sleeping snoring

ನೆಮ್ಮದಿಯನ್ನೇ ಕೆಡಿಸುವ ಗೊರಕೆಯನ್ನು ನಿಯಂತ್ರಿಸುವುದು ಹೇಗೆ?

ನೀವು ಗೊರಕೆ ಹೊಡೆಯುತ್ತೀರಾ ಎಂಬ ಪ್ರಶ್ನೆಗೆ ಮಧ್ಯವಯಸ್ಸು ದಾಟಿದವರು ನಿಸ್ಸಂಕೋಚವಾಗಿ ಹೌದು ಎಂಬ ಉತ್ತರ ನೀಡಿದರೆ ಯುವಜನತೆ ಮಾತ್ರ ಗೊರಕೆ ಹೊಡೆಯುತ್ತಿದ್ದರೂ ‘ಇಲ್ಲ’ ಎಂಬ ಉತ್ತರವನ್ನೇ ನೀಡುತ್ತಾರೆ. ಏಕೆಂದರೆ ಗೊರಕೆ ಹೊಡೆಯುವುದು ಅವರ ಪ್ರಕಾರ ಅಸಭ್ಯತನ. ವಾಸ್ತವವಾಗಿ ಗೊರಕೆ ನಮ್ಮ ನಿಯಂತ್ರಣದಲ್ಲಿಯೇ ಇಲ್ಲ!

Recommended Sleeping Positionsವೈದ್ಯಕೀಯ ಸಮೀಕ್ಷೆಯ ಪ್ರಕಾರ ಶೇಖಡಾ ಐವತ್ತರಷ್ಟು ವಯಸ್ಕರು ಗೊರಕೆ ಹೊಡೆಯುತ್ತಾರೆ. ಆದರೆ ಇದರ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಆದರೆ ಕೆಲವರ ಗೊರಕೆಯಂತೂ ಬಸ್ಸಿನ ಇಂಜಿನ್ನಿನ ಶಬ್ಧಕ್ಕಿಂತಲೂ ಭೀಕರವಾಗಿದ್ದು ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯಲು ಪ್ರಮುಖ ಕಾರಣವೆಂದೂ ಪರಿಗಣಿಸಲ್ಪಡುತ್ತದೆ. ಸಮಾಜದಲ್ಲಿ ನಾಲ್ಕು ಜನರ ನಡುವೆ ಇರುವಾಗ ತಮ್ಮಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

ಗೊರಕೆ‘ಯ ಸದ್ದೂ ಈ ‘ತೊಂದರೆ’ಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ತಮ್ಮ ಗೊರಕೆ ಭೀಕರವಾಗಿದೆ ಎಂದು ಅರಿತ ಬಳಿಕವೂ ಯಾವುದೇ ಕ್ರಮ ಕೈಗೊಳ್ಳದೆ ‘ಯಾರಿಗೇನಾದರೇನು?’ ಎಂಬ ಉದ್ದಟತನವನ್ನು ಕೆಲವರು ಪ್ರಕಟಿಸಿದರೂ ಹೆಚ್ಚಿನವರು ಬೇರೆಯವರಿಗೆ ತೊಂದರೆಯಾಗದಿರುವಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಾರೆ.

ಇದಕ್ಕೆ ಸುಲಭವಾದ ಉಪಾಯವೆಂದರೆ ಕಿಟಕಿ ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿ ಸದ್ದು ಹೊರಗೆ ಬರದಿರುವಂತೆ ನೋಡಿಕೊಳ್ಳುವುದು. ಕೋಣೆ ದೊಡ್ಡದಾಗಿದ್ದು ಒಬ್ಬರೇ ಮಲಗುವಂತಿದ್ದರೆ ಸರಿ. ಇದೇ ಕೋಣೆಯನ್ನು ಇನ್ನೂ ಹಲವರು ಹಂಚಿಕೊಳ್ಳುತ್ತಿದ್ದರೆ? ಈ ತೊಂದರೆಯಿಂದ ಪಾರಾಗುವ ಮುನ್ನ ಈ ತೊಂದರೆ ಪ್ರಾರಂಭವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ವೈದ್ಯವಿಜ್ಞಾನ ಈ ವಿವರಣೆಗಳನ್ನು ನೀಡುತ್ತದೆ. ಗೊರಕೆಯ ಅಪಾಯಗಳು ನಿಮಗೆ ತಿಳಿದಿದೆಯೇ?

[sociallocker]ವಯಸ್ಸು: ವಯಸ್ಸಾಗುತ್ತಿದ್ದಂತೆ ಗಂಟಲು ಮತ್ತು ಮೂಗಿನ ಹೊಳ್ಳೆಗಳ ಸ್ನಾಯುಗಳು ನಿದ್ದೆಯ ಸಮಯದಲ್ಲಿ ತಮ್ಮ ಸೆಳೆತವನ್ನು ಪೂರ್ಣವಾಗಿ ಕಳೆದುಕೊಳ್ಳುವುದರಿಂದ ಪ್ರತಿ ಉಸಿರಿನೊಂದಿಗೆ ಕಂಪನಕ್ಕೊಳಪಡುತ್ತವೆ. ಇದೇ ಗೊರಕೆ.

ಗಂಟಲು ಮತ್ತು ಮೂಗಿನ ಅಸಾಮಾನ್ಯ ಸ್ಥಿತಿಗಳು: ಒಂದು ವೇಳೆ ಮೂಗಿನ ಒಳಭಾಗದಲ್ಲಿ ಸೋಂಕು ಉಂಟಾಗಿದ್ದರೆ ಅಥವಾ ಟಾನ್ಸಿಲ್ (ಗಂಟಲಗ್ರಂಥಿ ಅಥವಾ ಗಲಗ್ರಂಥಿ) ಊದಿಕೊಂಡಿರುವುದು, ಮೂಗಿನ ಮತ್ತು ಗಂಟಲಿನ ವಾಯುಹಾದುಹೋಗುವ ಮಾರ್ಗ ಕಿರಿದಾಗುವುದು

ಸ್ಥೂಲಕಾಯ: ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ದೇಹದೆಲ್ಲೆಡೆ ಸಂಗ್ರಹವಾಗುವಂತೆ ಮೂಗಿನ ಒಳಭಾಗದ ಖಾಲಿಜಾಗವನ್ನೂ ಆಕ್ರಮಿಸಿ ಗಾಳಿಯಾಡುವ ಸ್ಥಳವನ್ನು ಕಿರಿದುಗೊಳಿಸಿರುವುದು.

ಧೂಮಪಾನ: ಧೂಮವನ್ನು ನಮ್ಮ ರೋಗನಿರೋಧಕ ವ್ಯವಸ್ಥೆ ಒಂದು ಕ್ರಿಮಿಯಂತೆ ಪರಿಗಣಿಸಿ ಶ್ವಾಸಕೋಶಕ್ಕೆ ಹಾನಿಯುಂಟಾಗುವುದನ್ನು ತಪ್ಪಿಸಲು ವಾಯುಮಾರ್ಗವನ್ನು ಕಿರಿದುಗೊಳಿಸುವುದು.

ಮದ್ಯಪಾನ: ಮದ್ಯದಲ್ಲಿರುವ ಮದ್ಯಸಾರ ರಕ್ತದೊಡನೆ ಸೇರಿ ದೇಹದ ಪ್ರಮುಖ ಅಂಗಗಳ ಕ್ಷಮತೆಯನ್ನು ಕುಂಠಿತಗೊಳಿಸುವಂತೆಯೇ ಮೂಗಿನೊಳಗಣ ಸ್ನಾಯುಗಳನ್ನೂ ದುರ್ಬಲಗೊಳಿಸುತ್ತದೆ.

ಗೊರಕೆಯ ಪ್ರಮುಖ ದುಷ್ಪರಿಣಾಮಗಳು: ಗೊರಕೆಯಿಂದ ಅತ್ಯಂತ ಹೆಚ್ಚಿನ ಬಾಧೆಗೊಳಗಾಗುವವರೆಂದರೆ ನಿಮ್ಮ ಜೀವನಸಂಗಾತಿ. ಜೊತೆಯಲ್ಲಿಯೇ ಪವಡಿಸಿರುವ ಸಂಗಾತಿಯ ಗೊರಕೆಯಿಂದ ನಿದ್ದೆ ಹಾಳಾಗುವುದು ಸಾವಿರಾರು ವಿಚ್ಛೇದನಗಳಿಗೆ ಕಾರಣವಾಗಿದೆ. ಗೊರಕೆಯಿಂದ ಅರಿವಿಲ್ಲದೇ ದೇಹಕ್ಕೂ ಹಲವು ತೊಂದರೆಗಳು ಎದುರಾಗಬಹುದು. ಹೃದಯಕ್ಕೆ ಹೆಚ್ಚಿನ ಒತ್ತಡ ಬಿದ್ದು ಹೃದಯ ಸ್ಥಂಬನದ ಸಾಧ್ಯತೆ ಹೆಚ್ಚುತ್ತದೆ. ರಕ್ತದೊತ್ತಡ ಹೆಚ್ಚುತ್ತದೆ,ಸ್ಮರಣಶಕ್ತಿಯಲ್ಲಿ ಕುಂಠಿತತೆ, ಖಿನ್ನತೆ, ವೃದ್ದಾಪ್ಯ ಬೇಗನೇ ಆವರಿಸುವುದು, ತೂಕದಲ್ಲಿ ಹೆಚ್ಚಳ ಮೊದಲಾದ ತೊಂದರೆಗಳು ಎದುರಾಗುತ್ತವೆ.

ಗೊರಕೆಯಿಂದ ಮುಕ್ತರಾಗಲು ಏನು ಮಾಡಬಹುದು?: ವಾಸ್ತವವಾಗಿ ಈ ತೊಂದರೆಯಿಂದ ಸಂಪೂರ್ಣವಾಗಿ ಮುಕ್ತರಾಗಲು ಸಾಧ್ಯವಿಲ್ಲ. ಏಕೆಂದರೆ ಒಮ್ಮೆ ಸಡಿಲಗೊಂಡ ಮೂಗಿನೊಳಗಣ ಸ್ನಾಯುಗಳು ಒಂದು ಹಂತದಷ್ಟು ಮಾತ್ರ ಸೆಳೆತಗೊಳ್ಳಬಹುದೇ ವಿನಃ ಯೌವನದಲ್ಲಿರುವಾಗ ಇದ್ದ ಸೆಳೆತ ಬರುವುದು ಸಾಧ್ಯವಿಲ್ಲ. ವಿಪರೀತವಾದ ಗೊರಕೆಗೆ ಶಸ್ತ್ರಚಿಕಿತ್ಸೆಯಿಂದ ವಾಯುಮಾರ್ಗವನ್ನು ಹಿರಿದುಗೊಳಿಸುವ ಉಪಾಯವಿದೆಯಾದರೂ ಇವು ದುಬಾರಿ ಹಾಗೂ ಅತಿಸೂಕ್ಷ್ಮವಾಗಿ ನುರಿತ ಶಸ್ತ್ರವೈದ್ಯರಿಂದಲೇ ನಡೆಸಬೇಕು. ಈ ತೊಂದರೆಯನ್ನು ಕಡಿಮೆಗೊಳಿಸಲು ಕೆಲವು ಉಪಾಯಗಳನ್ನು ಅನುಸರಿಸುವುದರಿಂದ ಸಾಕಷ್ಟು ಸುಧಾರಣೆಯನ್ನು ಪಡೆಯಬಹುದು.

ತಲೆದಿಂಬನ್ನು ಕೊಂಚ ಏರಿಸಿ: ಶೀತವಾದಾಗ ಒಂದು ಹೆಚ್ಚುವರಿ ದಿಂಬನ್ನು ತಲೆಯಡಿ ಇರಿಸಿ ಮಲಗುವುದರಿಂದ ಬೆಳಿಗ್ಗೆದ್ದಾಗ ಶೀತ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಏಕೆಂದರೆ ತಲೆಯನ್ನು ಸ್ವಲ್ಪ ಏರಿಸುವುದರಿಂದ ವಾಯುಮಾರ್ಗದ ವಿಸ್ತಾರ ಹೆಚ್ಚಿ ಉಸಿರಾಟ ಸರಾಗವಾಗಲು ಅನುಕೂಲವಾಗುತ್ತದೆ. ಗೊರಕೆಯ ವಿಷಯದಲ್ಲೂ ಅಷ್ಟೇ, ವಿಸ್ತಾರವಾದ ವಾಯುಮಾರ್ಗ ಗೊರಕೆ ಕಡಿಮೆಗೊಳಿಸಲೂ ನೆರವಾಗುತ್ತದೆ. ನಿಮ್ಮ ದಿಂಬನ್ನು ಪ್ರತಿದಿನದ ಎತ್ತರಕ್ಕಿಂತಲೂ ಸುಮಾರು ನಾಲ್ಕು ಇಂಚು ಎತ್ತರಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ಒಂದು ಪಕ್ಕಕ್ಕೆ ವಾಲಿ ಪವಡಿಸಿ: ಕಿವಿಮಾತುಗಳಲ್ಲಿ ಕಂಡುಬರುವ ಸಲಹೆಯಂತೆ ಗೊರಕೆಯಿಂದ ಮುಕ್ತವಾಗಲು ಒಂದು ಪಕ್ಕಕ್ಕೆ ವಾಲಿ ಮಲಗುವುದು ಉತ್ತಮವಾಗಿದೆ. ಇದೊಂದು ಸುಲಭವಾದ ಮತ್ತು ಸಫಲವಾದ ಕ್ರಮವಾಗಿದೆ.

ತೂಕ ಇಳಿಸಿ ಆರೋಗ್ಯಪಡೆಯಿರಿ, ಗೊರಕೆಯಿಂದ ಮುಕ್ತರಾಗಿರಿ: ನೀವು ಸ್ಥೂಲಕಾಯದವರಾಗಿದ್ದರೆ ನಿಮ್ಮ ಮೂಗಿನೊಳಗೂ ಕೊಬ್ಬು ತುಂಬಿಕೊಂಡು ಗೊರಕೆಗೆ ಕಾರಣವಾಗುತ್ತದೆ. ಇಂದಿನಿಂದಲೇ ತೂಕ ಇಳಿಸುವ ಬಗ್ಗೆ ಧನಾತ್ಮಕರಾಗಿ ಯೋಚಿಸಿ ಕ್ರಿಯಾತ್ಮಕರಾಗಿ. ನಿಧಾನವಾಗಿ ತೂಕ ಇಳಿಯುತ್ತಾ ಹೋಗುತ್ತಿದ್ದಂತೇ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

ನಿಮ್ಮ ಹಾಸಿಗೆಯನ್ನು ಬದಲಿಸಿ: ನಿಮ್ಮ ಹಾಸಿಗೆಯನ್ನು ಪರೀಕ್ಷಿಸಿ, ಒಂದು ವೇಳೆ ಹಳೆಯದಾಗಿದ್ದು, ನಿಮ್ಮ ಶರೀರದ ಭಾರ ಸತತವಾಗಿ ಬಿದ್ದು ಮಧ್ಯೆ ತೆಳುವಾಗಿ ಹೋಗಿದ್ದರೆ ಈಗ ನಿಮ್ಮ ಹಾಸಿಗೆಯನ್ನು ಬದಲಿಸುವ ಸಮಯ ಎಂದು ಪರಿಗಣಿಸಿ. ಈ ಹಳೆಯ ಹಾಸಿಗೆಯನ್ನು ತ್ಯಜಿಸಿ ಹೊಸದಾದ, ದಪ್ಪನೆಯ ಮತ್ತು ಉತ್ತಮ ಗುಣಮಟ್ಟದ ಹಾಸಿಗೆಯನ್ನು ಖರೀದಿಸಿ. ನಿಮ್ಮ ಆರೋಗ್ಯಕ್ಕಿಂತಲೂ ಹಾಸಿಗೆಯ ಬೆಲೆ ದೊಡ್ಡದಲ್ಲ! ಮೆಡಿಕೇಟೆಡ್ ಮ್ಯಾಟ್ರೆಸ್ ಎಂದು ಬರೆದಿರುವ ಹಾಸಿಗೆಯನ್ನೇ ಆಯ್ಕೆ ಮಾಡಿ. ಇದರಲ್ಲಿ ಮಲಗುವುದರಿಂದ ಗೊರಕೆ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಿ: ಹೇಳುವುದು ಸುಲಭ, ಅನುಸರಿಸುವುದು ಕಷ್ಟವಾದರೂ ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವತ್ತ ಒಲವು ತೋರಿಸಿ. ಈಗಾಗಲೇ ವ್ಯಸನಿಯಾಗಿದ್ದರೆ ಇಂದು ಧೂಮಪಾನ ಮತ್ತು ಮದ್ಯಪಾನದಿಂದ ವೈಜ್ಞಾನಿಕವಾಗಿ ಹೊರಬರುವ ವಿಧಾನಗಳು ಲಭ್ಯವಿವೆ. ನಿಮ್ಮ ವೈದ್ಯರು ಮತ್ತು ವ್ಯಸನದಿಂದ ಹೊರಬರಲು ಸಲಹಾ ಕೇಂದ್ರಗಳು ನಿಮ್ಮ ನೆರವಿಗೆ ಬರುತ್ತಾರೆ. ಇವುಗಳ ಪ್ರಯೋಜನ ಪಡೆದುಕೊಳ್ಳಿ. ಈ ವ್ಯಸನಗಳಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು ಮುಕ್ತವಾಗಿ ನಿಮ್ಮ ಸ್ನೇಹವೃಂದದಲ್ಲಿ ಹೇಳಿಕೊಳ್ಳಿ, ಅದರಂತೆಯೇ ನಡೆದುಕೊಳ್ಳಿ. ದಿನಗಳು ಬದಲಾಗಿವೆ, ಇಂದು ಈ ವ್ಯಸನದಿಂದ ಹೊರಬರುವವರನ್ನು ಸಮಾಜ ಮುಕ್ತವಾಗಿ ಸ್ವಾಗತಿಸುತ್ತದೆ ಮತ್ತು ಸಹಕರಿಸುತ್ತದೆ. ತನ್ಮೂಲಕ ಗೊರಕೆಯೂ ಕಡಿಮೆಯಾಗಿ ನಿಮ್ಮ ಜೀವನ ಸಂತೋಷಮಯವಾಗುತ್ತದೆ.

ಕೋಣೆಯಲ್ಲಿ ಸಾಕಷ್ಟು ಗಾಳಿಯಾಡುವಂತಿರಲಿ: ನಿಮ್ಮ ಕೋಣೆಯಲ್ಲಿ ಗವಾಕ್ಷಿಯ ವ್ಯವಸ್ಥೆ ಇದೆಯೇ ನೋಡಿಕೊಳ್ಳಿ. ಪಿಶಾಚಿಯನ್ನು ಹಿಂದೆ ಕರೆಯುವುದಕ್ಕಲ್ಲ, ನಿಮ್ಮ ನಿಃಶ್ವಾಸದ ಗಾಳಿ ಕೋಣೆಯಿಂದ ಹೊರಹೋಗಿ ಸ್ವಚ್ಛ ಗಾಳಿ ಒಳಬರುವಂತಾಗಲು. ಗವಾಕ್ಷಿ ಇಲ್ಲದಿದ್ದರೆ ಇದಕ್ಕೆ ಏನಾದರೂ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಸಾಧ್ಯವಾದರೆ ನಿರ್ವಾತ ಪಂಖ (exhaust fan) ಒಂದನ್ನು ಅಳವಡಿಸುವ ಬಗ್ಗೆ ಯೋಚಿಸಿ. ಉತ್ತಮ ಗಾಳಿಯ ಮೂಲಕ ಉತ್ತಮ ನಿದ್ದೆ ಹಾಗೂ ಗೊರಕೆ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಗಾಢನಿದ್ದೆಗೆ ಪ್ರಾಮುಖ್ಯತೆ ನೀಡಿ: ನಿಮ್ಮ ಅಭ್ಯಾಸಗಳನ್ನು ಕೊಂಚ ಗಮನಿಸಿ. ರಾತ್ರಿ ತಡವಾಗಿ ಮಲಗಿದ್ದು ತಡವಾಗಿ ಏಳುವ ಅಭ್ಯಾಸವಿದ್ದರೆ ನಿಮಗೆ ಗೊರಕೆ ಅನೂಚಾನವಾಗಿ ಬಂದಿದೆ ಎಂದೇ ತಿಳಿಯಿರಿ. ಪ್ರತಿದಿನ ಬೇಗನೇ ಮಲಗಿ ಬೇಗನೇ ಏಳುವುದರಿಂದ (ರಜಾದಿನಗಳನ್ನೂ ಸೇರಿಸಿ) ಗಾಢನಿದ್ದೆ ಆವರಿಸಿ ಆರೋಗ್ಯ ಉತ್ತಮಗೊಳ್ಳುವುದು. ನಮಗೆಲ್ಲರಿಗೂ ಪ್ರತಿದಿನ ಸುಮಾರು ಎಂಟು ಘಂಟೆಯ ಗಾಢನಿದ್ದೆಯ ಅವಶ್ಯಕತೆಯಿದೆ. ರಾತ್ರಿ ಹತ್ತರಿಂದ ಬೆಳಿಗ್ಗೆ ಆರರವರೆಗಿನ ನಿದ್ದೆ ಅತ್ಯುತ್ತಮ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ. ಅವರ ಅಭಿಪ್ರಾಯವನ್ನು ಮನ್ನಿಸಿ ಹತ್ತು ಘಂಟೆಗೇ ಮಲಗಲು ಪ್ರಾಮುಖ್ಯತೆ ನೀಡಿ. ಗೊರಕೆಗೆ ಒಂದಕ್ಕಿಂತ ಹೆಚ್ಚು ಕಾರಣವಿರಬಹುದು.ಇದಕ್ಕೆ ಕಾರಣಗಳನ್ನು ಹುಡುಕಿದಂತೆ ಗೊರಕೆಯಿಂದ ಮುಕ್ತರಾಗಲು ನಿಮಗೆ ಸೂಕ್ತ ಎನಿಸುವ ಉಪಾಯಗಳನ್ನೂ ಪಡೆಯಬಹುದು.
http://kannada.boldsky.com/health/wellness/2015/how-snore-affects-your-sleep-what-can-you-do-about-it-009451-009451.html#slide38852[/sociallocker]

ಶ್ರೇಯಾಂಕ

ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಕಿತ್ತಳೆ ಹಣ್ಣುಗಳನ್ನು ಸುಲಿದ ಬಳಿಕ ತಿರುಳನ್ನು ತಿಂದು ಸಿಪ್ಪೆಯನ್ನು ಮಾತ್ರ ನಾವು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಹಲವಾರು …

Leave a Reply

Your email address will not be published. Required fields are marked *