ಪಂಚೆ ಪುರಾಣ

ಸಮಾಜಶಾಸ್ತ್ರದ ಆ ಪಾಠ “ಭಾರತಕ್ಕೆ ಯೂರೋಪಿಯನ್ನರ ಆಗಮನ” ಅಂದು ನನ್ನನ ಕಾಡಲಿಲ್ಲ. ಆದರೆ ಸುಮಾರು ವರ್ಷಗಳಿಂದ ತನ್ನ ಟಿ.ಆರ್.ಪಿ ಯನ್ನ ಕಳೆದುಕೊಳ್ಳದೆ ನಿರಂತರವಾಗಿ ಚರ್ಚೆಗೆ ಒಳಪಡುತ್ತಿರುವ ವಿಷಯ “ವಸ್ತ್ರ ಸಂಹಿತೆ” ಬಗ್ಗೆ ಯೋಚಿಸಿದಾಗ ಬಹಳಷ್ಟು ಕಾಡಿತು. ಯಾಕೆಂದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕುರುಹು ಆಗಿ ಕಾಣ ಸಿಗುವುದೇ ನಾವು ಈ ದಿನ ಉಪಯೋಗಿಸುತ್ತಿರುವ ತರೇಹವಾರಿ ಬಟ್ಟೆಗಳು. ಆಗಿನ ಕಾಲದಲ್ಲಿ ನಾವು ದರಿಸುತಿದ್ದ ಬಟ್ಟೆಗಳೇ ಅಂತಸ್ತಿನ ಸಂಕೇತವಾಗಿತ್ತು. ಆದರೆ ಇಂದು ಬಟ್ಟೆಯ ಆಧಾರದ ಮೇಲೆ ಅಂತಸ್ತಿನ ಲೆಕ್ಕಾಚಾರ ಬಿಡಿ ಗಂಡೋ – ಹೆಣ್ಣೋ ಎಂದು ನಿರ್ಧರಿಸುವುದು ಕೊಡ ಕಷ್ಟವಾಗಿದೆ. ಹಿಂದಿನ ಕಾಲದಲ್ಲಿ ಪಂಚೆ ಪ್ರತಿಷ್ಠೆಯ ಸಂಕೇತವಾಗಿತ್ತು. ಆಗಿನ ಕಾಲದಲ್ಲಿ ಹಿರಿಯರಿಗೆ ಗೌರವ ಸೂಚಕವಾಗಿ ಅವರು ಬಂದೊಡನೆ ಪಂಚೆಯ ಮೇಲಿನ ಮಡಿಕೆಯನ್ನ ನೆಲಕ್ಕೆ ಬಿಟ್ಟು ಕೈ ಮುಗಿದು ಗೌರವಿಸುತ್ತಿದ್ದರು. ಅದೇ ಗೌರವವನ್ನ ಇಂದು ನಾವು ಹಿರೀಕರಿಗೆ ಪ್ಯಾಂಟಿನ ಮೂಲಕ ಪ್ರಯತ್ನಿಸಿದಾಗ…. ಬೇಡ ಬಿಡಿ.

ಉಟ್ಟರೆ ಪಂಚೆಯಾದೆ
ಹೊದ್ದರೆ ಬೆಡ್ ಶೀಟ್ ಆದೆ
ಬಿಡಿಸಿ ಉಪಯೋಗಿಸಿದರೆ ಕಾಹಿ ಪಲ್ಯ ಒಣಗಿಸಲು ಶಾಮಿಯಾನ ಆದೆ
ಹರಿದು ಒಪಯೋಗಿಸಿದರೆ ತಲೆ ಒರಿಸಿ ಕೊಳ್ಳಲು ಟವೆಲ್ ಆದೆ
ನೀನಾರಿಗಾದೆಯೋ ಎಲೆ ಪ್ಯಾಂಟೇ ಹರಿ ಹರಿ ಪಂಚೆ ನಾನು \\

ಇಂತಾಯ ಬಹು ಉಪಯೋಗಿ ಪಂಚೆಯನ್ನ ಸರ ಸಾಗಾಟವಾಗಿ ನುಂಗಿ ನೀರು ಕುಡಿದಿದ್ದೆ, ಪ್ಯಾಂಟಾಸುರ ಎಂಬ ರಾಕ್ಷಸ. ಹೆಣ್ಣು ಗಂಡು ಎಂಬ ಭೇದ-ಭಾವವಿಲ್ಲದೆ ಎಲ್ಲರೂ ಈ ಅಸುರನ ಅಡಿಯಾಳಾಗಿದ್ದೇವೆ. ನಮ್ಮ ಮನೆಯ ಪಕ್ಕದ ಹುಡುಗ “ಅಂಕಲ್ ರೈತನ ವೇಷ ಮಾಡಬೇಕು ಯಾವ ಬಟ್ಟೆ ಉಪಯೋಗಿಸಲಿ” ಎಂದಾಗ ಪಂಚೆ ಹಾಕೋ ಎಂದೇ.. ಪುಣ್ಯಾತ್ಮ ಪಂಚೆಯನ್ನ ಇಂಟರ್ನೆಟ್ ಅಲ್ಲಿ ಹುಡುಕಿ FLIP-CART ಅಲ್ಲಿ ಬುಕ್ ಮಾಡ್ತಿನಿ ಅಂದಾಗಲೇ ನನಗೆ ಅರ್ಥವಾಗಿದ್ದು ಪಾಪದ ಪಂಚೆಯ ವಾಸ್ತವ ಪರಿಸ್ಥಿತಿ. ಆ ಮಹಾನುಭಾವನಿಗೆ ಪಂಚೆ ಕೊಡಿಸೋಣ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸುಮಾರು ಐದಾರು ಅಂಗಡಿಯನ್ನ ತಡಕಾಡಿದೆ. ಎಲ್ಲ ಕಡೆ ನಿರಾಸೆಯ ಪ್ರತಿಕ್ರಿಯೆ.

ಒಂದು ಅಂಗಡಿಯಲ್ಲಂತೂ ಪಂಚೆ ಬಗ್ಗೆ ವಿಚಾರಿಸಿದಾಗ ಸೇಲ್ಸ್ ಗರ್ಲ್ ನನ್ನ ಅನ್ಯ ಗ್ರಹ ಜೀವಿಯಂತೆ ನೋಡಿದಳು.. ಅವಳ ಕಣ್ಣ ನೋಟಕ್ಕೆ ಹೆದರಿ ತಡಬಡಿಸಿ “ಮೇಡಂ…ಅದೇ ಪಂಚೆ.. ಪಂಚೆ ಮೇಡಂ..ರಾತ್ರಿ ಹೊತ್ತು ಗಂಡಸರು ಉಪಯೋಗಿಸುತ್ತಾರಲ್ಲ, ಅದೇ ಪಂಚೆ ಮೇಡಂ” ಎಂದೆ. ಅಲ್ಲೇ ಪಕ್ಕದಲ್ಲಿ ರಾತ್ರಿ ಹೊತ್ತು, ಹೊದ್ದು ಮಲಗಲು ಉಪಯೋಗಿಸುವ, ಬಣ್ಣ ಬಣ್ಣದ ಹೂವಿನ ಚಿತ್ತಾರವಿರುವ ಬೆಡ್ ಶೀಟ್ ಅನ್ನ ಬಗೆ ಬಗೆಯಲ್ಲಿ ಬಗೆದು, ಹರಿದು, ಹೊಲಿದು ತಯಾರಿಸಿದ ನೈಟ್ ಪ್ಯಾಂಟ್ ಅನ್ನ ಪರ್ಚೆಸ್ ಮಾಡುತಿದ್ದ ಲಲನಾ ಮಣಿಯರು ನನ್ನ ನೋಡಿ ಗುಳ್ಳ ಎಂದು ನಕ್ಕರು. ಒಂದು ಹುಡುಗಿಯಂತೂ ನನ್ನ ಫೋಟೋ ತೆಗದು whats app ಗ್ರೂಪ್ ಗೆ ಹಾಕಿ ಬಿಟ್ಟಳು.. ಯಾಕೆ ಅಂತ ಕೇಳಿದ್ರೆ ಸರ್ ನಿಮ್ಮಂಥ ಅಪರೂಪದ ವಿಚಿತ್ರ ವ್ಯಕ್ತಿಗಳು ಸಿಕ್ಕಿರೆ ಹೀಗೆ ಫೋಟೋ ಹಾಕ್ತಿವಿ ಅಂದ್ಲು.. ಪಂಚೆ ಪರ್ಚೆಸ್ ಮಾಡಲು ಬಂಧ ನಾನು ಹೆಣ್ಣು ಮಕ್ಕಳ ವಾಟ್ಸಪ್ಪ್ ಗ್ರೂಪಿಗೆ ಕಾರ್ಟೂನ್ ಆದೇ. ಆಗಲೇ ನನಗೆ ತಿಳಿದದ್ದು ಪಂಚೆಯನ್ನ ಬಟ್ಟೆಯಂಗಡಿಯಲ್ಲಿ ಅಲ್ಲ, ಜಾನಪದ ವಸ್ತುಪ್ರದರ್ಶನದಲ್ಲಿ ಹುಡುಕಬೇಕು ಅಂತ.

ಈಗಂತೂ ಬರಿ ನೈಟ್ ನ ಸಂಸಾರ. ನೈಟ್ ಆದರೆ ಸಾಕು ಗಂಡನಿಗೆ ninety, ಹೆಂಡತಿಗೆ ನೈಟಿ, ಮಕ್ಕಳಿಗೆ ನೈಟ್ ಪ್ಯಾಂಟ್. ಬಹಳಷ್ಟು ಸಾಮಾನುಗಳನ್ನ ತುಂಬಿಸಿ ಕೊಳ್ಳಲು ಉಪಯೋಗವಾಗುವ ಪಂಚೆಯನ್ನ ಯಾಕೆ ಪ್ಲಾಸ್ಟಿಕ್ ಬ್ಯಾಗಗೆ ಪರ್ಯಾಯವಾಗಿ ಉಪಯೋಗಿಸಬಾರದು. ಕೋಡಗನ ಕೋಳಿ ನುಂಗಿತ್ತ, ಪಂಚೆಯನ್ನ ನೈಟ್ ಪ್ಯಾಂಟ್ ನುಂಗಿತ್ತ, ಸೀರೆಯನ್ನ ನೈಟಿ ನುಂಗಿತ್ತ ನೋಡವ್ವ ತಂಗಿ ನಮ್ಮ ಸಂಸ್ಕೃತಿಯನ್ನ.. ಫ್ಯಾಷನ್ ಲೋಕದ ಮಹಾನುಭಾವರ ಪ್ರತಿಭೆಗೆ ಮೆಚ್ಚಲೇ ಬೇಕು. ಏಕೆಂದರೆ ಹರಿದ ಪ್ಯಾಂಟ್ ಧರಿಸಿದರೆ ಅದಕ್ಕೊಂದು ಹೆಸರು. ಕಸ ಗುಡಿಸಿಕೊಂಡು ಹೋಗುವ ಚೂಡಿದಾರವನ್ನ ಧರಿಸಿದರೆ ಅದಕೊಂದು ಹೆಸರು. ಇವ್ರು ಸೃಷ್ಟಿಕರ್ತ ಬ್ರಹ್ಮನಿಗಿಂತ ಒಂದು ಕೈ ಮಿಗಿಲು. ಆಧುನಿಕ ಭಾರತದಲ್ಲಿ ಬೃಹತ್ ಬದಲಾವಣೆಯೆಂದರೆ “ಜರಿ ಜರಿ ಮಿನುಗುವ ಪಂಚೆಗಳು ಕಿಟಕಿ ಮುಚ್ಚಲು ಸೊಳ್ಳೆ ಪರದೆಗಳಾಗಿವೆ. ಸೊಳ್ಳೆ ಪರದೆಯಂತಹ ಬಟ್ಟೆಗಳು ಭರ್ಜರಿ ಬೇಡಿಕೆಯನ್ನ ಪಡೆದಿದೆ.”

ಭಾರತಕ್ಕೆ ಬ್ರಿಟಿಷರ ಆಗಮನದ ನಂತರ ಬಟ್ಟೆಯಲ್ಲಿ ಆದ ಬದಲಾವಣೆ ಬೇರೆಯಾವ ವಿಷಯದಲ್ಲೂ ಆಗಿಲ್ಲ.. ಪಾಪದ ಪಂಚೆಯನ್ನ ಪ್ಯಾಂಟ್ ಗಳು ಹತ್ಯೆ ಮಾಡಿದವು. ಇಂತಾಯ ಪ್ಯಾಂಟಿನ ವಿರುದ್ಧ ಯಾವ ರೀತಿ ಕೇಸ್ ಹಾಕೋಣ ಎಂದು ಚರ್ಚಿಸಲು ನಮ್ಮ ಸಮಾಜ ಶಾಸ್ತ್ರದ ಗುರುಗಳ ಮನೆ ಕಡೆಗೆ ಹೊರಟೆ. ನೈಟ್ ಪ್ಯಾಂಟಿನಲ್ಲಿ ವಿರಾಜಮಾನವಾಗಿ ಕೂತಿದ್ದ ಗುರುಗಳ ನೋಡಿ ಆಶ್ಚರ್ಯವಾಗಿ ಕೇಳಿದೆ “ಏನ್ ಸರ್, ಸ್ವದೇಶೀ ವಸ್ತುಗಳ ಪ್ರಿಯರಾದ ನೀವು ಈ ವಿದೇಶಿ ಸಂಸ್ಕ್ರತಿ ನೈಟ್ ಪ್ಯಾಂಟ್ ಅಲ್ಲಿ.. ಎಲ್ಲಿ ಹೋದವು ನಿಮ್ಮ ಪಂಚೆಗಳು ಸರ್..” ನಮ್ಮ ಗುರುಗಳು ನಯವಾಗಿ ಉತ್ತರಿಸಿದರು “ನನ್ನ ಎಲ್ಲ ಪಂಚೆಗಳನ್ನ ಸೇರಿಸಿ ನನ್ನ ಹೆಂಡತಿ ನೆಲವರಿಸುವ ಮ್ಯಾಟ್ ಮಾಡಿದಾಳೇ ಕಣೋ.. ಪಂಚೆ ಉಟ್ಟರೆ ನನ್ನ ಹೆಂಡತಿ ತಕೊಳ್ಳೋ ಸೆಲ್ಫಿ ಅಲ್ಲಿ ಕೂಡ ನನ್ನ ಸೇರಿಸ್ಕೊಳಲ್ಲ. ಇಲ್ಲಿಗೆ ನಿಲ್ಸಪ್ಪ ನಿನ್ನ ಪಂಚೆಪುರಾಣ” ಎಂದರು.

source

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 0.35 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *