Kushi Haridas Bhatta

ಪ್ರೊ. ಕು.ಶಿ. ಹರಿದಾಸಭಟ್ಟ

ಪ್ರೊ. ಕು.ಶಿ. ಹರಿದಾಸಭಟ್ಟ (೧೭.೦೩.೧೯೨೪ – ೨೦.೦೮.೨೦೦೦): ಶಿಕ್ಷಣ ತಜ್ಞ, ಅರ್ಥಶಾಸ್ತ್ರಜ್ಞ, ಆಡಳಿತಗಾರ, ಜಾನಪದ ತಜ್ಞ, ಸಾಹಿತಿ ಕು.ಶಿ. ಹರಿದಾಸಭಟ್ಟರು ಹುಟ್ಟಿದ್ದು ಉಡುಪಿಯಲ್ಲಿ ೧೯೨೪ರ ಮಾರ್ಚ್‌೧೭ ರಂದು. ತಂದೆ ಕುಂಚಿ ಬೆಟ್ಟು ಶಿವಗೋಪಾಲಭಟ್ಟ, ತಾಯಿ ಕಮಲಮ್ಮ. ಪ್ರಾರಂಭಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ. ಪ್ರೌಢಶಾಲೆ-ಉಡುಪಿಯ ಬೋರ್ಡ್‌ಹೈಸ್ಕೂಲು. ಮೆಟ್ರಿಕ್ಯೂಲೇಷನ್ ಪಾಸಾದ ನಂತರ ಮಂಗಳೂರಿನಲ್ಲಿ ಎರಡು ವರ್ಷಗಳ ಸೆಕೆಂಡರಿ ಶಿಕ್ಷಕರ ತರಬೇತಿ ಪಡೆದು ಉದ್ಯೋಗಕ್ಕೆ ಸೇರಿದ್ದು ಕಡಿಯಾಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ನಂತರ ನೇಮಕಗೊಂಡದ್ದು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನ ಅಧ್ಯಾಪಕರಾಗಿ (ಕವಿ ಮುದ್ದಣ ಉಪಾಧ್ಯಾಯರಾಗಿದ್ದ ಶಾಲೆ) ಈ ಹೈಸ್ಕೂಲಿನಲ್ಲಿರುವಾಗಲೇ ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಂತೆ ಮದರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿದ್ವಾನ್ ಪರೀಕ್ಷೆಗೂ ಕುಳಿತು ಪ್ರಥಮ ರ್ಯಾಂಕ್‌ನಿಂದ ಸುವರ್ಣ ಪದಕ ಪಡೆದರು. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಪಡೆದ (ಅರ್ಥಶಾಸ್ತ್ರ) ಎಂ.ಎ. ಪದವಿ. ಅಲ್ಲಿದ್ದ ಇವರ ಸ್ನೇಹಿತರು ಸೇವ ನಮಿರಾಜಮಲ್ಲ, ಜಿ.ಟಿ.ನಾರಾಯಣರಾವ್ ಮತ್ತು ಬಾಗಲೋಡಿ ದೇವರಾಯರು.

ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಉಡುಪಿಯಲ್ಲಿ ಆಗತಾನೇ ಪ್ರಾರಂಭವಾಗಿದ್ದ ಟಿ.ಎಂ.ಎ. ಪೈಗಳ ಎಂ.ಜಿ.ಎಂ. ಕಾಲೇಜಿನಲ್ಲಿ ಇತಿಹಾಸದ ಅಧ್ಯಾಪಕರಾಗಿ.

ಪ್ರಾಥಮಿಕ ಶಾಲಾ ಹಂತದಲ್ಲಿದ್ದಾಗಲೇ ವಿದ್ಯಾರ್ಥಿಗಳು ನಡೆಸುತ್ತಿದ್ದ ಹಸ್ತಪ್ರತಿ ಪತ್ರಿಕೆಗೆ ಪದ್ಯ, ಕಥೆಗಳನ್ನು ಬರೆಯತೊಡಗಿದ್ದರು. ಕಾಲೇಜು ದಿನಗಳಲ್ಲಿ ಹಿಂದಿಯಿಂದ ಅನುವಾದಿಸಿದ ಮೈಥಿಲಿ ಶರಣಗುಪ್ತರ ಕೆಲ ಕವಿತೆಗಳು ಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಪ್ರಕಟಗೊಂಡವು. ಉಡುಪಿಯ ಪತ್ರಿಕೆಯೊಂದಕ್ಕೆ ಬರೆದ ಕಥೆ ‘ಅವರು ಯುದ್ಧಕ್ಕೆ ಹೋಗಲ್ಲಿಲ್ಲ’ ಬಹುಮಾನ ಪಡೆದ ಕಥೆ. ಇದೇ ಹೆಸರಿನಲ್ಲಿ ಕಥಾ ಸಂಕಲನವೂ ಪ್ರಕಟಿತ. ಇದೇ ಸಂದರ್ಭದಲ್ಲಿ ಜಯ ಕರ್ನಾಟಕ, ನವಯುಗ ಪತ್ರಿಕೆಗಳಿಗೂ ಬರೆಯತೊಡಗಿದರು. ‘ನವಯುಗ’ ಪತ್ರಿಕೆಯ ಅನಾಮಿಕ ಸಂಪಾದಕರಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದರು.

ಪ್ರೇಮ ಚಂದರ ‘ಗಬನ್’ ಕಾದಂಬರಿಯನ್ನು ಹಿಂದಿಯಿಂದ ಅನುವಾದಿಸಿ ‘ರಮಾನಾಥ್’ ಎಂಬ ಹೆಸರಿನಿಂದ ಧಾರವಾಡದ ಪ್ರತಿಭಾ ಗ್ರಂಥಮಾಲೆಯಿಂದ ಪ್ರಕಟಿಸಿದರು. ಮದರಾಸು ವಿಶ್ವವಿದ್ಯಾಲಯದಿಂದ ಐನೂರು ರೂಪಾಯಿಗಳ ಬಹುಮಾನ ಪಡೆದ ಅರ್ಥಶಾಸ್ತ್ರದ ಕೃತಿಯು ೧೯೫೦ ರಲ್ಲಿ ಮೈಸೂರಿನ ಕಾವ್ಯಾಲಯ ಪ್ರಕಾಶನದಿಂದ ಪ್ರಕಟವಾಯಿತು.

ಉದಯವಾಣಿ ಪತ್ರಿಕೆಯ ಪ್ರಾರಂಭದಿಂದಲೂ ಬರೆದ ಅಂಕಣ ‘ಲೋಕಾಭಿರಾಮ’ ಜನಪ್ರಿಯ ಅಂಕಣ ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿದೆ.
೧೯೫೦ ರಲ್ಲಿ ಎಂ.ಜಿ.ಎಂ. ಕಾಲೇಜಿಗೆ ಇತಿಹಾಸ ಅಧ್ಯಾಪಕರಾಗಿ ಸೇರಿದ ಕು.ಶಿ.ಯವರು ೧೯೬೪ ರಲ್ಲಿ ಪ್ರಾಂಶುಪಾಲರಾಗಿ ಕಾಲೇಜನ್ನು ಕರ್ನಾಟಕ ಶಿಕ್ಷಣ, ಸಂಸ್ಕೃತಿ, ಸಾಹಿತ್ಯಗಳ ಕೇಂದ್ರಸ್ಥಳವಾಗುವಂತೆ ರೂಪಿಸಿದರು. ಇವರ ಹುದ್ದೆಯ ಅವಧಿಯಲ್ಲಿ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲೆಕ್ಕವೇ ಇಲ್ಲ. ಮಣಿಪಾಲದಲ್ಲಿ ಅ.ನ.ಕೃ. ರವರ ಅಧ್ಯಕ್ಷತೆಯಲ್ಲಿ ನಡೆದ ೪೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ (೧೯೬೦), ಗೋವಿಂದ ಪೈ ಸಂಶೋಧನ ಕೇಂದ್ರ (೧೯೬೫) , ಅಡಿಗರಿಗೆ ಐವತ್ತು (೧೯೬೮), ಎಂ.ಜಿ.ಎಂ. ಕಾಲೇಜಿನ ಬೆಳ್ಳಿಹಬ್ಬ (೧೯೭೪), ತುಳು ನಿಘಂಟು ಯೋಜನೆ (೧೯೭೯), ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (೧೯೮೨ – ಫೋರ್ಡ್‌ಫೌಂಡೇಷನ್ನಿನ ಸಹಾಯ ಹಸ್ತದೊಂದಿಗೆ ಪ್ರಾರಂಭವಾಗಿದ್ದು, ಜಾನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವ ವಿದ್ವಾಂಸರಿಗೆ, ವಿದ್ಯಾರ್ಥಿಗಳಿಗೆ ಎಲ್ಲ ಬಗೆಯ ಆಕರಗಳನ್ನು, ಸಂಪನ್ಮೂಲಗಳನ್ನು ಒದಗಿಸುವ ಸಂಸ್ಥೆ) ಪುರಂದರೋತ್ಸವ, ಕನಕೋತ್ಸವ, ರಾಷ್ಟ್ರೀಯ ಅಂತಾರಾಷ್ಟ್ರೀಯ ನಾಟಕೋತ್ಸವಗಳು, ವಿಚಾರ ಸಂಕಿರಣಗಳು – ಹೀಗೆ ಹಲವಾರು ಕಾರ್ಯಕ್ರಮಗಳ ರೂವಾರಿ.

ಶಿವರಾಮಕಾರಂತರು ಪುತ್ತೂರಿನಲ್ಲಿ ನಡೆಸುತ್ತಿದ್ದ ಯಕ್ಷಗಾನ ಚಟುವಟಿಕೆಗಳಿಂದ ಪ್ರಭಾವಿತರಾಗಿ ಜಾನಪದ ಕಲೆಗಳ ಬಗ್ಗೆ ಆಸಕ್ತರಾಗಿ ಪ್ರಾರಂಭಿಸಿದ್ದು ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರ. ರಾಜ್ಯಾದ್ಯಂತ ಸಂಚರಿಸಿ ಜಾನಪದ ವಸ್ತುಗಳನ್ನು ಸಂಗ್ರಹಿಸಿದ ವೈಜ್ಞಾನಿಕವಾಗಿ ವಿಂಗಡಿಸಿ, ಸಮಗ್ರ ದಾಖಲಾತಿಯನ್ನು ಕಂಪ್ಯೂಟರೀಕರಿಸಿ ಕಲಾವಿದರ ತಂಡ, ಕಲಾವಿದರ ಸರ್ವ ಮಾಹಿತಿಯನ್ನು ಶೇಖರಿಸಿ, ವ್ಯವಸ್ಥಿತ ರೂಪಕೊಟ್ಟ ಕೇಂದ್ರವನ್ನಾಗಿಸಿದರು.

ಜಾನಪದ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿದ ಪ್ರಮುಖರಲ್ಲೊಬ್ಬರಾಗಿ ರಷ್ಯಾ, ಸ್ವಿಝರ್ಲೆಂಡ್, ಸ್ವೀಡನ್‌ಗಳಲ್ಲಿ ನಡೆದ ಭಾರತ ಉತ್ಸವದಲ್ಲಿ ಜನಪದ ಕಲೆಗೆ ಅಗ್ರಸ್ಥಾನ ದೊರೆತು ಹರಿಯಾಣದ ಢಮಾಲ್, ಆಂಧ್ರದ ಲಂಬಾಡಿ, ತಮಿಳುನಾಡಿನ ತೆರ‍್ಕೂತ್ತು ಮತ್ತು ಕರ್ನಾಟಕದ ಡೊಳ್ಳು ಕುಣಿತ ತಂಡಗಳ ಸಂಯುಕ್ತ ನಾಯಕರಾಗಿ ತಂಡಗಳನ್ನು ಯಶಸ್ವಿಯಾಗಿ ನಡೆಸಿದರು.

ಅರ್ಥಶಾಸ್ತ್ರದ ಅಧ್ಯಯನಕ್ಕಾಗಿ ಇತಾಲಿಯ ನೇಪಲ್ಸ್ (೧೯೬೨-೬೩) ಜಾಗತಿಕ ಆಹಾರ ಸಮ್ಮೇಳನ (೧೯೬೩) ದಲ್ಲಿ ಯಕ್ಷಗಾನ ತಂಡದೊಡನೆ, ರೋಮ್‌ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ (೧೯೮೪), ಮತ್ತೊಮ್ಮೆ ಜಾನಪದ ಪ್ರಾಧ್ಯಾಪಕರಾಗಿ ಹೀಗೆ ಇತಲಿ, ಇಂಗ್ಲೆಂಡ್, ಅಮೆರಿಕ, ರಶಿಯಾ, ಯುಗೋಸ್ಲಾವಿಯಾ, ಬಲ್ಲೇರಿಯಾ, ಹಂಗೇರಿ, ಜಪಾನ್, ಫಿನ್ಲೆಂಡ್, ಸ್ವಿಝರ್ಲೆಂಡ್, ಹಾಂಕಾಂಗ್‌ ಮುಂತಾದ ದೇಶಗಳನ್ನು ಸಂಚರಿಸಿದಾಗಿನ ಅನುಭವಗಳನ್ನು ‘ಇತಾಲಿಯ ನಾನು ಕಂಡಂತೆ’ (೧೯೭೧), ‘ಜಗದಗಲ’ (೧೯೮೧), ‘ರಂಗಾಯನ’ (೧೯೮೭) ಮುಂತಾದ ಕೃತಿಗಳಲ್ಲಿ ಚಿತ್ರಿಸಿದ್ದಾರೆ.

ಇವರು ಅನುವಾದಿಸಿರುವ ಕೃತಿಗಳು ಘಂಟಮಾರ (ಸಿಲೋನ್), ಅವ್ಯಕ್ತಮಾನವ (ಪ್ರೊ. ಯು.ಎಲ್. ಆಚಾರ್ಯ – ಸಹ ಲೇಖಕರು), ನಡುಹಗಲಲ್ಲಿ ಕಗ್ಗತ್ತಲೆ (ಅರ್ಥರ್ ಕೋಸ್ಲರ್), ಸ್ವಾತಂತ್ರ್ಯ ಮತ್ತು ಸಂಸ್ಕೃತಿ (ಟಾಲ್‌ಸ್ಟಾಯ್), ಅಮೆರಿಕದ ಆರು ಕಥೆಗಳು ಮತ್ತು ಕಡಲಿನ ಸಂಪತ್ತು ಮುಂತಾದವುಗಳು.

ಇವುಗಳಲ್ಲದೆ ಯುಗವಾಣಿ (ಕವನ ಸಂಗ್ರಹ) ಪುಸ್ತಕ ಪುರಾಣ (ಪ್ರಬಂಧ ಸಂಕಲನ), ಅವರು ಯುದ್ಧಕ್ಕೆ ಹೋಗಲ್ಲಿಲ್ಲ (ಕಥಾಸಂಕಲನ), ಕಾಲವು ಬದಲಾಗಿದೆ (ಕಾದಂಬರಿ) ಮುಂತಾದ ಸಾಹಿತ್ಯ ಕೃತಿಗಳ ಜೊತೆಗೆ ಏಷಿಯಾ ಸಂಪತ್ತು, ಬದುಕುವದಾರಿ, ಯಕ್ಷಗಾನದ ಬಗ್ಗೆ – ಯಕ್ಷಗಾನದಲ್ಲಿ ಔಚಿತ್ಯ ಪ್ರಜ್ಞೆ, ಕನ್ನಡ ಕಟ್ಟಿದವರು, ಪ್ರಜಾತಂತ್ರದ ಹೆದ್ದಾರಿ ಮುಂತಾದ ೨೭ ಕೃತಿಗಳು ಪ್ರಕಟಿತ.

ಕಲಾವಿದ ಕಟ್ಟಂಗೇರಿ ಕೃಷ್ಣ ಹೆಬ್ಬಾರರ – ಕಲೆ ಮತ್ತು ಬದುಕು” ವಿಶಿಷ್ಟ ರೀತಿಯಲ್ಲಿ ನಿರೂಪಿಸಿರುವ ಜೀವನ ಚರಿತ್ರೆ.

ಕಾರಂತ ಅರವತ್ತು, ಗೋವಿಂದ ಪೈ ಅವರ ಪತ್ರಗಳು, ದಾಸಪ್ರಭೆ, ಕನಕಪ್ರಭೆ, ಅಭಿವ್ಯಕ್ತ (ಗೋಪಾಲಕೃಷ್ಣ ಅಡಿಗರ ಸಂಸ್ಮರಣೆ), ಕಾರಂತ ಪ್ರಪಂಚ, ಅಭಿನಂದನ, ಪರಿವ್ರಾಜಕ (ಶ್ರೀ ವಿಶ್ವೇಶತೀರ್ಥರ ಬಗ್ಗೆ) ಕುವೆಂಪು – ಬೇಂದ್ರೆ – ಕಾರಂತ ಮುಂತಾದ ಸಂಪಾದಿತ ಕೃತಿಗಳ ಜೊತೆಗೆ SILVER JUBILEE OF UDIPI MUNICIPALITY, MAHATMA GANDHIJI’S CENTENARY, ಎಂ.ಜಿ.ಎಂ. ಕಾಲೇಜು ಬೆಳ್ಳಿ ಹಬ್ಬ, EPIGRAPHICAL SOCIETY OF INDIA ಮುಂತಾದ ಸ್ಮರಣ ಸಂಚಿಕೆಗಳೂ ಸೇರಿ ಸಂಪಾದಿತ ಕೃತಿಗಳು ೩೦ ಕ್ಕೂ ಹೆಚ್ಚು.

ಪ್ರಾಂಶುಪಾಲರಾಗಿ ನಿವೃತ್ತರಾದಾಗ ಹಿತೈಷಿಗಳು, ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಅರ್ಪಿಸಿದ್ದು ಪ್ರವೃತ್ತ (೧೯೭೯) ಮತ್ತು ಲೋಕಮಿತ್ರ (೧೯೮೯) ಅಭಿನಂದನ ಗ್ರಂಥಗಳು.

ಸದಾ ಒಂದಿಲ್ಲೊಂದು ಸಂಘಟನೆ, ಸಂಕಿರಣ, ಉತ್ಸವ ಮುಂತಾದ ಕಾರ್ಯಕ್ರಮಗಳಲ್ಲೇ ತೊಡಗಿಸಿಕೊಂಡು ಕ್ರಿಯಾಶೀಲರಾಗಿದ್ದ ಕು.ಶಿ.ಯವರಿಗೆ ೧೯೮೨ ರಲ್ಲಿ ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೮೫ ರಲ್ಲಿ ಶಿಕ್ಷಣ ಕ್ಷೇತ್ರದ ಸೇವೆಗಾಗಿ ರಾಜ್ಯ ಸರಕಾರದ ಪ್ರಶಸ್ತಿ, ೧೯೮೬ ರಲ್ಲಿ ಫಿನ್ಲೆಂಡ್ ಸರಕಾರದ ಜಾನಪದ ಕಾರ್ಯಪ್ರಶಸ್ತಿ, ೧೯೮೯ ರಲ್ಲಿ ಶ್ರೇಷ್ಠ ಜೀವನ ಚರಿತ್ರೆ ಬರವಣಿಗೆಗಾಗಿ ವಿಶ್ವಮಾನವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ (೧೯೯೯) ಮುಂತಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದ ಕು.ಶಿ. ಯವರ ಚಟುವಟಿಕೆಗಳೆಲ್ಲ ಸ್ತಬ್ದಗೊಂಡಿದ್ದು ೨೦೦೦ದ ಆಗಸ್ಟ್‌೨೦ ರಂದು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *