ಬಸವಣ್ಣನವರ ವಚನಗಳು 51-100

051

ನೀರಿಂಗೆ ನೈದಿಲೇ ಶೃಂಗಾರ,
ಊರಿಂಗೆ ಆರವೆಯೇ ಶೃಂಗಾರ,
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.

052

ಅಕಟಕಟಾ ಬೆಡಗುಬಿನ್ನಾಣವೇನೋ ?!
‘ಓಂ ನಮಶ್ಶಿವಾಯ’ ಎಂಬುದೇ ಮಂತ್ರ!
‘ಓಂ ನಮಶ್ಶಿವಾಯ’ ಎಂಬುದೇ ತಂತ್ರ!
ನಮ್ಮ ಕೂಡಲಸಂಗಮದೇವರ ಮಾಣದೆ ನೆನವುದೇ ಮಂತ್ರ!

053

ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ
ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ.

054

ತಾಳಮರದ ಕೆಳಗೆ ಒಂದು ಹಾಲ ಹರವಿಯಿದ್ದರೆ
ಅದ ಹಾಲ ಹರವಿಯೆನ್ನರು: ಸುರೆಯ ಹರವಿಯೆಂಬರು.
ಈ ಭಾವಸಂದೆಯವ ಮಾಣಿಸಾ ಕೂಡಲಸಂಗಮದೇವ.

055

ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ
ಕೊಳೆವುದಲ್ಲದೆ ಅದು ಬಲುಹಾಗ ಬಲ್ಲುದೆ ?
ಅಳಿಮನದವಂಗೆ ದೀಕ್ಷೆಯ ಕೊಟ್ಟರೆ
ಭಕ್ತಿಯೆಂತಹುದು ?
ಮುನ್ನಿನಂತೆ, ಕೂಡಲಸಂಗಯ್ಯ!
ಮನಹೀನನ ಮೀಸಲ ಕಾಯ್ದಿರಿಸಿದಂತೆ!!

056

ಸಗಣಿಯ ಬೆನಕನ ಮಾಡಿ ಸಂಪಿಗೆಯರಳಲ್ಲಿ
ಪೂಜಿಸಿದರೆ ರಂಜನೆಯಹುದಲ್ಲದೆ, ಅದರ ಗಂಜಳ ಬಿಡದಣ್ಣ!
ಮಣ್ಣ ಪ್ರತಿಮೆಯ ಮಾಡಿ ಮಜ್ಜನಕ್ಕೆರೆದರೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣ!!
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ
ಆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ ?

057

ಕಬ್ಬುನದ ಕೋಡಗ ಪರುಷ ಮುಟ್ಟಿ ಹೊನ್ನಾದರೇನು
ಅದು ತನ್ನ ಮುನ್ನಿನ ರೂಹ ಬಿಡದನ್ನಕ ? ಕೂಡಲಸಂಗಮದೇವಾ,
ನಿಮ್ಮ ನಂಬಿಯೂ, ನಂಬದ ಡಂಬಕ ನಾನಯ್ಯ.

058

ಒಳಗೆ ಕುಟಿಲ, ಹೊರಗೆ ವಿನಯವಾಗಿ
ಭಕ್ತರೆನಿಸಿಕೊಂಬವರನೊಲ್ಲನಯ್ಯಾ ಲಿಂಗವು!
ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯ!
ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ
ಬೀಸಾಡುವನವರ ಜಗದೀಶ ಕೂಡಲಸಂಗಮದೇವ.

059

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.

060

ಹಲವು ಕಾಲ ಹಂಸೆಯ ಸಂಗದಲಿದ್ದರೇನು
ಬಕ ಶುಚಿಯಾಗಬಲ್ಲುದೇ ?
ಗಂಗಾನದಿಯಲ್ಲಿದ್ದರೇನು ಪಾಷಾಣ ಮೃದುವಾಗಬಲ್ಲುದೇ ?
ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು
ಒಣ ಕೊರಡು ಕೊನರಿ ಫಲವಾಗಬಲ್ಲುದೇ ?
ಕಾಶೀಕ್ಷೇತ್ರದಲ್ಲಿ ಒಂದು ಶುನಕನಿದ್ದರೇನು ?
ಅದರ ಹಾಲು ಪಂಚಾಮೃತಕ್ಕೆ ಸಲುವುದೇ ?
ತೀರ್ಥದಲೊಂದು ಗಾರ್ದಭನಿದ್ದರೇನು ಕಾರಣಿಕನಾಗಬಲ್ಲುದೇ ?
ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು ?
ಅದು ಬಿಳುಹಾಗಬಲ್ಲುದೆ ?
ಇದು ಕಾರಣ-ಕೂಡಲಸಂಗನ ಶರಣರ ಸನ್ನಿಧಿಯಲ್ಲಿ
ಅಸಜ್ಜನನಿದ್ದರೇನು ಸದ್ಭಕ್ತನಾಗಬಲ್ಲನೇ ?

061

ಓಡೆತ್ತ ಬಲ್ಲುದೋ ಅವಲಕ್ಕಿಯ ಸವಿಯ ?
ಕೋಡಗ ಬಲ್ಲುದೇ ಸೆಳೆಮಂಚದ ಸುಖವ ?
ಕಾಗೆ ನಂದನವನದೊಳಗಿದ್ದರೇನು,
ಕೋಗಿಲೆಯಾಗಬಲ್ಲುದೇ ?
ಕೊಳನ ತಡಿಯಲೊಂದು ಹೊರಸು ಕುಳಿತಿದ್ದರೇನು
ಕಳಹಂಸೆಯಾಗಬಲ್ಲುದೇ ಕೂಡಲಸಂಗಮದೇವ ?

062

ಎನಿಸು ಕಾಲ ಕಲ್ಲು ನೀರೊಳಗಿದ್ದರೇನು,
ನೆನೆದು ಮೃದುವಾಗಬಲ್ಲುದೆ ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ ?
ನಿಧಾನವ ಕಾಯ್ದಿದ್ದ ಬೆಂತರನ ವಿಧಿ ಎನಗಾಯಿತ್ತು
ಕಾಣಾ ಕೂಡಲಸಂಗಮದೇವ.

063

ಕೂಸುಳ್ಳ ಸೂಳೆ ಧನದಾಸೆಗೊತ್ತೆಗೊಂಡರೆ
ಕೂಸಿಂಗಿಲ್ಲ, ಬೊಜಗಂಗಿಲ್ಲ;
ಕೂಸನೊಮ್ಮೆ ಸಂತವಿಡುವಳು,
ಬೊಜಗನನೊಮ್ಮೆ ನೆರೆವಳು;
ಧನದಾಸೆ ಬಿಡದು ಕೂಡಲಸಂಗಮದೇವ.

064

ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ
ಮೆಚ್ಚುವನೆ ?
ತಾನು ತನ್ನಂತೆ!
ನುಡಿ ಎರಡಾದರೆ ಮೆಚ್ಚುವನೆ ?
ತಾನು ತನ್ನಂತೆ!
ನಡೆ ಎರಡಾದರೆ ಮೆಚ್ಚುವನೆ ?
ತಾನು ತನ್ನಂತೆ!
ಉಡುವಿನ ನಾಲಗೆಯಂತೆ ಎರಡಾದರೆ ಮೆಚ್ಚುವನೇ ?
ಕೂಡಲಸಂಗಮದೇವ ತಾನು ತನ್ನಂತೆ!

065

ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ
ಹಾರುವರ ಕಂಡರೆ ಹರಿನಾಮವೆಂಬಿರಯ್ಯ;
ಅವರವರ ಕಂಡರೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯ.
ಕೂಡಲಸಂಗಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ!

066

ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿಮಸಣಿಯ ಭಕ್ತೆ;
ಗಂಡ ಕೊಂಬುದು ಪಾದೋದಕಪ್ರಸಾದ,
ಹೆಂಡತಿ ಕೊಂಬುದು ಸುರೆಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವ.

067

ಹಾವಾಡಿಗನು, ಮೂಕೊರತಿಯು ತನ್ನ ಮಗನ ಮದುವೆಗೆ
ಶಕುನವ ನೋಡ ಹೋಗುವಾಗ,
ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು
ಶಕುನ ಹೊಲ್ಲವೆಂಬ ಚದುರನ ನೋಡಾ!
ತನ್ನ ಸತಿ ಮೂಕೊರತಿ, ತನ್ನ ಕೈಯಲು ಹಾವು!
ತಾನು ತನ್ನ ಭಿನ್ನವನರಿಯದೆ
ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವ!

068

ಅರ್ಥರೇಖೆಯಿದ್ದಲ್ಲಿ ಫಲವೇನು
ಆಯುಷ್ಯರೇಖೆಯಿಲ್ಲದನ್ನಕ ?
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು ?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು ?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು ?
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ಶಿವಪಥವನರಿಯದನ್ನಕ ?

069

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ,
ಇದ್ದರೇನೋ, ಶಿವಶಿವಾ, ಹೋದರೇನೋ!
ಕೂಡಲ ಸಂಗಮ ದೇವ, ಕೇಳಯ್ಯ,
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ!

070

ಹಾದರಕ್ಕೆ ಹೋದರೆ ಕಳ್ಳದಮ್ಮವಾಯಿತ್ತು!
ಹಾಳುಗೋಡೆಗೆ ಹೋದರೆ ಚೇಳೂರಿತ್ತು!
ಅಬ್ಬರವ ಕೇಳಿ ತಳವಾರನುಟ್ಟ ಸೀರೆಯ ಸುಲಿದ!
ನಾಚಿ ಹೋದರೆ, ಮನೆಯ ಗಂಡ ಬೆನ್ನ ಬಾರನೆತ್ತಿದ!
ಅರಸು ಕೂಡಲಸಂಗಮದೇವ ದಂಡವ ಕೊಂಡ!

071

ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ
ಕೊಳಗ ಬಳಲುವುದೇ ?
ನಡೆಯುತ್ತ ನಡೆಯುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ ?
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ
ಕೋಲು ಬಳಲುವುದೆ ?
ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ ?
ಕೂಡಲಸಂಗಮದೇವ, ಅರಸರಿಯದ ಬಿಟ್ಟಿಯೋಪಾದಿ!

072

ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳ್ಳಿರ್ದ ನಮ್ಮ ಮಹದೇವಸೆಟ್ಟಿ.
ಒಮ್ಮನವಾದರೆ ಒಡನೆ ನುಡಿವನು;
ಇಮ್ಮನವಾದರೆ ನುಡಿಯನು.
ಕಾಣಿಯ ಸೋಲ; ಅರ್ಧ ಕಾಣಿಯ ಗೆಲ್ಲ.
ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ.

073

ನಂಬರು, ನಚ್ಚರು; ಬರಿದೆ ಕರೆವರು;
ನಂಬಲರಿಯರೀ ಲೋಕದ ಮನುಜರು!
ನಂಬಿ ಕರೆದಡೆ, “ಓ” ಎನ್ನನೇ ಶಿವನು ?
ನಂಬದೆ, ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.

074

ಹುತ್ತವ ಬಡಿದರೆ ಉರಗ ಸಾವುದೆ
ಘೋರತಪವ ಮಾಡಿದರೇನು
ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ
ಕೂಡಲಸಂಗಮದೇವ ?

075

ಮೇರು ಗುಣವನರಸುವುದೇ ಕಾಗೆಯಲ್ಲಿ ?
ಪರುಷ ಗುಣವನರಸುವುದೇ ಕಬ್ಬುನದಲ್ಲಿ ?
ಸಾಧು ಗುಣವನರಸುವನೇ ಅವಗುಣಿಯಲ್ಲಿ ?
ಚಂದನ ಗುಣವನರಸುವುದೇ ತರುಗಳಲ್ಲಿ ?
ಸರ್ವಗುಣಸಂಪನ್ನ ಲಿಂಗವೇ,
ನೀನೆನ್ನಲ್ಲಿ ಅವಗುಣವನರಸುವುದೇ, ಕೂಡಲಸಂಗಮದೇವ!

076

ಸಾರ, ಸಜ್ಜನರ ಸಂಗವ ಮಾಡುವುದು!
ದೂರ, ದುರ್ಜನರ ಸಂಗ ಬೇಡವಯ್ಯ!
ಆವ ಹಾವಾದರೇನು ? ವಿಷವೊಂದೆ!
ಅಂಥವರ ಸಂಗ ನಮಗೆ ಬೇಡವಯ್ಯ.
ಅಂತರಂಗಶುದ್ಧವಿಲ್ಲದವರ ಸಂಗ
ಸಿಂಗಿ ಕಾಳಕೂಟ ವಿಷವೋ ಕೂಡಲಸಂಗಯ್ಯ.

077

ಹಸಿದು ಎಕ್ಕೆಯ ಕಾಯ ಮೆಲಬಹುದೆ ?
ನೀರಡಸಿ ವಿಷವನೀಂಟಬಹುದೆ ?
ಸುಣ್ಣದ, ತುಯ್ಯಲ ಬಣ್ಣವೊಂದೆ ಎಂದರೆ
ನಂಟುತನಕ್ಕೆ ಉಣ್ಣಬಹುದೆ ?
ಲಿಂಗಸಾರಾಯ ಸಜ್ಜನರಲ್ಲದವರ
ಕೂಡಲಸಂಗಮ ದೇವರೆಂತೊಲಿವ!

078

ಎಲವದ ಮರ ಹೂತು ಫಲವಾದ ತೆರನಂತೆ
ಸಿರಿಯಾದರೇನು ಶಿವಭಕ್ತಿಯಿಲ್ಲದನ್ನಕ ?
ಫಲವಾದರೇನು, ಹೇಳಾ, ಹಾವುಮೆಕ್ಕೆಯ ಕಾಯಿ ?
ಕುಲವಿಲ್ಲದ ರೂಹು ಎಲ್ಲಿದ್ದರೇನು ?
ಬಚ್ಚಲ ನೀರು ತಿಳಿದಲ್ಲಿ ಫಲವೇನು ?
ಅವಗುಣಿಗಳ ಮೆಚ್ಚ ಕೂಡಲಸಂಗಮದೇವ.

079

ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು!
ಜಗವೆಲ್ಲವ ಕಾಂಬ ಕಣ್ಣು
ತನ್ನ ಕೊಂಬ ಕೊಯಿಲೆಯ ಕಾಣಲರಿಯದು!
ಇದಿರ ಗುಣವ ಬಲ್ಲೆವೆಂಬರು
ತಮ್ಮ ಗುಣವ ತಾವರಿಯರು ಕೂಡಲಸಂಗಮದೇವ.

080

ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ.

081

ಏತ ತಲೆವಾಗಿದರೇನು ? ಗುರುಭಕ್ತನಾಗಬಲ್ಲುದೆ ?
ಇಕ್ಕುಳ ಕೈ ಮುಗಿದರೇನು ? ಭೃತ್ಯಾಚಾರಿಯಾಗಬಲ್ಲುದೆ ?
ಗಿಳಿಯೋದಿದರೇನು ? ಲಿಂಗವೇದಿಯಾಗಬಲ್ಲುದೆ ?
ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ
ಅನಂಗಸಂಗಿಗಳೆತ್ತ ಬಲ್ಲರು ?

082

ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ;
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣ!
ಚಿತ್ರದ ಕಬ್ಬು ಕಾಣಿರಣ್ಣ!
ಅಪ್ಪಿದರೆ ಸುಖವಿಲ್ಲ, ಮೆಲಿದರೆ ಸವಿಯಿಲ್ಲ;
ಕೂಡಲಸಂಗಮದೇವ, ನಿಜವಿಲ್ಲದವನ ಭಕ್ತಿಯಿಂತುಟು!

083

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು!
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ
ಹೋಯಿತ್ತು!
ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು.
ಕೊಂದವರುಳಿದರೆ ಕೂಡಲಸಂಗಮದೇವ ?

084

ಹಾವಿನ ಬಾಯಿ ಕಪ್ಪೆ ಹಸಿದು
ತಾ ಹಾರುವ ನೊಣಕಾಸೆ ಮಾಡುವಂತೆ,
ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು
ಮೇಲಿನ್ನೇಸು ಕಾಲ ಬದುಕುವನೋ ?!
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು
ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ.

085

ಹಾವಿನ ಬಾಯಿ ಕಪ್ಪೆ ಹಸಿದು
ತಾ ಹಾರುವ ನೊಣಕಾಸೆ ಮಾಡುವಂತೆ,
ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು
ಮೇಲಿನ್ನೇಸು ಕಾಲ ಬದುಕುವನೋ ?!
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು
ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ.

086

ಹಾವು ತಿಂದವರ ನುಡಿಸ ಬಹುದು!
ಗರ ಹೊಡೆದವರ ನುಡಿಸ ಬಹುದು!
ಸಿರಿಗರ ಹೊಡೆದವರ ನುಡಿಸ ಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.

087

ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ.
ದಾರಿಸಂಗಡ ಬೇಡ, ದೂರ ನುಡಿಯಲು ಬೇಡ.
ಕೂಡಲಸಂಗನ ಶರಣರಲ್ಲಿ ಅಚ್ಚಲಿಂಗೈಕ್ಯಂಗೆ
ತೊತ್ತಾಗಿಹುದು ಕರಲೇಸಯ್ಯ.

088

ದೂಷಕನಾವನೊಬ್ಬ ದೇಶವ ಕೊಟ್ಟರೆ,
ಆಸೆಮಾಡಿ ಅವನ ಹೊರೆಯಲಿರಬೇಡ.
ಮಾದಾರ ಶಿವಭಕ್ತನಾದರೆ
ಆತನ ಹೊರೆಯಲು ಇಪ್ಪುದು ಕರಲೇಸಯ್ಯ!
ಭೃತ್ಯನಾಗಿ, ತೊತ್ತಾಗಿಪ್ಪುದು ಕರಲೇಸಯ್ಯ!
ಕಾಡುಸೊಪ್ಪ ತಂದು ಓಡಿನಲ್ಲಿ ಹುರಿದಿಟ್ಟುಕೊಂಡು
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.

089

ಸಾರ ಸಜ್ಜನರ ಸಂಗವೇ ಲೇಸು ಕಂಡಯ್ಯ!
ದೂರ ದುರ್ಜನರ ಸಂಗವದು ಭಂಗವಯ್ಯ!
ಸಂಗವೆರಡುಂಟು-ಒಂದ ಬಿಡು, ಒಂದ ಹಿಡಿ
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣ.

090

ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ ?
ಲಿಂಗದೇವನ ಪೂಜಿಸಿ ಕುಲವನರಸುವರೆ,
ಅಯ್ಯಾ, ಕೂಡಲಸಂಗಮದೇವ
“ಭಕ್ತಕಾಯ ಮಮಕಾಯ” ವೆಂದನಾಗಿ ?

091

ಪರಷ ಮುಟ್ಟಿದ ಬಳಿಕ ಕಬ್ಬುನವಾಗದು ನೋಡಾ!
ಲಿಂಗ(ವ) ಮುಟ್ಟಿದ ಬಳಿಕ
ಕುಚಿತ್ತಾಚಾರವಾಗದು ನೋಡಾ
ಕೂಡಲಸಂಗನ ಶರಣರು ಅನ್ಯವನರಿಯರಾಗಿ.

092

ದೇವಲೋಕ ಮರ್ತ್ಯಲೋಕವೆಂಬುದು
ಬೇರೆ ಮತ್ತುಂಟೆ ? ಇಹಲೋಕದೊಳಗೇ ಮತ್ತನಂತಲೋಕ!
ಶಿವಲೋಕ ಶಿವಾಚಾರವಯ್ಯ,
ಶಿವಭಕ್ತನಿದ್ದ ಠಾವೇ ದೇವಲೋಕ,
ಭಕ್ತನಂಗಳವೇ ವಾರಣಾಸಿ,
ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ.

093

ಕಟ್ಟಿದಿರಲ್ಲಿ ಶಿವಭಕ್ತನ ಕಂಡು,
ದೃಷ್ಟಿಯಾರೆ ಮನಮುಟ್ಟಿ ನೋಡಿ ಶರಣೆಂದರೆ
ಹುಟ್ಟೇಳು ಜನ್ಮದ ಪಾಪ ಬಿಟ್ಟು ಹೋಹವು ನೋಡಾ!
ಮುಟ್ಟಿ ಚರಣಕ್ಕೆರಗಿದರೆ,
ತನು ಒಪ್ಪಿದಂತಿಹುದು
ಪರುಷ ಮುಟ್ಟಿದಂತೆ.
ಕರ್ತೃ ಕೂಡಲಸಂಗನ ಶರಣರ ಸಂಗವು!
ಮತ್ತೆ ಭವಮಾಲೆಯ ಹೊದ್ದಲೀಯದು ನೋಡಾ!

094

ಆರಾರ ಸಂಗವೇನೇನ ಮಾಡದಯ್ಯ!
ಕೀಡೆ ಕುಂಡಲಿಗನಾಗದೇನಯ್ಯ ?
ಚಂದನದ ಸನ್ನಿಧಿಯಲ್ಲಿ, ಪರಿಮಳ ತಾಗಿ
ಬೇವು-ಬೊಬ್ಬುಲಿ-ತರಿಯ ಗಂಧಂಗಳಾಗವೆ ?
ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಲ್ಲಿದ್ದು
ಕರ್ಮ ನಿರ್ಮಳವಾಗದಿಹುದೇ ?

095

ಹಾವಿನ ಡೊಂಕು ಹುತ್ತಕ್ಕೆ ಸಸಿನ.
ನದಿಯ ಡೊಂಕು ಸಮುದ್ರಕ್ಕೆ ಸಸಿನ.
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.

096

ಆಳಿಗೊಂಡಿಹರೆಂದು ಅಂಜಲದೇಕೆ ?
ನಾಸ್ತಿಕವಾಡಿಹರೆಂದು ನಾಚಲದೇಕೆ ?
ಆರಾದಡಾಗಲಿ ಶ್ರೀ ಮಹಾದೇವಂಗೆ ಶರಣೆನ್ನಿ.
ಏನೂ ಅರಿಯೆನೆಂದು ಮೋನಗೊಂಡಿರಬೇಡ
ಕೂಡಲಸಂಗಮದೇವರ ಮುಂದೆ ದಂ-ದಣ-ದತ್ತಣಯೆನ್ನಿ.

097

ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು!
ಮರ್ಮವರಿಯದ ಮಾಟ ಸಯಿದಾನದ ಕೇಡು!
ಬಂದ ಸಮಯೋಚಿತವನರಿಯದಿದ್ದರೆ
ನಿಂದಿರಲೊಲ್ಲ ಕೂಡಲಸಂಗಮದೇವ.

098

ಬಲ್ಲಿದರೊಡನೆ ಬವರವಾದರೆ
ಗೆಲಲುಂಟು ಸೋಲಲುಂಟು-
ಕಳನೊಳಗೆ ಭಾಷೆ ಪೂರಾಯವಯ್ಯ!
ನಮ್ಮ ಕೂಡಲಸಂಗನ ಶರಣರಿಗೆ
ಮಾಡಿ ಮಾಡಿ, ಧನ ಸವೆದು ಬಡವಾದರೆ
ಆ ಭಕ್ತನು ಲಿಂಗಕ್ಕೆ ಪೂಜೆಯಹನು.

099

ಗೀತವ ಬಲ್ಲಾತ ಜಾಣನಲ್ಲ.
ಮಾತ ಬಲ್ಲಾತ ಜಾಣನಲ್ಲ.
ಜಾಣನು ಜಾಣನು, ಆತ ಜಾಣನು;
ಲಿಂಗವ ನೆರೆ ನಂಬಿದಾತ ಆತ ಜಾಣನು!
ಜಂಗಮಕ್ಕೆ ಸವೆಸುವಾತ ಆತ ಜಾಣನು!
ಜವನ ಬಾಯಲು ಬಾಲವ ಕೊಯ್ದು
ಹೋದಾತ ಆತ ಜಾಣನು
ನಮ್ಮ ಕೂಡಲಸಂಗನ ಶರಣನು!

100

ಹಾವು-ಹದ್ದು-ಕಾಗೆ-ಗೂಗೆ ಅನಂತ ಕಾಲ ಬದುಕವೆ ?
ಬೇಡವೋ ಮಾನವ,
ಲೇಸೆನಿಸಿಕೊಂಡು ಬದುಕುವೋ, ಮಾನವ, ಶಿವಭಕ್ತನಾಗಿ!
“ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ
ಅಜಕಲ್ಪ ಸಹಸ್ರಂ ತು ಭಕ್ತಿಹೀನಂ ನ ಶಾಂಕರಿ” ಎಂದುದಾಗಿ
ನಮ್ಮ ಕೂಡಲಸಂಗಮದೇವರ ಭಕ್ತಿವಿಡಿದು
ಐದು ದಿನವಾದರೂ ಬದುಕಿದರೆ ಸಾಲದೆ ?!

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *