Kittel Ferdinand

ಫರ್ಡಿನೆಂಡ್ ಕಿಟೆಲ್

Kittel Ferdinand
ಕಿಟೆಲ್

ಫರ್ಡಿನೆಂಡ್ ಕಿಟೆಲ್ (ರೆವರೆಂಡ್ ಎಫ್ ಕಿಟ್ಟೆಲ್) (೦೭.೦೪.೧೮೩೨ – ೧೯.೧೨.೧೯೦೩): ವರೆಂಡ್ ಫರ್ಡಿನ್ಯಾಂಡ್ ಕಿಟೆಲ್ ರವರ ಆದ್ಯಕರ್ತವ್ಯ ಮತಪ್ರಚಾರವಾದಾಗ್ಯೂ, ತಮ್ಮ ಮಾನವೀಯ ಮೌಲ್ಯಗಳ ಗಣಿಯಾಗಿದ್ದರು. ಕಿಟೆಲ್ ರವರು, ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಯೂರೋಪಿಯನ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರಿಗೆ, ದೂರದ ಭಾರತದ, ಧಾರವಾಡದ ಪರಿಸರ, ನಿಸರ್ಗಸೌಂದರ್ಯ, ಅಲ್ಲಿನ ಮುಗ್ಧಜನರ ಭಾಷೆ, ಸರಳ ಆಚಾರ ವ್ಯವಹಾರ, ಉಡುಗೆ-ತೊಡುಗೆಗಳು ಬಹು ಮೆಚ್ಚುಗೆಯಾಗಿರಬೇಕು. ಕನ್ನಡ ಭಾಷೆಯನ್ನಂತೂ ಅವರು ತುಂಬಾ ಹಚ್ಚಿಕೊಂಡಿದ್ದರು. ಭಾರತದ ಜನತೆಗೆ ಮೊದಲು ವಿದೇಶೀಯರಂತೆ ತೋರಿದರೂ, ಅವರು ತಮ್ಮ ತಾಯ್ನಾಡಿಗೆ ವಾಪಸ್ ಹೋಗುವ ಹೊತ್ತಿಗೆ, ಅವರು ನಮ್ಮವರಲ್ಲಿ ಒಬ್ಬರಾಗಿಹೋಗಿದ್ದರು. ಇದಕ್ಕೆ ಕಾರಣ, ಕಿಟೆಲ್ಲರ ಅಪಾರ ಕನ್ನಡನಾಡಿನ ಭಾಷೆಯ ಬಗ್ಗೆ ಇದ್ದ ಅನುಭೂತಿ, ವಿಶ್ವಾಸ, ಪ್ರೀತಿ. ಕನ್ನಡ ನುಡಿಯ ಸಂವರ್ಧನೆಗೆ ಅವರು ಮಾಡಿದ ಕಾರ್ಯ, ಸೇವೆ ಅನನ್ಯ. ನಮ್ಮ ವರಕವಿ, ದ.ರಾ.ಬೇಂದ್ರೆಯವರ ಮಾತಿನಲ್ಲಿ ಹೇಳಬೇಕೆಂದರೆ, “ಕನ್ನಡಕೆ ಕನ್ನಡಿಯ ಹಿಡಿದು, ದುಡಿದವ ನೀನು,” ಎಂದಿದ್ದಾರೆ. ಇದಕ್ಕಿಂತ ಉತ್ತಮ ಮಾತು ಹೇಳಲು ಸಾಧ್ಯವಿಲ್ಲ.

ಜರ್ಮನಿಯ ಸಂಜಾತ. ಕನ್ನಡನುಡಿಗೆ ಸ್ಪೂರ್ತಿಕೊಟ್ಟಾತ

ಇವರು ಜನಿಸಿದ್ದು, ೧೮೩೨ ರಲ್ಲಿ.ಜರ್ಮನಿಯ ಈಶಾನ್ಯ ಸಾಗರದ ತೀರದಲ್ಲಿರುವ ಫ್ರೀಸ್‌ಲ್ಯಾಂಡ್ ನಲ್ಲಿ. ಇದು ಹ್ಯಾನೋವರ್ ಪ್ರಾಂತ್ಯದಲ್ಲಿದೆ. ತಂದೆ ಗಾಜ್ ಫ್ರೀಟ್, ಪಾದ್ರಿಯಾಗಿದ್ದರು. ತಾಯಿ ಟ್ಯುಡೋವ್ ಹೆಲೇನ್ ಹ್ಯೂಬರ್ಟ್. ಇವರ ೬ ಜನ ಮಕ್ಕಳಲ್ಲಿ ಕಿಟೆಲ್ ಹಿರಿಯವರು. ಇವರು ಇಂಡಿಯಾಕ್ಕೆ ಬಂದಾಗ, ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಇಂಗ್ಲೀಷ್ ಕಲಿತುಕೊಂಡಿದ್ದರು. ಕನ್ನಡವನ್ನು ಕಲಿಯಲು ಇವರಿಗೆ ಅಪಾರ ಆಸೆ.ಅವನ ವಿದ್ಯಪ್ರಗಥಿಯು ಮುಕ್ಯೊಧಯ್ಪಕರಿನ್ಧ “ನೆವೆರ್ ಲೆಸ್ಸ್ ಥನ್ ಗೂದ್” ಯಮ್ಬ ಹೊಗಲಿಕೆಗೆ ಪಥ್ರವಗೀಥು

ಬಾಲ್ಯ, ಮತ್ತು ಶಿಕ್ಷಣ

೧೮೪೧ ರಿಂದ ೧೮೪೯ ರವರೆಗೆ ಮಾಧ್ಯಮಿಕ ಶಿಕ್ಷಣವನ್ನು ಕಲಿತರು. ೧೮೪೯, ಆಗಸ್ಟ್, ೩೦ ಬಾಸೆಲ್ ಮಿಶನ್ ಸಂಸ್ಥೆಯ, ಮಿಶನರಿ ಶಿಕ್ಷಣಕ್ಕೆ ಕಿಟೆಲ್ಲರ ಪರವಾಗಿ ಅವರ ತಂದೆ, ಅರ್ಜಿ ಗುಜರಾಯಿಸಿದ್ದರು. ೧೮೫೦ ರಲ್ಲಿ ಮಿಶನರಿ ಕಾಲೇಜಿಗೆ ಸೇರಿದರು. ಬಾಸೆಲ್ ಮಿಶನ್ ನವರು, ೧೮೫೩ ರಲ್ಲಿ ಕಾಪ್ ಮನ್, ಮತ್ತು ಕಿಟೆಲ್ ರನ್ನು ದಕ್ಷಿಣಇಂಡಿಯಾದ ಧಾರವಾಡ ಪಟ್ಟಣಕ್ಕೆ ಮತಪ್ರಚಾರಕ್ಕಾಗಿ ಕಳಿಸಿಕೊಟ್ಟರು. ಆಗ, ರೆ.ವೀಗಲ್ ಎಂಬ ಬ್ರಿಟಿಶ್ ಅಧಿಕಾರಿ ಧಾರವಾಡದಲ್ಲಿದ್ದರು. ಅವರು ಕನ್ನಡ ಸಾಹಿತ್ಯಾಭ್ಯಾಸವನ್ನು ಮಾಡಿ ಆ ವಲಯದಲ್ಲಿ ಹೆಸರುವಾಸಿಯಾಗಿದ್ದರು. ಕಿಟೆಲ್ ರಿಗೆ ಅವರನ್ನು ಭೇಟಿಮಾಡುವ ಕುತೂಹಲ. ಆದರೆ ಅವರ ಬದಲು ಇನ್ನೊಬ್ಬ ಅಧಿಕಾರಿ, ಕೆ. ಮೋರಿಕ್ ರ ಪರಿಚಯವಾಯಿತು. ಮೊದಲು ಧಾರವಾಡದ ಸುತ್ತಮುತ್ತಲಿನ, ದೇಸಿ ಭಾಶೆಗಳನ್ನು ಅರಿಯಲು ಕಿಟೆಲ್, ಕಾಲುನಡಿಗೆಯಲ್ಲೇ ಹಳ್ಳಿಗಾಡುಗಳಲ್ಲಿ, ಗುಡ್ಡಗಾಡುಗಳಲ್ಲಿ, ನಿರ್ಗಮ ಕಾಡು-ಮೇಡುಗಳಲ್ಲಿ ಊರೂರು ಅಲೆದು, ಆ ಪ್ರದೇಶಗಳ ಆಡುಭಾಷೆಯ ಪರಿಚಯಮಾಡಿಕೊಂಡರು. ಹೀಗೆ ಶ್ರಮಪಟ್ಟು ಕನ್ನಡವನ್ನು ಕಲಿತ ಕೇವಲ ೧೩ ವರ್ಷಗಳಲ್ಲೇ, ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಗ್ರಂಥ ಪ್ರಕಟಣೆ ಮಾಡುವ ಸಾಹಸ ಮಾಡಿದರು. ಕನ್ನಡಭಾಷೆಯ ಜೊತೆಜೊತೆಗೆ, ಸಂಸ್ಕೃತವನ್ನೂ ಕಲಿತರು. ೧೮೬೨ ರಲ್ಲಿ ಬೈಬಲ್ಲಿನ ಹೊಸಒಡಂಬಡಿಕೆಯನ್ನು ಕನ್ನಡಕ್ಕೆ ತಂದರು. ೧೮೬೩ ರಲ್ಲಿ, ಕಥಾಮಾಲಿಕೆ ಪ್ರಸಿದ್ಧಿಪಡಿಸಿದರು. ೧೮೬೫ ರಲ್ಲಿ,ಸಂಣ ಕರ್ನಾಟಕ ಕಾವ್ಯಮಾಲೆ ಪದ್ಯಸಂಗ್ರಹ, ಬೆಳಕಿಗೆ ಬಂತು. ಇದೇ ಮುಂದೆ, ಕರ್ನಾಟಕ ಕಾವ್ಯಮಾಲೆ ಎಂದು ಪ್ರಕಟಗೊಂಡು ಹಲವಾರು ಆವೃತ್ತಿಗಳ ಬೆಳಕು ಕಂಡಿತು. ವಿಶೇಷವೆಂದರೆ, ಈ ಕೃತಿ ಮುನ್ನುಡಿ ಮತ್ತು ಸಹಾಯಟಿಪ್ಪಣಿಗಳನ್ನು ಒಳಗೊಂಡಿದೆ.

ಕನ್ನಡ ಪತ್ರಿಕೆಯ ಸಂಪಾದನೆ

ಆಗಿನ ಬೊಂಬಾಯಿಪ್ರಾಂತ್ಯದಿಂದ ಕನ್ನಡಿಗರ ಪರವಾಗಿ, ” ವಿಚಿತ್ರವರ್ತಮಾನ ಸಂಗ್ರಹ” ವೆಂಬ ಪತ್ರಿಕೆ, ಕನ್ನಡ ಮತ್ತು ಆಂಗ್ಲಭಾಷೆಗಳ್ಲಿ ಪ್ರಕಟವಾಗುತ್ತಿತ್ತು. (ತಿಂಗಳಿಗೆ ೨ ಬಾರಿ) ಈ ಪತ್ರಿಕೆಯ ಸಂಪಾದನೆಯನ್ನು ೧೮೬೨ ರಲ್ಲಿ, ಕಿಟೆಲ್ಲರೂ, ೧೮೬೩ ರಲ್ಲಿ ಕ್ರಮವಾಗಿ, ಜೆ. ಮ್ಯಾಕ್ ರವರೂ ವಹಿಸಿಕೊಂಡು ಕೆಲಸಮಾಡಿದರು. ೧೮೬೪ ರಲ್ಲಿ ಕನ್ನಡ ಪಾಠಗಳ ೩ ನೆಯ ಪುಸ್ತಕವನ್ನು ಹೊರತಂದರು. ಅದರಲ್ಲಿ ಇಂಗ್ಲೆಂಡ್ ದೇಶದ ಚರಿತ್ರೆಯ ಭಾಗವನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನಮಾಡಿದರು. ಧಾರವಾಡದಲ್ಲಿ ಕನ್ನಡಶಾಲೆಯ ಸ್ಥಾಪನೆ ೧೮೩೧ ರಲ್ಲೇ ಆಗಿದ್ದರೂ, ಇಂಗ್ಲಿಷ್ ಶಾಲೆಯ ಸ್ಥಾಪನೆ ಮೊತ್ತಮೊದಲು, ಬಾಸೆಲ್ ಮಿಶನ್ ಸಂಸ್ಥೆಯ ಸಹಕಾರದಿಂದ ಆಯಿತು. ಕನ್ನಡ ಭಾಷೆಯಬಗ್ಗೆ ಒಲವಿದ್ದ ಬ್ರಿಟಿಷ್ ಅಧಿಕಾರಿಗಳಾದ, ರಸೆಲ್, ಫ್ಲೀಟ್, ಮತ್ತು ಬಿ. ಎಲ್. ರೈಸ್ ಮುಂತಾದ ಪ್ರಮುಖರು ಕಿಟೆಲ್ಲರ ಭಾಷಾ ಪ್ರಸಾರದಲ್ಲಿ ನೆರವಾದರು.

ಕಿಟೆಲ್ಲರ ವೈವಾಹಿಕ ಜೀವನ

ಮಂಗಳೂರಿನ ಪಾಲಿನ್ ಐತ್, ಎಂಬ ಹುಡುಗಿಯನ್ನು ಮದುವೆಯಾಗಿ ೨ ಮಕ್ಕಳನ್ನು ಪಡೆದರು. ಆದರೆ ಕೇವಲ ೪ ವರ್ಷದ ವೈವಾಹಿಕಜೀವನದ ಅಂತ್ಯದಲ್ಲೇ ಆಕೆ ಮೃತರಾದರು. ಎರಡನೇ ಮದುವೆ ಪಾಲಿನ್ ಐತ್ ರ ತಂಗಿ ಜ್ಯೂಲಿಯವರ ಜೊತೆಗೆ ಜರ್ಮನಿಯಲ್ಲಿ ಜರುಗಿತು. ಇವರ ವೈವಾಹಿಕ ಜೀವನದಲ್ಲಿ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣುಮಗುವಿನ ಸೇರುವಿಕೆಯಾಯಿತು.

ಕಿಟೆಲ್ಲರ ಜೀವನದ ಮಹತ್ವದ ದಿನಗಳು, ೧೮೭೨ ರ ನಂತರ

೧೮೬೭ ರಲ್ಲಿ, ತಾಯ್ನಾಡಿನಿಂದ ಮರಳಿ ಧಾರವಾಡಕ್ಕೆ ಆಗಮನ. ೧೮೭೨ ರಲ್ಲಿ, ಇಂಡಿಯನ್ ಅಂಟಿಕ್ವಿಟಿ, ಎಂಬ ಪತ್ರಿಕೆ ಪ್ರಾರಂಭಿಸಿದರು. ಈ ಪತ್ರಿಕೆಯಲ್ಲಿ ಕನ್ನಡದ ಬಗ್ಗೆ, ಆಂಗ್ಲ ಭಾಷೆಯಲ್ಲಿ ಬರೆದ ಲೇಖನಗಳ ಸಂಕಲನ. ಕೇಶಿರಾಜನು ೧೮೭೨ ರಲ್ಲಿ ಬರೆದ ಶಬ್ದಮಣಿದರ್ಪಣ ವೆಂಬ ಗ್ರಂಥದ ಸಂಪಾದನೆ, ಮತ್ತು ಪುನರ್‌ಪ್ರಕಟಣೆ ಯನ್ನು ಮಾಡಿದರು. ಕಿಟೆಲರು ಕೇಶಿರಾಜನ ಬಗ್ಗೆ ಬರೆದ ಪ್ರಥಮ ಪರಿಷ್ಕೃತ ಲೇಖನ ಇದರಲ್ಲಿದೆ. ಈ ಪುಸ್ತಕವನ್ನು ಆಗಲೇ ಜೆ. ಗ್ಯಾರೆಟ್, ಎಂಬುವರು ೧೮೬೮ ರಲ್ಲಿ ಬರೆದು ಪ್ರಕಟಿಸಿದ್ದರು. ರೆ.ಎಫ್. ಕಿಟೆಲ್ಲರು ಪಂಚತಂತ್ರದ ಬಗ್ಗೆಯೂ ಬರೆದಿದ್ದಾರೆ. ಕೇವಲ ಬರವಣಿಗೆಯಲ್ಲದೆ, ಮನುಕುಲದ ಎಲ್ಲಾ ಸೇವಾಕ್ಷೇತ್ರಗಳಲ್ಲೂ ಅವರು ಮುಂದಿದ್ದರು.

ಕನ್ನಡ-ಇಂಗ್ಲೀಷ್ ನಿಘಂಟಿನ ರಚನೆ

ಕಿಟೆಲ್ಲರು ವ್ಯಾಕರಣ ಮತ್ತು ಛಂದಸ್ಸಿಗೆ ಒತ್ತು ಕೊಟ್ಟಿದ್ದರು. ಕಿಟೆಲ್ಲರು ಎಂದೆಂದಿಗೂ ಅವಿಸ್ಮರಣೀಯರಾಗಿರುವುದು ಅವರ ಕನ್ನಡ- ಇಂಗ್ಲೀಷ್ ನಿಘಂಟುವಿನಿಂದ ! ಅದಕ್ಕೆ ಮುನ್ನವೇ ರೀವ್ ಮತ್ತು ಗಿಲ್‌ ಕ್ರಿಸ್ಟ್ -ಬೇರೆ-ಬೇರೆಯಾಗಿಯೇ ಕನ್ನಡ- ಇಂಗ್ಲಿಷ್ ಶಬ್ದಕೋಶಗಳ ರಚನೆಮಾಡಿದ್ದರು. ಆದರೆ, ಪಾಂಡಿತ್ಯಪೂರ್ಣ ಬರಹಕ್ಕೆ ಕಿಟೆಲ್ ಹೆಸರುವಾಸಿಯಾಗಿದ್ದರು. ೧೮೭೨ ರಲ್ಲಿ ಸೂಕ್ಷ್ಮವಾಗಿ ಅದರ ರೂಪ-ರೇಷೆಗಳನ್ನು ತಯಾರಿಸಿದರು. ತಮ್ಮ ಅನವರತ ಅಭ್ಯಾಸ, ಪರಿಶ್ರಮಗಳಿಂದ ಮುಂದಿನ ೨೦ ವರ್ಷಗಳಲ್ಲಿ, ಅಂದರೆ, ೧೮೯೨ ರಲ್ಲಿ ಕನ್ನಡ ನಿಘಂಟನ್ನು ಪೂರ್ಣಗೊಳಿಸಿ ೭೦,೦೦೦ ಪದಗಳನ್ನೊಳಗೊಂಡ ಹಸ್ತಪ್ರತಿಯನ್ನು ಬಾಸೆಲ್ ಮಿಶನ್ ಗೆ ಒಪ್ಪಿಸಿದರು. ಕನ್ನಡಭಾಷೆಯನ್ನು ಅರಿಯಲು ಪ್ರಯತ್ನಿಸುತ್ತಿದ್ದ ಬ್ರಿಟಿಷರಿಗೆ ಈ ಪ್ರಯತ್ನ ಬಹಳವಾಗಿ ಹಿಡಿಸಿತು.೧೮೯೪ರಲ್ಲಿ ಈ ನಿಘಂಟನ್ನು ಮದರಾಸು ವಿಶ್ವವಿದ್ಯಾಲಯ ಪ್ರಕಟಿಸಿತು. ಸರ್ ವಾಲ್ಟರ್ ಎಲಿಯಟ್ ಎಂಬ ಅಧಿಕಾರಿ, ಹಣದ ಸಹಾಯಕ್ಕೆ ಶಿಫಾರಸು ಮಾಡುವುದಾಗಿ ಆಶ್ವಾಸನೆ ಕೊಟ್ಟನು. ಆ ಸಮಯದಲ್ಲಿ ನಡೆದ ಯುದ್ಧದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮನವರು, ಎಲಿಯಟ್ ರವರನ್ನು ಸೆರೆಹಿಡಿದು, ಕಾರಾಗೃಹದಲ್ಲಿಟ್ಟರು. ಜೈಲಿನಿಂದ ಬಿಡುಗಡೆಯಾದಮೇಲೆ, ಅವರು ಧಾರವಾಡದ ಸಹಾಯಕ ಕಲೆಕ್ಟರ್ ಆದರು.

ನಾಗವರ್ಮನ ಛಂದೋಂಬುಧಿ ಕಥಾ ಸಂಗ್ರಹ

ಕನ್ನಡಕಾವ್ಯದ ಶೈಕ್ಷಣಿಕ ಪುನರ್ರಚನೆಯ ಪ್ರಯತ್ನ ಕೈಗೊಳ್ಳಲಾಯಿತು. ೧೪ ಹಸ್ತಪ್ರತಿಗಳ ಸಹಾಯದಿಂದ ನಾಗವರ್ಮನ, ಛಂದೋಂಬುಧಿ ಸಂಗ್ರಹ ೧೮೭೫ ರಲ್ಲಿ ಇದು ಅತ್ಯಂತ ಮಹತ್ವದ ಬೆಳವಣಿಗೆ. ಅವರು ಗದಗ, ಧಾರವಾಡ, ಮೈಸೂರು, ಕೊಡಗು, ಮಡಕೇರಿಗಳಲ್ಲಿ ಸುತ್ತಿ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಇದಕ್ಕೆ ಬಿ. ಎಲ್.ರೈಸ್ ಮತ್ತು ತಿರುಮಲೆ ಶಾಮಣ್ಣನವರ ಸಹಾಯವೂ ಸಿಕ್ಕಿತು. ೧೮೨೪ ರಲ್ಲಿ ತಯಾರುಮಾಡಿದ ಕೆ. ವಿಲಿಯಮ್ ರೀವ್ ರವರ ಕನ್ನಡ ಶಬ್ದಕೋಶದಲ್ಲಿ ದೋಷಗಳು ಇದ್ದವು. ೧೮೬೮ ರಲ್ಲಿ ಧಾರವಾಡದ ಫಾ. ಜಿಗ್ಲರ್, ಕೂಡ ಅವರ ಶಬ್ದಕೋಶವನ್ನು ಮಂಡಿಸಿದ್ದರು. ೧೮೭೭ ರಲ್ಲಿ ಫ. ಕಿಟ್ಟೆಲರು ಜರ್ಮನಿಗೆ ಹೋದರು; ೧೮೯೨ ರಲ್ಲಿ ಮತ್ತೆ ಸಿದ್ಧ. ಆಗಲೇ ಈ ಮುತ್ಸದ್ಧಿಗೆ ೬೦ ವರ್ಷ. ಅವರು ಜರ್ಮನಿಗೆ ಹೋದರು. ಅಲ್ಲಿ ಟ್ಯುಬಿಂಗನ್ ವಿಶ್ವ ವಿದ್ಯಾಲಯದ ಬಳಿ ೧೮೯೩ ರಲ್ಲಿ ಮನೆಕಟ್ಟಿಸಿಕೊಂಡರು.

ಪ್ರಶಸ್ತಿ ಸನ್ಮಾನಗಳು

ಕಿಟ್ಟೆಲರಿಗಿದ್ದ ಕನ್ನಡ – ಇಂಗ್ಲಿಷ್ ಜ್ಞಾನ, ಪಾಂಡಿತ್ಯವನ್ನು ಗಮನಿಸಿದ ಜರ್ಮನಿಯ ಟ್ಯುಬಿಂಗನ್ ವಿಶ್ವ ವಿದ್ಯಾಲಯ, ಜೂನ್, ೬, ೧೮೯೬ ರಲ್ಲಿ ಅವರಿಗೆ “ಡಾಕ್ಟರೇಟ್ ” ಕೊಟ್ಟು ಆದರಿಸಿತು. ಕನ್ನಡ ಕೃತಿಗೆ ಹೊರದೇಶದಲ್ಲಿ ದೊರಕಿದ ಮೊದಲ ಗೌರವ ಇದು.

ಆಗ ಧಾರವಾಡದ ಜನತೆ ಎಚ್ಚೆತ್ತು, ಕರ್ನಾಟಕ ವಿದ್ಯಾವರ್ಧಕ ಸಂಘಸಂಸ್ಥೆ ಯ ವತಿಯಿಂದ ಗೌರವ [೧೮೯೦] ಸದಸ್ಯತ್ವವನ್ನು ಕೊಟ್ಟು ಆದರಿಸಿತು. ೧೯೦೩ ರಲ್ಲಿ, ರೆವರೆಂಡ್ ಎಫ್.ಕಿಟೆಲ್ ತಮ್ಮ ತಾಯ್ನಾಡಿನಲ್ಲೆ ದೈವಾಧೀನರಾದರು. ಕನ್ನಡ ಭಾಷೆಯನ್ನು ಬೆಳೆಸಲು ಒಬ್ಬ ವಿದೇಶಿ ಪಾದ್ರಿ ಮಾಡಿದ ಸಾಧನೆ, ಒಂದು ಅಪೂರ್ವ ಸಂಗತಿಯಾಗಿದೆ.

ಮರಣ ಶತಮಾನೋತ್ಸವ ಆಚರಣೆ

೨೦೦೩ ರಲ್ಲಿ ಅವರ ಮರಣಶತಮಾನೋತ್ಸವ ದಿನವನ್ನು ಜರ್ಮನಿ ಮತ್ತು ಕರ್ನಾಟಕದಲ್ಲಿ ಆಚರಿಸಲಾಯಿತು. ಕಿಟೆಲ್ಲರ ಕನ್ನಡಭಾಷೆಯ ಪ್ರೇಮ ಮತ್ತು ಅದನ್ನು ಕಾರ್ಯಗತಗೊಳಿಸಲು ಜೀವನವಿಡೀ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟರು. ಆ ದಿನ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೆ. ಕಿಟೆಲ್ ರವರ ಕನ್ನಡ ಭಾಷೆಗೆ ಕೊಟ್ಟ ಸಂಪತ್ತುಗಳನ್ನು ಮನಸಾರೆ ನೆನೆಯಲಾಯಿತು. ಇಂದು ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಮೇಯೋಹಾಲ್ ಬಳಿ, ರೆ.ಕಿಟೆಲ್ ರವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅದೂ ಅಲ್ಲದೆ, ಬೆಂಗಳೂರಿನ ಆಸ್ಟಿನ್ ಟೌನ್ ಪ್ರದೇಶವನ್ನು “ರೆವರೆಂಡ್ ಕಿಟೆಲ್ ನಗರ” ವೆಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಈ ಮಹಾನುಭಾವರ ನೆನಪಿಗಾಗಿ ಧಾರವಾಡದಲ್ಲಿ ಕಿಟೆಲ್ ಕಾಲೇಜು ಸ್ಥಾಪನೆಯಾಗಿದೆ. ‘ಇವು ಕರ್ನಾಟಕದ ಜನತೆ, ಕಿಟೆಲ್ ರವರ ಜ್ಞಾಪಕಾರ್ಥವಾಗಿ ಅರ್ಪಿಸಿದ ಅನುಪಮ ಶ್ರದ್ಧಾಂಜಲಿಗಳು’

ಕಿಟೆಲ್ ವಿರಚಿತ “ಕಾವ್ಯಮಾಲೆ” ಯಿಂದ ಆಯ್ದ ಪದ್ಯಗಳು

೧. ನಾಂದಿ ಪದ್ಯ
ಶ್ರೀ ಜನಾರ್ಚಿತ ಸತ್ಯಸಾಕ್ಷಿಯೆ
ಭೂಜನೈಕೊ ಗುರುವೆ, ದೇವಜ
ರಾಜಿಪವನೀ ರವಿಯೆ, ಸುಪಥವೆ, ಜೀವದಧಿಪತಿಯೆ
ತೇಜದುದಯವೇ, ದೇವಕಾಂತಿಯೆ
ಮೂಜಗನ್ನಾಥೇಸೊ, ನಿನ್ಮುಖ
ಮಾಜಿಕೊಳ್ಳದೆ, ಮೂಡು ಭಕ್ತರ ಹೃದಯಕಮಲದೊಳು

೨.ಸಮುದ್ರದಲ್ಲಿ ಬಿರುಗಾಳಿ ಬೀಸಿದಾಗ
ಒಂದು ದಿನದಲ್ಲೇಸು ತನ್ನೊಡ
ಬಂದ ಶಿಷ್ಯರ ಸಹಿತ ಹಡಗವ
ನೆಂದಿನಂದದಿಯೇರಿ ಹೋಗಲಕಾಸಮಯದೊಳಗೇ
ಸುಂದರಾನಿಲ ಶಾಂತಿಯಿದ್ದೆಡೆ
ಮುಂದಘೋರದ ಕಂಪವೇಳಲ್
ಕಂದದಿಂದಲಿ ನಿದ್ದೆ ಮಾಡುತಲೇಸು ಮಲಗಿಹನೂ

ಜ್ಯೋತಿ -ಮಂಡಲವಡಗಿ ಬಿರ್ರನೆ
ವಾತ ಬೀಸಲು ಕಡಲಿನಲ್ಲಲೆ
ಘಾತವಾಗುತ ಥೋರಥೋರದ ತೆರೆಗಳುಕ್ಕುತಲೆ
ಘಾತ ಪೊದಗುವ ಹಾಗೆ ಹಡಗವ
ಜಾತಕಾತರದಲೆಗಳದರಿಸ-
ಲಾತನಡಿಗಡೆ ಶಿಷ್ಯರೋಡುತ ಬಂದು ಕೂಗಿದರೂ

ಒಡೆಯ ಈ ಪರಿ ತೆರೆಯು ಹಡಗವ
ಹೊಡೆಯೆ ಚಿಂತೆಯು ನಿಂಗೆ ಹತ್ತದೆ
ಯೊಡೆದು ಹೋದೀತೀಗ ಯೆಲ್ಲರು ನಶಿಸಿಯೇವೆನ್ನೇ
ಮಡಿವ ಭಯದವರನ್ನು ತನ್ನಯ
ದಡಿಯಲೆಚ್ಚತ್ತಿಕ್ಷಿಸೇಸುವು
ನುಡಿದ ಪವನವ ಕಡಲ ಬೆದರಿಸಿ ಸುಮ್ಮನಿರಿಸಿದನೂ

ಶಾಂತಿಯಾಯಿತು ಘಾಳಿ ನಿಂತುವಿ
ಕಾಂತಿ ಪಸರಿಸಿತೆಳೆಯ ಬಿಸಿಲಿಂ
ಕ್ರಾಂತಿ ಕರ್ತನು ಬಳಿಕ ಶಿಷ್ಯರಿಗೊರೆದನಿಂತೆಂದೂ
ಭ್ರಾಂತರಾದಿರಿ ಹೇಡಿಗಳೆ ಯಾ
ಕಾಂತುಕೊಳ್ಳದೆ ನನ್ನ ಶಕ್ತಿ
ಕ್ಷಾಂತಿ ಮಾಡುವದೆಷ್ಟೊ ಸತ್ಯಾವೆ ನಿಮ್ಮಪನಂಬಿಕೆಯಾ

ಪಾಪಸಾಗರ ದಾಟಿ ಸಗ್ಗಕೆ
ಪೋಪ ಹಡಗವನೇಸುವೊಡೆಯನು
ಕಾಪು ಕಾಯ್ವುದು; ಕಾಯದಿದ್ದರೆ ಕೇಳಿರಾಳುಗಳೇ
ದೀಪವಿಲ್ಲದ ಗಾಢದಿರುಳಲಿ
ಶಾಪದಲೆಗಳು ಹೊಡೆದು ಬಡೆಯಲು
ತಾಪದಿಂ ನೀವಲೆಗಳೊಳ್ ಮುಳುಮುಳುಗಿ ಹೋಗುವಿರಿ.

೩.ಯೇಸುಕ್ರಿಸ್ತನ ಬಂಧನ
ನುಡಿಯಲೆಂತು ದಯೆಯ ಪತಿಯು
ತಡೆಯದಖಿಲ ಕಳ್ಳರೆದ್ದು
ಹಿಡಿದರವನ ಶುಚಿ ಕರದಿ
ಯಡನೆ ಯಡನೇ ಬಂಧಿಸೀದರು

ಒಡನೇ ಪೇತ್ರನೆಂಬ ಶಿಷ್ಯ
ತಡೆಯಲಾರ -ದೊರೆಯೊಳಿಂದ
ಖಡುಗ ಹಿಡಿದು ಪೆಟ್ಟು ಹೊಡೆಯೆ
ಎಡಿದು ಹರಿಯಿತೊಂದು ಕಿವಿಯು

ಉಗುಳು ನೆತ್ತರವುಳ್ಳ ಕ್ರಿಸ್ತನ
ಜಗುಲಿಯಲ್ನಿಲಿಸಧಿಪನೆಂದನು
ಮಿಗಿಲು ಬಾಧಿಸಿ ತಪ್ಪು ಸಿಗದೀ ನರನ ದೃಷ್ಟಿಸಿರಿ
ಜಗದ ಕರ್ತಗೆ ಮುಳ್ಳುಮುಕುಟವು
ರಗುತ ಬಣ್ಣದ್ದಂಗಿಯಿದ್ದುದು
ಮಗಳಿಯಧಿಪನು ನೋಡಿರೆಂಥಾ ನರನೆಯೆಂದೊರೆದಾ

೪.ಯೇಸುವನ್ನು ವಧಾಸ್ಥಾನಕ್ಕೆ ಒಯ್ಯುವಾಗ
ವೈದರಾತನ ದಂಡಿನಾಳ್ಗಳು
ಹೊಯಿದರಾತನ ಬಾರು ಹಗ್ಗದಿ
ಗೈದರಾತಗೆ ಹಾಸ್ಯ, ರಾಜನ ಸೋಗ ತೊಡಿಸುತಲೆ
ಕೊಯ್ದರಾತನ ತಲೆಯ ಮುಳ್ಳಿಂ
ಬೈಯ್ದರಾತನ ರಾಜ ಎನುತಲಿ
ಕೈದುವೆನುತಲೆ ಕೊಟ್ಟ ಬೆತ್ತದಿ ಹೊಡೆದರಾತನಿಗೆ

ನರರೆ ಕೇಳಿರಿ, ದೇವರಾಜ್ಯದ
ಮರುಮ ದೇವಜ ತಾನೆಯೊರೆದುದ
ಮರೆಯದಿರ್ರೀ ರಾಜ್ಯಗಡಿಯೋಳ್ ಶೇರಬೇಕೆಂದೂ
ಅರಸಿಕೊಳ್ವರೆ ಶ್ರೇಷ್ಠ ಮುತ್ತನು
ಧರೆಯ ವರ್ತಕ ಜನರಲೊಬ್ಬನು
ಹೊರಟುಹೋದನು ದಿಕ್ಕುದಿಕ್ಕಿಗೆ ಬೇಸರಾಗದಲೇ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.4 ( 4 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *