾಸ್ತು ವೈವಿಧ್ಯವನ್ನು ಹೀಗೆ ಗುರುತಿಸಬಹುದು ೧. ಹಾದಿಕೋಣೆ ಗೋರಿಗಳು ೨. ಕಿಂಡಿ ಕೋಣೆ ಗೋರಿಗಳು ೩. ವರ್ತುಳ ಕಲ್ಗುಪ್ಪೆಗಳು ಮತ್ತು ೪. ಗುಂಡಿ ವೃತ್ತಗಳು.
ಐಹೊಳೆ ಬೃಹತ್ ಶಿಲಾ ಸಂಸ್ಕೃತಿಯ ಮಹತ್ವದ ನೆಲೆಯಾಗಿದೆ. ಇಲ್ಲಿಯ ಸುಪ್ರಸಿದ್ಧ ‘ಮೇಗುತಿ’ಯ ಪೂರ್ವಕ್ಕಿರುವ ಗುಡ್ಡದ ಮೇಲಿನ ವಿಶಾಲ ಬಯಲಿನಲ್ಲಿ ಸುಮಾರು ಒಂದು ಹೆಕ್ಟೇರಿನಷ್ಟು ಕ್ಷೇತ್ರದಲ್ಲಿ ಸುಮಾರು ೪೫ ಕಲ್ಗೋರಿಗಳನ್ನು ಗುರುತಿಸಲಾಗಿದೆ. ಇವು ಕಿಂಡಿ ಕೋಣೆ ಗೋರಿಗಳಾಗಿವೆ. ಅದರಾಚೆ ಮುಂದೆ ಸಾಗುವಳಿ ಮಾಡಿದ ಕ್ಯಾದಿಗೇರಿ ಗ್ರಾಮದ ಸೀಮೆಗೆ ಸೇರಿದ ಹೊಲಗಳಲ್ಲಿ ಹಾದಿ ಕೋಣೆ ಗೋರಿಗಳೂ ಮತ್ತು ವರ್ತುಲ ಕಲ್ಗುಪ್ಪೆಗಳಿವೆ. ಒಂದೇ ನೆಲೆಯಲ್ಲಿ ಹೀಗೆ ವಿಭಿನ್ನ ಬಗೆಯ ಕಲ್ಗೋರಿಗಳು ನಿರ್ಮಿತವಾಗಿರುವುದೊಂದು ಮಹತ್ವದ ಸಂಗತಿಯಾಗಿದೆ. ಸುಮಾರು ಅರವತ್ತು ಹಾದಿ ಕೋಣೆ ಗೋರಿಗಳು ಮತ್ತು ಮೂರು ವರ್ತುಲ ಕಲ್ಗುಪ್ಪೆಗಳು ಇಲ್ಲಿವೆ(ಅ.ಸುಂದರ). ಬೆಟ್ಟದ ಮೇಲೆ ‘ಮೇಗುತಿ’ಯ ಹತ್ತಿರದ ಬಯಲಿನಲ್ಲಿ ಕಿಂಡಿ ಕೋಣೆ ಗೋರಿಗಳು, ಅದೇ ಬೆಟ್ಟದ ಅಂಚಿನ ಬಯಲಿನಲ್ಲಿ ಹಾದಿಕೋಣೆ ಗೋರಿಗಳು ಇದ್ದು ಈ ಎರಡೂ ಪ್ರಕಾರದ ಕಲ್ಗೋರಿಗಳು ಒಂದೇ ಸ್ಥಳದಲ್ಲಿ ದೊರೆತ ನೆಲೆ ಭಾರತದಲ್ಲಿ ಇದೊಂದೇ ಆಗಿದೆ.[30] ಈ ಕಾರಣದಿಂದಾಗಿ ಇದು ಮಹತ್ವದ ತಾಣವೆನಿಸಿದೆ. ಐಹೊಳೆ ಮತ್ತು ಪಟ್ಟದಕಲ್ಲುಗಳ ಮಧ್ಯವರ್ತಿ ಜಾಗೆಯಾದ ಸಿದ್ಧನಕೊಳ್ಳದಲ್ಲಿ ಬೃಹತ್ ಶಿಲಾ ಸಮಾಧಿಗಳ ಇನ್ನೊಂದು ಗುಂಪು ಶೋಧವಾಗಿದೆ.[31]
ಪಟ್ಟದಕಲ್ಲಿನ ಹತ್ತಿರ ಬಾಚನಗುಡ್ಡದ ವ್ಯಾಪ್ತಿಯಲ್ಲಿ ಕಿಂಡಿ ಕೋಣೆಯ ಎರಡು ಕಲ್ಗೋರಿಗಳು ಮತ್ತು ಪಟ್ಟದಕಲ್ಲಿನ ಹತ್ತಿರ ಅಕ್ಕರಗಲ್ಲ ಸೀಮೆಗೆ ಸೇರಿದ ಬಯಲಿನಲ್ಲಿ ಇಪ್ಪತ್ತು ಕಲ್ಗೋರಿಗಳು ತುಂಬಾ ಹಾಳಾದ ಸ್ಥಿತಿಯಲ್ಲಿವೆ.[32] ಐಹೊಳೆ ಪ್ರದೇಶದ ಕಲ್ಗೋರಿಗಳುಗಷ್ಟು (sedimentary) ಕಲ್ಲುಗಳಿಂದ ನಿರ್ಮಿತವಾಗಿದ್ದರೆ ಪಟ್ಟದಕಲ್ಲು, ಅಕ್ಕರಗಲ್ಲಿನ ಕಲ್ಗೋರಿಗಳು ಗ್ರಾನೈಟ್ ಶಿಲೆಯಿಂದ ನಿರ್ಮಿತವಾಗಿದ್ದರೆ ಪಟ್ಟದಕಲ್ಲಿನ ಹತ್ತಿರ ಗಷ್ಟು ಕಲ್ಲಿನ ಆಕರವಿದ್ದರೂ ಗ್ರಾನೈಟ್ ಕಲ್ಲನ್ನು ಆಯ್ಕೆ ಮಾಡುವಲ್ಲಿ ಈ ಸಂಸ್ಕೃತಿಯ ಜನರು ವಿವಿಧತೆಯತ್ತ ಇದ್ದ ತಮ್ಮ ಮನೋವಿಲಾಸವನ್ನು ವ್ಯಕ್ತಪಡಿಸಿದ್ದಾರೆ.
ಚಲುಕ್ಯರ ಕಾಲದ ವಾಸ್ತುಕಲೆಯಲ್ಲಿ ಔತ್ತರೇಯ ಹಾಗೂ ದಾಕ್ಷಿಣಾತ್ಯ ವಾಸ್ತು ಶೈಲಿಗಳು ಬೆಸುಗೆಯನ್ನು ಹೊಂದಿದ ಸಂಗತಿ ಸರ್ವವಿದಿತವಾದುದು. ಬೃಹತ್ ಶಿಲಾಯುಗದಲ್ಲಿ ಈ ಪ್ರದೇಶದಲ್ಲಿ ಕಲ್ಗೋರಿಗಳ ಎರಡು ವಾಸ್ತು ಸಂಪ್ರದಾಯಗಳು ಮೇಳೈಸಿದುದು ಆ ಕಾಲದ ಜನರ ಪ್ರಯೋಗಶೀಲತೆಯ ಪ್ರತೀಕವಾಗಿದೆ. ಪ್ರಯೋಗಶೀಲತೆಯು ಈ ನೆಲದ ಗುಣವೆನಿಸಿದೆ. ಅದು ಸಾಂಸ್ಕೃತಿಕ ವಿಕಾಸಕ್ಕೆ ದಾರಿ ಮಾಡಿಕೊಟ್ಟಿತು.
ಇತಿಹಾಸ ಕಾಲದ ಸಂಸ್ಕೃತಿ
ಇತಿಹಾಸ ಪ್ರಾರಂಭ ಕಾಲದಲ್ಲಿ ಕರ್ನಾಟಕವು ಮೌರ್ಯರಾಜ್ಯಕ್ಕೆ ಸೇರಿತ್ತು. ಅಶೋಕನ ಮರಣಾನಂತರ ಆ ಸಾಮ್ರಾಜ್ಯವು ಒಡೆದು ಹೋಯಿತು. ಶಾತವಾಹನರು ದಕ್ಷಿಣ ಭಾರತದ ಒಡೆಯರಾದರು. ಬಾದಾಮಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶಾತವಾಹನರಿಗೆ ಸಂಬಂಧಿಸಿದ ಸಾಂಸ್ಕೃತಿಕ ಅವಶೇಷಗಳು ದೊರೆತಿವೆ.
ಐಹೊಳೆಯ ಅಂಬಿಗೇರ ಗುಡಿಯ ಕೆಳಸ್ತರದಲ್ಲಿ ಶಾತವಾಹನರ ಕಾಲದ ಪಾತ್ರೆಗಳ ಚೂರುಗಳನ್ನು ಹಾಗೂ ಆಯತಾಕಾರ ತಲವಿನ್ಯಾಸ ಇಟ್ಟಿಗೆ ದೇವಾಲಯವನ್ನು ಶೋಧಿಸಿಲಾಗಿದೆ. ಪಟ್ಟದಕಲ್ಲಿನ ಸಂಗಮೇಶ್ವರ ಗುಡಿಯ ಮುಂದೆ ಕಂಬಗಳಿಂದ ಕೂಡಿದ ಇಟ್ಟಿಗೆಯ ಮಂಟಪ ಇದ್ದುದು ಉತ್ಖನನದಲ್ಲಿ ಶೋಧವಾಯಿತು.[33] ಪಟ್ಟದಕಲ್ಲಿನ ಜೈನ ನಾರಾಯಣ ದೇವಾಲಯದ ಹಿಂಭಾಗದಲ್ಲಿ ಇಟ್ಟಿಗೆಯ ಜಿನಾಲಯ ಮತ್ತು ಖಡ್ಗಾಸನದಲ್ಲಿರುವ ತೀರ್ಥಂಕರ ಮೂರ್ತಿ ದೊರೆತಿವೆ.[34] ಇಲ್ಲಿಯ ಗಳಗನಾಥ ಗುಡಿಯಿಂದ ಸುಮಾರು ೨೦೦ ಮೀಟರುಗಳ ಅಂತರದಲ್ಲಿ ಶಾತವಾಹನರ ಕಾಲದ ಪಾತ್ರೆಗಳು ಸಿಕ್ಕಿವೆ.[35] ಐಹೊಳೆಯ ಹುಚ್ಚಪ್ಪಯ್ಯ ಮಠದ ಸಂಕೀರ್ಣದ ಅಗೆತದಲ್ಲಿ ಶಾತವಾಹನ ನಾಣ್ಯಗಳೂ, ಮಣ್ಣಿನ ಪಾತ್ರೆಯ ಚೂರುಗಳೂ ಕಂಡುಬಂದಿವೆ. ನಾಣ್ಯಗಳು ಮೂರನೆಯ ಶತಮಾನದವೆಂದೂ, ಮಣ್ಣಿನ ಪಾತ್ರೆಗಳನ್ನು ಆಧರಿಸಿ ಲಾಡಖಾನ ಗುಡಿಯ ತಳಪಾಯದ ಹತ್ತಿರ ಕಂಡುಬಂದ ಇಟ್ಟಿಗೆ ಗೋಡೆಯು ನಾಲ್ಕನೆಯ ಶತಮಾನದ್ದೆಂದೂ ಊಹಿಸಲಾಗಿದೆ. ಇದರಿಂದ ಐಹೊಳೆ ಮತ್ತು ಪಟ್ಟದಕಲ್ಲುಗಳು ಶಾತವಾಹನರ ಕಾಲದಿಂದಲೂ ದೇವಾಲಯಗಳ ಕೇಂದ್ರಗಳಾಗಿದ್ದುದು ತಿಳಿದುಬರುತ್ತವೆ. ಮೊದಮೊದಲು ವಾಸ್ತು ರಚನೆಗೆ ಇಟ್ಟಿಗೆಗಳನ್ನು ಆನಂತರ ಕಲ್ಲನ್ನು ಮಾಧ್ಯಮವಾಗಿ ಬಳಸಿದುದು ತಿಳಿದುಬರುತ್ತದೆ.
ಅತಿ ಪ್ರಾಚೀನ ಚಲುಕ್ಯ ದೇವಾಲಯಗಳು ಕದಂಬರ ವಾಸ್ತು ರಚನೆಗಳನ್ನು ಅನುಸರಿಸಿರಬಹುದಾಗಿದೆ. ಆ ಮೊದಲಿನ ಇಟ್ಟಿಗೆ ರಚನೆಗಳ ಮೇಲೆ ಅಥವಾ ಅವುಗಳ ಹತ್ತಿರ ಕಲ್ಲಿನ ಗುಡಿಗಳನ್ನು ಕಟ್ಟಿಸಿದುದು ಚಲುಕ್ಯರ ವಿಶೇಷತೆ. ಆ ಪೂರ್ವದಲ್ಲಿ ಇದ್ದಿರಬಹುದಾದ ಕದಂಬರ ವಾಸ್ತುರಚನೆಗಳು ಇಂದು ಸಿಗದೆ ಇರುವುದಕ್ಕೆ ಅದೇ ಸ್ಥಳಗಳನ್ನು ಕಟ್ಟಡ ನಿರ್ಮಿಸಲು ಆಯ್ಕೆ ಮಾಡಿರುವುದೇ ಕಾರಣವೆನಿಸುತ್ತದೆ. ಆ ವೇಳೆಗಾಗಲೇ ಅವು ಪವಿತ್ರ ಸ್ಥಳಗಳೆಂದು ನಂಬಿದ್ದರಿಂದ ತಮ್ಮ ದೇವಾಲಯಗಳಿಗೆ ಅವೇ ಜಾಗೆಗಳನ್ನು ಬಳಸಿಕೊಂಡಿರಬಹುದು.
ಶಾತವಾಹನರ ವೇಳೆಗಾಗಲೆ ಇದು ವ್ಯಾಪಾರಿ ಕೇಂದ್ರವಾಗಿ, ನಗರವಾಗಿ ಪ್ರಸಿದ್ದಿ ಪಡೆದಿರಬೇಕು. ಅಂತೆಯೇ ಅದು ಟಾಲೆಮಿಯ (ಸು.ಕ್ರಿ.ಶ. ೧೫೦) A guide to geography ಕೃತಿಯಲ್ಲಿ ಉಲ್ಲೇಖಿತಗೊಂಡಿದೆ. ಚಲುಕ್ಯರ ಕಾಲದಲ್ಲಿ ಬಾದಾಮಿ ಕನ್ನಡ ಸಾಮ್ರಾಜ್ಯದ ಅಧಿಷ್ಠಾನವಾಗಿ ಬೆಳೆಯಿತು. ಚಲುಕ್ಯರಿಂದಾಗಿ ಅದು ಗಟ್ಟಿಯಾದ ಸಾಂಸ್ಕೃತಿಕ ನೆಲೆಗಟ್ಟನ್ನು ಪಡೆಯಿತು. ಇದರಿಂದಾಗಿ ಬಾದಾಮಿಯ ಬಗೆಗಿನ ಸಾಂಸ್ಕೃತಿಕ ಅಧ್ಯಯನವು ಪ್ರಧಾನವಾಗಿ ಚಲುಕ್ಯರ ಸಂಸ್ಕೃತಿಯ ಅಧ್ಯಯನವೇ ಆಗಿದೆ.
[1] “There is in the district of Belgaum a town and hill fort, on the route from kaladagi to Balari, not far from the Malaparabha, a tributary of the Krishna, called Badami and here we may locate the Badiamaioi”-Mc. Crindle’s Ancient India as described by ptolemy. A facsimile reprint, (Ed) Surendranath Majumadar Shastri, Chuckervertly, Chatterjee and Co. Ltd., Calcutta, ೧೯೨೭, p. ೧೭೧.
[2] EI., XXVII, ೨. [3] SII, XV, ೪೫೬ and IA, X, p. ೭೪-೫. [4] ಮಲ್ಹಾರ ಭಟ್ಟ ಪೂಜಾರ, ೧೯೭೨, ಶ್ರೀ ಶಾಕಂಭರೀ ಲಘು ಚರಿತ್ರೆಯು, ಚೊಳಚಗುಡ್ಡ, ಪು.(i).(ಪ್ರಾಯಶಃ ಪ್ರಸ್ತುತ ಅಂಶವು ಸ್ಕಾಂದ ಪುರಾಣದಲ್ಲಿ ನಂತರ ಸೇರ್ಪಡೆಯಾಗಿರ ಬಹುದು.) [5] ಅದೇ. [6] ಅದೇ, ಪು.೬ [7] ಮಹಾಭಾರತ, ಆದಿ ‑೬೬ ಮತ್ತು ವನ ‑೯೪ ‑೭. [8] ಸದಾಶಿವ ಕವಿ, ೧೯೬೧, ಶ್ರೀ ಮಹಾಕೂಟೇಶ್ವರ ಪುರಾಣ, ಹೊಳೆ ಆಲೂರು. [9] ಮುಗಳಿ ರಂ.ಶ್ರೀ. ಪ್ರವಾಸಿ ಕಂಡ ಇಂಡಿಯಾ, (ಸಂ)ಸಂಪುಟ ೧, ಪು. ೧೧೮. [10] Vishwanathaiah M.N., ೧೯೬೮, “Badami Series: A New Post- Kaladagi Formation of Mysore State” Bulletin Geological Survey of India, ೫; p. ೯೪-೯೭. [11] Jayaprakash A.V., et all., ೧೯೮೭, “Geology of the Kaladagi-Badami Basin Karnataka” in Purana Basins of India, (B.P. Radhakrishna, Ed) Bangalore Geological Society of India, pp. ೨೦೧-೨೨೫. [12] ಕರ್ನಾಟಕ ರಾಜ್ಯ ಗ್ಯಾಸೆಟಿಯರ್, ಭಾಗ ೧, ೧೯೮೪, ಬೆಂಗಳೂರು, ಪು. ೨೧ [13] Joshi R.V., ೧೯೫೫, Pleistocene Studies in the Malaprabha Basin, Poona-Dharwar, p. ೩೬. [14] Korisettar Ravi, et al., ೧೯೯೩, Calcareous Tufa at the site of Banashankari in the Malaparabha Valley, Karnataka; Revisited”, Man and Environment, Vol, XVIII (೨), p. ೧೩-೧೪. [15] Joshi R.V., Op.Cit., p. ೩೫. [16] ಸುಂದರ ಅ., ೧೯೮೨, ಮಲಪ್ರಭೆ ಬಯಲಿನ ಪ್ರಾಚೀನ ಸಂಸ್ಕೃತಿ ಒಂದು ಸಮೀಕ್ಷೆ, ಚಾಲುಕ್ಯ ಶ್ರೀ, ಬಾದಾಮಿ,ಪು.೨. [17] IAR, ೧೯೫೯-೬೦, p. ೭೩ [18] IAR, ೧೯೫೭-೫೮, p. ೨೯. [19] IAR, ೧೯೫೬-೫೭, p. ೭೯. [20] Joshi R.V., ೧೯೭೮, ‘Middle Stone Age in Karnataka’ Archaeology of Karnataka (A.V. Narsimha Murthy, Ed.) p. ೧೮. [21] IAR., ೧೯೫೯-೬೦, p. ೭೩. [22] ಕರ್ನಾಟಕ ಗ್ಯಾಸೆಟಿಯರ್, ಭಾಗ ‑೧, ಪು. ೧೫೧. [23] IAR, ೧೯೫೯-೬೦, . ೭೩. [24] Pappu R.S., ೧೯೮೧, “Recent Geo-archaeological investigations around Badami, District Bijapur, Karnataka” Bulletin Deccan College Research Institute, Pune ೪೧: ೧೭೦-೭೯. [25] Ravi Korisettar and Michael petraglia, ೧೯೯೩, ‘Explorations in the Malaprabha Valley, Karnataka’, Man and Environment, Vol. XVIII (೧) Deccan College, Pune, p.೪೪. [26] ಸುಂದರ ಅ., ೧೯೯೪. ಕರ್ನಾಟಕ ಪ್ರಾಗಿತಿಹಾಸ ಕಾಲದ ಕಲೆ, ಬೆಂಗಳೂರು, ಜ. ೧೭. [27] Erwin Neumayor, ೧೯೯೩, Lines on Stone, Manohar, Delhi, p. ೧೨೦. [28] ಸುಂದರ ಅ., ೧೯೮೨, ‘ಮಲಪ್ರಭೆ ಬಯಲಿನ ಪ್ರಾಚೀನ ಸಂಸ್ಕೃತಿ:ಒಂದು ಸಮೀಕ್ಷೆ’ಚಾಲುಕ್ಯ ಶ್ರೀ, ಬಾದಾಮಿ, ಪುಟ ೮. [29] ಪಂಚಮುಖಿ ಆರ್.ಎಸ್.೧೯೬೭, ಕರ್ನಾಟಕದ ಇತಿಹಾಸ, ಧಾರವಾಡ, ಪು.೪೪. [30] Sundara A., ೧೯೭೯, The early chamber tombs of South India, Delhi, p. ೧೬. [31] ಶ್ರೀನಿವಾಸ ಪಾಡಿಗಾರ. ೧೯೯೦, ಹುನಗುಂದ ತಾಲೂಕಿನಲ್ಲಿ ಇತ್ತೀಚಿನ ಪುರಾತತ್ತ್ವ ಶೋಧಗಳು, ಇತಿಹಾಸ ದರ್ಶನ, ಸಂಪುಟ, ೫. ಪು. ೧೭. [32] Sundara A., ೧೯೭೯, Op. Cit, p. ೧೬. [33] ವಿವರಗಳಿಗೆ ನೋಡಿ ಅ. ಸುಂದರ ಕರ್ನಾಟಕ ಭಾರತಿ, ಸಂಪುಟ ೮, ಸಂಚಿಕೆ ೨, ಪು. ೧೧. [34] ಸುಂದರ ಅ., ೧೯೮೨, ಮಲಪ್ರಭೆ ಬಯಲಿನ ಪ್ರಾಚೀನ ಸಂಸ್ಕೃತಿ, ಚಾಲುಕ್ಯ ಶ್ರೀ, ಬಾದಾಮಿ, ಪು. ೧೪. [35] Ras S.R., ೧೯೭೩, Recent Discoveries in Aihole and Pattadakall” Srikanthika, Mysore, p. ೨೮.ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಶೀಲಾಕಾಂತ ಪತ್ತಾರ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ