ಬಸವಣ್ಣನವರ ವಚನಗಳು 100-150

101 - ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?

ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು.

102 - ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ.
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ.

103 - ಹೊತ್ತಾರೆಯೆದ್ದು ಶಿವಲಿಂಗದೇವನ

ಹೊತ್ತಾರೆಯೆದ್ದು ಶಿವಲಿಂಗದೇವನ
ದೃಷ್ಟಿಯಾರೆ ನೋಡದವನ ಸಂಸಾರವೇನವನ ?!
ಬಾಳುವೆಣನ ಬೀಳುವೆಣನ ಸಂಸಾರವೇನವನ ?!
ನಡೆವೆಣನ ನುಡಿವೆಣನ ಸಂಸಾರವೇನವನ ?!
ಕರ್ತೃ ಕೂಡಲಸಂಗ, ನಿಮ್ಮ ತೊತ್ತಗೆಲಸಮಾಡದವನ
ಸಂಸಾರವೇನವನ ?!

104 - ವ್ಯಾಧನೊಂದು ಮೊಲನ ತಂದರೆ

ವ್ಯಾಧನೊಂದು ಮೊಲನ ತಂದರೆ
ಸಲುವ ಹಾಗಕ್ಕೆ ಬಿಲಿವರಯ್ಯ.
ನೆಲನಾಳ್ದನ ಹೆಣನೆಂದರೆ
ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ.
ಮೊಲನಿಂದ ಕರಕಷ್ಟ ನರನ ಬಾಳುವೆ!
ಸಲೆ ನಂಬೋ ನಮ್ಮ ಕೂಡಲಸಂಗಮದೇವನ.

105 - ಉತ್ಪತ್ತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ?

ಉತ್ಪತ್ತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ?
ಅಂತು ಬಲಿದ ಸಪ್ತಧಾತುವಿನ
ನರಕದೇಹದೊಳಿಪ್ಪ ಹೇಸಿಕೆ ಸಾಲದೆ ?
ಮತ್ತೆಯು ಪಾಪಂಗಳ ಮಾಡಿ
ದುರಿತಂಗಳ ಹೆರುವ ಹೇಗತನವೇಕಯ್ಯ ?
ಕಾಲನ ಕೈಯ ಬಡಿಸಿಕೊಂಡು
ನರಕವನುಂಬುದು ವಿಧಿಯೇ, ಎಲೆ ಮನುಜ ?
ಒತ್ತೊತ್ತೆಯ ಜನನವ ಗೆಲುವಡೆ
ಕರ್ತನ ಪೂಜಿಸು ನಮ್ಮ ಕೂಡಲಸಂಗಮದೇವನ!

106 - ಮನವೇ ಸರ್ಪ, ತನುವೇ ಹೇಳಿಗೆ!

ಮನವೇ ಸರ್ಪ, ತನುವೇ ಹೇಳಿಗೆ!
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವ.

107 - ನರೆ ಕೆನ್ನೆಗೆ, ತೆರೆ ಗಲ್ಲಕೆ,

ನರೆ ಕೆನ್ನೆಗೆ, ತೆರೆ ಗಲ್ಲಕೆ,
ಶರೀರ ಗೂಡುವೋಗದ ಮುನ್ನ;
ಹಲ್ಲು ಹೋಗಿ, ಬೆನ್ನು ಬಾಗಿ
ಆನ್ಯರಿಗೆ ಹಂಗಾಗದ ಮುನ್ನ;
ಕಾಲ ಮೇಲೆ ಕೈಯನೂರಿ
ಕೋಲ ಹಿಡಿಯದ ಮುನ್ನ;
ಮುಪ್ಪಿಂದೊಪ್ಪವಳಿಯದ ಮುನ್ನ;
ಮೃತ್ಯು ಮುಟ್ಟದ ಮುನ್ನ
ಪೂಜಿಸುವೋ ಕೂಡಲಸಂಗಮದೇವನ.

108 - ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು

ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ
ಕಾಯವ ನಿಶ್ಚಯಿಸದೆ!

109 - ಹಂಜರ ಬಲ್ಲಿತ್ತೆಂದು ಅಂಜದೇ ಓದುವ ಗಿಳಿಯೇ,

ಹಂಜರ ಬಲ್ಲಿತ್ತೆಂದು ಅಂಜದೇ ಓದುವ ಗಿಳಿಯೇ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ ನಿನ್ನ ಮನದಲ್ಲಿ!
ಮಾಯಾಮಂಜರ ಕೊಲುವಡೆ, ನಿನ್ನ ಹಂಜರ ಕಾವುದೇ
ಕೂಡಲಸಂಗಮದೇವನಲ್ಲದೆ ?

110 - ಸಂಸಾರವೆಂಬುದೊಂದು ಗಾಳಿಯ ಸೊಡರು!

ಸಂಸಾರವೆಂಬುದೊಂದು ಗಾಳಿಯ ಸೊಡರು!
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ.

111 - ಎಲೆಯೆಲೆ ಮಾನವಾ, ಅಳಿಯಾಸೆ ಬೇಡವೋ,

ಎಲೆಯೆಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ-ಬೆಳುದಿಂಗಳು-ಸಿರಿ ಸ್ಥಿರವಲ್ಲ!
ಕೇಡಿಲ್ಲದ ಪದವಿಯನೀವ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು.

112 - ಎಂತಕ್ಕೆ ಎಂತಕ್ಕೆ

ಎಂತಕ್ಕೆ ಎಂತಕ್ಕೆ
ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣವೋ!
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣವೋ!
ಮರಳಿ ಭವಕ್ಕೆ ಬಹೆ ಬಾರದಿಹೆ!
ಕರ್ತೃ ಕೂಡಲಸಂಗಂಗೆ ಶರಣೆನ್ನವೋ!

113 - ಶಕುನವೆಂದೆಂಬೆ ಅಪಶಕುನವೆಂದೆಂಬೆ,

ಶಕುನವೆಂದೆಂಬೆ ಅಪಶಕುನವೆಂದೆಂಬೆ,
ನಿಮ್ಮವರು ಅಳಲಿಕಂದೇಕೆ ಬಂದೆ ?
ನಿಮ್ಮವರು ಅಳಲಿಕಿಂದೇಕೆ ಹೋದೆ ?
ನೀ ಹೋಹಾಗಳಕ್ಕೆ!
ನೀ ಬಾಹಾಗಳಕ್ಕೆ!
ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ.

114 - ನಿಮಿಷಂ ನಿಮಿಷಂ ಭೋ!

ನಿಮಿಷಂ ನಿಮಿಷಂ ಭೋ!
ಕ್ಷಣದೊಳಗರ್ಧಂ ಭೋ!
ಕಣ್ಣ ಮುಚ್ಚಿ ಬಿಚ್ಚುವಿನಿಸು ಬೇಗಂ ಭೋ
ಸಂಸಾರದಾಗುಂ ಭೋ!
ಸಂಸಾರದ ಹೋಗುಂ ಭೋ!
ಸಂಸಾರದೊಪ್ಪಂ ಭೊ!
ಕೂಡಲಸಂಗಮದೇವ ಮಾಡಿದ
ಮಾಯಂ ಭೋ!
ಅಭ್ರಚ್ಛಾಯಂ ಭೋ!

115 - ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬಕ್ಕು-

ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬಕ್ಕು-
ಹರಿದು ಹೆದ್ದೊರೆಯು ಕೆರೆ ತುಂಬಿದಂತಯ್ಯ;
ನೆರೆಯದ ವಸ್ತು ನೆರೆವುದು ನೋಡಯ್ಯ;
ಅರಸು ಪರಿವಾರ ಕೈವಾರ ನೋಡಯ್ಯ.
ಪರಮನಿರಂಜನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲು ಕೊಂಡಂತೆ
ಕೂಡಲಸಂಗಮದೇವ.

116 - ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು!

ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು!
ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು!
ಪುಣ್ಯಗಳಹ ಕಾಲಕ್ಕೆ ಹಾವು ನೇವಳವಹುದು!
ಪುಣ್ಯಗಳಹ ಕಾಲಕ್ಕೆ ಅನ್ಯರು ತನ್ನವರಹರು!
ಇಂತಪ್ಪ ಪುಣ್ಯಗಳೆಲ್ಲವೂ ಭಕ್ತಿಯಿಂದಲಹುದು!
ಭಕ್ತಿ ಕೆಟ್ಟರೆ ಪುಣ್ಯವೂ ಕೆಡುವುದು!
ಇಂತಪ್ಪ ಭಕ್ತಿಯೂ ಪುಣ್ಯವೂ ಚೆನ್ನಬಸವಣ್ಣನಿಂದುಂಟಾಗಿ
ನಾನು ಬದುಕಿದೆನಯ್ಯ ಕೂಡಲಸಂಗಮದೇವ.

117 - ಹೊಯ್ದರೆ ಹೊಯ್ಗಳು ಕೈಯ ಮೇಲೆ,

ಹೊಯ್ದರೆ ಹೊಯ್ಗಳು ಕೈಯ ಮೇಲೆ,
ಬೈದರೆ ಬೈಗಳು ಕೈಯ ಮೇಲೆ,
ಹಿಂದಣ ಜನನವೇನಾದರಾಗಲಿ,
ಇಂದಿನ ಭೋಗವು ಕೈಯ ಮೇಲೆ.
ಕೂಡಲಸಂಗಮದೇವಯ್ಯ,
ನಿನ್ನ ಪೂಜಿಸಿದ ಫಲ ಕೈಯ್ಯ ಮೇಲೆ!

118 - ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು

ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ?
ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಂಗೆ.

119 - ಅಚ್ಚಿಗವೇಕಯ್ಯ ? ಸಂಸಾರದೊಳಗಿರ್ದು

ಅಚ್ಚಿಗವೇಕಯ್ಯ ? ಸಂಸಾರದೊಳಗಿರ್ದು
ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು.
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು!
ಬೇಗ ಬೇಗ ಕೂಡಲಸಂಗನ ಕೂಡುವುದು!

120 - ಅಂದು ಇಂದು ಮತ್ತೊಂದೆನಬೇಡ.

ಅಂದು ಇಂದು ಮತ್ತೊಂದೆನಬೇಡ.
ದಿನವಿಂದೇ ಶಿವಶರಣೆಂಬವಂಗೆ,
ದಿನವಿಂದೇ ಹರಶರಣೆಂಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.

121 - ಸುಪ್ರಭಾತ ಸಮಯದಲ್ಲಿ

ಸುಪ್ರಭಾತ ಸಮಯದಲ್ಲಿ
ಅರ್ತಿಯಲ್ಲಿ ಲಿಂಗವ ನೆನೆದರೆ
ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯ!
ದೇವಪೂಜೆಯ ಮಾಟ
ದುರಿತಬಂಧನದೋಟ!
ಶಂಭು ನಿಮ್ಮಯ ನೋಟ
ಹೆರೆಹಿಂಗದ ಕಣ್ಬೇಟ!!
ಸದಾ ಶಿವಲಿಂಗಸನ್ನಿಹಿತನಾಗಿಪ್ಪುದು,
ಶರಣೆಂದು ನಂಬುವುದು.
ಜಂಗಮಾರ್ಚನೆಯ ಮಾಟ
ಕೂಡಲಸಂಗನ ಕೂಟ!!!

122 - ನಾದಪ್ರಿಯ ಶಿವನೆಂಬರು,

ನಾದಪ್ರಿಯ ಶಿವನೆಂಬರು,
ನಾದಪ್ರಿಯ ಶಿವನಲ್ಲಯ್ಯ!
ವೇದಪ್ರಿಯಶಿವನೆಂಬರು
ವೇದಪ್ರಿಯ ಶಿವನಲ್ಲಯ್ಯ!
ನಾದವ ಮಾಡಿದ ರಾವಣಂಗೆ
ಆರೆಯಾಯುಷವಾಯಿತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ,
ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.

123 - ತನ್ನಾಶ್ರಯದ ರತಿಸುಖವನು

ತನ್ನಾಶ್ರಯದ ರತಿಸುಖವನು
ತಾನುಂಬ ಊಟವನು
ಬೇರೊಬ್ಬರ ಕೈಯಲು ಮಾಡಿಸಬಹುದೇ ?
ತನ್ನ ಲಿಂಗಕ್ಕೆ ಮಾಡುವ
ನಿತ್ಯ ನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲು ಮಾಡಿಸಬಹುದೇ ?
ಕೆಮ್ಮನುಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ.

124 - ಬಂಡಿ ತುಂಬಿದ ಪತ್ರೆಯ ತಂದು

ಬಂಡಿ ತುಂಬಿದ ಪತ್ರೆಯ ತಂದು
ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಯ್ಯ.
ತಾಪತ್ರಯವ ಕಳೆದು ಪೂಜಿಸಿ:
ತಾಪತ್ರಯವ ಲಿಂಗನೊಲ್ಲ!
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ ?

125 - ಕನ್ನಡಿಯ ನೋಡುವ ಅಣ್ಣಗಳಾ,

ಕನ್ನಡಿಯ ನೋಡುವ ಅಣ್ಣಗಳಾ,
ಜಂಗಮವ ನೋಡಿರೇ!
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ.
ಸ್ಥಾವರ ಜಂಗಮ ಒಂದೆಂದುದು ಕೂಡಲಸಂಗನ ವಚನ.

126 - ಗೀತವ ಹಾಡಿದರೇನು,

ಗೀತವ ಹಾಡಿದರೇನು,
ಶಾಸ್ತ್ರ ಪುರಾಣವ ಕೇಳಿದರೇನು,
ವೇದವೇದಾಂತವನೋದಿದರೇನು,
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ?
ಇವೆಲ್ಲರಲ್ಲಿಯೂ ಅನುಭಾವಿಯಾದರೇನು,
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.

127 - ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು.

ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು.
ದಕ್ಕ ನುಂಗಿದಂತೆ ಬೆರೆದುಕೊಂಡಿರಬೇಡ.
ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದರೆ,
ಬೇಡಿದ ಪದವಿಯನೀವ ಕೂಡಲಸಂಗಮದೇವ.

128 - ದ್ವೈತಾದ್ವೈತವನೋದಿ ಏನ ಮಾಡುವಿರಯ್ಯ

ದ್ವೈತಾದ್ವೈತವನೋದಿ ಏನ ಮಾಡುವಿರಯ್ಯ
ನಮ್ಮ ಶರಣರಿಗೆ ಉರಿಗರಗಾಗಿ ಕರಗದನ್ನಕ ?
ಸ್ಥಾವರ ಜಂಗಮ ಒಂದೆಂದು ನಂಬದನ್ನಕ ?
ಕೂಡಲಸಂಗಮದೇವ,
ಬರಿಯ ಮಾತಿನ ಮಾಲೆಯಲೇನಹುದು ?

129 - ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ

ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ-
ಅದು ಬೇಡದು, ಬೆಸಗೊಳ್ಳದು !
ತಂದೊಮ್ಮೆ ನೀಡಬಹುದು !
ಕಾಡುವ ಬೇಡುವ ಜಂಗಮ ಬಂದರೆ
ನೀಡಲು ಬಾರದು ಕೂಡಲಸಂಗಮದೇವ.

130 - ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!

131 - ಎರೆದರೆ ನೆನೆಯದು, ಮರೆದರೆ ಬಾಡದು

ಎರೆದರೆ ನೆನೆಯದು, ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ!
ನೋಡಯ್ಯ, ಕೂಡಲಸಂಗಮದೇವಯ್ಯ,
“ಜಂಗಮ”ಕ್ಕೆರೆದರೆ, “ಸ್ಥಾವರ” ನೆನೆಯಿತ್ತು.

132 - ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯ;

ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯ;
ಭೂಮಿಯಧಾರದಲ್ಲಿ ವೃಕ್ಷ ನೀರುಂಬುದಯ್ಯ.
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿಯಹುದಯ್ಯ
“ವೃಕ್ಷಸ್ಯ ವದನಂ ಭೂಮಿಃ
ಸ್ಥಾವರಸ್ಯ ತು ಜಂಗಮಃ!
ಅಹಂ ತುಷ್ಟಿರುಮೇ ದೇವ್ಯು-
ಭಯೋರ್ಜಂಗಮಲಿಂಗಯೋಃ ||”
ಇದು ಕಾರಣ ಕೂಡಲಸಂಗನ ಶರಣರಲ್ಲಿ
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿ.

133 - ಬಂಡವ ತುಂಬಿದ ಬಳಿಕ

ಬಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ಹೊಗಬಾರದು.
ಕಳ್ಳನಾಣ್ಯ ಸಲಿಕೆಗೆ ಸಲ್ಲದು,
ಕಳ್ಳನಾಣ್ಯವ ಸಲಲೀಯರಯ್ಯ.
ಭಕ್ತಿಯೆಂಬ ಬಂಡಕ್ಕೆ ಜಂಗಮವೇ ಸುಂಕಿಗ
ಕೊಡಲಸಂಗಮದೇವ.

134 - ಮಾಡಿ, ನೀಡಿ, ಲಿಂಗವ ಪೂಜಿಸಿಹೆವೆಂಬವರು

ಮಾಡಿ, ನೀಡಿ, ಲಿಂಗವ ಪೂಜಿಸಿಹೆವೆಂಬವರು
ನೀವೆಲ್ಲ ಕೇಳಿರಣ್ಣ;
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ,
ನಮಸ್ಕಾರವ ಮಾಡುವನಂತೆ,
ತನ್ನ ಕೆರಹಿನ ಧ್ಯಾನವಲ್ಲದೆ,
ದೇವರ ಧ್ಯಾನವಿಲ್ಲ;
ಧನವನಿರಿಸದಿರಾ ! ಇರಿಸಿದರೆ ಭವ ಬಪ್ಪುದು ತಪ್ಪದು!
ಕೂಡಲಸಂಗನ ಶರಣರಿಗೆ ಸವೆಸಲೇಬೇಕು.

135 - ಉಂಡುದು ಬಂದೀತೆಂಬ ಸಂದೇಹಿಮಾನವ ನೀ ಕೇಳ!

ಉಂಡುದು ಬಂದೀತೆಂಬ ಸಂದೇಹಿಮಾನವ ನೀ ಕೇಳ!
ಉಂಡುದೇನಾಯಿತೆಂಬುದ ನಿನ್ನ ನೀ ತಿಳಿದು ನೋಡಾ!
ಉಂಡುದಾಗಳೇ ಆ ಪೀಯವಾಯಿತ್ತು!
ಆ ಉಂಡುದನುಣಬಂದ ಹಂದಿಯ ಬಾಳುವೆಯವರ
ಕಂಡು ಆನು ಮರುಗುವೆನಯ್ಯ ಕೂಡಲಸಂಗಮದೇವ.

136 - ಆಯುಷ್ಯವುಂಟು ಪ್ರಳಯವಿಲ್ಲೆಂದು,

ಆಯುಷ್ಯವುಂಟು ಪ್ರಳಯವಿಲ್ಲೆಂದು,
ಅರ್ಥವ ಮಡಗುವಿರಿ:
ಆಯುಷ್ಯ ತೀರಿ ಪ್ರಳಯ ಬಂದರೆ
ಆ ಅರ್ಥವನುಂಬವರಿಲ್ಲ:
ನೆಲನನಗೆದು ಮಡಗದಿರಾ!
ನೆಲ ನುಂಗಿದರುಗುಳುವುದೇ ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ
ಉಣ್ಣದೆ ಹೋಗದಿರಾ;
ನಿನ್ನ ಮಡದಿಗಿರಲೆಂದರೆ–ಮಡದಿಯ ಕೃತಕ ಬೇರೆ!
ನಿನ್ನೊಡಲು ಕೆಡೆಯಲು
ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ.
ಕೂಡಲಸಂಗನ ಶರಣರಿಗೆ ಒಡನೆ ಸೆವೆಸುವುದು.

137 - ಅವಳ ವಚನ ಬೆಲ್ಲದಂತೆ!

ಅವಳ ವಚನ ಬೆಲ್ಲದಂತೆ!
ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!
ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,
ವಚನದಲೊಬ್ಬನ ನೆರೆವಳು!
ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!
ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ.

138 - ತನು-ಮನ-ಧನವ ಹಿಂದಿಕ್ಕಿಕೊಂಡು

ತನು-ಮನ-ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು
ನೀವೆಲ್ಲ ಕೇಳಿರೆ:
ತಲಹಿಲ್ಲದ ಕೋಲು ಪೊಳ್ಳುಹಾರುವುದಲ್ಲದೆ
ಗುರಿಯ ತಾಗಬಲ್ಲುದೆ ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ
ಕೂಡಲಸಂಗಮದೇವನೆಂತೊಲಿವನಯ್ಯ.

139 - ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,

ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಪೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ
ಉಂಡು ತಂಬುಲಗೊಂಡು ಹೋಹುದಲ್ಲ!
ತನು-ಮನ-ಧನವ ಸಮರ್ಪಿಸದವರ
ಕೂಡಲಸಂಗಮದೇವನೆಂತೊಲಿವ ?

140 - ತನುವ ಕೊಟ್ಟು ಗುರುವನೊಲಿಸಲೆ ಬೇಕು.

ತನುವ ಕೊಟ್ಟು ಗುರುವನೊಲಿಸಲೆ ಬೇಕು.
ಮನವ ಕೊಟ್ಟು ಲಿಂಗವನೊಲಿಸಲೆ ಬೇಕು.
ಧನವ ಕೊಟ್ಟು ಜಂಗಮವನೊಲಿಸಲೆ ಬೇಕು.
ಈ ತ್ರಿವಿಧವ ಮರೆಸಿಕೊಂಡು,
ಹರೆಯ ಹೊಯಿಸಿ, ಕುರುಹ ಪೂಜಿಸುವ ಡಂಬಕರ ಮೆಚ್ಚ
ಕೂಡಲಸಂಗಮದೇವ.

141 - ಆಡಿದರೇನೋ, ಹಾಡಿದರೇನೋ, ಓದಿದರೇನೋ

ಆಡಿದರೇನೋ, ಹಾಡಿದರೇನೋ, ಓದಿದರೇನೋ-
ತ್ರಿವಿಧ ದಾಸೋಹವಿಲ್ಲದನ್ನಕ ?
ಆಡದೇ ನವಿಲು ? ಹಾಡದೇ ತಂತಿ ? ಓದದೇ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ!

142 - ವೇದದಂತುಟಲ್ಲ, ಶಾಸ್ತ್ರದಂತುಟಲ್ಲ,

ವೇದದಂತುಟಲ್ಲ, ಶಾಸ್ತ್ರದಂತುಟಲ್ಲ,
ಗೀತ-ಮಾತಿನಂತುಟಲ್ಲ ಕೇಳಿರಯ್ಯ !
ಮಾತಿನ ಮಾತಿನ ಕೌಳುಗೋಲ ಶ್ರವದಲ್ಲಿ
ಸತ್ತವರೊಳರೇ ಅಯ್ಯ ?
ದಿಟದಲಗಿನ ಕಾಳೆಗವಿತ್ತಲಿದ್ದುದೇ
ಕೂಡಲಸಂಗನ ಶರಣರು ಬಂದಲ್ಲಿ !?

143 - ಮಾತಿನ ಮಾತಿನಲಪ್ಪುದೇ ಭಕ್ತಿ ?

ಮಾತಿನ ಮಾತಿನಲಪ್ಪುದೇ ಭಕ್ತಿ ?
ಮಾಡಿ ತನು ಸವೆಯದನ್ನಕ,
ಧನ ಸವೆಯದನ್ನಕ,
ಮನ ಸವೆಯದನ್ನಕ,
ಅಪ್ಪುದೇ ಭಕ್ತಿ ?
ಕೂಡಲಸಂಗಮದೇವನೆಲುದೋರ ಸರಸವಾಡುವನು;
ಸೈರಿಸದನ್ನಕ ಅಪ್ಪುದೇ ಭಕ್ತಿ ?

144 - ಹಾವಸೆಗಲ್ಲ ಮೆಟ್ಟಿ ಹರಿದು

ಹಾವಸೆಗಲ್ಲ ಮೆಟ್ಟಿ ಹರಿದು
ಗೊತ್ತ ಮುಟ್ಟ ಬಾರದಯ್ಯ.
ನುಡಿದಂತೆ ನಡೆಯಲು ಬಾರದಯ್ಯ.
ಕೂಡಲಸಂಗನ ಶರಣರ ಭಕ್ತಿ ಬಾಳ ಬಾಯಿಧಾರೆ.

145 - ಭಕ್ತಿಯೆಂಬುದ ಮಾಡಬಾರದು.

ಭಕ್ತಿಯೆಂಬುದ ಮಾಡಬಾರದು.
ಗರಗಸದಂತೆ ಹೋಗುತ್ತ ಕೊರೆವುದು;
ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಬುದೆ ?
ಕೂಡಲಸಂಗಮದೇವ.

146 - ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು

ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ
ಸಲೆನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು!
ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ
ಶಿವನ ಸೊಮ್ಮ ಶಿವಂಗೆ ಮಾಡದೆ ಅನ್ಯಕ್ಕೆ ಮಾಡಿದರೆ
ತನ್ನ ಭಕ್ತಿ ತನ್ನನೇ ಕೆಡಿಸುವುದು ಕೂಡಲಸಂಗಮದೇವ!

147 - ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ,

ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ,
ಸಲೆ ಮಾರುವೋದೆನೆಂದರೆ;
ತನುವನಲ್ಲಾಡಿಸಿ ನೋಡುವೆ ನೀನು!
ಮನವನಲ್ಲಾಡಿಸಿ ನೋಡುವೆ ನೀನು!
ಧನವನಲ್ಲಾಡಿಸಿ ನೋಡುವೆ ನೀನು!
ಇವೆಲ್ಲಕಂಜದಿದ್ದರೆ
ಭಕ್ತಿಕಂಪಿತ ನಮ್ಮ ಕೂಡಲಸಂಗಮದೇವ.

148 - ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ

ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ!
ಬಣ್ಣವಿಟ್ಟು ನುಡಿದಲ್ಲಿ ಫಲವೇನು ಚಿನ್ನಗೆಯ್ಕನಾಡುವಂತೆ ?
ಬಂದ ಸಮಯೋಚಿತವನರಿತು
ಇದ್ದುದ ವಂಚಿಸದಿದ್ದರೆ
ಕೂಡಲಸಂಗಮದೇವನೊಲಿದು ಸಲಹುವ!

149 - ಹಸಿದು ಬಂದ ಗಂಡನಿಗೆ ಉಣಲಿಕ್ಕದೆ

ಹಸಿದು ಬಂದ ಗಂಡನಿಗೆ ಉಣಲಿಕ್ಕದೆ
ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ
ಬಂದುದನರಿಯಳು, ಇದ್ದುದ ಸವಿಸಳು!
ದುಃಖವಿಲ್ಲದಕ್ಕೆ ಹಗರಣಿಗನ ತೆರನಂತೆ!
ಕೂಡಲಸಂಗನ ಶರಣರಿಗೆ ತ್ರಿವಿಧವ ವಂಚಿಸಿ
ಬಣ್ಣಿಸುವ ಭಕ್ತಿಯ ಕಂಡು ನಾನು ನಾಚಿದೆನು!

150 - ಉದಯದ ಮಾಗಿಯ ಬಿಸಿಲು

ಉದಯದ ಮಾಗಿಯ ಬಿಸಿಲು
ಅಂಗಕ್ಕೆ ಹಿತವಾಯಿತ್ತು!
ಮಧ್ಯಾಹ್ನದ ಬಿಸಿಲು
ಅಂಗಕ್ಕೆ ಕರ ಕಠಿನವಾಯಿತ್ತು!
ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು!
ಕಡೆಯಲ್ಲಿ ಜಂಗಮಭಕ್ತಿ ಕಠಿನವಾಯಿತ್ತು!
ಇದು ಕಾರಣ,
ಕೂಡಲಸಂಗಮದೇವನವರ
ಬಲ್ಲನಾಗಿ ಒಲ್ಲನಯ್ಯ.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *