[sociallocker]ತ.ರಾ.ಸುಬ್ಬರಾಯ (೨೧-೪-೧೯೨೦ – ೧೦-೪-೧೯೮೪): ಪತ್ರಿಕಾರಂಗ, ಸಾಹಿತ್ಯ, ಸ್ವಾತಂತ್ರ್ಯಾಂದೋಲನ ಹೀಗೆ ನಾನಾ ಪ್ರಕಾರಗಳಲ್ಲಿ ದುಡಿದು ಪ್ರಖ್ಯಾತರಾದ ತ.ರಾ.ಸುಬ್ಬರಾಯರು ಹುಟ್ಟಿದ್ದು ಹರಿಹರ ತಾಲ್ಲೂಕಿನ ಮಲೆ ಬೆನ್ನೂರಿನಲ್ಲಿ. ತಂದೆ ವಕೀಲರಾಗಿದ್ದ ರಾಮಸ್ವಾಮಯ್ಯ, ತಾಯಿ ಸೀತಮ್ಮ. ಓದಿದ್ದು ಚಿತ್ರದುರ್ಗದಲ್ಲಿ ಮೆಟ್ರಿಕ್‌ವರೆಗೆ. ಇಂಟರ್ ಮೀಡಿಯೆಟ್ ಸೇರಿದರಾದರೂ ಪೂರ್ಣಗೊಳಿಸಲಿಲ್ಲ. ಆದರೆ ಸಾಹಿತ್ಯ ಇವರ ವಂಶಕ್ಕೆ ಪಾರಂಪರ‍್ಯವಾಗಿ ಬಂದ ಬಳುವಳಿ. ದೊಡ್ಡಪ್ಪ ಟಿ.ಎಸ್. ವೆಂಕಣ್ಣಯ್ಯನವರದು ಒಂದೆಡೆ, ಚಿಕ್ಕಪ್ಪ ತ.ಸು.ಶಾಮರಾಯರದು ಮತ್ತೊಂದೆಡೆ ದೊರೆತ ಸಾಹಿತ್ಯ ಪ್ರೇರಣೆ.
ತ.ರಾ.ಸು.ಗೆ ಅಸಾಧ್ಯ ಓದು ಬರಹದ ಹುಚ್ಚು. ಒಂದು ಸಾರೆ ವೆಂಕಣ್ಣಯ್ಯನವರು, ಮಾತನಾಡಿದಷ್ಟು ಬರವಣಿಗೆ ಸುಲಭವಲ್ಲವೆಂದು ರೇಗಿಸಿದಾಗ ‘ಪುಟ್ಟನ ಚೆಂಡು’ ಎಂಬ ಕಥೆ ಬರೆದು ಭೇಷ್ ಎನ್ನಿಸಿಕೊಂಡರು. ನಂತರ ಬರೆದದ್ದು ಹಲವಾರು ಕಥೆಗಳು, ಹುಲುಸಾದ ಬೆಳೆ.
ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಭಾಗಿ. ಸೆರೆಮನೆಯವಾಸ. ಈ ಅನುಭವದಿಂದ ಮೂಡಿದ ಕಾದಂಬರಿಗಳು ಅನೇಕ. ಮೊದಲ ಕಾದಂಬರಿ ಮನೆಗೆ ಬಂದ ಮಹಾಲಕ್ಷ್ಮಿ ೧೯೪೪ರಲ್ಲಿ ಪ್ರಕಟಗೊಂಡರೆ ಕೊನೆ ಬರವಣಿಗೆ ಶ್ರೀ ಚಕ್ರೇಶ್ವರಿಯ ಉತ್ತರಾರ್ಧವೂ ೧೯೮೪ರಲ್ಲಿ. ಸುಮಾರು ೬೮ ಕಾದಂಬರಿಗಳು ಪ್ರಕಟಿತ. ಕಥಾಸಂಕಲನಗಳು ಮೂರು. ನಾಟಕ-ಜ್ವಾಲಾ, ಮೃತ್ಯುಸಿಂಹಾಸನ, ಅನ್ನಾವತಾರ, ಮಹಾಶ್ವೇತೆ, ಹಲವಾರು ಸಂಪಾದಿತ ಕೃತಿಗಳು, ಅನುವಾದಗಳು, ಜೀವನ ಚರಿತ್ರೆಯನ್ನು ಕೊಟ್ಟಿದ್ದಾರೆ.
ಸಾಹಿತ್ಯ ಕೃತಿಗಳಿಗೆ ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ‘ಯಕ್ಷ ಪ್ರಶ್ನೆ’ ಕಾದಂಬರಿಗೆ ಮೈಸೂರು ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಶಿಲ್ಪಶ್ರೀ’ಗೆ ಗೊಮ್ಮಟೇಶ್ವರ ಪುರಸ್ಕಾರ, ದುರ್ಗಾಸ್ತಮಾನ ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಲವಾರು ಕಾದಂಬರಿಗಳು ಚಲನಚಿತ್ರಗಳಾದುವು. ಹಂಸಗೀತೆ (ಹಿಂದಿ-ಬಸಂತ ಬಹಾರ್), ಚಂದವಳ್ಳಿಯ ತೋಟ, ಚಕ್ರತೀರ್ಥ, ಸಾಕುಮಗಳು, ಮಾರ್ಗದರ್ಶಿ, ನಾಗರಹಾವು, ಚಂದನದ ಗೊಂಬೆ, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಮಸಣದ ಹೂವು, ಇವುಗಳಲ್ಲಿ ಬಸಂತ ಬಹಾರ್, ಚಂದವಳ್ಳಿಯ ತೋಟ, ಹಂಸಗೀತೆಗೆ ರಾಷ್ಟ್ರಪ್ರಶಸ್ತಿ. ಚಿತ್ರದುರ್ಗದಲ್ಲಿ ಹಲವಾರು ಬಾರಿ ಸನ್ಮಾನ, ಹಿರಿಯರ ಸ್ಥಳ ತಳುಕಿನಲ್ಲಿ ಸನ್ಮಾನ, ಕ.ಸಾ. ಪರಿಷತ್ತಿನ ಸುವರ್ಣ ಮಹೋತ್ಸವದಲ್ಲಿ ಸನ್ಮಾನ, ಮುಂತಾದವು. ಅಭಿನಂದನ ಗ್ರಂಥ ತ.ರಾ.ಸು. ಬದುಕು-ಬರೆಹ, ಸಂಸ್ಮರಣ ಗ್ರಂಥ ಗಿರಿಮಲ್ಲಿಗೆ ಅರ್ಪಿತ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ[/sociallocker]
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.