ಪಟ್ಟದಕಲ್ಲು, ಬಾದಾಮಿ ಚಾಲುಕ್ಯರ ಕಾಲದ ಶ್ರೇಷ್ಠ ಕಲೆಯ ಭವ್ಯ ದೇವಾಲಯಗಳಿಗೆ (ಕ್ರಿ.ಶ.೭-೯ನೇ ಶತಮಾನ) ಈಗಾಗಲೇ ಜಗತ್ಪ್ರಸಿದ್ದವಾಗಿದೆ. ಟಾಲೆಮಿಯ ಗ್ರಂಥದಲ್ಲಿ (ಕ್ರಿ.ಶ.೨ನೇಯ ಶತಮಾನ) ಪಟ್ಟದಕಲ್ಲು ಉಲ್ಲೇಖಿತವಾಗಿದೆ. ಆಗ ವಾಣಿಜ್ಯ ವ್ಯವಹಾರಗಳಿಗೆ ಮುಖ್ಯವಾಗಿದ್ದ ನಗರಗಳಲ್ಲಿ ಪಟ್ಟದಕಲ್ಲು ಒಂದು. ಈ ಕಾಲದ ಜನವಸತಿಯಿದ್ದ ಒಂದು ನೆಲೆಯು[1] (ಕ್ರಿ.ಪೂ.೩-ಕ್ರಿ.ಶ.೩ನೆಯ ಶತಮಾನ) ಈ ಊರಿಗೆ ಸುಮಾರು ೧ ಕಿ.ಮೀ. ದೂರದಲ್ಲಿದ್ದ ಬಾಚನಗುಡ್ಡದ ಬದಿಯಲ್ಲಿ ಹಿಂದೆ ಶೋಧವಾಗಿದೆ. ಇತ್ತೀಚೆಗೆ ಈ ಊರಿಗೆ ಹೊಸ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾಗ ಊರಿನ ಅತಿ ಸಮೀಪದಲ್ಲಿನ ರಸ್ತೆಯ ಬದಿಯಲ್ಲಿ ಅಗೆದ ಗುಂಡಿಗಳಲ್ಲಿ ಇದೇ ಕಾಲದ ಜನವಸತಿಯಿದ್ದ ಕುರುಹುಗಳಾದ ಹಾಳು ಮಣ್ಣು, ಮೃತ್ ಪಾತ್ರೆಯ ಅವಶೇಷಗಳು[2] ಹೇರಳವಾಗಿ ಕಂಡು ಬಂದವು. ಅಂದರೆ, ಆಗ ಈ ನಗರವು ಈಗಿನ ಬಾಚನಗುಡ್ಡದಿಂದ ಪಟ್ಟದಕಲ್ಲಿನ ನದಿಯ ಸಮೀಪದವರೆಗೂ ಸುಮಾರು ೧, ೧೧/೨ ಕಿ.ಮೀ ನಷ್ಟು ವಿಸ್ತಾರವಾಗಿತ್ತು ಎಂದು ಅಲ್ಲಲ್ಲಿಯ ಈ ನೆಲೆಗಳಿಂದ ತೋರುವುದು.
ಈ ಹಾಳುಮಣ್ಣಿನ ನೆಲೆಗಳಲ್ಲಿ ಇಟ್ಟಿಗೆಯ ಚೂರುಗಳು, ಹೊಳಪಾದ ಕಂಪು ಕಪ್ಪು ದ್ವಿವರ್ಣದ ಮತ್ತು ಬರೇ ಕಪ್ಪು, ಇಲ್ಲವೆ ಕೆಂಪು ಬಣ್ಣದ ವಿವಿಧ ಮೃತ್ ಪಾತ್ರೆಗಳು, ಕಬ್ಬಿಣದ ಕಿಟ್ಟ ಮುಂತಾದವುಗಳು ವಿಪುಲವಾಗಿವೆ. ದ್ವಿವರ್ಣ ಪಾತ್ರೆಗಳು ಬಿಳಿಯ ಬಣ್ಣದ ರೇಖಾ ಚಿತ್ರಗಳಿಂದ (Russet coated white painted pottery) ಅಲಂಕೃತವಾಗಿರುತ್ತವೆ. ಇಂಥ ಒಂದು ನೆಲೆಯು ಐಹೊಳೆಯಲ್ಲಿ ಬಂಡೆಯಲ್ಲಿ ಕೊರೆದು ಮಾಡಿದ ಜೈನ ಗುಹಾದೇವಾಲಯದ ಹತ್ತಿರದಲ್ಲಿನ ಹೊಲಗಳಲ್ಲಿ ೧೯೬೫ರಲ್ಲಿ ನನಗೆ ಕಂಡುಬಂದಿತು. ಟಾಲೆಮಿಯ ಗ್ರಂಥದಲ್ಲಿ ಐಹೊಳೆಯೂ ಉಲ್ಲೇಖವಾಗಿದೆ. ಇತ್ತೀಚೆಗೆ ಇಲ್ಲಿರುವ ದೇವಾಲಯಗಳ ಸುತ್ತುಮುತ್ತಲಿನ ಮಣ್ಣನ್ನು ತೆಗೆದು ಸ್ವಚ್ಛ ಮಾಡುತ್ತಿರುವಾಗ ಶಾತವಾಹನ ಅರಸರ ಒಂದು ನಾಣ್ಯವು[3] ಸಿಕ್ಕಿದೆಯೆಂದು ತಿಳಿದು ಬಂದಿದೆ ಮತ್ತು ಲಾಡ್‌ಖಾನ್ ದೇವಾಲಯದ ತಳಹದಿಯ ಕೆಳಗೆ ಒಂದು ಇಟ್ಟಿಗೆಯ ಕಟ್ಟಡವೂ ತೋರಿ ಬಂತು. ಬ್ರಹ್ಮಗಿರಿ ಮತ್ತು ಮಸ್ಕಿಯಲ್ಲಿನ ಉತ್ಖನನಗಳಲ್ಲಿ[4] ಕಂಡುಬಂದ ಇತಿಹಾಸ ಪ್ರಾರಂಭ ಕಾಲದ ಸಂಸ್ಕೃತಿಯ ವಸ್ತುಗಳಿಗೂ ಮೇಲೆ ಹೇಳಿದ ನೆಲೆಗಳಲ್ಲಿಯ ವಸ್ತುಗಳಿಗೂ ಬಹಳ ಹೋಲಿಕೆಯಿದ್ದು, ಈ ಸ್ಥಳಗಳ ಮತ್ತು ನೆಲೆಗಳಲ್ಲಿಯ ಜನವಸತಿಯ ಸಮಕಾಲೀನತೆಯನ್ನು ಸೂಚಿಸುತ್ತದೆ. ಆಗಿನ ಜನಜೀವನದ ಬಗ್ಗೆ ಕೆಲವೊಂದು ವಿಷಯಗಳನ್ನು ಈ ಉತ್ಖನನಗಳಿಂದ ತಿಳಿದಿದೆ. ಈ ಸಂಸ್ಕೃತಿಯ ಕಾಲಮಾನವನ್ನು[5] ಕ್ರಿ.ಪೂ. ೩ನೆಯ ಶತಮಾನದಿಂದ ಕ್ರಿ.ಶ.೩-೪ನೆಯ ಶತಮಾನದವರೆಗೆ ಎಂದು ಸ್ಥೂಲವಾಗಿ ಹೇಳಬಹುದು.
ಆದರೆ, ಪಟ್ಟದಕಲ್ಲಿನಲ್ಲಿ ಈ ಕಾಲದ ಜನರ ನೆಲೆಗಳು ಶೋಧವಾಗಿದ್ದರೂ ಕೂಡ ಅವರ ಸಂಸ್ಕೃತಿಯ ಬಗ್ಗೆ ಸ್ವಾರಸ್ಯಕರವಾದುದೇನೂ ತಿಳಿದು ಬಂದಿಲ್ಲ. ಬಾದಾಮಿಯ ಚಾಲುಕ್ಯ ರಾಜರ ಕಾಲದಲ್ಲಿ ಅತ್ಯಂತ ವೈಭವದಿಂದ ಪವಿತ್ರ ಕ್ಷೇತ್ರವಾಗಿ, ಕತೆಯ ಬೀಡಾಗಿ ಮೆರೆದಂಥ ಪಟ್ಟದಕಲ್ಲಿಗೆ ಮಹತ್ವದ ಸಾಂಸ್ಕೃತಿಕ ಹಿನ್ನೆಲೆಯಿರಬೇಕಲ್ಲವೆ? ಆದುದರಿಂದ ಚಾಲುಕ್ಯ ಪೂರ್ವದ ಪಟ್ಟದಕಲ್ಲಿನ ಇತಿಹಾಸದಲ್ಲಿ ಹೆಚ್ಚಿನ ಸಂಶೋಧನೆಯು ಅವಶ್ಯ. ಈ ಸಂದರ್ಭದಲ್ಲಿ. ಇಲ್ಲಿ ಇತ್ತೀಚಿನ ಉತ್ಖನನದಲ್ಲಿ ಚಾಲುಕ್ಯಪೂರ್ವದ ಒಂದು ವಿಶಾಲವಾದ ಇಟ್ಟಿಗೆಯ ಕಟ್ಟಡವು ದೊರೆತಿರುವುದು ಬಹಳ ಮಹತ್ವದ್ದಾಗಿದೆ. ಏಕೆಂದರೆ, ಚಾಲುಕ್ಯಪೂರ್ವದ ಐತಿಹಾಸಿಕ ಕಟ್ಟಡಗಳು ಇದುವರೆಗೂ ದೊರೆತಿರುವುದು ತುಂಬ ವಿರಳ. ಬ್ರಹ್ಮಗಿರಿಯ ಉತ್ಖನನದಲ್ಲಿ ಕಾಣಿಸಿಕೊಂಡ ಗಜಪೃಷ್ಠಾಕೃತಿಯ ಕಟ್ಟಡ[6] ಮತ್ತು ಬನವಾಸಿಯಲ್ಲಿ ಇತ್ತೀಚಿನ ಉತ್ಖನನದಲ್ಲಿ ಬೆಳಕಿಗೆ ಬಂದ ಬೃಹತ್ ಚೈತ್ಯವು[7] ಆದುದರಿಂದ ಪಟ್ಟದಕಲ್ಲಿನ ಇಟ್ಟಿಗೆಯ ಕಟ್ಟಡದ ವಿವರಣೆಯನ್ನು ಇಲ್ಲಿ ಕೊಡಲಾಗಿದೆ.
ಕೇಂದ್ರ ರಾಜ್ಯಾಂಗದ ಪುರಾತತ್ವ ಸರ್ವೇಕ್ಷಣ ಶಾಖೆಯ ನೈಋತ್ಯ ವಿಭಾಗವು ಅದರ ಅಧಿಕಾರಿಗಳಾದ ಶ್ರೀ ಎಸ್.ಆರ್.ರಾವ್ ಅವರ ನೇತೃತ್ವದಲ್ಲಿ ಈಗ ನಾಲ್ಕೈದು ವರ್ಷಗಳಿಂದ ಬಾದಾಮಿ, ಪಟ್ಟದಕಲ್ಲು ಮಕ್ತು ಐಹೊಳೆಯಲ್ಲಿಯ ದೇವಾಲಯಗಳ ಸುತ್ತಮುತ್ತಲಿನ ಅತಿಕ್ರಮಣವನ್ನು ಮತ್ತು ಕೊಳಚೆಯನ್ನೆಲ್ಲ ತೆಗೆಸಿ ಅರೆಮುಚ್ಚಿಹೋಗಿದ್ದ ದೇವಾಲಯಗಳು ಎಲ್ಲ ಕಡೆಗಳಿಂದಲೂ ಸಂಪೂರ್ಣವಾಗಿ ಬಲು ಮನೋಹರವಾಗಿ ಕಾಣುವ ಹಾಗೆ ಮಾಡಿರುವುದು ಯೋಗ್ಯ ಹಾಗೂ ಪ್ರಶಂಸನೀಯ. ಪಟ್ಟದಕಲ್ಲಿನಲ್ಲಿ ಈ ಸ್ವಚ್ಛತೆಯ ಕಾರ್ಯವು ನಡೆಯುತ್ತಿದ್ದಾಗ, ಅಲ್ಲಿಯ ಸಂಗಮೇಶ್ವರ ಮತ್ತು ಗಳಗನಾಥ ದೇವಾಲಯಗಳ ಕಾಲಸಂಬಂಧವನ್ನು ಗೊತ್ತು ಮಾಡಲು ಸಣ್ಣ ಪ್ರಮಾಣದಲ್ಲಿ ಉತ್ಖನನವನ್ನು ಮಾಡಲು ನನಗೆ೯ ಆದೇಶವು ಬಂದಿತು. ೧೯೭೦ನೆಯ ಮೇ ತಿಂಗಳ ಎರಡನೆಯ ಪಕ್ಷದಲ್ಲಿ ಶ್ರೀ ಎಸ್.ಆರ್.ರಾವ್ ಅವರ ನಿರ್ದೇಶನದಲ್ಲಿ ಈ ಉತ್ಖನನವನ್ನು ನಡೆಸಿದೆನು. ಈ ಎರಡೂ ದೇವಾಲಯಗಳು ಸೇರುವ ಹಾಗೆ ಉದ್ದಕ್ಕೂ ಶಾಸ್ತ್ರೀಯವಾಗಿ ಗುಂಡಿ ತೋಡಲಾಯಿತು. ಆದರೆ ಗಳಗನಾಥ ದೇವಾಲಯದ ಬದಿಯಲ್ಲಿ ತೋಡಿದ ಗುಂಡಿಯ ಭಾಗದ ಪ್ರದೇಶವು ಉತ್ಖನನ ಮಾಡುವುದಕ್ಕಿಂತ ಮೊದಲೇ ಜನರು ತಮ್ಮ ಮನೆಗಳನ್ನು ಕಟ್ಟುವುದಕ್ಕೋಸ್ಕರ ಅದನ್ನು ಅಗೆದು ಅಲ್ಲಿಯ ಮೊದಲಿನ ಸ್ಥಿತಿಯನ್ನೂ ಹಾಳುಮಾಡಿದ್ದರಿಂದ ನಮ್ಮ ಉತ್ಖನನದ ಉದ್ದೇಶವು ಸಫಲವಾಗಲಿಲ್ಲ. ಈ ಉತ್ಖನನವು ನಡೆಯುತ್ತಿರುವಾಗ ಸಂಗಮೇಶ್ವರ ದೇವಾಲಯದ ಮುಂದಿನ ನಂದಿ ಮಂಟಪದ ಬಲಭಾಗದ ಪ್ರದೇಶದಲ್ಲಿ ಕಾಣಿಸುತ್ತಿದ್ದಂಥ ಎರಡು ಇಟ್ಟಿಗೆಗಳನ್ನು ಕುತೂಹಲದಿಂದ ಸ್ಪಷ್ಟವಾಗಿ ಕಾಣುವ ಹಾಗೆ ಬಿಡಿಸಿದೆ. ಆಗ ಅದು ಒಂದು ಗೋಡೆಯ ಕೆಳಭಾಗವೆಂದು ಕಂಡುಬಂದಿತು ಈ ಗೋಡೆಯಿದ್ದ ಭಾಗದಲ್ಲಿ ಕ್ರಮವಾಗಿ ಉತ್ಖನನವನ್ನು ಮಾಡಿದಾಗ ಕಂಬಗಳುಳ್ಳ ವಿಶಾಲವಾದ ಕಟ್ಟಡವೇ ಬೆಳಕಿಗೆ ಬಂದಿತು. ಈ ಕಟ್ಟಡದ ಅತ್ಯಂತ ಕೆಳಭಾಗದ ಅಂದರೆ ಎರಡು ಸಾಲಿನಿಂದ ಹಿಡಿದು ಆರು ಸಾಲಿನ ಎತ್ತರದವರೆಗೆ ಮಾತ್ರ ಉಳಿದ ಇಟ್ಟಿಗೆ ಗೋಡೆಗಳು, ಕಂಬಗಳು ದೊರಕಿದವು.
ಕಟ್ಟಡವು ಸಂಗಮೇಶ್ವರ ದೇವಾಲಯದ ಮುಂಭಾಗದಲ್ಲಿರುವ ನಂದಿ ಮಂಟಪದ ಅಧಿಷ್ಠಾನದ ಪೂರ್ವದ ಬದಿಯಿಂದ ಹಿಡಿದು ದೇವಾಲಯದ ಮುಂಬದಿಯ ಅಧಿಷ್ಠಾನದವರೆಗೂ ಇದೇ ಮತ್ತು ವಿಸ್ತಾರದಲ್ಲಿ ದೇವಾಲಯದ ಅಗಲಕ್ಕಿಂತ ಸ್ವಲ್ಪ ಕಡಿಮೆ ಇದರ ಪಶ್ಚಿಮ ಭಾಗವು ಇನ್ನೂ ಸ್ವಲ್ಪ ದೇವಾಲಯದ ಅಧಿಷ್ಠಾನದ ಕೆಳಗೆ ಇದೆ. (ಚಿತ್ರ ೩ ನೋಡಿ) ಇದರ ಹೊರಬದಿಯ ಕ್ಷೇತ್ರ ಫಲ ೧೪x೧೪.೯೦ಮಿ. ಇದು ಮಧ್ಯದಲ್ಲಿ ಉದ್ದಕ್ಕೂ ಇರುವ ಕಂಬಗಳ ಎರಡು ಸಾಲುಗಳಿಂದ ಮಧ್ಯಾಂಗಣ (nave) ಮತ್ತು ಇಕ್ಕೆಲದ ಹಜಾರ (Sideaisles)ಗಳಾಗಿ ವಿಭಾಗಿಸಲ್ಪಟ್ಟಿವೆ.
ಮಧ್ಯಾಂಗಣವು ಸುಮಾರು ೬ ಮೀ. ಅಗಲ ೮ಮೀ ಉದ್ದವಾಗಿದೆ. ಈಗ ಅದರ ಪೂರ್ವದ ಬದಿಯಲ್ಲಿ ಗೋಡೆಯ ಮೇಲೆ ಸ್ವಲ್ಪ ಚಾಚಿಕೊಂಡಿರುವ ೪.೭೫ ಚದುರದ ಚಾಲುಕ್ಯರ ಕಾಲದ ನಂದಿಮಂಟಪದ ಅಧಿಷ್ಠಾನವಿದೆ. ಅಧಿಷ್ಠಾನದ ಅಂಚಿನ ಅಡಿಯಲ್ಲಿ ಸುತ್ತಲೂ ಅರ್ಧ ಹೊರಗೆ ಕಾಣುತ್ತಿರುವ ಇಟ್ಟಿಗೆಯ ಸಾಲು ಇದೆ. ನಂದಿ ಮಂಟಪದ ಮೆಟ್ಟಿಲಿನ ಬಲಬದಿಯ ಅಧಿಷ್ಠಾನದ ಮೂಲೆಯ ಕೆಳಗಡೆಗೆ ಒಂದು ಹೋರಿನಲ್ಲಿ ತುಂಬ ಇಟ್ಟಿಗೆಗಳು ಕಾಣುತ್ತಿದ್ದವು. ಅಂದರೆ, ನಂದಿಮಂಟಪದ ಅಧಿಷ್ಠಾನವಿದ್ದಲ್ಲಿ, ಮೊದಲು ಗೋಡೆಗೆ ಸೇರಿದ ಹಾಗೆ ೫x೪ ಚದುರದ ಒಂದು ಇಟ್ಟಿಗೆಯ ಕೋಣೆಯು ಇದ್ದಿರಬೇಕು. ಇದು ಹಾಳುಬಿದ್ದ ನಂತರ, ಇದರ ಮೇಲೆ ಈಗ ಇರುವ ಅಧಿಷ್ಠಾನವು ಏರಿಸಲ್ಪಟ್ಟಿದೆಯೆಂಬುದು ಸುಸ್ಪಷ್ಟ.
ಇಕ್ಕೆಲದ ಹಜಾರವು ಸುಮಾರು ೨ ಮೀ. ಅಗಲ, ೮ ಮೀ ಉದ್ದ ಇದೆ. ಇಕ್ಕೆಲದ ಹಜಾರಗಳನ್ನೂ ಮಧ್ಯಾಂಗಣದಿಂದ ಪ್ರತ್ಯೇಕಿಸುವ ಎರಡು ಸಾಲುಗಂಬಗಳಿವೆ. ಉತ್ತರ ಬದಿಯ ಸಾಲಿನಲ್ಲಿ ೨ ಕಂಬಗಳು, ದಕ್ಷಿಣ ಬದಿಯ ಸಾಲಿನಲ್ಲಿ ೩ ಕಂಬಗಳು ಮಾತ್ರ ದೊರೆತಿವೆ. ಇವುಗಳಿಗೆ ಅನುರೂಪವಾಗಿ ಹಜಾರದ ಗೋಡೆಗಳಿಗೆ ಹತ್ತಿದ ಹಾಗೆ ಸುತ್ತಲೂ ಒಟ್ಟು ೬ ಕಂಬಗಳು ಮಾತ್ರ ಉಳಿದಿವೆ. ಮೊದಲು ಮಧ್ಯದಲ್ಲಿ ೮ ಕಂಬಗಳು ಮತ್ತು ಗೋಡೆಗೆ ಸೇರಿದ ಹಾಗೆ ೮ ಕಂಬಗಳು ಇದ್ದ ಹಾಗೆ ತೋರುವುದು. ಕಂಬಗಳೆಲ್ಲವೂ ಸುಮಾರು ೧ ಮೀ ಚದುರದ ಚೌಕೋನವಾಗಿವೆ.
ಮಧ್ಯಾಂಗಣದ ಪಶ್ಚಿಮ ಬದಿಯ ಎರಡು ಕಡೆಗಳಲ್ಲಿ ಗೋಡೆಯ ಭಾಗಗಳು ಮತ್ತು ಹೊರಭಾಗದ ಉತ್ತರ ಭಾಗದ ಕಂಬಗಳ ಸಾಲಿಗೆ ಸರಿಯಾಗಿ, ಸ್ವಲ್ಪ ಬಾಗಿದ ಗೋಡೆಯು ಇವೆ. ಇದು ಸಂಗಮೇಶ್ವರ ದೇವಾಲಯದ ಮೆಟ್ಟಿಲಿನ ಪಾರ್ಶ್ವದ ಕಲ್ಲಿನ ಕೆಳಗೆ ಹೋಗಿದೆ. ಈ ಗೋಡೆಯ ಎದುರಿಗೆ, ದಕ್ಷಿಣದ ಕಂಬಗಳ ಸಾಲಿಗೆ ಸರಿಯಾಗಿ ಗೋಡೆಯ(?) ಅವಶೇಷಗಳಿವೆ. ಈ ಇಟ್ಟಿಗೆ ಅವಶೇಷಗಳ ದಕ್ಷಿಣಕ್ಕೆ ಸಭಾಂಗಣದ ಗೋಡೆಗೆ ಸೇರಿದ ಹಾಗೆ ಒಂದು ಕಂಬವಿದೆ. ಮತ್ತು ಈ ಕಂಬಕ್ಕೆ ಹೊಂದಿದ ಗೋಡೆಯು ಸಂಗಮೇಶ್ವರ ದೇವಾಲಯದ ಅಧಿಷ್ಠಾನದ ಕೆಳಗೆ ಹೋಗಿದೆ.
ಗೋಡೆಯು ಉದ್ದಕ್ಕೂ ೫ ಸಾಲುಗಳಿಂದ ಕೂಡಿ ಸುಮಾರು ೧ ಮೀ.ನಷ್ಟು ಅಗಲವಾಗಿದೆ. ಇಟ್ಟಿಗೆಗಳ ಅಳತೆಯು ಸ್ವಲ್ಪ ಹೆಚ್ಚು ಕಡಿಮೆಯಿದ್ದುದರಿಂದ ಅವುಗಳನ್ನು ಹೇಗೆ ಅನುಕೂಲವಾಗುವುದೊ ಹಾಗೆ ಅಡ್ಡವಾಗಿಯೂ ಉದ್ದವಾಗಿಯೂ ಜೋಡಿಸಿವೆ. ಸಾಮಾನ್ಯವಾಗಿ ಇಟ್ಟಿಗೆಯ ಅಳತೆಯು ೩೦x೨೨x೬ ೧/೨ ಸೆಂ.ಮೀ. ಗೋಡೆಗಳಿಗೆ ೧ ಸೆ.ಮೀ.ನ ದಪ್ಪದಷ್ಟು ಸುಣ್ಣವು ಬಳಿಯಲ್ಪಟ್ಟಿತ್ತು. ನಂದಿಮಂಟಪದ ಉತ್ತರದ ಅಂಚಿನ ಕೆಳಗಿರುವ ಇಟ್ಟಿಗೆಯ ಗೋಡೆಗೆ ಹಚ್ಚಿದ ಸುಣ್ಣ ಲೇಪನದ ತುಣುಕುಗಳು ಸಿಕ್ಕವು.
ಇತ್ತೀಚಿನವರೆಗೂ ಈ ಕಟ್ಟಡ ಇದ್ದ ಭಾಗದಲ್ಲಿ ಇದ್ದ ಮನೆಗಳನ್ನು ಕಟ್ಟಿದ ಕಾಲದಲ್ಲಿ, ಇದರ ಬಹುಭಾಗವು ಹಾಳಾಗಿದೆ. ಏಕೆಂದರೆ ಇದರ ನೈರುತ್ಯ ಭಾಗದಲ್ಲಿ ಮತ್ತು ದಕ್ಷಿಣದ ಗೋಡೆಯ ಒಂದೆರಡು ಭಾಗದಲ್ಲಿ ಇಟ್ಟಿಗೆಯ ಗೋಡೆಯ ತಳಭಾಗದ ಹಂತದಿಂದ ಕೆಳಗೆ ಕೂಡ ಬೂದಿ ಮತ್ತೂ ಇತ್ತೀಚಿನ ಕಾಲದ ಗಡಿಗೆಯ ಚೂರುಗಳು ಸಿಕ್ಕವು. ಈ ಮಧ್ಯಾಂಗಣ ಮತ್ತು ಹಜಾರಗಳ ಪಶ್ಚಿಮದ ಬದಿಯಲ್ಲಿನ ಭಾಗವು ದೇವಾಲಯದ ಅಧಿಷ್ಠಾನದ ಅಡಿಯಲ್ಲಿರುವುದರಿಂದ ಕಟ್ಟಡದ ಆ ಭಾಗದ ಸ್ವರೂಪ ಹೇಗಿತ್ತೆಂಬುದನ್ನು ತಿಳಿಯುವುದು ದುಸ್ತರ.
ಆದರೆ ಈ ಕಟ್ಟಡದ ರಚನೆಯಲ್ಲಿ ಪರಿಮಾಣ ಔಚಿತ್ಯ ಇರುವುದರಿಂದ, ದಕ್ಷಿಣ ಬದಿಯ ಗೋಡೆಯಿದ್ದ ಹಾಗೆ ಉತ್ತರ ಬದಿಯಲ್ಲಿಯೂ ಮತ್ತೂ ಮಧ್ಯಾಂಗಣದ ಉತ್ತರಬದಿಯ ಕಂಬಗಳ ಸಾಲಿನ ನೇರಕ್ಕೆ ಇರುವ ಗೋಡೆಯ ಹಾಗೇ ದಕ್ಷಿಣ ಭಾಗದಲ್ಲಿಯೂ ರೇಖಾಚಿತ್ರದಲ್ಲಿ ತುಂಡು ಗೆರೆಗಳಿಂದ ತೋರಿಸಿದ ಹಾಗೆ ಇದ್ದಿರಬಹುದು.
ದೇವಾಲಯದ ಅಧಿಷ್ಠಾನದ ಕೆಳಗೆ ಉಳಿದಿದ್ದಿರಬಹುದಾದ ಈ ಗೋಡೆಗಳ ಭಾಗಗಳ ಮೊದಲಿನ ವಿನ್ಯಾಸವನ್ನು ತಿಳಿಯುವುದು ತೀರ ಕಷ್ಟ. ಆದರೂ ಕಣ್ಣಿಗೆ ತೋರುವ ಭಾಗಗಳಲ್ಲಿ ಸ್ವಲ್ಪ ಬಾಗಿದ ಗೋಡೆಯನ್ನು ಲಕ್ಷಿದರೂ ಈ ಅಧಿಷ್ಠಾನವಿರುವ ಪ್ರದೇಶದಲ್ಲಿ ಕಟ್ಟಡದ ಪಶ್ಚಿಮ ಭಾಗವು ಚುಕ್ಕೆಗಳಿಂದ ತೋರಿಸಿದ ಗಜ ಪೃಷ್ಠಾಕೃತಿಯ ಹಾಗೆ ಇದ್ದಿರಬಹುದು. ಆಗ ಸ್ವಲ್ಪ ಬಾಗಿದ ಗೋಡೆಯ, ಮೊದಲು ಪ್ರದಕ್ಷಿಣ ಪಥವುಳ್ಳ ಪೂರ್ವಾಭಿಮುಖವಾಗಿರುವ ಗಜಪೃಷ್ಠಾಕೃತಿಯ ಚೈತ್ಯಗೃಹದ ಅಥವಾ ಗರ್ಭಗೃಹದ ಭಾಗವಾಗಿರಬಹುದು. ಹೀಗಿದ್ದಲ್ಲಿ ನಂದಿಮಂಟಪ ಇರುವಲ್ಲಿ ಪೂರ್ವದ ಗೋಡೆಗೆ ಹತ್ತಿದ ಹಾಗೆ ಇದ್ದ ಕೋಣೆ ಅಥವಾ ವೇದಿಕೆಯಿರುವುದು ಸಮಂಜಸವಾಗುವುದಿಲ್ಲ. ಮತ್ತು ಆ ಬದಿಯ ಗೋಡೆಯ ಉದ್ದ ಮತ್ತು ಆಕಾರವನ್ನು ನೋಡಿದರೆ ಅದರ ಮುಂದೆ ಮುಖ ಮಂಟಪವಿದ್ದ ಹಾಗೆ ಇಲ್ಲಿ ಬಾಗಿದ ಗೋಡೆಯ ವೃತ್ತಾಕಾರವು ಬಹಳ ಅಲ್ಪವಾಗಿದ್ದು ಆ ಗೋಡೆಯು ಪೃಷ್ಠಾಕೃತಿಯ ಆಕಾರವನ್ನು ತಾಳಬಹುದೆ ಎಂದು ಅನುಮಾನವಾಗಬಹುದು. ಈ ರೀತಿಯಲ್ಲದೆ ತುಂಡುಗೆರೆಯಲ್ಲಿ ತೋರಿಸಿದ ಹಾಗೆ ಪಶ್ಚಿಮ ಭಾಗವು ಇದ್ದಲ್ಲಿ ಕಟ್ಟಡಕ್ಕೆ ಪಶ್ಚಿಮದ ಕಡೆ ಮುಖಮಂಟಪವಿದ್ದು ಮಧ್ಯಾಂಗಣಕ್ಕೆ ಹೋಗಲು ದ್ವಾರವಿದ್ದಿರಬಹುದು. ಆಗ ನಂದಿ ಮಂಟಪವಿರುವಲ್ಲಿ ಇದ್ದ ಗೋಡೆಗೆ ಹತ್ತಿಕೊಂಡಿರುವ ಚೌಕೋನದ ಕೋಣೆಯು ಪಶ್ಚಿಮಾಭಿಮುಖವಾಗಿುವ ಗರ್ಭಗೃಹವಿರಬಹುದು. ಈ ಪ್ರಕಾರವಾಗಿದ್ದಲ್ಲಿ ಅಥವಾ ಈಗ ದೊರೆತ ಭಾಗದಷ್ಟು ಆಗಲಿ ಈ ಕಟ್ಟಡದ ತಳವಿನ್ಯಾಸ ಮತ್ತು ವಿಸ್ತಾರದಲ್ಲಿ ಐಹೊಳೆಯಲ್ಲಿಯ ಲಾಡ್‌ಖಾನ್ ದೇವಾಲಯಕ್ಕೆ ಬಹಳಷ್ಟು ಹೋಲುತ್ತದೆ. ಮುಖಮಂಟಪ ವಿನ್ಯಾಸದಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಿದ್ದಿರಬಹುದು. ಲಾಡ್‌ಖಾನ್ ದೇವಾಲಯದಲ್ಲಿ ಮುಖಮಂಟಪವು ಮುಂದಿನ ಸಭಾಂಗಣದಷ್ಟೆ ಅಗಲವಾಗಿಲ್ಲ ಮತ್ತು ಅದರ ಮಧ್ಯಾಂಗಣದ ಕೇಂದ್ರದಲ್ಲಿ ನಂದಿಮಂಟಪವಿದೆ.
ಸಂಗಮೇಶ್ವರ ದೇವಾಲಯ ಅಧಿಷ್ಠಾನದ ಕೆಳಗೆ ಇದ್ದಿರಬಹುದಾದ ಕಟ್ಟಡದ ಭಾಗದ ಬಗ್ಗೆ ಮೇಲೆ ಮಂಡಿಸಿರುವ ವಿಚಾರಗಳ ಸತ್ಯಾಸತ್ಯತೆಯನ್ನು ತಿಳಿಯಲು ನಂದಿಮಂಟಪದ ಅಧಿಷ್ಠಾನ ಮತ್ತು ಸಂಬಂಧಪಟ್ಟ ದೇವಾಲಯದ ಅಧಿಷ್ಠಾನವನ್ನು ಎಚ್ಚರಿಕೆಯಿಂದ ಕ್ರಮವಾಗಿ ಬಿಡಿಸಿ ತೆಗೆದು, ಆ ಭಾಗಗಳನ್ನು ಪರೀಕ್ಷಿಸಿ ಮತ್ತೆ ಹಾಗೆಯೇ ಜೋಡಿಸಬೇಕಾಗುವುದು. ಇದು ಗುರುತರದ ಜವಾಬ್ದಾರಿಯ ಮತ್ತು ಬಹಳ ಪರಿಶ್ರಮದ ಕೆಲಸ.
—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)
ಪುಸ್ತಕ: ಬಾದಾಮಿ ಚಾಲುಕ್ಯರು
ಲೇಖಕರು: ಡಾ. ಅ. ಸುಂದರ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ಎ. ಮುರಿಗೆಪ್ಪ
ಸಂಪುಟ ಸಂಪಾದಕರು: ಡಾ. ಎಂ. ಕೊಟ್ರೇಶ್, ಡಾ. ಎನ್. ಚಿನ್ನಸ್ವಾಮಿ ಸೋಸಲೆ, ರಮೇಶ ನಾಯಕ
ಆಧಾರ: ಕಣಜ