Badami Guhegalu

ಬಾದಾಮಿಯ ಗುಹೆಗಳು

ಬಾದಾಮಿಯ ಗುಹೆಗಳನ್ನು ಪುನರ್ಪರಿಶೀಲನೆಗೆ ಒಡ್ಡುವಲ್ಲಿ ಈ ವಿವರ ಸಹಿತ ಒಕ್ಕಣೆಯನ್ನು ಸಿದ್ಧಪಡಿಸುತ್ತಿದ್ದೇನೆ. ಏಕೆಂದರೆ ಐತಿಹಾಸಿಕ ನೆಲೆಯಲ್ಲಿ ಈವರೆಗೂ ವಿದ್ವಾಂಸರು ಪರಿಗಣಿಸುತ್ತಿರುವ ರೀತಿ ನೀತಿಯಲ್ಲಿ ಗೊಂದಲವುಂಟಾಗಿರುತ್ತದೆ. ಚಾಲುಕ್ಯ ಮತ್ತು ಪೊಲಕೇಶಿ ೧ ಮತ್ತು ೨ ಇಂಥ ಪಾರಭಾಷಿಕಗಳಿಗೆ ಸ್ಪಷ್ಟವಾದ ಅರ್ಥವಂತಿಕೆಯು ಅವಶ್ಯಕವಾಗಿರುವುದ ರಿಂದ ಈ ಗುಹೆಗಳ ಸ್ವರೂಪ ಮತ್ತು ಇದಕ್ಕೆ ಕಾರಣರಾಗಿರುವಂಥ ವರ್ಗದ ಪರಿಶೀಲನೆಯಿಂದ ಒಂದು ನೆಲೆಯನ್ನು ಮುಟ್ಟಲು ಸಾಧ್ಯವಾದೀತೆಂಬ ನಂಬಿಕೆಯಾಗಿದೆ(ಇದಕ್ಕಾಗಿ ನಾನು ಹಲವು ಬಾರಿ ಈ ಗುಹೆಯನ್ನು ಕಂಡು ಪರಿಶೀಲಿಸಿದ್ದೇನೆ ಮತ್ತು ಒಂದು ನಿರ್ಧಾರದ ನೆಲೆಯನ್ನು ಮುಟ್ಟಿದ್ದೇನೆ. ಈ ನೆಲೆಯನ್ನೇ ನಮ್ಮ ಘನ ವಿದ್ವಾಂಸರು ಪರಿಶೀಲಿಸಬೇಕಾಗಿ ಕೋರುತ್ತೇನೆ).

೧. ಒಟ್ಟು ಐದು ಗುಹೆಗಳು ನಮ್ಮ ಗಮನಕ್ಕೆ ಬೀಳುತ್ತವೆ. ಕೊನೆಯದು ಜೈನ ಗುಹೆ ನಿವಾಸಿಕರಿಲ್ಲದಿದ್ದರೂ ‘ಬಾಹುಬಲಿ’ಯ ಅತ್ಯಂತ ಐತಿಹಾಸಿಕವೆನ್ನಬಹುದಾದ ಪ್ರತಿಮೆ ಯಿರುವುದೇ ಇದರ ವಿಶೇಷ. ಈ ಗುಹೆಯು ಅಂಗುಲಂಗುಲದಲ್ಲೂ ಜೈನ ಧರ್ಮದ ಸಂಕೇತಗಳಾಗಿ ಉಬ್ಬು ಕೆತ್ತನೆ ಪ್ರತಿಮೆಗಳಿವೆ. ಒಂದೆರಡು ಶತಮಾನಗಳ ಕಾಲವಾದರೂ ಇಂತಹ ಸಿದ್ಧತೆಗೆ ಆಧಾರವಾಗಿರಬಹುದು. ಆದರೆ ಜೈನಮುನಿ ಯಾರು? ಎಂದರೆ ತಿಳಿಯುವುದಿಲ್ಲ. ಅಲ್ಲದೆ ಬಾದಾಮಿ-ಐಹೊಳೆ-ಪಟ್ಟದಕಲ್ಲು, ಈ ಸ್ಥಳಗಳ ಪರಿಸರದಲ್ಲಿ ಏಳುನೂರರವರೆಗೂ ಆಧಾರ ಶಾಸನಗಳು ದೊರಕಿದಂತಿಲ್ಲ. ಎರಡನೇ ಪೊಲಕೇಶಿಯ ಐಹೊಳೆ ಶಾಸನವು ಒಂದೇ ಒಂದು ದಾಖಲೆಯಾಗಿರುತ್ತದೆಯಷ್ಟೆ.

[sociallocker]ರವಿಕೀರ್ತಿಯು ಕಟ್ಟಿಸಿದ ಜೀನೇಂದ್ರಾಲಯವು ಐಹೊಳೆಯಲ್ಲೇ ಇರಲು ಸಾಧ್ಯ. ಆದುದರಿಂದ ಬಾದಾಮಿಯ ಜಿನಾಲಯದ ವಿಷಯವು ಸ್ಪಷ್ಟವಾಗುವುದಿಲ್ಲ. ಆದರೂ ಇಲ್ಲಿಯ ಪ್ರತಿಮೆಗಳು ದಟ್ಟವಾಗಿರುವುದರಿಂದ ರವಿಕೀರ್ತಿಯ ಕಾಣಿಕೆಯು ಇದಕ್ಕೂ ಸೇರಿರಬಹುದು. ಒಟ್ಟಿನಲ್ಲಿ ಜೈನ ಶಿಲ್ಪಗಳು ಒಂದು ಪ್ರತ್ಯೇಕ ಮಾದರಿಯಾಗಿ ಉಳಿದುಬಿಡುತ್ತವೆ ಮತ್ತು ಇಲ್ಲಿಯವು ನಗ್ನ ಉಬ್ಬು ಪ್ರತಿಮೆಗಳಾದರೂ ‘ಶಾಂತ’ ಸ್ವಭಾವನೆಗೆ ಸೇರುವಂಥವೇ ಆಗಿವೆ.

೨. ಉಳಿದ ಮೂರು ಗುಹೆಗಳನ್ನು ಗುನಿಸಿದಲ್ಲಿ ಅವುಗಳ ಆಯತಗಳು (Foundation Structure) ಮತ್ತು ತಟಾಕದ ಪಕ್ಕದಲ್ಲಿ ಅದಕ್ಕೆ ಅಭಿಮುಖವಾಗಿ ಮತ್ತು ತಟಾಕದ ಪಕ್ಕದಲ್ಲಿ ಅದಕ್ಕೆ ಅಭಿಮುಖವಾಗಿ ಏರುತ್ತಾ ಏರುತ್ತಾ ಮೆಟ್ಟಿಲುಗಳ ಆಧಾರದಿಂದ ಸಮೀಪಿಸಲು ಅನುಕೂಲವಾಗುವಂತೆ ರಚಿತವಾಗಿರುವುದೂ ಅಲ್ಲದೆ ಮೂರನೆಯ ಪ್ರಸಿದ್ಧ ಗುಹಾಲಯವು ಸುರಕ್ಷಿತವಾಗಿರುವಂತೆ ಇರುವುದನ್ನೂ ಗಮನಿಸಿದಲ್ಲಿ ಎಲ್ಲೋರ ಮತ್ತು ಅಜಂತಾಗಳು ‘ಗುಹಾಲಯ’ಗಳನ್ನು ನೆನಪಿಗೆ ತರುತ್ತವೆ.

ಎರಡು ಮತ್ತು ಮೂರನೆಯ ಗುಹೆಗಳ ಮಧ್ಯೆ ಕೊಂಚ ಹಿಂದಕ್ಕೆ ರಚಿತವಾಗಿರದ ಒಂದು ಗುಹೆಯು ಗಮನ ಸೆಳೆಯುತ್ತವೆ. ಇದನ್ನು ‘ಬೌದ್ಧಗುಹೆ’ಯೆಂದು ಬಾ.ರಾ.ಗೋಪಾಲ್ ಅವರು ಗುರುತಿಸಿದ್ದಾರೆ. ಇದರ ಬಲಗೋಡೆಯಲ್ಲಿ ಬೋಧಿಸತ್ವನ ಉಬ್ಬು ಚಿತ್ರವನ್ನು ಅರೆಮನಸ್ಸಿನಿಂದ ರಚಿಸಿ ಬಿಟ್ಟಂತಿದೆ. ಆದರೆ ನೇರವಾಗಿ ಎದುರುಗಡೆಯ ಗೋಡೆಯಲ್ಲಿ ಒಂದು ಸಣ್ಣ ಗೂಡಿನಲ್ಲಿ (ಸುಮಾರು ೩’x೪’) ಒಂದು ಪುಟ್ಟ ಗಣಪತಿಯಿದೆ. ಅದಕ್ಕೂ ಮುಂದೆ ಓರೆಕೋರೆಯಾದ ಮೂಲೆಯ ಕಡೆಯ ಬಂಡೆಯಲ್ಲಿ ಕೆಂಪು ಬಣ್ಣದ ಪ್ರಾಗೈತಿಹಾಸಿಕ ರಚನೆಗಳಿವೆ(ಇವು ಇಂಥವೇ ರೂಪಗಳೆಂದು ಹೇಳಲು ಬರುವುದಿಲ್ಲ). ಆದುದರಿಂದ ಇದೊಂದು ಅಪೂರ್ಣ ಗುಹೆಯೆಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಇದರಿಂದ ಚಾಲುಕ್ಯ ಗುಹೆಗಳು ಆಲಯಗಳಾಗಿರುವ ಪೂರ್ವದಲ್ಲಿ (ಬೌದ್ಧ ತಾತ್ಕಾಲಿಕ ತಂಗುದಾಣವಾಗಿದ್ದಿರಲೂಬಹುದು) ಇಲ್ಲಿಯ ನಾಲ್ಕೈದು ಗುಹೆಗಳು ಪ್ರಾಗೈತಿಹಾಸಿಕ ನೆಲೆಯಾಗಿದ್ದಿರಬಹುದು.

ಇವುಗಳ ಪ್ರಾಗೈತಿಹಾಸಿಕತೆಗೆ ಬೇರೆ ಆಧಾರಗಳೂ ಇವೆ. ೧. ಇಲ್ಲಿಯ ಪರಿಸರವನ್ನು (ಮುಖ್ಯವಾಗಿ ಮಧ್ಯಪ್ರದೇಶದ Deccan trapsನಂತೆ) ಪರಿಶೀಲಿಸಿದಲ್ಲಿ ಈ ಎತ್ತರೆತ್ತರಕ್ಕೆ ಪೇರಿಸಿದಂತಿರುವ ಬಂಡೆಗಳು ಭಿಂಬೇಟ್ಕದ ನೆನಪನ್ನೂ ತರುತ್ತವೆ. ಮಳೆಗಾಲದಲ್ಲಿ ಒಂದು ಅಬ್ಬಿಯು ಈ ಗುಹೆಗಳ ಕಡೆಯಿಂದ ಕೆಳಗಿನ ತಟಾಕಕ್ಕೆ ಬೀಳುವುದನ್ನು ಗಮನಿಸಿದಲ್ಲಿ ಎಲ್ಲೋರದ ನೆನಪಾಗುತ್ತದೆಯಷ್ಟೆ. ೨. ಇಲ್ಲಿಗೆ ಅಂದರೆ ಈ ಗುಹೆಗಳಿಗೆ ಹಿನ್ನೆಲೆಯಾದಂತಿರುವ ಉತ್ತರ ಭಾಗದಲ್ಲಿ ಮಹಾಕೂಟದ ಕಡೆಗೆ ಸರಿದಂತೆ ಬಂಡೆಗಳ ಕಾಡು ಗಮನಕ್ಕೆ ಬರುತ್ತದೆ. ಅದರಲ್ಲೂ ಬಾದಾಮಿಯ ರೈಲು ನಿಲ್ದಾಣದ ಕಡೆಗೆ ೨-೩ ಕಿಲೋಮೀಟರು ಅಂತರದಲ್ಲಿರುವ ‘ಸಿಡ್ಲಪಡಿ’ಯು (ಇದನ್ನು ಮೊದಲು ಪ್ರಸಿದ್ದಿಗೆ ತಂದವರು ಪ್ರೊ.ಶೆಟ್ಟರ್, ಕರ್ನಾಟಕ ವಿಶ್ವವಿದ್ಯಾಲಯದ ತಮ್ಮ ವಿದ್ಯಾರ್ಥಿಗಳ ಸಂಗಡ ಅಲೆದು, ಜೊತೆಗೆ ಅಮೇರಿಕದ ಕೆಲವು ವಿದ್ಯಾರ್ಥಿಗಳೂ ವಿದ್ವಾಂಸರೂ ಆದವರ ಸಂಗಡ ಪರಿಶೀಲಿಸಿ ಬೆಳಕಿಗೆ ತಂದ ಪ್ರಾಗೈತಿಹಾಸಿಕ ವಿಶೇಷ ‘ರಚನೆ’.) ಇಲ್ಲಿಯ ಬಣ್ಣದ ಚಿತ್ರಗಳಲ್ಲದೆ ಹೋರಿಗಳ ಕಾಳಗದ ಕೆತ್ತನೆ(‘ಇದನ್ನು ಗೀರುಕೆತ್ತನೆ’ ಎನ್ನಬಹುದು)ಯನ್ನೂ ಗುರುತಿಸಿದಲ್ಲಿ ಅಲ್ಲದೆ ಹೀಗೆಯೇ ಹಲವಾರು ಸಹಜ ಬಂಡೆಗಳಿಂದ ರಚಿತ ಗುಹೆಗಳಲ್ಲಿ ಇಲ್ಲಿಯ ಬೌದ್ಧ ಗುಹೆಯಲ್ಲಿರುವಂಥ ಕೆಂಪು ಬಣ್ಣದ ರಚನೆಗಳು ತುಂಬಿರುವುದನ್ನೂ ಗಮನಿಸಿದಲ್ಲಿ (ಗೆಳೆಯ ಹಿರೇಮಠ್; ಬಾದಾಮಿಯ ಶಾಲಾಧ್ಯಾಪಕರು, ಅಲ್ಲದೆ ೧೯೮೩ರ ವೇಳೆಗೇ ಗುರುತಿಸಿ ಪೊಲಕೇಶಿಯ ಸ್ಮಾರಕ ಶಾಸನವಿರುವ ಗುಹೆುನ್ನು ಬೆಳಕಿಗೆ ತಂದ ಗೆಳೆಯರಾದ ಶ್ರೀನಿವಾಸ ಪಾಡಿಗಾರರನ್ನೂ ನೆನೆಯುತ್ತೇನೆ. ಬೆಳಕಿಗೆ ತಂದ ಶ್ರೀಯುತರು ನನಗೆ ಸಿಡ್ಲಪಡಿಯನ್ನು ನೋಡಲು ಮಾರ್ಗದರ್ಶಿಯನ್ನು ಕೊಟ್ಟಿದ್ದರು-೧೯೮೩ರಲ್ಲಿ) ಇಲ್ಲೊಂದು ಪ್ರಾಗೈತಿಹಾಸಿಕ ನೆಲೆಯಿದ್ದಿರಬೇಕೆಂಬುದು ವಿದಿತವಾಗುತ್ತದೆ.

೩. ಇಂತಹ ಪ್ರಾಗೈತಿಹಾಸಿಕ ಚಿತ್ರಗಳನ್ನು ಮರೆಯದೆ ಈ ಗುಹೆಗಳನ್ನು ಪರಿಶೀಲಿಸ ಬೇಕಾದ ಅಗತ್ಯವಿದೆ.

ಮೊದಲಿಗೆ ಈ ಮೂರು ಗುಹೆಗಳನ್ನು (ವೈಷ್ಣವ ಗುಹೆಗಳೆಂದು ಕರೆಯುವುದು ರೂಢಿ) ಪರಿಶೀಲಿಸಬಹುದು. ಇವು ಬರಿಯ ವೈಷ್ಣವ ಗುಹೆಗಳಲ್ಲ ಶೈವ ಪ್ರತಿಮೆಗಳೂ ತುಂಬಿವೆ. ಪ್ರತಿಯೊಂದರ ಒಳಗಿನ ಕೋಣೆಯಲ್ಲಿ ‘ಲಿಂಗ’ವಿದೆ. ಮೊದಲ ಗುಹೆಯಲ್ಲಿ ಹರಿಹರ ಮತ್ತು ಲಕ್ಷ್ಮೀ ಪಾರ್ವತಿಯರ ಒಂದು ಕೆತ್ತನೆಯಿದೆಯಷ್ಟೆ. ದ್ವಾರಪಾಲಕರಲ್ಲಿ ಗುಹೆಯ ಬಲ ಬದಿಗೆ ತ್ರಿಶೂಲಪಾಣಿಯೂ ಎಡಗಡೆಯಲ್ಲಿ ಹೊರಚಾಚಿದ ಪಕ್ಕದಲ್ಲಿ ನಟರಾಜನ ಕೆತ್ತನೆಯೂ ಇವೆಯಷ್ಟೆ. ನಟರಾಜನ ಹಿಂದೆ ಒಂದು ವಿಶಿಷ್ಟ ಗೂಡಿನಲ್ಲಿ ಗಣಪತಿಯ ಪ್ರತಿಷ್ಠೆಯಿದೆ. ಆದುದರಿಂದ ಈ ಗುಹೆಗಳು ವೈಷ್ಣವ ಶೈವ ಗುಹೆಗಳೆಂದು ಕರೆಯಲು ಅವಕಾಶ ಮಾಡಿಕೊಡುತ್ತಿವೆ.
ಆದರೂ ಈ ಮೂರು ಗುಹೆಗಳಲ್ಲಿ ಎರಡು ಬಗೆಯ ಶಿಲ್ಪಗಳು ಅಡಕವಾಗಿವೆ. ಇದರಿಂದಾಗಿ ಇವುಗಳನ್ನು (ಡಾ.ವಿ.ರಾಘವನ್ ಹೇಳುವಂತೆ) ಸ್ಮಾರ್ತ ಸಂಪ್ರದಾಯಕ್ಕೆ ಸೇರಿದುವೆಂದು ಹೇಳಬಹುದು(ಮಾಧ್ವರಲ್ಲಿ ಈ ಸ್ಮಾರ್ತ ಸಂಪ್ರದಾಯದವರೂ ‘ಸ್ಮಾರ್ತ’ರೆಂಬ ಕಮ್ಮೆ-ಕರ್ನಾಟಕರು ಇದೇ ಸಂಪ್ರದಾಯಕ್ಕೆ ಸೇರಿದವರಿದ್ದಾರೆ). ಇಂತಹ ಹರಿಹರ ಅಭೇದ ಅಥವಾ ಸಮಾನತೆಯ ಆಶಯಗಳು ಈ ಗುಹೆಗಳ ‘ಉಬ್ಬು ಕೆತ್ತನೆ’ಗಳಾಗಿರುವುದರಿಂದ ಮೇಲುನೋಟಕ್ಕೆ ಒಂದೆ ‘ಬಗೆ’ಯವೆಂದು ತೋರಬಹುದು(ಇದನ್ನು ಮುಂದೆ ವಿವರಿಸಲಾಗುತ್ತದೆ).

೪. ಬಾದಾಮಿಯ ಶಿಲ್ಪಗಳನ್ನು ಗಮನಿಸುವಲ್ಲಿ ಇವುಗಳ ಉತ್ತರಕ್ಕೆ ಮೂರು ಮೈಲಿಗಳಾಚೆಗೆ ಇರುವ ‘ಮಹಾಕೂಟ’ ಎಂಬ ಸ್ಥಳವಿದೆ(ಇದರಲ್ಲಿ ‘ಹೊಸ ಮಹಾಕೂಟ’ ಎಂದು ಈಚಿನವರು ಗುರುತಿಸಿದಂತೆ ಬಳಕೆಯಿದೆ. ಆದರೆ ಹೊಸದು-ಹಳೆಯದು ಎರಡೂ ಒಂದೇ ಎಂಬುದನ್ನು ಬಳಸಬೇಕಾಗಿದೆ). ಇದೊಂದು ಸದಾ ಜಲ ಸಂಚಾರವಿರುವ ಅಥವಾ ನಿವಾಸ ಯೋಗ್ಯವಾದ ಚೌಕಟ್ಟಾಗಿದೆ(ಇದನ್ನು complex ಅನ್ನಬೇಕಾಗುತ್ತದೆ). ಇದರಲ್ಲಿನ ಮಹಾಕೂಟೇಶ್ವರ, ಸಂಗಮೇಶ್ವರ, ಮಲ್ಲಿಕಾರ್ಜುನ ಗುಡಿ ಮತ್ತು ಹೆಸರಿಲ್ಲದ ಕೆಲವು ಸಣ್ಣ ಸಣ್ಣ ದೇಗುಲ ರಚನೆಗಳೂ ಮಂಟಪಗಳೂ ಇವೆ.

ಇಷ್ಟೆಲ್ಲಾ ಅನುಕೂಲ ಸ್ಥಳವನ್ನು ಈ ಪರಿಸರದ ಜನತೆಯು ಉಳಿಸಿಕೊಂಡು ಬಂದಿದೆ. ಇಲ್ಲಿಯ ಮುಖ್ಯ ‘ಜನಾಶಯ’ವು (Peoples desire) ‘ಸಂತಾನಾಭಿಲಾಷೆ’ಯಾಗಿದೆ. ಈ ಅಭಿಲಾಷೆಗೆ ಇಂದಿಗೂ ಇಲ್ಲಿಯ ‘ಪಾಶುಪತ’ ಕೆತ್ತನೆಗಳಿಂದ ತುಂಬಿರುವ ವಾತಾವರಣವೇ ಆಗಿದೆ. ಇಲ್ಲಿಯ ಉಬ್ಬು ಕೆತ್ತನೆಗಳಲ್ಲಿಊರ್ಧ್ವರೇತೇಶ್ವರ ಮತ್ತು ‘ಅರ್ಧನಾರೀಶ್ವರ’ ಅಲ್ಲದೆ ಒಂದು ವಿಶಿಷ್ಟ ವಿಘ್ನೇಶ್ವರ ಇವುಗಳಲ್ಲದೆ ನೀರಿನಲ್ಲಿದ್ದ ಕಮಲ ಗಂಗವ್ವ ಎಂಬ ಕೆತ್ತನೆ(ಈಗ ಇದರ ಭಗ್ನ ಪ್ರತಿಮೆಯನ್ನು ನೆಲದ ಮೇಲೆ ಚೆಲ್ಲಿದ್ದಾರೆ ಮತ್ತು ಪೂರ್ಣವಾದುದನ್ನು ಮ್ಯೂಸಿಯಂನಲ್ಲಿರಿಸಿದ್ದಾರೆ).
ಇಲ್ಲಿಯ ಕೆತ್ತನೆಗಳ ಶಿವಲಿಂಗಗಳೂ ಸಹಿತ (ಒಂದು ‘ವಿರೂಪಾಕ್ಷ’ನ ಗುಡಿಯಿದೆ. ಅದರಲ್ಲಿ ಪೀಠ ಮಾತ್ರವಿದೆ) ಅದರ ಗೋಡೆಯಲ್ಲಿ ಹೊರಕ್ಕೆ ‘ಅರ್ಧನಾರೀಶ್ವರ’ ಇದ್ದು ಒಂದು ಉಗ್ರನರಸಿಂಹ ಅಂದರೆ ಹಿರಣ್ಯಕಶ್ಯಪುವಿನ ವಧೆಯ ಕೆತ್ತನೆಯೂ ಇದೆ. ಅಂದರೆ ಈ ವಾತಾವರಣವೂ ಪೂರ್ಣಶೈವವಾಗಿಲ್ಲ. ‘ಸ್ಮಾರ್ತ’ ಸಂಪ್ರದಾಯಕ್ಕೆ ಸೇರಿದ್ದೆಂದು ಹೇಳ ಬಹುದು.

ಈ ‘ಮಹಾಕೂಟ’ಕ್ಕೂ ಬಾದಾಮಿಯ ಗುಹೆಗಳಿಗೂ ನೇರವಾದ ಒಂದು ‘ಕಲ್ಲುರುಟು’ ಗಳ ಹಾದಿಯಿದೆ. ಇದು ಬಹು ಹಳೆಯದೆಂದು ಹೇಳಲು ‘ಹಾದಿಯೇ’ ಆಗಿದೆ. ಇದಕ್ಕೆ ಉರುಟು ಅಥವಾ ಓರೆಕೋರೆಯ ದುಂಡುಕಲ್ಲುಗಳನ್ನು ಹೊದಿಸಲಾಗಿದೆ. ಕಲ್ಲುಗಳು ಮಳೆಯಿಂದಲೋ ಏನೋ ಮನುಷ್ಯರು ತುಳಿದಂತೆ ಸವೆದಿವೆ. ಮಧ್ಯೆ ಮಧ್ಯೆ ಹಾದಿಯ ಕಲ್ಲುಗಳನ್ನು ಕೀಳಲಾಗಿದೆ. ಆದರೆ ಇದು ನೇರವಾಗಿ ಬಾದಾಮಿಯ ಉತ್ತರ ಕೋಟೆಯ ಕಡೆಗೆ ಒಂದು-ಎರಡು ಕಲ್ಲು ಕಂಬಗಳು, ೮ ಅಡಿ ಎತ್ತರ ಮತ್ತು ೧.೫ ಅಡಿ ಅಗಲದ ಚೌಕಟ್ಟು; ಮೇಲೆ ಹಾಸುಗಲ್ಲೂ ಇದೆ. ಇದರ ಕಂಬಗಳಲ್ಲಿ ಕೆತ್ತನೆಗಳಿವೆ. ಮೇಲಿನದರಲ್ಲಿ ಮಧ್ಯೆ ‘ಗಜಲಕ್ಷ್ಮೀ’ ಕೆತ್ತನೆಯಿಂದ ಎಲ್ಲಾ ಕಾಲದಿಂದ ಸವೆದಿವೆ.

ಈ ಹಾದಿಯು ಬಾದಾಮಿಯ ಗುಹೆಗಳಿಗೂ ಮಹಾಕೂಟ ಪ್ರದೇಶಕ್ಕೂ ಸಂಬಂಧವಿರಬೇಕೆಂಬುದನ್ನು ಸೂಚಿಸುತ್ತದೆ. ಮಹಾಕೂಟದ ಹೆಬ್ಬಾಗಿಲೂ ಬಾದಾಮಿಯ ಕಡೆಗೇ ಇದೆಯಷ್ಟೆ. ಮಹಾಕೂಟದ ಪರಿಸರದಲ್ಲಿ ಅಥವಾ ಚೌಕಟ್ಟಿನಲ್ಲಿರುವ ಕೆಲವು ಉಬ್ಬು ಕೆತ್ತನೆಗಳನ್ನು ಗುರುತಿಸಲು ವಿದ್ವಾಂಸರು ‘ಲಕುಲೀಶ ಪಾಶುಪತ’ ಎಂದು ಕರೆದಿದ್ದಾರೆ. ಆದರೆ ಲಾಕುಲದ ಬದಲು ‘ಪರಶು’ ಹಿಡಿದ (ಸೊಂಟದಲ್ಲಿ ಕತ್ತಿಯೂ ನೇತಿದೆ) ಊರ್ಧ್ವರೇತೇಶ್ವರ ಎಂಬ ಮತ್ತು ಅರ್ಧನಾರೀಶ್ವರ ಎಂಬುದು, ಇವೆರಡೂ (ನಾಲ್ಕೈದು ಜೊತೆಗಳಿವೆ) ‘ನಗ್ನ’ ಕೆತ್ತನೆಗಳು ಜೊತೆಗೆ ‘ಕಮಲ ಗಂಗವ್ವ’ ಎಂಬುದೂ ಸೇರಿದಲ್ಲಿ ಇದೊಂದು ‘ನಗ್ನ’ ಪ್ರಾಧಾನ್ಯ ‘ಲೋಕ’ವಾಗುತ್ತದೆ. ಈ ‘ಫಾಲಸ್’ ಕೆತ್ತನೆಗಳನ್ನು ಇಂದಿಗೂ ಆಶ್ಚರ್ಯ ಭಯಗಳಿಂದ ಪರಿಗಣಿಸಬಹುದು. ಇವು ಪಾಶುಪತ ಸಂಕೇತಗಳೆಂದರೆ ತಪ್ಪಾಗಲಾರದು. ಇದೊಂದು ಅಂದಿನ ಪಾಶುಪತ ನೆಲೆ ಇಲ್ಲಿನ ನೀರಿನ ಸೌಕರ್ಯ ಮತ್ತು ಗುಡ್ಡ ಬೆಟ್ಟಗಳು ಪರಿಸರ ಮುಖ್ಯ. ಇದಕ್ಕೆ ಸಮೀಪದಲ್ಲಿ ಅಂದರೆ ೧.೫ ಕಿಲೋಮೀಟರು ಅಂತರದಲ್ಲಿ ಒಂದು ಗುಹಾಲಯ, ಬಾಣಂತಿಯ ಗುಹೆ ಇದೆ. ಇದು ಇಂದಿಗೂ ಮುಖ್ಯ ಆಶಯವಾಗಿರುವಂತಿದೆ(ಬಹುರೂಪಿಗಳು ಈ ಅರ್ಧನಾರೀಶ್ವರ ವೇಷವನ್ನೂ ಬಾಣಂತಿಯ ವೇಷವನ್ನೂ ಅಭಿನಯಿಸುತ್ತಾರೆ). ಇದೇ ‘ಬಾದುಬ್ಬೆ’ಯ ಅಥವಾ ‘ಬಾದುಬೆ’ಯ ಆಶಯದ ದೇಗುಲ!

ಈ ‘ಪಾಶುಪತ’ ವಾತಾವಣಕ್ಕೂ ಬಾದಾಮಿಯ ಗುಹೆಗಳ ಕೆತ್ತನೆಗಳಿಗೂ ನೇರ ಸಂಪರ್ಕವಿದ್ದಿರಬೇಕೆಂಬುದನ್ನು, ಈ ಮೇಲಿನ ವಿವರಗಳಿಂದ ಸೂಚಿಸಲಾಗಿದೆ.

೫. ಈಗ ‘ಬಾದಾಮಿ’ಯ (ಗ್ರೀಕರಿಗೆ ಇದು ‘ಬೊದಿಮೋಯ್’) ಗುಹೆಗಳ ಕಡೆ ವಿಚಾರ ಮಾಡಬಹುದು. ಎರಡು ಮತ್ತು ಮೂರನೆ ಗುಹೆಗಳ ನಡುವೆ ಮೇಲುಗಡೆಗೆ ಹೋಗಲು ಒಂದು ಸುಂದರ(?) ದ್ವಾರವಿದೆ. ಇದು ಟಿಪ್ಪುಸುಲ್ತಾನನ ಆಳ್ವಿಕೆಗೂ ಮುಂಚೆ ಕೇವಲ ಬಾಗಿಲಾಗಿ ಗುಹೆಗಳಿಗೆ ‘ಪ್ರವೇಶ ದ್ವಾರ’ವಾಗಿರಲು ಸಾಕು. ಮಹಾಕೂಟದ ಕಡೆಯಿಂದ ಬಂದಲ್ಲಿ ಕಪ್ಪೆ ಅರಭಟ್ಟನ ಶಾಸನದ ಮುಂದಕ್ಕೆ ಈಗಲೂ ಒಂದು ಬಂಡೆಗಳ ನಡುವಿನ ಭಾಗವಿದೆ. ಇದು ಹಳೆಯ ‘ದ್ವಾರ’ಗಳಲ್ಲಿ ಪ್ರಮುಖವಾದದ್ದಿರಬೇಕು. ಅಲ್ಲಿಂದ ಏರಿ ಬಂದರೆ ಗುಹೆಗಳಿಗೆ ಬರಲು ಮೇಲೆ ಹೇಳಿರುವ ದ್ವಾರ ಪಟ್ಟವು ಕಾಣಸಿಗುತ್ತದೆ.! … ಈ ಸೂಚನೆಯು ನನಗೆ ಪೂರ್ವಭಾವಿಯೆಂದು ಅನ್ನಿಸಿದ್ದುಂಟು. ಆದರೆ ಕ್ರಮೇಣ ವಿಚಾರ ಮಾಡಬೇಕಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ.

ಈಗ ಮೊದಲ ಗುಹೆಯ ವಿಶೇಷಗಳಲ್ಲಿ ನಟರಾಜನ ಕೆತ್ತನೆಯಿಂದ ಹಿಂದಕ್ಕೆ ಕೊಂಚ ಕತ್ತಲಲ್ಲಿರುವ ಗೂಡಿನಲ್ಲಿ ಕೆತ್ತಿರುವ ಎರಡು ವಿಗ್ರಹಗಳು ಉಬ್ಬುಶಿಲ್ಪಗಳು ಮತ್ತು ಕೆಳಗಡೆ ಅದೇ ಗೂಡಿನಲ್ಲಿ ತೊಟ್ಟಿಲಾಕಾರದಲ್ಲಿ ಸುತ್ತಲೂ ಕೆತ್ತಿರುವ ಯಕ್ಷರ ಉಬ್ಬು ಶಿಲ್ಪಗಳು ತೊಟ್ಟಿಲು ಅರೇಳಡಿ ಉದ್ದವೂ ಒಳಕ್ಕೆ ಸು.ಮೂರಡಿ ಅಗಲವೂ ೨.೫ ಅಡಿಗಳಷ್ಟು ಆಳವೂ ಇದೆ. ಇದರಲ್ಲಿ ಹಣತೆಗಳನ್ನು ಹೊತ್ತಿಸಿಡಬಹುದು. ನೀರು ಅಥವಾ ‘ಗಂಧಜಲ’ ತುಂಬಬಹುದು. ಅಂದರೆ ಆಚರಣೆಯ ಪೂಜೆಗೆ ಇಲ್ಲಿ ಅವಕಾಶವಿದೆ. ‘ಗಂಧಜಲ’ ಎಂಬುದಕ್ಕೆ ಹಳಗನ್ನಡದಲ್ಲಿ ಯಕ್ಷ-ಕರ್ದಮ, ಕರ್ದಮ= ಕೆಸರು, ‘ಯಕ್ಷ’ ಅಂದರೆ ಮಾಂತ್ರಿಕತೆಯದು. ‘ಗಂಧ’ ಎಂಬ ವಿಚಾರವನ್ನು ಡಾ.ಡಿ.ಎಲ್.ನರಸಿಂಹಾಚಾರ್ಯರು ನಿರ್ಧರಿಸಿದ್ದಾರೆ.

ಈ ಆಚರಣೆಯ ಗೂಡು ಮುಖ್ಯವಾಗಿ ಗಣಪತಿಗೆ, ಎಂದರೆ ಇದೇ ‘ವಾತಾಪಿ’ಯ ಗಣಪತಿ. ನಮ್ಮ ಸಂಗೀತದಲ್ಲಿ ಈ ದೇವತೆಯ ಪ್ರಾರ್ಥನೆಯಿದೆ. ಕಳೆದ ಶತಮಾನದ ಕೊನೆಯಲ್ಲಿ ಡಾ.ಮುತ್ತುಸ್ವಾಮಿ ದೀಕ್ಷಿತರು ರಚಿಸಿದ್ದು ಪ್ರಸಿದ್ಧ(ಈತ ದೇವಿ ಔಪಾಸಕರು ಎಂಬುದು ಮುಖ್ಯ. ಅಂಥ ಪರಂಪರೆಗೆ ಯಾವ ಇತಿಹಾಸವಿದೆಯೋ ಸ್ಪಷ್ಟವಿಲ್ಲ) ಪ್ರಾರ್ಥನೆ. ಆದರೆ ಬಾದಾಮಿಯು ಈ ಗುಹೆಯ ಗೂಡಿನಲ್ಲಿ ದೇವಿ(ಚಾಮುಂಡಿ)ಯ ಒಂದು ಉಬ್ಬು ಕೆತ್ತನೆಯಿದೆ. ಆದೂ ಗಣಪತಿಯ ‘ಗಣ’ಕ್ಕೆ ಸೇರಿದ್ದಿರಬಹುದು. ಈ ವಾತಾಪಿ ಗಣಪತಿಯ ಕೆತ್ತನೆ, ಎರಡು ಕೈಗಳದ್ದು ಮತ್ತು ಕೆತ್ತನೆಯ Proportion ‘ಪ್ರಮಾಣ’ದಲ್ಲಿ ಬಹುಸುಂದರ ವಾದುದು. ಇದೇ ಮೊದಲನೆಯ ಮುಖ್ಯಪಾಶುಪತ ‘ಕೆತ್ತನೆ’ಯೆಂದರೆ ಆಶ್ಚರ್ಯವೂ ಆದೀತು. ಹೊಕ್ಕುಳಿನವರೆಗೂ ಊರ್ಧ್ವ ಮುಖ ಲಿಂಗವಿದ್ದಿರಬೇಕೆಂಬುದಕ್ಕೆ ಗುರುತು ಕಾಣುತ್ತದೆ. ಇದು ‘ವಿನಾಯಕ’ನಾಗಿ ಪಾಶುಪತ ಸಂಕೇತ ಪ್ರಧಾನತೆಯಿದ್ದಿರಬೇಕೆಂಬುದಕ್ಕೆ ಮೂರನೆಯ ಗುಹೆಯ ಮೇಲುಗಡೆಯಲ್ಲಿ (ಒಳಗೆ) ಒಂದು ಗಣಪತಿ ಪಾಶುಪತ ಸಂಕೇತವಿರುವುದು, ಇನ್ನೂ ಉಳಿದಿದೆ.

ಅದೇ ‘ನಟರಾಜ’ನ ಕೆತ್ತನೆಯಲ್ಲಿ ಇಂಥ ಪಾಶುಪತ ಸಂಕೇತವಿರುವುದಿಲ್ಲ. ಅದನ್ನು ಎದೆಕಟ್ಟಿನಿಂದ ಜೋತುಬಿದ್ದ ಒಂದು ವಸ್ತ್ರದ ಸೆರಗು ‘ಈ ಭಾಗ’ವನ್ನು ಮರೆ ಮಾಡಿಕೊಂಡು ಮಂಡಿಯಿಂದ ಕೆಳಕ್ಕೂ ಜೋತಾಡುತ್ತದೆ.

ಮೊದಲ ಎರಡು ಗುಹೆಗಳು ಹೋಲಿಕೆಗಳಲ್ಲಿವೆ. ಮೊದಲಿಗೆ ‘ಕೊರೆದ’ವಾಗಿರಬಹುದು. ಅಥವಾ ಮಂಗಳೇಶನಿಗೂ ಮುಂಚೆ ರಚಿತವಾದದ್ದಿರಬಹುದು. ಮೂರನೆಯ ಗುಹೆಯನ್ನು ‘ವೈಷ್ಣವ ಗುಹೆ’ ಎನ್ನುತ್ತಾರೆ. ಇಲ್ಲಿಯ ಶೇಷ ಪೀಠಸ್ಥ ವಿಷ್ಣು, ತ್ರಿವಿಕ್ರಮ ಮತ್ತು ಉಗ್ರ ನರಸಿಂಹ, ಕೆತ್ತನೆಗಳು ಸುಪ್ರಸಿದ್ಧವಾಗಿವೆ. ಇವುಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿದಲ್ಲಿ ಪಾಶುಪತ ಸಂಕೇತಗಳಿದ್ದವೆಂಬುದೂ ಅರಿವಾಗುತ್ತದೆ.

ಆದರೆ ಒಂದು ಸಮಯದಲ್ಲಿ ಈ ‘ಪಾಶುಪತ ಸಂಕೇತ’ವನ್ನು ವ್ಯವಸ್ಥಿತವಾಗಿ ಅಂದರೆ ಮೂಲ ರಚನೆಗೆ ಮೊದಲ ನೋಟಕ್ಕೆ ಕೊರತೆಯಿಲ್ಲದಂತೆ, ತೆಗೆದುಹಾಕಲಾಗಿದೆ. ಇದು ‘ಊಹೆ’ಯಾದರೂ ಈ ಕೆತ್ತನೆಗಳು ಸಹಜ ಆಧಾರಗಳಾಗಿವೆ. ಇದು ಕೇವಲ ತಾರತಮ್ಯದ ಮಾತಲ್ಲ. ಏಕೆಂದರೆ ಕಲ್ಯಾಣಿ ಚಾಲುಕ್ಯರ ಕಾಲದಲ್ಲೂ ಮಹಾಕೂಟವೂ ಒಂದು ಪ್ರಮುಖ ಕ್ಷೇತ್ರವಾಗಿದ್ದಿರಬೇಕೆನ್ನಲು ಈ ಕಾಂಪ್ಲೆಕ್ಸಿನ ಲಕುಲೀಶ-ಪಾಶುಪತ ಕೆತ್ತನೆಗಳೂ ಒಂದು ವೀರಭದ್ರ ವಿಗ್ರಹವೂ ಆಧಾರವಾಗುತ್ತಿವೆ. ಬಾದಾಮಿಯ ಗುಹೆಗಳಲ್ಲಿ (ಮೊದಲ ಮೂರು) ವೈಷ್ಣವ ಕೆತ್ತನೆಗಳಿಗೆಲ್ಲಾ ‘ಪಾಶುಪತ’ ಸಂಬಂಧವಿದೆ. ಎಂದಾದರೆ ಅದೇ ‘ನಟರಾಜ’ ಸಮೇತವಾಗಿ ಐಹೊಳೆಯ ‘ರಾವಳಫಡಿ’ ಕೆತ್ತನೆಗಳಲ್ಲಿ ಈ ಸಂಕೇತವನ್ನು ಕೌಪೀನದಿಂದ ಅಲಂಕರಿಸಲಾಗಿದೆ. ‘ಕಮಲ ಗಂಗವ್ವ’ನ ಕೆತ್ತನೆಯಂತೂ ಪಾಶುಪತ ಸಂಕೇತ ವಿಶೇಷ ವೆಂಬುದೂ ಅದನ್ನು ಯಾವ ರೀತಿಯಲ್ಲೂ ಮರೆಮಾಚುವುದಕ್ಕೆ ಸಾಧ್ಯವಿಲ್ಲವೆಂಬುದೂ ಮುಖ್ಯ.

೬. ಆದುದರಿಂದ Phallus Worship ನ ಸಂಬಂಧವುಳ್ಳ ‘ಪಾಶುಪತ’ ಪದ್ಧತಿಯಲ್ಲಿ ವೈಷ್ಣವ ಕೆತ್ತನೆಗಳೆಲ್ಲಾ ಬಾದಾಮಿಯ ಗುಹೆಗಳ ಪ್ರಸ್ಥಿಯನ್ನು ಸಾರುತ್ತಿವೆ. ಉಗ್ರನರಸಿಂಹನ ಪ್ರತಿಮೆಯೂ ಅರ್ಧ ಪ್ರಾಣಿ ರೂಪದಿಂದ ದಿಗಿಲುಂಟು ಮಾಡಬಲ್ಲುದಾಗಿದೆ(ಕರ್ನಾಟಕದಲ್ಲಿ ನರಸಿಂಹ ದೇಗುಲಗಳಲ್ಲಿ ಒಂದೆರಡೆಡೆ ‘ಸಾಲಿಗ್ರಾಮ’ ರೂಪಗಳಿವೆ. ಮಾಧ್ವರು ಅದರಲ್ಲೂ ಸ್ಮಾರ್ತ ಸಂಪ್ರದಾಯದವರು ಶಿವಲಿಂಗಕ್ಕೂ ನಡೆದುಕೊಳ್ಳುತ್ತಾರೆ, ಮಕ್ಕಳಿಗೆ ಹೆಸರಿಡುತ್ತಾರೆ. ಲಕ್ಷ್ಮೀದೇವಿಯ ಆರಾಧನೆ ಮಾಡುತ್ತಾರೆ. ಅಂದರೆ ನರಸಿಂಹಾರಾಧನೆ ಇವರಲ್ಲಿ ಹಾಸುಹೊಕ್ಕಾಗಿದೆ). ಈ ಪ್ರತಿಮೆಗೆ ನಡೆಸಿರಬಹುದಾದ ಶಸ್ತ್ರಕ್ರಿಯೆ ಗಮನಾರ್ಹವಾದುದು.

ಈ ಹಿನ್ನೆಲೆಯಲ್ಲಿ ವಿಚಾರ ಮಾಡಿದಾಗ ಬಾದಾಮಿಯ ಗುಹೆಗಳು ‘ಪಾಶುಪತ ಪ್ರಧಾನ ಗುಹೆಗಳು’ ಎನ್ನಿಸಿಕೊಳ್ಳುತ್ತವೆ. ಜಯಸಿಂಹನಿಂದ ಹಿಡಿದು ಮಂಗಳೇಶನ ನಂತರವೂ ಪೊಲಕೇಶಿಗೆ ‘ಪರಮೇಶ್ವರ’ ಬಿರುದು ಬರುವತನಕವೂ ಪಾಶುಪತ ಆಡಳಿತಕ್ಕೆ ಈ ಗುಹೆಗಳು ಕೇಂದ್ರಗಳಾಗಿರಬಹುದು, ಎಂದರೆ ತಪ್ಪಾಗಲಾರದು. ಮಹಾಕೂಟವು ‘ಪಾಶುಪತ’ ಕೇಂದ್ರವಾಗಿ ಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲೂ ಪ್ರಧಾನ ಪಾತ್ರವಹಿಸಿರಲು ಸಾಕು. ಆದರೆ ಕ್ರಿ.ಶ. ಐದು ಆರು, ಏಳನೆಯ ಶತಮಾನಗಳಲ್ಲಿ ಬಾದಾಮಿ ಗುಹೆಗಳು ನಮ್ಮ ಚಾಲುಕ್ಯ ಸಾರ್ವಭೌಮ ವಾಸಕ್ಕೆ ಅರಮನೆಗಳಾಗಿ ಇದ್ದಿರಲೂ ಸಾಕು. ಹೀಗೆಂದರೆ ಮುಂದಿನ ವಿಚಾರಕ್ಕೆ ಇದು ಗಟ್ಟಿಯಾದ ತಳಹದಿಯಾಗುತ್ತದೆ.

೭. ಮಹಾಕೂಟದ ಎರಡು ಪ್ರಸಿದ್ಧ ವಿಗ್ರಹಗಳಲ್ಲಿ ೧. ಊರ್ಧ್ವಕೇತೇಶ್ವರ ಮತ್ತೊಂದು ೨. ಅರ್ಧನಾರೀಶ್ವರ; ಇವೆರಡರ ಹೆಸರೂ ಈಚಿನವಾಗಿವೆ. ಏಕೆಂದರೆ ಇವುಗಳಲ್ಲಿ ‘ಶೈವ’ ಲಕ್ಷಣಗಳು ಖಚಿತವಾಗಿಲ್ಲ. ಬದಲು Phallus Worship ಸಂಕೇತಗಳು ಖಚಿತವಾಗಿವೆ.

ಈ ಸಂಕೇತನಗಳನ್ನು ಪ್ರಾಗೈತಿಹಾಸಿಕ ನೆಲೆಯಿಂದ ಪರಿಶೀಲಿಸಿದರೆ ತಟ್ಟನೆ ಪುರಾತನ ಮಾನವನ Totem Pillarಗಳಲ್ಲಿ ಇದಕ್ಕಿಂತಲೂ ಕಲಾತ್ಮಕವಾಗಿ (ಅಂದರೆ ಒಂದು ಬಾತು ಕೋಳಿಯ ತಲೆಯು ಸೇರಿದಂತೆ ಆದರೆ ಲಿಂಗದ ಸ್ಥಾನದಿಂದ ಊರ್ಧ್ವಮುಖವಾಗಿ) ಕಾಣಿಸಿಕೊಳ್ಳುತ್ತದೆ. ನಮ್ಮ ಮಲಪ್ರಭಾ ಕಣಿವೆಯು ಪ್ರಾಗೈತಿಹಾಸಿಕತೆಯಲ್ಲಿ ಹಳೆಯ ಶಿಲಾಯುಗದ ಲಕ್ಷಣಗಳ ಹೆಗ್ಗುರುತುಗಳೆಲ್ಲಾ (ಶಿಲಾಯುಗದ ಆಯುಧಗಳ ಸಹಿತ) ಸಿಗುತ್ತಿವೆಯೆಂದು ಆರ್.ವಿ.ಜೋಷಿಯವರು Pleistocene Studies in the Malaprabha Basin ಎಂಬ ಗ್ರಂಥದಲ್ಲಿ ವಿಶದಪಡಿಸಿದ್ದಾರೆ. ಆದುದರಿಂದ ಮಹಾಕೂಟದ ಕೇಂದ್ರದಲ್ಲಿ ಮೊದಲು ನೆಲಸಿದ ‘ಜನತೆ’ಯು ಶಿಲಾಯುಗದ ಲಕ್ಷಣಗಳಲ್ಲಿ ಒಂದಾದ Phallus Worshipನ್ನು ಆಚರಿಸುತ್ತಿದ್ದವರೆಂದರೆ ತಪ್ಪಾಗಲಾರದು, ಅವರ ಪ್ರತಿನಿಧಿಗಳಾಗಿ ಚಾಲುಕ್ಯ ‘ಜಯಸಿಂಹ’ ಮೊದಲ ದೊರೆಯಾದಂತಿದೆ.

ಮುಂದಿನದು ಒಂದು ಮನೆತನ ನಿರ್ಮಿಸುವ ಇತಿಹಾಸ ಮತ್ತು ಅದರ ಪರಿಣಾಮಗಳು ‘ಮಹಾಕೂಟ’ವೂ ಇಂಥ ಪರಿಣಾಮಗಳಿಗೆ ಮೈಗೊಟ್ಟಿರಬೇಕಾದರೂ Phallus Worship ಮತ್ತು ಅದರ ಮೂಲಕ ಸಂತಾನಪೇಕ್ಷಗಳ ಆಚರಣೆಗಳಿಗೆ ಪಕ್ಕಾಗಿರಬಹುದಾಗಿದೆ.

೮. ಕೊನೆಯದಾಗಿ ಬಾದಾಮಿಯ ಚಾಲುಕ್ಯ ಗುಹೆಗಳು ಅರಮನೆಗಳು ಎಂದರೆ ತಪ್ಪಾಗಲಾರದು ಮತ್ತು ಅವರೂ ಪಾಶುಪತರಿರಬೇಕಾಗುತ್ತದೆ.

ಉಪಸಂಹಾರ

೧. ಚಾಲುಕ್ಯರು ಬೊಗಸೆಯಿಂದ ಹುಟ್ಟಿರುವರಾದರೆ ಸೂರ್ಯಾರಾಧಕರು.
೨. ವೈದಿಕ ಧರ್ಮದಲ್ಲಿ ಶಂಕರಾಚಾರ್ಯರಿಗಿಂತ ಪೂರ್ವ ಸ್ಥಿತಿಯಲ್ಲಿ ಯಜ್ಞ ಯಾಗಾದಿಗಳಿಗೆ ಆಧಾರವಾಗಿರುವರು ಈ ಚಾಲುಕ್ಯರೆನ್ನಬಹುದು (ಚಲೂಕ್ಯ ಎಂಬುದಕ್ಕಿಂತ ಚಾಲುಕ್ಯ ಎಂಬುದು ಹೆಚ್ಚು ಪ್ರಚಾರದಲ್ಲಿದೆಯಷ್ಟೆ).
೩. ವಾಸ್ತುಶಿಲ್ಪ ಮತ್ತು ಶಿಲ್ಪ ರಚನೆಗಳಲ್ಲಿ ‘ಪಾಶುಪತ ಶೈಲಿ’ ಎನ್ನುವುದನ್ನು ಚಾಲುಕ್ಯ ಶಿಲ್ಪದಲ್ಲಿ ಮೊಟ್ಟಮೊದಲ ‘ಶೈಲಿ’ ಎನ್ನಬೇಕಾಗುತ್ತದೆ.
೪. ಇವುಗಳ ಅಂದರೆ ಈ ಪಾಶುಪತ ಶೈಲಿಯ ಜೊತೆಗೇ ಕಂಡುಬರುವ ಶೈವ ವಿಗ್ರಹಗಳ ಸಂಪ್ರದಾಯವನ್ನು ಬೇರೆ ಶೈಲಿಯಾಗಿಯೇ ನೋಡಬೇಕಾಗಿದೆ.
ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಕ.ವೆಂ. ರಾಜಗೋಪಾಲ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್‌, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ[/sociallocker]

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.83 ( 4 votes)

ಇವುಗಳೂ ನಿಮಗಿಷ್ಟವಾಗಬಹುದು

ರಚನಾತ್ಮಕ ಜೀವನದ ಅಭಿವೃದ್ಧಿಮಾದರಿ ಹರಿಕಾರ ಬಸವಣ್ಣ

12 ನೇ ಶತಮಾನದಲ್ಲಿ ಬಸವಾದಿ ಶರಣರ ಆಂದೋಲನದ ಇತಿಹಾಸದ ಪುಟಗಳನ್ನು ತಿರುವಿಹಾಕಲು ಅಂತ್ಯದಲ್ಲಿ ನಡೆದ ರಕ್ತಕ್ರಾಂತಿಯ ಕರಾಳ ಅಧ್ಯಾಯ ಬದಿಗಿರಿಸಿದರೆ ಕಲಿಯುಗದಲ್ಲಿ …

Leave a Reply

Your email address will not be published. Required fields are marked *