ಪ್ರೊ. ಟಿ. ಎಸ್. ನಾಗರಾಜಶೆಟ್ಟಿ (೧೬.೦೪.೧೯೫೩): ಮಕ್ಕಳ ಮನಸ್ಸನ್ನು ಮುಟ್ಟುವಂತೆ ಮನರಂಜನೆ, ನೀತಿಯನ್ನು ಕತೆ ಕವನಗಳ ಮೂಲಕ ಹೇಳುತ್ತಾ, ಲಯಬದ್ಧವಾಗಿ ಹಾಡಿ ಕುಣಿದು, ಹೂವಿನಂತೆ ಅರಳಿ ಸಂತೋಷಿಸುವಂತಹ ಮಕ್ಕಳ ಸಾಹಿತ್ಯ ರಚನೆಯಲ್ಲಿ ಅಗ್ರಗಣ್ಯರೆನಿಸಿದ್ದು ಪಂಜೆ, ರಾಜರತ್ನಂ, ದೇವುಡು, ಹೊಯ್ಸಳ, ಸಿಸು ಸಂಗಮೇಶ, ಈಶ್ವರ ಚಂದ್ರ ಚಿಂತಾಮಣಿ ಮುಂತಾದವರುಗಳ ಹಾದಿಯಲ್ಲಿ ಸಾಗಿರುವ ನಾಗರಾಜಶೆಟ್ಟರು ಹುಟ್ಟಿದ್ದು ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ. ತಂದೆ ಶ್ರೀರಾಮಯ್ಯ, ತಾಯಿ ವನಲಕ್ಷಮ್ಮ.
ಚಾಕವೇಲುವಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಪ್ರೌಢಶಾಲೆಗೆ ಸೇರಿದ್ದು ಬೆಂಗಳೂರಿನ ರಾಷ್ಟ್ರೀಯ ಪ್ರೌಢಶಾಲೆ. ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ.
ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತರು.
ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದ ಗೀಳು ಹತ್ತಿಸಿದವರು ಅಧ್ಯಾಪಕಿಯಾಗಿದ್ದ ಟಿ. ಎಸ್. ಸುಬ್ಬಲಕ್ಷ್ಮಿಯವರು. ಅವರು ಭೋಗೋಳ ಶಾಸ್ತ್ರದ ಅಧ್ಯಾಪಕಿಯಾಗಿದ್ದರೂ ವಾಲ್ ಮ್ಯಾಗಜಿನ್ ಕಮಿಟಿಯಲ್ಲಿದ್ದು , ಪ್ರಾರ್ಥನೆಯ ನಂತರ ಮಹಡಿ ಹತ್ತಿ ತರಗತಿಗೆ ಹೋಗುವ ಹಾದಿಯಲ್ಲಿ ಬೋರ್ಡಿಗೆ ಸಿಕ್ಕಿಸಿದ್ದ ಡ್ರಾಯಿಂಗ್ ಶೀಟಿನಲ್ಲಿ ಅಂದಿನ ದಿನವಿಶೇಷಕ್ಕೆ ಸರಿಯಾಗಿ ಚಿತ್ರ ಬಿಡಿಸಿ ಸಾಹಿತ್ಯ ರಚಿಸಬೇಕಿತ್ತು. ಈ ಕೆಲಸದಲ್ಲಿ ನಾಗರಾಜಶೆಟ್ಟರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ರಚಿಸುತ್ತಿದ್ದ ಸಾಹಿತ್ಯಕ್ಕೆ ಅಧ್ಯಾಪಕಿ ಸುಬ್ಬುಲಕ್ಷ್ಮಿಯವರು ಪ್ರೋತ್ಸಾಹ ನೀಡಿದ್ದು ಇವರಿಗೆ ಸಾಹಿತ್ಯದಲ್ಲಿ ಸಾಧನೆ ಮಾಡಲು ಭದ್ರ ಬುನಾದಿಯನ್ನೊದಗಿಸಿತು.
ಹೀಗೆ ಕವನಗಳನ್ನು ಬರೆಯತೊಡಗಿದ್ದು ಬರೆದ ಮೊದಲ ಕವನ ‘ಮೇಕೆ ಮರಿ’ ಯು ಗೋಕುಲ ವಾರಪತ್ರಿಕೆಯಲ್ಲಿ ಪ್ರಕಟಗೊಂಡನಂತರ ಕವನ ಬರೆಯುವ ಹುಚ್ಚಿಗೆ ಒಳಗಾದರು.
ನಂತರ ಸಣ್ಣಕತೆಗಳ ಕ್ಷೇತ್ರವನ್ನು ಪ್ರವೇಶಿಸಿ ಸಾಮಾಜಿಕ ಹಾಗೂ ಬಂಡಾಯ ನೆಲೆಯ ಹಲವಾರು ಕತೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡವು. ಇವರ ಮೊದಲ ಕಥಾ ಸಂಕಲನ ಪ್ರಕಟವಾದದ್ದು ೧೯೭೯ ರಲ್ಲಿ. ನಂತರ ಬಾಲ ಸಾಹಿತ್ಯದತ್ತ ಹೊರಳಿ, ಹಲವಾರು ಮಕ್ಕಳ ಪದ್ಯಗಳನ್ನು ಬರೆದಿದ್ದು, ‘ನವಿಲು ಗರಿ’ ಎಂಬ ಸಂಕಲನವನ್ನು ೧೯೮೨ ರಲ್ಲಿ ಪ್ರಕಟಿಸಿದರು. ನವಿಲು ಗರಿ ಸಂಕಲನಕ್ಕೆ ಶಿವರಾಮ ಕಾರಂತರು ಮುನ್ನುಡಿ ಬರೆದಿದ್ದು “ನಾಲ್ಕು ನಾಲ್ಕು ಪಾದಗಳ ಚುಟುಕಗಳ ರೀತಿಯಲ್ಲಿ ಮಕ್ಕಳಿಗೆ ಪ್ರಿಯವಾಗಬಹುದಾದ, ಕಲ್ಪನೆಗೆ ಎಟುಕಬಹುದಾದ ವಿಷಯಗಳುಳ್ಳ ಅನೇಕ ಹಾಡುಗಳು ಮಕ್ಕಳ ಗಂಟಲಲ್ಲಿ ಕುಳಿತು, ಅವರ ನಿತ್ಯದ ಲೀಲಾಕೇಳಿಗಳಲ್ಲಿ ಮರುಕಳಿಸಿ ಮೂಡಬಹುದಾದ ಗುಣಗಳುಳ್ಳವು” ಎಂದಿದ್ದಾರೆ.
ಇವರ ಎರಡನೆಯ ಕೃತಿ ‘ಸಕ್ಕರೆ ಬೊಂಬೆ’ ಗೆ ಎಂ.ವಿ.ಸೀತಾರಾಮಯ್ಯನವರು ಮುನ್ನುಡಿ ಬರೆದಿದ್ದು “ಪದ್ಯಗಳ ವಸ್ತು ಹಾಗೂ ಆಕರ್ಷಕ ಶೈಲಿಗಳಿಂದ ಮಕ್ಕಳಲ್ಲಿ ಕುತೂಹಲ ಹುಟ್ಟಿಸುವಂತಹ ಕಲೆಗಾರಿಕೆ, ಸ್ವಾರಸ್ಯಕರವಾಗಿ ಹೇಳಿ, ತಿಳಿಹಾಸ್ಯದ ತೆರೆಯನ್ನೆಬ್ಬಿಸಿ ನೀತಿಯನ್ನು ಬೋಧಿಸುತ್ತಾರೆ” ಎಂದಿದ್ದಾರೆ.
ಇವಲ್ಲದೆ ಆಮೆ ಮತ್ತು ಹಂಸಗಳು, ಚಂದ್ರನ ಶಾಲೆ, ಮಕ್ಕಳನೆಹರುಸು, ಕೋತಿ ಮರಿ ಸೈಕಲ್ ಸವಾರಿ ಮುಂತಾದ ಮಕ್ಕಳ ಪದ್ಯಗಳ ಸಂಕಲನಗಳು; ಪ್ರಾಣಿಗಳ ಜಾತ್ರೆ, ಹಾವು ಕಪ್ಪೆ ಏಡಿ, ಚಿಟ್ಟೆಯ ಬಣ್ಣ, ಕರಡಿ ರಸಾಯನ ಮುಂತಾದ ಮಕ್ಕಳ ಕಥಾ ಸಂಕಲನಗಳು, ಚುಟ್ಟಿ ಪುಟ್ಟಿ, ಮಕ್ಕಳ ಯುಗಾದಿ, ಪ್ರಾಣಿಗಳ ಪರೀಕ್ಷೆ, ಪ್ರಾಣಿಗಳ ಪ್ರವಾಸ ಮುಂತಾದ ಮಕ್ಕಳ ಬಾನುಲಿ ರೂಪಕಗಳಲ್ಲದೆ ಮಕ್ಕಳ ಸಾಹಿತ್ಯದ ಆಳವಾದ ಅಧ್ಯಯನವನ್ನು ಕೈಗೊಂಡು ಮಕ್ಕಳ ಸಾಹಿತ್ಯದ ಬಗ್ಗೆ ಸುಳಿವು – ಹೊಳಹುಗಳನ್ನು ನೀಡಿ, ಮಕ್ಕಳ ಸಾಹಿತ್ಯ ಕುರಿತು ಆಲೋಚಿಸುವವರಿಗೆ, ಅಧ್ಯಯನ ಮಾಡುವವರಿಗೆ ಉಪಯುಕ್ತ ಕೃತಿಯಾದ “ಮಕ್ಕಳ ಸಾಹಿತ್ಯ: ಕೆಲವು ಅಧ್ಯಯನಗಳು ಮತ್ತು ಮಕ್ಕಳ ಸಾಹಿತ್ಯದ ಅಂದಿನ ಸ್ಥಿತಿ – ಗತಿಗಳನ್ನು ವಿವೇಚಿಸುತ್ತಾ ಇಂದಿನ ಮಕ್ಕಳ ಸಾಹಿತ್ಯದ ಬಗ್ಗೆ ಪಕ್ಷಿ ನೋಟ ಬೀರುವ ಕೃತಿ “ಮಕ್ಕಳ ಸಾಹಿತ್ಯ: ಅಂದು – ಇಂದು” (ಮಕ್ಕಳ ಸಾಹಿತಿ ಎಂ.ಜಿ.ಗೋವಿಂದರಾಜು ರವರೊಡನೆ ಸಹಲೇಖಕರಾಗಿ) ಮುಂತಾದ ೨೦ ಕ್ಕೂ ಕೃತಿಗಳನ್ನು ತಮ್ಮದೇ ಆದ ನಿರ್ಮಲ ಪ್ರಕಾಶನದಡಿಯಲ್ಲಿ ಹೊರತಂದಿದ್ದಾರೆ.
ಇವುಗಳಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಇಂಗ್ಲಿಷಿನಿಂದ ಅನುವಾದಿಸಿದ ಕೃತಿ “ಆದ್ಭುತ ಗ್ರಹದ ಕತೆ ಮತ್ತಿತರ ಕಥೆಗಳು”, “ಚೆಲುವನಹಳ್ಳಿ ಚತುರರು” (ಮಕ್ಕಳ ಸಾಹಸ ಕಾದಂಬರಿಯ ಸಹ ಲೇಖಕರು). ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಮಕ್ಕಳ ಸಾಹಿತ್ತ- ೧೯೮೯ ಸಂಪಾದಕರಾಗಿ, ಕಾಲು ಶತಮಾನದ ಮಕ್ಕಳ ಸಾಹಿತ್ಯ ಸಂಪುಟ ೧-೨ ರ ಸಹಸಂಪಾದಕರಾಗಿಯೂ ಕಾರ‍್ಯನಿರ್ವಹಿಸಿದ್ದಾರೆ.
ಮಕ್ಕಳ ಸಾಹಿತ್ಯ ಕುರಿತು ಕೇರಳದ ದಿ ಸ್ಡೇಟ್ ಇನ್‌ಸ್ಟಿಟ್ಯೂಟ್ ಆಫ್ ಚಿಲ್ಡ್ರನ್ ಲಿಟರೇಚರ್, ಚಂಡಿಗಡದ ಇಂಡಿಯಾ ಕಾಂಟಿನೆಂಟಲ್ ಕಲ್ಚರಲ್ ಅಸೋಸಿಯೇಷನ್ಸ್, ಅಸ್ಸಾಮಿನ ಪ್ರಾಗ್ಜೋತಿಷ ಕಾಲೇಜಿನ ಅಸ್ಸಾಮಿ ಕಲಾ ತೀರ್ಥ ಸಂಸ್ಥೆ, ಭೂಪಾಲದ ಭಾರತ ಭವನ ಸಂಸ್ಥೆ, ಪ್ರಯಾಗದ ಭಾರತೀ ಪರಿಷತ್ ಮುಂತಾದ ಸಂಸ್ಥೆಗಳ ಕಾರ‍್ಯಕ್ರಮಗಳಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಮಂಡಿಸಿದ ಪ್ರಬಂಧಗಳು.
೧೯೯೧ ರಲ್ಲಿ ಚುಟ್ಟಿ ಪುಟ್ಟಿ ಪುಸ್ತಕಕ್ಕೆ ಅಂದಿನ ರಾಷ್ಟ್ರಪತಿಗಳಾದ ಡಾ. ಶಂಕರ ದಯಾಳ ಶರ್ಮರವರಿಂದ ರಾಷ್ಟ್ರೀಯ ಪುರಸ್ಕಾರ ಮತ್ತು ೨೦೦೭ ರಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಐವತ್ತು ಮಂದಿ ಮಕ್ಕಳ ಸಾಹಿತಿಗಳನ್ನು ಆಹ್ವಾನಿಸಿದ್ದು ಅದರಲ್ಲಿ ಕರ್ನಾಟಕದಿಂದ ಬಿಜಾಪುರದ ಈಶ್ವರ ಚಂದ್ರ ಚಿಂತಾಮಣಿ, ಧಾರವಾಡದ ಶಂಕರ ಹಲಗತ್ತಿ, ಗುಲ್ಬರ್ಗದ ರಾಮೇಶ್ವರರೊಡನೆ ಟಿ.ಎಸ್.ನಾಗರಾಜ ಶೆಟ್ಟರಿಗೂ ಸೇರಿ ಅಂದಿನ ರಾಷ್ಟ್ರಪತಿಗಳಾದ ಡಾ. ಎ,ಪಿ.ಜೆ. ಅಬ್ದುಲ್ ಕಲಾಂ ರೊಡನೆ ಚಹಾ ಕೂಟಕ್ಕೆ ಆಹ್ವಾನ ಪಡೆದ ಹೆಗ್ಗಳಿಕೆ.
ಇವರ ಹಲವಾರು ಮಕ್ಕಳ ಕತೆಗಳು ಹಿಂದಿ ಹಾಗೂ ಮರಾಠಿಗೂ ಅನುವಾದ ಗೊಂಡಿದೆ. ಹಲವಾರು ಕವಿತೆ, ಕತೆಗಳು ಕರ್ನಾಟಕ ಸರಕಾರದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಪಠ್ಯಗಳಲ್ಲಿ, ಮಹಾರಾಷ್ಟ್ರ ಸರಕಾರದ ಅಲ್ಪ ಸಂಖ್ಯಾತರ ಕನ್ನಡ ಪಠ್ಯ ಪುಸ್ತಕಗಳಲ್ಲೂ ಸೇರಿವೆ.
ಇವರ ಮಕ್ಕಳ ಸಾಹಿತ್ಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಧಾರವಾಡದ ಮಕ್ಕಳ ಮನೆ ಪುರಸ್ಕಾರ, ಬನಹಟ್ಟಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕಾವ್ಯ ಸಿಂಧು ಪುರಸ್ಕಾರ, ಸಿಸುಸಂಗಮೇಶ ದತ್ತಿ ಪ್ರಶಸ್ತಿ, ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡಮಿ ಗೌರವ ಪ್ರಶಸ್ತಿ, ಡಾ. ಚನ್ನಬಸವ ಪಟ್ಟದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ ಮತ್ತು ಆರ್. ಕಲ್ಯಾಣಮ್ಮ ಮಕ್ಕಳ ಸಾಹಿತ್ಯ ಪ್ರಶಸ್ತಿಗಳು ದೊರೆತಿವೆ.
ಲೇಖಕರು: ವೈ.ಎನ್. ಗುಂಡೂರಾವ್
ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.