ಬಸವಣ್ಣನವರ ವಚನಗಳು 001-050

ಇಲ್ಲಿರುವ ಬಸವಣ್ಣನವರ 516 ವಚನಗಳನ್ನು “ಪಂಪ ಪ್ರಶಸ್ತಿ” ಪುರಸ್ಕೃತ ಡಾ. ಎಲ್. ಬಸವರಾಜುರವರು ಸಂಪಾದಿಸಿರುವ “ಬಸವಣ್ಣನವರ ವಚನಗಳು” ಪುಸ್ತಕದ ಆಧಾರ ಮತ್ತು ಅನುಕ್ರಮದಲ್ಲಿ ಕೊಡಲಾಗಿದೆ. ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆಯಿತ್ತ ಡಾ. ಎಲ್. ಬಸವರಾಜುರವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತದೆ.

001

ಉದಕದೊಳಗೆ ಬೈಚಿಟ್ಟ

ಬೈಕೆಯ ಕಿಚ್ಚಿನಂತೆ ಇದ್ದಿತ್ತು;

ಸಸಿಯೊಳಗಣ

ರಸದ ರುಚಿಯಂತೆ ಇದ್ದಿತ್ತು;

ನನೆಯೊಳಗಣ

ಪರಿಮಳದಂತೆ ಇದ್ದಿತ್ತು;

ಕೂಡಲಸಂಗಮದೇವರ ನಿಲವು

ಕನ್ನೆಯ ಸ್ನೇಹದಂತೆ ಇದ್ದಿತ್ತು.

002

ಕಾಳಿಯ ಕಂಕಾಳದಿಂದ ಮುನ್ನ

ತ್ರಿಪುರ ಸಂಹಾರದಿಂದ ಮುನ್ನ

ಹರಿವಿರಿಂಚಿಗಳಿಂದ ಮುನ್ನ

ಉಮೆಯ ಕಲ್ಯಾಣದಿಂದ ಮುನ್ನ

ಮುನ್ನ, ಮುನ್ನ, ಮುನ್ನ,

ಅಂದಂದಿಗೆ ಎಳೆಯ ನೀನು, ಹಳೆಯ ನಾನು

ಮಹಾದಾನಿ ಕೂಡಲಸಂಗಮದೇವ.

003

ಅಯ್ಯಾ, ನೀನು ನಿರಾಕಾರವಾದಲ್ಲಿ

ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ.

ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ

ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ.

ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ

ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ.

ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು

ಜಂಗಮಲಾಂಛನವಾಗಿ ಬಂದಲ್ಲಿ

ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.

004

ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!

ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!

ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!

ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!

ಕೂಡಲಸಂಗಮದೇವ.

005

ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!

ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!

ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!

ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!

ಕೂಡಲಸಂಗಮದೇವ.

006

ಸಂಸಾರಸಾಗರದ ತೆರೆ ಕೊಬ್ಬಿ

ಮುಖದ ಮೇಲೆ ಅಲೆವುತ್ತಿದೆ ನೋಡಾ!

ಸಂಸಾರಸಾಗರ ಉರದುದ್ದವೇ ಹೇಳಾ ?

ಸಂಸಾರಸಾಗರ ಕೊರಲುದ್ದವೇ ಹೇಳಾ ?

ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ?

ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ!

ಕೂಡಲಸಂಗಮದೇವ, ನಾನೇವೆನೇವೆನಯ್ಯ!

007

ನಾನೊಂದ ನೆನೆದರೆ, ತಾನೊಂದ ನೆನೆವುದು;

ನಾನಿತ್ತಲೆಳೆದರೆ, ತಾನತ್ತಲೆಳೆವುದು;

ತಾ ಬೇರೆ ಎನ್ನನಳಲಿಸಿ ಕಾಡಿತ್ತು;

ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;

ಕೂಡಲಸಂಗನ ಕೂಡಿಹೆನೆಂದರೆ

ತಾನೆನ್ನ ಮುಂದುಗೆಡಿಸಿತ್ತು ಮಾಯೆ.

008

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,

ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ,

ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ.

ಈ ಮಾಯೆಯ ಕಳೆವಡೆ ಎನ್ನಳವಲ್ಲ

ನೀವೇ ಬಲ್ಲಿರಿ ಕೂಡಲಸಂಗಮದೇವ.

009

ಇಂದಿಂಗೆಂತು ನಾಳಿಂಗೆಂತೆಂದು

ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ!

ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ!

ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ!

ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ

ಕೊಂದಹುದೀ ಮಾಯೆ ಕೂಡಲಸಂಗಮದೇವ!

010

ಆಸತ್ತೆನಲಸಿದೆನೆಂದರೆ ಮಾಣದು,

ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು,

ಏವೆನೇವೆನೆಂದರೆ ಮಾಣದು-

ಕಾಯದ ಕರ್ಮದ ಫಲಭೋಗವು.

ಕೂಡಲಸಂಗನ ಶರಣರು ಬಂದು

“ಹೋ ಹೋ ಅಂಜದಿರಂಜದಿರು” ಎಂದರಾನು ಬದುಕುವೆನು.

011

ಸಂಸಾರವೆಂಬ ಸರ್ಪ ಮುಟ್ಟಲು

ಪಂಚೇಂದ್ರಿಯವಿಷಯವೆಂಬ

ವಿಷದಿಂದಾನು ಮುಂದುಗೆಟ್ಟೆನಯ್ಯ,

ಆನು ಹೊರಳಿ ಬೀಳುತ್ತಿದ್ದೆನಯ್ಯ;

“ಓಂ ನಮಶ್ಶಿವಾಯ” ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ

ಕೂಡಲಸಂಗಮದೇವ.

012

ಎಂದೋ, ಸಂಸಾರದ ದಂದುಗ ಹಿಂಗುವುದೆನಗೆಂದೋ ?

ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ?

ಕೂಡಲಸಂಗಮದೇವಾ ಇನ್ನೆಂದೋ

ಪರಮಸಂತೋಷದಲಿಹುದೆನಗೆಂದೋ ?

013

ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು!

ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!

ಇಂತಪ್ಪ ಸಂಸಾರಶರಧಿಯ ದಾಂಟಿಸಿ

ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!

014

ಲೇಸ ಕಂಡು ಮನ ಬಯಸಿ ಬಯಸಿ

ಆಶೆ ಮಾಡಿದರಿಲ್ಲ ಕಂಡಯ್ಯ.

ತಾಳಮರಕ್ಕೆ ಕೈಯ್ಯ ನೀಡಿ, ಮೇಲ ನೋಡಿ

ಗೋಣು ನೊಂದುದಯ್ಯ.

ಕೂಡಲಸಂಗಮದೇವ ಕೇಳಯ್ಯ

ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.

015

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ.

ಚಂದ್ರ ಕುಂದೆ ಕುಂದುವುದಯ್ಯ,

ಚಂದ್ರಂಗೆ ರಾಹು ಅಡ್ಡ ಬಂದಲ್ಲಿ

ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ ?

ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ

ಚಂದ್ರಮನಡ್ಡ ಬಂದನೆ ಅಯ್ಯ ?

ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ

ಜಗದ್ ನಂಟ ನೀನೇ ಅಯ್ಯ ಕೂಡಲಸಂಗಮದೇವ.

016

ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ

ಧರೆ ಹತ್ತಿ ಉರಿದರೆ ನಿಲ ಬಾರದು.

ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ

ನಾರಿ ತನ್ನ ಮನೆಯಲ್ಲಿ ಕಳುವಡೆ

ತಾಯ ಮೊಲೆವಾಲು ನಂಜಾಗಿ ಕೊಲುವಡೆ

ಇನ್ನಾರಿಗೆ ದೂರುವೆ

ತಂದೆ ಕೂಡಲಸಂಗಮದೇವ

ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.

ಬಿಡಿಸುವರಾರುಂಟು ?

017

ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ,

ವಿಚಾರಿಸಿದರೇನು ಹುರುಳಿಲ್ಲವಯ್ಯ.

ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ

ನೀವಿರಿಸಿದಿರಯ್ಯ ಕೂಡಲಸಂಗಮದೇವ.

018

ಮುಂಗಯ್ಯ ಕಂಕಣಕೆ ಕನ್ನಡಿಯ ತೋರುವಂತೆ

ಎನ್ನ ಮನ ನಿಧಾನವನೊಲ್ಲದೆ ಜರಗ ಮೆಚ್ಚಿತ್ತು ನೋಡಾ

ನಾಯಿಗೆ ನಾರಿವಾಣವಕ್ಕುವುದೆ ? ಕೂಡಲಸಂಗಮದೇವ.

019

ಎನ್ನ ಮನವೆಂಬ ಮರ್ಕಟನು

ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,

ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ

ಅಳಲಿಸಿ ಬಳಲಿಸುತ್ತಿದೆ ನೋಡಾ!

ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ

ಅಪರಿಮಿತ ಸುಖವನೆಯ್ದದು ನೋಡಾ!

020

ಕೊಂಬೆಯ ಮೇಲಣ ಮರ್ಕಟನಂತೆ

ಲಂಘಿಸುವುದೆನ್ನ ಮನವು

ನಿಂದಲ್ಲಿ ನಿಲಲೀಯದೆನ್ನ ಮನವು

ಹೊಂದಿದಲ್ಲಿ ಹೊಂದಲೀಯದೆನ್ನ ಮನವು

ಕೂಡಲಸಂಗಮದೇವಾ

ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ.

021

ಅಂದಣವನೇರಿದ ಸೊಣಗನಂತೆ

ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು

ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು,

ಮೃಡ, ನಿಮ್ಮನನುದಿನ ನೆನೆಯಲೀಯದು.

ಎನ್ನೊಡೆಯನೇ, ಕೂಡಲಸಂಗಮದೇವ,

ನಿಮ್ಮ ಚರಣವ ನೆನೆವಂತೆ ಕರುಣಿಸು,

ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.

022

ತುಪ್ಪದ ಸವಿಗೆ ಅಲಗ ನೆಕ್ಕುವ

ಸೊಣಗನಂತೆನ್ನ ಬಾಳುವೆ

ಸಂಸಾರಸಂಗವ ಬಿಡದು ನೋಡೆನ್ನ ಮನವು.

ಈ ನಾಯಿತನವ ಮಾಣಿಸು

ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.

023

ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ

ಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ;

ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ.

ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ

ಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ.

024

ತನ್ನ ವಿಚಾರಿಸಲೊಲ್ಲದು

ಇದಿರ ವಿಚಾರಿಸ ಹೋಹುದೀ ಮನವು.

ಏನು ಮಾಡುವೆನೀ ಮನವನು:

ಎಂತು ಮಾಡುವೆನೀ ಮನವನು-

ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ?

025

ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು.

ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು

ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು

ಕಿಚ್ಚಿನೊಳಿಕ್ಕುವೆನು.

026

ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ;

ನುಡಿವಲ್ಲಿ ಅಧಿಕನೆಂದೆನಿಸಿತ್ತು.

ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ,

ಕಡುಗೂಪ ಮಡದಿ ತಾ ಮುಟ್ಟಲಮ್ಮಳು;

ಒಡಲನುರಿಗೊಂಬುದು: ಒಡವೆಯನರಸು ಕೊಂಬ;

ಕಡುಗೂಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ.

ಮುನ್ನ ಮಾಡಿದ ಪಾಪ ತನ್ನ ಬೆನ್ನ ಬಿಡದನ್ನಕ

ಇನ್ನು ಬಯಸಿದರೊಳವೆ ಕೂಡಲಸಂಗಮದೇವ ?

027

ವಚನದ ಹುಸಿ-ನುಸುಳೆಂತು ಮಾಬುದೆನ್ನ ?

ಮನದ ಮರ್ಕಟತನವೆಂತು ಮಾಬುದೆನ್ನ ?

ಹೃದಯದ ಕಲ್ಮಷವೆಂತು ಮಾಬುದೆನ್ನ ?

ಕಾಯವಿಕಾರಕ್ಕೆ ತರಿಸಲುವೋದೆನು!

ಎನಗಿದು ವಿಧಿಯೇ, ಕೂಡಲಸಂಗಮದೇವ ?

028

ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ?

ಅಕಟಕಟ, ಮದನಂಗೆ ಮಾರುಗೊಡುವರೆ ?

ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ?

ಕೂಡಲಸಂಗಮದೇವ ?

029

ವಿಕಳನಾದೆನು ಪಂಚೇಂದ್ರಿಯಧಾತುವಿಂದ!

ಮತಿಗೆಟ್ಟನು ಮನದ ವಿಕಾರದಿಂದ!

ಧೃತಿಗೆಟ್ಟೆನು ಕಾಯವಿಕಾರದಿಂದ!

ಶರಣುವೊಕ್ಕೆನು ಕೂಡಲಸಂಗಮದೇವಯ್ಯ

ಎನ್ನುವನು ಕಾಯಯ್ಯ.

030

ಕಾಯವಿಕಾರ ಕಾಡಿಹುದಯ್ಯ!

ಮನೋವಿಕಾರ ಕೂಡಿಹುದಯ್ಯ!

ಇಂದ್ರಿಯವಿಕಾರ ಸುಳಿದಿಹುದಯ್ಯ!

ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!

ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!

ಅನುಪಮಸುಖ ಸಾರಾಯ ಶರಣರಲ್ಲಿ,

ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

031

ಆನು ಒಬ್ಬನು; ಸುಡುವರೈವರು.

ಮೇಲೆ ಕಿಚ್ಚು ಘನ, ನಿಲಲು ಬಾರದು.

ಕಾಡುಬಸವನ ಹುಲಿ ಕೊಂಡೊಯ್ದರೆ

ಆರೈಯಲಾಗದೆ ಕೂಡಲಸಂಗಮದೇವ ?

032

ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ,

ತಿಳಿಯಲೀಯದು; ಎಚ್ಚರಲೀಯದು.

ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ.

ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.

033

ವಿಷಯವೆಂಬ ಹಸುರನೆನ್ನ ಮುಂದೆ ತಂದು

ಪಸರಿಸಿದೆಯಯ್ಯ;

ಪಶುವೇನ ಬಲ್ಲುದು ಹಸುರೆಂದೆಳಸುವುದು

ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ

ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯ

ಕೂಡಲಸಂಗಮದೇವ.

034

ಅಯ್ಯ, ಎಳಗರು ತಾಯನರಸಿ ಬಳಲುವಂತೆ

ಅಯ್ಯ, ನಿಮ್ಮನರಸಿ ಬಳಲುತ್ತಿದ್ದೇನೆ,

ಅಯ್ಯ, ನೀವೆನ್ನ ಮನಕ್ಕೆ ಪ್ರಸನ್ನವ ಮಾಡಿ

ಕಾರುಣ್ಯವ ಮಾಡಿರಯ್ಯ!

ನೀವೆನ್ನ ಮನಕ್ಕೆ ನೆಲೆವನೆಯಾಗಿ ಕಾರುಣ್ಯವ ಮಾಡಿರಯ್ಯ!

ನೀವಿನಿತು ಲೇಸನೀಯಯ್ಯ, ಅಂಬೇ, ಅಂಬೇ,

ಕೂಡಲಸಂಗಮದೇವ!

035

ಕೆಸರಲ್ಲಿ ಬಿದ್ದ ಪಶುವಿನಂತೆ

ಅನು ದೆಸೆದೆಸೆಗೆ ಬಾಯ ಬಿಡುತಿದ್ದೇನಯ್ಯ

ಅಯ್ಯಾ, ಆರೈವರಿಲ್ಲ

“ಅಕಟಕಟಾ! ಪಶು” ವೆಂದೆನ್ನ

ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ.

036

ಬಡಪಶು ಪಂಕದಲ್ಲಿ ಬಿದ್ದರೆ

ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ ?

ಶಿವ ಶಿವಾ! ಹೋದಹೆ, ಹೋದಹೆನಯ್ಯ!

ನಿಮ್ಮ ಮನದೆತ್ತಲೆನ್ನ ತೆಗೆಯಯ್ಯ

ಪಶುವಾನು, ಪಶುಪತಿ ನೀನು.

ತುಡುಗುಣಿಯೆಂದೆನ್ನ ಹಿಡಿದು ಬಡಿಯದ ಮುನ್ನ.

ಒಡೆಯ, ನಿಮ್ಮ ಬಯ್ಯದಂತೆ ಮಾಡು

ಕೂಡಲಸಂಗಮದೇವ.

037

ಬಲೆಗೆ ಸಿಕ್ಕಿದ ಮೃಗದಂತೆ ನಾನಯ್ಯ.

ಮರಿದಪ್ಪಿದ ಹುಲ್ಲೆಯಂತೆ

ದೆಸೆದೆಸೆಗೆ ಬಾಯ ಬಿಡುತಿರುವೆನಯ್ಯ,

ನಾನಾರ ಸಾರುವೆನಯ್ಯ.

ತಾಯಾಗಿ ತಂದೆಯಾಗಿ ನೀನೇ, ಸಕಲ ಬಂಧುಬಳಗವು ನೀನೆ

ಕೂಡಲಸಂಗಮದೇವ.

038

ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತಿದ್ದೇನಯ್ಯ!

ನೀವಲ್ಲದೆ ಮತ್ತಾರೂ ಎನ್ನನರಿವರಿಲ್ಲ ನೋಡಯ್ಯ!

ಕೂಡಲಸಂಗಮದೇವ, ನೀನಲ್ಲದೊಳಕೊಂಬವರಿಲ್ಲವಯ್ಯ.

039

ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ

ಎನ್ನ ವಶವೇ ಅಯ್ಯ ?

ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ.

ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.

040

ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ

ಸಲಹುತ್ತ, “ಶಿವಶಿವಾ” ಎಂದೋದಿಸಯ್ಯ.

ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.

041

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು

ಕೂಡಲಸಂಗಮದೇವ.

042

ಎನ್ನ ವಾಮ-ಕ್ಷೇಮ ನಿಮ್ಮದಯ್ಯ

ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ

ಎನ್ನ ಮಾನಾಪಮಾನವು ನಿಮ್ಮದಯ್ಯ

ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.

043

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.

ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ

ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.

044

ನರ ಕೂರಂಬಿನಲೆಚ್ಚ; ಅವಂಗೊಲಿದೆಯಯ್ಯ

ಅರಳಂಬಿನಲೆಚ್ಚ ಕಾಮನನುರಹಿದೆಯಯ್ಯ.

ಇರುಳು ಹಗಲೆನ್ನದೆ ಪ್ರಾಣಘಾತವ ಮಾಡಿದ ಬೇಡನ

ಕೈಲಾಸಕೊಯ್ದೆಯಯ್ಯ.

ಎನ್ನನೇತಕೆ ಒಲ್ಲೆ ಕೂಡಲಸಂಗಮದೇವ ?

045

ನೀನೊಲಿದರೆ ಕೊರಡು ಕೊನರುವುದಯ್ಯ.

ನೀನೊಲಿದರೆ ಬರಡು ಹಯನಹುದಯ್ಯ.

ನೀನೊಲಿದರೆ ವಿಷವಮೃತವಹುದಯ್ಯ.

ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು

ಕೂಡಲಸಂಗಮದೇವ.

046

ಆಶೆಯೆಂಬ ಪಾಶದಲ್ಲಿ ಭವಬಂಧನವಾಗಿದ್ದೆನಯ್ಯ.

ಸಕೃತೂ ನಿಮ್ಮ ನೆನೆಯಲೆನಗೆ ತೆರೆಹಿಲ್ಲವಯ್ಯ.

ಕರುಣಾಕರ, ಅಭಯಕರ, ವರದಾನಿ ಕರುಣಿಸಯ್ಯ.

ಸಂಸಾರಬಂಧವನು ಮಾಣಿಸಿ ಎನಗೆ ಕೃಪೆ ಮಾಡಿ

ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯ

ಭಕ್ತಜನಮನೋವಲ್ಲಭ ಕೂಡಲಸಂಗಮದೇವ.

047

ಅರಿದಹೆನೆಂದರೆ ಅರುಹಿಂಗಸಾಧ್ಯ!

ನೆನೆದಹೆನೆಂದರೆ ನೆನೆಹಿಂಗಸಾಧ್ಯ!

ಭಾವಿಸುವೆನೆಂದರೆ ಭಾವಕ್ಕಸಾಧ್ಯ!

ವಾಙ್‌ಮಾನಸಕ್ಕಗೋಚರವನರಿವ ಪರಿಯೆಂತಯ್ಯ

ಗುರು ತೋರದನ್ನಕ ?

ಗುರು-ಶಿಷ್ಯರ ಸಂವಾದದಲ್ಲಿ

ಸ್ವಯಂ ಜೋತಿರ್ಲಿಂಗ ಸಾವಯವಪ್ಪುದೆಂಬ ಶ್ರುತಿ ಹುಸಿಯೆ ?

048

ಜ್ಞಾನಾಮೃತವೆಂಬ ಜಲಧಿಯ ಮೇಲೆ

ಸಂಸಾರವೆಂಬ ಹಾವಸೆ ಮುಸುಕಿಹುದು!

ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು!

ಮರಳಿ ಮರಳಿ ಮುಸುಕುವುದು ಮಾಣದಯ್ಯ!

ಆಗಳೂ ಎನ್ನುವನು ನೆನೆವುತ್ತಿರಬೇಕೆಂದು

ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು.

ದಿವಾರಾತ್ರಿ ಮಾಡ ಹೇಳಿದ ಲಿಂಗಪೂಜೆಯ, ತನ್ನನರಿಯಬೇಕೆಂದು.

ಕೆರೆಯ ನೀರನುಂಡು ತೊರೆಯ ನೀರ ಹೊಗಳುವ

ಅರೆಮರುಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ.

049

ಮಡಕೆಯ ಮಾಡುವಡೆ ಮಣ್ಣೇ ಮೊದಲು,

ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,

ಶಿವಪಥವನರಿವಡೆ ಗುರುಪಾದವೇ ಮೊದಲು

ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು.

050

ಕರಿಯಂಜುವುದು ಅಂಕುಶಕ್ಕಯ್ಯ!

ಗಿರಿಯಂಜುವುದು ಕುಲಿಶಕ್ಕಯ್ಯ!

ತಮಂಧವಂಜುವುದು ಜ್ಯೋತಿಗಯ್ಯ!

ಕಾನನವಂಜುವುದು ಬೇಗೆಗಯ್ಯ!

ಪಂಚಮಹಾಪಾತಕವಂಜುವುದು

ನಮ್ಮ ಕೂಡಲಸಂಗನ ನಾಮಕ್ಕಯ್ಯ!

 

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *