Belagali

ದು.ನಿಂ. ಬೆಳಗಲಿ

ದು.ನಿಂ. ಬೆಳಗಲಿ (೩೦.೩.೧೯೩೧ – ೮.೧.೨೦೦೦): ಪ್ರಾದೇಶಿಕ ಸೊಗಡಿನ ಬರಹದ ಕಾದಂಬರಿಕಾರರಾದ ದು.ನಿಂ. ಬೆಳಗಲಿಯವರು ಹುಟ್ಟಿದ್ದು ಬನಹಟ್ಟಿಯಲ್ಲಿ. ತಾಯಿ ಚೆನ್ನಮ್ಮ, ತಂದೆ ನಿಂಗಪ್ಪ. ಇವರ ವಂಶಸ್ಥರು ಅಥಣಿ ತಾಲ್ಲೂಕಿನ ಐನಾಪುರದಿಂದ ಬನಹಟ್ಟಿಗೆ ವಲಸೆ ಬಂದು ನಿಂತವರು. ಬೆಳಗಲಿ ಅಡ್ಡ ಹೆಸರು ಬಂದ ಕತೆ-ಒಣಬಾಳೇ ದಿಂಡುಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂದಾಯಿತು. ಅರಭಾವಿಮಠದ ದುರದುಂಡೇಶ್ವರ ಸ್ವಾಮಿಗಳ ಆಶೀರ‍್ವಾದದಿಂದ ಹುಟ್ಟಿದವರೇ ದುರದುಂಡೇಶ್ವರ ನಿಂಗಪ್ಪ ಬೆಳಗಲಿ. ನಾಲ್ಕು ಹೆಣ್ಣಿನ ನಂತರ ಹುಟ್ಟಿದ ಗಂಡು, ತಾಯಿಗೆ ವಿಶೇಷ ಮಮತೆ. ಅವ್ವ ಜಾನಪದ ಕಥೆಗಳ ಹಾಡುಗಳ ಭಂಡಾರ. ಮಗುವಿನಿಂದ ಕಥೆ ಹಾಡುಗಳಿಗೆ ಸೆಳೆತ. ದೊಡ್ಡವರಾದ ಮೇಲೆ ಸಂಗ್ರಹಿಸಿದ್ದು ಜಾನಪದ ಕಥೆಗಳು.

ಎಸ್.ಎಸ್.ಎಲ್.ಸಿ. ಪಾಸು ಮಾಡಿ ಓದಿದ ಸ್ಕೂಲಿನಲ್ಲೇ ಮಾಸ್ತರಿಕೆ. ೧೯೫೧-೫೫ರವರೆಗೆ. ನಂತರ ಬನಹಟ್ಟಿ ಆರ್.ಎಸ್.ಎ. ಹೈಸ್ಕೂಲು ಶಿಕ್ಷಕರ ಹುದ್ದೆ. ಬರೆದ ಕಥೆಗಳು ಪ್ರಕಟ. ೧೯೫೭ರಲ್ಲಿ ಬೆನ್ನ ಹಿಂದಿನ ಕಣ್ಣು ಪ್ರಥಮ ಕಥಾಸಂಕಲನ ಪ್ರಕಟ. ನಂತರ ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗೆ ಮತ್ತು ಪ್ರಪಂಚ, ಜೀವನ ಪತ್ರಿಕೆಗಳಿಗೆ ಬರೆದದ್ದು ಹಲವಾರು ಕತೆ, ಕವಿತೆ, ಏಕಾಂಕ, ವಿನೋದ ಬರಹಗಳು. ಮೊದಲ ಕಾದಂಬರಿ ಮುಳ್ಳು ಮತ್ತು ಮಲ್ಲಿಗೆ ೧೯೬೦ರಲ್ಲಿ ಪ್ರಕಟ.

ಮುಂದೆ ರಚಿಸಿದ್ದು ಸಾಹಿತ್ಯದ ಸುಗ್ಗಿ . ಸಿಟ್ಟ್ಯಾಕೋರಾಯ, ಮಾಸ್ತರನ ಹೆಂಡತಿ, ಗೌಡರ ಮಗಳು ಗೌರಿ, ಮುತ್ತಿನ ತೆನೆಗಳು ಮುಂತಾದ ಎಂಟು ಕಥಾ ಸಂಕಲನಗಳು. ಹತ್ತು ಹೆಡೆಯ ಹಾವು, ತಿರುಗಣಿಮಡು, ಹಡೆದವರು, ಕಾತ್ರಾಳ ರತ್ನಿ ಚಾದಂಗಡಿ ಮೊದಲಾದ ೧೫ ಕಾದಂಬರಿಗಳು.
ಸರ್ವಜ್ಞ, ಬದುಕುವ ಬಯಕೆ, ಬೀರಬಲ್ಲ, ಜಾದುಪಕ್ಷಿ ಮುಂತಾದ ೧೨ ಮಕ್ಕಳ ಸಾಹಿತ್ಯ ಕೃತಿ. ಚಿಕ್ಕೋಡಿ ಪಂಡಿತಪ್ಪನವರು, ಪ್ರೇಮಚಂದರ ಬದುಕು ಬರೆಹ, ನನ್ನ ಬಣ್ಣದ ಬದುಕು, ಆನಂದಕಂದ ಮುಂತಾದ ಆರು ಜೀವನ ಚರಿತ್ರೆಗಳು, ಹೆಂಡತಿ ಮತ್ತು ಟ್ರಾನ್ಸಿಸ್ಟರ್, ಗಂಡ-ಹೆಂಡತಿ-ಲಗ್ಗೇಜ್ ಮೊದಲಾದ ನಗೆ ಬರಹಗಳ ಸಂಕಲನ. ಐದು ಅನುವಾದ, ನಾಲ್ಕು ಪ್ರಬಂಧ ಸಂಕಲನ, ಐದು ಸಂಪಾದಿತ ಕೃತಿಗಳು ಸೇರಿ ರಚಿಸಿದ್ದು ೬೦ ಕೃತಿಗಳಿಗೂ ಮಿಕ್ಕು ಪ್ರಕಟಿತ.

ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಂಗಾಧರ ಸಾಹಿತ್ಯ ಪುರಸ್ಕಾರ, ವಿಶ್ವಭಾರತಿ ಸಾಹಿತ್ಯ ಪುರಸ್ಕಾರ, ಬಿ.ಎಚ್. ಶ್ರೀಧರ ಪ್ರಶಸ್ತಿ. ಸರ್.ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಸಿರಿವಾರ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಸಂದಿವೆ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *