ತುಳು ಭಾರತ ದೇಶದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚು ಮಾತನಾಡುವ ಭಾಷೆ. ತುಳು ಮಾತಾಡುವವರನ್ನು ತುಳುವರು (ಅಥವಾ ತುಳುವಲ್ಲಿ ತುಳುವೆರು )ಎಂದು ಕರೆಯುತ್ತಾರೆ. ಹಿಂದೆ ತುಳು ಬ್ರಾಹ್ಮಣರು ತಿಗಳಾರಿ ಎಂಬ ಲಿಪಿಯನ್ನು ಉಪಯೋಗಿಸುತ್ತಿದರು.ಈ ಲಿಪಿಯ ಮುಖ್ಯಭಾಷೆ ಸಂಸ್ಕೃತ, ಕಾಲಕ್ರಮೇಣ ಅದರ ಬಳಕೆ ಇಲ್ಲವಾಗಿದೆ.ಈ ಲಿಪಿಯ ಬಗ್ಗೆ ತಿಳಿದಿರುವವರು ಈಗ ಕಡಿಮೆ. ಪುರಾತನ ತಿಗಳಾರಿ ಲಿಪಿ ಮಲಯಾಳಂ ಲಿಪಿಯನ್ನು ಹೋಲುತ್ತದೆ.ಪ್ರಸ್ತುತ ತುಳುಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಾರೆ. ಆದರೆ ತುಳುಭಾಷೆಯಲ್ಲಿ ರಚಿತವಾಗಿರುವ ಕೃತಿಗಳ ಲಭ್ಯತೆ ಕಡಿಮೆ ಇರುವುದರಿಂದ ತುಳು ಭಾಷೆಯ ಪ್ರಾಚೀನತೆಯನ್ನು ಅಂದಾಜು ಮಾಡುವುದು ಕಷ್ಟ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಬಹುಪಾಲು ಜನರು ತುಳು ಭಾಷೆ ಮಾತನಾಡುತ್ತಾರೆ. ಈ ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು ತುಳುನಾಡು ಎಂದು ಕರೆಯಲಾಗುತ್ತದೆ. ಹಾಗೆಯೇ ಮುಂಬೈ ಪಟ್ಟಣ, ಗುಜರಾತ್ ರಾಜ್ಯದ ಕೆಲ ಭಾಗಗಳಲ್ಲಿ ತುಳುವರು ಇದ್ದಾರೆ. ಸುಮಾರು ೨ ದಶಲಕ್ಷ ಜನರು ತುಳು ಭಾಷೆ ಮಾತಾಡುತ್ತಾರೆ.
ಪ್ರಮುಖ ಬರಹಗಳು:
ಮಾಧ್ವ ಮತದ ತಿಗಳಾರಿ ಸರ್ವಮೂಲ ಗ್ರಂಥಗಳು ತುಳು ಲಿಪಿಯಲ್ಲಿ ದೊರಕಿವೆ, ೭೦೦ ವರ್ಷಗಳ ಇತಿಹಾಸವಿರುವ ಈ ಗ್ರಂಥಗಳೇ ತುಳು ಭಾಷೆಯ ಮೂಲ ಲಿಪಿ ಹುಢುಕಲು ಸಹಾಯವಾಗಿವೆ, ಇದನ್ನು ಶ್ರೀ ಪಲಿಮಾರು ಮಠದ ಹೃಷಿಕೇಶ ತೀರ್ಥರು ಪ್ರಕಟಿಸಿದ ಸರ್ವಮೂಲ ಗ್ರಂಥಮಾಲಿಕೆ ಯಲ್ಲಿ ಕಾಣಬಹುದು. ಉಡುಪಿ ಜಿಲ್ಲೆಗೆ ಸೇರಿದ ಒಬ್ಬ ಬ್ರಾಹ್ಮಣ ತಿಗಳಾರಿ ಲಿಪಿಯನ್ನು ಬಳಸಿ ‘ಭಾಗವತ’ವನ್ನು(ಅಪೂರ್ಣವಾಗಿ) ಬರೆದಿರುವ ಆಧಾರವಿದೆ. ಮಂದಾರ ಕೇಶವ ಭಟ್ಟರು ‘ಮಂದಾರ ರಾಮಾಯಣ’ ಎಂಬ ಆಧುನಿಕ ತುಳು ಮಹಾಕಾವ್ಯವನ್ನು ಬರೆದಿದ್ದಾರೆ.ತುಳುವಿನಲ್ಲಿ ನಂತರ ಬರೆದಿರುವ ಮಹನನೀಯರಲ್ಲಿ ಅ.ಬಾಲಕೃಷ್ಣ ಶೆಟ್ಟಿ, ಕೆದಂಬಾಡಿ ಜತ್ತಪ್ಪ ರೈ, ಕಯ್ಯಾರ ಕಿಂಞಣ್ಣ ರೈ, ಡಾ.ಅಮೃತ ಸೋಮೇಶ್ವರ,ಪ್ರೊ.ಬಿ.ಎ.ವಿವೇಕ್ ರೈ, ಪ್ರೊ.ಚಿನ್ನಪ್ಪಗೌಡ, ಡಾ.ಶಿವರಾಮಶೆಟ್ಟಿ, ಪ್ರೊ. ಅಭಯಕುಮಾರ್, ಶ್ರೀಮತಿ ಜಾನಕಿ ಬ್ರಹ್ಮಾವರ,ನಾ.ದಾಮೋದರ ಶೆಟ್ಟಿ, ಡಾ.ಮಾಧವ ಪೆರಾಜೆ, ಡಾ.ಮಹಾಲಿಂಗ ಭಟ್, ಶ್ರೀ ಪ್ರಭಾಕರ ನೀರುಮಾರ್ಗ ಪ್ರಮುಖರು.
ತುಳುನಾಡು
ಮಲಯಾಳಂ ಕೃತಿ ಕೇರಲಳೊತ್ಪತ್ತಿ ಮತ್ತು ಸಂಗಮ ಸಾಹಿತ್ಯದ ಕೆಲವು ಹಾಡುಗಳ ಪ್ರಕಾರ, ತುಳುನಾಡಿನ ವಿಸ್ತಾರವು ಕಾಸರಗೋಡಿನ ಚಂದ್ರಗಿರಿ ನದಿಯಿಂದ (ಈಗಿನ ಕೇರಳ) ಉತ್ತರ ಕನ್ನಡದ ಗೋಕರ್ಣದವರೆಗೆ ಇತ್ತು ಎಂದು ತಿಳಿಯಬಹುದು. ಆದರೆ ಈಗಿನ ತುಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿ (ಕುಂದಾಪುರ ತಾಲೂಕು ಬಿಟ್ಟು) ಜಿಲ್ಲೆಗಳಿಗೆ ಸೀಮಿತವಾಗಿದ್ದರೂ ಕೇರಳದ ಕಾಸರಗೋಡು, ಮಹಾರಾಷ್ಟ್ರದ ಮುಂಬಾಯಿ ಹಾಗೂ ಥಾಣೆಗಳಲ್ಲಿ ಬಹಳಷ್ಟು ತುಳುವರು ಇದ್ದಾರೆ.
ಲಿಪಿ
ಹಿಂದೆ ತುಳು ಬ್ರಾಹ್ಮಣರು ತುಳು ಭಾಷೆಗೆ ತಿಗಳಾರಿ ಲಿಪಿಯನ್ನು ಉಪಯೋಗಿಸುತ್ತಿದ್ದರು.ಈ ಲಿಪಿಯ ಮುಖ್ಯಭಾಷೆ ಸಂಸ್ಕೃತ. ಆದರೆ ಕೆಲವು ಕನ್ನಡ ಹಾಗು ತುಳು ಹಸ್ತಪ್ರತಿಗಳು ಲಭಿಸಿವೆ.
ತುಳು ಯಕ್ಷಗಾನ
ತುಳುವಿನ ಸ್ಥಳೀಯ ಇತಿಹಾಸ, ಐತಿಹ್ಯವನ್ನು ಹೇಳುವ ಹಲವು ಯಕ್ಷಗಾನಗಳಿವೆ. ಇವುಗಳನ್ನು ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳು ಬಯಲಾಟದ ಮೂಲಕ ಪ್ರದರ್ಶನ ನೀಡುತ್ತವೆ.
wikipedia.org