Wednesday , 24 April 2024

ಪರೀಕ್ಷಾ ಫಲಿತಾಂಶ ಮತ್ತು ನಮ್ಮ ಹೊಣೆಗಾರಿಕೆ

ಫಲಿತಾಂಶ ಹೂಮಳೆಯಾಗಲಿ ???
ಫಲಿತಾಂಶ ಸ್ಪೋಟವಾಗದಿರಲಿ ???

ಪರೀಕ್ಷಾ ಫಲಿತಾಂಶದ ಸುಗ್ಗಿಯ ಸಮಯ. ನಿನ್ನೆ PUC ಆಯ್ತು , ಇಂದು SSLC ಫಲಿತಾಂಶ ಬಂದುಬಿಟ್ಟಿದೆ. ಹೀಗೆ ಒಂದರ ಹಿಂದೊಂದು ಫಲಿತಾಂಶಗಳ ಜಾತ್ರೆ.

ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲವೆಂದೋ ಅಥವಾ ತನ್ನ ವಾರಗೆಯವರಿಗಿಂತ ತಾನು ಕಡಿಮೆ ಅಂಕ ಪಡೆದೆನೆಂದೋ , ಹೆತ್ತವರ ನಿರೀಕ್ಷೆ ಈಡೇರಿಸಲಾಗಲಿಲ್ಲವೆಂದೋ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗೋದೂ ಮತ್ತೆ ಕೆಲವರು ಜೀವವನ್ನೇ ತೆಗೆದುಕೊಳ್ಳುವಂತಹಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಇತ್ತೀಚಿಗೆ ಕಂಡು ಬರುತ್ತಿರುವಂತಹಾ ಆತಂಕದ ಬೆಳವಣಿಗೆ.

ಇದರ ಹಿಂದಿನ ಕಾರಣಗಳೇನೂ ? ಮಕ್ಕಳು ಏಕೆ ಇಂತಹಾ ಸಂಧಿಗ್ಧತೆಗೆ ಒಳಗಾಗುತ್ತಿದ್ದಾರೆ ಎಂಬುದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ ಮುಂದೆಯೂ ನಡೆಯುತ್ತಿರುತ್ತದೆ. ಈ ಲೇಖನದ ಉದ್ದೇಶ ಅದಲ್ಲಾ .

ಬಹಳಷ್ಟು ಬಾರಿ ನಮಗರಿವಿಲ್ಲದಂತೆ ನಾವೂ ಕೂಡಾ ಪರೋಕ್ಷವಾಗಿ ಇಂತಹಾ ಬೆಳವಣಿಗೆಗೆ ಕಾರಣೀಕರ್ತರಾಗುತ್ತಿರುತ್ತೇವೆ. ಅದರಲ್ಲೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್, ಕ್ಷಣದಲ್ಲಿ ನಮ್ಮಸುತ್ತಲಿರುವವರ ಫಲಿತಾಂಶದ ಹೂರಣ ನಮಗೆ ತಲುಪುವ ಅವಕಾಶವಿರುವುದು ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗಬಹುದು.

ಅಂತಹಾ ಕೆಲವು ಕಾರಣಗಳನ್ನು ಅವಲೋಕಿಸಿದಾಗ ಈ ಕೆಳಗಿನ ವಿನಂತಿಯನ್ನು ನನಗೆ ಸಾಧ್ಯವಾದಷ್ಟು ಗೆಳೆಯರೊಂದಿಗೆ ಕೂಡಲೇ ಹಂಚಿಕೊಳ್ಳಬೇಕೆಂದೆನಿಸಿ ಗಡಿಬಿಡಿಯಲ್ಲಿ ಬರೆದ ವಿನಂತಿ ಇದೂ.

೧. ನಮ್ಮ ಸಂಬಂಧಿಗಳ , ಮಿತ್ರರ , ಸಹೋದ್ಯೋಗಿಗಳ ಮಕ್ಕಳ ಪರೀಕ್ಷಾ ಫಲಿತಾಂಶವನ್ನು ವಾಟ್ಸ್ ಆಪ್ ಅಥವಾ ಮತ್ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸುವುದು ಬೇಡಾ . ಹಂಚಿಕೊಳ್ಳಬೇಕೆಂದು ಸಂಬಂಧಿಸಿದವರುಗೆ ಅನ್ನಿಸಿದರೆ ಅವರಾಗಿಯೇ ಹಂಚಿಕೊಳ್ಳುವವರೆಗೆ ತಾಳ್ಮೆ ಇರಲಿ.

೨. ತೀರಾ ಅನಿವಾರ್ಯವಾದ ಸಂಧರ್ಭವಲ್ಲದಿದ್ದಲ್ಲಿ ಇತರರ ಮಕ್ಕಳ ನೋಂದಣಿ ಸಂಖ್ಯೆಯನ್ನು ಕೇಳುವುದಾಗಲೀ ಅಥವಾ ಅವರ ಅಥವಾ ಅವರ ಪೋಷಕರ ಪರವಾಗಾಗಲೀ ಫಲಿತಾಂಶವನ್ನು ನಮ್ಮ ಬಳಿಯೂ ಸ್ಮಾರ್ಟ್ ಫೋನ್ ಇದೆ ಎಂಬ ಒಂದೇ ಕಾರಣಕ್ಕಾಗಿ ನೋಡುವುದನ್ನು ನಿರ್ಬಂಧಿಸೋಣ.

೩. ಅಚ್ಚರಿ ಕೊಡುವ ಆತುರದಲ್ಲಿ ಮೊದಲು ಫೋನಿನಲ್ಲಿ ಅನುತ್ತೀರ್ಣನಾಗಿರುವೆ ಅನ್ನೋದೂ ನಂತರ ಸ್ವತಃ ಸಿಕ್ಕಾಗ ನಿಜವಾದ ಫಲಿತಾಂಶ ಹಂಚಿಕೊಳ್ಳುವ ಕುಚೋದ್ಯಗಳಿಂದಾ ದೂರವಿರೋಣಾ. ಕಳೆದ ವರ್ಷ ಇಂತಹಾ ಚೋದ್ಯಕ್ಕೆ ವಿದ್ಯಾರ್ಥಿಯೊಂದು ಪ್ರಾಣ ಕಳೆದುಕೊಂಡ ಘಟನೆ ಇನ್ನೂ ಹಸಿರಾಗಿದೆ

೪. ನಮ್ಮ ಮನೆಯಲ್ಲಿರುವ ಮಕ್ಕಳು ಒಳ್ಳೆಯ ಅಂಕ ಪಡೆದಿದ್ದರೆ ಸಂತೋಷ ಆದರೆ ಅದರ ಟಾಮ್ ಟಾಮ್ ಹೊಡೆಯೋದೂ , ಫಲಿತಾಂಶದ ಸ್ಕ್ರೀನ್ ಶಾಟ್ ಹಂಚಿಕೊಳ್ಳೋದು ಬೇಡಾ. ಕಡಿಮೆ ಅಂಕಪಡೆದ ಮಕ್ಕಳು ಅಥವಾ ವಿದ್ಯಾರ್ಥಿಗಳು ಖಿನ್ನತೆಗೊಳಗಾಗೋದು ಖಂಡಿತ

೫. ಮಕ್ಕಳು ಕಡಿಮೆ ಅಂಕ ಪಡೆದಿದ್ದಲ್ಲಿ ಅವರ ಪೋಷಕರ ಹೊರತಾಗಿ ನಮಗೆ ಪರಿಚಯದವರು ಎಂಬ ಕಾರಣಕ್ಕೆ ಅನಾವಶ್ಯಕ ಸಾಂತ್ವನ ಕೊಡುವುದರಿಂದ ದೂರ ಉಳಿಯೋಣ. ಉದ್ದೇಶವೇನೋ ಒಳ್ಳೆಯದೇ ಆಗಿದ್ದರೂ ನಮ್ಮ ಸಾಂತ್ವನವನ್ನು ಎಳೆಮನಸ್ಸು ಯಾವ ರೀತಿಯಲ್ಲಿ ಸ್ವೀಕರಿಸುತ್ತದೆನ್ನುವುದು ನಮಗೆ ತಿಳಿಯದಿರುವ ಸಾಧ್ಯತೆಗಳು ಹೆಚ್ಚು.

೬. ನಮ್ಮ ಸುತ್ತಾ ಅದರಲ್ಲೂ ಮಕ್ಕಳ ಮುಂದೆ ಈ ರೀತಿ ಫಲಿತಾಂಶವನ್ನು ಸಾಮಾಜಿಕ ಜಾಲತಾಣದ ಯಾವ ನಮೂನೆಯಲ್ಲೂ ಚರ್ಚಿಸುವುದು ಸೂಕ್ತವಲ್ಲ ಎಂಬ ಸಂದೇಶ ಕಾಲಕಾಲಕ್ಕೆ ಕಳುಹಿಸುತ್ತಿರೋಣಾ. ಈ ಮೂಲಕ ಫಲಿತಾಂಶ ಸ್ಪೋಟದ ತೀವ್ರತೆ ಕಡಿಮೆಯಾಗಬಹುದು.

೭. ಮದುವೆಯೋ , ಮುಂಜಿಯೋ ಅಥವಾ ಜನ್ಮದಿನಾಚರಣೆಯಂತಹಾ ಮತ್ಯಾವುದೋ ಕಾರ್ಯಕ್ರಮದ ಸುತ್ತ ಸೃಷ್ಟಿಸಿಕೊಳ್ಳುವಂತಹಾ ಸಾರ್ವಜನಿಕ ಸಡಗರದ ವಾತಾವರಣಕ್ಕೂ ಪರೀಕ್ಷಾ ಫಲಿತಾಂಶಕ್ಕೂ ವ್ಯತ್ಯಾಸವಿದೆ ಎಂಬುದನ್ನು ಮನಗಾಣೋನಾ.

ಗೆಳೆಯರೇ ಕೊನೆಯದಾಗಿ ಈ ಮೇಲ್ಕಾಣಿಸಿದ ವಿಷಯಗಳಲ್ಲಿ ನಾನೇನೂ ಹೊಸತಾದ್ದನ್ನು ಬರೆದಿಲ್ಲಾ. ಈ ತರಹದ ವಿಚಾರಗಳು ನಿಮ್ಮ ಸ್ಮೃತಿಪಟದಲ್ಲೂ ಹಾದು ಹೋಗಿರಬಹುದು. ಆದರೆ ಈ ರೀತಿಯ ಸಾತ್ವಿಕವಾದಂತಹಾ ವಿಚಾರಗಳನ್ನು ನಾವೆಲ್ಲರೂ ನಮ್ಮ ಸುತ್ತ ಮುಕ್ತವಾಗಿ ಹಂಚಿಕೊಳ್ಳಬೇಕಾದ ಅವಶ್ಯಕತೆ ಇದೆ ಎನ್ನುವುದು ನನ್ನಭಿಪ್ರಾಯ.

ವಿ. ಸೂ. : ಸಾಮಾನ್ಯವಾಗಿ ನನ್ನ ಯಾವುದೇ ಸಾಹಿತ್ಯವನ್ನು ತಾವೂ ತಮ್ಮ ಮಿತ್ರವೃಂದದೊಂದಿಗೆ ಹಂಚಿಕೊಳ್ಳಿ ಎನ್ನುವ ಆಗ್ರಹವನ್ನಾಗಲೀ , ನಿರೀಕ್ಷೆಯನ್ನಾಗಲೀ ನಾನು ಮಾಡುವುದಿಲ್ಲ. ಆದರೆ ಈ ನಿಯಮಕ್ಕೆ ಸ್ವಲ್ಪ ವಿರಾಮ ಕೊಡುತ್ತಾ ಇದನ್ನು ತಮ್ಮ ಸುತ್ತಲಿರುವ ಆಪ್ತರೊಂದಿಗೆ ಹಂಚಿಕೊಳ್ಳೋದು ನಿಮ್ಮ ಹೊಣೆಗಾರಿಕೆಕೂಡಾ ಎನ್ನುವುದನ್ನು ನೆನಪಿಸುತ್ತಾ

ಕೆ?ಬಿ?ಬಿ ?
(ಕಾಮನ ಬಿಲ್ಲಿನ ಬತ್ತಳಿಕೆಯಿಂದಾ)
೧೨೦೫೧೯೭೫

ಇವುಗಳೂ ನಿಮಗಿಷ್ಟವಾಗಬಹುದು

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸ

ತಾಮ್ರದ ಕೊಡ ಹಾಗೂ ಪ್ಲಾಸ್ಟಿಕ್ ಕೊಡಗಳಲ್ಲಿಯ ವ್ಯತ್ಯಾಸವೇನು…???? ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು …

Leave a Reply

Your email address will not be published. Required fields are marked *