pratibha prahlad

ಪ್ರತಿಭಾ ಪ್ರಹ್ಲಾದ್

ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಜನವರಿ 29, 1955ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪ್ರಹ್ಲಾದ್, ತಾಯಿ ಪ್ರೇಮಾ. ತಂದೆ ತಾಯಿ ಇಬ್ಬರೂ ಬೋಧಕ ವೃತ್ತಿಯಲ್ಲಿದ್ದವರು. ಓದಿನಲ್ಲಿ ಸದಾ ಮುಂದಿದ್ದ ಪ್ರತಿಭಾರವರು ಪಡೆದದ್ದು ಬಿ.ಎಡ್ ಮತ್ತು ಕಮ್ಯೂನಿಕೇಷನ್‌ನಲ್ಲಿ ಎಂ.ಎಸ್. ಪದವಿ. ಆದರೆ ಒಲಿದದ್ದು ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗಳತ್ತ.

ಪ್ರೊ. ಯು.ಎಸ್. ಕೃಷ್ಣರಾವ್ ಮತ್ತವರ ಪತ್ನಿ ಚಂದ್ರಭಾಗ ದೇವಿಯವರಲ್ಲಿ ಭರತನಾಟ್ಯ ಶಿಕ್ಷಣ ಪಡೆದ ಪ್ರತಿಭಾ, ಶ್ರೀಮತಿ ಸುನಂದಾ ದೇವಿಯವರಲ್ಲಿ ಕೂಚಿಪುಡಿ ನೃತ್ಯ ಕಲಿತರು. ಅವರು ರಂಗಪ್ರವೇಶ ಮಾಡಿದ್ದು 1971ರಲ್ಲಿ. ಮುಂದೆ ಹಲವಾರು ಪ್ರಮುಖ ನೃತ್ಯ ಪ್ರದರ್ಶನ ಮತ್ತು ನೃತ್ಯೋತ್ಸವಗಳಲ್ಲಿ ಪಾಲ್ಗೊಂಡರು. ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಕ್ಕೆ ಇವರು ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟ ಪ್ರಮುಖರ ಸಾಲಿನಲ್ಲಿ ನಿಂತವರು. ಖಜುರಾಹೋ ಉತ್ಸವ, ಕೊನಾರ್ಕ್ ನೃತ್ಯೋತ್ಸವ, ಉಸ್ತಾದ್ ಅಲ್ಲಾ ಉದ್ದೀನ್‌ಖಾನ್ ಉತ್ಸವ, ಪಂಡಿತ ದುರ್ಗಾಲಾಲ್ ಸ್ಮಾರಕ ನೃತ್ಯೋತ್ಸವ, ಸ್ಪಿರಿಟ್ ಆಫ್ ಫ್ರೀಡಮ್ ಕನ್ಸರ್ಟ್ಸ್ ಫಾರ್ ನ್ಯಾಷನಲ್ ಇಂಟಿಗ್ರೇಷನ್, ಪುಣೆ ಗಣೇಶೋತ್ಸವ, ತಂಜಾವೂರು ನೃತ್ಯೋತ್ಸವ, ನಾಟ್ಯಾಂಜಲಿ (ಚಿದಂಬರಂ) ಮುಂತಾದ ದೇಶದ ಪ್ರಮುಖ ನೃತ್ಯೋತ್ಸವಗಳಲ್ಲಿ ಇವರು ಭಾಗಿಯಾಗಿದ್ದಾರೆ.

ಅಂತಾರಾಷ್ಟ್ರೀಯ ನೃತ್ಯೋತ್ಸವಗಳಾದ ಜಪಾನಿನ ಓಕೊಯಾಮ ಇಂಟರ್ ನ್ಯಾಷನಲ್ ಡಾನ್ಸ್ ಫೆಸ್ಟಿವಲ್, ಮ್ಯಾಂಚೆಸ್ಟರ್ ವಿಶ್ವ ಕನ್ನಡ ಸಮ್ಮೇಳನ, ಯುನೈಟೆಡ್ ನೇಷನ್ಸ್ ಇಂಟರಿಯಮ್ ಸಮಿತಿಯಿಂದ ಆಹ್ವಾನ, ಮನಿಲಾ ಅಂತಾರಾಷ್ಟ್ರೀಯ ನೃತ್ಯ ಸಮ್ಮೇಳನ ಮುಂತಾದುವುಗಳಲ್ಲಿ ಪ್ರತಿಭಾ ಪ್ರಹ್ಲಾದ್ ಭಾಗಿಯಾಗಿದ್ದಾರೆ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಉನ್ನತ ಸ್ತರದ ತರಗತಿಗಳನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಪತ್ರಿಕೆಗಳಿಗೆ ಬರೆದ ಸಂಶೋಧನಾತ್ಮಕ ಲೇಖನಗಳು, ನೃತ್ಯ ವಿಮರ್ಶಕಿಯಾಗಿ ನಿರ್ವಹಿಸಿದ ಕಾರ್ಯ, ದೂರದರ್ಶನ ಧಾರಾವಾಹಿಗಳಲ್ಲಿ ನಟಿಯಾಗಿ, ‘ನೆಕ್ವೇರ್ ಇನ್ ಸ್ಟೋನ್’ ಸಾಕ್ಷ್ಯ ಚಿತ್ರದಲ್ಲಿ ನಿರ್ವಹಿಸಿದ ನೃತ್ಯ ಸಂದರ್ಭಗಳು ಇವೇ ಮುಂತಾದ ಕ್ರಿಯಾಶೀಲ ಚಟುವಟಿಕೆಗಳಿಗಾಗಿ ಅಪಾರ ಪ್ರಶಂಸೆ, ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪತಿಭಾ ಪ್ರಹ್ಲಾದ್ ಅವರಿಗೆ ಸಿಂಗಾರಮಣಿ (ಸುರ್ ಸಿಂಗಾರ್-ಮುಂಬಯಿ), ನಾಟ್ಯ ಭಾರತಿ- ವಿರೂಪಾಕ್ಷ ವಿದ್ಯಾರಣ್ಯ ಮಹಾಪೀಠ ಗೌರವ; ಮಹಿಳಾ ಶಿರೋಮಣಿ-ಶಾಸ್ತ್ರೀಯ ನೃತ್ಯಕ್ಕಾಗಿ ಶಿರೋಮಣಿ ಫೌಂಡೇಶನ್-ದೆಹಲಿ ಗೌರವ; ಬೆಸ್ಟ್ ಡಾನ್ಸರ್-ಭುವನೇಶ್ವರ್ ಗೌರವ; ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ. ಕಳೆದ 3 ದಶಕಗಳಲ್ಲಿ ನೃತ್ಯ ತತ್ಪರೆಯಾಗಿ ಇವರು ವಿಶ್ವದಾದ್ಯಂತ 2000ಕ್ಕೂ ಮೀರಿ ಕಾರ್ಯಕ್ರಮಗಳನ್ನಿತ್ತಿದ್ದಾರೆ. ಈ ಪ್ರಸಿದ್ಧ ಕಲಾವಿದರಿಗೆ ಜನ್ಮದಿನದ ಶುಭ ಹಾರೈಕೆಗಳು.

ಮಾಹಿತಿ ಕೃಪೆ: ಕಣಜ

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *