ನೀರ್ಲಣ್ಣು ಎಂದೇ ಆಡು ಭಾಷೆಯಲ್ಲಿ ಪರಿಚಿತವಾಗಿರುವ ‘ನೇರಳೆ ಹಣ್ಣು‘ ಬಲು ರುಚಿ. ನಿಸರ್ಗದ ನೀಲ ಸುಂದರಿ ಅಂತಲೇ ಇದು ಖ್ಯಾತಿ. ಒಗರಿದ್ದರೂ ಬಾಯಲ್ಲೇನೋ ಮಜಾದ ರುಚಿ. ಬಾಯೆಲ್ಲಾ ನೀಲಿಯಾಗುವುದನ್ನು ನೋಡಿ ನಲಿಯುವ ಮಕ್ಕಳ ಆನಂದಕ್ಕೆ ಸರಿಸಾಟಿ ಯಾವುದು? ಮದ್ಯಪ್ರಿಯರಿಗೂ ಇದು ಅಚ್ಚು ಮೆಚ್ಚು. ಏಕೆಂದರೆ ಇದರ ತಿರುಳನ್ನು ವೈನ್ನಲ್ಲೂ ಬಳಸಲಾಗುತ್ತದೆ.
ರೋಗ ನಿಯಂತ್ರಕ:
ವಿನೆಗರ್, ಜೆಲ್ಲಿ ಜಾಮ್ ತಯಾರಿಕೆಗೆ ಇದನ್ನು ಬಳಸುತ್ತಾರೆ. ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎನ್ನುತ್ತಾರೆ ವೈದ್ಯರು. ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ ಒಳ್ಳೆಯದು. ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸಲು ಈ ಹಣ್ಣು ಸಹಕರಿಸುತ್ತದೆ. ಮೂರು ದಿನಗಳವರೆಗೆ ಸಂರಕ್ಷಿಸಬಹುದಾದ ಈ ಹಣ್ಣುಗಳನ್ನು ಉಪ್ಪಿನೊಂದಿಗೆ ತಿಂದರೆ ರುಚಿ ಹೆಚ್ಚು.
ಮಾರ್ಚ್, ಏಪ್ರಿಲ್ನಲ್ಲಿ ಬಿಡಲು ಆರಂಭವಾಗಿ, ಜುಲೈನ ಮೊದಲೆರಡು ವಾರಗಳಲ್ಲೂ ಬೆಳೆಯುತ್ತದೆ. ರಾಜ್ಯದ ಹಲವು ಭಾಗಗಳಲ್ಲಿ ಅರಣ್ಯ ಪ್ರದೇಶ, ಕೃಷಿ ಭೂಮಿಯಲ್ಲಿ ಈ ಹಣ್ಣಿನ ಮರ ಕಾಣಬಹುದು. ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನೇರಳೆ ಹಣ್ಣು ಬೆಳೆಯುವ ಮರ ಯಥೇಚ್ಚವಾಗಿವೆ. ಕೂಡ್ಲಿಗೆ ತಾಲೂಕಿನಲ್ಲಿ 500ಕ್ಕೂ ಅಧಿಕ ಮರಗಳಿವೆ. ತಾಲೂಕಿನ ಕಕ್ಕುಪಿಯೊಂದರಲ್ಲೇ 50 ಮರಗಳಿವೆ. ನೇರಳೆಹಣ್ಣಿನ ಮರಗಳನ್ನು ಗುತ್ತಿಗೆ ಹಿಡಿಯುವವರು ಸೀಜನ್ನಲ್ಲಿ ಹಣ್ಣು ಕೊಡುವ ಒಂದು ಮರ ಒಟ್ಟು 2 ಕ್ವಿಂಟಲ್ನಷ್ಟು ಹಣ್ಣು ಕೊಡುತ್ತದೆ. ನಿತ್ಯವೂ 120-150 ಕೆಜೆಯಷ್ಟು ಹಣ್ಣನ್ನು ಒಂದು ಮರ ಕೊಡುತ್ತದೆ. ಈ ಮರ 100 ವರ್ಷಗಳವರೆಗೆ ಬಾಳುತ್ತದೆ.
ಮೊದಲೆಲ್ಲ ರೈತರು ತಮ್ಮ ಹೊಲಗಳ ಬೇಲಿ ಸಾಲಿನಲ್ಲಿ ಇದನ್ನು ಬೆಳೆಯುತ್ತಿದ್ದರು. ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿದೆ. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿದೆ.