animals

ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ

ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ: ಹಲವು ವರ್ಷಗಳ ಹಿಂದಿನ ಒಂದು ಪ್ರಸಂಗ. ನಾನು ಆಸ್ಪತ್ರೆಗೆ ಹೋಗುವಾಗ ದಾರಿಯಲ್ಲಿ ಒಂದು ಕುದುರೆಮರಿ ಸತ್ತುಬಿದ್ದಿತ್ತು. ಅದರ ಪಕ್ಕ ಕಣ್ಣೀರು ಸುರಿಸುತ್ತ ನಿಂತಿದ್ದ ತಾಯಿಕುದುರೆಯನ್ನು ಕಂಡು ಮನ ಕಲಕಿತ್ತು. ಸಂಜೆ ಮನೆಗೆ ಹಿಂದಿರುಗುವಾಗಲೂ ಆ ಮೂಕಪ್ರಾಣಿ ಕಣ್ಣೀರಿಡುತ್ತ ನಿಂತೇ ಇತ್ತು! ಸತ್ತ ಮರಿಯನ್ನು ಯಾರೂ ತೆಗೆದಿರಲೇ ಇಲ್ಲ. ಆ ತಾಯಿಕುದುರೆಯ ಮಾತೃವಾತ್ಸಲ್ಯ ಕಂಡು ಮೂಕವಿಸ್ಮಿತಳಾಗಿದ್ದೆ! ಮತ್ತೊಂದೆಡೆ, ಲಾಲ್​ಬಾಗಿನ ಕೋತಿಯೊಂದು ತನ್ನ ಸತ್ತಮರಿಯನ್ನು ಎತ್ತಿಕೊಂಡು ಮರದಿಂದ ಮರಕ್ಕೆ ನೆಗೆದು, ಅದು ಏಳುವುದೇನೋ ಅಂತ ಕಾಯುತ್ತಿತ್ತು. ಉತ್ಕಟ ಇಚ್ಛೆಯ ಮಂಗನ ಮಮತೆ ಕಂಡು ಚಿಂತನಮಗ್ನಳಾದೆ. ‘ಮಾತೃದೇವೋಭವ’ ಎಂಬ ಮನುಜರ ಮಾತನ್ನು ಪ್ರಾಣಿಗಳೂ ಪಾಲಿಸುತ್ತಿವೆಯಲ್ಲ, ಅದೆಂಥ ಮಮಕಾರ ಎಂದು ಚಕಿತಳಾಗಿದ್ದೆ.

ಪ್ರಾಣಿಗಳಿಗೂ ಮನುಷ್ಯರಿಗೂ ಏನು ವ್ಯತ್ಯಾಸ? ಮನುಜರಲ್ಲಿ ಕಾಣವ ಸ್ವಾರ್ಥ ಪ್ರಾಣಿಗಳಲ್ಲಿಲ್ಲ. ಚಿರತೆಯನ್ನು ಕ್ರೂರಪ್ರಾಣಿ, ಬೇಟೆಯಾಡುವುದರಲ್ಲಿ ನಿಸ್ಸೀಮ ಎನ್ನುತ್ತೇವೆ. ಒಮ್ಮೆ ಇಂಥ ಚಿರತೆ ಹೆರಿಗೆ ಆದ ಮೇಲೆ ಸತ್ತ ಮಂಗನ ಮರಿಯನ್ನು ಉಳಿಸಿ ಅಪಾಯದಿಂದ ಕಾಪಾಡಿದ್ದನ್ನು ಕಂಡು ನಿಬ್ಬೆರಗಾದೆ. ಪ್ರಾಣಿಗಳನ್ನು ಹೊಟ್ಟೆಪಾಡಿಗೆ ಸಾಯಿಸುವ ಚಿರತೆಗೆ ಕೂಡ ಮುಗ್ಧ ಮಂಗನ ಮರಿಯ ಮೇಲೆ ಮಮತೆ ಉಕ್ಕಿದ್ದು ನೋಡಿದರೆ, ಮನುಷ್ಯರೇ ಕ್ರೂರಿಗಳು ಎನ್ನಿಸದಿರುವುದಿಲ್ಲ. ಒಮ್ಮೆ ಬಿಹಾರಕ್ಕೆ ಉಪನ್ಯಾಸಕ್ಕೆ ಹೋಗಿದ್ದಾಗ ಅಲ್ಲಿಯ ಪತ್ರಿಕಾ ವರದಿ ಕಂಡು ಚಕಿತಳಾದೆ. ಹೆದ್ದಾರಿ ಬದಿಯ ಹಳೆಯ ಹಾಳುಬಾವಿಯಲ್ಲಿ ನವಜಾತ ಶಿಶುವೊಂದು ಬಿದ್ದಿತ್ತು. ನಿಶ್ಶಕ್ತವಾಗಿದ್ದ ಅದು ‘ಕುಂಯ್ ಕುಂಯ್’ ಅನ್ನುವುದನ್ನು ಕಂಡ ಮಂಗಗಳ ಹಿಂಡು ಅಲ್ಲಿಗೆ ಬಂದು ಹೆದ್ದಾರಿಯನ್ನೇ ಬಂದ್ ಮಾಡಿ, ಆಂಬುಲೆನ್ಸ್ ಬಂದು ಆ ಮಗುವನ್ನು ಬಾವಿಯಿಂದ ತೆಗೆದು ಆಸ್ಪತ್ರೆಗೆ ಸಾಗಿಸುವವರೆಗೂ ಗಲಾಟೆ ಮಾಡಿ ಗಾಡಿಗಳು ಹೋಗದಂತೆ ಮಾಡಿತ್ತು! ಹೆತ್ತವ್ವಳಿಗೆ ಬೇಡವಾದ ಹೆಣ್ಣುಮಗುವಿನ ಜೀವ ಉಳಿಸುವುದರಲ್ಲಿ ಯಶಸ್ವಿಯಾಗಿದ್ದವು ಮಂಗಗಳು!

‘ಮಂಗನಿಂದ ಮಾನವ’ ಎನ್ನುತ್ತಾರೆ; ಆದರೆ ಮಂಗಗಳಿಗೆ ಇರುವ ಮಮತೆ-ಮಮಕಾರ ಮಾನವರಿಗೆ ಯಾಕಿಲ್ಲ?. ಕರ್ನಾಟಕದಲ್ಲಿಯೇ, ಅಪಘಾತವಾಗಿ ಕಾಲು ಕತ್ತರಿಸಿಕೊಂಡು ರಕ್ತದ ಮಡುವಲ್ಲಿ ನರಳಾಡುತ್ತಿದ್ದ ವ್ಯಕ್ತಿ ಕೈಮಾಡಿ ಕೂಗಿ ಆಸ್ಪತ್ರೆಗೆ ಸಾಗಿಸುವಂತೆ ಬೇಡಿಕೊಂಡರೂ, ಕೆಲವರು ತಮ್ಮ ಪಾಡಿಗೆ ತಾವು ವಾಹನದಲ್ಲಿ ಹೋಗುತ್ತಿದ್ದರೆ, ಇನ್ನು ಕೆಲವರು ಮೊಬೈಲ್​ನಲ್ಲಿ ಚಿತ್ರೀಕರಿಸುವುದರಲ್ಲಿ ವ್ಯಸ್ತರಾಗಿದ್ದರು! ಇಂಥ ಅಮಾನವೀಯತೆ ಖಂಡನೀಯ. ಸವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೂ ಜನರು ಅಪಘಾತವಾದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸದಿರುವುದು ಶೋಚನೀಯ.

ಇಲ್ಲಿ ಡಾ. ಎಲಿಜಬೆತ್ ಬ್ರಾನ್​ಲಿನ್ ನೆನಪಾಗುತ್ತಾರೆ. ಆಕೆ ಎರಡು ಭಾರತೀಯ ಅನಾಥ ಮಕ್ಕಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ ತೋರಿಸಲು ಅವರನ್ನು ಬೆಂಗಳೂರಿಗೆ ಕರೆತಂದಿದ್ದರು. ಬಿಡುವಿನ ವೇಳೆ ನಮ್ಮ ಆಸ್ಪತ್ರೆಗೆ ಬರುತ್ತಿದ್ದರು. ನಾನು ದೊಡ್ಡವರಿಗೆ ಆಂಜಿಯೋಗ್ರಾಂ ಮಾಡಿ ಅವರನ್ನು ನೋಡಲು ಬಂದರೆ, ಅಂದು ನೋಡಿದ ಮಕ್ಕಳ ಹೆಸರು, ಕಾಯಿಲೆ ಬರೆದುಕೊಂಡು, “Vijay, what will happen to this child?’ ಅಂತ ಕೇಳುತ್ತಿದ್ದರು. ನಾನು ಮಾಮೂಲಿಯಾಗಿ”We cannot do anything, we do not have facilities’ ಅಂತ ಸಬೂಬು ಹೇಳುತ್ತಿದ್ದೆ. 3 ತಿಂಗಳಲ್ಲಿ ಅವರು 100 ಮಕ್ಕಳ ಪಟ್ಟಿ ತಯಾರಿಸಿ- ‘ಈ ಮಕ್ಕಳ ಗತಿ ಏನು?’ ಅಂತ ನೂರು ಬಾರಿ ಕೇಳಿದ್ದರು. ಅವರ ಕಳಕಳಿ ಕಂಡು ನನ್ನ ಮನ ಕರಗಿತ್ತು. ಆಗ ನನಗೆ 48 ವರ್ಷ ಆದರೂ ಮಕ್ಕಳ ಹೃದ್ರೋಗದ ತರಬೇತಿಗೆ ಅಮೆರಿಕಕ್ಕೆ ಹೋದೆ. ಅವರಿಗೆ ‘ಸೂಪರ್ ಮಾಮ್ ಅನ್ನುತ್ತಿದ್ದೆ. ಅವರ ದತ್ತುಮಕ್ಕಳೊಂದಿಗೆ ನಾನೂ ಒಬ್ಬಳು ಅವರಿಗೆ ಹೊರೆ ಆಗಿದ್ದೆ. ಸಸ್ಯಾಹಾರ ತಯಾರಿಸಲು ಆಗದೆ ನನಗೆ ಬ್ರೆಡ್ ಜತೆಗೆ ಜೇನುತುಪ್ಪ, ಟಛಿಚ್ಞ್ಠ ಚ್ಠಿಠಿಠಿಛ್ಟಿ ಕೊಡುತ್ತಿದ್ದರು. ವಾರಾನ್ನದಂತೆ ಒಂದೊಂದು ವಾರ ಒಬ್ಬೊಬ್ಬರ ಮನೆಯಲ್ಲಿದ್ದು ಮಕ್ಕಳ ಚಿಕಿತ್ಸೆ ಮಾಡುವುದನ್ನು ಕಲಿತು ಬೆಂಗಳೂರಿಗೆ ಬಂದೆ. ಆ ಮಹಾತಾಯಿಯ ಪ್ರೇರೇಪಣೆಯಿಂದ ಹಲವು ಮಕ್ಕಳನ್ನು ಸಾವಿನ ದವಡೆಯಿಂದ ತಪ್ಪಿಸುವ ಚಿಕಿತ್ಸೆ ಹಸ್ತಗತವಾಯಿತು.

ಒಮ್ಮೆ ಯುವತಿಯೊಬ್ಬಳ ಮೊದಲನೆ ಮಗು ಸತ್ತು ಹುಟ್ಟಿತ್ತು. ಎರಡನೇ ಸಲ ಹೊಟ್ಟೆಯಲ್ಲಿ ಭ್ರೂಣದ ಚಲನೆ ಕಡಿಮೆ ಆಗುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ್ದಳು. ಆಪರೇಷನ್ ಮಾಡಿ ತೆಗೆದರೂ ಮಗು ಅಳಲಿಲ್ಲ. ಕೃತಕ ಉಸಿರು ಹಾಕಿ ಹರಸಾಹಸ ಪಟ್ಟರೂ ಮಗು ಚೇತರಿಸಿಕೊಳ್ಳದಿದ್ದಾಗ ಶಿಶುತಜ್ಞರು ನನಗೆ ಕರೆ ಮಾಡಿದರು. ಆ ಮಗುವಿನ ಮಹಾಧಮನಿಯ ಕವಾಟ (aortic valve) ಮುಚ್ಚಿಕೊಂಡಿತ್ತು! ಆಗ, ಆ ನವಜಾತ ಶಿಶುವಿಗೆ ಕೂದಲೆಳೆಯಷ್ಟು ಗಾತ್ರದ guide wire ಹಾಕಿ ಸೂಜಿಗೆ ದಾರ ಪೋಣಿಸಿದಂತೆ ಅದರ ಮೇಲೆ ತೂರುನಳಿಕೆ ಬಲೂನು ಹಾಕಿ ಮುಚ್ಚಿದ ಬಾಗಿಲು ತೆರೆದೆ. ಮಗು ಅಪಾಯದಿಂದ ಪಾರಾಯಿತು, ಕೈಕಾಲು ಆಡಿಸಿತು. ನನ್ನ ಮನಸ್ಸಿನಲ್ಲಿದ್ದುದು- ‘ದೇವರೆ, ಈ ತಾಯಿಯ ಮಗು ಉಳಿಯಲಿ’ ಎನ್ನುವುದಷ್ಟೇ. ಆದರೆ ನನ್ನ ಭಗೀರಥ ಯತ್ನ ಕಂಡ ಕೆಲವರಿಗೆ ‘ಸಾಯುವ ಮಕ್ಕಳಿಗಾಗಿ ಇವರೇಕೆ ಹೆಣಗುತ್ತಾರೆ?’ ಎನಿಸಿದ್ದರೆ ಅಚ್ಚರಿಯಿಲ್ಲ!

‘ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ’ ಅನ್ನುವಂತೆ ತಾಯಿಯೊಬ್ಬಳು ಮಗುವಿನ ಪ್ರಾಣಕ್ಕಾಗಿ ಪರಿತಪಿಸುವಾಗ, ಅದನ್ನು ನಮ್ಮ ಮಗು ಎಂದೇ ಪರಿಭಾವಿಸಿ ಉಳಿಸಲು ನಾವು ಯತ್ನಿಸಿದರೆ ಕೈಲಾಸದ ಸುಖ ಇಲ್ಲಿಯೇ ಸಿಗುವುದು. ನಾನು ಕಂಡಂತೆ, ಕುಡುಕ ಅಪ್ಪನಿಗೆ ಚಿಂತೆ ಇರುವುದಿಲ್ಲ; ಆದರೆ ಹೆತ್ತತಾಯಿಯ ಕರುಳು ತನ್ನ ಕುಡಿಗಾಗಿ ಮಿಡಿಯುತ್ತಿರುತ್ತದೆ. ಅವಳ ಕಣ್ಣೀರಿಗೆ ಸಮಾನ ಯಾವುದೂ ಇಲ್ಲ.

ಪ್ರಾಣಿಗಳಿಗೂ ಮರಿಗಳ ಮೇಲೆ ಮಮತೆ, ಮನುಷ್ಯರಿಗೂ ಕಂದಮ್ಮಗಳ ಬಗ್ಗೆ ಕನಿಕರ. ಹಾಗಾದರೆ ಇಬ್ಬರಿಗೂ ಏನು ವ್ಯತ್ಯಾಸ? ಪ್ರಾಣಿಗಳಿಗೆ ಬುದ್ಧಿ ಇರುತ್ತದೆ, ಆದರೆ ಮನುಷ್ಯರಂತೆ ಸರಿ ತಪ್ಪಿನ ಪ್ರಜ್ಞೆ ಇರುವುದಿಲ್ಲ. ಆದ್ದರಿಂದ ಪ್ರಾಣಿಗಳಿಗಿಂತ ಮನುಷ್ಯ ಪ್ರಜ್ಞಾವಂತ ಎಂದು ನಾವು ಅಂದುಕೊಳ್ಳುತ್ತೇವೆ! ಆದರೆ, ಪರಿಸರ ಮತ್ತು ಕಾಡು ಸಂರಕ್ಷಣಾ ಪರಿಣತ ಲಾರೆನ್ಸ್ ಹೋದವರ್ಷ ಮಾರ್ಚ್ 7ರಂದು ಆಫ್ರಿಕಾದಲ್ಲಿ ತೀರಿಕೊಂಡಾಗ, ದಯೆ ಮತ್ತು ಉಪಕಾರ ಸ್ಮರಣೆಯಲ್ಲಿ ಮಾನವರಿಗಿಂತ ಆನೆಗಳೇ ಮೇಲೆಂದು ತೋರಿಸಿದ ಸೋಜಿಗ ನಡೆಯಿತು! ಅವರು ತೀರಿಕೊಂಡ 12 ಗಂಟೆಯಲ್ಲಿಯೇ, 39 ಆನೆಗಳು ಎರಡು ತಂಡಗಳಲ್ಲಿ ದಂಡುದಂಡಾಗಿ ಬಂದವು. ಊಟ-ನಿದ್ರೆ ಬಿಟ್ಟು ಕಣ್ಣೀರು ಸುರಿಸುತ್ತ 2 ದಿನ ನಿಂತೇ ಇದ್ದವು. ಹತ್ತಿರದವರೇ ಸತ್ತರೂ ಸಾಂತ್ವನ ಹೇಳದ ಮಾನವರು ಆನೆಗಳಿಂದ ಅದೆಷ್ಟು ಕಲಿಯಬೇಕಾಗಿದೆ! 60 ಮೈಲಿ ದೂರದಲ್ಲಿದ್ದ ಅವಕ್ಕೆ, ತಮ್ಮ ಜೀವ ಉಳಿಸಿದ ಮಹಾಶಕ್ತಿ ನಂದಿದೆ ಎಂದು ಗೊತ್ತಾಗಿದ್ದಾದರೂ ಹೇಗೆ? ಇಂಥ ಆಶ್ಚರ್ಯಕರ ಘಟನೆಗೆ ಕಾರಣವೆಂದರೆ, ಎರಡು ಮದದಾನೆಗಳನ್ನು ಗುಂಡಿಟ್ಟು ಕೊಲ್ಲಲು ಸ್ಥಳೀಯರು ಮುಂದಾಗಿದ್ದಾಗ ಇವರು ಅವಕ್ಕೆ ರಕ್ಷಣೆ ಕೊಟ್ಟು ಉಳಿಸಿದ್ದರು. ಒಮ್ಮೆ ಅನೆಗಳ ಪುಂಡಾಟಿಕೆ ತಡೆಯಲಾಗದೆ, ಜನರು ಒಂದು ತಾಯಿಆನೆ ಹಾಗೂ ಮರಿ ಹೆಣ್ಣಾನೆಗೆ ಹದಿಹರೆಯದ ಗಂಡಾನೆಯೊಂದರ ಮುಂದೆ ಗುಂಡಿಕ್ಕಿದ್ದರು. ತಾಯಿ-ತಂಗಿಯ ಸಾವನ್ನು ಕಣ್ಣಾರೆ ಕಂಡ ಆ ಗಂಡಾನೆ ತನ್ನ ಬಳಗದ ರಕ್ಷಣೆಗೆ ಮುಂದಾಗಿತ್ತು. ಗುಂಪಿನಲ್ಲಿದ್ದ ಇನ್ನೊಂದು ಹೆಣ್ಣಾನೆ, 8000 ವೋಲ್ಟ್ ವಿದ್ಯುತ್ ಬೇಲಿಯನ್ನು ಸೊಂಡಿಲಿನಿಂದ ಕಿತ್ತು, ಕಂಬಿ ಬೀಳಿಸಿ ತನ್ನವರನ್ನು ಪಾರುಮಾಡಲು ಮುಂದಾಗಿತ್ತು. ಆಗ ಲಾರೆನ್ಸ್ ಎರಡೂ ಆನೆಗಳನ್ನು ಹತೋಟಿಗೆ ತೆಗೆದುಕೊಂಡು, ಸಮಾಧಾನಿಸಿ, ಅವುಗಳ ಗುಂಪನ್ನು ಗಂಡಾಂತರದಿಂದ ಪಾರುಮಾಡಿ, ಅವುಗಳ ಆರೈಕೆ ಮಾಡಿ ಜನರ ರೋಷದಿಂದ ಸಂರಕ್ಷಿಸಿ, ಸುರಕ್ಷಿತವಾಗಿ ಅವುಗಳ ತಾಣಕ್ಕೆ ಬಿಟ್ಟುಬಂದಿದ್ದರು. ಇಂಥ ದಯಾಮಯಿ ಸತ್ತಾಗ, ಜನರಿಗಿಂತ ಹೆಚ್ಚಾಗಿ ಕಣ್ಣೀರಿಟ್ಟು,

ಆಹಾರ-ನಿದ್ರೆ ಇಲ್ಲದೆ, ಅವರ ಶವಸಂಸ್ಕಾರ ಆಗುವವರೆಗೂ 39 ಆನೆಗಳು ನಿಂತೇ ಇದ್ದವು.

ಪ್ರಾಣಿದಯೆ ಎಂದರೆ ನನಗೆ ನೆನಪಾಗುವುದು ನನ್ನ ಪೂಜ್ಯತಂದೆ ದಿ. ಈಶ್ವರಪ್ಪನವರು. ಒಮ್ಮೆ ಕಾಲಿಗೆ ನಮಸ್ಕರಿಸುವಾಗ ಅವರ ಎಡಗಾಲು ಊದಿ ಕಪ್ಪಗಾಗಿರುವುದು ಕಂಡು ನನ್ನ ತಂಗಿ ಕರೆ ಮಾಡಿದಾಗ, ನಾನು ಗಾಬರಿಯಾಗಿ ಎಲ್ಲಿ ಕಾಲು ಗ್ಯಾಂಗ್ರೀನ್ ಆಗಿದೆಯೋ ಎಂದು ಹೆದರಿ ಅಪ್ಪನವರಿಗೆ ಬರಲು ಹೇಳಿದೆ. ‘ಏನೂ ಆಗಿಲ್ಲ, ಯಾಕೆ ಸುಮ್ಮನೆ ಚಿಂತಿಸುತ್ತಿ?’ ಎಂದರೂ ಕೇಳದೆ ಕರೆಸಿಕೊಂಡೆ. ಎಲ್ಲವೂ ಸರಿಯಾಗಿತ್ತು. ಸಕ್ಕರೆ, ಬಿ.ಪಿ. ಯಾವುದೂ ಇರಲಿಲ್ಲ. ಚಕಿತಳಾಗಿ ಕೇಳಿದಾಗ ಅವರು- ‘ಹಸುವಿಗೆ ಮೇವು ತರಲು ಸೈಕಲ್ ಹಿಡಿದು ಹೋಗುವಾಗ ಆಟೋ ಕಾಲಿನ ಮೇಲೆ ಹಾಯ್ದದ್ದರಿಂದ ಮೂಗೇಟಿಗೆ ಕಾಲು ಊದಿ ರಕ್ತ ಹೆಪು್ಪಗಟ್ಟಿತ್ತು’ ಎಂದರು. ‘ಮತ್ತೆ ಯಾಕೆ ಹೇಳಲಿಲ್ಲ?’ ಎಂದದ್ದಕ್ಕೆ- ‘ಹೇಳಿದ್ದರೆ ಏನು ಮಾಡುತ್ತಿದ್ದಿರಿ? ಮನೆಬಿಟ್ಟು ಹೊರಗೆ

ಹೋಗಬೇಡ, ಕೆಲಸ ಮಾಡಬೇಡ ಅನ್ನುತ್ತಿದ್ದಿರಿ. ಅದಕ್ಕೇ ಹೇಳಲಿಲ್ಲ. ಮುಂದಿನ ಬಸ್ಸಿಗೆ ನನ್ನನ್ನು ಊರಿಗೆ ಕಳಿಸಿಕೊಡು’ ಅಂತ ಹಠ ಮಾಡಿ, ಬೆಳಗ್ಗೆ ಬಂದ 90 ವರ್ಷದ ನನ್ನಪ್ಪ ಸಂಜೆ ಹೊರಟೇಹೋದರು. ಮರುದಿನ ದೂರವಾಣಿಯಲ್ಲಿ ‘ಯಾಕಪ್ಪ, ಮಗಳ ಮನೆಯಲ್ಲಿ ಒಂದೆರಡು ದಿನ ಹಾಯಾಗಿರುವುದು ಬಿಟ್ಟು ಬೇಗ ಹೋದೆ? ’ ಎಂದು ಕೇಳಿದ್ದಕ್ಕೆ ಅವರಿತ್ತ ಉತ್ತರ ನನ್ನನ್ನು ದಂಗಾಗಿಸಿತು- ‘ನೋಡು, ದೇವರು ನಿನಗೆ ವಿದ್ಯೆ, ಬುದ್ಧಿ, ಇತರರಿಗೆ ಸಹಾಯಮಾಡುವ ಶಕ್ತಿ ಎಲ್ಲ ಕೊಟ್ಟಿದ್ದಾನೆ. ನಾನು ನಿನ್ನ ಹತ್ತಿರವಿದ್ದು ನಿನಗೇನೂ ಮಾಡಬೇಕಿಲ್ಲ. ಆದರೆ ಮನೆಯಲ್ಲಿ ಎರಡು ಬೆಕ್ಕಿನ ಮರಿ, ನಾಯಿಮರಿ, ಹಸು-ಕರು ಇದ್ದವು. ನಾನು ಒಪ್ಪಿಸಿ ಬಂದವರು ಸಮಯಕ್ಕೆ ಸರಿಯಾಗಿ ಅವನ್ನು ನೋಡಿಕೊಳ್ಳದಿದ್ದರೆ ಪಾಪ ಮೂಕಪ್ರಾಣಿಗಳ ಗತಿ ಏನು ಅಂತ ಯೋಚಿಸಿ ಬಂದೆ!’. ಇದು ಪ್ರಾಣಿದಯೆ.

ದುರಂತವೆಂದರೆ, ಇಂದು ಮಾನವರು ದಯೆಯನ್ನು ಮರೆತು ದಾನವರಾಗಿ ಹಿಂಸಾಚಾರ, ಹತ್ಯೆ ಮಾಡುತ್ತಿದ್ದಾರೆ. ಇಂಥವರಲ್ಲಿ ಮಮತೆ, ದಯೆ ಬೆಳೆದು ಮಹದೇವರಾಗಲಿ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

ಪ್ರಾಣಿಗಳಲ್ಲಿರುವ ದಯೆ ಮನುಜರಲ್ಲೇಕೆ ಮಾಯ…

ಇವುಗಳೂ ನಿಮಗಿಷ್ಟವಾಗಬಹುದು

ಗೌತಮ ಬುದ್ಧನ ನುಡಿಮುತ್ತುಗಳು

ಗೌತಮ ಬುದ್ಧನ ಅರ್ಥಪೂರ್ಣ ನುಡಿಮುತ್ತುಗಳು.

Leave a Reply

Your email address will not be published. Required fields are marked *