201 - ಊರ ಸೀರೆಗೆ ಅಸಗ ಬಡಿವಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು,
ಎಂದು ಮರುಳಾದೆ.
ನಿಮ್ಮನರಿಯದ ಕಾರಣ,
ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.
202 - ಕಾಂಚನವೆಂಬ ನಾಯ ನೆಚ್ಚಿ
ನಿಮ್ಮ ನಾನು ಮರೆದೆನಯ್ಯ.
ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ!
ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ?
ಕೂಡಲಸಂಗಮದೇವ.
203 - ಹಗೆಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ ?
ಕೋಳದ ಮೇಲೆ ಸಂಕಲೆಯನಿಕ್ಕುವರೆ ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ ?
ಕೂಡಲಸಂಗಯ್ಯ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೆ ?
204 - ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ,
ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಲು ಬಾರದು.
ಅರ್ಥಪ್ರಾಣಾಭಿಮಾನವಾರಿಗೆಯು ಸಮನಿಸದು,
ಲಿಂಗಮುಖದಲುದಯವಾದ ಶರಣಂಗಲ್ಲದೆ,
ಅಯ್ಯ, ಕೂಡಲಸಂಗನ ಶರಣರ
ಭಕ್ತಿಭಂಡಾರವು ಎನಗೆಂತು ಸಾಧ್ಯವಪ್ಪುದು,
ಹೇಳೆನ್ನ ತಂದೆ.
205 - ಬಾಣಮಯೂರರಂತೆ ಬಣ್ಣಿಸಲರಿಯೆ
ಸಿರಿಯಾಳನಂತೆ ಉಣಲಿಕ್ಕಲರಿಯೆ
ದಾಸಿಮಯ್ಯನಂತೆ ಉಡಕೊಡಲರಿಯೆ
ಉಂಡುಟ್ಟು ಕೊಟ್ಟರೆ ಮುಯ್ಯಿಗೆ ಮುಯ್ಯೆನಿಸಿತ್ತು,
ಎನಗೆ ಕೊಟ್ಟರೆ ಧರ್ಮ ಕೂಡಲಸಂಗಮದೇವ.
206 - ಎನ್ನ ತಪ್ಪನಂತಕೋಟಿ
ನಿಮ್ಮ ಸೈರಣೆಗೆ ಲೆಕ್ಕವಿಲ್ಲಯ್ಯ.
ಇನ್ನು ತಪ್ಪಿದೆನಾದರೆ
ನಿಮ್ಮ ಪಾದವೇ ದಿವ್ಯ ಕೂಡಲಸಂಗಮದೇವಯ್ಯ,
ನಿಮ್ಮ ಪ್ರಮಥರ ಮುಂದೆ ಕಿನ್ನರಿ ಬೊಮ್ಮಣ್ಣನೇ ಸಾಕ್ಷಿ!
207 - ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯ.
ಬಡವನೆಂದೆನ್ನ ಕಾಡದಿರಯ್ಯ
ಎನಗೊಡೆಯರುಂಟು ನಮ್ಮ ಕೂಡಲಸಂಗನ ಶರಣರು.
208 - ಮನೆ ನೋಡಾ ಬಡವರು,
ಮನ ನೋಡಾ ಧೀರರು
ಸೋಂಕಿನಲ್ಲಿ ಶುಚಿ;
ಸರ್ವಾಂಗಕಲಿ.
ಪರಸಕ್ಕನುವಿಲ್ಲ; ಬಂದ ತತ್ಕಾಲಕ್ಕುಂಟು.
ಕೂಡಲಸಂಗನ ಶರಣರು ಸ್ವತಂತ್ರಧೀರರು.
209 - ಆ ಕರಿಯಾಕೃತಿಯ ಸೂಕರನ ಹೋಲಿಸಿದರೆ
ಸೂಕರ ಆ ಕರಿಯಾಗಬಲ್ಲುದೆ ?
ಆ ವ್ಯಾಳೇಶನಾಕೃತಿಯ ಭೂನಾಗನ ಹೋಲಿಸಿದರೆ
ಭೂನಾಗನಾ ವ್ಯಾಳೇಶನಾಗಬಲ್ಲುದೇ ?
ನಾನು ಭಕ್ತನಾದರೇನಯ್ಯ
ನಮ್ಮ ಕೂಡಲಸಂಗಮದೇವರ ಸದ್ಭಕ್ತರ ಹೋಲಲರಿವೆನೆ ?
210 - ಮೋಟನ ಮೌಳಿ, ಮೂಕೊರತಿಯ ಶೃಂಗಾರ,
ಬೇಟ ಕುರುಡಂಗೆ ನಗೆಗೆಡೆಯಾಯಿತ್ತು!
ನಮ್ಮ ಕೂಡಲಸಂಗನ ಶರಣರ ಮುಂದೆ
ಆನು ಭಕ್ತನೆಂಬ ನಾಚಿಕೆ ಸಾಲದೆ ?
211 - ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ!
ನಾನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ ?
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯ ?!
212 - ಮರದ ನೆಳಲಲ್ಲಿದ್ದು ತನ್ನ ನೆಳಲನರಸುವರೆ ?
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯ!
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯ!
ನಾನು ಭಕ್ತನೆಂಬ ನುಡಿ ಸುಡದೆ ಕೂಡಲಸಂಗಮದೇವ.
213 - ಎನಗಿಂತ ಕಿರಿಯರಿಲ್ಲ!
ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ ಎನಗಿದೇ ದಿಬ್ಯ.
214 - ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ!
ಕಪ್ಪಡಿವೇಷದಿಂದಾನು ಬಂದಾಡುವೆ.
ಕಪ್ಪಡಿವೇಷದಿಂದ, ಈಶ,
ನಿಮ್ಮ ದಾಸರ ದಾಸಿಯ ದಾಸ ನಾನಯ್ಯ.
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯ.
ಕೂಡಲಸಂಗಮದೇವ, ನಿಮ್ಮ ಲಾಂಛನವ ಧರಿಸಿಪ್ಪ
ಉದರಪೋಷಕ ನಾನಯ್ಯ.
215 - ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ ?
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್ಗುಣವ ನಾನರಿಯೆನೆ ?
ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ,
ಎನಗಿದು ವಿಧಿಯೇ ಕೂಡಲಸಂಗಮದೇವ ?
216 - ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸಿದಿರಯ್ಯ!
ಕಕ್ಕಯನೊಕ್ಕುದನಿಕ್ಕ ನೋಡಯ್ಯ,
ದಾಸಯ್ಯ ಶಿವದಾನವನೆರೆಯ ನೋಡಯ್ಯ.
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತಮಹಿಮ ಕೂಡಲಸಂಗಮದೇವಾ
ಶಿವಧೋ! ಶಿವಧೋ!!
217 - ಸೆಟ್ಟಿ ಎಂಬೆನೆ ಸಿರಿಯಾಳನ ?
ಮಡಿವಾಳನೆಂಬೆನೆ ಮಾಚಯ್ಯನ ?
ಡೋಹರನೆಂಬೆನೆ ಕಕ್ಕಯ್ಯನ ?
ಮಾದಾರನೆಂಬೆನೆ ಚೆನ್ನಯ್ಯನ ?
ಆನು ಹಾರುವನೆಂದರೆ,
ಕೂಡಲಸಂಗಯ್ಯ ನಗುವನಯ್ಯ.
218 - ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದರೆಯೂ ‘ಅಯ್ಯ’ ‘ಅಯ್ಯ’ ಎನಲಾರೆನಯ್ಯ.
ಚೆನ್ನಯ್ಯನೆಮ್ಮಯ್ಯನು,
ಚೆನ್ನಯ್ಯನ ಮಗ ನಾನು;
ಕೂಡಲಸಂಗನ ಮಹಾಮನೆಯಲ್ಲಿ
ಧರ್ಮಸಂತಾನ ಭಂಡಾರಿ ಬಸವನು!
219 - ಭಕ್ತಿ ಇಲ್ಲದ ಬಡವ ನಾನಯ್ಯ.
ಕಕ್ಕಯ್ಯನ ಮನೆಯಲು ಬೇಡಿದೆ.
ದಾಸಯ್ಯನ ಮನೆಯಲು ಬೇಡಿದೆ.
ಚೆನ್ನಯ್ಯನ ಮನೆಯಲು ಬೇಡಿದೆ,
ಎಲ್ಲ ಪುರಾತರು ನೆರೆದು,
ಭಕ್ತಿ-ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು.
ಕೂಡಲಸಂಗಮದೇವ.
220 - ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರ ಲೇಸಯ್ಯ.
ತಾರೌ ಅಗ್ಗವಣಿಯ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು;
ಕೂಡಲಸಂಗನ ಮಹಾಮನೆಯಲ್ಲಿ ಒಕ್ಕುದನುಣ್ಣೌ
ತೊತ್ತೇ ಎಂಬರು.
221 - ಮೇಲಾಗಲೊಲ್ಲೆ ಕೀಳಾಗಲೊಲ್ಲದೆ!
ಕೀಳಿಂಗಲ್ಲದೆ ಹಯನು ಕರೆವುದೆ ?
ಮೇಲಾಗಿ ನರಕದಲೋಲಾಡಲಾರೆನು!
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
ಮಹಾದಾನಿ ಕೂಡಲಸಂಗಮದೇವ.
222 - ಕಾಗೆ ವಿಷ್ಟಿಸುವ ಹೊನ್ನಕಳಶವಹುದರಿಂದ,
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯ.
ಅಯ್ಯ, ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯ.
“ಕರ್ಮಾವಲಂಬಿನಃ ಕೇಚಿತ್
ಕೇಚಿತ್ ಜ್ಞಾನಾವಲಂಬಿನಃ
ವಯಂತು ಶಿವಭಕ್ತಾನಾಂ
ಪಾದರಕ್ಷಾವಲಂಬಿನಃ”
ಕೂಡಲಸಂಗಮದೇವ ನಿಮ್ಮ ಸೆರಗೊಡ್ಡಿ ಬೇಡುವೆನು
ಇದೊಂದೇ ವರವ ಕರುಣಿಸಯ್ಯ.
223 - ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ.
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ.
ಎನಗೆ ನಮ್ಮ ಕೂಡಲಸಂಗಮದೇವರ
ನೆನೆವುದೇ ಚಿಂತೆ!
224 - ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು!
ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು!
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವ.
225 - ಸೂರ್ಯನುದಯ ತಾವರೆಗೆ ಜೀವಾಳ!
ಚಂದ್ರಮನುದಯ ನೈದಿಲೆಗೆ ಜೀವಾಳ!
ಕೂಪರ ಠಾವಿನಲ್ಲಿ ಕೂಟ-ಜೀವಾಳವಯ್ಯ.
ಒಲಿದ ಠಾವಿನಲ್ಲಿ ನೋಟ-ಜೀವಾಳವಯ್ಯ.
ಕೂಡಲಸಂಗನ ಶರಣರ ಬರವೆನಗೆ
ಪ್ರಾಣ-ಜೀವಾಳವಯ್ಯ.
226 - ಕಂಡರೆ ಮನೋಹರವಯ್ಯ,
ಕಾಣದಿದ್ದರೆ ಅವಸ್ಥೆ ನೋಡಯ್ಯ.
ಹಗಲು ಇರುಳಹುದು; ಇರುಳು ಹಗಲಹುದು.
ಇರುಳು ಹಗಲೊಂದು
ಜುಗ ಮೇಲೆ ಕೆಡೆದಂತೆ ಇಹುದು.
ಕೂಡಲಸಂಗನ ಶರಣರನಗಲುವ ಧಾವತಿಯಿಂದ
ಮರಣವೇ ಲೇಸು ಕಂಡಯ್ಯ.
227 -
ಬಂದಹರಯ್ಯ ಪುರಾತರೆನ್ನ ಮನೆಗೆ!
ಬಂದಹರಯ್ಯ ಶರಣರೆನ್ನ ಮನೆಗೆ!
ಕಂಡ ಕನಸು ದಿಟವಾಗಿ,
ಜಂಗಮ ಮನೆಗೆ ಬಂದರೆ
ಶಿವಾರ್ಚನೆಯ ಮಾಡಿಸುವೆ
ಕೂಡಲಸಂಗಮದೇವಾ ನಿಮ್ಮ ಮುಂದೆ.
228 - ಗಿಳಿಯ ಪಂಜರವಿಕ್ಕಿ, ಸೊಡರಿಗೆಣ್ಣೆಯನೆರೆದು,
ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಗವ್ವ!
ತರಗೆಲೆ ಗಿರಕಂದರೆ, ಹೊರಗನಾಲಿಸುವೆ.
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವ.
ಕೂಡಲಸಂಗನ ಶರಣರು ಬಂದು
ಬಾಗಿಲ ಮುಂದೆ ನಿಂದು
‘ಶಿವಾ’ ಎಂದರೆ ಸಂತೋಷಪಟ್ಟೆನೆಲೆಗವ್ವ.
229 - ಅಡವಿಯಲೊಬ್ಬ ಕಡುನೀರಡಸಿ
ಎಡೆಯಲ್ಲಿ ನೀರ ಕಂಡಂತಾಯಿತಯ್ಯ!
ಕುರುಡ ಕಣ್ಣ ಪಡೆದಂತಾಯಿತಯ್ಯ!
ಬಡವ ನಿಧಾನವ ಪಡೆದಂತಾಯಿತಯ್ಯ!
ನಮ್ಮ ಕೂಡಲಸಂಗನ ಶರಣರ
ಬರವೆನ್ನ ಪ್ರಾಣ ಕಂಡಯ್ಯ.
230 - ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು,
ಗುಡಿ, ತೋರಣವ ಕಟ್ಟಿ;
ಪಡುಸಮ್ಮಾರ್ಜನೆಯ ಮಾಡಿ
ರಂಗವಾಲಿಯನಿಕ್ಕಿ
ಉಘೇ, ಚಾಂಗು, ಭಲಾ, ಎಂಬೆ!
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.
231 - ಸಾಸವೆಯ ಮೇಲೆ ಸಾಗರವರಿದಂತಾಯಿತಯ್ಯ!
ಆನಂದದಿಂದ ನಲಿನಲಿದಾಡುವೆನು.
ಆನಂದದಿಂದ ಕುಣಿಕುಣಿದಾಡುವೆನು.
ಕೂಡಲಸಂಗನ ಶರಣರು ಬಂದರೆ
ಉಬ್ಬಿಕೊಬ್ಬಿ ಹರುಷದಲೋಲಾಡುವೆನು.
232 - ಎಳ್ಳಿಲ್ಲದ ಗಾಣವನಾಡಿದ
ಎತ್ತಿನಂತಾಯಿತ್ತೆನ್ನ ಭಕ್ತಿ!
ಉಪ್ಪ ಅಪ್ಪುವಿನಲ್ಲಿ ಅದ್ದಿ
ಮೆಲಿದಂತಾಯಿತ್ತೆನ್ನ ಭಕ್ತಿ!
ಕೂಡಲಸಂಗಮದೇವ,
ಅನು ಮಾಡಿದೆನೆಂಬೀ ಕಿಚ್ಚು ಸಾಲದೆ ?
233 - ಧ್ಯಾನಮೌನವೆಂಬ ಶಸ್ತ್ರವ ಹಿಡಿಯಲಾರದೆ
ಅಹಂಕಾರಧಾರೆಯ ಮೊನೆಯಲಗೆಂಬ ಶಸ್ತ್ರವ ಹಿಡಿದು ಕೆಟ್ಟೆನಯ್ಯ!
ಅಂಜುವೆನಂಜುವೆನಯ್ಯ!
ಜಂಗಮ-ಲಿಂಗವೆಂಬ ಭಾಷೆ ಪಲ್ಲಟವಾಯಿತ್ತು!
ಇನ್ನು-ಜಂಗಮಲಿಂಗವೆಂಬ ಶಿಕ್ಷಾಶಸ್ತ್ರದಲ್ಲಿ,
ಎನ್ನ ಹೊಯ್ದು ಬಯ್ದು ರಕ್ಷಿಸುವುದು ಕೂಡಲಸಂಗಮದೇವ!
234 - ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದಿನಿತಿಲ್ಲ;
ಎನ್ನ ಭಕ್ತನೆಂಬರು; ಎನ್ನ ಸಮಯಾಚಾರಿ ಎಂದೆಂಬರು.
ನಾನೇನು ಪಾಪವ ಮಾಡಿದೆನೋ!
ಬೆಳೆಯದ ಮುನ್ನವೇ ಮೊಳೆಯ ಕೊಯ್ವರೆ ಹೇಳಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಎಲ್ಲ ಒಡೆಯರು ಏರಿಸಿ ನುಡಿವರು!
ಎನಗಿದು ವಿಧಿಯೇ ಕೂಡಲಸಂಗಮದೇವ ?
235 - ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ
ಹೊಗಳಿ ಹೊಗಳಿ!
ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತಲ್ಲ!
ಅಯ್ಯೋ ನಿಮ್ಮ ಮನ್ನಣೆಯೆ
ಮಸೆದಲಗಾಗಿ ತಾಗಿತ್ತಲ್ಲ!
ನೊಂದೆನು, ಸೈರಿಸಲಾರೆನು-ಕೂಡಲಸಂಗಮದೇವ,
ನೀನೆನಗೊಳ್ಳಿದನಾದರೆ,
ಎನ್ನ ಹೊಗಳತೆಗಡ್ಡ ಬಾರಾ ಧರ್ಮೀ.
236 - ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ!
ಅಹಂಕಾರ ಪೂರಾಯ ಗಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ!
ಜಂಗಮವಾಗಿ ಬಂದು ಜರಿದು
ಶೂಲವನಿಳುಹಿ, ಪ್ರಸಾದದ ಮದ್ದನಿಕ್ಕಿ
ಸಲಹು ಕೂಡಲಸಂಗಮದೇವ.
237 - ಹೊಯ್ದವರೆನ್ನ ಹೊರೆದವರೆಂಬೆ,
ಬಯ್ದವರೆನ್ನ ಬಂಧುಗಳೆಂಬೆ.
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ!
ಆಳಿಗೊಂಡವರೆನ್ನ ಆಳ್ದರೆಂಬೆ.
ಜರಿದವರೆನ್ನ ಜನ್ಮಬಂಧುಗಳೆಂಬೆ.
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು
ಕೂಡಲಸಂಗಮದೇವ.
238 - ಎಡದ ಕೈಯಲು ಹಾಲ ಬಟ್ಟಲು
ಬಲದ ಕೈಯಲು ಓಜುಗಟ್ಟಿಗೆ!
ಆವಾಗ ಬಂದಾನೆಮ್ಮಯ್ಯ
ಬಡಿದು ಹಾಲು ಕುಡಿಸುವ ತಂದೆ! ?
“ದಂಡಕ್ಷೀರದ್ವಯೀಹಸ್ತಂ
ಜಂಗಮಂ ಭಕ್ತಿಮಂದಿರಂ |
ತದ್‌ಭಕ್ತ್ಯಾ ಲಿಂಗಸಂತುಷ್ಟಿಃ
ಅಪಹಾಸಾಚ್ಚ ದಂಡನಂ ||”
ಎಂದುದಾಗಿ ಕೂಡಲಸಂಗಮದೇವಯ್ಯ
ತಾನೇ ಭಕ್ತಿಪಥವ ತೋರುವ ತಂದೆ.
239 - ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ;
ತ್ರೇತಾಯುಗದಲ್ಲಿ ವಾರಣಾಸಿ ಎಂಬ ಮೂಲಸ್ಥಾನ;
ದ್ವಾಪರಯುಗದಲ್ಲಿ ವಿರೂಪಾಕ್ಷವೆಂಬ ಮೂಲಸ್ಥಾನ;
ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ;
ನಾ-ನಾ ಸ್ಥಾನವ ಮೆಟ್ಟಿದೆ
ಜಂಗಮವೇ ಲಿಂಗವೆಂದು ನಂಬಿದೆ
ಕೂಡಲಸಂಗಮದೇವ.
240 - ಭಕ್ತದೇಹೀಕದೇವನಪ್ಪ ದೇವನು
ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ,
ಆಳ್ದನು ಬರಲಾಳು ಮಂಚದ ಮೇಲೆ
ಇಪ್ಪುದು ಗುಣವೇ ಹೇಳಾ
ಕೂಡಲಸಂಗಮದೇವ ?
ಜಂಗಮರೂಪವಾಗಿ ಸಂಗಯ್ಯ ಬಂದಾನೆಂದು
ಎಂದೆಂದೂ ನಾನು ಮಂಚವನೇರದ ಭಾಷೆ!
241 - ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವ ?
ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ ?
ಜಂಗಮವಿಲ್ಲದೆ ಮಾಡಬಹುದೆ,
ರೂಢೀಶನ ಭೇದಿಸಬಹುದೆ ?
ಒಡಲಿಲ್ಲದ ನಿರಾಳಕರ್ತೃ ಕೂಡಲಸಂಗಮದೇವ
ಜಂಗಮಮುಖಲಿಂಗವಾದನಾಗಿ
ಮತ್ತೊಂದನರಿಯೆನಯ್ಯ.
242 - ಕೆಂಡದಲ್ಲಿಟ್ಟರೆ ಕೈ ಬೆಂದುದೆಂಬರು;
ಕೊಂಡಿಟ್ಟವನ ಕೈ ಮುನ್ನವೇ ಬೆಂದುದು!
ನೊಂದೆ ನಾನು ನೊಂದೆನಯ್ಯ.
ಬೆಂದೆ ನಾನು ಬೆಂದೆನಯ್ಯ.
ಕೂಡಲಸಂಗನ ಶರಣರ ಕಂಡು
ಕಾಣದಂತಿದ್ದರೆ ಅಂದೇ ಬೆಂದೆನಯ್ಯ.
243 - ಲಾಂಛನವ ಕಂಡು ನಂಬುವೆ,
ಅವರಂತರಂಗವ ನೀವೇ ಬಲ್ಲಿರಿ.
ತೊತ್ತಿಂಗೆ ತೊತ್ತುಗೆಲಸವಲ್ಲದೆ
ಅರಸರ ಸುದ್ದಿ ಎಮಗೇಕಯ್ಯ ?
ರತ್ನಮೌಕ್ತಿಕದಚ್ಚು ಕೂಡಲಸಂಗಮದೇವ, ನಿಮ್ಮ ಶರಣರು.
244 - ಎಡದ ಕೈಯಲ್ಲಿ ನಿಗಳವನಿಕ್ಕಿ,
ಬಲದ ಕೈಯ್ಯ ಕಡಿದುಕೊಂಡರೆ,
ನೋಯದಿಪ್ಪುದೇ, ಅಯ್ಯ ?
ಪ್ರಾಣ ಒಂದಾಗಿ ದೇಹ ಬೇರಿಲ್ಲ.
ಲಿಂಗವ ಪೂಜಿಸಿ ಜಂಗಮವನುದಾಸೀನ ಮಾಡಿದರೆ
ಬೆಂದೆನಯ್ಯ ನಾನು, ಕೂಡಲಸಂಗಮದೇವ.
245 - ತನುವ ನೋಯಿಸಿ, ಮನವ ಬಳಲಿಸಿ
ನಿಮ್ಮ ಪಾದವಿಡಿದವರೊಳರೆ ?
ಈ ನುಡಿ ಸುಡದಿಹುದೆ ?
ಕೂಡಲಸಂಗಮದೇವ,
ಶಿವಭಕ್ತರ ನೋವೇ ಅದು ಲಿಂಗದ ನೋವು!
246 - ಕುದುರೆ ಸತ್ತಿಗೆಯವರ ಕಂಡರೆ
ಹೊರಳಿಬಿದ್ದು ಕಾಲ ಹಿಡಿವರಯ್ಯ.
ಬಡಭಕ್ತರು ಬಂದರೆ, ಎಡೆಯಿಲ್ಲ ಅತ್ತ ಸನ್ನಿ ಎಂಬರು.
ಎನ್ನೊಡೆಯ ಕೂಡಲಸಂಗಯ್ಯನವರ
ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ ?
247 - ಅಡ್ಡದೊಡ್ಡ ನಾನಲ್ಲಯ್ಯ.
ದೊಡ್ಡ ಬಸಿರು ಎನಗಿಲ್ಲವಯ್ಯ.
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯ.
ಹಡೆದುಂಬ ಸೂಳೆಯಂತೆ
ಧನವುಳ್ಳವರನರಸಿಯರಸಿ ಬೋಧಿಸಲು,
ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯ!
ದೊಡ್ಡತನವೆನಗಿಲ್ಲವಯ್ಯ.
ಅಂಜುವೆನಂಜುವೆ ನಿಮ್ಮ ಪ್ರಥಮರಿಗೆ
ಅನಾಥ ನಾನಯ್ಯ, ಕೂಡಲಸಂಗಮದೇವ.
248 - ಹಾಲ ಕಂದಲು, ತುಪ್ಪದ ಗಡಿಗೆಯ
ಬೋಡ, ಮುಕ್ಕೆನಬೇಡ!
ಹಾಲು ಸಿಹಿ, ತುಪ್ಪ ಕಮ್ಮಗೆ!
ಲಿಂಗಕ್ಕೆ ಬೋನ,
ಕೂಡಲಸಂಗನ ಶರಣರ
ಅಂಗಹೀನರೆಂದರೆ ನಾಯಕನರಕ!
249 - ಮರಕ್ಕೆ ಬಾಯಿ ಬೇರೆಂದು
ತಳಕ್ಕೆ ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ!
ಲಿಂಗದ ಬಾಯಿ ಜಂಗಮವೆಂದು
ಪಡಿಪದಾರ್ಥವ ನೀಡಿದರೆ, ಮುಂದೆ ಸಕಲಾರ್ಥವನೀವನು!
ಆ ಜಂಗಮವ ಹರನೆಂದು ಕಂಡು
ನರನೆಂದು ಭಾವಿಸಿದರೆ, ನರಕ ತಪ್ಪದು ಕಾಣಾ!
ಕೂಡಲಸಂಗಮದೇವ.
250 - ನನಗೆ ನಾನೇ ಹಗೆ ನೋಡಯ್ಯ!
ನನಗೆ ನಾನೇ ಕೆಳೆ ನೋಡಯ್ಯ!
ನಿಮ್ಮ ಸದ್ಭಕ್ತರೊಡನೆ ವಿರೋಧವ ಮಾಡಿದರೆನ್ನ ಕೊಲುವುದಾಗಿ
ನಿಮ್ಮ ಪುರಾತನರಿಗಂಜಿ ಬೆಸಗೊಂಡರೆನ್ನ ಕಾಯ್ವುದಾಗಿ
ಅನ್ಯ ಹಗೆಯೆಲ್ಲಿ ? ಕೆಳೆಯೆಲ್ಲಿ ?
ಬಾಗಿದ ತಲೆಯ, ಮುಗಿದ ಕೈಯಾಗಿರಿಸು ಕೂಡಲಸಂಗಮದೇವ.
ಸೊಬಗು – Sobagu ಕರ್ನಾಟಕದ ಗತವೈಭವ ಸಾರುತ್ತಿರುವ ತಾಣ – ನಮ್ಮ ಕನ್ನಡ ನಾಡು