ಬಜಗನ್ ಎಂಬ ಸೂಫೀ ಸಂಪ್ರದಾಯ ಮಧ್ಯ ಏಷ್ಯಾದಲ್ಲಿ ಬೆಳೆದು ಭಾರತ ಉಪಖಂಡದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹದಿನಾಲ್ಕನೇ ಶತಮಾನದ ಅಂತ್ಯಭಾಗದಲ್ಲಿದ್ದ ಖಾಜಾ ಬಹಾವುದ್ದೀನ್ ನಕ್ಷಾಬಂದ್ ಈ ಪಂಥದ ಒಬ್ಬ ಮಹಾನ್ ವ್ಯಕ್ತಿ. ಅವನ ಕಾಲಾನಂತರ ಈ ಪಂಥವನ್ನು ನಕ್ಷಾಬಂದೀ ಪಂಥ ಎಂದೇ ಕರೆಯಲಾಯಿತು. ನಕ್ಷಾಬಂದೀ ಪರಂಪರೆಯ ಸೂಫೀ ಸಂತರ ಕಥನ ಕಲೆ ವಿಶೇಷವಾದದ್ದು. ಆ ಕಥೆಯ ಕೊನೆಗೆ ಒಂದು ಸಂದೇಶವನ್ನು ನೀಡುವುದು ಅವರ ಕಲೆ. ಇಂಥ ಒಂದು ಪುಟ್ಟ ಕಥೆ ಹೀಗಿದೆ.
ಒಂದು ರಾತ್ರಿ ಒಬ್ಬ ಕಳ್ಳ ಹೊಂಚುಹಾಕಿ ಒಂದು ಮನೆಯಲ್ಲಿ ಕಳ್ಳತನ ಮಾಡಲು ಯೋಜನೆ ಹಾಕಿಕೊಂಡಿದ್ದ. ರಾತ್ರಿಯಾದ ಮೇಲೆ, ಮನೆಯ ದೀಪಗಳೆಲ್ಲ ಆರಿದ ಮೇಲೆ ಆತ ನಿಧಾನವಾಗಿ ಮನೆಯ ಗೋಡೆಯನ್ನೇರಿ ಕಿಟಕಿಯಿಂದ ಒಳಗೆ ಹೋಗಲು ಪ್ರಯತ್ನಿಸಿದ. ಅವನು ಕಿಟಕಿಯ ಚೌಕಟ್ಟನ್ನು ಹಿಡಿದುಕೊಂಡು ಅದರ ಬಾಗಿಲುಗಳನ್ನು ಒಳಗೆ ತಳ್ಳಲು ನೋಡಿದಾಗ ಆ ಚೌಕಟ್ಟೇ ಸಡಿಲವಾಗಿ ಕಳಚಿಕೊಂಡಿತು. ಆಗ ಕಳ್ಳ ಬಿಚ್ಚಿಬಿದ್ದ ಚೌಕಟ್ಟಿನೊಡನೆ ನೆಲದ ಮೇಲೆ ಧೂಪ್ಪನೇ ಬಿದ್ದ.
ಅವನ ಬಲಗಾಲು ಮುರಿಯಿತು. ಮರುದಿನ ಆತ ರಾಜನ ಕಡೆಗೆ ದೂರು ಒಯ್ದ. ‘ಮಹಾಸ್ವಾಮಿ, ಕಳ್ಳತನ ನನ್ನ ಹೊಟ್ಟೆ ಹೊರೆಯುವ ಉದ್ಯೋಗ. ಆದರೆ ಈ ಮನೆಯ ಕಿಟಕಿಯ ಚೌಕಟ್ಟನ್ನು ಮಾಡಿದ ಬಡಗಿ ಸರಿಯಾಗಿ ಕೆಲಸ ಮಾಡಿದ್ದರೆ ನನ್ನ ಕಾಲು ಮುರಿಯುತ್ತಿರಲಿಲ್ಲ. ಆದ್ದರಿಂದ ಅವನಿಗೆ ಶಿಕ್ಷೆ ನೀಡಿ ನನಗೆ ನ್ಯಾಯ ಒದಗಿಸಬೇಕು’. ರಾಜ ಬಡಗಿಯನ್ನು ಕರೆಸಿ ಕೇಳಿದ. ಅದಕ್ಕೆ ಆತ, ‘ಪ್ರಭೂ, ಇದು ನನ್ನ ತಪ್ಪಲ್ಲ. ನಾನು ಚೌಕಟ್ಟನ್ನು ಸರಿಯಾಗಿಯೇ ಮಾಡಿದ್ದೆ. ಆದರೆ, ಗಾರೆಯವನು ಅದನ್ನು ಕೂಡ್ರಿಸುವಾಗ ಸರಿಯಾಗಿ ಗಾರೆ ಹಾಕಿ ಭದ್ರಪಡಿಸಿಲ್ಲ. ಆದ್ದರಿಂದ ಶಿಕ್ಷೆಯಾಗಬೇಕಾದರೆ ಅದು ಗಾರೆಯವನಿಗೆ ಆಗಬೇಕು’ ಎಂದ. ರಾಜನಿಗೆ ಸರಿ ಎನ್ನಿಸಿತು.
ಗಾರೆಯವನನ್ನು ಕರೆದು ‘ನಿನಗೆ ಯಾಕೆ ಶಿಕ್ಷೆ ನೀಡಬಾರದು’ ಎಂದು ಸಮಜಾಯಿಷಿ ಕೇಳಿದ. ಆತ ಗಾಬರಿಯಾಗಿ ತನ್ನ ವಾದವನ್ನು ಮಂಡಿಸಿದ. ‘ಮಹಾರಾಜ, ದಯವಿಟ್ಟು ನನ್ನ ಮಾತು ಕೇಳಿ. ನಾನು ಸಂಪೂರ್ಣ ನಿರಪರಾಧಿ. ನಾನು ಕಿಟಕಿಯ ಚೌಕಟ್ಟನ್ನು ಕೂಡ್ರಿಸುವಾಗ ರಸ್ತೆಯಲ್ಲಿ ಒಬ್ಬ ಅತ್ಯಂತ ಸುಂದರಳಾದ ತರುಣಿ ನಿಂತಿದ್ದಳು. ಆಕೆಯನ್ನು ನೋಡುತ್ತ ಮೈಮರೆತು ಚೌಕಟ್ಟನ್ನು ಸರಿಯಾಗಿ ಕೂಡ್ರಿಸಲಿಲ್ಲ’. ರಾಜನಿಗೆ ಅದೂ ಸರಿಯೇ ಎನ್ನಿಸಿತು. ಆ ತರುಣಿಯನ್ನು ಹುಡುಕಿಸಿ ಕರೆಸಿದರು.
ಈ ಮನುಷ್ಯ ಕಾಲು ಮುರಿದುಕೊಂಡದ್ದಕ್ಕೆ ಜವಾಬ್ದಾರಿ ನೀನೇ ಎಂದು ಆಪಾದನೆ ಮಾಡಿದಾಗ ಆಕೆ ಅಳುತ್ತ, ‘ಸ್ವಾಮಿ, ತಪ್ಪು ನನ್ನದು ಅಲ್ಲವೇ ಅಲ್ಲ. ನನ್ನ ಗಂಡ ತಂದುಕೊಟ್ಟ ಹೊಸ ಬಣ್ಣಬಣ್ಣದ ಸೀರೆಯನ್ನು ಅಂದು ಉಟ್ಟುಕೊಂಡಿದ್ದರಿಂದ ನಾನು ಚೆನ್ನಾಗಿ ಕಂಡಿರಬೇಕು. ಯಾಕೆಂದರೆ ನನ್ನನ್ನು ಯಾರೂ ಸಾಮಾನ್ಯವಾಗಿ ಗಮನಿಸುವುದೇ ಇಲ್ಲ. ಇದೆಲ್ಲ ಸೀರೆಯದೇ ತಪ್ಪು. ಅದನ್ನು ತಂದುಕೊಟ್ಟ ಗಂಡನ ತಪ್ಪು’ ಎಂದಳು. ‘ನಿನ್ನ ಗಂಡ ಸೀರೆಯನ್ನು ತಂದದ್ದು ಎಲ್ಲಿಂದ?’ ಕೇಳಿದ ರಾಜ.
ಆಕೆ, ‘ನನಗೆ ತಿಳಿಯದು ಸ್ವಾಮಿ. ಆತ ವೃತ್ತಿಯಿಂದ ಕಳ್ಳನಾಗಿದ್ದರಿಂದ ಎಲ್ಲಿಂದ ತಂದ ಎನ್ನುವುದನ್ನು ಅವನೇ ಹೇಳಬೇಕು’ ಎಂದಳು. ‘ಅವನನ್ನು ಹಿಡಿದು ತನ್ನಿ’ ಎಂದು ರಾಜ ಆಜ್ಞೆ ಮಾಡಿದ. ಸೈನಿಕರು ಬಹಳ ದೂರ ಹೋಗಬೇಕಿರಲಿಲ್ಲ. ಎರಡೇ ನಿಮಿಷದಲ್ಲಿ ಕುಂಟುತ್ತಿದ್ದ ಕಳ್ಳನನ್ನು ಎಳೆದು ತಂದರು. ಅವನೇ ಕಿಟಕಿಯ ಚೌಕಟ್ಟನ್ನು ಹಿಡಿದುಕೊಂಡು ಕೆಳಗೆ ಬಿದ್ದು ದೂರು ತಂದವನು.
ರಾಜ ಹೇಳಿದ, ‘ನಿನ್ನ ಕಾಲು ಮುರಿಯಲು ನೀನೇ ಕಾರಣ. ನಿನಗೆ ಕಾಲು ಮುರಿದದ್ದಷ್ಟೇ ಶಿಕ್ಷೆಯಲ್ಲ. ಮತ್ತೊಬ್ಬರ ಮನೆಯ ಕಿಟಕಿಯನ್ನು ಹಾಳುಮಾಡಿದ್ದಕ್ಕೆ ಮತ್ತು ಯಾರದೋ ಮನೆಯ ಸೀರೆ ಕದ್ದದ್ದಕ್ಕೆ ನಾಲ್ಕು ತಿಂಗಳು ಜೈಲು ಶಿಕ್ಷೆ ನಿನಗೆ’ ಎಂದು ಹೇಳಿ ಜೈಲಿಗೆ ತಳ್ಳಿದ. ನಾವು ನಮ್ಮ ತಪ್ಪಿಗೆ ಯಾರನ್ನೋ ಹೊರೆ ಮಾಡಲು ನೋಡುತ್ತೇವೆ. ಆದರೆ ಅದು ನಮ್ಮನ್ನೇ ಸುತ್ತಿಕೊಳ್ಳುತ್ತದೆ. ನಕ್ಷಾಬಂದ್ ಹೇಳುತ್ತಾನೆ. ‘ನಾವು ಮಾಡಿದ ತಪ್ಪಿಗೆ ನಾವೇ ಹೊಣೆಗಾರರು. ನಾವು ಎಷ್ಟೇ ತಪ್ಪಿಸಿಕೊಳ್ಳಲು ನೋಡಿದರೂ ಅದು ಸುತ್ತಿ, ಸುತ್ತಿ ಕೊನೆಗೆ ಅದು ನಮ್ಮನ್ನೇ ಶೂಲಕ್ಕೇರಿಸುತ್ತದೆ’. ನಾವು ಕಲಿಯಬಹುದಾದ ಬಹುದೊಡ್ಡ ಪಾಠ ಇದು.
ಕೃಪೆ – “ಕರುಣಾಳು ಬಾ ಬೆಳಕೆ” ಡಾ. ಗುರುರಾಜ ಕರ್ಜಗಿ. ಸಂದರ್ಭಿಕ ಚಿತ್ರ
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.