Thursday , 13 June 2024

ಬಸವಣ್ಣನವರ ವಚನಗಳು 151-200

151 - ಬರಬರ ಭಕ್ತಿ ಅರೆಯಾಯಿತ್ತು ಕಾಣಿರಣ್ಣ!

ಬರಬರ ಭಕ್ತಿ ಅರೆಯಾಯಿತ್ತು ಕಾಣಿರಣ್ಣ!
ಮೊದಲ ದಿನ ಹಣೆ ಮುಟ್ಟಿ,
ಮರುದಿನ ಕೈ ಮುಟ್ಟಿ,
ಮೂರೆಂಬ ದಿನಕೆ ತೂಕಡಿಕೆ ಕಾಣಿರಣ್ಣಾ.
ಹಿಡಿದುದ ಬಿಡದಿದ್ದರೆ ತಡಿಗೆ ಚಾಚುವ

ಅಲ್ಲದಿದ್ದರೆ ನಡುನೀರಲದ್ದುವ
ನಮ್ಮ ಕೂಡಲಸಂಗ್ದೇವ.

152 - ಬೆಟ್ಟದ ಬಿದಿರೇ ನೀನು ಅಟ್ಟಕ್ಕೆ ಏಣಿಯಾದೆ!

ಬೆಟ್ಟದ ಬಿದಿರೇ ನೀನು ಅಟ್ಟಕ್ಕೆ ಏಣಿಯಾದೆ!
ಕಾಲು ಮುರಿದವರಿಗೆ ಊರುಗೋಲಾದೆ!
ಬಿದಿರಿಂ ಭೋ! ಅಯ್ಯ, ಬಿದಿರಿಂ ಭೋ!
ಬಿದಿರ ಫಲವನುಂಬರೆ ಬಿದಿರಿಂ ಭೊ;
ಬಿದಿರಲಂದಣವಕ್ಕು
ಬಿದಿರೆ ಸತ್ತಿಗೆಯಕ್ಕು,
ಬಿದಿರಲೀ ಗುಡಿಯು ಗುಡಾರಂಗಳಕ್ಕು,
ಬಿದಿರಲೀ ಸಕಲಸಂಪದವೆಲ್ಲ!
ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ.

153 - ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ

ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ
ಬಂಧುಗಳು ಬಂದಾಗಳಿಲ್ಲೆನ್ನ;
ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ,
ಬಂದ ಪುರಾತರಿಗೆ ಇಲ್ಲೆಂಬ;
ಸಾವಾಗ ದೇಹವ ದೇಗುಲಕ್ಕೊಯ್ಯೆಂಬ
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ, ಕೂಡಲಸಂಗಮದೇವ ?

154 - ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,

ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,
ಸತ್ಪಾತ್ರಕ್ಕೆ ಸಲ್ಲದಯ್ಯ!
ನಾಯ ಹಾಲು ನಾಯಿಂಗಲ್ಲದೆ,
ಪಂಚಾಮೃತಕ್ಕೆ ಸಲ್ಲದಯ್ಯ!
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯ.

155 - ಹತ್ತು ಮತ್ತರ ಭೂಮಿ,

ಹತ್ತು ಮತ್ತರ ಭೂಮಿ,
ಬತ್ತುವ ಹಯನ, ನಂದಾದೀವಿಗೆಯ
ನಡೆಸಿಹೆನೆಂಬವರ ಮುಖವ ನೋಡಲಾಗದು!
ಅವರ ನುಡಿಯ ಕೇಳಲಾಗದು;
ಅಂಡಜ-ಸ್ವೇದಜ-ಉದ್ಬಿಜ-ಜರಾಯುಜವೆಂಬ
ಚತುರಶೀತಿ ಲಕ್ಷಪ್ರಾಣಿಗಳಿಗೆ ಭವಿತವ್ಯವ ಕೊಟ್ಟವರಾರೋ ?!
ಒಡೆಯರಿಗೆ ಉಂಡೆಯ ಮುರಿದಿಕ್ಕಿದಂತೆ
“ಎನ್ನಿಂದಲೇ ಆಯಿತು, ಎನ್ನಿಂದಲೇ ಹೋಯಿತು”
ಎಂಬುವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ಕೂಡಲಸಂಗಮದೇವ!

156 - ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ

ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ
ಮಾಡುವ ಭಕ್ತನ ಮನೆಯದು ಲಂದಣಗಿತ್ತಿಯ ಮನೆ,
ಸರ್ವಜೀವದಯಾಪಾರಿಯೆಂದು
ಭೂತದಯಕಿಕ್ಕುವನ ಮನೆ ಸಯಿದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದರೆ
ತಾಯ ಹೆಸರಾಯಿತ್ತಲ್ಲದೆ ತಂದೆಯ ಹೆಸರಿಲ್ಲ
ಕೂಡಲಸಂಗಮದೇವ.

157 - ಓಡಲಾರದ ಮೃಗವು

ಓಡಲಾರದ ಮೃಗವು
ಸೊಣಗಂಗೆ ಮಾಂಸವ ಕೊಡುವಂತೆ,
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ;
ಹಿರಿಯರು ನರಮಾಂಸವ ಭುಂಜಿಸುವರೆ ?!
ತನು ಉಕ್ಕಿ ಮನ ಉಕ್ಕಿ ಮಾಡಬೇಕು ಭಕ್ತಿಯ,
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವ.

158 - ಬಂದುದ ಕೈಕೊಳಬಲ್ಲಡೆ ನೇಮ.

ಬಂದುದ ಕೈಕೊಳಬಲ್ಲಡೆ ನೇಮ.
ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ.
ನಡೆದು ತಪ್ಪದಿದ್ದರೆ ಅದು ನೇಮ.
ನುಡಿದು ಹುಸಿಯದಿದ್ದರೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದರೆ
ಒಡೆಯರಿಗೊಡವೆಯನೊಪ್ಪಿಸುವುದೇ ನೇಮ.

159 - ಹಾಲ ನೇಮ, ಹಾಲ ಕೆನೆಯ ನೇಮ;

ಹಾಲ ನೇಮ, ಹಾಲ ಕೆನೆಯ ನೇಮ;
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ;
ಬೆಣ್ಣೆಯ ನೇಮ, ಬೆಲ್ಲದ ನೇಮ-
ಅಂಬಲಿಯ ನೇಮದವರನಾರನೂ ಕಾಣೆ,
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದರ ಚನ್ನಯ್ಯ

160 - ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ.
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

161 - ಮಾಡಿದೆನೆಂಬುದು ಮನದಲ್ಲಿ ಹೊಳೆದರೆ

ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ!
ಮಾಡಿದೆನೆನ್ನದಿರಾ ಜಂಗಮಕ್ಕೆ!
ಮಾಡಿದೆನೆಂಬುದು ಮನದಲಿಲ್ಲದಿದ್ದರೆ
ಬೇಡಿದ್ದನೀವ ಕೂಡಲಸಂಗಮದೇವ!!

162 - ಮಾಡುವಂತಿರಬೇಕು ಮಾಡದಂತಿರಬೇಕು!

ಮಾಡುವಂತಿರಬೇಕು ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!

163 - ಭಕ್ತನು ಶಾಂತನಾಗಿರಬೇಕು.

ಭಕ್ತನು ಶಾಂತನಾಗಿರಬೇಕು.
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು.
ಭೂತಹಿತವಹ ವಚನವ ನುಡಿಯಬೇಕು.
ಲಿಂಗ-ಜಂಗಮದಲ್ಲಿ ನಿಂದೆಯಿಲ್ಲದಿರಬೇಕು.
ಸಕಲ ಪ್ರಾಣಿಗಳ ತನ್ನಂತೆ ಭಾವಿಸಬೇಕು.
ತನು-ಮನ-ಧನವ ಗುರು-ಲಿಂಗ-ಜಂಗಮಕ್ಕೆ ಸವೆಸಬೇಕು.
ಅಪಾತ್ರದಾನವಂ ಗೆಯ್ಯದಿರಬೇಕು.
ಸಕಲೇಂದ್ರಿಯಂಗಳೂ ತನ್ನ ವಶಗತವಾಗಿರಬೇಕು.
ಇದೇ ಮೊದಲಲ್ಲಿ ಬೇಹ ಶೌಚ ನೋಡಾ!
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ
ಎನಗಿದೇ ಸಾಧನ ಕೂಡಲಸಂಗಮದೇವ!

164 - ಕಳಬೇಡ ಕೊಲಬೇಡ,

ಕಳಬೇಡ ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.

165 - ದೇವಲೋಕ ಮರ್ತ್ಯಲೋಕವೆಂಬುದು

ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.

166 - ಪುಣ್ಯಪಾಪಂಗಳೆಂಬವು

ಪುಣ್ಯಪಾಪಂಗಳೆಂಬವು
ತಮ್ಮಿಷ್ಟ ಕಂಡಿರೇ!
‘ಅಯ್ಯ’ ಎಂದರೆ ಸ್ವರ್ಗ,
‘ಎಲವೋ’ ಎಂದರೆ ನರಕ.
“ದೇವ, ಭಕ್ತ, ಜಯ, ಜೀಯ” ಎಂಬ
ನುಡಿಯೊಳಗೆ ಕೈಲಾಸವೈದುವುದು ಕೂಡಲಸಂಗಮದೇವ.

167 - ಏನಿ ಬಂದಿರಿ, ಹದುಳಿದ್ದಿರೆಂದರೆ

ಏನಿ ಬಂದಿರಿ, ಹದುಳಿದ್ದಿರೆಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ ?
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು
ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ವುದ ಮಾಬನೆ ಕೂಡಲಸಂಗಯ್ಯ ?

168 - ಭಕ್ತಿಯೆಂಬ ನಿಧಾನವ ಸಾಧಿಸುವಡೆ

ಭಕ್ತಿಯೆಂಬ ನಿಧಾನವ ಸಾಧಿಸುವಡೆ
ಶಿವಪ್ರೇಮವೆಂಬಂಜನವನೆಚ್ಚಿ ಕೊಂಬುದು ?
ಭಕ್ತನಾದವಂಗಿದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರನುಭಾವ ಗಜವೈದ್ಯ.

169 - ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ

ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ
ಮೃದುವಚನವೇ ಸಕಲ ಜಪಂಗಳಯ್ಯ!
ಮೃದುವಚನವೇ ಸಕಲ ತಪಂಗಳಯ್ಯ ?
ಸದುವಿನಯವೇ ಸದಾಶಿವನೊಲುಮೆಯಯ್ಯ!
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.

170 - ದಯವಿಲ್ಲದ ಧರ್ಮವದೇವುದಯ್ಯ,

ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ.

171 - ಇತ್ತ ಬಾರೈ ಇತ್ತ ಬಾರೈಯೆಂದು

ಇತ್ತ ಬಾರೈ ಇತ್ತ ಬಾರೈಯೆಂದು
ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು,
ಮತ್ತೆ ಕೆಲಸಕ್ಕೆ ಹೋಗಿ,
ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ;
ಭೃತ್ಯಾಚಾರವ ನುಡಿದು
ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ
ಕೂಡಲಸಂಗಮದೇವ ಪ್ರಮಥರ ಮುಂದೆ.

172 - ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?
ತನಗಾದ ಆಗೇನು ? ಅವರಿಗಾದ ಚೇಗೇನು ?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ.

173 - ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ

ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ
ಕೇಳಿ ಪರಿಣಾಮಿಸಬೇಕು!
ಅದೇನು ಕಾರಣವೆಂದರೆ–
ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ!
ಎನ್ನ ಮನದ ತದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ!

174 - ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹಯ್ಯ ಕೂಡಲಸಂಗಮದೇವ.

175 - ಅವರಿವರೆನ್ನದೆ ಚರಣಕ್ಕೆರಗಲು

ಅವರಿವರೆನ್ನದೆ ಚರಣಕ್ಕೆರಗಲು
ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು
ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ!
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು
ಬೆಳುಕನ ಮಾಡಿ
ಬೆಳುಗಾರದಂತೆ ಮಾಡು
ಕೂಡಲಸಂಗಮದೇವ.

176 - ಇರಿಸಿಕೊಂಡು ಭಕ್ತರಾದರೆಮ್ಮವರು

ಇರಿಸಿಕೊಂಡು ಭಕ್ತರಾದರೆಮ್ಮವರು
ತರಿಸಿಕೊಂಡು ಭಕ್ತರಾದರೆಮ್ಮವರು
ಜರಿಸಿಕೊಂಡು ಭಕ್ತರಾದರೆಮ್ಮವರು
ಕೊರಿಸಿಕೊಂಡು ಭಕ್ತರಾದರೆಮ್ಮವರು
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು.

177 - ಕುದುರನೇಸು ತೊಳೆದರೆಯು ಕೆಸರು ಮಾಬುದೇ ?

ಕುದುರನೇಸು ತೊಳೆದರೆಯು ಕೆಸರು ಮಾಬುದೇ ?
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು
ಕೃಪೆಯ ಮಾಡಯ್ಯ ತಂದೆ,
ಕಂಬಳಿಯಲ್ಲಿ ಕಣಿಕವ ನಾದಿದಂತೆ ಎನ್ನ ಮನ!
ಕೂಡಲಸಂಗಮದೇವ ನಿಮಗೆ ಶರಣೆಂದು ಶುದ್ಧ ಕಾಣಯ್ಯ.

178 - ಕಾಣದುದನೆಲ್ಲವ ಕಾಣಲಾರೆನಯ್ಯ.

ಕಾಣದುದನೆಲ್ಲವ ಕಾಣಲಾರೆನಯ್ಯ.
ಕೇಳದುದನೆಲ್ಲವ ಕೇಳಲಾರೆನಯ್ಯ.
ದ್ರೋಹವಿಲ್ಲ – ಎಮ್ಮ ಶಿವಲ್ಲಿ ಸೀಮೆಯಯ್ಯ.
ಒಲೆಯ ಮುಂದಿದ್ದು ಮಾಡದ ಕನಸ ಕಾಬವರನು
ಒಲ್ಲನಯ್ಯ ಕೂಡಲಸಂಗಮದೇವ.

179 - ಕಾಣಬಹುದೇ ಪರುಷದ ಗಿರಿಯಂಧಕಂಗೆ ?

ಕಾಣಬಹುದೇ ಪರುಷದ ಗಿರಿಯಂಧಕಂಗೆ ?
ಮೊಗೆಯಬಹುದೇ ರಸದ ಬಾವಿ ನಿರ್ಭಾಗ್ಯಂಗೆ ?
ತೆಗೆಯಬಹುದೇ ಕಡವರವು ದರಿದ್ರಂಗೆ ?
ಕರೆಯಬಹುದೇ ಕಾಮಧೇನುವಶುದ್ಧಂಗೆ ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣುಮಾಡಿಕೊಂಡರೆ ಹೋಲಬಹುದೆ ?
ಎನ್ನೊಡೆಯ ಕೂಡಲಸಂಗನ ಶರಣನ
ಪುಣ್ಯವಿಲ್ಲದೆ ಕಾಣಬಹುದೇ ?

180 - ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,

ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ನಾನಿದ್ದೆನಯ್ಯ!
ವಿಭೂತಿಯನೆ ಪೂಸಿ, ರುದ್ರಾಕ್ಷಿಯನೆ ಧರಿಸಿ
ಶಿವ, ನಿಮ್ಮ ಒಲವಿಲ್ಲದಂತೆ ನಾನಿದ್ದೆನಯ್ಯ!
ಕೆಟ್ಟು ಬಾಳುವರಿಲ್ಲ ನಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯ ಕೂಡಲಸಂಗಮದೇವ.

181 - ಉದಯಾಸ್ತಮಾನವೆನ್ನ ಬೆಂದ ಬಸಿರಿಂಗೆ ಕುದಿಯಲಲ್ಲದೆ,

ಉದಯಾಸ್ತಮಾನವೆನ್ನ ಬೆಂದ ಬಸಿರಿಂಗೆ ಕುದಿಯಲಲ್ಲದೆ,
ನಿಮ್ಮ ನೆನೆಯಲು ತೆರಹಿಲ್ಲವಯ್ಯ.
ಎಂತೊ ಲಿಂಗ ತಂದೆ, ಎಂತಯ್ಯ ಎನ್ನ ಪೂರ್ವಲಿಖಿತ ?
ಬೆರಣಿಯನಾಯಲಲ್ಲದೆ
ಅಟ್ಟುಣ್ಣ ತೆರಹಿಲ್ಲೆನಗೆ!
ನೀ ಕರುಣಿಸು ಕೂಡಲಸಂಗಮದೇವ.

182 - ಬೆಲ್ಲವ ತಿಂದ ಕೋಡಗದಂತೆ

ಬೆಲ್ಲವ ತಿಂದ ಕೋಡಗದಂತೆ
ಸಿಹಿಯ ನೆನೆಯದಿರಾ ಮನವೆ!
ಕಬ್ಬ ತಿಂದ ನರಿಯಂತೆ
ಹಿಂದಕ್ಕೆಳಸದಿರಾ ಮನವೇ!
ಗಗನವನಡರಿದ ಕಾಗೆಯಂತೆ
ದೆಸೆದೆಸೆಗೆ ಹಂಬಲಿಸದಿರಾ ಮನವೇ!
ಕೂಡಲಸಂಗನ ಶರಣರ ಕಂಡು
ಲಿಂಗವೆಂದೇ ನಂಬು ಮನವೇ!

183 - ಒಡೆಯನ ಕಂಡರೆ ಕಳ್ಳನಾಗದಿರಾ ಮನವೆ!

ಒಡೆಯನ ಕಂಡರೆ ಕಳ್ಳನಾಗದಿರಾ ಮನವೆ!
ಭವದ ಬಾಧೆಯ ತಪ್ಪಿಸಿಕೊಂಬಡೆ
ನೀನು ನಿಯತವಾಗಿ ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ಮನವೇ!
ಕೂಡಲಸಂಗನ ಶರಣರಲ್ಲಿ
ಭಕ್ತಿಯ ನೋನುವಡೆ
ಕಿಂಕರನಾಗಿ ಬದುಕು ಮನವೇ.

184 - ಕೋಟ್ಯನುಕೋಟಿ ಜಪವ ಮಾಡಿ

ಕೋಟ್ಯನುಕೋಟಿ ಜಪವ ಮಾಡಿ
ಕೋಟಲೆಗೊಳ್ಳಲೆದೇಕೆ ಮನವೇ ?!
ಕಿಂಚಿತು ಗೀತ ಒಂದನಂತಕೋಟಿ ಜಪ!
ಜಪವೆಂಬುದೇಕೆ ಮನವೇ ?
ಕೂಡಲಸಂಗನ ಶರಣರ ಕಂಡು
ಆಡಿ, ಹಾಡಿ ಬದುಕು ಮನವೇ!

185 - ಮನವೇ ನಿನ್ನ ಜನನದ ಪರಿಭವವ ಮರೆದೆಯಲ್ಲಾ!

ಮನವೇ ನಿನ್ನ ಜನನದ ಪರಿಭವವ ಮರೆದೆಯಲ್ಲಾ!
ಮನವೇ, ಲಿಂಗವ ನಂಬು ಕಂಡಾ!
ಮನವೇ, ಜಂಗಮವ ನಂಬು ಕಂಡಾ!
ಮನವೇ, ಕೂಡಲಸಂಗಮದೇವರ
ಬಿಡದೆ ಬೆಂಬತ್ತು ಕಂಡಾ!

186 - ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೋ!

ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೋ!
ನರಮಾನವರು ಕೊಡುವರೆಂಬವನ ಬಾಯಲ್ಲಿ
ಬಾಲಹುಳುಗಳು ಸುರಿಯವೆ ?
ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ!

187 - ಸುರರ ಬೇಡಿದರಿಲ್ಲ! ನರರ ಬೇಡಿದರಿಲ್ಲ!

ಸುರರ ಬೇಡಿದರಿಲ್ಲ! ನರರ ಬೇಡಿದರಿಲ್ಲ!
ಬರಿದೆ ಧೃತಿಗೆಡಬೇಡ ಮನವೇ
ಆರನಾದರೆಯೂ ಬೇಡಿ ಬೇಡಿ
ಬರಿದೆ ಧೃತಿಗೆಡಬೇಡ ಮನವೇ!
ಕೂಡಲಸಂಗಮದೇವರನಲ್ಲದೆ ಆರ ಬೇಡಿದರಿಲ್ಲ ಮನವೇ!

188 - ಹೃದಯದಿ ಕತ್ತರಿ, ತುದಿನಾಲಿಗೆ ಬೆಲ್ಲಂ ಭೋ!

ಹೃದಯದಿ ಕತ್ತರಿ, ತುದಿನಾಲಿಗೆ ಬೆಲ್ಲಂ ಭೋ!
ಆಡಿ ಏವೆಂ ಭೊ, ಹಾಡಿ ಏವೆಂ ಭೋ!
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿ ಏವೆಂ ಭೋ!
ಆನು ಎನ್ನಂತೆ, ಮನವು ಮನದಂತೆ!
ಕೂಡಲಸಂಗಮದೇವ ತಾನು ತನ್ನಂತೆ!

189 - ಕೆಲಕ್ಕೆ ಶುದ್ಧನಾದೆನಲ್ಲದೆ

ಕೆಲಕ್ಕೆ ಶುದ್ಧನಾದೆನಲ್ಲದೆ
ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯ!
ಕೈ ಮುಟ್ಟಿ ಪೂಜಿಸುವಡೆನ್ನ ಕೈ ಶುದ್ಧವಲ್ಲಯ್ಯ!
ಮನ ಮುಟ್ಟಿ ಪೂಜಿಸುವಡೆನ್ನ ಮನ ಶುದ್ಧವಲ್ಲಯ್ಯ!
ಭಾವ ಶುದ್ಧವಾದರೆ
ಕೂಡಲಸಂಗಯ್ಯನಿತ್ತ ಬಾ ಎಂದೆತ್ತಿಕೊಳ್ಳನೇಕಯ್ಯ ?!

190 - ಲಿಂಗದಲ್ಲಿ ಕಠಿಣವುಂಟೆ ?

ಲಿಂಗದಲ್ಲಿ ಕಠಿಣವುಂಟೆ ?
ಜಂಗಮದಲ್ಲಿ ಕುಲವುಂಟೆ ?
ಪ್ರಸಾದದಲ್ಲಿ ಅರುಚಿಯುಂಟೆ ?
ಈ ತ್ರಿವಿಧದಲ್ಲಿ ಭಾವಭೇದವನರಸುವೆನು:
ಕೂಡಲಸಂಗಮದೇವಾ,
ಧಾರೆವಟ್ಟಲೆನ್ನ ಮನವು.

191 - ಓತಿ ಬೇಲಿವರಿದಂತೆನ್ನ ಮನವಯ್ಯ,

ಓತಿ ಬೇಲಿವರಿದಂತೆನ್ನ ಮನವಯ್ಯ,
ಹೊತ್ತಿಗೊಂದು ಪರಿಯಪ್ಪ
ಗೋಸುಂಬೆಯಂತೆನ್ನ ಮನವು.
ಬಾವಲ ಬಾಳುವೆಯಂತೆನ್ನ ಮನವು.
ನಡುವಿರುಳೆದ್ದ ಕುರುಡಂಗಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದರುಂಟೆ
ಕೂಡಲಸಂಗಮದೇವ.

192 - ಶಬ್ದ-ಸಂಭಾಷಣೆಯ ನುಡಿಯ ವರ್ಚ್ಚಿಸಿ ನುಡಿವೆ

ಶಬ್ದ-ಸಂಭಾಷಣೆಯ ನುಡಿಯ ವರ್ಚ್ಚಿಸಿ ನುಡಿವೆ
ತೊಡೆಹದ ಕೆಲಸದ ಬಣ್ಣದಂತೆ!
ಕಡಿಹಕ್ಕೆ ಒರಗೆ ಬಾರದು ನೋಡಾ!
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ! ಕೂಡಲಸಂಗಮದೇವ,
ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯ!

193 - ಏನನೋದಿ, ಏನ ಕೇಳಿ, ಏನ ಮಾಡಿಯೂ

ಏನನೋದಿ, ಏನ ಕೇಳಿ, ಏನ ಮಾಡಿಯೂ
ಫಲವೇನು ನಿನ್ನವರೊಲಿಯದನ್ನಕ ?
ಶಿವ ಶಿವ ಮಹಾದೇವ!
ಬಾಳಿಲ್ಲದವಳ ಒಲೆಯಂತಾಯಿತ್ತೆನಗೆ
ಕೂಡಲಸಂಗಮದೇವ.

194 - ಮುನ್ನೂರರವತ್ತು ದಿನ ಶರವ ಮಾಡಿ,

ಮುನ್ನೂರರವತ್ತು ದಿನ ಶರವ ಮಾಡಿ,
ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ
ಏವೆನಯ್ಯ ಮನದಲ್ಲಿ ದೃಢವಿಲ್ಲದನ್ನಕ ?
ಕೊಡನ ತುಂಬಿದ ಹಾಲ ಕೆಡಹಿ
ಉಡುಗಲೆನ್ನಳವೆ ಕೂಡಲಸಂಗಮದೇವ.

195 - ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ,

ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ,
ಕಾದಿ ಗೆಲಿಸಯ್ಯ-ಎನ್ನನು ಕಾದಿ ಗೆಲಿಸಯ್ಯ,
ಕೂಡಲಸಂಗಮದೇವಯ್ಯ, ಎನ್ನ ತನು-ಮನ-ಧನದಲ್ಲಿ
ವಂಚನೆಯಿಲ್ಲದಂತೆ ಮಾಡಯ್ಯ.

196 - ಅಂಕ ಕಳನೇರಿ ಕೈಮರೆದಿದ್ದರೆ

ಅಂಕ ಕಳನೇರಿ ಕೈಮರೆದಿದ್ದರೆ
ಮಾರಂಕ ಬಂದಿರಿವುದು ಮಾಬನೆ ?
ನಿಮ್ಮ ನೆನವ ಮತಿ ಮರೆದಿದ್ದರೆ
ಪಾಪ ತನುವನಂಡಲೆವುದ ಮಾಬುದೆ ?
ಕೂಡಲಸಂಗಯ್ಯನ ನೆನೆದರೆ
ಪಾಪ ಉರಿಗೊಂಡಿದರಗಿನಂತೆ ಕರಗುವುದಯ್ಯ.

197 - ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ!

ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ!
ಕಾದಬೇಕು, ಕಾದುವರೆ ಮನವಿಲ್ಲ!
ಆಗಳೇ ಹೋಯಿತ್ತು ಬಿರುದು;
ಹಗರಣಿಗನಂತೆ ನಗೆಗೆಡೆಯಾಯಿತ್ತು!
ಮಾರಂಕ-ಜಂಗಮ ಮನೆಗೆ ಬಂದರೆ
ಕಾಣದಂತಡ್ಡ ಮುಸುಡಿಟ್ಟರೆ,
ಕೂಡಲಸಂಗಮದೇವ ಜಾಣ
ಮೂಗ ಕೊಯ್ವ ಹಲುದೋರಲು.

198 - ಆಡುವುದಳವಟ್ಟಿತ್ತು-ಹಾಡುವುದಳವಟ್ಟಿತ್ತು.

ಆಡುವುದಳವಟ್ಟಿತ್ತು-ಹಾಡುವುದಳವಟ್ಟಿತ್ತು.
ಅರ್ಚನೆಯಳವಟ್ಟಿತ್ತು-ಪೂಜನೆಯಳವಟ್ಟಿತ್ತು.
ನಿತ್ಯಲಿಂಗಾರ್ಚನೆಯು ಮುನ್ನವೇ ಅಳವಟ್ಟಿತ್ತು!
ಕೂಡಲಸಂಗನ ಶರಣರು ಬಂದರೆ
ಏಗುವುದೇಬೇಸನೆಂಬುದೊಪ್ಪಚ್ಚಿಯಳವಡದು!!

199 - ಹೊರಿಸಿಕೊಂಡು ಹೋದ ನಾಯಿ

ಹೊರಿಸಿಕೊಂಡು ಹೋದ ನಾಯಿ
ಮೊಲನನೇನ ಹಿಡಿವುದಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಹೇಳುವುದೇ ನಾಚಿಕೆ!
ಆನು ಭಕ್ತನೆಂತೆಂಬೆನಯ್ಯ
ಕೂಡಲಸಂಗಮದೇವ ?

200 - ನೋಡುವರುಳ್ಳರೆ ಮಾಡುವೆ ದೇಹಾರವ,

ನೋಡುವರುಳ್ಳರೆ ಮಾಡುವೆ ದೇಹಾರವ,
ಎನಗೊಂದು ನಿಜವಿಲ್ಲ,
ಎನಗೊಂದು ನಿಷ್ಪತ್ತಿಯಿಲ್ಲ;
ಲಿಂಗವ ತೋರಿ ಉದರವ ಹೊರೆವ
ಭಂಗಗಾರ ನಾನು ಕೂಡಲಸಂಗಮದೇವ.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *