ಬಹಳ ಹಿಂದೆ ಶಿವಪುರವೆಂಬ ಊರಿತ್ತು. ಆ ಊರಿನಲ್ಲಿ ರಾಮಪ್ಪನೆಂಬ ಶ್ರೀಮಂತನಿದ್ದ. ಅವನು ಬಡವರಿಗೆ ಸಹಾಯ ಮಾಡದೆ ಬರೀ ತನ್ನ ದೊಡ್ಡಸ್ತಿಕೆಯನ್ನು ಎಲ್ಲರಿಗೆ ಹೇಳಿಕೊಳ್ಳುತ್ತಿದ್ದ. ಇತರರು ಮಾಡಿದ ಸಹಾಯವನ್ನು ತನ್ನದೆಂದೇ ಹೇಳುತ್ತಿದ್ದ. ಅವನ ಮನೆಯ ಸಮೀಪದಲ್ಲಿ ಧರ್ಮಯ್ಯನೆಂಬ ಬಡವನಿದ್ದ. ಅವನು ಇತರರಿಗೆ ತನ್ನ ಕೈಲಾದ ನೆರವು ನೀಡುತ್ತಿದ್ದ. ಆಗ ಶ್ರೀಮಂತ ರಾಮಪ್ಪ ಆ ಕೆಲಸದ ಸಹಾಯವನ್ನು ಧರ್ಮಯ್ಯನ ಮೂಲಕ ತಾನೇ ಮಾಡಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಧರ್ಮಯ್ಯ ನಕ್ಕು ಸುಮ್ಮನಾಗುತ್ತಿದ್ದ.
ಶಿವಪುರ ಊರಿನ ಹತ್ತಿರ ಒಂದು ಗುಡ್ಡವಿತ್ತು. ಆ ಗುಡ್ಡದಲ್ಲಿ ಒಬ್ಬ ಸಾಧು ವಾಸವಾಗಿದ್ದ. ಅವನು ಜನರ ಕಣ್ಣಿಗೆ ಬೀಳುತ್ತಿರಲಿಲ್ಲ. ಒಂದು ದಿನ ಆ ಸಾಧು ಊರಿಗೆ ಬಂದ. ಮೊದಲು ಶ್ರೀಮಂತ ರಾಮಪ್ಪನ ಮನೆಗೆ ಬಂದು, ‘ಅಯ್ಯಾ, ಏನಾದರೂ ಸಹಾಯ ಮಾಡಿ. ನೀವು ಕೊಟ್ಟಿದ್ದು ನಿಮಗೇ!’ ಎಂದು ಬೇಡಿದ. ರಾಮಪ್ಪ ಸಾಧುವಿಗೆ ಮರುದಿನ ಬರಲು ಹೇಳಿ ಸಾಗ ಹಾಕಿದ. ಸಾಧು ಧರ್ಮಯ್ಯನ ಮನೆಗೂ ಬಂದು ಅದೇ ರೀತಿ ಬೇಡಿದ. ಧರ್ಮಯ್ಯ ಒಂದಷ್ಟು ಧವಸ, ಧಾನ್ಯ ಹಾಗೂ ಕಂಬಳಿಯನ್ನು ದಾನ ಮಾಡಿದ. ಸಾಧುವು ಯಾರ ಮನೆಯನ್ನೂ ಬಿಡಲಿಲ್ಲ. ಎಲ್ಲರ ಹತ್ತಿರ ಹೋಗಿ, ‘ಏನಾದರೂ ಸಹಾಯ ಮಾಡಿ. ನೀವು ಕೊಟ್ಟದ್ದು ನಿಮಗೇ’ ಎಂದು ಕೇಳಿ ಅವರು ಕೊಟ್ಟದ್ದನ್ನು ತೆಗೆದುಕೊಂಡು ಹೋದ.
[sociallocker]ರಾಮಪ್ಪನ ಮನೆಗೆ ಮತ್ತೆ ಬಂದು ಅದೇ ರೀತಿ ಬೇಡಿದ. ರಾಮಪ್ಪ ಏನೂ ಕೊಡದೆ ಕಳಿಸಿದ. ಆ ಸಾಧು ಪಟ್ಟು ಬಿಡದೆ ಮತ್ತೆ ಬಂದ. ಆಗ ಶ್ರೀಮಂತ, ‘ಏನೋ ಸಾಧು, ನೀನು ಎಲ್ಲರಿಂದ ಹೀಗೆ ಕೇಳಿ ಪಡೆದಿದ್ದೀಯ. ಅದನ್ನೆಲ್ಲ ನಿನಗೆ ಕೊಡಿಸಿದವನು ನಾನೇ! ಹಾಗಿದ್ದರೂ ನನ್ನನ್ನು ಮತ್ತೆ ಬಂದು ಬೇಡುತ್ತಿರುವೆಯಲ್ಲಾ’ ಎಂದು ಕೋಪದಿಂದ ಒಂದು ಹರಕಲು ಬಟ್ಟೆಯನ್ನು ಸಾಧುವಿನತ್ತ ಎಸೆದ. ಸಾಧು ಕೋಪಿಸದೆ ಹರಕಲು ಬಟ್ಟೆಯನ್ನು ಎತ್ತಿಕೊಂಡು, ‘ನಾನೊಬ್ಬ ಸಾಧು. ನಿಮ್ಮ ವಸ್ತುಗಳು ನನಗೇಕೆ? ನೀವು ಕೊಟ್ಟದ್ದು ನಿಮಗೇ’ ಎಂದು ನುಡಿದು ಹೊರಟು ಹೋದ.
ಎರಡು ದಿನಗಳ ನಂತರ ಆ ಊರಿನಲ್ಲಿ ಹಿಂದೆಂದೂ ಕಾಣದ ಮಾಯದಂಥ ಮಳೆ ಬಂತು. ಮನೆಗಳು, ದನಕರುಗಳು, ಜನಗಳು, ಮರಗಳು ಕೊಚ್ಚಿ ಹೋದರು. ಆಗ ಸಾಧು ಮತ್ತೆ ಬಂದ. ಜನರನ್ನು ಗುಡ್ಡದ ಮೇಲೆ ತನ್ನ ಗುಡಿಸಲಿಗೆ ಕರೆದೊಯ್ದ. ಶ್ರೀಮಂತ ರಾಮಪ್ಪ, ಧರ್ಮಯ್ಯರೂ ಸಾಧುವನ್ನು ಹಿಂಬಾಲಿಸಿ ಗುಡ್ಡದ ಮೇಲೆ ಹೋದರು. ಅಲ್ಲಿ ನೋಡಿದರೆ ಮಳೆಯೇ ಇಲ್ಲ! ಸಾಧು ಎಲ್ಲ ಜನರಿಗೆ ಆಶ್ರಯ ನೀಡಿದ. ಅವನು ಜನರಿಗೆ, ‘ನೀವು ನನಗೆ ಕೊಟ್ಟ ಎಲ್ಲ ನಿಮ್ಮ ವಸ್ತುಗಳು ಇಲ್ಲಿವೆ. ಅವುಗಳನ್ನು ನೀವೇ ಉಪಯೋಗಿಸಿಕೊಳ್ಳಿ’ ಎಂದು ನುಡಿದ. ಜನರು ಅವರವರ ವಸ್ತುಗಳನ್ನು ಆಯ್ದು ಉಪಯೋಗಿಸಿಕೊಂಡರು. ಶ್ರೀಮಂತ ರಾಮಪ್ಪನಿಗೆ ಹರಕಲು ಬಟ್ಟೆ ಮಾತ್ರ ಸಿಕ್ಕಿತು. ಆಗ ಅವನಿಗೆ ತುಂಬಾ ನಾಚಿಕೆಯಾಯಿತು. ಧರ್ಮಯ್ಯನು ತನ್ನದೊಂದು ಕಂಬಳಿಯನ್ನು ರಾಮಪ್ಪನಿಗೆ ಕೊಟ್ಟ. ಅವನು ಮತ್ತಷ್ಟು ನಾಚಿಕೆಯಿಂದ ಕುಗ್ಗಿದ.
ಒಂದು ವಾರದ ನಂತರ ಮಳೆಯು ತಗ್ಗಿತು. ಎಲ್ಲರೂ ಊರಿಗೆ ಹೊರಟು ನಿಂತು ಸಾಧುವಿಗೆ ವಂದಿಸಿದರು. ಸಾಧುವು, ‘ನಾನು ಹೇಳಿದ ‘ನೀವು ಕೊಟ್ಟದ್ದು ನಿಮಗೇ’ ಎಂಬ ಮಾತಿನ ಅರ್ಥ ಈಗ ನಿಮಗೆ ತಿಳಿದಿರಬಹುದು. ಭಗವಂತನು ನೀವು ಕೊಟ್ಟದ್ದನ್ನು ನಿಮಗೇ ಕೊಡುತ್ತಾನೆ. ನೀವು ಮಾಡಿದ ಸಹಾಯ ನಿಮ್ಮನ್ನು ಕಷ್ಟಕಾಲದಲ್ಲಿ ಖಂಡಿತ ಕಾಪಾಡುತ್ತದೆ. ಇದನ್ನು ತಿಳಿದು ಬಾಳಿರಿ’ ಎಂದು ನುಡಿದು ಎಲ್ಲರನ್ನೂ ಆಶೀರ್ವದಿಸಿ ಕಳಿಸಿಕೊಟ್ಟ. ಶ್ರೀಮಂತ ರಾಮಪ್ಪ ಅಂದಿನಿಂದ ತನ್ನ ವರ್ತನೆಯನ್ನು ಬದಲಾಯಿಸಿಕೊಂಡು ಎಲ್ಲರಿಗೆ ಉಪಕಾರಿಯಾಗಿ ಬಾಳಿದ. ‘ನೀವು ಕೊಟ್ಟದ್ದು ನಿಮಗೇ’ ಎಂಬ ಮಾತು ಅವನಿಗೆ ಈಗ ತುಂಬ ಚೆನ್ನಾಗಿ ಅರ್ಥವಾಗಿತ್ತು.
ಆಧಾರ : ವಿಜಯಕರ್ನಾಟಕ.ಇಂಡಿಯಾಟೈಮ್ಸ್ .ಕಾಮ್[/sociallocker]
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.