ಪದ್ಮಚರಣ್ (೨೧.೪.೧೯೨೦ – ೨೨.೭-೨೦೦೨): ಸುಗಮ ಸಂಗೀತ ಕ್ಷೇತ್ರದ ಹರಿಕಾರರಾದ ಎ.ವಿ.ಕೃಷ್ಣಮಾಚಾರ್ಯರು (ಪದ್ಮಚರಣ್)ರು ಹುಟ್ಟಿದ್ದು ಚಿತ್ತೂರು ಜಿಲ್ಲೆಯ ಮದನ ಪಲ್ಲಿ ತಾಲ್ಲೂಕಿನ ಬಡಿಕಾಯಲ ಪಲ್ಲೆ ಗ್ರಾಮದ ’ಗುತ್ತಿ’ ಎಂಬಲ್ಲಿ. ತಂದೆ ಆಸೂರಿ ವೀರರಾಘವಾಚಾರ್ಯಲು, ತಾಯಿ ಜಾನಕಮ್ಮ. ತಾಯಿಗೆ ಸೊಗಸಾದ ಕಂಠದ ಜೊತೆಗೆ ಸಂಗೀತದಲ್ಲಿ ಆಸಕ್ತಿ. ತಾಯಿ ಹಾಡುತ್ತಿದ್ದ ಹಾಡುಗಳನ್ನು ಕೇಳಿ ಕೇಳಿ ಹುಡುಗನ ಕಂಠದಿಂದಲೂ ಹೊಮ್ಮುತ್ತಿದ್ದ ಸುಮಧುರ ಸಂಗೀತ. ಎಂಟನೆಯ ವರ್ಷದಿಂದಲೇ ಸಂಗೀತ ಕಲಿಕೆ. ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮದ ಬಳಿ ಪಿಟೀಲು ಕಲಿಕೆ.
ಹಲವಾರು ಭಾಷೆಗಳಲ್ಲಿ ಪಡೆದ ಪಾಂಡಿತ್ಯ. ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ತೆಲುಗು ಭಾಷೆಗಳನ್ನು ಲೀಲಾಜಾಲವಾಗಿ ಉಪಯೋಗಿಸುತ್ತಿದ್ದ ರೀತಿ. ಪುಸ್ತಕದ ಆಧಾರದಿಂದ ಕಲಿತದ್ದು ಹಿಂದೂಸ್ತಾನಿ ಸಂಗೀತ. ದಿವ್ಯನಾಥನ್ ಎಂಬವರಿಂದ ಕಲಿತ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ, ಉತ್ತರಾದಿ, ದಕ್ಷಿಣಾದಿ, ಪಾಶ್ಚಾತ್ಯ ಸಂಗೀತದಲ್ಲಿ ಪಡೆದ ಪರಿಣತಿ. ಕೆ. ವಾಸುದೇವಾ ಚಾರ್ಯರು, ಟೈಗರ್ ವರದಾಚಾರ್ಯರು, ಟಿ.ಆರ್.ಮಹಾಲಿಂಗಂ, ಚೆಂಬೈ ವೈದ್ಯನಾಥ್ ಭಾಗವತರ್, ಭೀಮ ಸೇನ ಜೋಶಿ, ಡಿ.ಬಿ.ಹರೀಂದ್ರ, ದೇವಗಿರಿ ಶಂಕರ ಜೋಶಿ, ಲಕ್ಷ್ಮೀಭಾವೆ ಮುಂತಾದ ದಿಗ್ಗಜರುಗಳ ಸಂಗೀತ ಕಾರ್ಯಕ್ರಮಕ್ಕೆ ನೀಡಿದ ಪಿಟೀಲಿನ ಸಾಥಿ.
ಭಾವಗೀತೆಗಳಿಗೂ ಮಾಡಿದ ರಾಗ ಸಂಯೋಜನೆ. ಪದ್ಮಚರಣ್ ಎಂಬ ಕಾವ್ಯನಾಮದಿಂದ ಪ್ರಸಾರ. ರಾಗ ಸಂಯೋಜನೆಯಷ್ಟೇ ಅಲ್ಲದೆ ವಾದ್ಯಸಂಗೀತ ಸಂಯೋಜನೆಗೂ ಅವರು ನೀಡುತ್ತಿದ್ದ ಪ್ರಾಶಸ್ತ್ಯ. ೧೯೪೨ ರಿಂದ ಮದರಾಸು ರೇಡಿಯೋ ಕೇಂದ್ರದಲ್ಲಿ ಪಿಟೀಲುವಾದನ. ೧೯೪೫ ರಿಂದ ಮೈಸೂರು ಆಕಾಶವಾಣಿಯಲ್ಲಿ. ೧೯೪೯ ರಿಂದ ನಿಲಯದ ಕಲಾವಿದರಾಗಿ ನೇಮಕ. ತಾರಾಮಂಡಲ, ನದಿಯ ಮಕ್ಕಳು, ಅಕ್ಕಮಹಾದೇವಿ, ಗೆಲುವಿನ ಗುಡಿ, ಮಲೆನಾಡು ಮುಂತಾದ ಸಂಗೀತ ರೂಪಕಗಳಿಗೆ ನೀಡಿದ ಯಶಸ್ವಿ ಸಂಗೀತ. ಇವರು ಹಾಡಿದ ಆರು ಹಾಡುಗಳು TRANSCRIPTION DISCS ಆಗಿ ಭಾರತದ ಎಲ್ಲ ಆಕಾಶವಾಣಿ ಕೇಂದ್ರದಲ್ಲೂ ಪ್ರಸಾರ. ದೂರದರ್ಶನ ಚಲನಚಿತ್ರ, ಯಕ್ಷಗಾನ, ರಂಗ ನಾಟಕ, ಸಾಕ್ಷ್ಯಚಿತ್ರಗಳಿಗೆ ನೀಡಿದ ಸಂಗೀತ. ಬೇಲೂರು ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ಸೋಮನಾಥಪುರ ಸಾಕ್ಷ್ಯಚಿತ್ರಕ್ಕೆ ಸಂದ ಅಂತಾರಾಷ್ಟ್ರೀಯ ಪ್ರಶಸ್ತಿ.
ಸಂದ ಪ್ರಶಸ್ತಿ ಗೌರವಗಳು ಹಲವಾರು. ಕರ್ನಾಟಕ ಸಂಗೀತ, ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾರತ್ನ ಬಿರುದು, ಕಲಾಭಿಮಾನಿಗಳು ಅರ್ಪಿಸಿದ ’ಪದ್ಮಪಲ್ಲವ’ ಅಭಿನಂದನ ಗ್ರಂಥ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.