ನವರಾತ್ರಿ

ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಓಮ್ಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ‘, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ ಹಬ್ಬವು ಹಿಂದು ಪಂಚಾಂಗದ ಅಶ್ವಯುಜ ಶುದ್ಧ ಪ್ರತಿಪದೆಯ ದಿನ ಪ್ರಾರಂಭವಾಗುತ್ತದೆ.

ನವರಾತ್ರಿಯ ವೈಶಿಷ್ಟ್ಯತೆಗಳು

ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹ. ಹಿಂದೆ ಐದು ನವರಾತ್ರಿ ಆಚರಣೆ ವಿಶೇಷವಾಗಿತ್ತು. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ. ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. ಮಂಗಳವಾರದಿಂದ 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ.

ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ. ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.

  1. ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ.
  2. ಎರಡನೇ ದಿನ ಆಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜಾ.
  3. ಮೂರನೇ ದಿನ ತದಿಗೆ – ಮಹಿಷಾಸುರ ಮರ್ಧಿನಿ ದುರ್ಗಾಪೂಜಾ.
  4. ನಾಲ್ಕನೇ ದಿನ ಚತುರ್ದಶಿ – ಶೈಲ ಜಾತಾ ದುರ್ಗಾಪೂಜಾ.
  5. ಐದನೇ ದಿನ ಪಂಚಮಿ – ದೂಮೃಹಾ ದುರ್ಗಾಪೂಜಾ.
  6. ಆರನೇ ದಿನ ಶಷ್ಠಿ – ಚಂಡ-ಮುಂಡ ಹಾ ದುರ್ಗಾಪೂಜಾ.
  7. ಏಳನೇ ದಿನ ಸಪ್ತಮಿ – ರಕ್ತ ಬೀಜ ಹಾ ದುರ್ಗಾಪೂಜಾ.
  8. ಎಂಟನೇ ದಿನ ಅಷ್ಟಮಿ – ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ)
  9. ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ.

ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಅಂದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ. ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು, ಚಿನ್ನ, ಬೆಳ್ಳಿ ಪೂಜೆಗಿಡಲಾಗುತ್ತದೆ. ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದೇ ಪುಸ್ತಕಗಳನ್ನಿಟ್ಟು ಪೂಜಿಸಲಾಗುತ್ತದೆ ಇದಕ್ಕೆ ಸರಸ್ವತಿ ಪೂಜೆ ಎಂದೂ ಕರೆಯುತ್ತಾರೆ.

ಪುರಾಣಗಳಲ್ಲಿ

ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ.. ನವರಾತ್ರಿಯಲ್ಲಿ ಚಾಮುಂಡೇಶ್ವರಿ / ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು. ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ.

ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ನಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.83 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

ನಾಗರಪಂಚಮಿ ಆಚರಣೆ ಮತ್ತು ಮಹತ್ವ

ಅನಂತಂ ವಾಸುಕಿಂ ಶೇಷಂಪದ್ಮನಾಭಂ ಚ ಕಂಬಲಮ್ || ಶಂಖಪಾಲಂ ಧಾರ್ತರಾಷ್ಟ್ರಂತಕ್ಷಕಂ ಕಾಲಿಯಂ ತಥಾ || ಏತಾನಿ ನವನಾಮಾನಿನಾಗಾನಂ ಚ ಮಹಾತ್ಮನಾಮ್ …

Leave a Reply

Your email address will not be published. Required fields are marked *